ರಣಜಿತ್ ಸಿಂಹ

 ರಣಜಿತ್ ಸಿಂಹ

ಲೇಖನ - ರಾಮ ಮೂರ್ತಿ , ಬೆಸಿಂಗ್ ಸ್ಟಾಕ್

ಭಾರತದಲ್ಲಿ ಈಗಿನ IPL ಮುಂಚೆ ರಣಜಿ ಟ್ರೋಫಿ ಅತ್ಯಂತ ಪ್ರಮುಖವಾದ ಕ್ರಿಕೆಟ್ ಪಂದ್ಯವಾಗಿತ್ತು. ೧೯ನೇ ಶತಮಾನದಲ್ಲಿ ಈಗಿನ ಮುಂಬೈ ನಗರದಲ್ಲಿ ಪಾರ್ಸಿ ಪಂಗಡದವರು ಮಾತ್ರ ಕ್ರಿಕೆಟ್ ಆಡುತ್ತಿದ್ದರು.  ನಂತರ ಇತರ ಪ್ರಾಂತ್ಯಗಳಲ್ಲೂ ಪ್ರಾರಂಭವಾಗಿ ೧೯೩೪ರಲ್ಲಿ ಅಂದಿನ ಕ್ರಿಕೆಟ್ ಸಂಸ್ಥೆಯ ಮುಖಂಡರಾಗಿದ್ದ ಅಂಥೋನಿ ಡಿ ಮೆಲ್ಲೋ ಅಂತರರಾಜ್ಯ ಸ್ಪರ್ಧೆ  ನಡೆಸುವುದಕ್ಕೆ ಸಲಹೆ ಕೊಟ್ಟರು.  ಅದು Cricket Championship of India ಹೆಸರಿನಿಂದ ಶುರುವಾಗಿ  ಪಟಿಯಾಲಾ ಮಹಾರಾಜರು  ಟ್ರೋಫಿಯನ್ನು ಕಾಣಿಕೆಯಾಗಿ ಕೊಟ್ಟ  ನಂತರ  ಈ ಪಂದ್ಯ “ರಣಜಿ ಟ್ರೋಫಿ” ಪಂದ್ಯ ಎಂದಾಯಿತು.  ಮೊದಲ ಸ್ಪರ್ಧೆ, ೪/೧೧/೧೯೩೪, ಮೈಸೂರ್ ಮತ್ತು ಮದ್ರಾಸ್ ರಾಜ್ಯದ ತಂಡದವರ ಮಧ್ಯೆ ನಡೆಯಿತು; ಅದರಲ್ಲಿ ಮದ್ರಾಸ್ ಗೆ ಜಯ ದೊರೆತಿತ್ತು. 



ಅನೇಕ ವರ್ಷ  ಕೇಂಬ್ರಿಡ್ಜ್, ಸಸೆಕ್ಸ್ ಮತ್ತು ಇಂಗ್ಲೆಂಡ್ ದೇಶಕ್ಕೆ ಆಡಿದ ರಣಜಿತ್ ಸಿಂಹ ಭಾರತಕ್ಕೆ ಅಕ್ಟೊಬರ್ ೧೯೦೪ರಲ್ಲಿ ಹಿಂತಿರುಗಿದಾಗ  ಕ್ರಿಕೆಟನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಿಲ್ಲ,  ಮತ್ತು ಅವರಿಗೆ ಈ ವಿಷಯದಲ್ಲಿ ಯಾವ ಆಸಕ್ತಿ ಸಹ ಇರಲಿಲ್ಲ.  ಕೆಲವರು ಇದರ ವಿಚಾರವನ್ನು ಪ್ರಸ್ತಾಪಿಸಿದಾಗ "ನಾನು ಇಂಗ್ಲೆಂಡ್ ದೇಶಕ್ಕೆ ಆಡಿದವನು ಮಾತ್ರ" ಎಂಬ ಉದಾಸೀನದ ಉತ್ತರ ಕೊಟ್ಟನಂತೆ.  ಈ  ಕಾರಣದಿಂದ  ಅನೇಕರು, ರಣಜಿಯನ್ನು "Father of Indian Cricket " ಅನ್ನುವುದು ಸರಿಯಲ್ಲ ಅನ್ನುವ ನಿರ್ಧಾರಕ್ಕೆ  ಬಂದಿದ್ದಾರೆ.   ಹತ್ತೊಂಬತ್ತು  ಮತ್ತು ಇಪ್ಪತ್ತನೆಯ ಶತಮಾನದ  ಕ್ರಿಕೆಟ್‍ನಲ್ಲಿ ಬಹಳ ದೊಡ್ಡ ಹೆಸರು ಗಳಿಸಿದ್ದ.  ಇಂಗ್ಲೆಂಡ್ ನಲ್ಲಿ ರಣಜಿಯ ಹೆಸರು ಮನೆಮಾತಾಗಿತ್ತು ಮತ್ತು ಅವನು ಆಡುತ್ತಿದ್ದರೆ ಜನರು ಕಿಕ್ಕಿರಿದು ಸೇರುತ್ತಿದ್ದರು.   ಇಂಗ್ಲಂಡ್ ದೇಶದ ತಂಡದಲ್ಲಿ ರಣಜಿ ಮೊಟ್ಟಮೊದಲ ಭಾರತೀಯ ಮೂಲದ ಆಟಗಾರನಾಗಿದ್ದ.  

೧೮೮೮ರಲ್ಲಿ ಹದಿನಾರು  ವಯಸ್ಸಿನ ಹುಡುಗ, ರಾಜಕೋಟನ ಶಾಲೆಯಲ್ಲಿ ಕ್ರಿಕೆಟ್ ಆಡಿದ ಅನುಭವ ಮಾತ್ರ ಇದ್ದು, ಓದುವುದಕ್ಕೆ ಕೇಂಬ್ರಿಡ್ಜ್ ವಿಶ್ಯವಿದ್ಯಾಲಯಕ್ಕೆ ಬಂದು ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಗಳಿಸಿದ್ದು ಆಶ್ಚರ್ಯದ ವಿಚಾರವೇ ಸರಿ.  ಇಲ್ಲಿ ಅವನ ವರ್ಣರಂಜಿತ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. 


ಇಂಗ್ಲೆಂಡ್ ನಲ್ಲಿ  ರಣಜಿ, ರಾಜಕುಮಾರ (Prince) ಎಂದು ಹೇಳಿಕೊಂಡಿದ್ದರೂ, ಈತ ರಾಜಕುಮಾರನಾಗಿರಲಿಲ್ಲ, ಅಥವಾ ಯಾವ ಅರಮನೆಯಲ್ಲೊ  ಬೆಳೆಯಲಿಲ್ಲ.  ಹುಟ್ಟಿದ್ದು ೧೦/೦೯/೧೮೭೨ರಲ್ಲಿ ಪಶ್ಚಿಮ ಭಾರತದ  ನವಾನಗರ ಪ್ರಾಂತ್ಯದ  ಸದೋದಾರ್ ಎಂಬ ಸಣ್ಣ ಊರಿನಲ್ಲಿ.  ತಂದೆ ಜೀವನ್ ಸಿಂಹಜಿ, ಅಲ್ಲಿನ ರಾಜ ವಿಭಾಜಿಗೆ ದೂರದ ಸಂಬಂಧ. ರಾಜನ ಮಗ ಕಲೋಭ ಈ ರಾಜ್ಯಕ್ಕೆ ಉತ್ತರಾಧಿಕಾರಿಯಾಗಬೇಕಾಗಿತ್ತು ಆದರೆ ಅವನ ನಡವಳಿಕೆ ಮತ್ತು ದುಷ್ಟತನದಿಂದ ಅವನನ್ನು ದೂರ ಮಾಡಿ, ಹತ್ತಿರ ಸಂಬಂಧವರ ಮನೆಯಿಂದ ಒಂದು ಗಂಡು ಮಗುವನ್ನು ಆಯ್ಕೆ ಮಾಡಿದರು. ಆದರೆ, ಅಂದಿನ ವದಂತಿಗಳ ಪ್ರಕಾರ, ಈ ಮಗು ಜ್ವರದಿಂದಲೋ ಅಥವಾ ವಿಷಪ್ರಯೋಗದಿಂದಲೋ ಕೆಲವೇ ತಿಂಗಳಲ್ಲಿ ತೀರಿಹೋಯಿತು.  ಎರಡನೇ ಆಯ್ಕೆ ಜೀವನ್ ಸಿಂಹಜಿಯ ಎರಡನೇ ಮಗ ರಂಜಿತ್ ಸಿಂಹಜಿ.  ಬ್ರಿಟಿಷ್ ಅಧಿಕಾರಿಗಳ ಒಪ್ಪಿಗೆ ಪಡೆದು ರಾಜಕೋಟೆಯಲ್ಲಿ ಇರುವ ರಾಜಕುಮಾರ್ ಕಾಲೇಜ್ ನಲ್ಲಿ ಇವನ ವಿದ್ಯಾಭ್ಯಾಸ ಮುಂದೆವರೆಯಿತು ಆದರೆ ಜೀವನ್ ಸಿಂಹಜಿ ಮನೆಯವರ ನಡವಳಿಕೆ ಮತ್ತು ದುರಾಸೆಗಳಿಂದ ರಣಜಿಯನ್ನು ಅಧಿಕೃತವಾಗಿ ದತ್ತು ಪುತ್ರನಾಗಿ ಮಾಡಲಿಲ್ಲ.  ಆದರೂ ರಾಜನಿಂದ ಆರ್ಥಿಕ ಸಹಾಯ ಮತ್ತು ನೆರವು ಇತ್ತು.  ಕೆಲವು ವರ್ಷಗಳ ನಂತರ ರಾಜನ ಪರಿವಾರದಲ್ಲಿದ್ದ ಒಬ್ಬಳಿಗೆ ಒಂದು ಗಂಡು ಮಗು ಹುಟ್ಟಿ ಅವನನ್ನು ಉತ್ತರಾಧಿಕಾರಿ ಎಂದು ಘೋಷಿಸಿದರು.  ಈ ವಿಚಾರ ಬಹಳ ವಿವಾದಾತ್ಮಕವಾಗಿತ್ತು, ಕಾರಣ ಈ ಮಗುವಿನ ತಾಯಿ ರಾಜನ ರಾಣಿಯಾಗಿರಲಿಲ್ಲ; ಆಕೆ ವೇಶ್ಯೆ ಮತ್ತು ಮುಸಲ್ಮಾನ ಪಂಗಡಕ್ಕೆ ಸೇರಿದವಳು ಅನ್ನುವ ವದಂತಿಗಳು ಅನೇಕವಾಗಿತ್ತು. 

ರಣಜಿ,  ರಾಜಕುಮಾರ್ ಕಾಲೇಜ್ ನಲ್ಲಿ ಕ್ರಿಕೆಟ್ ಕಲಿತು ೧೮೮೪ರಲ್ಲಿ ಕಾಲೇಜ್ ನಾಯಕ ಆಗಿಯೂ ಆಯ್ಕೆ ಆದ.  ಆ ಶಾಲೆಯ ಹೆಡ್ ಮಾಸ್ಟರ್ ಮಿ. ಮೆಕ್ನಾಟನ್ (Mr Macnaghten) ರಣಜಿ ಮತ್ತು ಇನ್ನಿಬ್ಬರನ್ನು ೧೮೮೮ರಲ್ಲಿ ಇಂಗ್ಲೆಂಡಿಗೆ ಕರೆದುಕೊಂಡು ಹೋಗಿ, ಕೇಂಬ್ರಿಡ್ಜ್ ನಲ್ಲಿ ಓದುವ ಉದ್ದೇಶದಿಂದ ಟ್ರಿನಿಟಿ ಕಾಲೇಜಿನ Chaplin ಅಥವಾ ಪಾದ್ರಿ ಆಗಿದ್ದ ರೆವ್. ಲೂಯಿ ಬೊರಿಸೊ (Rev Louis Borrisow) ಅನ್ನುವವರ ಮನೆಯಲ್ಲಿ ವಾಸವಾಗಿ ಇರುವುದಕ್ಕೆ ಏರ್ಪಾಡು ಮಾಡಿ ರಾಜೆಕೋಟೆಗೆ ಹಿಂತಿರಿಗಿದರು.  ಇಂಗ್ಲೆಂಡ್‍ನ ವಾತಾವರಣ ರಣಜಿಗೆ ಹಿಡಿಸಲಿಲ್ಲ.  ಆದರೂ ಕ್ರಿಕೆಟ್ ಆಡುವ ಮತ್ತು ಕೇಂಬ್ರಿಡ್ಜ್ ನಲ್ಲಿ ಓದುವ ಆಸೆ ಇತ್ತು.  ಆದರೆ, ಕಾಲೇಜ್ ಪ್ರವೇಶಕ್ಕೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗಿತ್ತು.  ಇದು ಸಾಧ್ಯವಾಗಲಿಲ್ಲ, ಆದರೂ ಇವನನ್ನು "ಸ್ಥಾನದ ಯುವಕ" ಅಂದರೆ, Youth of Position, ಎಂದು ಪರಿಗಣಿಸಿದ್ದರಿಂದ  ಕಾಲೇಜಿಗೆ ಸೇರಲು ಸಾಧ್ಯವಾಯಿತು.  ರಣಜಿ ಶಿಕ್ಷಣ ಬಗ್ಗೆ ಸಾಕಷ್ಟು ಗಮನ ಕೊಡಲಿಲ್ಲ, ಕ್ರಿಕೆಟ್ ಆಡುವುದರಲ್ಲಿ ಮಾತ್ರ ತೊಡಗಿಸಿಕೊಂಡ.  ೧೮೯೨ರಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಮನೋರಂಜನೆಗೆ ಅದ್ದೂರಿಯಾಗಿ ಖರ್ಚು ಮಾಡಿ ತಾನು ರಾಜಮನೆತದವನು ಅನ್ನುವ ಭಾವನೆ ಕಲ್ಪಿಸಿದ.  ಆದರೆ ಹಣ ಮಾತ್ರ ಸಾಲದಿಂದ!


ಇಂಗ್ಲೆಂಡ್ ಬಾರ್ ಪರೀಕ್ಷೆಗೆ ಇನ್ನಷ್ಟು ಹಣಸಹಾಯ ಬೇಕೆಂದು ವಿಭಾಜಿ ರಾಜನಿಗೆ ಮನವಿ ಮಾಡಿದಾಗ, ರಾಜ ಹಣ ಕಳಿಸಲು ಬಾರ್ ಪರೀಕ್ಷೆ ಮುಗಿದಂತೆ ಭಾರತಕ್ಕೆ ಹಿಂತಿರಿಗಬೇಕು ಅನ್ನುವ ಷರತ್ತು ಹಾಕಿದ.  ಆದರೆ ರಣಜಿ ಈ ಪರೀಕ್ಷೆಯಲ್ಲಿ ಭಾಗವಹಿಸಲಿಲ್ಲ ಮತ್ತು ಹಣಕಾಸಿನ ಸಮಸ್ಯೆ ಬಗೆಹರಿಯಲಿಲ್ಲ. 

೧೮೯೨/೩ ರಲ್ಲಿ ಕೇಂಬ್ರಿಡ್ಜ್ ತಂಡಕ್ಕೆ ಆಯ್ಕೆ ಆಗಿ ಹೆಸರುಮಾಡಿಕೊಂಡ.  ನಂತರ ಕೇಂಬ್ರಿಡ್ಜ್ Blue ಪ್ರಶಸ್ತಿ ಸಹ ದೊರಕಿತು.  ಭಾರತಕ್ಕೆ ಹಿಂತಿರುಗಲಿಲ್ಲವಾದ ಕಾರಣದಿಂದ ವಿಭಾಜಿ ಹಣ ಸಹಾಯವನ್ನು ನಿಲ್ಲಿಸಬೇಕಾಯಿತು.  ರಣಜಿ, ಹಲವಾರು ಬ್ರಿಟಿಷ್ ಅಧಿಕಾರಿಗಳ ಶಿಫಾರಸಿನಿಂದ ಇನ್ನಷ್ಟು ಹಣವನ್ನು ಸಾಲದ ರೂಪದಲ್ಲಿ ವಿಭಾಜಿ ಕೊಟ್ಟದ್ದು ಸ್ವಲ್ಪ ಸಮಾಧಾನವಾಯಿತು. 

    

ಕೇಂಬ್ರಿಡ್ಜ್  ತಂಡಕ್ಕೆ (೧೮೯೦-೧೮೯೩) ಆಡಿದ ನಂತರ ರಣಜಿ ಸಸೆಕ್ಸ್ (Sussex) ಕೌಂಟಿಗೆ ೧೮೯೫-೧೯೧೨ ವರೆಗೆ ಆಡಿ, ೧೮೯೯-೧೯೦೩ರಲ್ಲಿ ಕಾಪ್ಟನ್ ಸಹ ಆಗಿದ್ದ.  ಒಟ್ಟು ೩೦೦೦ ರನ್ನುಗಳನ್ನು ೧೮೯೯ ಮತ್ತು ೧೯೦೦ರ ಅವಧಿಯಲ್ಲಿ ಹೊಡದಿದ್ದ. 


ಆಸ್ಟ್ರೇಲಿಯಾ  ತಂಡ ೧೮೯೬ ನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತು (Ashes Series).  ಅನೇಕರು, ಲಾರ್ಡ್ಸ ಮೈದಾನದಲ್ಲಿ ನಡೆದ ಮೊದಲನೆಯ ಟೆಸ್ಟ್ ತಂಡದಲ್ಲಿ ರಣಜಿ ಅಡುತ್ತಾನೆ ಎಂದು ಊಹಿಸಿದ್ದರು.  ಆದರೆ MCC ಯ ಅಧ್ಯಕ್ಷ ಲಾರ್ಡ್ ಹ್ಯಾರಿಸ್ ಇದಕ್ಕೆ ಒಪ್ಪಲಿಲ್ಲ; ಕಾರಣ, ಜನಾಂಗೀಯ ತಾರತಮ್ಯ (Racial discrimination).  ಆದರೆ ಓಲ್ಡ್ ಟ್ರಾಫರ್ಡ್ (Old Trafford) ನಲ್ಲಿ ನಡೆದ ಎರಡನೆಯ ಟೆಸ್ಟ್ ನಲ್ಲಿ  ರಣಜಿ ತಂಡದಲ್ಲಿ ಸೇರಿದ್ದ.  ಇದಕ್ಕೆ ಮುಂಚೆ ರಣಜಿ ಆಡುವುದಕ್ಕೆ ಆಸ್ಟ್ರೇಲಿಯದ ಕ್ಯಾಪ್ಟನ್ ತನ್ನ ಅಭ್ಯಂತರ ಇಲ್ಲ ಎಂದ ಮೇಲೆ ರಣಜಿಯ ಆಯ್ಕೆ ಆಯಿತಂತೆ!  ಮೊಟ್ಟಮೊದಲನೆಯ ಬಾರಿಗೆ ಒಬ್ಬ ಭಾರತೀಯ ಪ್ರಜೆ ೧೬/೦೭/೧೮೯೬ ರಂದು ಇಂಗ್ಲೆಂಡ್ ದೇಶದ ತಂಡದಲ್ಲಿ ಭಾಗವಹಿಸಿದ್ದು.

 

ರಣಜಿ, ಮೊದಲನೆಯ ಇನ್ನಿಂಗ್ಸ್ ನಲ್ಲಿ ೬೨ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೪ ಅಜೇಯ (not  out) ರನ್ನುಗಳನ್ನು ಮಾಡಿ ಇಂಗ್ಲೆಂಡ್ ತಂಡಕ್ಕೆ ಶಾಶ್ವತ ಆಟಗಾರನಾಗಿ ಸೇರಿದ.

ರಣಜಿ, ಮೊದಲನೆಯ ಇನ್ನಿಂಗ್ಸ್ ನಲ್ಲಿ ೬೨ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೪ ಅಜೇಯ (not  out) ರನ್ನುಗಳನ್ನು ಮಾಡಿ ಇಂಗ್ಲೆಂಡ್ ತಂಡಕ್ಕೆ ಶಾಶ್ವತ ಆಟಗಾರನಾಗಿ ಸೇರಿದ.

  

೧೮೯೬ರಲ್ಲಿ ರಣಜಿ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಈ ಸಮಯದಲ್ಲಿ, ಕ್ರಿಕೆಟ್ ಆಟದ ತನ್ನ ಅನುಭವ ಮತ್ತು ಆಡುವ ರೀತಿ ಬಗ್ಗೆ ಬರೆಯುವ ಯೋಚನೆ ಬಂತು.  ಅವನ ಸ್ನೇಹಿತರಾಗಿದ್ದ ಚಾರ್ಲ್ಸ್ ಫ್ರೈ ಮತ್ತು ಡಾಕ್ಟರ್ ಬಟ್ಲರ್ ನೆರವಿನಿಂದ ತನ್ನ Jubilee Book of Cricket ಪುಸ್ತಕ ಪ್ರಕಟಿಸಿದ.  ಇದೇ ವರ್ಷ ವಿಕ್ಟೋರಿಯಾ ರಾಣಿಯ ರಾಜ್ಯಭಾರದ ೨೫ನೇ ವರ್ಷದ (ರಜತ ಮಹೋತ್ಸವ, silver jubilee) ಮಹೋತ್ಸವ ಆದ್ದರಿಂದ ರಣಜಿಯ ಪುಸ್ತಕಕ್ಕೆ Jubilee ಹೆಸರು ಬಂದಿದ್ದು.

   

೧೮೯೭-೯೮ ನಲ್ಲಿ  ಆಸ್ಟ್ರೇಲಿಯ ಪ್ರವಾಸಕ್ಕೆ ಹೋದ ಇಂಗ್ಲೆಂಡ್ ಪಂಗಡದಲ್ಲಿ ರಣಜಿ ಸಹ ಸೇರಿದ್ದ.  ಮೊದಲನೆಯ ಟೆಸ್ಟ್ ನಲ್ಲಿ ಮಾಡಿದ ೧೭೫ ರನ್ನುಗಳು ಸೇರಿ ಒಟ್ಟು ೧೧೫೭ ರನ್ನುಗಳನ್ನು ಹೊಡೆದು ಆ ದೇಶದಲೂ ಜನಪ್ರಿಯನಾದ.  ರಣಜಿಯ ನೆಚ್ಚಿನ "leg glance" ವಿಧಾನ (technique) ಎಲ್ಲರ  ಮೆಚ್ಚಿಗೆಯನ್ನು ಪಡೆಯಿತು.

 

ಆಸ್ಟ್ರೇಲಿಯಾ ಪ್ರವಾಸ ಮುಗಿದಮೇಲೆ, ಇಂಗ್ಲೆಂಡ್ ತಂಡ ಕೊಲಂಬೊ ಮೂಲಕ ಬಂದಾಗ ರಣಜಿ ಅಲ್ಲೇ ಇಳಿದು ಭಾರತಕ್ಕೆ ಬಂದ.  ೧೮೯೬ ರಲ್ಲಿ ರಾಜ ವಿಭಾಜಿಯ ನಿಧನವಾದ ಮೇಲೆ ಉತ್ತರಾಧಿಕಾರಿಯಾಗಿದ್ದ ಹನ್ನೆರಡು ವರ್ಷದ ಜಸವಂತ್ ಸಿಂಹಜಿ ನವಾನಗರದ ಪಟ್ಟಕ್ಕೆ ಬಂದ.  ರಣಜಿಗೆ ತಾನು ರಾಜ್ಯವನ್ನು ಆಳುವ ಅವಕಾಶ ಕಳೆಯಿತು ಎನ್ನಿಸಿ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ನಲ್ಲಿಯೇ ಇನ್ನೂ  ಹೆಸರು ಮಾಡುವ ನಿರ್ಧಾರಕ್ಕೆ ಬಂದಿದ್ದರೂ, ಜಸವಂತ್  ಸಿಂಹಜಿಯ ಉತ್ತರಾಧಿಕಾರದ ಮೇಲೆ ಸವಾಲನ್ನು ಹಾಕಿದ.  ಆದರೆ ಇದು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೆ ವಿಭಾಜಿ ಇದ್ದಾಗ ಹಣ ಸಹಾಯವಿತ್ತು, ಈಗ ಅದೂ ನಿಲ್ಲುವಂತಿತ್ತು. 

ಅಧೃಷ್ಟಕ್ಕೆ ಪಾಟಿಯಾಲಾದ ಮಹಾರಾಜ ಮತ್ತು ಕ್ರಿಕೆಟ್ ಪ್ರೇಮಿ ರಾಜಿಂದರ್ ಸಿಂಗ್ ಅವರು ರಣಜಿಯ ನೆರವಿಗೆ ನಿಂತು ಹಣ ಸಹಾಯ ಮಾಡಿದ ನಂತರ ರಣಜಿ ಇಂಗ್ಲೆಂಡ್ ಗೆ ಹಿಂತಿರುಗಿ ಸಸೆಕ್ಸ್‌ನ ಕ್ಯಾಪ್ಟನ್ ಆದ ಮತ್ತು ಇಂಗ್ಲೆಂಡ್ ತಂಡಕ್ಕೂ ಸೇರಿದ.   ಆದರೆ ೧೯೦೦ ರಲ್ಲಿ ರಾಜಿಂದರ್ ಸಿಂಗರ ನಿಧನವಾದನಂತರ ರಣಜಿಯ ಆದಾಯ ಕುಸಿದು ದಿವಾಳಿತನವನ್ನು ಎದುರಿಸಬೇಕಾಯಿತು (bankruptcy).  ಇದನ್ನು ಪರಿಹರಿಸಲು ೧೯೦೧ ಡಿಸೆಂಬರ್ ನಲ್ಲಿ ಭಾರತಕ್ಕೆ ಹಿಂತಿರುಗಿ ಅನೇಕರನ್ನು ಭೇಟಿಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ರಣಜಿಯ ಆರ್ಥಿಕ ಸ್ಥಿತಿ ಕುದುರಿತು.  ೧೯೦೨ರಲ್ಲಿ ಇಂಗ್ಲೆಂಡ್ ನಲ್ಲಿ ಪುನಃ ಸಸೆಕ್ಸ್ ತಂಡದ ಕ್ಯಾಪ್ಟನ್ ಆದರೂ ಇವನ ಆಡುವ ರೀತಿ ಬದಲಾಗಿ  ಆಟದ ಶೈಲಿಯಿಂದ ಅನೇಕರಿಗೆ ನಿರಾಶೆಯಾಯಿತು.  ರಣಜಿಯ ಜೀವನಚರಿತ್ರಗಾರ (biographer) ಸೈಮನ್ ವೈಲ್ಡನ ಊಹೆಯ ಪ್ರಕಾರ ಇದಕ್ಕೆ ಮುಖ್ಯ ಕಾರಣ ರಣಜಿತ್ ಸಿಂಹನ ಕಠಿಣ ಆರ್ಥಿಕ ಪರಿಸ್ಥಿತಿ. 


ನವಾನಗರವನ್ನು ಆಳುವ ಇನ್ನೂ ಆಸೆ ಇಟ್ಟಿಕೊಂಡು ೧೯೦೪ರಲ್ಲಿ ಸ್ನೇಹಿತ ಆರ್ಚಿ ಮೆಕ್‍ಲಾರೆನ್ ಜೊತೆ ಭಾರತಕ್ಕೆ ಬಂದು, ಬ್ರಿಟಿಷ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ರಣಜಿಗೆ ಹೆಚ್ಚು ಬೆಂಬಲ ಸಿಗಲಿಲ್ಲ.  ಅದೂ ಅಲ್ಲದೆ ಮನ್ಸೂರ್ ಕುಚರ್ ಅನ್ನುವವನು ಕೊಟ್ಟ ಸಾಲ ಹಿಂತಿರುಗಿ ಪಡೆಯಲು ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಸಹ ಹಾಕಿದ್ದರಿಂದ ೧೯೦೬ರ ವರೆಗೆ ಇಂಗ್ಲೆಂಡ್ ಗೆ ಹಿಂತಿರುಗುವುದು ಸಾಧ್ಯವಾಗಲಿಲ್ಲ.

 

೧೪/೦೮/೧೯೦೬ ರಂದು ನವಾನಗರದ ರಾಜನಾಗಿದ್ದ ಜಸವಂತ್  ಸಿಂಹಜಿ ಜ್ವರ ಬಂದ ಕಾರಣದಿಂದ ನಿಧನನಾದ ಸುದ್ದಿ ಬಂತು.  ಜಸವಂತ್ ಸಿಂಹಜಿಯ ಆರೋಗ್ಯಕ್ಕೆ ಯಾವ ಸಮಸ್ಯೆ ಇರಲಿಲ್ಲ; ಅಂದಿನ ವದಂತಿಗಳ ಪ್ರಕಾರ ಈ ಸಾವು ವಿಷಪ್ರಯೋಗದಿಂದ ಉಂಟಾಯಿತು ಅನ್ನುವುದು ಅನೇಕರ ನಂಬಿಕೆ.  ಅದಾಗಿ ಆರು ತಿಂಗಳವರೆಗೆ ಬ್ರಿಟಿಷ್ ಅಧಿಕಾರಿಗಳು ಈ ರಾಜ್ಯದ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿಲ್ಲ.  ನಾಲ್ಕು ಪ್ರಾತಿನಿಧ್ಯರು - ರಣಜಿ, ವಿಭಾಜಿಯ ಮೊಮ್ಮಗ ಲಕೋಭ ಮತ್ತು ಜಸವಂತ್ ಸಿಂಹಜಿಯ ತಾಯಿ, ಸರ್ಕಾರಕ್ಕೆ ಮನವಿ ಮಾಡಿದರು.  ಕೊನೆಗೆ ಬ್ರಿಟಿಷ್ ಅಧಿಕಾರಿಗಳು, ರಣಜಿಯ ಹಿನ್ನಲೆ  ನೋಡಿ ಅವನನ್ನು ಆಯ್ಕೆ ಮಾಡಿದರು.  ಹಲವಾರು ತಿಂಗಳ ನಂತರ, ೧೧/೦೩/೧೯೦೭ ರಂದು ರಣಜಿ Colonel His Highness Sir Ranjitsinhaji Vibhaji, Jam Sahib of Nawanagar ಆಗಿ  ಪಟ್ಟಕ್ಕೆ ಬಂದ. ಈ ಸ್ಥಾನಕ್ಕೆ ಬಂದಮೇಲೆ ಬಾಂಬೆ ಹೈ ಕೋರ್ಟ ನಲ್ಲಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆಯುವುದು ಸಾಧ್ಯವಾಯಿತು.

ಇವನ ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲದಿಂದ ಜನರ ಪರಿಸ್ಥಿತಿ ಗಂಭೀರವಾಗಿತ್ತು, ಪರಿಹಾರ ಕೊಡುವುದಕ್ಕೆ ರಾಜ್ಯದ ಒಡವೆಗಳನ್ನು ಮಾರಬೇಕಾಯಿತು.  ಮತ್ತು ಇತರ ರಾಜ್ಯಗಳಿಂದ ಸಹಾಯ ಪಡೆದು ರಾಜ್ಯಕ್ಕೆ ಸೇರಿದ ಸಲಾಯ ಎಂಬ ಸಮುದ್ರ ತೀರದಲ್ಲಿ ಬಂದರು ಕಟ್ಟಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಮಾಡುವುದು ಮತ್ತು ಇತರ ಕಾಮಗಾರಿಕೆ ಕೆಲಸಗಳು ಪ್ರಾರಂಭ ವಾಯಿತು.  ಆದರೆ ರಣಜಿಗೆ ಆಡಳಿತದ ಅನುಭವ ಇರಲಿಲ್ಲವಾದ್ದರಿಂದ ಈ ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟ ವಾಯಿತು.  ಇವನ ಆರೋಗ್ಯ ಬೇರೆ ಹದಗೆಟ್ಟಿತು ಮತ್ತು ಟೈಫಾಯಿಡ್  ಜ್ವರದಿಂದ ಕೆಲವು ತಿಂಗಳು ಹಾಸಿಗೆ ಹಿಡಿದಿದ್ದ.  ವೈದ್ಯರ ಸಲಹೆ ಮೇಲೆ ವಿಶ್ರಾಂತಿಗೆ ಇಂಗ್ಲೆಂಡ್ ನಲ್ಲಿ  ಕೆಲವು ತಿಂಗಳು ಕಳೆಯಲು ಹಿಂತಿರಿಗಿ  ಗ್ರಾಮಾಂತರದಲ್ಲಿ ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು  ಹಲವಾರು ತಿಂಗಳು ಕಳೆದ.  ಆದರೆ ಸಾಲಗಾಲರ  ಕಾಟ ಮಾತ್ರ ತಪ್ಪಲಿಲ್ಲ, ಅನೇಕ ತಿಂಗಳು ಈ ಮನೆ ಬಾಡಿಗೆ ಕೊಡದೆ ಇದ್ದರಿಂದ, ಮಾಲೀಕ ಇಂಡಿಯಾ ಕಚೇರಿಗೆ ದೂರು ಸಹ ಕೊಟ್ಟ.  ತನ್ನ ರಾಜ್ಯದಿಂದ ದುಡ್ಡು ಬರುವ ಸಾದ್ಯೆತೆ ಇರಲಿಲ್ಲ, ಅಲ್ಲಿಯ ಬೊಕ್ಕಸ ಖಾಲಿಯಾಗಿತ್ತಲ್ಲ!  ೧೯೦೮ರಲ್ಲಿ ಪುನಃ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ. ಸಮಯ ಸಿಕ್ಕಾಗ ರೆವ್. ಬೊರಿಸೊ ಅವರ ಮನೆಯಲ್ಲಿ ಇದ್ದು ಅವರ ಮಗಳು ಈಡಿತ್ ಅನ್ನು ಮದುವೆಯಾಗುವ ಪ್ರಯತ್ನ ಪಟ್ಟ.  ಆದರೆ ಅಂದಿನ ಸಮಾಜದ ನಿರ್ಬಂಧನೆಗಳಿಂದ ಇದು ಸಾಧ್ಯವಾಗಲಿಲ್ಲ ಮತ್ತು ಅವಳ ತಂದೆ ಈ ಸಂಬಂಧವನ್ನು ನಿರಾಕರಿಸಿದರಂತೆ.  ಕೊನೆಗೆ ೧೯೦೮ರಲ್ಲಿ ಭಾರತಕ್ಕೆ ಹಿಂತಿರುಗಿ ತನ್ನ ರಾಜ್ಯವನ್ನು ಆಳುವ ಪ್ರಯತ್ನ ಮಾಡಿದ.  ರಾಜ್ಯದ ಪರಿಸ್ಥಿತಿ ಇನ್ನೂ ಸುಧಾರಿಸಿರಲಿಲ್ಲ, ಬರಗಾಲ ಮತ್ತು ಕ್ಷಾಮ ಜನರನ್ನು ಕಾಡುತಿತ್ತು.  ತನ್ನ ಆದಾಯವನ್ನು ಹೆಚ್ಚುಮಾಡುವ ಸಮಯ ಅಲ್ಲದಿದ್ದರೂ, ಹೊಸ ತೆರಿಗೆಯನ್ನು ವಿಧಿಸಲು ಪ್ರಯತ್ನ ಪಟ್ಟ.  ಆದರೆ ಅಂದಿನ ಬ್ರಿಟಿಷ್ ಅಧಿಕಾರಿಗಳು ಇದನ್ನು ತಡೆದು ರಣಜಿ ಜೊತೆ ಚರ್ಚೆ ನಡಿಸಿ, ೩-೪ ವರ್ಷ ನವಾನಗರದಲ್ಲೇ ಇದ್ದು ರಾಜ್ಯವನ್ನು ಆಳುವುದಕ್ಕೆ ಸಲಹೆ ಕೊಟ್ಟರು, ಆದರೆ  ೧೯೧೨ರಲ್ಲಿ ರಣಜಿ ಪುನಃ ಇಂಗ್ಲೆಂಡ್ ಗೆ  ಹಿಂತಿರುಗಿ ಸಸೆಕ್ಸ್ ಕ್ರಿಕೆಟ್ ತಂಡಕ್ಕೆ  ಸೇರಿದ.  ಅನೇಕರಲ್ಲಿ ಮಾಡಿದ ಸಾಲದಿಂದ ತಪ್ಪಿಸಿಕೊಳ್ಳುವುದಕ್ಕೆ ಕಷ್ಟವಾಯಿತು.  ಕೆಲವರು ಇವನ ಮೇಲೆ ಮೊಕದ್ದಮೆ ಹಾಕಿದ್ದರೂ, ರಣಜಿ ಭಾರತದ ಒಬ್ಬ ರಾಜಮನೆತನದವನು ಆದ್ದರಿಂದ ಇಂಗ್ಲೆಂಡ್ ನ್ಯಾಯಾಲಯಕ್ಕೆ ಇವನ ಮೇಲೆ ಯಾವ ಹಿಡಿತ ಇಲ್ಲ ಎಂದು ಅವನ ವಕೀಲರು ವಾದ ಮಂಡಿಸಿದರು!  ಕೊನೆಗೆ ಹಾಗೂ ಹೀಗೂ ಮಾಡಿ ಕೆಲವರಿಗೆ ಸಾಲವನ್ನು ಹಿಂತಿರುಗಿಸಿ ೧೯೧೩ರಲ್ಲಿ ನವಾನಗರಕ್ಕೆ ಬಂದು ಆಳುವ ಪ್ರಯತ್ನ ಮಾಡಿದ.  ರಣಜಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾಗ ನವಾನಗರದ ಅಭಿವೃದ್ಧಿಯನ್ನು ಬ್ರಿಟಿಷ್ ಅಧಿಕಾರಿಗಳು ಕೈಗೆತ್ತಿಕೊಂಡು ರಾಜ್ಯದಲ್ಲಿ  ಬೇಕಾಗಿದ್ದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. 

೧೯೧೪ರಲ್ಲಿ ಮೊದಲನೆಯ ಮಹಾ ಯುದ್ಧ ಪ್ರಾರಂಭವಾದಾಗ ರಣಜಿ ತನ್ನ ರಾಜ್ಯದ ಸಂಪೂರ್ಣ ಬೆಂಬಲ ನೀಡಿ, ಇಂಗ್ಲೆಂಡಿನ ತನ್ನ ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸುವುದಕ್ಕೆ ಅನುಮತಿ ನೀಡಿದ.  ಇದಲ್ಲದೆ ೧೯೧೪ರಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇರಿ ಗೌರವಾನ್ವಿತ ಮೇಜರ್ ಹುದ್ದೆಗೆ ಅರ್ಹನಾದ.  ಆದರೆ ಭಾರತೀಯ ರಾಜಮನೆತವರು  ಯುದ್ಧದಲ್ಲಿ ಭಾಗವಹಿವುದಕ್ಕೆ ಅನುಮತಿ ಇರಲಿಲ್ಲ.  ಅಲ್ಲದೇ  ಫ್ರಾನ್ಸ್ ದೇಶದ ಚಳಿ ತಡೆಯಲಾರದೆ ಇಂಗ್ಲೆಂಡ್ ನಲ್ಲಿ ಹಲವಾರು ತಿಂಗಳು ಕಳೆದು ೧೯೧೫ರಲ್ಲಿ ಭಾರತಕ್ಕೆ ಹಿಂತಿರುಗಿದ.  


ರಣಜಿ ೧೯೨೦ರಲ್ಲಿ ಕ್ರಿಕೆಟ್‍ನಿಂದ ನಿವೃತ್ತನಾದ.  ಸ್ನೇಹಿತರ ಜೊತೆಯಲ್ಲಿ ಬೇಟೆಗೆ ಹೋದಾಗ ಆದ ಅಪಘಾತದಿಂದ ಒಂದು ಕಣ್ಣು ಕಳೆದುಕೊಡಿದ್ದೂ ಒಂದು ಕಾರಣ.  ರಣಜಿ  ಕ್ರಿಕೆಟ್ ಆಡಿದ ಅವಧಿಯಲ್ಲಿ  ಒಟ್ಟು ೨೪೬೯೨ ರನ್ನುಗಳನ್ನು ಗಳಿಸಿದ, ಸರಾವರಿ ಮೊತ್ತ (batting  average) ೫೬.೩೭ರೊಂದಿಗೆ.  ಬಹಳ ವರ್ಷದ ನಂತರ ಸರ್ ಜೆಫ್ರಿ ಬಾಯ್ಕಾಟ್ ಈ ದಾಖಲೆಯನ್ನು ಮುರಿದರು (ಸರಾಸರಿ ೫೬.೮೩!)

 


ರಣಜಿಗೆ ತನ್ನಂತೆ ಇರುವ ಇತರ ರಾಜಮನೆತನದವರ ಹಿತಾಸಕ್ತಿಗಳನ್ನು ಬೆಂಬಲಿವುದು ಮಾತ್ರ ಗುರಿಯಾಗಿತ್ತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏನೂ ಆಸಕ್ತಿ ಇರಲಿಲ್ಲ.  ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಇವನಿಂದ ಯಾರಿಗೂ ಉತ್ತೇಜನ ಸಿಗಲಿಲ್ಲ.  ಇವನ ಜೀವನ ಚರಿತ್ರೆ ಬರೆದ ಸೈಮನ್ ವಾಲ್ಡ್ ಅಭಿಪ್ರಾಯದಲ್ಲಿ ರಣಜಿಯ ಮನಸ್ಸು ನವಾನಗರದ  ಬದಲು ಇಂಗ್ಲೆಂಡ್ ಮೇಲಿತ್ತು,  (.. "he was more at home in England with his friends").  ಮಾಹೀರ್ ಬೋಸ್  ಬರೆದಿರುವ History of Indian cricket ಪುಸ್ತಕದಲ್ಲಿ, ರಣಜಿ ಭಾರತದ ಕ್ರಿಕೆಟ್ ಪಿತಾಮಹ ಅನ್ನುವುದು ಮೂರ್ಖತನ ಎಂದು ಟೀಕಿಸಿದ್ದಾರೆ. 


ರಣಜಿ ಜೀವನದಲ್ಲಿ ಬಹು ಭಾಗ,  ಕ್ರಿಕೆಟ್ ಆಡುವುದು ಮತ್ತು ಸಾಲಗಾರರಿಂದ ತಪ್ಪಿಸಿಕೊಳ್ಳುವುದು ಇದರಲ್ಲೇ ಕಳೆಯಿತು ಅಂದರೆ ತಪ್ಪಲಾಗರದು.  ಕೊನೆ ಕೊನೆಗೆ ಇವನಿಗೂ ಮತ್ತು ಬ್ರಿಟಿಷ್ ಅಧಿಕಾರಿಗಳಿಗೂ ಅನೇಕ ಭಿನ್ನಾಭಿಪ್ರಾಯಗಳಿದ್ದವು. 

ಇವನಿಗೆ ಮದುವೆ ಆದ ಯಾವ ದಾಖಲೆಗಳಿಲ್ಲ; ಆದರೆ ಇವನ ಹತ್ತಿರ ಸಂಬಂಧದವರ ಮಕ್ಕಳು ಇವನ ಆಶ್ರಯದಲ್ಲೇ ಬೆಳದರು.  ಅವರಲ್ಲೊಬ್ಬ ದುಲೀಪ್ ಸಿಂಹಜಿ ರಣಜಿಯ ಹಾಗೆ ಇಂಗ್ಲೆಂಡ್ ದೇಶದ ತಂಡದೊಂದಿಗೆ ಕ್ರಿಕೆಟ್ ಆಡಿದ.

0೨/೦೪/೧೯೩೩ ರಂದು ರಣಜಿ ಹೃದಯಾಘಾತದಿಂದ ನಿಧನನಾದ.  ರಣಜಿ ಟ್ರೋಫಿಯಿಂದ ಇವನ ಹೆಸರು ಇನ್ನೂ ಉಳಿದಿದೆಯಾದರೂ, ರಣಜಿತ್ ಸಿಂಹನಿಂದ ಆ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಯೇನೂ ಆಗಲಿಲ್ಲ. 










Comments