ಒಂಟಿ ಸೀನುವಿನ ವಿವಿಧ sceneಗಳು

 ಒಂಟಿ ಸೀನುವಿನ ವಿವಿಧ sceneಗಳು

ಹಾಸ್ಯ ಲೇಖನ - ಅಣಕು ರಾಮನಾಥ್




ಸೀನು ಮತ್ತು ಸುಬ್ಬು ಶುದ್ಧ ತರಳೆ ಗೆಳೆಯರು. ಅವಿವಾಹಿತನಾದ ಸೀನುವನ್ನು ಸುಬ್ಬುವು ಒಂಟಿ ಸೀನು, ಅಪಶಕುನ ಒಂಟಿ ಸೀನು ಎಂದು ಕರೆಯುತ್ತಿದ್ದ. ಇವರಿಬ್ಬರ ನಡುಗೆ ಆಗಾಗ್ಗೆ ನಡೆದ ಮಾತುಗಳ ಝಲಕ್ ನೋಡೋಣ ಬನ್ನಿ. 

ಸುಬ್ಬು: ಅಪಶಕುನಾ, ಒಂಟಿ ಸೀನೂ, ಎಲ್ಲಾ ಗೊತ್ತು, ನಾನೇ ಸರ್ವಜ್ಞ ಅಂತ ಕೊಚ್ಕೋತೀಯಲ್ಲ, ಈ ಪ್ರಶ್ನೆಗೆ ಉತ್ತರ ಹೇಳು ನೋಡೋಣ. 

ಸೀನು:  ಕೇಳೋ ಸುಬ್ಬೂ.

ಸುಬ್ಬು: ಇಚ್ಛೆಯನ್ನರಿತು ನಡೆವ ಸತಿ ಇರಬೇಕು ಅಂತ  ಸರ್ವಜ್ಞ ಹೇಳಿದಾನಲ್ಲಾ, ಇಚ್ಛೆಯನ್ನರಿತು ನಡೆವ ಪತಿಇರಬೇಕೂಂತ ಯಾಕೆ ಹೇಳ್ಲಿಲ್ಲಾ...?

ಸೀನು :  ಕೈಕೇಯಿ ಹೇಳಿದ್ಹಾಗೆ ದಶರಥ ನಡ್ಕೊಂಡಿದ್ದಕ್ಕೇ ದೋÃಡ್ ರಾಮಾಯಣ ಆಗಿದ್ದು ಸರ್ವಜ್ಞನಿಗೆ ಗೊತ್ತಿತ್ತೋ. 

ಸುಬ್ಬು: ಹೇ! ನೆನ್ನೆ ಟಿವಿಲಿ ರಾಮಪಟ್ಟಾಭಿಷೇಕ ತೋರಿಸ್ತಿದ್ರು. ರಾಮನ ವಿಗ್ರಹ ಏನು ಲಕ್ಷಣ, ಏನು ಚಂದ... ಅಬ್ಬಬ್ಬ! 

ಸೀನು: ಸುಬ್ಬೂ, ನನ್ನದೊಂದು ಪ್ರಶ್ನೆ.

ಸುಬ್ಬು: ಏನು?

ಸೀನು:  ಅಷ್ಟು ಲಕ್ಷಣವಾದ, ಸುಂದರವಾದ ದೇವರ ವಿಗ್ರಹಾನ ನೋಡ್ಕೊಂಡು ಪ್ರಾರ್ಥನೆ ಮಾಡೋದ್ಬಿಟ್ಟು ಕಣ್ಮುಚ್ಕೊಂಡು ಪ್ರಾರ್ಥನೆ ಮಾಡ್ತಾರಲ್ಲ, ಯಾಕೆ? 

ಸುಬ್ಬು: ನಮ್ಮಿಬ್ಬರ ಪೈಕಿ ನೀನೇ ಸರ್ವಜ್ಞ. ಹೇಳಿಬಿಡು.  

ಸೀನು:  ಕಣ್ಬಿಟ್ಕೊಂಡಿದ್ರೆ ದೇವರನ್ನ ನೋಡೋ ಬದಲು ದೇವಸ್ಥಾನಕ್ಕೆ ಬಂದ ದೇವಿಯರನ್ನ ನೋಡ್ತಾ ಕೂತ್ಬಿಡ್ತಾರೆ ಅಂತ ಕಣೋ!

***

ಸೀನು:  ಏನೋ ಸುಬ್ಬು ಮಾವಿನಹಣ್ಣು ತಿನ್ತಾ ಇದೀಯಾ... ಎಲ್ಲಿ ಕೊಂಡ್ಕೊAಡ್ಯೋ?

ಸುಬ್ಬು: ಹುಷ್! ಅಪಶಕುನಾ, ಒಂಟಿ ಸೀನೂ, ಇದು ಕೊಂಡ್ಕೊAಡಿದ್ದಲ್ವೋ. 

ಸೀನು:  ಮತ್ತೆ?

ಸುಬ್ಬು: ಪಕ್ಕದ ತೋಟದಿಂದ ಕದ್ಕೊಂಡ್ಬAದೆ ಕಣೋ.

ಸೀನು: ಸುಬ್ಬೂ, ಕಳ್ಳತನ ಮಹಾಪಾಪ. ನಿನ್ನ ಈ ಪಾಪಕಾರ್ಯವನ್ನು ನಿನ್ನ ಭುಜದ ಮೇಲೆ ಕುಳಿತಿರುವ ಚಿತ್ರಗುಪ್ತನು ರೆಕಾರ್ಡ್ ಮಾಡಿಕೊಳ್ಳುತ್ತಾನೆ. 

ಸುಬ್ಬು: ಸೀನೂ, ಆ ಚಿತ್ರಗುಪ್ತ ನಾನು ಹುಟ್ಟಿದಾಗಿನಿಂದ ಈ ಪುಣ್ಯ, ಪಾಪ ಬರ್ಕೋತಾನೇ ಇದಾನೆ. ಅವನು ರಿಟೈರ್ ಆಗೋದು ಯಾವಾಗ್ಲೋ?

ಸೀನು: ಯಮ ತನ್ನ ಸಿಸ್ಟಮ್‌ನಲ್ಲಿ ಅಕೌಂಟ್ಸ್ (ಚಿತ್ರಗುಪ್ತ) ಆಪ್ ಡೌನ್‌ಲೋಡ್ ಮಾಡ್ಕೊಂಡ್ ತಕ್ಷಣ ಕಣೋ. 

ಸುಬ್ಬು: ಸೀನೂ, ನಮ್ಮ ಮೇಷ್ಟç ಹೆಸರು ಯಮ ಕಣೋ. ಯದುವೀರ್‌ನ ಮಗ ಮಂಜಣ್ಣ – ಯ ಮ! ಅವರು ನೆನ್ನೆ ಏನು ಹೇಳಿದ್ರು ಗೊತ್ತಾ... 

ಸೀನು:  ಏನು?

ಸುಬ್ಬು: ಜೀವನ ಒಂದು ಪ್ರಯಾಣ ಅಂದ್ರು. ಸೀನೂ ಆ ಪ್ರಯಾಣದ ಅಂತ್ಯ ಯಾವುದೋ? 

ಸೀನು:  ಹಾರ ಹಾಕಿರುವ ಫೋಟೋ! 

***

ಸುಬ್ಬು: ಅಪಶಕುನ ಒಂಟಿ ಸೀನೂ, ಓದಿದೆಯೇನೋ ಇದನ್ನಾ?

ಸೀನು:  ಏನೋ ಸುಬ್ಬೂ? 

ಸುಬ್ಬು: ಅತಿ ವೇಗವೇ ಸಾವಿನ ಮೊದಲ ಮೆಟ್ಟಿಲು ಅಂತ ಬರ್ದಿದಾರೆ ಕಣೋ. ಸೀನೂ, ಸಾವಿನದೇನೋ ಸರಿ, ಜೀವನದ ಮೊದಲ ಮೆಟ್ಟಿಲು ಯಾವುದು? 

ಸೀನು:  ತೊಟ್ಟಿಲು. 

ಸುಬ್ಬು: ಹೌದಲ್ವಾ! ನೀನು ಬಿಡಪ್ಪ. ಪ್ರತಿ ಪ್ರಶ್ನೆಗೂ ನಿನ್ನಲ್ಲಿ ಉತ್ತರ ಕಟ್ಟಿಟ್ಟ ಬುತ್ತಿ. ಆದ್ರೂ... ಸೀನೂ, ಕಟ್ಟಿಟ್ಟ ಬುತ್ತಿ, ಹೇಳಿಕೊಟ್ಟ ಮಾತು ಬಹುದಿನ ಬರಲ್ಲ ಅಂತಾರಲ್ಲಾ...? 

ಸೀನು:  ಅದು ಆ ಕಾಲದ ಮಾತು. ಈಗ ಕಟ್ಟಿಟ್ಟ ಬುತ್ತಿ ಫ್ರಿಡ್ಜಲ್ಲಿ, ಹೇಳಿಕೊಟ್ಟ ಮಾತು ಸೀರಿಯಲ್ಲಲ್ಲಿ ತುಂಬ ದಿವಸ ಬರತ್ವೆ ಕಣೋ.  

*** 

ಸೀನು:  ಏನೋ ಸುಬ್ಬೂ, ಯಾಕೋ ಮೂಗು ಕಟ್ಟಿದೆ, ತಲೆಯೆಲ್ಲ ಕೆದರಿದೆ, ಏನಾಯ್ತೋ? 

ಸುಬ್ಬು: ಅಪಶಕುನಾ ಒಂಟಿ ಸೀನೂ, ರಾತ್ರಿಯೆಲ್ಲ ಪಕ್ಕದ ಮನೆ ಅಂಕಲ್ ಆಂಟಿ ಜಗಳ ಆಡಿದ್ದೂ ಆಡಿದ್ದೇ. ಫುಲ್ ನೈಟ್ ನಿದ್ರೆ ಇಲ್ಲ ಕಣೊ.

ಸೀನು:  ಅವರು ಜಗಳ ಆಡಿದ್ರೆ ನಿನಗೆ ಯಾಕೋ ಮೂಗು ಕಟ್ಟತ್ತೆ? 

ಸುಬ್ಬು: ಹಾಳಾದವ್ರು ತುಂಬ ಮೆತ್ತಗೆ ಜಗಳ ಆಡ್ತಿದ್ರು ಕಣೋ. ಕೇಳಿಸ್ಕೊಳಕ್ಕೇಂತ ಕಾಂಪೌAಡಲ್ಲಿ ಚಳೀಲಿ ನಿಂತೂ ನಿಂತೂ ಥಂಡಿ ಆಗ್ಬಿಡ್ತು. 

ಸೀನು: ನೀನೋ, ನಿನ್ಬುದ್ಧೀನೋ! ಅಲ್ವೋ, ಈ ಚಳೀಲಿ, ರಗ್ ಹೊದ್ದು, ಸಕ್ಕರೆ, ಸಕ್ಕರೆ ನಿದ್ದೆ ಮಾಡೋದು ಬಿಟ್ಟೂ...

ಸುಬ್ಬು: ಸೀನೂ, ಒಂದು ಡೌಟು 

ಸೀನು:  ಏನು? 

ಸುಬ್ಬು: ಸಕ್ಕರೆ ನಿದ್ದೆ ಎಂದರೆ ಏನು?

ಸೀನು:  ಇರುವೆ, ಗೊದ್ದ, ನೊಣ ಬಂದು ಮುತ್ಕೊಂಡ್ರೂ ಎಚ್ಚರ ಆಗ್ದೇಯಿರೋ ನಿದ್ರೆ ಕಣೋ.

***

ಸುಬ್ಬು: ಒಂಟಿ ಸೀನೂ, ಬ್ರಹ್ಮ ಸರಸ್ವತಿ ಗಂಡ ಹೆಂಡತಿ ಅಲ್ವಾ?

ಸೀನು:  ಹೌದು. ಯಾಕೆ? 

ಸುಬ್ಬು: ಮತ್ತೆ... ಅವರ ಮಧ್ಯ ಇವತ್ತಿನ ವರೆಗೂ ಒಂದು ಸಣ್ಣ ಪುಟ್ಟ ಜಗಳಾನೂ ಆಗಿಲ್ವಲ್ಲಾ, ಯಾಕೆ? 

ಸೀನು:  ಹುಶ್; ಸುಮ್ಮನಿರೋ. ಯಾರಾದ್ರೂ ಸೀರಿಯಲ್ ಸ್ಕಿçಪ್ಟ್ ರೈಟರ್ ಕೇಳಿಸ್ಕೊಂಡ್ಬಿಟ್ಟಾರು! 

ಸುಬ್ಬು: ಕೇಳಿಸ್ಕೊಂಡ್ರೆ ಏನಾಗತ್ತೆ?

ಸೀನು:  ಅವರಿಬ್ಬರ ಮಧ್ಯಾನೂ ಜಗಳ ತಂದ್ಹಾಕ್ಬಿಟ್ಟು, ಬ್ರಹ್ಮನ ಹಣೆಬರಹಾನೇ ಚೇಂಜ್ ಆಗ್ಬಿಡತ್ತೆ!

ಸುಬ್ಬು: ಹ್ಹಿಹ್ಹಿಹ್ಹಿ. ಸೀನೂ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳಂತೆ. ಹಿಂದೆ ಯಾಕೆ? 

ಸೀನು:  ಮುಂದೆ ಬಂದರೆ ಅವಳನ್ನೇ ನೋಡುತ್ತಾ ಕುಳಿತು ಇವನು ಸಾಧನೆಯನ್ನೇ ಮರೆತುಬಿಡುತ್ತಾನಲ್ಲಾ!

***

ಸೀನು:  ಸುಬ್ಬೂ, ಆ ದೇವರು ಒಂದು ಚೂರೂ ಸರಿಯಿಲ್ಲ ಕಣೋ.

ಸುಬ್ಬು: ಅಪಶಕುನಾ ಒಂಟಿ ಸೀನೂ, ನೀನು ವಕ್ರಿಸಿದ್ರೆ ಮಾತ್ರ ಎಡವಟ್ಟೂ ಅನ್ಕೊಂಡಿದ್ದೆ. ಈಗ ಮಾತೂ ಎಡವಟ್ಟಾ? 

ಏನಾಯ್ತು? 

ಸೀನು:  ಈಶ್ವರ.... ತಾನು ಮಾತ್ರ ಮೂರು ಕಣ್ಣು ಇಟ್ಕೊಂಡಿದಾನೆ. ನಮಗೂ ಮೂರು ಕೊಡಬಾರದಾಗಿತ್ತಾ... 

ಸುಬ್ಬು: ಯಾಕೆ? ನಿನಗ್ಯಾಕೆ ಮೂರು ಕಣ್ಣು ಬೇಕಾಗಿತ್ತು? 

ಸೀನು:  ಪುಸ್ತಕದ ಮೇಲೊಂದ್ಕಣ್ಣು, ಸೀರಿಯಲ್ ಮೇಲೊಂದ್ಕಣ್ಣು, ಹುಡುಗಿಯರ ಮೇಲೊಂದು ಕಣ್ಣು ಇಡ್ಬೋದಾಗಿತ್ತಾ!

ಸುಬ್ಬು: ಸೀನೂ, ಶಿವ ಅಂದಾಗ ಹಿಮಾಲಯ, ಥಂಡಿ, ಎ.ಸಿ. ರೂಮು ಎಲ್ಲ ಜ್ಞಾಪಕ ಬಂತು. ನನಗೊಂದು ಡೌಟು.

ಸೀನು:  ಏನು?

ಸುಬ್ಬು: ಎ.ಸಿ. ರೂಮಲ್ಲಿ ಕೂತು ಕೆಲಸ ಮಾಡೋವ್ರು ಬೆವರು ಸುರಿಸೋದು ಯಾವಾಗ? 

ಸೀನು:  ರೈಡ್ ಆದಾಗ, ಕರೆಂಟ್ ಹೋದಾಗ ಕಣೋ.

***

ಸೀನು:  ಎಮ್ಮ ಮನೆಯಂಗಳದಿ ಬೆಳೆದೊಂದು ಹೂವೊಂದ ನಿಮ್ಮ ಮಡಿಲೊಳಗಿಡಲು ತಂದಿರುವೆವು....

ಸುಬ್ಬು: ಒಂಟಿ ಸೀನೂ, ಯಾವ ಹಾಡೋ ಅದು?

ಸೀನು:  ನೆನ್ನೆ ಮಂಜಣ್ಣನ ಮಗ ತಿಮ್ಮರಾಯಿ ಮದುವೇಲಿ ಹಾಡ್ತಿದ್ರು ಕಣೋ, ಗಂಡೊಪ್ಸೋವಾಗ...

ಸುಬ್ಬು: ಹೆಣ್ಣೊಪ್ಸೋದು ಗೊತ್ತು. ಇದೇನು ಗಂಡೊಪ್ಸೋದು?

ಸೀನು:  ಮನೆ ಅಳಿಯ ಅಲ್ವೇನೋ... ಮಗನ್ನ ಮನೆಯಿಂದ ಮಾವನ ಮನೆಗೆ ಕಳಿಸೋದೇ ಗಂಡೊಪ್ಸೋದು! ವಿಚಿತ್ರ ಏನ್ಗೊತ್ತಾ...

ಸುಬ್ಬು: ಏನು?

ಸೀನು:  ಹೆತ್ತ ಅಮ್ಮಅಪ್ಪನ್ನ ಬಿಟ್ಹೋಗ್ಬೇಕಲ್ಲಾಂತ ತಿಮ್ಮರಾಯಿ ಗೊಳೋ ಅಂತ ಅಳ್ತಿದ್ದ. ಪಾಪ!

ಸುಬ್ಬು: ಆ! ಈಗಿನ ಹುಡುಗಿಯರೇ ಗಂಡನ ಮನೆಗೆ ಹೋಗೋವಾಗ ಅಳೋದಿಲ್ವಲ್ಲೋ...

ಸೀನು:  ಚೆನ್ನಾಯಿತು! ಮುಂದೆ ಇವನದೇ ಅಡಿಗೆ. ದೊಡ್ಡ ಮನೆ, ಮನೆ ಭರ್ತಿ ಜನ... 

ಸುಬ್ಬು: ಮನೆ ಅಂದತಕ್ಷಣ ಜ್ಞಾಪಕ ಬಂತು ನೋಡು. ಮನೆನಾಯಿಗೂ, ಬೀದಿನಾಯಿಗೂ ಏನು ವ್ಯತ್ಯಾಸ? 

ಸೀನು:  ಮನೆನಾಯಿ ಬಡಪಾಯಿ. ಗಂಡನAತೆಯೇ ಅದಕ್ಕೂ ಬಯಸಿದಾಗ ಬೊಗಳುವ ಸ್ವಾತಂತ್ರ್ಯವಿಲ್ಲ ಕಣೋ

***

ಸೀನು:  ಏನು ಯೋಚನೆ ಮಾಡ್ತಾ ಕೂತಿದೀಯೋ ಸುಬ್ಬೂ?

ಸುಬ್ಬು: ಅಪಶಕುನಾ, ಒಂಟಿ ಸೀನೂ, ಅಧ್ಯಾತ್ಮ ಮಾತಾಡೋ ಗುರುಗಳೂ ಬುಧ, ಗುರು, ಶುಕ್ರ ಗ್ರಹ ಅಂತಾರೆ.

ಸೀನು:  ಹೌದು.

ಸುಬ್ಬು: ವಿಜ್ಞಾನಿಗಳೂ ಬುಧ, ಗುರು, ಶುಕ್ರ ಗ್ರಹ ಅಂತಾರೆ.

ಸೀನು:  ಹೌದು.

ಸುಬ್ಬು: ಹಾಗಾದರೆ ಅಧ್ಯಾತ್ಮಕ್ಕೂ, ವಿಜ್ಞಾನಕ್ಕೂ ಏನು ವ್ಯತ್ಯಾಸ? 

ಸೀನು:  ಅಧ್ಯಾತ್ಮದಲ್ಲಿ ಇರುವುದು ಒಂದೇ ಜನಕ - ಜಗಜನಕ; ವಿಜ್ಞಾನದಲ್ಲಿ ಆಮ್ಲಜನಕ, ಜಲಜನಕ, ಸಾರಜನಕ...

ಸುಬ್ಬು: ಇನ್ನೊಂದು ಡೌಟು.

ಸೀನು:  ಏನು?

ಸುಬ್ಬು: ಎಲ್ಲ ಗ್ರಹಗಳಿಗೂ ಒಂದೊAದು ವಾರ ಇದೆ. ಆದರೆ ರಾಹು-ಕೇತುಗೆ ಮಾತ್ರ ಯಾಕೆ ವಾರ ಇಲ್ಲ? 

ಸೀನು:  ಅವಕ್ಕೆ ವಾರ ಯಾಕೋ, ದೇಶಾನೇ ಅವುಗಳದಲ್ವೇನೋ...

ಸುಬ್ಬು: ಹೇಗೆ? 

ಸೀನು:  ದೇಹವಿಲ್ಲದ ತಲೆಯೇ ಮತದಾರರು; ತಲೆಯಿಲ್ಲದ ದೇಹವೇ ಮಂತ್ರಿಗಳು! 

***



ಸುಬ್ಬು: ಅಪಶಕುನಾ ಒಂಟಿ ಸೀನು, ಎಷ್ಟು ಚೆನ್ನಾಗಿದೆ ಅಲ್ಲವಾ ಈ ಪಾರ್ಕು! ಏಯ್ ಅಲ್ನೋಡೋ ಇಬ್ಬರು ಲವರ್ಸ್ ಹೇಗೆ ಕೂತಿದಾರೆ!

ಸೀನು:  ಏಯ್ ಸುಬ್ಬು, ನಾಚಿಕೆ ಇಲ್ವ ನಿನ್ಗೆ? ಪಾರ್ಕಿಗೆ ಬಂದು ಹಾಗೆಲ್ಲ ಪ್ರೇಮಿಗಳನ್ನ ದುರುಗುಟ್ಟಿ ನೋಡಬಾರದು. ತಿರುಗೋ ಈ ಕಡೆ...

ಸುಬ್ಬು: ಸೀನೂ, ಒಂದು ಡೌಟು

ಸೀನು:  ಏನು?

ಸುಬ್ಬು: ಪ್ರೇಮಿಗಳು ಚುಂಬಿಸೋವಾಗ ಯಾಕೆ ಕಣ್ಣು ಮುಚ್ಕೋತಾರೆ? 

ಸೀನು:  ಕಣ್ಣುಮುಚ್ಚುವ ಕಾಲ ಬರುವವರೆಗೂ ಹೀಗೇ ಪ್ರೀತಿಸೋಣ ಅಂತ ಸೂಚಿಸಕ್ಕೋ. 

ಸುಬ್ಬು: ಸೀನೂ, ಹುಡುಗಿಯರ ಮನಸ್ಸು ಚಂಚಲ ಅಂತಾರೆ. ಹುಡುಗರ ಮನಸ್ಸು? 

ಸೀನು:  ಚಂಚಲೆಯರ ಕಡೆ ನೋಡೋದ್ರಲ್ಲಿ ಅಚಲ!

***

ಸುಬ್ಬು: ಸೀನೂ, ನೆನ್ನೆ ರಾತ್ರಿ ಒಂದು ಡೌಟು ಶುರು ಆಗಿ ರಾತ್ರಿಯೆಲ್ಲ ನಿದ್ರೆ ಇಲ್ಲ ಕಣೋ.

ಸೀನು:  ಏನು ಡೌಟೋ?

ಸುಬ್ಬು: ದೇವರು ಮತ್ಸ್ಯಾವತಾರವನ್ನೂ ತಾಳಿದ್ದಾನೆ. ಹಾಗಾದರೆ ನಾವು ಮೀನು ತಿನ್ನುವುದು ತಪ್ಪು ಅಲ್ವೇನೋ?

ಸೀನು: ಅಯ್ಯೋ ನಿನ್ನ! ದೇವರನ್ನೇ ಹುರಿದುಮುಕ್ಕುವ ಬುದ್ಧಿಜೀವಿಗಳಿರೋ ಈ ಕಾಲದಲ್ಲಿ ಇದಕ್ಕೇನೂ ಮೀನಮೇಷ ಎಣಿಸಬೇಕಿಲ್ಲವಂತೆ. 

ಸುಬ್ಬು: ಮೀನಮೇಷ ಅಂದಿಯಲ್ಲಾ, ನಮ್ಮ ಪಾಲಿಕೇನೂ ಕಸ ಎತ್ತೋದೋ ಬಿಡೋದೋ ಅನ್ನೋದರಲ್ಲೇ ದಿನ ಕಳೀತು. ಸೀನೂ, ನಿಜಕ್ಕೂ ನಮ್ಮ ಬೀಬೀಎಂಪಿ ಅಭಿವೃದ್ಧಿ ಆಗೋದು ಯಾವಾಗಲೋ

ಸೀನು:  ಪ್ರತಿ ದಿನ, ಪ್ರತಿ ಕ್ಷಣ ಆಗ್ತಾನೇ ಇದೆಯಲ್ಲೋ... ಅಧಿಕಾರಿಗಳ ಬೀಬೀಗಳು, ಕ್ಷೇತ್ರಗಳ ಎಂಪಿಗಳು ಉದ್ಧಾರ 

ಆಗ್ತಾನೇ ಇದಾರಲ್ಲೋ.


Comments