ಆ ತಂಪಿನ ಅಂಗಳದಲಿ

ಆ ತಂಪಿನ ಅಂಗಳದಲಿ 

ಲೇಖನ - ಪಲ್ಲವಿ ಕಟ್ಟಿ

 


ಶನಿವಾರ ರಾತ್ರಿ 8 ಗಂಟೆಯಾಗಿತ್ತು. ಅಡುಗೆ, ಊಟ ಎಲ್ಲಾ ಮುಗಿಸಿ ಗಡಿಯಾರ ನೋಡಿದರೆ ಇನ್ನೂ 8 ಗಂಟೆ. ಮಕ್ಕಳೆಲ್ಲಾ ಆಗಲೇ ಮಲಗಿದ್ದರು. ನನ್ನ ಗಂಡ ಯಾವುದಾದರೂ ಸಿನಿಮಾ ನೋಡೋಣವೆ ಎಂದು ಕೇಳಿದ. ಮುಂಜಾನೆಯಿಂದಲೂ ಮನೆ ಕೆಲಸ, ಮನೆಗೆ ಬಂದ ಅತಿಥಿಗಳ ಸತ್ಕಾರ, ಊಟ ಉಪಚಾರ, ಮಾತು ಕತೆ ಎಲ್ಲಾ ಮಾಡಿ ಸುಸ್ತಾಗಿದ್ದ ನನಗೆ ಸ್ವಲ್ಪ ಸಮಯ ಹಾಗೇ ಏಕಾಂತದಲ್ಲಿ ಕಳೆಯಬೇಕು ಎಂದೆನಿಸಿತ್ತು. ನನ್ನ ಮುಖಚರ್ಯೆ ಇಂದ ನನ್ನನ್ನು ಅರ್ಥ ಮಾಡಿಕೊಂಡ ನನ್ನ ಗಂಡ ಸರಿ ನೀನು ಹೋಗಿ ವಿಶ್ರಮಿಸು ನಂತರ ಬೇಕಿದ್ದರೆ ಸಿನಿಮಾ ನೋಡುವ ಎಂಬ ಸಲಹೆಯನ್ನಿತ್ತ. 

ರೋಗಿ ಬಯಸಿದ್ದು ಹಾಲೂ ಅನ್ನ ವೈದ್ಯ ಹೇಳಿದ್ದೂ ಹಾಲೂ ಅನ್ನ ಎಂಬ ಗಾದೆಯಂತೆ ನಾನೂ ಸಹ ಸರಿಯೆಂದು ಮಲಗುವ ಕೋಣೆಯ ಮಂಚದಮೇಲೆ ಬಂದು ಕುಳಿತುಕೊಂಡೆ. ಕತ್ತಲೆ ಕೋಣೆಯಲ್ಲಿ ಹಾಗೇ ಸ್ವಲ್ಪಹೊತ್ತು ಕಣ್ಣುಮುಚ್ಚಿ ಕುಳಿತಿದ್ದೆ. ಸ್ವಲ್ಪ ಸಮಯದ ನಂತರ ಕಣ್ಣು ತೆರೆದಾಗ ಕಿಟಕಿಯ ಪರದೆಯ ಸಂದಿಯಿಂದ ಬೆಳಕಿನ ಕಿರಣಗಳು ಕಂಡು ಬಂದವು. ಏನು ಇಷ್ಟು ಬೆಳಕು ಎಂದು ಕೊಂಡು ಪರದೆ ಸರಿಸಿ ಕಿಟಕಿಯ ಹೊರಗೆ ಒಂದು ನೋಟ ಹರಿಸಿದೆ. ನೋಡುತ್ತಿದ್ದಂತೆಯೇ ಮುಖದ ಮೇಲೆ ಅಚ್ಚರಿಯ ಒಂದು ನಗು ಮೂಡಿತ್ತು. ಸ್ವಚ್ಛವಾದ ಆಗಸದಲ್ಲಿ ಮಿನುಗುತ್ತಿರುವ ಲಕ್ಷಾಂತರ ತಾರೆಗಳ ಮಧ್ಯೆ ತಾಮ್ರದ  ತಟ್ಟೆಯಂತೆ ಪೂರ್ಣ ಚಂದಿರ ಹೊಳೆಯುತ್ತಿದ್ದ. ಹುಣ್ಣಿಮೆ ಚಂದಿರನ ಬೆಳದಿಂಗಳು ನೇರವಾಗಿ ನಾನು ಕುಳಿತಿದ್ದ ಮಂಚದ ಮೇಲೆಯೇ ಬೀಳುತ್ತಿತ್ತು. ಪರದೆಯನ್ನು ಪೂರ್ತಿಯಾಗಿ ಸರಿಸಿ ಇಡಿ ಕೋಣೆಯಲ್ಲಿ ಬೆಳದಿಂಗಳ ಬೆಳಕು ಬರುವ ಹಾಗೆ ಮಾಡಿದೆ. 

ಎಷ್ಟು ಸುಂದರವಾಗಿತ್ತು ಆ ದೃಶ್ಯ!!  ಎಷ್ಟು ನೋಡಿದರೂ ಈ ಕಣ್ಣುಗಳ ದಾಹ ತೀರಲೇಇಲ್ಲ. ಚಂದಿರನನ್ನು ನೋಡುತ್ತಾ ಹಾಗೇ ಅಡ್ಡಾದೆ. ಆಡ್ದಾಗುತ್ತಿದ್ದಂತೆಯೇ ಬಾಲ್ಯದ ಹಲವಾರು ನೆನಪುಗಳು ಮರುಕಳಿಸಿದವು. 

ಎಷ್ಟು ಸುಂದರವಾದ ಬಾಲ್ಯದ ದಿನಗಳು. ಬೇಸಿಗೆ ರಜೆಗೆ ಧಾರವಾಡಕ್ಕೆ ಹೋಗಿದ್ದ ನೆನಪು. ಅಂದು ಹುಣ್ಣಿಮೆ ರಾತ್ರಿ ಎಂದು ತಿಳಿಯುತ್ತಲೇ ಎಲ್ಲಾ ಮಕ್ಕಳಿಗೆ ಬೆಳದಿಂಗಳ ಊಟ ಮಾಡುವ ಆಸೆಯಾಗಿತ್ತು. ಅದಕ್ಕೆ ಸರಿಯಾಗಿ ದೊಡ್ದವರೂ ಒಪ್ಪಿಗೆ ನೀಡಿದ್ದರು. ಎಲ್ಲರೂ ಮನೆಯ ಮಾಳಿಗೆಮೇಲೆ ಬೆಳದಿಂಗಳ ಊಟಕ್ಕೆ ಕಾದು ಕುಳಿತೆವು. ಆದರೆ ಅಜ್ಜಿಯ ಮನೆಯ ಮಾಳಿಗೆಗೆ ಹೋಗಲು ಮೆಟ್ಟಿಲುಗಳೇ ಇರಲಿಲ್ಲ. ಪಕ್ಕದ ಮನೆಯಿಂದ ನಿಚ್ಚಣಿಕೆ ತರಲು ಅಪ್ಪ ಹಾಗೂ ಚಿಕ್ಕಪ್ಪ ಹೋಗಿದ್ದರು. 

ಬೆಳದಿಂಗಳೂಟಕ್ಕೆ ಮನೆಯಲ್ಲಿ ಭರ್ಜರಿ ತಯಾರಿ ನಡೆದಿತ್ತು. ಜೋಳದ ರೊಟ್ಟಿ, ಹೆಸರುಕಾಳು ಉಸುಳಿ, ಬದನೇ ಕಾಯಿ ಪಲ್ಯ, ಮೆಂತ್ಯೆ ಸೊಪ್ಪಿನ ಪಚಡಿ, ಶೇಂಗಾ ಚಟ್ನಿಪುಡಿ, ಮೊಸರು ಹೀಗೆ ವಿಧವಿಧವಾದ ವ್ಯಂಜನಗಳು ತಯಾರಾಗಿದ್ದವು.

ನನಗೆ ಮೊದಲನೇ ಬಾರಿ ನಿಚ್ಚಣಿಕೆ ಏರುವ ಅವಕಾಶ ಸಿಕ್ಕಿತ್ತು ಆದರೆ ಅಲ್ಲೇ ಪಕ್ಕದಲ್ಲೇ ಬಾವಿ. ಎಲ್ಲಿ ಏಣಿ ಏರುವಾಗ ಬಾವಿಯಲ್ಲಿ ಜಾರಿ ಬೀಳುತ್ತೇನೋ ಎನ್ನುವ ಭಯವಾಗಿತ್ತು. ಆದರೂ ಏಣಿ ಹತ್ತಿ ಮಾಳಿಗೆಗೆ ಹೋಗಿದ್ದೆ. ಅಲ್ಲಿ ಚಾಪೆ, ಜಮಖಾನೆ ಎಲ್ಲಾ ಹಾಸಿ ಸಜ್ಜು ಮಾಡಿದ್ದೆವು. 

ಆ ಹುಣ್ಣಿಮೆ ಬೆಳದಿಂಗಳಲ್ಲಿ ಎಲ್ಲರೊಂದಿಗೆ ಕೂತು ಹರಟೆ ಹೊಡೆಯುತ್ತಾ ಊಟ  ಮಾಡುತ್ತಿದ್ದಾಗ ಎಷ್ಟು ತಿಂದೆವು ಎಂಬ ಲೆಕ್ಕವೇ ಇರಲಿಲ್ಲ. ಆ ಬೆಳದಿಂಗಳ ತಂಪನೇ ರಾತ್ರಿಯಲ್ಲಿ ಎಲ್ಲರೊಡನೆ ಕೂಡಿ ಮಾಡಿದ್ದ ಊಟದಿಂದ ಸಿಕ್ಕ ಸಂತಸ ಎಷ್ಟೇ ಸಂಪತ್ತು ಗಳಿಸಿದರೂ ಬಾರದು. 

ಊಟದ ನಂತರ ಮಾಳಿಗೆಯ ಮೇಲೆ ಹಾಸಿಗೆ ಹಾಗಿಕೊಂಡು ಸೊಳ್ಳೆಪರದೆ ಕಟ್ಟಿಕೊಂಡು ಎಲ್ಲರೂ ಸಾಲಾಗಿ ಮಲಗಿದ್ದ ನೆನಪು. ಸಾಲಾಗಿ ಮಲಗಿದ್ದ ಮಕ್ಕಳ ಹರಟೆ, ನಗು ಇದನ್ನೆಲ್ಲಾ ಸೊಳ್ಳೆ ಪರದೆಯಿಂದ ಇಣುಕುತ್ತಾ ತನ್ನೊಳಗೆ ಮೊಲವನ್ನು ಬಚ್ಚಿಟ್ಟು ಕೊಂಡು ಮಂದ ಹಾಸ ಬೀರುತ್ತಿದ್ದ ಚಂದ್ರಮ. ಚಂದ್ರನ ಆ ಮುಗುಳು ನಗು ನೋಡಿ ಪಟ್ಟ ಸಂಭ್ರಮ, ಆ ಬೆಳದಿಂಗಳ ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡುತ್ತಾ, ಅವುಗಳ ಮಿಂಚನ್ನು ನೋಡಿ ಅಚ್ಚರಿ ಪಡುತ್ತಾ ಹಾಗೆ ಪ್ರಕೃತಿಯ ಮಡಿಲಲ್ಲಿ ನಿದ್ರೆಗೆ ಜಾರಿದ್ದ ರಾತ್ರಿ ಮರೆಯಲು ಅಸಾಧ್ಯ.

ಇತ್ತೀಚಿನ ಯಾಂತ್ರಿಕ ದಿನಚರಿಯಲ್ಲಿ ಹುಣ್ಣಿಮೆ ಅಮಾವಾಸ್ಯೆ ಬಂದು ಹೋಗುವುದು ನಮ್ಮೆಲ್ಲರ ಗಮನಕ್ಕೆ ಬರದೇ ಇರುವುದು ವಿಪರ್ಯಾಸ. 

ಸಣ್ಣವಳಿದ್ದಾಗ ನನ್ನ ಸುತ್ತ ಮುತ್ತ ಮಕ್ಕಳು ಅತ್ತಾಗ ಆಕಾಶದಲ್ಲಿ  ಹೊಳೆಯುತ್ತಿದ್ದ ಚಂದಾ ಮಾವನನ್ನು ತೋರಿಸಿ ಊಟ ಉಣಿಸುತ್ತಿದ್ದುದನ್ನು ನೋಡಿದ್ದೆ.  ನನ್ನ ಮಗನಿಗೂ ಹಾಗೆ ಮಾಡೋಣ ಎಂದುಕೊಂಡು ಚಂದಮಾಮನನ್ನು ತೋರುಸಿದರೆ ಆತ ಸ್ವಲ್ಪವೂ ಆಸಕ್ತಿ ತೋರಿಸದೆ ಕಾರ್ಟೂನ್ ನೋಡಬೇಕು ಎಂದು ಅಳತೊಡಗಿದ. 

ಅಜ್ಜಿಯ ಮನೆಯ ಅಂಗಳದಲ್ಲಿ ಆಟ, ಅಜ್ಜಿಯ ಮನೆಯ ಮಾಳಿಗೆಯ ಮೇಲೆ ಬೆಳದಿಂಗಳೂಟ, ಆಕಾಶದಲ್ಲಿ ಮಿಂಚುವ ನಕ್ಷತ್ರಗಳನ್ನು ನೋಡುತ್ತಾ ಅಜ್ಜನನ್ನು ಕಥೆಹೇಳಲು ಪೀಡಿಸುವುದು ಇವೆಲ್ಲಾ ಇಂದು ಮೊಬೈಲ್ ಫೋನ್, ಐ ಪಾಡ್ ತರಹದ ಆಧುನಿಕ ಉಪಕಾರಣಗಳು ಸ್ಥಳತಾರಿಸಿವೆ. ಇದಕ್ಕೆಲ್ಲಾ ಕಾರಣ ನಾವುಗಳೇ ಆದರೂ ಆಧುನೀಕರಣವನ್ನು ದೂಶಿಸುತ್ತೇವೆ. 

ಬಾಲ್ಯದ ಆ ಬೆಳದಿಂಗಳ ಊಟವನ್ನು ಮತ್ತೇ ಒಮ್ಮೆಯಾದರೂ ಸವಿಯಬೇಕೆಂಬ ಆಸೆ ನನಗೆ. ಎಂದಾದರೂ ನನಗೆ ಈ ಅವಕಾಶ ಸಿಗಬಹುದೊ?ಸಧ್ಯಕ್ಕೆ ಸಿಡ್ನಿ ನಗರದ ಮನೆಯ ಮಲಗುವ ಕೋಣೆಯ ಕಿಟಕಿಯಿಂದ ಇಣುಕುತ್ತಿರುವ ಚಂದಿರನನ್ನು ನೋಡಿ ಬಾಲ್ಯದ ನೆನಪುಗಳನ್ನು ಹಸಿರಾಗಿಸಿಕೊಂಡು ಸಂಭ್ರಮ ಪಟ್ಟಿದ್ದೆ.


ಈ ಸಂದರ್ಭದಲ್ಲಿ ನನ್ನ ತಂದೆಯವರು ಬರೆದ ಒಂದು ಹಾಡು ನೆನಪಿಗೆ ಬಂತು 

ಹೇ ರಾತ್ರಿಯ ಪಯಣಿಗ 

ಚಂದಿರನೇ ಒಲುಮೆ ತೊರಾ |

ಆಕಾಶದ ಪಥದಲಿ ನೀ 

ಮೇಲೆ ಮೇಲೆ ಬಾರಾ ||

Comments