ಕನಕರನ್ನು ನಮಿಸಲು ಕಾರಣವೇನೆಂದರೆ...
ಹಾಸ್ಯ ಲೇಖನ - ಅಣಕು ರಾಮನಾಥ್
ಗತವೈಭವದ ಕಿರೀಟಕ್ಕೆ ಪೋಣಿಸಿದ ಮುತ್ತುಗಳ ಪೈಕಿ ದಾಸರ ಪದಗಳು ವಿಶಿಷ್ಟವಾದವು. ಅಂದು ಹರಿಯ ಭಜನೆಗೆಂದು ಬರೆದ ಗೀತೆಗಳು ಈ hurryಯ ಕಾಲಕ್ಕೂ ಅನೇಕ ವ್ಯಕ್ತಿಗಳಿಗೂ, ವೃತ್ತಿಗಳಿಗೂ ಅನ್ವಯವಾಗುವುದೇ ಆ ಪದಗಳ ವೈಶಿಷ್ಟ್ಯ. ಕನಕಜಯಂತಿಯ ಸಂದರ್ಭದಲ್ಲಿ ನಾನು ಮೀಟಿದ ವ್ಯಕ್ತಿಗಳು ಪದಗಳಲ್ಲಿ ಕಂಡ ವಿಷಯಗಳನ್ನು ಅವರ ಪದಗಳಲ್ಲಿಯೇ ಇದೋ ನಿಮ್ಮ ಮುಂದಿರಿಸುತ್ತಿದ್ದೇನೆ.
ಅಕೌಂಟೆಂಟ್: ಕನಕರೇ ನಮ್ಮ ಪಾಲಿನ ದೈವ. ಅವರು ಒಮ್ಮೆ “ಶ್ರೀರಾಮನೆನ್ನಿರೋ” ಎಂದೂ, ಒಮ್ಮೆ “ಶ್ರೀಕೃಷ್ಣನೆನ್ನಿರೋ” ಎಂದೂ ಹಾಡಿದುದೇ ನಮಗೆ ರಾಮನ ಲೆಕ್ಕ ಮತ್ತು ಕೃಷ್ಣನ ಲೆಕ್ಕಗಳನ್ನು ಇಡಲು ಸ್ಫೂರ್ತಿಯಾದುದು. ‘ಇಷ್ಟೇ’ ತೆರಿಗೆಗೆ ಬೇಕಾದ ರಾಮನ ಲೆಕ್ಕವಿರಿಸಿ, ‘ಅಷ್ಟೂ’ ಹಣವನ್ನು ಕೃಷ್ಣನ ಲೆಕ್ಕದಲ್ಲಿರಿಸುವ ಮೂಲಕ ಸಿರಿವಂತರ ಕೃಪೆಗೆ ನಾವು ಒಳಗಾಗಿ ನಮ್ಮ ಮನೆಯಲ್ಲೂ ಧನ‘ಕನಕ’ಗಳು ತುಂಬಿರುವುದಕ್ಕೆ ಆ ಹಾಡುಗಳೇ ಬುನಾದಿ. ಇವಲ್ಲದೆ ‘ಸಾಲದೆ ನಿನ್ನದೊಂದು ದಿವ್ಯನಾಮ’ ಎನ್ನುವುದಂತೂ ಸಾಲ ಪಡೆದು ಕೊಟ್ಟವರಿಗೇ ದಿವ್ಯ ನಾಮ ಹಾಕಿ ಹೋಗುವವರ ಲೆಕ್ಕದಲ್ಲಿ bad debt ಎಂಬ ಶೀರ್ಷಿಕೆಯಡಿ ಲೆಕ್ಕ ಬರೆಯಬಹುದೆಂದು ಹೊಳೆದುದೂ ಅವರ ಈ ಹಾಡನ್ನು ಕೇಳಿದ ನಂತರವೇ.
ವಕೀಲ: ಹರಿ, ರಾಮ, ಕೃಷ್ಣ ಎಂದೆಲ್ಲ ದೇವನನ್ನು ಕರೆದ ಕನಕದಾಸರೇ ಅಂದೊಮ್ಮೆ ‘ಈತನೀಗ ವಾಸುದೇವನು’ ಎಂದು ನುಡಿದದ್ದು ‘ನೇಮ್ ಚೇಂಜ್ ಅಫಿಡವಿಟ್’ನ ಮೊತ್ತಮೊದಲ ಮಾದರಿ. ಜಗದಲ್ಲಿ ಕಾನೂನು ಕಟ್ಟಳೆಗಳು ಪುಸ್ತಕರೂಪದಲ್ಲಿ ಪ್ರಕಟವಾಗಿ ಜನಪ್ರಿಯವಾಗುವುದಕ್ಕೆ ಮೊದಲೇ ಕನಕರು ಈ ಪರಿಯನ್ನು ಸೂಚಿಸಿ ವಕೀಲವರ್ಗಕ್ಕೆ ಗುರುಸ್ಥಾನದಲ್ಲಿದ್ದಾರೆ. ಅಲ್ಲದೆ ‘ನಮ್ಮಮ್ಮ ಶಾರದೆ’ ಎಂದೊಮ್ಮೆ, ‘ನಮ್ಮಮ್ಮ ಜಯಲಕ್ಷ್ಮಿ’ ಎಂದೊಮ್ಮೆ ಹಾಡುವ ಮೂಲಕ ಭಾರತೀಯ ನಾರಿಯು (ಅದೇಕೆ, ವಿಶ್ವದಲ್ಲೇ ಆ ಪದ್ಧತಿಯುಂಟು) ಮದುವೆಗೆ ಮುಂಚೆ ಒಂದು ಹೆಸರು, ನಂತರ ಒಂದು ಹೆಸರನ್ನು ಹೊಂದುವುದರ ಮೇಲೆ ಬೆಳಕು ಚೆಲ್ಲಿದ್ದಾರೆ. “I, Jayalakshmi, nee Sharada, declare that I am addressed by both these names; one being my maiden name and the other being the nomenclature ascribed to me by the in-laws’ ಎಂದು ಪೇಪರ್ ಡಿಕ್ಲೆರೇಷನ್ ಕೊಡುವ ಇಂದಿನ ಪದ್ಧತಿಗೆ ಇದುವೇ ತಳಹದಿ. ಕನಕರಿಗೆ ಜೈ.
ಹೊಟೇಲ್ ಮಾಲಿಕ: ಕನಕರು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಎಂದು ನುಡಿದುದೇ ನಮ್ಮ ತಿನಿಸುವ್ಯಾಪಾರದ ಮೂಲ. ಮೊದಮೊದಲು “ಛಿ! ಅನ್ನ ಮಾರ್ತಾನಂತೆ!” ಎಂದು ಮೂಗು ಮುರಿದವರೂ ನಂತರದ ದಿನಗಳಲ್ಲಿ ತಲೆಗೆ ಮುಸುಕು ಹಾಕಿಕೊಂಡು ಹಿಂದಿನ ಬಾಗಿಲಿನಿಂದ ಬರುತ್ತಿದ್ದುದೂ ಒಂದು ವಿಧದಲ್ಲಿ ಕನಕನಮನವೇ. “Main road under repair, take permanent deviation” ಎಂದು ಮಾಸ್ಟರ್ ಹಿರಣ್ಣಯ್ಯನವರು ಹೇಳಲು ಕನಕರು ಉಡುಪಿಯ ಮುಂಬಾಗಿಲಿನ ಹಂಗು ತೊರೆದು ತಮ್ಮದೇ ವ್ಯೂ ವಿಂಡೋ ಮಾಡಿಕೊಂಡುದೇ ಹಿನ್ನೆಲೆಯಾಗಿದ್ದೀತು.
ಜಿಮ್ ಮಾಲಿಕ: ಹೊಟೇಲಿನವರಂತೆಯೇ ನಾವೂ ಕನಕರು ರಚಿಸಿದ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಸಾಲಿನ ಆರಾಧಕರು. ಲಿಮಿಟ್‍ಲೆಸ್ ಊಟದಿಂದ ಇತರರಿಗೆ ಉದ್ಭವಿಸುವ ಡೊಳ್ಳುಹೊಟ್ಟೆಯೇ ನಮ್ಮ ಹೊಟ್ಟೆಪಾಡಿಗೆ ದಾರಿ. ಇಲ್ಲಿನ ಬಹುತೇಕ ವ್ಯಾಯಾಮಗಳನ್ನು ಜಿಮ್ಮಿಗರು ಮಾಡುವುದು ಹೊಟ್ಟೆಗಾಗಿಯೇ. ಉದರ ನಿಮಿತ್ತಂ ಬಲು ಎಕ್ಸರ್‍ಸೈಝುಂ!
ಹೊಸೈರಿ ಉತ್ಪಾದಕ: ‘ಎಲ್ಲಾರು ಮಾಡುವುದು ಗೇಣು ಬಟ್ಟೆಗಾಗಿ’ ಎಂದು ಕನಕರು ನುಡಿದುದೇ ನಮ್ಮ ವ್ಯಾಪಾರಕ್ಕೆ ಸ್ಫೂರ್ತಿಯಾಗಿ ಪರಿಣಮಿಸಿತು. ಮೊದಲಿಗೆ ಒಬ್ಬರು ‘ಲಂಗೋಟಿ ಬಹಳ ಒಳ್ಳೆಯದಣ್ಣ’ ಎಂದುಬಿಟ್ಟಿದ್ದರು. ಅದೇ ಬಹಳ ಶತಮಾನಗಳು ಬಳಕೆಯಲ್ಲಿಯೂ ಇದ್ದಿತು. ಕನಕರ ‘ಗೇಣು ಬಟ್ಟೆಗಾಗಿ’ ಪದಪುಂಜವು ಈ ಶತಮಾನದಲ್ಲಿ ನಮ್ಮಂತಹ ಹೊಸೈರಿದಾರರ ಜೀವನವು ರೇಷ್ಮೆಯಲ್ಲಿ ಹೊಸೆಯುವ ಮಟ್ಟಕ್ಕೇರಲು ಪ್ರೇರಕವಾಯಿತು.
ಚೌಚೌ ಪಕ್ಷ: ಕನಕರು ಹಾಡಿದ ‘ಒಂಭತ್ತು ಹೂವಿಗೆ ಒಂದೇ ನಾಳವು ಚಂದಮಾಮ’ ಎಂಬ ಹಾಡೇ ನಾವು ಒಂಬತ್ತು ಪಕ್ಷಗಳನ್ನು ಸೇರಿಸಿಕೊಂಡು ಒಂದು ಪಕ್ಷವನ್ನಾಗಿ ರಚಿಸಲು ಮಾರ್ಗದರ್ಶಕವಾಯಿತು. ದಾಸಪಂಥದವರು ಮುಂದಿನ ದಿನಗಳ ರಾಜಕೀಯವನ್ನು ಬಲ್ಲವರಾಗಿದ್ದರು ಎಂಬುದಕ್ಕೆ ಈ ಹಾಡೇ ನಿದರ್ಶನ. ಏಕಪಕ್ಷವಾಗಿ ಅಧಿಕಾರ ಹಿಡಿಯಲು ಹೆಣಗಾಡಿ ವಿಫಲರಾಗುತ್ತಿದ್ದ ನಮಗೆ ಇಂತಹ ಸುಳುಹನ್ನು ನೀಡಿದ ಕನಕರು ಸರ್ವಕಾಲಕ್ಕೂ ವಂದ್ಯರು.
ಮಾಡ್ರನ್ ಮಾತೆ: ಕನಕರ ‘ಕೂಸನು ಕಂಡೀರಾ’ ಹಾಡು ಇಂದಿಗೆ ಪ್ರಸ್ತುತವಾಗುವಷ್ಟು ಅಂದಿಗೆ ಆಗಿರಲಿಲ್ಲವೇನೋ! “ಕೂಸನು ಕಂಡೀರಾ ಮುಖ್ಯಮಾರ್ಗದಿ ಕಂಡೀರಾ | ವ್ಯಾನನ ಕಂಡೀರಾ ಸ್ಕೂಲಿನ ವ್ಯಾನನು ಕಂಡೀರಾ ||” ಎಂದು ಮಗುವು ನಮಗೆ ತಿಳಿಯದಂತೆಯೇ ಮೇಯ್ನ್ ರೋಡಿಗೆ ಹೋಗಿ ವ್ಯಾನನ್ನೇರಿತೇನೋ ಎಂದು ಹುಡುಕುವುದು; “ಆರನೆ ಮಾಸದಿ ಪುಟ್ಟಿದ ಕೂಸು; ಕೊಟ್ಟ ಮುಹೂರ್ತಕೆ ಹಡೆದಿಹ ಕೂಸು; ವೈದ್ಯೆಗೆ ಲಕ್ಷವ ನೀಡಿತು ಕೂಸು; ಸಿಸೇರಿಯನಲೆ ಹುಟ್ಟಿದ ಕೂಸು’ ಎಂದು ಮಗುವಿನ ಹುಟ್ಟಿದ ಗಳಿಗೆಯನ್ನು ನೆನೆಯುವುದು; “ತಿಂಡಿ ತೀರ್ಥವ ತಿನ್ನದ ಕೂಸು; ಚಿಪ್ಸ್ ಚಾಕ್ಲೇಟಿನ ಹುಚ್ಚಿನ ಕೂಸು; ಜಂಕ್ ಫುಡ್ ಸದ್ದಿಗೆ ಎದ್ದಿತು ಕೂಸು; ಮಾತೆಗೆ ಕಷ್ಟವ ಕೊಟ್ಟಿತು ಕೂಸು; ಕೂಸನು ಕಂಡೀರಾ’ ಎಂದು ಅದರ ಗುಣಗಾನ ಮಾಡುವುದು ಇಂದಿಗೇ ಹೆಚ್ಚು ಸಮಂಜಸ. ಇಂತಹ ಧಾಟಿಯ ಹಾಡನ್ನು ಕಟ್ಟಿಕೊಟ್ಟ ಕನಕರಿಗೆ ನಮೋ.
ಫುಟ್‍ವೇರ್ ವ್ಯಾಪಾರಿ: ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣ’ ಎಂಬ ಹಾಡೇ ನಮ್ಮ ಜೀವಾಳ. ನಮಗೆ ಬರುವ ಎಲ್ಲ ಕಸ್ಟಮರ್‍ಗಳೂ ದೇವರಿದ್ದಂತೆ. ಅವರ ಪಾದದ ಅಳತೆ ನೋಡಿಯೇ ಪಾದರಕ್ಷೆ ಕೊಡಬೇಕಾದ ಈ ವ್ಯಾಪಾರದಲ್ಲಿ ‘ನಿನ್ನ ಚರಣವನ್ನು ತೊರೆದು ಜೀವಿಸುವೆನು’ ಎಂದು ಹೇಳುವುದು ಸಾಧ್ಯವೇ ಇಲ್ಲ. ನಮ್ಮ ವ್ಯಾಪಾರದ ಪ್ರಚಾರಕ್ಕಾಗಿ ಒಂದು ಟ್ಯಾಗ್ ಲೈನ್‍ಗಾಗಿ ಹುಡುಕಾಡುತ್ತಿದ್ದಾಗ ನಮ್ಮ ನೆರವಿಗೆ ಬಂದದ್ದೇ ಈ ಸಾಲು. ನಮೋ ಕನಕ, ನಮೋ ಹರಿ.
ಪ್ರಾಮಾಣಿಕ ಅರಣ್ಯಾಧಿಕಾರಿ: ಇಂದಿನ ವರೆಗಿನ ಜೀವನವನ್ನು ಪ್ರಾಮಾಣಿಕವಾಗಿ ಸಾಗಿಸಿದ್ದಾಯಿತು. ಈಗ ಬಂದಿರುವ ಮಂತ್ರಿಯದೇ ತೊಂದರೆ. ‘ತೇಗ ತಿಂದು ತೇಗದ ಜೀವನವೂ ಜೀವನವೇ?’ ಎಂಬ ಧ್ಯೇಯವಾಕ್ಯ ಇರುವ, ‘ಗಂಧವನ್ನು ಹೊರಗೆ ಬಿಟ್ಟಿದ್ದರೆ ಕದ್ದುಬಿಡುತ್ತಾರೆ. ಆದ್ದರಿಂದ ನನ್ನ ಮನೆಗೆ ಕಳುಹಿಸಿಬಿಡಿ’ ಎಂದು ಆರ್ಡರಿಸುವ ಈ ಪ್ರಾಣಿಯು ಬುಮಿಯಲ್ಲಿ ಉದ್ಭವಿಸುವುದೆಂದು ತಿಳಿದೇ ಅಂದು ಅವರು ‘ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ’ ಎಂದು ಹಾಡಿದ್ದಾರೆನ್ನುವುದು ನನ್ನ ಖಚಿತ ಅಭಿಪ್ರಾಯ. ಮುಂದಿನದನ್ನು ಅಂದೇ ಕಂಡ ಕನಕರಿಗೆ ನಮೋ.
ರಾಜಕೀಯ ವಿಮರ್ಶಕ: ಅದೇನು ಮುನ್ನೋಟದ ಶಕ್ತಿ ಇದ್ದಿತೋ ದಾಸರಿಗೆ! “ಹೂವ ತರುವರ ಮನೆಗೆ ಹುಲ್ಲ ತರುವೆ’ ಎಂದು ಅಂದು ನುಡಿದುದು ಇಂದು ಕರ್ನಾಟಕದಲ್ಲಿ ನಿಜವಾಗಿರುವುದಲ್ಲ! ಹೂವನ್ನು ತಂದ ಕಮಲ ಪಕ್ಷಕ್ಕೆ ತೆನೆಭರಿತ ಹುಲ್ಲನ್ನು ಜೆಡಿಎಸ್ ತರುವುದರ ಮೂಲಕ ಅಂದಿನ ದಾಸವಾಣಿಯನ್ನು ನಿಜವಾಗಿಸಿದ್ದಾರೆ. ಭಲೆ ಕನಕದಾಸರೆ! ನಮೋನ್ನಮಃ.
ರಿಕ್ಷಾಚಾಲಕ: ಆ ಕಾಲದಲ್ಲೇ ಭೂಮಿಯ ಮೇಲೆ ತ್ರೀಸೀಟರ್ ಆಟೋಗಳು ಇರುತ್ತವೆಂದು ಅವರು ಕಂಡಿದ್ದರೆನ್ನುವುದಕ್ಕೆ ‘ಮೂವರೇರಿದ ಬಂಡಿ ಹೊರೆನೆನದು’ ಎಂಬ ಹಾಡೇ ಸಾಕ್ಷಿ.
ನರ್ಸಿಂಗ್ ಹೋಂ ಪೇಷಂಟ್: ಆಸ್ಪತ್ರೆಗೆ ಸೇರುವವರೆಗೆ ವ್ಯಕ್ತಿಯು ಹೆಸರುಳ್ಳ ವ್ಯಕ್ತಿ, ನಂತರ ಕೇವಲ ಬೆಡ್ ನಂಬರ್. ಅಂದಿನವರೆಗೆ ಅವನ ಶರೀರ, ಜೀವನ ಅವನದು, ಹಾಸಿಗೆಯೇರಿದಮೇಲೆ ಅದು ವೈದ್ಯನರ್ಸುಗಳ ಸ್ವತ್ತು ಎಂಬುದನ್ನು ದಾಸರು ಭವರೋಗವೈದ್ಯನಿಗೆ ಹೇಳುತ್ತಿದ್ದೇನೆನ್ನುವಂತೆಯೇ ಸೂಚ್ಯವಾಗಿ ಬುವಿವೈದ್ಯನಿಗೆ ಹೇಳಿದ್ದಾರೆ. ಆ ಹಾಡಿನ ಸಾಲೇ ‘ತನು ನಿನ್ನದು ಜೀವನ ನಿನ್ನದು!’
ಟೂತ್‍ಪೇಸ್ಟ್ ಮಾರಾಟಗಾರ: ‘ನಮ್ಮ ಟೂತ್‍ಪೇಸ್ಟ್ ಬಳಸದಿದ್ದರೆ ನಿಮ್ಮ ಸಂಗಾತಿಯು ನಿಮ್ಮ ಸಮೀಪ ಬರಲು ಇಚ್ಛಿಸುವುದಿಲ್ಲ. ಅದಕ್ಕೆ ನಿಮ್ಮ ಬಾಯಿಯಿಂದ ಹೊರಡುವ ವಾಸನೆಯೇ ಕಾರಣ’ ಎನ್ನುವುದನ್ನು ಅಂದಿನ ದಾಸರ ಹಾಡಿನ ಸಾಲು ಅದೆಷ್ಟು ಚೆನ್ನಾಗಿ ವರ್ಣಿಸಿದೆ ನೋಡಿ! ‘ಬಾಯಿ ನಾರಿದ ಮೇಲೆ ಏಕಾಂತವೆ’ ಎಂಬ ಸಾಲು ಸರ್ವ ದಂತವೈದ್ಯರೂ ಒಪ್ಪುವಂತಹ ಸಾಲು. ಇಂತಹ ಅಮೋಘ ಸಾಲನ್ನು ಬರೆದ ಕನಕರಿಗೆ ನಮೋ.
ಇವರೆಲ್ಲ ಹಾಡಿನ ಒಂದು ಸಾಲಿನಿಂದ ಪ್ರಭಾವಿತರಾದರೆ ಅವರ ಜೀವನದ ಸಂದರ್ಭವೊಂದರಿಂದ ಪ್ರಭಾವಿತರಾದವರೂ ಒಬ್ಬರಿದ್ದಾರೆ. ಸಿವಿಲ್ ಕಂಟ್ರಾಕ್ಟರ್ ಸಿವಲಿಂಗೂರವರು ‘ಗಾಯನಮಾತ್ರದಿಂದಲೇ ಗೋಡೆಯಲ್ಲಿ ಕಿಟಕಿಯನ್ನು ಮೂಡಿಸುವ ಅದ್ಭುತ ಕಲೆಗಾರರವರು. ಅಂದಿನಿಂದ ನಾನೂ ಹಲವಾರು ವಿಧದ ಹಾಡುಗಳನ್ನು ಹಳೆಯ ಗಟ್ಟಿ ಕಟ್ಟಡಗಳಿಂದ ಹಿಡಿದು ತಂಗಾಳಿಗೆ ತಲೆದೂಗುವಷ್ಟು ನಾಜೂಕಾದ ಪಿಡಬ್ಲ್ಯೂಡಿ ನಿರ್ಮಿತ ಬಿಲ್ಡಿಂಗುಗಳವರೆಗೆ ಎಲ್ಲ ಕಟ್ಟಡಗಳ ಮುಂದೆ ಹಾಡಿದ್ದೇನೆ. ಒಂದು ಇಟ್ಟಿಗೆಯೂ ಅಲ್ಲಾಡಲಿಲ್ಲ’ ಎಂದರು.
ಕನಕರ ಭಕ್ತಿಗೆ ಇರುವ ಶಕ್ತಿ ಇವರಿಗಿರಲೆಂತು ಸಾಧ್ಯ. ಕನಕರ ಜೀವನ ‘ಕನ ಕನ ರುಚಿರಾ’ ಎಂಬಂಥದ್ದು.
Comments
Post a Comment