ಸಿಡ್ನಿ ದಸರಾ ಮತ್ತು ರಾಜ್ಯೋತ್ಸವ 

ವರದಿ - ದತ್ತು ಕುಲಕರ್ಣಿ ಸಿಡ್ನಿ 


ಸಿಡ್ನಿ ಕನ್ನಡ ಶಾಲೆಯ ವತಿಯಿಂದ ಕಳೆದ ಶನಿವಾರ ನವೆಂಬರ್ 9ರಂದು ಅದ್ದೂರಿ ದಸರಾ ಮತ್ತು ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿಡ್ನಿಯ ವಾಟಲ್ ಗ್ರೂವ್ ಶಾಲೆಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಪಾಲಕರು ಮತ್ತು ಸ್ಥಳೀಯ ಕಲಾವಿದರು ಪಾಲ್ಗೊಂಡು ಕ್ಯಾರಿಯೋಕೆ ಹಾಡು ಮತ್ತು ನೃತ್ಯಗಳನ್ನು ಮಾಡಿ ರಾಜ್ಯೋತ್ಸವಕ್ಕೆ ಮೆರಗನ್ನು ತಂದರು. ಕಾರ್ಯಕ್ರಮವನ್ನು ಭಾರತದಿಂದ ಬಂದ ಹಿರಿಯರಾದ ಶ್ರೀಯುತ ಬದರಿನಾಥ್ ಮತ್ತು ಮತ್ತು ಶ್ರೀಮತಿ ಮಂಜುಳಾ ಪಡಕಿ ಅವರು ದೀಪ ಬೆಳಗಿಸುವುದರೊಂದಿಗೆ ಪ್ರಾರಂಭಿಸಲಾಯಿತು.

 ಮೊದಲಿಗೆ ಕುಮಾರಿ ಅನ್ವಿತಾ ಅವಳಿಂದ ಸ್ವಾಗತ ಭಾಷಣ ನಂತರ ಶ್ರೇಯಾ ಮತ್ತು ಶರಣ್ಯ ಇವರು ಹಾಡಿದ ಕನ್ನಡದ ಪ್ರಸಿದ್ಧ ಭಾವಗೀತೆ ‘ಹಚ್ಚೇವು ಕನ್ನಡದ ದೀಪ’ ದಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ಚಾರ್ವಿ ಮತ್ತು ಲಕ್ಷ್ ಅವರು ಹಾಡಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಚೆನ್ನಾಗಿ ಮೂಡಿಬಂದಿತು. ಹಾಗೆಯೇ ಮತ್ತೊಂದು ನಾಡ ಭಕ್ತಿಗೀತೆ ‘ಇದೇ ನಾಡು ಇದೇ ಭಾಷೆ’ ಯನ್ನು ಆರುಷ್ ಚೌಗುಲೆ ಚೆನ್ನಾಗಿ ಪ್ರಸ್ತುತಪಡಿಸಿದನು. ಆಮೇಲೆ ಹರ್ಷಿತಾ ಅಕ್ಷತಾ ಮತ್ತು ಶಿವಾಂಗ್ ಹಾಡಿದ ನಿಸಾರ್ ಅಹ್ಮದವರ ನಿತ್ಯೋತ್ಸವ ಹಾಡು ಎಂದಿನಂತೆ ಪ್ರೇಕ್ಷಕರ ಮನಸೂರೆಗೊಂಡಿತು. ನಂತರ ಅವನಿ ಪಡಕಿ ಹಾಡಿದ ‘ಟಗರು ಬಂತು ಟಗರು’ ಸಿನಿಮಾ ಹಾಡು ತನ್ನ ಸುಶ್ರಾವ್ಯತೆಯೊಂದಿಗೆ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿತು. ಹಾಗೆ ಸಮುದ್ಯತಾ ಕುಲಕರ್ಣಿ ಹಾಡಿದ ‘ಗುಡಿಯಲಿರುವ ಶಿಲೆಗಳೆಲ್ಲ’ ಬಹಳ ಇಂಪಾಗಿ ಮೂಡಿ ಬಂತು. ನಂತರ ಮಕ್ಕಳಾದ ಲಕ್ಷ್,ಚಾರ್ವಿ ಮತ್ತು ಶನಯಾ ಪ್ರಸ್ತುತಪಡಿದ ಪಡಿಸಿದ ನೃತ್ಯ ನಯನ ಮನೋಹರವಾಗಿತ್ತು. ಹಾಗೆಯೇ ಪುಟ್ಟ ವಿರಾಜನ ಭಾಷಣ ಬಹಳ ಚೆನ್ನಾಗಿತ್ತು.

 ನಂತರ ಸ್ಥಳೀಯ ಕಲಾವಿದರಿಂದ ನಾಡಗೀತೆಗಳು ಮತ್ತು ಸಿನಿ ಗೀತೆಗಳು ಚೆನ್ನಾಗಿ ಮೂಡಿ ಬಂದವು. ಪ್ರಮೋದ್ ಅವರು ಡಾ. ರಾಜಕುಮಾರ್ ಅವರ ‘ಚೆಲುವೆಯೇ ನಿನ್ನ ನೋಡಲು’ ಹಾಡನ್ನು ಅತಿ ಮಧುರವಾಗಿ ಹಾಡಿದರು. ಹಾಗೆಯೇ ಭುವಿ ಗಲಗಲಿ ಹಾಡಿದ ‘ಮಧುವನ ಕರೆದರೆ’ ಹಾಗೂ ಅನಿಲ ರುದ್ರಾರಾಧ್ಯ ಹಾಡಿದ. ‘ನೀ ಹಿಂಗ ನೋಡಬೇಡ’ ಬಹಳ ಮನ ಮುಟ್ಟುವಂತೆ ಮೂಡಿಬಂದವು. ‘ಕರುನಾಡ ತಾಯಿ ಸದಾ ಚಿನ್ಮಯಿ’ ಹಾಡಿಗೆ ಆರವಿ ಬೆಂಗಳೂರು ಅವರಿಗೆ ನೆರೆದ ಜನರಿಂದ ಚಪ್ಪಾಳೆ ಸಿಕ್ಕವು. ದೇವಿಕಾ ಪ್ರಮೋದ್ ಅವರು ಪ್ರಸ್ತುತಪಡಿಸಿದೆ ‘ಉಲ್ಲಾಸದ ಹೂಮಳೆ ಬಹಳ ಇಂಪಾಗಿತ್ತು. ಸುರೇಶ್ ಪೂಜಾ ‘ಬಾರೆ ಬಾರೆ ಚಂದದ ಚೆಲುವಿನ’ ಹಾಡನ್ನು ಹಾಡಿ ಪಿಬಿ ಶ್ರೀನಿವಾಸ್ ಅವರನ್ನ ನೆನಪಿಸಿದರು. ದೀಪಕ್ ಅವರು ಹೊಸ ಹಾಡು ‘ದ್ವಾಪರ ದಾಟುತ’ ಹಾಡಿ ಎಲ್ಲರಿಗೂ ಖುಷಿ ನೀಡಿದರು. ನಂತರ ಅರ್ಚನಾ ಮಾದಲಿಗಿ ಮತ್ತು ಪ್ರಮೋದ್ ಅವರಿಂದ ಸುಪ್ರಸಿದ್ಧ ಹಳೆಯ ಹಾಗೂ ಹೊಸ ಹಾಡುಗಳ ಮೆಡ್ಲೇ ಬಹಳ ಬಹಳ ಚೆನ್ನಾಗಿ ಮೂಡಿಬಂದು ಜನರಿಂದ ಚಪ್ಪಾಳೆಗಿಟ್ಟಿಸಿತು. ಶ್ವೇತಾ ಫಡ್ನೀಸ್ ಮತ್ತು ಅನ್ವಿತಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. 



ಸಭಾಂಗಣದ ಬಲಭಾಗದಲ್ಲಿ ದಸರಾ ನಿಮಿತ್ತ ದಸರಾ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟ ನೂರಾರು ಗೊಂಬೆಗಳು ಕಣ್ಮನ ಸೆಳೆದವು. ಮಕ್ಕಳು ಬೆರಗಿನಿಂದ ಎಲ್ಲಾ ಗೊಂಬೆಗಳನ್ನ ನೋಡಿ ತಮ್ಮ ಪಾಲಕರಿಂದ ಅವುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದು ಕಂಡುಬಂದಿತು. ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಆಚಾರ ವಿಚಾರ ಪುರಾಣ ಮುಂತಾದ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಈ ತರದ ಗೊಂಬೆ ಪ್ರದರ್ಶನ ಬಹಳ ಮಹತ್ವದ್ದು ಅನಿಸಿತು. ಹಾಗೆಯೇ ಸಭಾಂಗಣದ ಇನ್ನೊಂದು ಭಾಗದಲ್ಲಿ ಮಕ್ಕಳಿಂದ ಮಾಡಲ್ಪಟ್ಟ ಮನೆಗಳ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅತ್ಯುತ್ತಮ ಮಾದರಿಗಳನ್ನು ಮಾಡಿದ ಮಕ್ಕಳಿಗೆ ಹಾಗೂ ಚೆನ್ನಾಗಿ ಹಾಡಿದ ಮಕ್ಕಳಿಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಕೊನೆಯಲ್ಲಿ ಅಂತಾಕ್ಷರಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬಹಳ ಮಕ್ಕಳು ಮತ್ತು ಪಾಲಕರು ಇದರಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಆನಂದಿಸಿದರು. ಕೊನೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಂತಹ ಒಳ್ಳೆಯ ಕಾರ್ಯಕ್ರಮದ ಆಯೋಜಿಸಿದ ಸಿಡ್ನಿ ಕನ್ನಡ ಶಾಲೆಯ ನಾರಾಯಣ ಕನಕಾಪುರ ಮತ್ತು ಸಂಗಡಿಗರಿಗೆ ಎಲ್ಲರೂ ಧನ್ಯವಾದ ಹೇಳಿದರು. 

Comments