ದುಷ್ಟ-ಕ್ಲಿಷ್ಟ ಲಾಯರ್ ನೋಟೀಸು ಪ್ರಸಂಗವು
ಹಾಸ್ಯ ಲೇಖನ - ಅಣಕು ರಾಮನಾಥ್
‘ಪ್ಲಿಂಕ್’ ಎಂದಿತು ವಿಷ್ಣುವಿನ ಮೊಬೈಲ್.
‘ಯಾವುದೋ ವಾಟ್ಸಪ್ ಮೆಸೇಜ್ ಇರಬೇಕು
ನೋಡು ಲಕ್ಷ್ಮಿ’ ಎಂದ ವಿಷ್ಣು.
‘ನಿಮ್ಮ ಕಾಲಿಗೆ ಮಸಾಜ್ ಮಾಡೋದಲ್ಲದೆ
ನಿಮ್ಮ ಕಾಲ್ ರಿಸೀವ್ ಮಾಡೋದು, ಮೆಸೇಜ್ ನೋಡೋದಕ್ಕೆ ನನಗೆ ಸಮಯವಿಲ್ಲ. ನಿಮ್ಮ ಮುದ್ದು ಸೊಸೆ ಸರಸ್ವತಿಗೆ
ಹೇಳಿ’ ಮೂತಿ ತಿರುವಿದಳು ಲಕ್ಷ್ಮಿ. ದೇವದೇವಿಯರಾದರೇನು, ಅತ್ತೆಸೊಸೆಯರೆಂದರೆ ಖಾರಪ್ರಕಾರ ಇರಲೇಬೇಕಲ್ಲ!
‘ಪಾಪ! ಬ್ರಹ್ಮ ಸೃಷ್ಟಿಸಿದ ಗೊಂಬೆಗಳಿಗೆಲ್ಲ
ಫೋರ್ಹೆಡ್ಡಲ್ಲಿ ಚಿಪ್ಸ್ ಇಂಪ್ಲ್ಯಾಂಟ್ ಮಾಡೋ ಕೆಲಸ ಸಿಕ್ಕಾಪಟ್ಟೆ ಇದೆ, ಮಿಡ್‍ನೈಟ್ ದಾಟತ್ತೋ ಏನೋ
ಅಂತ ಬ್ರೇಕ್‍ಫಾಸ್ಟ್ ಟೈಮಲ್ಲೇ ಗೊಣಗ್ತಿದ್ಳಲ್ಲ! ನನ್ನ ಕೈಬೆರಳುಗಳೂ ಕೊಂಚ ನೋಯ್ತಿದೆ ಲಕ್ಷ್ಮಿ.
ಅವನ್ನೂ ಒಂಚೂರು ಮಸಾಜ್ ಮಾಡಿಬಿಡು, ನಾನೇ ಮೆಸೇಜ್ ನೋಡ್ತೀನಿ’ ಎಂದ ವಿಷ್ಣು ನಸುನಗುತ್ತಾ.
‘ಈ ಕೂಡಲೆ ಯಾರಾದರೂ ಭಕ್ತ ಕೂಗಿದ್ರೆ
ಗದೆ ಹೊತ್ತು ಚಕ್ರ ತಿರುಗಿಸ್ಕೊಂಡು ಹೋಗಕ್ಕೆ ಕಾಲೂ ಸರಿಯಿರತ್ತೆ, ಬೆರಳೂ ಸರಿಯಿರತ್ತೆ. ನನ್ನ ದೇವರ
ಸತ್ಯ ನನಗೆ ಗೊತ್ತಿಲ್ವಾ! ತಳ್ಳಿ ಮೊಬೈಲು’ ಎಂದ ಲಕ್ಷ್ಮಿ, ಮೊಬೈಲ್ ಪಡೆದು ವಾಟ್ಸಪ್ ಮೆಸೇಜನ್ನು
ತೆರೆದು “ಯಾವುದೋ ಪಾತಾಳದ ಪ್ರಾಣಿ. ಬಲಿ ಚಕ್ರವರ್ತಿಯ ರೆಫರೆನ್ಸ್ ಇದ್ಹಾಗಿದೆ. ಡೌನ್‍ಲೋಡ್ ಮಾಡ್ತೀನಿ
ಇರಿ” ಎನ್ನುತ್ತಾ ಡೌನ್‍ಲೋಡ್ ಆದ ಡಾಕ್ಯುಮೆಂಟನ್ನು ಓಪನಿಸಿ ಓದಲಾರಂಭಿಸಿದಳು.
ಗೆ,
ಶ್ರೀಮಾನ್ ವಿಷ್ಣು @ವಾಮನ @ತ್ರಿವಿಕ್ರಮ
ಆದಿಶೇಷ ಮ್ಯಾನ್ಷನ್, ಕ್ಷೀರಸಾಗರ ಬಡಾವಣೆ,
ವೈಕುಂಠನಗರ, ದೇವಲೋಕ
ಮಾನ್ಯರೆ,
ಬಲಿಚಕ್ರವರ್ತಿಗಳು ಗುರುವೂ, ನನ್ನ ಕಕ್ಷಿದಾರರೂ ಅದ ಶುಕ್ರಾಚಾರ್ಯರು ನಿಮ್ಮ
ಮೇಲೆ ಈ ಕೆಳಕಂಡ ಆಪಾದನೆಗಳನ್ನು ಹೊರಿಸಿದ್ದಾರೆ:
1. ನೀವು ಬಲಿಚಕ್ರವರ್ತಿಯ ಬಳಿ ದಾನ ಬೇಡಲು ವಾಮನನ ವೇಷದಲ್ಲಿ ಬಂದಾಗ ಶುಕ್ರಾಚಾರ್ಯರು
ನೀರಿನ ಹೂಜಿಯ ಮೂತಿಯಲ್ಲಿದ್ದದ್ದು ನಿಮಗೆ ತಿಳಿದಿದ್ದೂ ಸಹ ನೀವು ಚೂಪಾದ ಕಡ್ಡಿಯನ್ನು ಹೂಜಿಯ ಮೂತಿಗೆ
ತುರುಕಿದಿರಿ. ಇದರಿಂದ ನನ್ನ ಕಕ್ಷಿದಾರರಾದ ಶುಕ್ರಾಚಾರ್ಯರು ಒಂದು ಕಣ್ಣನ್ನು ಕಳೆದುಕೊಳ್ಳುವಂತಾಯಿತು.
2. ಶುಕ್ರಾಚಾರ್ಯರು ರಕ್ಕಸರ ಗುರುಗಳು. ಬಲಿಚಕ್ರವರ್ತಿ ಅವರ ಶಿಷ್ಯ. ಶಿಷ್ಯನನ್ನು
ಗುರುವು ಕಾಪಾಡುವುದು ಅಂದಿನ ಧರ್ಮ. ನೀವು ಹೂಜಿಯ ಮೂತಿಯೊಳಗೆ ಕಡ್ಡಿ ಆಡಿಸುವುದರ ಮೂಲಕ ಗುರುವೊಬ್ಬನು
ಶಿಷ್ಯನ ರಕ್ಷಣೆಗೆ ಬರುವಂತಹ ಗುರುತರ ಕಾರ್ಯಕ್ಕೆ ಅಡ್ಡಿಪಡಿಸಿದ್ದೀರಿ. ಇದು ಆ ಕಾಲದ ರೀತ್ಯಾ ಅಪರಾಧ.
2. ಶುಕ್ರಾಚಾರ್ಯರು ಕಣ್ಣು ಕಳೆದುಕೊಂಡಾಗಿನಿಂದ ಅವರು ರಸ್ತೆಯ ಒಂದು ಬದಿಯನ್ನಷ್ಟೇ
ನೋಡಲು ಸಾಧ್ಯವಾಗಿದ್ದು, ಇದರಿಂದ ಅರ್ಧ ಪ್ರಪಂಚದ ವೀಕ್ಷಣೆಯೇ ಹೋದಂತಾಗಿದೆ. ಕುರುಡಾದ ಕಣ್ಣಿನ ಕಡೆಯಿಂದ
ಬಂದವರು ತಿಳಿಯದೆ ಎಷ್ಟೋ ಬಾರಿ ಡಿಕ್ಕಿ ಹೊಡೆಯುವಂತಾಗಿದೆ, ಪೆಟ್ಟಾಗಿದೆ.
3. ಇಂತಹ ಪರಿಸ್ಥಿತಿಗಳಿಂದ ನನ್ನ ಕಕ್ಷಿದಾರರಿಗೆ ಮಾನಸಿಕ ಖಿನ್ನತೆ ಉಂಟಾಗಿದೆ.
4. ಆ ಕಾಲದಲ್ಲಿ eye transplant ಇಲ್ಲದಿದ್ದ ಕಾರಣ ಇಂದಿನವರೆಗೆ ಅವರು
ಒಂಟಿಕಣ್ಣಿನಲ್ಲೇ ಇದ್ದರು. ಈಗಷ್ಟೇ ಅಂತಹ ಚಿಕಿತ್ಸೆ ಲಭ್ಯವಾಗಿರುವುದರಿಂದ ದೇವತಾಗುಣಗಳಿರುವ ನೀವು
ಆ ಶಸ್ತ್ರಚಿಕಿತ್ಸೆಗೆ ಅವರನ್ನು ಒಳಪಡಲು ಕೋರದಿರುವುದು ದೈವಿಕ ಅಪರಾಧವಾಗಿದೆ.
ಈ ಎಲ್ಲ ಪರಿಸ್ಥಿತಿಗಳಿಗೂ ಕಾರಣರಾದ ನೀವು ಈ ಕೂಡಲೆ
ಅವರ ಕಣ್ಣಿನ ಚಿಕಿತ್ಸೆಗೆ ಅವಶ್ಯವಾದ ಖರ್ಚನ್ನು ಭರಿಸುವುದಲ್ಲದೆ ಕಳೆದ ಕೆಲವು ಯುಗಗಳು ಅವರು ಅನುಭವಿಸಿದ
ದೈಹಿಕ, ಮಾನಸಿಕ ಕ್ಷೋಭೆಗೆ ಪರಿಹಾರವನ್ನೂ ಕಟ್ಟಿಕೊಡಬೇಕೆಂದು ಈ ಮೂಲಕ ನೋಟೀಸ್ ಜಾರಿ ಮಾಡುತ್ತಿದ್ದೇನೆ.
ಮುಂದಿನ ಹದಿನೈದು ದಿನಗಳಲ್ಲಿ ನಿಮ್ಮಿಂದ ಈ ಕುರಿತಾಗಿ ಯಾವುದೇ ಕ್ರಮವು ಕಂಡುಬರದಿದ್ದಲ್ಲಿ, ನನ್ನ
ಕಕ್ಷಿಯು ಕಣ್ಣು ಕಳೆದುಕೊಂಡ ಸಂದರ್ಭದಲ್ಲಿ ಬುವಿಯಲ್ಲೇ ಇದ್ದುದರಿಂದಲೂ ಈ ಕೇಸು ಧರೆಯ ಕೋರ್ಟಿಗೇ,
ಅದರಲ್ಲೂ ವಾಮನಾವತಾರವು ಭಾರತದಲ್ಲೇ ನಡೆದುದರಿಂದ ಅಲ್ಲಿನ ಜ್ಯೂರಿಸ್ಡಿಕ್ಷನ್ನಿಗೆ ಬರುವುದರಿಂದಲೂ,
ಭಾರತೀಯ ಪೀನಲ್ ಕೋಡ್ ಅನ್ವಯ ನಿಮ್ಮ ಮೇಲೆ ಮೊಕದ್ದಮೆ ಹೂಡಲಾಗುತ್ತದೆ ಎಂದು ಈ ಮೂಲಕ ನಿಮಗೆ ತಿಳಿಸಬಯಸುತ್ತೇನೆ.
ಇಂದ,
ದುಷ್ಟಬುದ್ಧಿ, ವಕೀಲರು
ಕಮರಿ ಬೀದಿ, ಕೊಳ್ಳ ಬಡಾವಣೆ
ಬಲಿಚಕ್ರವರ್ತಿನಗರ, ಪಾತಾಳ
ನೋಟೀಸನ್ನು
ಓದಿದ ಲಕ್ಷ್ಮಿಯು ‘ಇದೇನ್ಬಂತ್ರೀ ಈಗ? ಇಷ್ಟು ದಿನ ಕೇಸುಗೀಸು ಅನ್ನದಿದ್ದ ಶುಕ್ರೂಗೇನ್ಬಂತೂಂತೀನಿ?’
ಎಂದು ಚಿಂತಾಕ್ರಾಂತಳಾದಳು.
“ಇದರಲ್ಲಿ ನರಮನುಷ್ಯರ ಕೈವಾಡವೇ ಇರಬೇಕು ಪ್ರಿಯೆ” ಎನ್ನುತ್ತಾ ಲಕ್ಷ್ಮಿಯಿಂದ
ಫೋನನ್ನು ಪಡೆದ ವಿಷ್ಣುವು ಡಾಕ್ಯುಮೆಂಟನ್ನು prativadi@naraka.com ಗೆ ಫಾರ್ವರ್ಡ್ ಮಾಡಿ ನಸುನಗುತ್ತಾ
ಮಲಗಿದೆ.
ನರಕದ ಕುಂಭೀಪಾಕದಲ್ಲಿ ಸ್ವಿಮ್ ಮಾಡುತ್ತಿದ್ದ ಪ್ರತಿವಾದಿ ಕ್ಲಿಷ್ಟಬುದ್ಧಿಯ
ಮೊಬೈಲ್ ‘ಪ್ಲಿಂಕ್’ ಎಂದಿತು. ಡಾಕ್ಯುಮೆಂಟನ್ನು ಓದಿದ ಪ್ರತಿವಾದಿಯು ‘ಈ ನೋಟೀಸಿಗೆ ಪ್ರತಿನೋಟೀಸು
ಜಾರಿ ಮಾಡಿ ಕೇಸ್ ಫೈಲ್ ಆಗದಂತೆ ಮಾಡಲು ನನ್ನ ಫೀಸ್ ಎಷ್ಟು?’ ಎಂದು ವಿಷ್ಣುವಿಗೆ ಮೆಸೇಜ್ ಕಳುಹಿಸಿದ.
“ನಿನ್ನನ್ನು ಬಾಂಡಲೆಯಲ್ಲಿ ಹುರಿಗಾಳಿನಂತೆ ಹುರಿಯುವುದರಿಂದ ಬಚಾವ್ ಮಾಡುತ್ತೇನೆ’
ಮರುಸಂದೇಶ ಬಂದಿತು.
“ಸ್ವರ್ಗಕ್ಕೆ ಟ್ರಾನ್ಸ್‍ಫರ್’ ಬೇಡಿಕೆ ಮುಂದಿಟ್ಟ ವಕೀಲ.
“ಸಾಧ್ಯವಿಲ್ಲ. ಸ್ವರ್ಗದ ರೆಸಾರ್ಟಲ್ಲಿ ಒಂದು ವಾರ ಫ್ರೀ ಸ್ಟೇ ವಿತ್ ಅನ್‍ಲಿಮಿಟೆಡ್
ಫುಡ್ & ಡ್ರಿಂಕ್ಸ್” ಪ್ಲಿಂಕಿಸಿತು ಮೊಬೈಲ್. ಸಂತುಷ್ಟನಾದ ಪ್ರತಿವಾದಿ ಈ ಕೆಳಕಂಡಂತೆ ನೋಟೀಸನ್ನು
ತಯಾರಿಸಿದ.
ಗೆ,
ದುಷ್ಟಬುದ್ಧಿ, ವಕೀಲರು
ಬಲಿಚಕ್ರವರ್ತಿ ನಗರ, ಪಾತಾಳ
ಮಾನ್ಯರೆ,
ನಿಮ್ಮ ನೋಟೀಸನ್ನು ಓದಿ ನನಗೆ ತಡೆಯಲಾರದ ನಗೆ ಬಂದು, ವಿಪುಲವಾಗಿ ನಕ್ಕ ಕಾರಣ
ಹೊಟ್ಟೆ ಹುಣ್ಣಾಗಿದೆ. ಏನು ಹೇಳಲಿ ಸ್ವಾಮಿ! ಕಾಲ, ದೇಶಗಳನ್ನು ಮೀರಿ ಬಂದ ನಿಮ್ಮ ನೋಟೀಸು ಅಸಿಮೋವನ
ಕಾಲ್ಪನಿಕ ಕಥೆಯಂತಿದೆ. ಇಗೋ ನಮ್ಮಿಂದ ನಿಮ್ಮ ವಿಚಿತ್ರ ಆರೋಪಗಳಿಗೆ ಪ್ರತ್ಯುತ್ತರ.
1. ದಾನವರು ಕುತಂತ್ರಿಗಳು. ಅವರುಗಳ ಗುರುಗಳಾದ ಶುಕ್ರಾಚಾರ್ಯರು ಹೊಟ್ಟೆಯಲ್ಲಿ
ಸೇರಿ ತಿಂದವರನ್ನೇ ಢಂ ಎನ್ನಿಸುತ್ತಿದ್ದ ವಾತಾಪಿ, ರಕ್ತ ಬಿದ್ದಲ್ಲೆಲ್ಲ ಹುಟ್ಟುತ್ತಿದ್ದ ರಕ್ತಬೀಜಾಸುರ,
ತಲೆ ಹೋದರೆ ಇನ್ನೊಂದು ತಲೆ ಹುಟ್ಟುತ್ತಿದ್ದ ರಾವಣ ಎಲ್ಲರನ್ನೂ ಹತ್ತಿರದಿಂದ ಕಂಡವರು. ಇಷ್ಟೆಲ್ಲ
ಕಂಡಿರುವ ಅವರು ಕಣ್ಣು ಹೋದ ಸಮಯದಲ್ಲಿ ಏನೂ ಕ್ರಮ ತೆಗೆದುಕೊಳ್ಳದಿದ್ದುದೇ ಆಶ್ಚರ್ಯಕರ. ಆಗಲೇ ನಮ್ಮ
ಕಕ್ಷಿದಾರನನ್ನು ಕಣ್ಣು ಸರಿಪಡಿಸಿಕೊಡು ಎಂದು ಕೇಳಿದ್ದಿದ್ದರೆ ‘go to lanka’ ಎಂದು ಆದೇಶಿಸುತ್ತಿದ್ದರು.
ದುಷ್ಟಬುದ್ಧಿಯವರೆ, ರಾವಣನ ಒಂದು ತಲೆ ಹೋಗಿ ಇನ್ನೊಂದು ತಲೆ ಬಂದಾಗ ಅದು ಕಣ್ಣಿನ ಸಮೇತವೇ ಬರುತ್ತಿತ್ತಲ್ಲವೆ!
ನಿಮ್ಮ ಕಕ್ಷಿಯ ಕಣ್ಣು ಹೋಗಿದ್ದು ತ್ರೇತಾಯುಗದಲ್ಲೇ. ಆ ಯುಗದಲ್ಲಿ ಬದಲಿ ತಲೆಗೇ ವ್ಯವಸ್ಥೆ ಇದ್ದಾಗ
ಬದಲಿ ಕಣ್ಣಿನ ವ್ಯವಸ್ಥೆ ಲಂಕೆಯಲ್ಲಿ ದೊರಕುತ್ತಿತ್ತೆಂದು ನಂಬಿದ್ದೇನೆ.
2. ನೀವು ನನ್ನ ಕಕ್ಷಿದಾರರಾದ ವಿಷ್ಣುವಿಗೆ ನಿಮ್ಮ ಕಕ್ಷಿದಾರನು ಹೂಜಿಯ ಮೂತಿಯಲ್ಲಿ
ಇದ್ದುದು ತಿಳಿದಿತ್ತೆಂದು ಆರೋಪಿಸಿದ್ದೀರಿ. ನನ್ನ ಕಕ್ಷಿದಾರರು ಇದನ್ನು ಅಲ್ಲಗಳೆದಿಲ್ಲ. ಆದರೆ ಆ
ಹೂಜಿಯು ಲೋಹದಿಂದ ಮಾಡಿದ್ದುದಾಗಿತ್ತೆಂದೂ, ಪಾರದರ್ಶಕವಲ್ಲದ ಆ ಹೂಜಿಯ ಯಾವ ಭಾಗದಲ್ಲಿ ನಿಮ್ಮ ಕಕ್ಷಿಯಾದ
ಶುಕ್ರಾಚಾರ್ಯರು ಅಡಗಿದ್ದರೆಂದು ತಿಳಿದಿರಲಿಲ್ಲವೆಂದೂ ನುಡಿದಿದ್ದಾರೆ.
3. ಹೂಜಿಯಲ್ಲಿ ಸೇರಿದ್ದು ಸರಿ. ಮೂತಿಯನ್ನು ಬ್ಲಾಕ್ ಮಾಡಿ ನೀರು ಹೊರಬರದಂತಾಗಿಸಿ
ದಾನ ನೀಡುವ ಪ್ರಕ್ರಿಯೆಯನ್ನು ಬಂದ್ ಮಾಡಲು ಯೋಚಿಸಿದ್ದೂ ನಿಮ್ಮ ಕಕ್ಷಿಯ ದೃಷ್ಟಿಕೋನದಿಂದ ನೋಡಿದಾಗ
ಸರಿಯಾದ ಕ್ರಮವೇ. ಆದರೆ ದಾನವರ ಗುರುವಾಗಿ devious nature ಡೆವಲಪ್ ಮಾಡಿಕೊಂಡಿಲ್ಲವಲ್ಲ ನಿಮ್ಮ
ಕಕ್ಷಿ! ಆರು ಅಡಿಗಳ ವ್ಯಕ್ತಿಯು ಮೂರು ಇಂಚಿನ ತೂತಿನಲ್ಲಿ ಸೇರುವಷ್ಟು ಚಿಕ್ಕದಾಗುವ ಬದಲು ಪಾತ್ರೆಯ
ಒಳ ಅಳತೆಯಷ್ಟೇ ಚಿಕ್ಕದಾಗಿದ್ದು, ತಮ್ಮ ಕಿರುಬೆರಳನ್ನೋ, ಹಸ್ತವನ್ನೋ ಹೂಜಿಯ ಮೂತಿಗೆ ತೂರಿಸಿ ಅಡ್ಡ
ಹಿಡಿಯಬಹುದಾಗಿತ್ತು. ಹೂಜಿಯ ಮೂತಿಯ ಒಳಭಾಗಕ್ಕೆ ಅವರ ಅಂಗಾಲನ್ನು ಇರಿಸಿಕೊಂಡಿದ್ದರಂತೂ ವಾಮನರು ಚುಚ್ಚಿದ
ಕಡ್ಡಿಯು ಪಾದಕ್ಕೆ ಕಚಗುಳಿ ಇಟ್ಟಂತಾಗಿ ಹಿಹ್ಹಿಹ್ಹಿ ಎಂದು ನಗುನಗುತ್ತಾ ಇರಬಹುದಾಗಿತ್ತು. ಬದಲಿಗೆ
ಕಡ್ಡಿ ಬರುವ ಜಾಗಕ್ಕೆ ಕಣ್ಣಿರಿಸಿ ಕುಳಿತರಲ್ಲಾ, ಇದು ದಡ್ಡತನದ ಪರಮಾವಧಿ ಅಲ್ಲದೆ ಮತ್ತೇನು?
4. ತಮ್ಮದೇ ದಡ್ಡತನದಿಂದ ಕಣ್ಣು ಕಳೆದುಕೊಂಡು ನನ್ನ ಕಕ್ಷಿದಾರರನ್ನು ಗುರಿಪಡಿಸಲು
ಯತ್ನಿಸುವುದು ಗುರುಸ್ಥಾನದವರಿಗೆ ತರವಲ್ಲ. ಅಲ್ಲದೆ ಅವರು ಇಂದಿನವರೆಗೆ ಕಾಯುವ ಅಗತ್ಯವೂ ಇರಲಿಲ್ಲ.
ತ್ರೇತದಲ್ಲಿ ಅವರಿಗೆ ಆಪ್ತಾಲ್ಮಾಲಜಿಸ್ಟನ ಅಡ್ರೆಸ್ ಸಿಕ್ಕಿರಲಿಲ್ಲ, ದ್ವಾಪರದಲ್ಲೂ ಸಿಗಲಿಲ್ಲವೆಂದುಕೊಂಡರೂ,
ಕಲಿಯುಗದ ಆದಿಯಲ್ಲೇ ಶಿವನ simultaneous double eye transplant ಮಾಡಿದ ಬೇಡರ ಕಣ್ಣಪ್ಪನ ಬಳಿ
ಸರ್ಜರಿ ಮಾಡಿಸಿಕೊಳ್ಳಬಹುದಾಗಿತ್ತು. ವಾಸ್ತವವಾಗಿ ಅಂದೇ ಪಕ್ಷಾಂತರ ಮಾಡಿ ‘ಗಣಪನಿಗೆ ತಲೆಯಿತ್ತ ದೇವನೆ,
ಎನಗೊಂದಕ್ಷಿಯ ನೀಡೆಯಾ...’ ಎಂದು ಮೊರೆಹೋಗಿದ್ದಿದ್ದರೆ ಶಿವನೇ ಎಂದೋ ಯಾವುದಾದರೂ ಕಣ್ಣನ್ನು ದಯಪಾಲಿಸಿರುತ್ತಿದ್ದ.
5. ನಿಮ್ಮ ಈ ನೋಟೀಸಿನ ಕಾರಣದಿಂದ ನನ್ನ ಕಕ್ಷಿದಾರರ ನೆಮ್ಮದಿಗೆ ಭಂಗ ಉಂಟಾಗಿದೆ.
ಸ್ಥಿತಿಕಾರ್ಯದಲ್ಲಿರುವವರ ಕೆಲಸಕ್ಕೆ ಅಡ್ಡಿಪಡಿಸುವಷ್ಟು ಆತಂಕ ಮೂಡಿಸಿದ ಕಾರಣ ನಿಮ್ಮ ಮೇಲೆ ನಾವೇ
ದಾವೆ ಹೂಡಲು ಕಾತುರರಾಗಿದ್ದೇವೆ. ಈ ನೋಟೀಸ್ ತಲುಪಿದ ಒಂದು ವಾರದಲ್ಲಿ ನಕ್ಕು ನಕ್ಕು ಹುಣ್ಣಾದ ನನ್ನ
ಹೊಟ್ಟೆಗೆ ಅಲ್ಸರ್ ನಿವಾರಕ ಕಷಾಯವನ್ನು ತಲುಪಿಸದಿದ್ದರೆ ನಿಮ್ಮ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುತ್ತೇವೆಂದು
ಈ ಮೂಲಕ ತಿಳಿಯಪಡಿಸುತ್ತಿದ್ದೇನೆ.
ಇಂದ,
ಕ್ಲಿಷ್ಟಬುದ್ಧಿ, ಕುಂಭೀಪಾಕ ಎಂಕ್ಲೇವ್
ವೈತರಣಿ ಲೇಔಟ್, ಯಮನಗರ, ನರಕ
“ಎನ್ನ ಇಪ್ಪಡಿ ಆಯಿಪೋಚಿ?” ಎಂದರು ದುಷ್ಟಬುದ್ಧಿ,
ಪಾತಾಳದಲ್ಲಿ.
“ಏಮ್ಚೇಸೇದಿ! ಪೋನಿ ವಿಡು” ಎಂದರು ಶುಕ್ರಾಚಾರ್ಯರು.
ನೋಟೀಸ್ ಹಂತದಲ್ಲೇ ಕೇಸ್ ಖತಂ ಆಯಿತು.
Comments
Post a Comment