ರಾಗ-ಲಯ ಸಂಗೀತ ಸಂಜೆ

ರಾಗಲಯ    ಸಂಗೀತ ಸಂಜೆ

ವರದಿ  - ಶ್ರೀ ಡಾ ಅನಂತ ರಾವ್ 



ರಾಗ-ಲಯ, ಸಿಡ್ನಿ ಆಶ್ರಯದಲ್ಲಿ ಆಗಸ್ಟ್ ೧೭ರಂದು ಶನಿವಾರ ಒಂದು ಸುಂದರವಾದ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. 

ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಬಂದಿದ್ದ ಸುಪ್ರಸಿದ್ಧ ವಿದ್ವಾನ್ ಡಿ ಬಾಲಕೃಷ್ಣ ಅವರ ವೀಣಾ ವಾದನ ಹಾಗೂ ಪ್ರತಿಭಾನ್ವಿತ ಸ್ಥಳೀಯ ಕಲಾವಿದೆ ಶ್ರೀಮತಿ ಅಪರ್ಣ  ನಾಗಶಯನ ಅವರ  ಹಿಂದೂಸ್ಥಾನಿ ಗಾಯನ ಎರಡೂ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ರಾಗ ಲಯ ಸಿಡ್ನಿ ಬಗ್ಗೆ ಎರಡು ಮಾತು. ಕನ್ನಡದ ಬಗ್ಗೆ ಕರ್ನಾಟಕದ ಸಂಸ್ಕೃತಿಯನ್ನು ಆಸ್ಟ್ರೇಲಿಯಾದಲ್ಲಿ ಉಳಿಸಿ ಬೆಳೆಸುವ ಕಾಳಜಿ ಇರುವ ಕೆಲವು ಆಸಕ್ತರನ್ನು ಒಂದುಗೂಡಿಸಿರುವ ಸಂಘ. ಕಾರಣಾಂತರಗಳಿಂದ ಭಾರತದಿಂದ ಸಂಗೀತ ಕಲಾವಿದರನ್ನು ಕರೆಸುವವರಿದ್ದರೂ ಕರ್ನಾಟಕದ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ, ಉಭಯ ಸಂಗೀತ ಪರಂಪರೆಗಳು ಕರ್ನಾಟಕದಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದೆ. ಆಸ್ಟ್ರೇಲಿಯಾದಲ್ಲಿರುವ ವೈಶಿಷ್ಟ್ಯ ಮತ್ತು ಕಲ್ಲಾತ್ಮಕತೆಗಳನ್ನು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗ ಸಂಗೀತಾಭಿಮಾನಿಗಳಿಗೆ  ಮತ್ತು ಆಸಕ್ತಿಯಿರುವ ಕನ್ನಡೇತರ ರಸಿಕರಿಗೆ ಸಾಧ್ಯವಾದಷ್ಟು ಕೇಳುವ ಅವಕಾಶ ಕಲ್ಪಿಸಿವುದೇ ರಾಗ ಲಯ ಸಿಡ್ನಿಯ ಧ್ಯೇಯ ಮತ್ತು ಉದ್ದೇಶ.

ಆಡಿನ ಮೊದಲ ತೊಂಭತ್ತು ನಿಮಿಷಗಳ ಕಚೇರಿ ವಿದ್ವಾನ ಶ್ರೀ ಬಾಲಕೃಷ್ಣ ಅವರ ವೀಣಾ ವಾದನ. ಅವರು ಸುಪ್ರಸಿದ್ಧ ವೈಣಿಕ ದಿ |ವೀಣೆ ದೊರೈಸ್ವಾಮಿ ಅಯ್ಯಂಗಾರ್ ಅವರ ಪುತ್ರ. ತಂದೆಯವರೇ ವೀಣಾವಾದನಕ್ಕೆ ಗುರುಗಳೂ ಸಹ. ಅವರ ನುಡಿಸಾಣಿಕೆ ಹೆಸರುವಾಸಿಯಾದ  ಮೈಸೂರು ಶೈಲಿಯ ಸುಂದರ ಪ್ರದರ್ಶನ.  ಆಡಂಬರವಿಲ್ಲದ ಖಚಿತ ಮೀಟುವಿಕೆಯಿಂದ ಮಾಧುರ್ಯ ಬಿಡದ  ವೀಣೆಯ ತುಂಬುನಾದ ಕೇಳುಗರಲ್ಲಿ ಒಂದು ಬಗೆಯ  ಹಿತವಾದ ಪರಿಣಾಮ ಉಂಟುಮಾಡಿತು. ಸೌರಾಷ್ಟ್ರ ರಾಗದ ಶ್ರೀಗಣಪತಿನಿ ಎಂಬ ತ್ಯಾಗರಾಜರ ಕೃತಿಯಿಂದ ಮೊದಲಾಗಿ ಪಂತುವರಾಳಿ, ಆನಂದ ಭೈರವಿ, ಶಂಕರಾಭರಣ ರಾಗಗಳು   ವೀಣೆಯಿಂದ ಹೊರಹೊಮ್ಮಿ ಕಲಾವಿದರ ಮನೋಧರ್ಮ ಮತ್ತು ಅವರ ಪರಂಪರೆಯ  ವೈಶಿಷ್ಟ್ಯವನ್ನು ಯಶಸ್ವಿಯಾಗಿ ನಿರೂಪಿಸಿತು. ಕಚೇರಿಯಲ್ಲಿ ವೈಣಿಕ ಶಿಖಾಮಣಿ ವೀಣೆ  ಶೇಷಣ್ಣನವರ ಸುಪ್ರಸಿದ್ಧ ಜಂಜೂಟಿ ರಾಗದ ತಿಲ್ಲಾನದೊಂದಿಗೆ ಮುಕ್ತಾಯವಾಯಿತು. ಈಗಾಗಲೇ ಸಿಡ್ನಿಯ ರಸಿಕರಿಗೆ ಚಿರಪರಿಚಿತರಾದ ಸ್ಥಳೀಯ ಯುವ ಮೃದಂಗ ಕಲಾವಿದ ವಿದ್ವಾನ್ ಸುಮುಖ ಜಗದೀಶ್ ಸಮರ್ಥವಾಗಿ ಸಹಕಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಎರಡನೆಯ ಭಾಗದ ಕಚೇರಿಯಲ್ಲಿ ಶ್ರೀಮತಿ ಅಪರ್ಣಾ ನಾಗಶಯನ ಅವರ ಹಿಂದೂಸ್ಥಾನಿ ಗಾಯನ ನಡೆಯಿತು. ಅಪರ್ಣರವರು ಕಳೆದೆರೆಡು ದಶಕಗಳಿಂದ ನಾಟಕ, ಸಂಗೀತಕ್ಕೆ ಹೆಸರಾಗಿರುವ ಗರುಡ್ ಅವರ ಮನೆತನಕ್ಕೆ ಸೇರಿದವರು. ಅವರ ಕಚೇರಿ ಬೇಹಾಗ್ ರಾಗದಿಂದ ಆರಂಭವಾಗಿ ಘೋರಕ್ ಕಲ್ಯಾಣ್, ಗಾವತಿ   ಮುಂತಾದ ರಾಗಗಳಿಂದೊಡಗೂಡಿ ಅಕ್ಕನವರ ವಚನಗಳು, ಭಾವಗೀತೆಗಳಂಥ ಕನ್ನಡದ ಕೃತಿಗಳಿಂದ ಕೂಡಿದ್ದು ಕೇಳುಗರಿಗೆ ಆನಂದ ಕೊಟ್ಟಿತು. ಅವರ ಗಾಯನ ಶೈಲಿ ಬಿಚ್ಚುಕಂಠದ ಪ್ರಾಮಾಣಿಕ ನಾದದಿಂದ ಶಕ್ತಿಯುತವಾಗಿದ್ದರೂ  ಹಿತವಾಗಿಯೂ ಮಧುರವಾಗಿಯೂ ಇತ್ತು. ಪಕ್ಕವಾದ್ಯದಲ್ಲಿ ಸಿಡ್ನಿಯವರೇ ಆದ ಶ್ರೀ ಅಮನ್ ಪಾಲ್ ತಬಲಾ ವಾದನದಲ್ಲಿ ಹಾಗೂ ಹಾರ್ಮೋನಿಯಂ ವಾದನದಲ್ಲಿ ಶ್ರೀ ತೇಜಸ್ ಜಗತಾಪ್ ಇಬ್ಬರೂ ಹುರುಪಿನಿಂದ ಸಾಥ್ ನೀಡಿ ಗಾಯನಕ್ಕೆ ಮತ್ತಷ್ಟು ಮೆರಗು ತಂದರು.

ಶ್ರೀಮತಿ ಪಲ್ಲವಿ ಪ್ರಮೋದ ಅಚ್ಚುಕಟ್ಟಾದ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ರುಚಿಕರ ಊಟದ ವ್ಯವಸ್ಥೆ ಆಗಿತ್ತು. ಒಟ್ಟಾರೆ ಎರಡೂ ಕಾರ್ಯಕ್ರಮಗಳು ಆಗಸ್ಟ್ ೧೭ ರಂದು ಸಂಜೆ ಉತ್ತಮ ಸಂಖ್ಯೆಯಲ್ಲಿ ನೆರೆದಿದ್ದ ರಸಿಕರಿಗೆ ಆಪ್ಯಾಯಮಾನವಾದ ಸಂಗೀತವನ್ನು ರಾಗ - ಲಯ ಸಿಡ್ನಿ ಸಮಿತಿಯ ಶ್ರಮದ ಫಲವಾಗಿ ದೊರೆತದ್ದು ಸಂತೋಷ ಸಮಾಧಾನಕರವಾದ ವಿಷಯ ಅನಿಸಿತು.




Comments

  1. ಡಾ॥ ಅನಂತರಾವ್ ಅವರ ಸಮಗ್ರ ವರದಿಯನ್ನು ಓದಿದ ನಂತರ ಒಳ್ಳೆಯ ಸಂಗೀತ ಕಾರ್ಯಕ್ರಮಕ್ಕೆ ಬರಲಾಗಲಿಲ್ಲವಲ್ಲ ಎಂದು ತುಸು ವ್ಯಸನವಾಯಿತು. ಸಂಗೀತ ಸಂಜೆ ಯಶಸ್ವಿಯಾಗಿ ನಡೆದದ್ದು ಸಂತೋಷ, ಪ್ರಾಯೋಜಕರಿಗೆ ಅಭಿನಂದನೆಗಳು.

    ReplyDelete

Post a Comment