ಇನ್ಯಾವ ಧ್ವನಿ ಕೇಳದಲ್ಲ...
ಲೇಖನ - ಶ್ರೀಮತಿ ಮಂಜುಳಾ ಡಿ
ಉಪವಾಸ-ಪೂಜೆ ಇವೇ ತಪದ ಮಾರ್ಗಗಳೆ?
ಉಪವಾಸ! ಚೇತನವೊಂದು ಉಪವಾಸ ತಡೆಯಬಹುದು ಎಷ್ಟು ಕಾಲ? ದೇಹದ ಶಕ್ತಿಗೆ ಆಧಾರವಾದ ಚೈತನ್ಯ ನೀಡುವ ಆಹಾರವನ್ನು ತ್ಯಜಿಸುವುದು ಉಪವಾಸವಾ? ಹಾಗಾದರೆ ಮನೆ-ಊರು-ತನ್ನವರನ್ನು ತೊರೆದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚೇತನಗಳು ಮಾಡಿದ್ದು ಉಪವಾಸವಲ್ಲವೇ? ದೇಶವನ್ನು ಕಾಯುವ ಸೈನಿಕರದು ಹಾಗೆ ನೋಡಿದರೆ ಶ್ರೇಷ್ಠ ವ್ರತಾಚರಣೆಯೇ. ಹದಿನಾಲ್ಕು ವರ್ಷ ಲಕ್ಷ್ಮಣನಿಗಾಗಿ ಉಸಿರು ಹಿಡಿದು ಕಾಯ್ದ ಊರ್ಮಿಳೆಯದು ಉವಾಸವಲ್ಲವೇ? ಶರಶಯ್ಯೆಯಲ್ಲಿ ಖುದ್ದಾಗಿ ಮಲಗಿದ ಅಗಾಧ ವ್ಯಕ್ತಿತ್ವದ ಭೀಷ್ಮನದ್ದು ವ್ರತವಲ್ಲವೇ?
ಇಂತಹ ತಪ-ಉಪವಾಸಗಳು ಪುರಾಣ-ಗಾಂಧಿ ಕಾಲಕ್ಕೆ ಮುಗಿದವು ಎನಿಸುವುದು ಈ ಕಾಲಕ್ಕೆ ಸಹಜವೇ. ಏಕೆಂದರೆ ಭಾರತವೇ ಏಕೆ, ಜಗತ್ತೇ ಗಾಂಧೀಜಿಯವರ 21 ದಿನದ ಉಪವಾಸವೇ ಅತ್ಯಂತ ಸುಧೀರ್ಘವಾದದ್ದು ಎಂದು ಉಲ್ಲೇಖಿಸುತ್ತದೆ. ವಾಸ್ತವವಾಗಿ 1965 ಜೂನ್ 14 ರಂದು ಆರಂಭಿಸಿ 1966 ಜೂನ್ 30 ರಂದು ಉಪವಾಸ ಅಂತ್ಯಗೊಳಸಿದ ಸ್ಕಾಟ್ಲ್ಯಾಂಡ್ ನ ಆಂಗಸ್ ಬಾರ್ಬೆರಿಯ ಉಪವಾಸ ಅತ್ಯಂತ ಸುಧೀರ್ಘವಾದದ್ದು ಎಂಬ ದಾಖಲೆಯಿರುವುದು ನಿಜವಾದರೂ ಇದು ವೈದ್ಯರ ಸಹಯೋಗದಲ್ಲಿ ತೂಕ ಇಳಿಸಿಕೊಳ್ಳಲು ಜರುಗಿದ ಉಪವಾಸವಾಗಿತ್ತು.
ಹೀಗೆ ಕೆಲವು ದಿನ-ವಾರ-ತಿಂಗಳು-ವರ್ಷಗಳ ಉಪವಾಸಗಳನ್ನು ಜೀರ್ಣಸಿಕೊಳ್ಳಲು ಮೆದಳು ಸಾಹಸ ಪಡುವಂತಾಗುತ್ತದೆ. ಇನ್ನು ಹದಿನಾರು ವರ್ಷದ ಉಪವಾಸ ಸತ್ಯಾಗ್ರಹ ಎಂದರೆ!!?
ಛೇ! ಹೇಗೆ ಸಾಧ್ಯ! ವಾಸ್ತವವಾಗಿರಲಾರದು. ಹೆಣೆದ ಕಥೆಯಾಗಿರಲು ಸಾಧ್ಯ ಎಂಬ ಉದ್ಗಾರವು ಅಯಾಚಿತವಾಗಿ ಹೊಮ್ಮುತ್ತದೆ. ಹದಿನಾರು ವರ್ಷದ ಉಪವಾಸ ಸತ್ಯಾಗ್ರಹ; ಅದರಲ್ಲೂ ಮಹಿಳೆ; ಅದರಲ್ಲೂ ಬದುಕು ಹೊಸೆಯಬೇಕಾದ 28ರ ಯೌವನದಲ್ಲಿ! ತನ್ನ ನೆಲದ ಜನರಿಗಾಗಿ ಶಾಂತವಾಗಿ ಹೋರಾಟ ಆರಂಭಿಸಿದ ಆಕೆಯ ಬದುಕು ಪ್ರವಹಿಸಿದ ರೀತಿ, ಕೆಲವು ದಿನಗಳ ಕಾಲ ಆಕೆಯ ಬದುಕಿನ ಬಗ್ಗೆ ಅರಿಯುವುದೇ ಧಾವಂತವಾಯಿತು.
ಆಕೆಯೇ ಮಣಿಪುರದ ಉಕ್ಕಿನ ಮಹಿಳೆ-ಇರೋಮ್ ಚಾನು ಶರ್ಮಿಳಾ!
ಮನೆ-ಮಕ್ಕಳು-ಗಂಡ-ಸಂಸಾರ ಎಂದು ಕನಸುವ 28ರ ವಯಸ್ಸಿನಲ್ಲಿ ಹೆಣ್ಣೊಬ್ಬಳು ಎಲ್ಲವನ್ನು ತೊರೆದು ಉಪವಾಸದ ಹೋರಾಟಕ್ಕೆ ಕೂರುವಂತೆ ಅಂತರಾಳವನ್ನು ಕದಡಿ ಜರ್ಜರಗೊಳಿಸಿದ ಮಣಿಪುರದ ಆಗಿನ ಪರಿಸ್ಥಿತಿ ಹಾಗಿತ್ತು. ಹಾದಿಯಲ್ಲಿ ನಡೆದು ಹೋಗುವ ಜನಸಾಮಾನ್ಯರನ್ನು ಕೇವಲ ಅನುಮಾನದ ಆಧಾರದ ಮೇಲೇ ನಿಂತಲ್ಲೇ ಜೀವ ತೆಗೆಯುವ ಅಧಿಕಾರವನ್ನು ವಿಶೇಷ ಶಸ್ತ್ರಪಡೆಗಳಿಗೆ ನೀಡಲಾಗಿತ್ತು. ಅರೇ! ನಮ್ಮ ಭಾರತ, ಸ್ವತಂತ್ರ ಭಾರತವಲ್ಲವೇ? ಅಚ್ಚರಿಯಿಂದ ಉದ್ಗರಿಸಿದರೆ, ಭಾರತದಲ್ಲೇ ಜಾರಿಯಲ್ಲಿರುವ ಸಂಸತ್ತಿನ ವಿಶೇಷ ಕಾಯಿದೆ ಇದು!
ಸತತ 16 ವರ್ಷಗಳ ಕಾಲ ಮೂಗಿನಿಂದ ಇಳಿಬಿಟ್ಟ ನಳಿಕೆಯೊಂದೇ ದೇಹವನ್ನು ಜೀವಂತವಾಗಿಟ್ಟಂತಹ ಈಕೆಯ ಈ ಶಾಂತಯುತವಾದ ಉಗ್ರ ಸ್ವರೂಪದ ಹೋರಾಟದ ಗಹನತೆಯನ್ನು ಅರಿಯಬೇಕಾದರೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ-AFSPAಯ ಬಗ್ಗೆ ಅರಿಯಲೇಬೇಕಾಗುತ್ತದೆ.
ಆಂತರಿಕ ಗಲಭೆಗಳು, ಅಡ್ಡಿಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ತೊಂದರೆಗೊಳಗಾದ ಪ್ರದೇಶಗಳ(ವಿಶೇಷ ನ್ಯಾಯಾಲಯಗಳು) ಕಾಯ್ದೆ 1976ರ ಅಡಿಯಲ್ಲಿ, ಸಮಸ್ಯೆಗೆ ಒಳಗಾಗಿವೆ ಎಂದು ಭಾರತ ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ, ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರ ನೀಡುವ ಸಂಸತ್ತಿನ ಕಾಯ್ದೆ ಇದು.
ಯಾವುದೇ ವ್ಯಕ್ತಿ ಏನೇ ಕೃತ್ಯ ಮಾಡಿದ್ದರೂ ಅವರ ವಿರುದ್ದ ವಿಚಾರಣೆ ಇಲ್ಲದೆ ಮೊಕದ್ದಮೆ ಅಥವಾ ಕಾನೂನು ಪ್ರಕ್ರಿಯೆಯನ್ನು ನಡೆಸದೆ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವನೆಂದು/ಳೆಂದು ಯಾರ ಮೇಲೆಯಾದರೂ ಗುಂಡು ಹಾರಿಸಬಹುದಾದ ಅನುಮತಿಯನ್ನು ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ವಾರಂಟ್ ಇಲ್ಲದೇ ಬಂಧಿಸಲು, ಯಾವುದೇ ವಾಹನ ಅಥವಾ ಹಡಗನ್ನು ತಡೆಯಲು ಮತ್ತು ಪರಿಶೀಲಿಸಲು ಹಾಗೂ ಐದು ಅಥವಾ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವದಕ್ಕೆ ಈ ಕಾಯ್ದೆಯು ಅಧಿಕಾರ ನೀಡುತ್ತದೆ. ಒಮ್ಮೆ ಒಂದು ಪ್ರದೇಶದ ಮೇಲೆ AFSPA ಜಾರಿಯಾದರೆ ಈ ಕಾಯ್ದೆಯ ಅಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.
1942 ರಲ್ಲಿ ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ಹಿನ್ನೆಲೆಯಲ್ಲಿ ಬ್ರಿಟೀಷರು ತಮ್ಮ ವಿರುದ್ಧ ಸಿಡಿದೇಳುವ ಭಾರತೀಯರನ್ನು ಹತ್ತಿಕ್ಕಲು ಬಳಸಿದ ಅಸ್ತ್ರವಿದು. ಸ್ವಾತಂತ್ರ್ಯಾನಂತರ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಅಸ್ಸಾಂ ಮತ್ತು ಮಣಿಪುರಗಳಲ್ಲಿನ ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರ ಸುಗ್ರೀವಾಜ್ಞೆಗೆ 1958ಕ್ಕೆ ಆಗಿನ ರಾಷ್ಟ್ರಪತಿ ಡಾ.ರಾಜೇಂದ್ರಪ್ರಸಾದ್ ಅನುಮೋದನೆ ನೀಡಿದ್ದರು. ತದನಂತರ ಸೆಪ್ಟಂಬರ್ 11 1958 ರಂದು ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರ ಕಾಯ್ದೆ, 1958 ಎಂದು ಬದಲಾಯಿತು. ಮೊದಲು ಅಸ್ಸಾಂ ಮತ್ತು ಮಣಿಪುರದ ದೃಷ್ಟಿಯಿಂದ ಜಾರಿಯಾದ ಕಾಯ್ದೆ ನಂತರ 1972 ರ ತಿದ್ದುಪಡಿಯಲ್ಲಿ, ಈ ಪ್ರದೇಶದಲ್ಲಿ ರಚಿಸಲಾದ ಏಳು ಹೊಸ ರಾಜ್ಯಗಳಲ್ಲಿ ಪ್ರತಿಯೊಂದಕ್ಕೂ AFSPA ಅನ್ನು ವಿಸ್ತರಿಸಲಾಯಿತು:ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಕ್ಕೂ ಅನ್ವಯವಾಯಿತು.
ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಪ್ರಕಾರ, ಮಣಿಪುರ ಒಂದರಲ್ಲೇ 2000 - 2012ರ ನಡುವೆ ನ್ಯಾಯಾಂಗದ ವ್ಯಾಪ್ತಿಗೆ ಸೇರದ ಕನಿಷ್ಠ 1528 ಹತ್ಯೆಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನ ಸಾವುಗಳಲ್ಲಿ ಸಂತ್ರಸ್ತರು ಭದ್ರತಾ ಪಡೆಗಳ ವಶದಲ್ಲಿ ಇರುವಾಗ ವಿಪರೀತ ಚಿತ್ರಹಿಂಸೆ ನೀಡಿದ ಕ್ರೂರ ಕೊಲೆಗಳಾಗಿವೆ ಎಂದು ಆರೋಪಿಸಲಾಗಿದೆ. 2000 ನವೆಂಬರ್ 2 ರಂದು ಇಂಫಾಲ್ ಹತ್ತಿರದ ಮಾಲೊಮ್ ನ ಬಸ್ ಸ್ಟಾಪ್ ಬಳಿ ಕಾಯುತ್ತಿದ್ದ 10 ಜನ ಸಾರ್ವಜನಿಕರನ್ನು 8ನೇ ಅಸ್ಸಾಂ ರೈಫಲ್ಸ್ ಪಡೆ ಹೊಡೆದುಹಾಕಿತ್ತು. ಇದಕ್ಕೆ ಮೊದಲು ಇಂತಹ ಘಟನೆಗಳಾಗಿರಲಿಲ್ಲ ಎಂದಲ್ಲ. ಆದರೆ ಮಾಲೊಮ್ ಹತ್ಯಾಕಾಂಡ ಜರುಗಿದ ದಿನ ಶರ್ಮಿಳಾ ಉಪವಾವಿದ್ದಳು. ಜನಸಮಾನ್ಯರ ಹತ್ಯೆ-ದೌರ್ಜನ್ಯದ ಘಟನೆಗಳನ್ನು ನೋಡಿ ಅವಳಲ್ಲಿ ಅದ್ಯಾವ ಎಳೆ ಜಾಗೃತವಾಗಿತ್ತೋ ಅಂದು ಆಕೆ ಉಪವಾಸ ಮುರಿಯಲಿಲ್ಲ. ಬಹುಶಃ ಅಲ್ಲಿಂದ ಆಕೆಗೆ ಇಂತಹ ಆಕ್ರಂದನಗಳನ್ನು ಹೊರತುಪಡಿಸಿ ಇನ್ಯಾವುದೇ ಧ್ವನಿ ಕೇಳಲಿಲ್ಲ ಇರಬಹುದೇನೋ...!
ಮಣಿಪಾಲದಿಂದ AFSPA ಭದ್ರತಾ ಪಡೆಗಳನ್ನು ಹಿಂಪಡೆಯುವವರೆಗೂ ನೀರು-ಆಹಾರ ಸೇವಿಸುವುದಿಲ್ಲ, ತಲೆ ಬಾಚುವುದಿಲ್ಲ, ಕನ್ನಡಿ ನೋಡುವುದಿಲ್ಲ ಎಂದು ಮಾಲೊಮ್ ಹತ್ಯಾಕಾಂಡ ಜರುಗಿದ ಸ್ಥಳದಲ್ಲಿ ಉಪವಾಸ ಕುಳಿತಳು. 2000 ನವೆಂಬರ್ 5ರಂದು ಹೀಗೆ ಕುಳಿತವಳ ಸುತ್ತಲೂ ಒಂದಷ್ಟು ಜನ ತಾವು ಹೋರಾಡುವುದಾಗಿ ನಿಂತರು. ಹೀಗೆ ಅವಳೊಂದಿಗೆ ಹೊರಾಟಕ್ಕೆ ನಿಂತವರು ಸಂಜೆಯ ಹೊತ್ತಿಗೆ ತಮ್ಮದೇ ಕಾರಣಗಳನ್ನು ಹೆಣೆದುಕೊಂಡು ಹೊರಟರು. ಉಳಿದದ್ದು ಈಕೆ ಮಾತ್ರ.
ಹೀಗೆ ಉಪವಾಸ ಕೂತವಳಿಗೆ ಎಲ್ಲಾ ದಿಕ್ಕುಗಳಿಂದ ರಾಚಿದ ಶಬ್ದಗಳು “ನಿನಗ್ಯಾಕೆ ಈ ಗೋಜಲು…” ಇದು ಚಿಕ್ಕ ಹೊರಟವಲ್ಲ, ರಾಷ್ಟ್ರಮಟ್ಟದ್ದು ಬಿಟ್ಟು ಎದ್ದೇಳು! ಈಶಾನ್ಯ ರಾಜ್ಯಗಳ AFSPA ಭದ್ರತಾ ಪಡೆಗಳ ಮತ್ತು ಆಂತರಿಕ ದಂಗೆಗಳ ಮಧ್ಯೆ ನಲುಗಿಹೋದ ಜನಸಾಮಾನ್ಯರ ಆಕ್ರಂದನವು ದೈವವನ್ನು ತಲುಪಿತ್ತೇನೋ. ಆಕೆ ಕೂತ ಜಾಗ ಬಿಟ್ಟು ಕದಲಲಿಲ್ಲ! 2000 ನವೆಂಬರ್ 8 ರಂದು ಇಂಡಿಯನ್ ಪೀನಲ್ ಕೋಡ್ 308 ರಡಿಯಲ್ಲಿ ಆತ್ಮಹತ್ಯೆ ಪ್ರಕರಣವನ್ನು ಹೊರಿಸಿ ಆಕೆಯನ್ನು ಬಂಧಿಸಲಾಯಿತು!!!
ಮುಂದುವರೆಯುವುದು…
Comments
Post a Comment