ಪ್ರೊಫೈಲ್ ಚಿತ್ರ
ಲೇಖನ - ಅನು ಶಿವರಾಂ, ಸಿಡ್ನಿ
ಸೋಮವಾರ ಬೆಳಗ್ಗೆ ಆಫೀಸಿಗೆ ಹೋಗಿ ಕಂಪ್ಯೂಟರ್ ಸ್ವಿಚ್ ಆನ್ ಮಾಡಿದೆ. ಹೆಚ್ಚು ಕಡಿಮೆ ಎಲ್ಲ ಸಹೋದ್ಯೋಗಿಗಳೂ ಬಂದು ಕೆಲಸ ಶುರು ಮಾಡಿದ್ದರು, ಒಂದಿಬ್ಬರು ಬೆಳಗಿನ ಕಾಫಿಗೆಂದು ಕೆಫೆಟೇರಿಯಾಗೆ ಹೋಗಿದ್ದರು. ಆಫೀಸ್ ಎಂದಿನಂತೆಯೇ ಇತ್ತು; ಆದರೂ ಯಾಕೋ ನನ್ನ ಮನಸ್ಸಿಗೆ ಏನೋ ವ್ಯತಾಸ, ಏನೋ ಖಾಲಿ ಇದ್ದಂತೆ ಅನ್ನಿಸಿತ್ತು. ಹೌದು, ರೀಟಾಳ ಉತ್ಸಾಹದ 'ಗುಡ್ ಮಾರ್ನಿಂಗ್ ಡಾರ್ಲಿಂಗ್' ಎಂದಿನಂತೆ ತೇಲಿ ಬಂದಿರಲಿಲ್ಲ. ಆಫೀಸಿಗೆ ಬರುವ ಪ್ರತಿಯೊಬ್ಬರನ್ನೂ ನಗುಮೊಗದಿಂದ ಸ್ವಾಗತಿಸುತಿದ್ದಳು ರೀಟಾ, 'ಡಾರ್ಲಿಂಗ್, ಹನಿ, ಡಿಯರ್' ಇಲ್ಲದೆ ಯಾರನ್ನೂ ಮಾತೇ ಆಡಿಸುತ್ತಿರಲಿಲ್ಲ ಅವಳು. ರೀಟಾ ನಮ್ಮ ಆಫೀಸಿನ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಕೆಲಸ ಮಾಡುವ ರಂಗು ರಂಗಾದ ಹೆಣ್ಣು; ದಿನಾ ಎದ್ದು ಕಾಣುವ ವಿನ್ಯಾಸದ ಒಡವೆ,ಬಣ್ಣ ಬಣ್ಣದ ಬಟ್ಟೆ, ಸದಾ ಹೊಸ ಬ್ಯಾಗ್, ಹೊಸ ಹೊಸ ಮಾದರಿಯ ಶೂ ತೊಟ್ಟು ಬರುವ ಅವಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ.ಹಾಗೆಂದು ರೀಟಾ ಸುರ ಸುಂದರಿಯೇನೂ ಅಲ್ಲ., ಅವಳ ಸೌಂದರ್ಯವೆಲ್ಲ ಅವಳ, ಮಾತು, ಅವಳ ನಗು, ಅವಳ ಬೆಡಗು,ಬಿನ್ನಾಣಗಳಲ್ಲಿ ಇತ್ತು. ಒಟ್ಟಿನಲ್ಲಿ ತುಂಬ ಆಕರ್ಷಕ ವ್ಯಕ್ತಿತ್ವ ಅವಳದು.
ರೀಟಾಳ ದನಿ ಕೇಳದೆ ಸಪ್ಪೆಯೆನ್ನಿಸಿತು. ಅವಳನ್ನು ಹುಡುಕ್ಕುತ್ತಾ ಅವಳ ಮೇಜಿನ ಬಳಿ ಹೋದೆ. ಮೇಜಿನ ಮೇಲೆ ತಲೆಯಿಟ್ಟು ನರಳುತ್ತಾ ಕುಳಿತ್ತಿದ್ದಳು ರೀಟಾ. ಮೆಲ್ಲನೆ ಅವಳ ಬೆನ್ನ ಮೇಲೆ ಕೈಇಟ್ಟು ಏನಾಯ್ತೆಂದು ಕೇಳಿದೆ. ನರಳುತಲೇ ತುಂಬಾ ಹೊಟ್ಟೆ ನೋವೆಂದು ಹೇಳಿದಳು. ಡಾಕ್ಟರ್ ಬಳಿ ಹೋಗುವಂತೆ ಹೇಳ ಹೊರಟವಳು, ಅವಳ ಸ್ಥಿತಿ ನೋಡಿ ನಾನೇ ಡಾಕ್ಟರ್ ಬಳಿ ಕರೆದುಕೊಂಡು ಹೋಗಲು ಅವಳ ಕೈ ಹಿಡಿದು ಎಬ್ಬಿಸಿದೆ. ಅದೃಷ್ಟದಿಂದ ಆಫೀಸ್ ಬಳಿ ಇದ್ದ ಮೆಡಿಕಲ್ ಸೆಂಟರಿನಲ್ಲಿ ಹೆಚ್ಚು ಜನರಿರಲಿಲ್ಲ, ಬೇಗನೇ ಡಾಕ್ಟರ್ ಭೇಟಿಯಾಯ್ತು. ‘ಫುಡ್ ಪೊಯ್ಸನಿಂಗ್’ ಎಂದು ಹೇಳಿ ಔಷಧಿ ಕೊಟ್ಟು, ವಿಶ್ರಾಂತಿ ಪಡೆಯುವಂತೆ ಹೇಳಿದರು. ಆಚೆ ಬರುತ್ತಿದಂತೆ,ನೋವಿನಿಂದ ಮುಖ ಹಿಂಡುತ್ತಾ ಅಲ್ಲೇ ಇದ್ದ ಒಂದು ಕುರ್ಚಿಯಲ್ಲಿ ಕುಸಿದು ಕುಳಿತಳು ರೀಟಾ.
ಅವಳನ್ನು ಅಲ್ಲಿಯೇ ಕೂರಿಸಿ, ಬಳಿಯಲ್ಲಿ ಇದ್ದ ಔಷಧಿ ಅಂಗಡಿಗೆ ಓಡಿ ಔಷಧಿಯನ್ನು ತಂದೆ. ಅವಳ ಬಾಯ್ ಫ್ರೆಂಡ್ ಸೈಮನ್ಗೆ ಫೋನ್ ಮಾಡಿದರೆ ಅವನು ಬಂದು ಮನೆಗೆ ಕರೆದುಕೊಂಡು ಹೋಗಬಹುದೆಂದು ಯೋಚಿಸುತ್ತಾ ರೀಟಾಳನ್ನು ಸೈಮನ್ ನಂಬರ್ ಕೊಡುವಂತೆ ಕೇಳಿದೆ. ತಾನು ಅವನನ್ನು ನೋಡಿ ಮೂರು ತಿಂಗಳ ಮೇಲೆ ಆಯ್ತೆಂದು ಹೇಳಿದಳು ರೀಟಾ, ನನ್ನ ನೋಟ ತಪ್ಪಿಸುತ್ತಾ.
ಅವಳ ಮಾತು ಕೇಳಿ ನನಗೆ ದಿಗ್ಬ್ರಮೆ ಆಯಿತು! ಹೋದ ವಾರ ತಾನೇ ಸೈಮನ್ ಅವಳಿಗೆ ವ್ಯಾಲೆಂಟೈನ್ಸ್ ಡೇ ಎಂದು ಅತ್ಯಂತ ಸುಂದರ ಹೂ ಗುಚ್ಛ ಆಫೀಸಿಗೇ ಕಳಿಸಿರಲಿಲ್ಲವೇ? ಸ್ಪುರದ್ರೂಪಿ ,ಶ್ರೀಮಂತ ಸೈಮನ್ ಅವಳನ್ನು ರಜೆಗೆಂದು ಎಂತಹ ಸುಂದರ ತಾಣಗಳಿಗೆ ಕರೆದುಕೊಂಡು ಹೋಗುತ್ತಿದ್ದ! ಆ ಫೇಸ್ಬುಕ್ ಚಿತ್ರಗಳನ್ನು ನೋಡಿ ಆಫೀಸ್ನಲ್ಲಿ ನನ್ನಂತೆಯೇ ಎಷ್ಟೋ ಜನ ನಿಟ್ಟುಸಿರು ಬಿಟ್ಟಿರಲಿಲ್ಲವೇ? ಮೊನ್ನೆ ತಾನೇ ಸಮುದ್ರದ ತಡಿಯಲ್ಲಿ, ರೀಟಾಳ ಕಿವಿಯಲ್ಲಿ ಪಿಸುಗುಟ್ಟುತಿರುವ ಸೈಮನ್ ಚಿತ್ರ ನೋಡಿ, ಶನಿವಾರದ ಮನೆ ಕೆಲಸ,ಗಂಡ ಮಕ್ಕಳ ಆರೈಕೆಯಲ್ಲಿ ಕಳೆದ ನನ್ನ ದಿನ ಎಷ್ಟು ನೀರಸ ಎನ್ನಿಸಿರಲಿಲ್ಲವೇ?
ರೀಟಾಳ ಸಪ್ಪೆ ಮುಖವನ್ನು ನೋಡಿ ಬೇರೇನೂ ಪ್ರಶ್ನೆ ಕೇಳುವ ಮನಸ್ಸಾಗದೆ, ನನ್ನ ಯೋಚನೆಗಳನ್ನು ಕೊಡವಿಕೊಳ್ಳುತ್ತಾ, ರೀಟಾಳನ್ನು ಮನೆಗೆ ಬಿಟ್ಟು ಬರುತ್ತೇನೆಂದು ನನ್ನ ಬಾಸ್ಗೆ ಫೋನ್ ಮಾಡಿ ತಿಳಿಸಿದೆ. ರೀಟಾ ತಾನೇ ಮನೆಗೆ ಹೋಗುವುದಾಗಿ ಹಠ ಹಿಡಿದಳು, ಒಂದು ಕ್ಯಾಬ್ ಕರೆದರೆ ಸಾಕು ಎಂದಳು, ನಾನು ಅವಳ ಮನೆಗೆ ಹೋಗುವುದು ಅವಳಿಗೆ ಇಷ್ಟ ಇಲ್ಲ ಎಂದು ನನಗೆ ಸ್ಪಷ್ಟವಾಗಿ ಅರ್ಥವಾಯ್ತು . ಅಷ್ಟರಲ್ಲಿ ಮತ್ತೆ ಬಂದ ನೋವಿಗೆ ಕುಸಿದಳು ರೀಟಾ. ಮೆಲ್ಲನೆ ರೀಟಾಳನ್ನು ಕಾರ್ ಬಳಿ
ನಡೆಸಿಕೊಂಡು ಹೋದೆ. ರೀಟಾಳ ಪರಿಚಯ ಆಗಿ ಸುಮಾರು ಮೂರು- ನಾಲ್ಕು ವರ್ಷಗಳೇ ಆಗಿದ್ದರೂ ಅವಳ ಮನೆ ಎಲ್ಲೆಂದು ನನಗೆ ತಿಳಿದಿರಲಿಲ್ಲ . ಅವಳು ಕೊಟ್ಟ ವಿಳಾಸವನ್ನು ಜಿ ಪಿ ಎಸ್ ಗೆ ಹಾಕುತ್ತಾ ಕಾರ್ ಸ್ಟಾರ್ಟ್ ಮಾಡಿದೆ.
ರೀಟಾ ಹೇಳಿದ ವಿಳಾಸದ ಮುಂದೆ ಜಿಪಿಎಸ್ ಕಾರನ್ನು ತಂದು ನಿಲ್ಲಿಸಿದಾಗ ನನಗೆ ನಂಬಲೇ ಆಗಲಿಲ್ಲ ! ಅದೊಂದು ಬಣ್ಣ ಕೆಟ್ಟ, ಹಳೆಯದಾದ ಅಪಾರ್ಟ್ಮೆಂಟ್ ಕಟ್ಟಡ. ರೀಟಾಳ ಫೋಟೋಗಳಲ್ಲಿ ಕಾಣುತ್ತಿದ್ದ, ಹೊಸ ಆಕಾರದ ಕಿಟಕಿಗಳಾಗಲಿ, ರೇಶಿಮೆಯ ಪರದೆಗಳಾಗಲಿ ಇಲ್ಲಿ ಖಂಡಿತಾ ನನಗೆ ಕಾಣಿಸಲಿಲ್ಲ. ಲಿಫ್ಟ್ ಗಡಗಡಿಸುತ್ತಾ ನಮ್ಮನ್ನು ಮೂರನೆಯ ಮಹಡಿಗೆ ಕರೆದ್ದೊಯಿತು. ಬಾಗಿಲಲ್ಲಿ ಸ್ವಾಗತ ಕೋರಿದ ಅರ್ಧ ಒಣಗಿದ ಗಿಡವನ್ನು ಗಮನಿಸದೆ ಇರದಾದೆ.
ರೀಟಾಳನ್ನು ಹಾಸಿಗೆಯ ಮೇಲೆ ಒರಗಿಸಿ, ಅವಳಿಗೆ ಬಿಸಿ ನೀರು ತಂದು ಔಷದಿ ಕೊಟ್ಟೆ. ಅವಳಿಗೆ ಬೇಕಿದ್ದ ಸಾಮಾನೆಲ್ಲ ಹತ್ತಿರದ ಟೇಬಲ್ ಮೇಲೆ ಇಟ್ಟೆ. ಅವಳಿಗೆ ಹೊದಿಕೆ ಹೊದೆಸುತ್ತಾ ಮತ್ತೆ ಸಂಜೆ ಬರುವುದಾಗಿ ಹೇಳಿದೆ. ಮತ್ತೆ ಮತ್ತೆ ಔಷದಿ ಹಾಗೂ ಕಾದಾರಿದ ನೀರು ಕುಡಿಯಲು ನೆನಪಿಸಿ ಅವಳ ಹಣೆಯ ಮೇಲೆ ಸ್ನೇಹದಿಂದ ಹೂಮುತ್ತನಿತ್ತು ನಾನು ಹೊರಟಾಗ ರೀಟಾ ಬೇಕೆಂದೇ ನನ್ನ ಕಡೆ ನೋಡಲಿಲ್ಲ ಎಂದು ಅರಿವಾಯಿತು.
ಆಫೀಸಿಗೆ ವಾಪಸ್ ಹೋಗುತ್ತಾ ಮುಖ್ಯ ರಸ್ತೆಗೆ ತಿರುಗುವಲ್ಲಿ,ಕೆಂಪು ದೀಪದ ಬಳಿ ಕಾರ್ ನಿಲ್ಲಿಸಿ ಸುತ್ತಲೂ ನೋಡಿದೆ. ಮೂಲೆಯ ಮನೆಯಂಗಳದಲ್ಲಿ ಹಚ್ಚ ಹಸಿರು ಹುಲ್ಲಿನ ಸುತ್ತಲೂ ಸುಂದರ ಹೂಗಳ ಭಾರಕ್ಕೆ ಬಗ್ಗಿದ್ದ ಬಳ್ಳಿಗಳು, ಕಲಾತ್ಮಕವಾಗಿ ಬೆಳೆಸಿದ ಗಿಡ, ಮರ, ಕಾರಂಜಿಗಳಿಂದ ಕಂಗೊಳಿಸುತ್ತಿದ್ದ ಒಂದು ಮನೋಹರವಾದ ತೋಟ ಕಣ್ ಸೆಳೆಯಿತು.ಇದನ್ನು ಎಲ್ಲೊ ನೋಡಿದ್ದೀನಿ ಅಂದುಕೊಳ್ಳುವಷ್ಟರಲ್ಲಿ ದೀಪ ಹಸಿರಾಯ್ತು. ಮುಂದಕ್ಕೆ ಹೊರಟು ಕಾರಿನ ಆಕ್ಸಿಲರೇಟರ್ ಒತ್ತುತ್ತಿದಂತೆ ನನಗೆ ಧುತ್ತನೆ ನೆನಪಾಯ್ತು ಆ ಉದ್ಯಾನ ರೀಟಾಳ ಫೇಸ್ ಬುಕ್ ನ ಪ್ರೊಫೈಲ್ ಚಿತ್ರ ಎಂದು !
Facebook ನ ಕೆಲವು postಗಳಲ್ಲಿ ಕೆಲವೊಮ್ಮೆ ನಮಗೆ ನೋಡಲು ಸಿಗುವುದು ಹಾಕಿದವರ ಕಲ್ಪನಾ ಲೋಕದ ತುಣುಕಗಳೇ.
ReplyDeleteನಿಜ. ಅದು ಕೆಲವೊಮ್ಮೆ ಭ್ರಮೆಯ ಲೋಕ, Fake Book ಆಗುವುದುಂಟು. ಓದಿ ಪ್ರತಿಕ್ರಿಯೆ ಕೊಟ್ಟಿದಕ್ಕೆ ಧನ್ಯವಾದಗಳು.
DeleteFacebook ಕೆಲವರಿಗೆ dream ಬುಕ್ / ಕನಸಿನ ಲೋಕ. ಅಂಗೈಯಲ್ಲೇ ಕನಸು ಕಾಣುವ ಒಂದು ಸಾಧನ .
ReplyDelete