ನಮ್ಮವರ ಇಂಡಿಪೆಂಡೆನ್ಸ್ ನಾಲೆಡ್ಜು

ನಮ್ಮವರ ಇಂಡಿಪೆಂಡೆನ್ಸ್ ನಾಲೆಡ್ಜು

ಲೇಖನ - ಅಣಕು ರಾಮನಾಥ್ 



                         ವರದಿಗಾರ ವಕ್ರೇಶ ಕ್ಯಾಮರಾಮ್ಯಾನ್ ಕಪೀಶನೊಂದಿಗೆ ಬೆಂಡುಕೋಲೂರಿನ (ಪಾಟ್‌ಹೋಲ್‌ಗಳು ಹೆಚ್ಚಾಗಿದ್ದು, ವಯಸ್ಸಾದವರು ಕೋಲೂರಿ ನಡೆಯುವಾಗ ಹಳ್ಳದಲ್ಲಿಟ್ಟೂ ಇಟ್ಟೂ ಕೋಲು ಬೆಂಡ್ ಆದುದರಿಂದ ಈ ಊರಿಗೆ ಈ ಹೆಸರು ಬಂದಿತಂತೆ) ಎಂಜಿ ರೋಡಿನ ಸಿಟಿ ಹೈಕ್ಳುಗಳತ್ತ ಪ್ರಶ್ನೆಗಳು ಎಸೆಯಲಾರಂಭಿಸಿದ.

‘ಈ ರೋಡ್‌ಗೆ ಎಂಜಿ ರೋಡ್ ಅಂತ ಹೆಸರು ಬಂದಿದ್ದು ಯಾಕೆ?’ ಕೇಳಿದ ವಕ್ರೇಶ

‘ಎಂ ಅಂದ್ರೆ ಮೂವೀಸ್; ಜಿ ಅಂದ್ರೆ ಗರ್ಲ್ಸ್. ಈ ರೋಡ್ನಾಗೇ ಎರಡೂ ಬೊಂಬಾಟ್. ಅದಕ್ಕೇ ಈ ನೇಮು’ ಎಂದ ಪೆಂಗೇಶ.

‘ಛೆ! ಎಂ.ಜಿ. ಅಂದರೆ ಮಹಾತ್ಮಾ ಗಾಂಧಿ ಅಂತ. ನಿಮಗೆ ಗಾಂಧೀಜೀ ಗೊತ್ತಾ?’

‘ಗಾಂಧಿ ಗೊತ್ತು. ಫುಲ್ ನೇಮ್ ಪೂಜಾ ಗಾಂಧಿ. ‘ದಂಡುಪಾಳ್ಯ’ ಫಿಲಮ್ಮಲ್ಲಿ ಮಾಡಿದಾಳೆ. ಚೆನ್ನಾಗಿದಾಳೆ’ ಎಂದನೊಬ್ಬ ಪಡ್ಡೆ.

‘ಜೀ ಅಂದ್ರೆ ನಮಗೆ ಗೊತ್ತಿರೋದು 2ಜಿ, 3ಜಿ, 4ಜಿ, 5ಜಿ ಅಷ್ಟೆ’ ಎಂದಳು ಕೊಳವೆ ಕೂದಲಿನ, ಹರಕಲು ಬಟ್ಟೆಯ ಟೆಡ್ಡಿ.

‘ಗಾಂಧಿ ಅಂದ್ರಾ ಸಾರ್? ನನಗೆ ಗೊತ್ತು’ ಕುರುಚಲು ಗಡ್ಡ, ಪುರುಚಲು ಮೇಲ್ತಲೆ, ಎಳನೀರಿನ ಕೊಚ್ಚಿದ ಭಾಗದಂತೆ ಕಾಣುವ ಸೈಡ್‌ತಲೆಗಳನ್ನು ಹೊಂದಿದ್ದವನೊಬ್ಬ ನುಡಿದ.

‘ವೀಕ್ಷಕರೆ, ಕಡೆಗೂ ಗಾಂಧಿಯವರ ಬಗ್ಗೆ ತಿಳಿದುಕೊಂಡಂತಹ ಸ್ಟೂಡೆಂಟೊಬ್ಬರು ಸಿಕ್ಕಿದ್ದಾರೆ. ಗಾಂಧಿಯವರ ಬಗ್ಗೆ ನಿಮಗೇನು ಗೊತ್ತು ಸಾರ್?’

‘ಮೊನ್ನೆ ಓಲ್ಡ್ ಮೂವೀಸ್ ನೋಡ್ತಿದ್ದೆ. ಅದರಲ್ಲಿ ಗಾಂಧಿ ಇದ್ದರು. ಗಾಂಧೀನ ಪ್ರೊಡ್ಯೂಸ್ ಮಾಡಿದವ್ನು ರಿಚರ್ಡ್ ಅಟೆನ್‌ಬರೋ. ಗಾಂಧಿಯ ರಿಯಲ್ ನೇಮ್ ಬೆನ್ ಕಿಂಗ್‌ಸ್ಲೇ’ ಎಂದ ಪುರುಚಲ್ತಲೆ.

‘ಮೋಹನ್ ದಾಸ್ ಕರಮ್ ಚಂದ್ ಗಾಂಧಿಯ ಬಗ್ಗೆ ಯಾರಾದರೂ ಹೇಳ್ತೀರಾ?’ ಗುಂಪಿಗೇ ಸವಾಲೆಸೆದ ವಕ್ರೇಶ.

‘ಯಾರು ಆ ಐದು ಜನ? ಮ್ಯೂಸಿಕ್ ಗ್ರೂಪಾ? ಬೀಟ್ ಬಾಕ್ಸಿಂಗ್ ಡ್ಯೂಡ್ಸಾ?’ ಕೀರಲಿತೊಂದು ವಾಣಿ.

‘ಐದು ಜನ?’ ತಬ್ಬಿಬ್ಬಾದ ವಕ್ರೇಶ.

‘ಮೋಹನ್, ದಾಸ್, ಕರಮ್, ಚಂದ್, ಗಾಂಧಿ; ಐದಾಯ್ತಲ್ಲ’

‘ಛೆ! ಅದಷ್ಟೂ ಒಬ್ಬರದೇ ಹೆಸರು ರೀ. ಬೇರೆಬೇರೆಯವರದಲ್ಲ’

‘ಸಚ್ ಎ ವೇಸ್ಟ್ ಆಫ್ ಪ್ರಿಂಟ್ ಇಂಕ್. ಐದೈದು ಜನಕ್ಕೆ ಹಂಚೋ ತರಹದ ಹೆಸರನ್ನು ನಾವಂತೂ ಇಟ್ಕೊಳಲ್ಲಪ್ಪ. ವಾಟ್ ಸೇ ಡ್ಯೂಡ್?’ ಎಂದ ಟಿಮ್ಸ್.

‘ಟ್ರೂ ಡೂಡ್’ ಎಂದು ಹಲ್ಕಿರಿದಳು ಕಮ್ಸ್. ಅವಳ ಒರಿಜಿನಲ್ ಹೆಸರು ಕಮಲಿನಿಯಂತೆ. ಡೂಡ್ಸ್ ಭಾಷೆಯಲ್ಲಿ ಅದು ಕಮ್ಸ್ ಆಯಿತೆಂದು ಡೂಡ್-ಡುಡೆಟ್ ಡಿಕ್ಷ್ನರಿ ನುಡಿದಿದೆ.

‘ಈ ರಸ್ತೆಗೆ ಎಂಜಿ ರೋಡ್ ಅನ್ನೋದು ಯಾಕೇಂತ ಯಾರಾದರೂ ಸರಿಯಾಗಿ ಹೇಳ್ತೀರಾ?’ ಪ್ರಶ್ನೆ ರಿಪೀಟಿಸಿದ ವಕ್ರೇಶ.

‘ಶ್ಯೂರ್... ಐ ವಿಲ್’ ಎಂದಳೊಬ್ಬ ಬಿಳಿಕೋಟಿನವಳು. ‘ಇಲ್ಲಿ ಏರ್ ಪಲ್ಯೂಷನ್, ನಾಯ್ಸ್ ಪಲ್ಯೂಷನ್, ಬಾರ್ ಪಲ್ಯೂಷನ್ಗಳು ಜಾಸ್ತಿ ಇವೆ. ಡ್ರಿಂಕ್ಸ್ನಿಂದ ಹ್ಯಾಂಗೋವರ್ ಆಗತ್ತೆ, ಪಲ್ಯೂಷನ್ನಿಂದ ನಾಸಿಯಾ ಆಗತ್ತೆ. ಎರಡಕ್ಕೂ ತೊಗೋಬೇಕಾದ ಮಾತ್ರೆಗಳೆಲ್ಲ ೧೦೦ ಎಂಜಿ, ೨೦೦ ಎಂಜಿ, ಎಟಿಸೆಟಿರಾ  ಇರತ್ವೆ. ಅಷ್ಟಷ್ಟು ಎಂಜಿಗಳ ಮಾತ್ರೆಗಳನ್ನು ತೊಗೊಳಕ್ಕೆ ಕಾರಣವಾದ ಪ್ಲೇಸಸ್ ಇಟ್ಕೊಂಡಿರೋ ರೋಡೇ ಎಂಜಿ ರೋಡ್’ ಎಂದಳಾ ಸರ್ಜಿಕಲ್ ಕೋಟು.

‘ಅಣ್ಣೋ, ಇಲ್ಲಿರೋವೆಲ್ಲ ಎಳಸು. ಸಿವ್ವಾಜಿನಗರಕ್ಕೆ ಹೋಗೋಣ’ ಎಂದ ಕಪೀಶ.

ಬೌರಿಂಗ್ ಹಾಸ್ಪಿಟಲ್ ರಸ್ತೆ ತಲುಪಿದ ವಕ್ರೇಶ ಬಲೆಯಂತಹ ಬಿಳಿ ಟೋಪಿ ಧರಿಸಿದವನನ್ನು ‘ಶಿವಾಜಿ ಯಾರು?’ ಎಂದು ಕೇಳಿದ. ಕಪೀಶ ಬಲೆಟೋಪಿಯ ಮೂತಿಗೆ ಕ್ಯಾಮರಾ ತುರುಕಿದ.

‘ಅವ್ನು ನಮ್ದೂಕೆ ದುಷ್ಮನ್ ಇದಾರೆ. ನಮ್ದೂಕೆ ಅಫ್ಝಲ್ ಭಾಯ್‌ದು ಕತ್ಲ್ ಮಾಡ್ದ ಇಲ್ಲಾ...’ ಎಂದವನೇ ದುರುದುರು ನೋಡುತ್ತಾ ಬಿರಬಿರನೆ ಸಾಗಿದ. ವಕ್ರೇಶನಿಗೆ ಇದು ‘ವಿಚಿತ್ರ, ಆದರೂ ಸತ್ಯ’ ಅಂಕಣಕ್ಕೆ ಸರಿಯಾದ ಉತ್ತರ ಎನಿಸಿತು. ವಸ್ತುನಿಷ್ಠವಲ್ಲದೆ ಜಾತಿನಿಷ್ಠವಾಗಿ ಚರಿತ್ರೆಯನ್ನು ಬರೆದಿದ್ದರೆ ಅದೇ ಸತ್ಯವಾಗುತ್ತಿತ್ತೇನೋ!

ಬಣ್ಣ, ಲುಂಗಿ, ನಡೆಯ ಧಾಟಿ, ಎಲ್ಲದರಲ್ಲಿಯೂ ತಮಿಳುನಾಡೇ ಮೈವೆತ್ತಂತೆ ಬರುತ್ತಿದ್ದ ಒಬ್ಬನ ಮುಂದೆ ಕ್ಯಾಮರಾ ಮೂಡಿಬಂತು. ಹಿಂದೆಯೇ ‘ಶಿವಾಜಿ ಗೊತ್ತಾ?’ ಎಂಬ ಪ್ರಶ್ನೆ.

‘ಪೆಂಕಳೂರಲೇ ಇರಕ್ರೇ, ಕನ್ನಟ ಏ ಪೇಸ್ರೆಯಾ? ತಮಿಳ್ ಸೊಲ್ಲು’ ಎಂದ.

‘ಶಿವಾಜಿ ತೆರಿಮಾ?’ ಎಂದ ವಕ್ರೇಶ. ಕನ್ನಡಿಗನೆಂದಮೇಲೆ ತಮಿಳು ಬರಲೇಬೇಕಲ್ಲ!

‘ನಲ್ಲಮೇ ತೆರಿಯು. ಮೊದಲ್ ಮರ್ಯಾದೈ ಹೀರೋ, ವೀರಪಾಂಡೈ ಕಟ್ಟಾಪೊಮ್ಮನ್ ಸಂದಾಕೇ ಗೊತ್ತು’ ಎಂದ ಆರವಪುತ್ರ.

‘ಆ ಶಿವಾಜಿಯಲ್ಲ...’ ಎನ್ನುತ್ತಿದ್ದಂತೆಯೇ, ‘ಕೊತ್ತು. ಸಿವಾಜಿ ಪ್ರಭು. ಅಂದ ಆಳೂ ಹೀರೋ ತಾ. ಸಿವಾಜಿ ಗಣೇಸನ್ ಪಯ್ಯ’ ಎಂದ.

ಕ್ಯಾಮರಾ ಮುಂದೋಡಿತು. ಅಲ್ಲೊಂದು ಶಾಲೆ. ಬಡಾವಣೆಗೆ ತಕ್ಕಂತೆ ಕೊಳಕು ಹರಡಿತ್ತು. ಕ್ಯಾಮರಾ ಶಾಲೆಯ ಪ್ರಿನ್ಸಿಪಾಲರ ಕೊಠಡಿಗೆ ನುಗ್ಗಿತು. ಸ್ವಿಗ್ಗಿಯಲ್ಲಿ ತರಿಸಿಕೊಂಡ ಟೋಸ್ಟಿಗೆ ಸಾಲ್ಟ್ ಸ್ಪ್ರೇ ಮಾಡಿಕೊಳ್ಳುತ್ತಿದ್ದ ಪ್ರಿನ್ಸಿಪಾಲಿಣಿಯನ್ನು ‘ಉಪ್ಪಿನ ಸತ್ಯಾಗ್ರಹ ನಡೆದ ಇಸವಿ ತಿಳಿದಿದೆಯೇ?’ ಎಂದು ಕೇಳಿದ ವಕ್ರೇಶ.

‘ನೋ ಐಡಿಯ. ಮುಪ್ಪಿನ ಸತ್ಯಾಗ್ರಹದ ಬಗ್ಗೆ ಗೊತ್ತು’

‘ಯಾವುದದು?’

‘ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಮಂಡಿಯೂರಿ, ಕೋಲೂರಿ, ಗಂಟಲೇರಿಸುವ ಸತ್ಯಾಗ್ರಹವೇ ಮುಪ್ಪಿನ ಸತ್ಯಾಗ್ರಹ. ಹೋದ ವರ್ಷ ನಮ್ಮ ಏರಿಯಾದವರೇ ಶುರು ಮಾಡಿದರು’

ಅಷ್ಟರಲ್ಲಿ ವಿದ್ಯಾರ್ಥಿಯೊಬ್ಬ ಕಾರಿಡಾರ್‌ನಲ್ಲಿ ಕಂಡುಬಂದ.

‘ವೈ ಲೇಟ್?’ ಎಂದರು ಪ್ರಿನ್ಸಿ.

‘ಲೇಟ್ ಹುವಾ ಮೇಡಂ.’

‘ಕ್ಯೋ?’

‘ಲೇಟ್ ಗಯಾ ಥಾ ಮೇಡಂ.’

‘ಲೇಟಾಗಿ ಹೋದರೆ ಲೇಟಾಗಿ ಬರಬೇಕಾ?’

‘ಆ ಲೇಟ್ ಗಯಾ ಅಲ್ಲ ಮೇಡಂ... ಲೇಟ್ ಗಯಾ ಥಾ... ಮಲಗಿಕೊಂಡುಬಿಟ್ಟಿದ್ದೆ’

ಕನ್ನಡಿಗರ ಗೋಳೇ ಇದು. ಕನ್ನಡ ಅನಿವಾರ್ಯವಾಗುವವರೆಗೆ ಅನ್ಯಭಾಷಾ ಪದಗಳಿಗೇ ಪ್ರಾಶಸ್ತ್ಯ.

‘ಸ್ವದೇಶಿ ಚಳುವಳಿಯ ಬಗ್ಗೆ ನಿನಗೇನಾದರೂ ಗೊತ್ತಾ?’ ವಕ್ರೇಶ ವಿದ್ಯಾರ್ಥಿಯನ್ನು ಕೇಳಿದ.

‘ಗೊತ್ತು. ವಿದೇಶದ ವಸ್ತುಗಳ ಬದಲಾಗಿ ನಮ್ಮದನ್ನೇ ಬಳಸುವುದು’

‘ಆ ಚಳುವಳಿ ಆರಂಭಿಸಿದ್ದು ಯಾರು?’

‘ಮುದ್ದೇಗೌಡ’

ಪ್ರಿನ್ಸಿ, ಕ್ಯಾಮರಾಮ್ಯಾನ್, ವರದಿಗಾರ ಮೂವರೂ ಪ್ರಶ್ನಾರ್ಥಕ ಚಿಹ್ನೆಯಂತೆ ನಿಂತರು.

‘ನಮ್ಮ ಏರಿಯಾದಲ್ಲಿ ‘ಗ್ರಾಮೀಣ ಅಂಗಡಿ’ ನಡೆಸೋ ಮುದ್ದೇಗೌಡ ಮಿಸ್. ಅವನೇ ಹೋಂ ಮೇಡ್ ಚಾಕ್ಲೆಟ್ಸ್, ಇಂಡಿಜಿನಸ್ ಬರ್ಗರ್, ಇಂಡಿಯನ್ ಪೀಟ್ಝಾ ಎಲ್ಲ ಮಾರಕ್ಕೆ ಶುರು ಮಾಡಿ, ‘ವಿದೇಶಿ ವಸ್ತುಗಳನ್ನು ಧಿಕ್ಕರಿಸಿ, ಗ್ರಾಮೀಣ ವಸ್ತುಗಳನ್ನು ಕೊಳ್ಳಿರಿ’ ಅಂತ ಬೋರ್ಡ್ ಹಾಕಿದ್ದ.’

ಶಾಲೆಯ ಮೇಷ್ಟ್ರೊಬ್ಬರು ಕೈಯಲ್ಲಿ ಬೇಗಾನ್ ಸ್ಪ್ರೇ ಹಿಡಿದು ಕ್ಲಾಸೊಂದರಿಂದ ಹೊರಬಂದರು.

‘ಸರ್, ನಿಮಗೆ ಕ್ವಿಟ್ ಇಂಡಿಯಾ ಚಳುವಳಿ ಗೊತ್ತೆ?’ ಪ್ರಶ್ನೆ ತೂರಿಬಂತು.

‘ಅದೆಲ್ಲ ಹಳೇ ಕಾಲ. ಈಗ ನಮ್ಮಲ್ಲಿ ಜಿರಳೆಗಳು ಜಾಸ್ತಿಯಾಗಿವೆ. ಈಗೇನಿದ್ದರೂ ಫ್ಲಿಟ್ ಇಂಡಿಯಾ ಮೂಮೆಂಟ್’ ಎನ್ನುತ್ತಾ ಮೀಸೆ ಕುಣಿಸುತ್ತಾ ಓಡುತ್ತಿದ್ದ ಜಿರಳೆಗೆ ಡೆತ್ ಸೆಂಟೆನ್ಸ್ ನೀಡಲು ಫ್ಲಿಟ್ ಪಂಪ್ ಹಿಡಿದು ಓಡಿದರು ಗುರುಗಳು.

‘ನಿನಗೆ ಕ್ವಿಟ್ ಇಂಡಿಯಾ ಚಳುವಳಿ ಗೊತ್ತೇನು?’ ಜಿರಳೆಯ ಮೀಸೆಕುಣಿತವನ್ನೇ ನೋಡುತ್ತಿದ್ದ ವಿದ್ಯಾರ್ಥಿನಿಯನ್ನು ಕೇಳಿದ ವಕ್ರೇಶ.

‘ಓ! ಸೋ ಮೆನಿ ಇಯರ್ಸ್ ಎಗೋ ಇಟ್ ಸ್ಟಾರ್ಟೆಡ್.’

‘ಅದಕ್ಕೆ ಕಾರಣ?’

‘ಸಾಲ. ಸಾಲ ತೀರಿಸಕ್ಕೆ ಆಗದವರೆಲ್ಲ ದೇಶ ಬಿಟ್ಟು ಹೋಗೋವ್ರು. ನೀರವ್ ಮೋದಿ ಈಸ್ ದ ಲೇಟೆಸ್ಟ್ ಅಡಿಷನ್ ಟು ದ ಲಿಸ್ಟ್’ ಪಟಪಟನೆ ನುಡಿದಳು ಆ ಎಸ್‌ಎಸ್‌ಎಲ್‌ಸಿ ಸ್ಟೂಡೆಂಟು.

‘ಆರ್ಟಿಕಲ್ ೩೭೦ರ ಬಗ್ಗೆ ಏನು ಹೇಳುತ್ತೀರಿ?’

‘ಅದು ಈಗ ಇಲ್ಲ’ ಎಂದಳು ಶಾಲೆಯ ಸ್ಟೋರ್ ಕೀಪರ್. ಒಬ್ಬರಾದರೂ ಒಂದಾದರೂ ತಿಳಿದಿದ್ದಾರಲ್ಲ ಎಂದು ವಕ್ರೇಶನ ಮುಖ ಬಿಸಿಯೆಣ್ಣೆಯಲ್ಲಿ ಕುಣಿಕುಣಿದು ಅರಳುವ ಪೂರಿಯಂತೆ ಅರಳಿತು.

‘ಆರ್ಟಿಕಲ್ ಮುನ್ನೂರೆಪ್ಪತ್ತು ಎಂದರೆ ಏನು ಗೊತ್ತೆ?’

‘ಗೊತ್ತು. ರೂಲ್‌ದೊಣ್ಣೆ. ನಮ್ಮ ಸ್ಕೂಲಲ್ಲಿರೋ ಆರ್ಟಿಕಲ್‌ಗಳ ಲಿಸ್ಟಿನಲ್ಲಿ ಆರ್ಟಿಕಲ್ ನಂಬರ್ ೩೭೦ ರೂಲ್‌ದೊಣ್ಣೆ. ನೀವೇ ನೋಡ್ಕೊಳಿ ಬೇಕಾದ್ರೆ’ ಎನ್ನುತ್ತಾ ಸ್ಟೋರ್ ಬುಕ್ಕನ್ನು ಮುಂದೆ ತಳ್ಳಿದಳಾಕೆ.

ಮುಂದಿನ ಆಗಸ್ಟಲ್ಲೂ ಇದೇ ಪ್ರಶ್ನೆಗಳು ಮುಂದುವರಿಯಲಿವೆ. ಉತ್ತರಗಳು...?

Comments

  1. ರಾಮ, ರಾಮಾ, ನಕ್ಕೂ, ನಕ್ಕೂ ಸುಸ್ತಾಯಿತು. 😁😁😁

    ReplyDelete
  2. ಹಾಸ್ಯ 👌🏻👌🏻👌🏻

    ReplyDelete
  3. ಒಂದೇ ಹೆಸರಿಗೆ ನಮಗೆ ಊಹಿಸಲೂ ಆಗದಂಥ ಅರ್ಥಗಳನ್ನು ಕಲ್ಪಿಸುವ ರಾಮನಾಥರ ಅದ್ಭುತ lateral thinking ಗೆ ಸಾಟಿಯಿಲ್ಲ!

    ReplyDelete
  4. ಸ್ವಾತಂತ್ರ್ಯ ದಿನದ ಹೆಸರಿನಲ್ಲಿ ಅದೆಷ್ಟು ವಿಷಯ ಮುಟ್ಟಿದ್ದೀರಿ, ಹಾಸ್ಯವನ್ನು ಎಲ್ಲೆಡೆ ನೆಟ್ಟಿದ್ದೀರಿ One of the best articles in recent days.

    ReplyDelete

Post a Comment