ದಂಪತಿಗಳ ಅನ್ಯೋನ್ಯತೆ ಅಥವಾ Team Effort
ಲೇಖನ - ಡಾ ಸಿ. ವಿ. ಮಧುಸೂದನ
ಈ ಬರಹದಲ್ಲಿ ಬಣ್ಣಿಸಿರುವ ಸಂಗತಿಗಳು ಐವತ್ತು ವರ್ಷಗಳಿಗೂ ಹಿಂದೆ ನಡೆದವು, ಆದರೂ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ನಿಂತಿವೆ. ಆಗಿನ ಕಾಲದಲ್ಲಿ ಮೆಲ್ಬರ್ನ್ ನಗರದ ಮೊನಾಷ್ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ನಾನು, ಯೂನಿವರ್ಸಿಟಿಯ ಹಾಸ್ಟೆಲುಗಳಲ್ಲಿ ಒಂದಾದ Deakin Hall ಎಂಬಲ್ಲಿ ವಾಸಿಸುತ್ತಿದ್ದೆ. ನಮ್ಮ ಹಾಸ್ಟೆಲಿನಲ್ಲಿ ಸುಮಾರು ಇನ್ನೂರು ಮಂದಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇರುತ್ತಿದ್ದರು. ಪ್ರತಿಯೊಬ್ಬರಿಗೂ ಅವರದೇ ಆದ ಸುಸಜ್ಜಿತ ಕೊಟಡಿಗಳಿದ್ದುವು.
ನಮ್ಮೆಲ್ಲರ ದಿನಚರಿಯೂ ಪ್ರಾಯಶಃ ಒಂದೇ. ಬೆಳಗಾಗೆದ್ದು ಸ್ನಾನಗೃಹಕ್ಕೆ ಹೋಗಿ ನಮ್ಮ ಪ್ರಾತರ್ವಿಧಿಗಳನ್ನೂ ತೀರಿಸಿಕೊಂಡುನ್ನು ಸರಿಯಾಗಿ ಡ್ರೆಸ್ ಮಾಡಿಕೊಂಡು ಊಟದ ಮನೆ (Dining Hall) ಗೆ ಹೋಗುವುದು. ಇಲ್ಲಿನ Breakfast ಗೆ ಬೇಕಾದ ಯಾವ ಆಹಾರ ಪದಾರ್ಥಕ್ಕೂ ಕೊರತೆ ಇರಲಿಲ್ಲ, ಒಬ್ಬರಿಗೆ ಇಷ್ಟು ಎಂಬ ಮಿತಿಯೂ ಇರಲಿಲ್ಲ. ನನ್ನ ಒಬ್ಬ ಮಿತ್ರನು, ಅಡಿಗೆಯವರು ಬಿಸಿಯಾಗಿ ಮಾಡಿಕೊಡುತ್ತಿದ್ದ ಬಿಸಿ ಬಿಸಿ ದೋಸೆಗಳು (Pan cakes)
ಹನ್ನೆರಡನ್ನು ನಿಮಿಷಾರ್ಧದಲ್ಲೋ ಎಂಬಂತೆ ಕಬಳಿಸಿದ್ದನ್ನು ನಾನೇ ನೋಡಿದ್ದೇನೆ. Breakfast ಆದ ನಂತರ ನಮ್ಮ ನಮ್ಮ ವಾಸಸ್ಥಾನಕ್ಕೆ ತೆರಳಿ, ದಂತಮಾರ್ಜನವಾದ ಮೇಲೆ, ಯೂನಿವರ್ಸಿಟಿಗೆ ನಡೆಯುವುದು. ಮತ್ತೆ ಹಿಂತಿರುಗುತ್ತಿದ್ದುದು ಸಾಯಂಕಾಲವಾದ ಮೇಲೆಯೇ.
ಹೀಗಿರುವಾದ ರಂಗನಾಥನ್ (ಹೆಸರು ಬದಲಾಯಿಸಿದ್ದೇನೆ) ಎಂಬುವರು ನಮ್ಮ ಹಾಸ್ಟೆಲಿನಲ್ಲಿ ಇರಬಂದರು. ಮೂಲತಃ ತಮಿಳು ನಾಡಿನವರಾದ ಇವರು ಅಮೇರಿಕಾದಲ್ಲಿ PhD ಮಾಡಿ, ಇಲ್ಲಿ ಗಣಿತ ಶಾಸ್ತ್ರದ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕವಾಗಿದ್ದರು. ಮದುವೆಯಾಗಿತ್ತು, ಆದರೆ ಅವರ ಹೆಂಡತಿ ಇನ್ನೂ ವೀಸಾಗೆ ಕಾಯುತ್ತ ಇಂಡಿಯಾದಲ್ಲೇ ಇದ್ದರು. ತತ್ಪರಿಣಾಮವಾಗಿ, ಯೂನಿವರ್ಸಿಟಿಯವರು ಅವರಿಗೆ ನಮ್ಮ ಹಾಸ್ಟೆಲಿನ ಒಂದು Guest Room ಇರಲು ಅವಕಾಶ ಮಾಡಿಕೊಟ್ಟು, ಅವರ ಶ್ರೀಮತಿಯವರು ಬರುವ ದಿನ ಖಚಿತವಾದ ಕೂಡಲೇ ಅವರಿಗೆ ಯೂನಿವರ್ಸಿಟಿಗೆ ಸಮೀಪದಲ್ಲಿದ್ದ apartment ಒಂದನ್ನು ದೊರಕಿಸುವ ವ್ಯವಸ್ಥೆ ಮಾಡಿದ್ದರು.
ರಂಗನಾಥನ್ ಅವರು ಸ್ವಲ್ಪ ವಿಚಿತ್ರದ ಮನುಷ್ಯ. ತಮ್ಮದೇ ಆದ ಲೋಕದಲ್ಲಿ ವಿಹರಿಸುವಂಥವರು. ಅವರಿಗೆ ಇತರರು ಏನೆಂದು ಕೊಂಡಾರು ಎಂಬ ಚಿಂತೆಯೇ ಇರಲಿಲ್ಲ. ಇವರಿಗೆ ಸಂಗೀತದ ಗೀಳು ಹೆಚ್ಚು. ಓಡಾಡುವಾಗಲೂ ಶಂಕರಾಭರಣವೋ, ಮಧ್ಯಮಾವತಿಯೋ, ಯಾವುದೋ ರಾಗವನ್ನು ಆಲಾಪನೆ ಮಾಡುತ್ತಿರುವರು. ಇದನ್ನು ಕಂಡರೆ ಇತರರಿಗೆ ಬಹು ವಿನೋದ. ಇವರ ಇನ್ನೊಂದು ವಿಚಿತ್ರವೆಂದರೆ, ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಪೈಜಾಮಾದ ಮೇಲೆ ಒಂದು ಡ್ರೆಸ್ಸಿಂಗ್ ಗೌನ್ ಅನ್ನು ಧರಿಸಿ ಊಟದ ಮನೆಗೆ ಹೋಗಿ (ಅಷ್ಟು ಹೊತ್ತಿಗೆ ಅದನ್ನು ಇನ್ನೂ ತೆರೆದಿರುವುದಿಲ್ಲ), ಅದರ ಬಾಗಿಲನ್ನು ತಟ್ಟಿ, ಅಲ್ಲಿನ waitress ಒಬ್ಬಳಿಂದ ಒಂದು ಕಾಫಿಯನ್ನು ಬೇಡಿ ತರಿಸಿ, ಅದನ್ನು ಅಲ್ಲಿಯೇ ಮೆಟ್ಟಲಿನ ಮೇಲೆ ಕುಳಿತುಕೊಂಡು ಕುಡಿದು ಅನಂತರ ತಮ್ಮ ಕೊಟಡಿಗೆ ಹಿಂತಿರುಗುವರು. ‘ನಿಮ್ಮ ರೂಮಿಗೇ ಹೋಗಿ ಕುಡಿಯಿರಿ, ಏನೂ ಬಾಧಕವಿಲ್ಲ’ ಎಂದು ಆಕೆ ಹೇಳಿದರೆ, ‘ಇಲ್ಲ,ರೂಮಿಗೇ ತೆಗೆದುಕೊಂಡು ಹೋಗುವಷ್ಟರಲ್ಲಿ ಕಾಫಿ ತಣ್ಣಗಾಗಿ ಬಿಡುತ್ತದೆ’ ಎಂದು ಉತ್ತರ ಹೇಳುವರು. ಎಷ್ಟಾದರೂ ತಮಿಳು ನಾಡಿನವರಲ್ಲವೇ?
ಮೊದಲೇ ಹೇಳಿದಂತೆ ಇವರಿಗೆ ಸಂಗೀತದಲ್ಲಿ ಅಭಿರುಚಿ ಹೆಚ್ಚು. ಆಗ ನನ್ನಲ್ಲಿ Thorn-Ferguson ಎಂಬ spool-to-spool tape recorder ಇದ್ದಿತು. ಆಗ ಟೇಪ್ ಕೆಸೆಟ್ ಗಳು ಲಭ್ಯವಿರಲಿಲ್ಲ. ಆದರೂ ನನ್ನ ರೆಕಾರ್ಡರ್ ಅಷ್ಟೇನೂ ದೊಡ್ಡ ಗಾತ್ರದ್ದಲ್ಲ, ಸುಮಾರು 4-5 ಪೌಂಡ್ ತೂಕವಿರಬಹುದು - ಪೋರ್ಟಬಲ್ ಎಂದೇ ಹೇಳಬಹುದು. ನಾನು ಅಲ್ಲಿಂದ, ಇಲ್ಲಿಂದ ಪಾಶ್ಚಾತ್ಯ ಸಂಗೀತ ಮಾತ್ರವಲ್ಲದೆ, ಅನೇಕ ಹಿಂದಿ ಹಾಡುಗಳನ್ನೂ, ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಸಂಗ್ರಹಿಸಿ ಹಲವಾರು ಟೇಪುಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೆ. ಅವನ್ನು ಕೇಳಲೆಂದೇ ಅವರು ಆಗಾಗ ನನ್ನ ಕೊಟಡಿಗೆ ಬರುತ್ತಿದ್ದರು.
ಕೆಲವು ವಾರಗಳಲ್ಲೇ ಅವರ ಪತ್ನಿಯು ಇಂಡಿಯಾದಿಂದ ಬಂದರು. ಅಷ್ಟು ವೇಳೆಗಾಗಲೇ, ರಂಗನಾಥರಿಗೆ apartment ದೊರಕಿ, ಅವರು ಹಾಸ್ಟೆಲ್ಅನ್ನು ಬಿಟ್ಟು ಹೋಗಿದ್ದರು. ಅವರ ವಸತಿ ದೂರವೇನೂ ಇರಲಿಲ್ಲ. ನಮ್ಮ ಹಾಸ್ಟೆಲ್ ಯೂನಿವರ್ಸಿಟಿಯ ಈಶಾನ್ಯ ದಿಕ್ಕಿನಲ್ಲಿ, ಅವರ ಫ್ಲಾಟ್ ಇದ್ದುದು ನೈಋತ್ಯ ಮೂಲೆಯಲ್ಲಿ, ಆದರೆ ಕ್ಯಾಂಪಸ್ ನಿಂದ ಹೊರಗೆ. ಯೂನಿವರ್ಸಿಟಿ ಮೂಲಕ ಹೋದರೆ ಒಂದು ಮೈಲಿಯೂ ಆಗುತ್ತಿರಲಿಲ್ಲ.
ದಂಪತಿಗಳು ವಾಸ್ತವ್ಯ ಹೂಡಿ ಒಂದೆರಡು ವಾರಗಳಾಗಿರಬಹುದು ಅಷ್ಟೆ. ನನಗೆ ರಂಗನಾಥನ್ ಅವರಿಂದ ಒಂದು ಕರೆ ಬಂದಿತು. “ಮಧು, ನಿನಗೆ ಸಂಗೀತವೆಂದರೆ ಇಷ್ಟ ಎಂದು ನನಗೆ ಗೊತ್ತು. ನನ್ನ ಹೆಂಡತಿ ಇಂಡಿಯಾದಿಂದ ಎಂ.ಎಸ್. ಸುಬ್ಬುಲಕ್ಷ್ಮಿಯವರ ಒಂದು ರೆಕಾರ್ಡ್ ತಂದಿದ್ದಾಳೆ. ಇಂದು ಸಂಜೆ ನಿನ್ನ ಟೇಪ್ ರೆಕಾರ್ಡರ್ ತೆಗೆದುಕೊಂಡು ಬಾ, ರೆಕಾರ್ಡ್ ಮಾಡಿಕೊಂಡು, ಇಲ್ಲೇ ಊಟ ಮಾಡಿಕೊಂಡು ಹೋಗು” ಎಂದು ಹೇಳಿದರು.
ರೆಕಾರ್ಡರ್ ಅನ್ನು ತೆಗೆದುಕೊಂಡು ಕ್ಯಾಂಪಸ್ ಮೂಲಕ ನಡೆದುಕೊಂಡು ಹೋದದ್ದರಿಂದ ಕಷ್ಟವೇನೂ ಆಗಲಿಲ್ಲ. ಅವರ ಮನೆಗೆ ಹೋದ ಕೂಡಲೇ ಮನೆಯ ನಿಜವಾದ ಯಜಮಾನರು ಯಾರು? ಎಂದು ತಿಳಿಯಿತು. ಹೋದ ಕೂಡಲೇ ಮೈಥಿಲಿ ಅವರು (ರಂಗನಾಥರ ಧರ್ಮಪತ್ನಿ) ‘ಮೊದಲು ರೆಕಾರ್ಡ್ ಮಾಡಿಕೊಳ್ಳಿ, ಆಮೇಲೆ ಊಟ’ ಎಂದು ಅಪ್ಪಣೆ ಇತ್ತರು, ಮಾತ್ರವಲ್ಲ, ಯಾವ ಯಾವ ಕೇಬಲ್ ಎಲ್ಲೆಲ್ಲಿಗೆ ಹೋಗಬೇಕು ಎಂಬ (ಅನವಶ್ಯಕವಾದ) ಸೂಚನೆಗಳನ್ನೂ ಕೊಟ್ಟರು. ಅವರು ತಂದಿದ್ದು ಅಂಗೈ ಅಗಲದ (7 inch diameter) 45 rpm ರೆಕಾರ್ಡ್, ನಾಲ್ಕು ಹಾಡುಗಳು ಮಾತ್ರ ಇದ್ದುವು, ಆದ್ದರಿಂದ ರೆಕಾರ್ಡ್ ಮಾಡಲು ಹೆಚ್ಚು ಸಮಯ ಬೇಕಾಗಲಿಲ್ಲ.
ಊಟವಾದ ನಂತರ ‘ನಾನಿನ್ನು ಹೊರಡುತ್ತೇನೆ’ ಎಂದೆ. ರಂಗನಾಥರು ‘ಸ್ವಲ್ಪ ಇರು, ನಾವು ನಿಮ್ಮನ್ನು ಡ್ರಾಪ್ ಮಾಡುತ್ತೇವೆ’ ಎಂದರು. ‘ನಿಮಗೆ ಡ್ರೈವಿಂಗ್ ಬರುವುದೇ?’ ಎಂದು ಆಶ್ಚರ್ಯದಿಂದ ಕೇಳಿದೆ. ಕೂಡಲೇ ಅವರ ಶ್ರೀಮತಿಯವರು ‘ನನಗೆ ಬರುತ್ತದೆ ನಾನು ಡೆಲ್ಲಿಯಲ್ಲಿ ಬೇಕಾದಷ್ಟು ಡ್ರೈವ್ ಮಾಡಿದ್ದೇನೆ’ ಎಂದರು.
ಅಪಾರ್ಟ್ ಮೆಂಟ್ ನಿಂದ ಹೊರ ಬಂದಾಗ ಅಲ್ಲಿ ಒಂದು ಕೆಂಪು VW Beetle ಇದ್ದುದನ್ನು ಗಮನಿಸಿದೆ. ‘ ಇದೇ ನಮ್ಮ ಕಾರು’ ಎಂದು ಅದನ್ನು ತೋರಿಸಿದರು. ನಿಮಗೆ ತಿಳಿದಿರುವಂತೆ ಈ Beetle ಗೆ ಎರಡು ಬಾಗಿಲು ಮಾತ್ರ ಇವೆ. ಹಿಂದಿನ ಸೀಟಿನವರು ಇಳಿಯಬೇಕಾದರೆ, ಮುಂದಿನ ಸೀಟಿನ ಬೆನ್ನನ್ನು ಬಗ್ಗಿಸಿ ಇಳಿಯಬೇಕು. ಹಾಗಾಗಿ passengers
ಯಾರಾದರೂ ಮೊದಲು ಇಳಿಯುವರಿದ್ದರೆ, ಅವರು ಮುಂದಿನ ಸೀಟಿನಲ್ಲಿ ಕುಳಿತರೆ ಅನುಕೂಲ. ಅಂತೆಯೇ ನಾನು ಮುಂದಿನ ಸೀಟಿನಲ್ಲಿ ಕುಳಿತು ಕೊಳ್ಳುವುದಕ್ಕೆ ಮುನ್ನ ರಂಗನಾಥನ್ ಅವರು ಹಿಂದಿನ ಸೀಟಿನಲ್ಲಿ ಕೂಡುವರು ಎಂದು ತಿಳಿದು ಅವರಿಗೋಸ್ಕರ ಕಾದು ನಿಂತೆ. ಅದಕ್ಕೆ ಮೈಥಿಲಿಯವರು ‘ನೀವು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಿ, ನನ್ನ ಯಜಮಾನರು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ’ ಎಂದು ಬಿಟ್ಟರು. ‘ಇಷ್ಟು ಹೊತ್ತೂ ಇಲ್ಲದ ಸಂಕೋಚ, ಬಿಗುಮಾನ, ಈಕೆಗೆ ಈಗ ಹೇಗೆ ಬಂತು!’ ಎಂದು ವಿಸ್ಮಿತನಾಗಿ ಹಿಂದಿನ ಸೀಟಿನಲ್ಲೇ ಕುಳಿತೆ. ರಂಗನಾಥನ್ ಅವರು ಮುಂದಿನ ಸೀಟಿನಲ್ಲಿ ಕುಳಿತರು.
ಕಾರನ್ನು ಸ್ಟಾರ್ಟ್ ಮಾಡಿ ರಸ್ತೆಗೆ ಬಂದ ಕೂಡಲೇ, ಮೈಥಿಲಿಯವರು ತಮ್ಮ ಯಜಮಾನರಿಗೆ ‘ಸೆಕೆಂಡ್ ಗೇರ್ ಕು ಪೋಡಂಗೋ’ ಎಂದು ಆದೇಶಿಸಿದರು. ತಕ್ಷಣವೇ ನನಗೆಲ್ಲವೂ ಅರ್ಥವಾಯಿತು. ಶ್ರೀಮತಿಯವರು ಎಷ್ಟು nervous ಎಂದರೆ, ಅವರು steering wheel ಅನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ಎರಡು ಕೈಗಳಲ್ಲಿ ಒಂದನ್ನೂ ಬಿಡಲಾರರು. ಇನ್ನು floor shift gear ಗಳನ್ನು ಬದಲಾಯಿಸಲು ಹೇಗೆ ಸಾಧ್ಯ? ‘ಅವರು clutch ತುಳಿಯುತ್ತಾರೆ, ಪತಿವರ್ಯರು ಗೇರ್ ಬದಲಾಯಿಸುತ್ತಾರೆ, (ಆಗಿನ ದಿನಗಳಲ್ಲಿ ಆಟೋಮ್ಯಾಟಿಕ್ ಕಾರುಗಳು ಬಹು ಅಪರೂಪ) ಭಲೆ!’ ಎಂದು ನಾನು ಅಂದುಕೊಂಡರೂ, ಅವರು ಹಾಸ್ಟೆಲ್ ಸಮೀಪಕ್ಕೆ ಬಂದು ಯಜಮಾನರಿಗೆ ‘ನ್ಯೂಟ್ರಲ್ ಕು ಪೋಡಂಗೋ’ ಎಂದು ಹೇಳುವವರೆಗೂ, ಅದುವರೆಗೂ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡಿದ್ದ ನಾನು ಅವರಿಗಿಂತ ಹೆಚ್ಚು nervous ಆಗಿದ್ದೆ!
ಈ ಸಂಗತಿಯನ್ನು ಒಬ್ಬ ಗೆಳೆಯನಿಗೆ ಹೇಳಿದಾಗ, ಅವನು ಗಹಗಹಿಸಿ ನಕ್ಕು ‘’ಗಂಡ-ಹೆಂಡಿರ ಸಹಕಾರ ಎಂದರೆ ಹೀಗಿರಬೇಕು’ ಎಂದ. ಇನ್ನೊಬ್ಬನು ‘ಇಲ್ಲ, ಇದು ಗಂಡ-ಹೆಂಡಿರ ಅನ್ಯೋನ್ಯತೆಯ ಉದಾಹರಣೆ’ ಎಂದ. ಸಹಕಾರವೋ, ಅನ್ಯೋನ್ಯತೆಯೋ ಒಟ್ಟಿನಲ್ಲಿ team effort ಅಲ್ಲವೇ?
ಇದಪ್ಪ ನಿಜವಾದ ಅನ್ಯೋನತೆ!! ಮೈಥಿಲಿ ಮೇಡಂ ಡ್ರೈವಿಂಗ್ ಶೈಲಿ ಬಗ್ಗೆ ಓದ್ತಾ, ನಿಮಗಿರಲಿ ನಮಗೇ ಭಯವಾಗ್ತಾ ಇತ್ತು!.
ReplyDeleteಹೀಗೂ ಉಂಟೇ ಎನ್ನಿಸಿತು. ಬಹುಶಃ ಮೈಥಿಲಿಯವರ ಮನೆಯಿಂದ ಚೆನ್ನಾಗಿ ಮನಿಥಾಲಿ ಕೂಡ ಬಂದಿರಬೇಕು. ಅದಕ್ಕೆ ಇಲ್ಲಿಗೆ ಬಂದ ಕೂಡಲೇ ಯಜಮಾನತಿ ಪಟ್ಟ. ( ತಮಾಷೆಗೆ ಅಷ್ಟೇ)
ReplyDeleteಗಂಡ ಹೆಂಡತಿ ಸಹಕಾರ ಇದ್ರೆ ತಾನೆ ಜೀವನದಲ್ಲಿ (ಜೀವನ ಪಯಣದಲ್ಲಿ) ಮುಂದೆ ಹೋಗೋದು 😃
ReplyDeleteEnjoyed the article. Have posted it on my FB wall
ReplyDelete