ತುರಂಗಾಂತರ
ಹಾಸ್ಯ ಲೇಖನ - ಅಣಕು ರಾಮನಾಥ್
“ಕುದುರೆಗೆ ಕೊಂಬು ಇದೆಯೆ?”
“ಇದೆ. ಒಂದಲ್ಲ, ಎರಡು – ಕ ಕೊಂಬು ಕು; ದ ಕೊಂಬು ದು.”
ಅಂದೊಮ್ಮೆ ಮಾಸ್ಟರ್ ಹಿರಣ್ಣಯ್ಯನವರ ಕಾರಿನಲ್ಲಿ ರೇಸ್ ಕೋರ್ಸಿನ ಮುಂದೆ ಹಾಯ್ದು ಹೋಗುವಾಗ ಈ ಪ್ರಶ್ನೋತ್ತರ ನೆನಪಾಯಿತು.
“ಸರಿಯೇ. ಆದರೆ ಕುದುರೆಗೆ ಕೊಂಬುಗಳೇ ಬೇಕಾಗಿಲ್ಲ. ಅದರ ಬಾಲಕ್ಕೆ ವಂಶಗಳನ್ನೇ ನಾಶ ಮಾಡುವ ತಾಕತ್ತಿದೆ” ಎಂದರು ಮಾಸ್ಟರ್. Break horse power ಎಂದರೆ ‘ಕುದುರೆಗೆ ಮನೆಯನ್ನೇ ಮುರಿಯುವ ತಾಕತ್ತಿದೆ’ ಎಂಬ ಒಳ ಅರ್ಥ ಇದ್ದರೂ ಇದ್ದೀತು. ರೇಸ್ ಕೋರ್ಸಿನಲ್ಲಿ ಓಡುವುದು ಕೇವಲ ಕುದುರೆಗಳಲ್ಲ, ಹಲವಾರು ಮನೆಗಳ ಆಶಾಸೌಧ!
“ನಾನು ಈ ಕಾಂಪೌಂಡಿನಲ್ಲಿ ಕಳೆದದ್ದನ್ನು ಉಳಿಸಿಕೊಂಡಿದ್ದಿದ್ದರೆ ನನ್ನ ಈಗಿನ ಮನೆಯಂತಹ ನಾಲ್ಕು ಮನೆಗಳನ್ನು ಸದಾಶಿವನಗರದಲ್ಲಿ ಕೊಳ್ಳಬಹುದಿತ್ತು ಸಾರ್” ಎಂದರು ಮಾಸ್ಟರ್ ಹಿರಣ್ಣಯ್ಯ.
“ನಿಮ್ಮ ಮಡದಿ, ಮಕ್ಕಳು ತಕರಾರು ಎತ್ತಲಿಲ್ಲವೆ?”
“ಮಕ್ಕಳು ನನ್ನ ಮುಂದೆ ನಿಲ್ಲುವಷ್ಟು ಬೆಳೆದಿರಲಿಲ್ಲ. ಒಮ್ಮೆ ರೇಸಿನಲ್ಲಿ ಸೋತು, ಹಣವಿಲ್ಲದೆ, ಮರುದಿನ ತಂದುಕೊಡುತ್ತೇನೆಂದು ಹೇಳಿ, ಮನೆಯಿಂದ ಒಂದು ಚೀಲ – ಹೌದು; ಆಗ ನನ್ನ ನಾಟಕಗಳ ಕಲೆಕ್ಷನ್ ರೂಪಾಯಿ ಲೆಕ್ಕದಲ್ಲಿರಲಿಲ್ಲ, ಗೋಣಿ ಚೀಲಗಳ ಲೆಕ್ಕದಲ್ಲಿ – ಹಣವನ್ನು ತೆಗೆದುಕೊಂಡು ಹೆಂಡತಿಯ ಜೊತೆ ಇಲ್ಲಿಗೆ ಬಂದೆ. ಎದುರು ಫುಟ್ಪಾತಲ್ಲಿ ಕಾರ್ ನಿಲ್ಲಿಸಿ “ಕೊಟ್ಟು ಬರ್ತೀನಿ” ಎಂದು ಹೇಳಿ, ಹೋಗಿ ಸಾಲ ತೀರಿಸಿ ಬಂದು “ನಾನು ಇಷ್ಟು ಕಳೆದೆ ಅಂತ ನಿನಗೆ ಬೇಜಾರಿಲ್ಲವೇನು?” ಅಂತ ಹೆಂಡತೀನ ಕೇಳಿದೆ” ಎಂದರು.
“ಬೈದೋ, ಅತ್ತೋ ಮಾಡಿರಬೇಕು” ಎಂದೆ.
“ಊಹೂಂ. ‘ನಾನ್ಯಾಕೆ ಬೇಜಾರು ಮಾಡಿಕೊಳ್ಳಲಿ? ಚೀಲಗಟ್ಟಲೆ ಸಂಪಾದಿಸಿದವರೂ ನೀವೇ, ಖರ್ಚು ಮಾಡ್ತಿರೋದೂ ನೀವೇ. ಮನೆಗೆ, ಮಕ್ಕಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತಿದ್ದೀರಲ್ಲ, ಸಾಕು’ ಎಂದಳು. ನೀವು ಹೇಳಿದಂತೆ ಕೂಗೋ, ಅತ್ತೋ ರಂಪ ಮಾಡಿದ್ದರೆ ನಾನೂ ಡಿಟೋ ಮಾಡುತ್ತಿದ್ದೆನೇನೋ. ಅವಳ ನಿರ್ಲಿಪ್ತತೆ ನನಗೆ ಈ ಕಾಂಪೌಂಡಿನಿಂದ ಮೋಕ್ಷ ದೊರಕಿಸಿತು” ಎಂದರು ಮಾಸ್ಟರ್.
“ನಂಬಿ ಕೆಟ್ಟವರಿಲ್ಲವೋ ಹರಿಯನು” ಎಂಬ ಮಾತಿದೆ. ಆದರೆ ‘ಹರಿ’ ಪದಕ್ಕೆ ಕುದುರೆ ಎಂಬ ಅರ್ಥವನ್ನು ಅನ್ವಯಿಸಿದಾಗ ಮಾತ್ರ ಆ ಮಾತು ಸುಳ್ಳಾಗುತ್ತದೆ. ಅಶ್ವವನ್ನು ನಂಬಿ ಕೆಟ್ಟವರು ಲಕ್ಷಾಂತರ ಜನರಿದ್ದಾರು. ಆದರೆ ಕುದುರೆಯಿಂದ ಫಾಯಿದೆ ಪಡೆದವರೂ ಸಾಕಷ್ಟು ಜನರಿದ್ದಾರೆ.
ವಿಶ್ವಾಮಿತ್ರನ ಶಿಷ್ಯನಾದ ಗಾಲವನು ಗುರುದಕ್ಷಿಣೆಯಾಗಿ ಒಂದು ಕಿವಿ ಕಪ್ಪಗಿರುವ ಎಂಟುನೂರು ಬಿಳಿ ಕುದುರೆಗಳನ್ನು ನೀಡಬೇಕಾಯಿತು. ಗಾಲವನು ರಾಜ ಯಯಾತಿಯ ಮೊರೆ ಹೋದನು. ಯಯಾತಿಯು “ಮಗಳು ಮಾಧವಿಯನ್ನು ಕೊಡುವೆ. ಅವಳ ಮೂಲಕ ಕುದುರೆಗಳನ್ನು ಪಡೆ” ಎಂದನು. ಮಾಧವಿಯು ಮೂರು ರಾಜರು ತಲಾ 200 ಕುದುರೆಗಳನ್ನು ನೀಡಿದುದಕ್ಕೆ ಬದಲಾಗಿ ಅವರವರೊಡನೆ ಜೀವಿಸಿ ಮಗುವನ್ನು ಹೆತ್ತುಕೊಟ್ಟಳು. “ಇನ್ನೂರು ಅಶ್ವಕ್ಕೆ ಒಂದು ವರ್ಷದ ಮದುವೆ, ಒಂದು ಮಗು” ಎಂಬುದು ಪ್ರಾಯಶಃ ಪ್ರಪಂಚದ ಮೊಟ್ಟಮೊದಲ ಎಕ್ಸ್‍ಚೇಂಜ್ ಆಫರ್!
ಕುದುರೆಯಿಂದಲೇ ತಮ್ಮ ಗಾಯನಕ್ಷೇತ್ರದಲ್ಲಿ ಕುದುರಿದವರ ಪೈಕಿ ಶಿವಮೊಗ್ಗ ಸುಬ್ಬಣ್ಣನವರ ಹೆಸರು ಪ್ರಮುಖವಾದುದು. ಅವರ “ಕಾಡು ಕುದುರೆ ಓಡಿ ಬಂದಿತ್ತಾ...” ಹಾಡನ್ನು ಕೇಳುತ್ತಿದ್ದರೆ ನಮ್ಮೆದುರೇ ಕುದುರೆಯು ಓಡುತ್ತಿರುವಂತೆ ಭಾಸವಾಗುತ್ತದೆ.
“ಸುಬ್ಬಣ್ಣನವರು ಹಾಡಿದ್ದು ಕಾಡುಕುದುರೆಯ ಬಗ್ಗೆ. ರೇಸುಕುದುರೆಯ ಹಾಡು ಗೊತ್ತಾ ನಿನಗೆ?” ಎಂದ ಸೀನು. ನಾನು ವದನದ್ವಿಪಾರ್ಶ್ವಾಸನವನ್ನು ಹಾಕಿದೆ. (ಎಂದರೆ ತಲೆಯನ್ನು ಅಡ್ಡಡ್ಡಲಾಗಿ ಗೊತ್ತಿಲ್ಲವೆಂದು ಆಡಿಸುವುದು).
ರೇಸು ಕುದುರೆ ಓಡತೊಡಗಿತ್ತಾ...
ಊರಮಧ್ಯೆ ನೂರು ಮಂದಿ ಸೇರುವಂಥ ಜಾಗದಲ್ಲಿ
ಊರ ಆಸ್ತಿಪಾಸ್ತಿ ಮಾರಿ ಬಂದ ಜನರ ಮುಂದಿನಲ್ಲಿ
ಏರಿಕೊಂಡ ಜಾಕಿಯನ್ನು ಮೇಲೆಕೆಳಗೆ ಹಾರಿಸುತ್ತಾ
ರೇಸಿನ ಕುದುರೆ ಮುಂದಡಿ ಇಟ್ಟಿತ್ತಾ...
ರೇಸುಕುದುರೆ ಓಡತೊಡಗಿತ್ತಾ...
ಆಹಾ! ಭಲೆ ಭಲೆ ಭಲೆ ಭಲೇ!
ಕಣ್ಣಿನಾಗ ಕನ್ಸ ಕಟ್ಟಿ ಕುಂತವ್ರ್ ಕೂಗು ಮುಗಿಲೇರಿತ್ತ
ಕಣ್ಣಿ ಕಿತ್ತ ಹೋರಿ ಹಾಂಗ ಹಾರ್ಹಾರುತ್ತಾ ಓಡುತ್ತಿತ್ತಾ
ಝಣ್ಣಝಣನೆ ಹಣ ಸೇರಿತ್ತ ರೇಸು ಕೋರ್ಸು ರಂಗೇರಿತ್ತಾ
ಫಿನಿಷಿಂಗ್ ಲೈನೆಡೆ ಕುದುರೆಯ ದೌಡಿತ್ತಾ...
ರೇಸು ಕುದುರೆ ಓಡತೊಡಗಿತ್ತಾ...
ಎಂದು ಹಾಡಿದ ಸೀನು, “ಹಾರ್ಸ್‍ಗೂ ನಮ್ಮ ಇತಿಹಾಸಕ್ಕೂ ಒಳ್ಳೆಯ ಕನೆಕ್ಷನ್ ಇದೆ” ಎಂದ ಸೀನು.
“ಏನದು?”
“ಗುಡ್ ಓಲ್ಡ್ ಕಾಲದ ರಾಜರು/ವೀರರು ಹುಡುಗಿಯರನ್ನ ಹಾರಿಸಿಕೊಂಡು ಹೋಗಕ್ಕೆ ಬಳಸ್ತಿದ್ದದ್ದು ಹಾರ್ಸ್‍ನೇ!”
ಕುದುರೆಯ ಪರ್ಯಾಯ ಪದಗಳ ಪೈಕಿ ಹಯ ಎನ್ನುವುದೂ ಒಂದು. ಇಂತಹ ಒಂದು ಪದವಿದೆ ಎಂದು ತಿಳಿಯದೆಯೂ ಇಂದಿನ ಸೆಲ್‍ಫೋನ್ ಸಂಭಾಷಣಕಾರರು “ha; ya” ಎಂದು ಬಳಸುತ್ತಲೇ ಇರುತ್ತಾರೆ. ನನ್ನ ಸ್ನೇಹವಲಯದಲ್ಲಿ ಹಯಗ್ರೀವಾಚಾರ್ ಎಂಬುವರೊಬ್ಬರಿದ್ದರು. ಅವರ ಜೀವನದಲ್ಲಿ ಎಲ್ಲವೂ ಕುದುರಿದ್ದರೂ ಹಯದ ಲವಲವಿಕೆ ಅವರಲ್ಲಿ ಎಂದಿಗೂ ಕಂಡುಬರಲಿಲ್ಲವಾದ್ದರಿಂದ ಅವರಿಗೆ ನಾನು ‘High grief Achar’ ಎಂದೇ ಮರುನಾಮಕರಣ ಮಾಡಿದ್ದೆ. ಹಾಗೆ ಕರೆದಾಗ ಮಾತ್ರ ಅವರು ನಮ್ಮ ಸಿಹಿಕಹಿ ಚಂದ್ರುರವರು ಹೊಸರುಚಿಯನ್ನು ತಿಂದು ಮೆಚ್ಚುಗೆಯ ಧ್ವನಿಯನ್ನು ಹೊರಡಿಸುವ ಧ್ವನಿಯಲ್ಲೇ ಕೆನೆಯುತ್ತಿದ್ದರು.
ಇತಿಹಾಸಕ್ಕೂ ಕುದುರೆಗೂ ನಂಟಿದೆಯೆಂಬುದು ವಿದಿತವೇ. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲ. ಮೈಸೂರು ರಾಜ್ಯ. ತಮ್ಮ ಆಡಳಿತಾಧಿಕಾರದ ಪ್ರದೇಶಗಳ ‘ಸರ್ಕೀಟ್’ ಮಾಡಲು (ಹಲವಾರು ಹಳ್ಳಿಗಳ ಲೆಕ್ಕ ಪರಿಶೋಧನೆಯನ್ನು ಕೈಗೊಳ್ಳಲು ನೀಡುವ ಭೇಟಿಗೆ ಸರ್ಕೀಟ್ ಎನ್ನುತ್ತಿದ್ದರು) ಬ್ರಿಟಿಷ್ ಮೇಲಧಿಕಾರಿಗಳು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಹಾಗೆ ಭೇಟಿ ನೀಡಿದಾಗ ಅಮಲ್ದಾರರ ಕಚೇರಿಯಲ್ಲಿರುವ ಅನೇಕ ಹುದ್ದೆಗಳವರು ಕುದುರೆ ಸವಾರಿ ಕಲಿತಿರಬೇಕೆಂಬ ನಿಯಮವಿದ್ದರೂ ಕುದುರೆಯಿಂದ ದೂರವೇ ಉಳಿದಂತಹ ಊಳಿಗದವರೂ ಇರುತ್ತಿದ್ದರು.
ಒಮ್ಮೆ ಅಂತಹ ಸಿಬ್ಬಂದಿಗೆ ಬ್ರಿಟಿಷ್ ಅಧಿಕಾರಿಯೊಡನೆ ಸವಾರಿ ಹೋಗುವ ಪ್ರಸಂಗ ಒದಗಿತು. ‘ಸವಾರಿ ಗೊತ್ತಿಲ್ಲ’ ಎಂದರೆ ರಿಮಾರ್ಕ್ ಆಷ್ಟೇ ಅಲ್ಲದೆ ವರ್ಗವೋ, ಉಚ್ಚಾಟನೆಯೋ ಆಗುವ ಭೀತಿ. ‘ಗೊತ್ತಿದೆ’ ಎಂದರೆ ‘ಹತ್ತಿ ಕುದುರೆ’ ಎನ್ನುತ್ತಾರೆ. ಸಿಬ್ಬಂದಿಯು ಅಧಿಕಾರಿಗಳನ್ನು ಕುರಿತು “ತುಂಬಾ ಹೊಟ್ಟೆನೋವು ಸರ್. ಸವಾರಿ ಮಾಡಿದರೆ ಇನ್ನೂ ಹೆಚ್ಚಾಗುತ್ತದೆ” ಎಂದು ಗದ್ಗದ ಕಂಠಿಯಾದ.
“ಬ್ರಿಟಿಷ್ ಸಾಮ್ರಾಜ್ಯದ ಸೇವೆಯಲ್ಲಿ ತೊಡಗಿರುವವನಿಗೆ ಅನಾರೋಗ್ಯವೆಂದರೇನು? ಇದನ್ನು ನಾವು ಹಾಗೆಯೇ ಬಿಡುವಂತಿಲ್ಲ. ನಡೆಯಿರಿ ದವಾಖಾನೆಗೆ ಹೋಗೋಣ’ ಎಂದು ಜೊತೆಯಲ್ಲೇ ನಡೆಸಿಕೊಂಡು ಹೋದರು ಅಧಿಕಾರಿಗಳು. ಆಸ್ಪತ್ರೆಯನ್ನು ತಲುಪುತ್ತಿದ್ದಂತೆಯೇ ಕಾಂಪೌಂಡರನ್ನು ಕರೆದು “ಇವರಿಗೆ ಕೂಡಲೆ ಒಂದು ಬಟ್ಟಲು ಹರಳೆ ಎಣ್ಣೆ ತಂದುಕೊಡು” ಎಂದು ಆಜ್ಞಾಪಿಸಿದರು.
ಹರಳೆಣ್ಣೆ ಬಂದಿತು. ಕಹಿಕಹಿಯಾದ ಹರಳೆಣ್ಣೆಯನ್ನು ಹೊಟ್ಟೆನೋವಿಲ್ಲದೆಯೂ ಕುಡಿಯಲೇಬೇಕಾಯಿತು. ಕೊಂಚ ಸಮಯದ ನಂತರ ಅಧಿಕಾರಿಗಳು “ಈಗ ಹೇಗಿದೆ?” ಎಂದರು.
“ಪರವಾಯಿಲ್ಲ ಸಾರ್. ಅರ್ಧ ವಾಸಿಯಾಗಿದೆ.”
“ಒಂದು ಬಟ್ಟಲು ಹರಳೆಣ್ಣೆಗೆ ಅರ್ಧ ವಾಸಿಯಾಗಿದೆ ಎಂದರೆ ಎರಡು ಬಟ್ಟಲಿಗೆ ಪೂರ್ಣ ವಾಸಿಯಾಗುತ್ತದೆ. ಕಾಂಪೌಂಡರ್, ಇನ್ನೊಂದು ಬಟ್ಟಲು!”
ಬಟ್ಟಲು ಬಂದಿತು. ಸೇವನೆಯಾಯಿತು. ಸಿಬ್ಬಂದಿಯು ನಿಜವಾದ ಹೊಟ್ಟೆನೋವಿದ್ದರೆ ಎಷ್ಟರಮಟ್ಟಿಗೆ ಮುಖವನ್ನು ಕಿವುಚಿಕೊಳ್ಳುತ್ತಿದ್ದನೋ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಹರಳೆಣ್ಣೆಯನ್ನು ಸೇವಿಸುವಾಗ ಕಿವುಚಿಕೊಂಡನು. ಆರೋಗ್ಯದಿಂದಿರುವವನಿಗೆ ಹರಳೆಣ್ಣೆ ನೋವಿಗಿಂತಲೂ ಕಹಿಯಲ್ಲವೇ!
ಹರಳೆಣ್ಣೆಯ ಕಡೆಯ ತೊಟ್ಟು ಮುಗಿಯುವವರೆಗೂ ಕಾದಿದ್ದ ಅಧಿಕಾರಿಗಳು “ನೀವೇ ಹೇಳಿ, ಎರಡು ಬಟ್ಟಲು ಹರಳೆಣ್ಣೆ ಕುಡಿಯುವುದಕ್ಕಿಂತ ಕುದುರೆ ಸವಾರಿ ಕಲಿಯುವುದು ಸುಲಭವಲ್ಲವೆ?” ಎನ್ನುತ್ತಾ ನಗಾಡಿದರು. ಸಿಬ್ಬಂದಿ ಇಂಗು ತಿಂದ ಮಂಗನಾದ.
ಕುದುರೆಗಳನ್ನು ಕುರಿತ ಹಲವು ಪದಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ‘ಕಲಿತ್ತ ಹುಡುಗಿ’ ಹಾಕುವುದು ‘ಕುದುರೀ ನಡಿಗಿ’ಯಂತೆ. ಮಠಗಳಲ್ಲಿ ಬಾಯಿ ಚಪ್ಪರಿಸುವಂತೆ ತಯಾರಿಸುವ ಸಿಹಿತಿನಿಸಿನ ಹೆಸರು ಹಯಗ್ರೀವವಂತೆ. ಹೆಂಗಳೆಯರು ಮಾಡಿಕೊಳ್ಳುವ ಕೇಶವಿನ್ಯಾಸವೊಂದನ್ನು ‘ಪೋನಿ ಟೈಲ್’ ಎನ್ನುತ್ತಾರೆ. ಕೇಶರಾಶಿಯೇ ‘ಪೋತೇ ಪೋನಿ’ ಎನ್ನುವ ಕಾಲದಲ್ಲಿಯೂ ಪೋನಿ ಟೈಲ್‍ಗಳು ಅಲ್ಲಲ್ಲಿ ಕಾಣಬರುತ್ತವೆ. ‘Eat like a horse and work like a donkey’ ಎನ್ನುವುದು makes horse sense.
ಕುದುರೆ ಹಲವಾರು ಯುದ್ಧಗಳಲ್ಲಿ ಸವಾರನ ಜೀವ ಉಳಿಸಿರುವುದುಂಟು. ಈಗಲೂ ಉತ್ತರಭಾರತದ ಹುಡುಗರಿಗೆ ‘ಎಲ್ಲಾದರೂ ಹೋಗಿ ಬದುಕಿಕೋ ಹೋಗ್’ ಎಂದು ಕಡೆಯ ಅವಕಾಶ ನೀಡಲೋ ಎನ್ನುವಂತೆ ವರನಿಗೆ ಕುದುರೆಯನ್ನು ಕೊಡುತ್ತಾರೆ. ಆದರೆ ಅಂತಹ ಅವಕಾಶಗಳನ್ನು ವರನು ಉಪಯೋಗಿಸಿಕೊಂಡಿದ್ದು ಕಾಣೆ.
Enough of horsing around ಎಂದು ನೀವು ಹೇಳುವುದಕ್ಕೆ ಮುನ್ನ ಲೇಖನವನ್ನು ಮುಗಿಸುತ್ತಿದ್ದೇನೆ. ಈ ಲೇಖನದ ಗುಣಾವಗುಣಗಳನ್ನು ನೋಡಬೇಡಿರೆಂದು ವಿನಂತಿಸುತ್ತೇನೆ. ಏಕೆಂದರೆ You must not look a gift horse in the mouth!
Comments
Post a Comment