ಜಯದ ಹಾದಿಯಲಿ ....

ಜಯದ   ಹಾದಿಯಲಿ .... 

ಲೇಖನ - ಅನು  ಶಿವರಾಮ್ 

ತಂದೆಯವರ ನಿಧನದ  ತಿಂಗಳ ನಂತರ ತಾಯಿಯನ್ನು  ಒಬ್ಬರನ್ನೇ ಒಂಟಿಯಾಗಿ ಬಿಟ್ಟು ಹೋಗಲು  ಹೆಣ್ಣು ಮಕ್ಕಳಿಬ್ಬರಿಗೂ ಅಳುಕು, ಸಂಕಟ. ಎಷ್ಟೇ ಅನುನಯದಿಂದ ಕರೆದರೂ  ವಿಜಯಮ್ಮನವರು ತಮ್ಮ  ಮಕ್ಕಳ ಮನೆಗೆ ಹೋಗಲು  ಒಪ್ಪಲಿಲ್ಲ.

“ನಿಮ್ಮ ಆಫೀಸು, ಸಂಸಾರ, ನಿಮ್ಮ ಮಕ್ಕಳು ಮರಿ, ಬಂದು ಹೋಗುವವರು ಅಂತ ನಿಮ್ಮದೇ ಹಾಸಿ ಹೊದೆಯುವಷ್ಟು ಜವಾಬ್ದಾರಿ ಇದೆ. ನಿಮಗೆ ಜೊತೆಗೆ ನನ್ನದೊಂದು ತಲೆನೋವು ಯಾಕೆ? ನನಗೆ ಈ ಮನೆ ಐವತ್ತು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಸುತ್ತ ಮುತ್ತ ಎಲ್ಲ  ಸ್ನೇಹದಿಂದ ಇದ್ದಾರೆ. ಶಾರದ  ಮಗಳಿಗಿಂತ  ಪ್ರೀತಿಯಾಗಿ ಅಡಿಗೆ ಮಾಡಿ ಬಡಿಸುತ್ತಾಳೆ, ದಯವಿಟ್ಟು  ನನ್ನನು ಬಲವಂತ  ಮಾಡಬೇಡಿ” ಎಂದರು. 

ಮಕ್ಕಳ ಮುಖ  ಸಪ್ಪೆಯಾಗಿದ್ದು ನೋಡಿ  ಅವರೇ  ಸಮಾಧಾನ  ಮಾಡಿದರು.” ಈಗೇನು  ಟೆಕ್ನಾಲಜಿ  ಎಷ್ಟೊಂದು  ಮುಂದುವರದಿದೆ. ದಿನಾ  ವಿಡಿಯೋ ಕಾಲ್  ಮಾಡಿದರಾಯ್ತು. ಟೆಲಿಫೋನ್, ಇದ್ದೇ ಇದೆ, ಬೇಕಾದಾಗ ಮಾತಾಡಬಹುದು.  ಒಬ್ಬಳೇ ಇದ್ದೀನಿ ಅಂತ ನನಗೆ ಅನ್ನಿಸೋದೇ ಇಲ್ಲ. ನೀವೇನು ಯೋಚನೆ ಮಾಡಬೇಡಿ,” ಎಂದು ಅವರೇ ಧೈರ್ಯ ಹೇಳಿದರು. 

ತೊಂಬತ್ತರ ಹತ್ತಿರವಾದರೂ ಆಕೆ  ನಿಯಮಿತ ಯೋಗಾಭ್ಯಾಸ, ಧ್ಯಾನ,ಅಧ್ಯಯನ, ಶಿಸ್ತು, ಸಂಯಮದ ಜೀವನಶೈಲಿಯಿಂದ  ತಮ್ಮ  ಮೈ- ಮನಸುಗಳನ್ನು ಆರೋಗ್ಯವಾಗಿ ಇಟ್ಟುಕೊಂಡಿದ್ದರು. ಅಷ್ಟೇ  ಅಲ್ಲ, ವಯಸ್ಸು ಆಯ್ತು ಎಂದು ಅಸಡ್ಡೆ  ಮಾಡದೇ, ಹೊಸ ವಿಷಯಗಳನ್ನು, ಹೊಸ ತಂತ್ರಜ್ಞಾನವನ್ನು ಆಸಕ್ತಿಯಿಂದ  ಕಲಿಯುತ್ತಿದ್ದರು. 



ತಾವೇ ಕಲಿತು Whatsapp, facebook ನಲ್ಲಿ  ಮೊಮ್ಮಕ್ಕಳೊಡನೆ ಸಂಭಾಷಸುತ್ತಿದ್ದ  ಅಜ್ಜಿ ಎಂದರೆ ಮೊಮ್ಮಕ್ಕಳಿಗೆ ಅಪರಿಮಿತ  ವಿಸ್ಮಯ, ಗೌರವ. “ ನಿಮ್ಮ ಅಮ್ಮ  ನಿಮಗಿಂತ ಸ್ಮಾರ್ಟ್ ಗೊತ್ತ,” ಎಂದು ಸಮಯ ಸಿಕ್ಕಾಗ  ತಮ್ಮ ಅಮ್ಮಂದಿರನ್ನು  ಹಂಗಿಸದೇ  ಬಿಡುತಿರಲಿಲ್ಲ.

ತಮ್ಮ  ಜೀವನವಿಡೀ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಕೆಮಿಸ್ಟ್ರಿ  ಪಾಠ ಹೇಳಿದ  

ವಿಜಯಮ್ಮನವರು  ಪಠ್ಯ ಪುಸ್ತಕದಾಚೆಗಿನ  ಜೀವನ ಮೌಲ್ಯಗಳನ್ನು, ದೇಶಪ್ರೇಮವನ್ನು, ಸ್ವಾಭಿಮಾನವನ್ನು, ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಿದ್ದರು. 

ಹೆಣ್ಣು ಮಕ್ಕಳ  ವಿದ್ಯಾಭ್ಯಾಸದ  ಬಗ್ಗೆ  ಅವರಿಗೆ  ವಿಪರೀತ ಕಾಳಜಿ . ಅವರೇ  ಫೀಸ್ ಕೊಟ್ಟು  ಓದಿಸಿದ   ಎಷ್ಟೋ  ಹುಡುಗಿಯರು ಇಂದು ಉನ್ನತ  ಹುದ್ದೆಯಲ್ಲಿದ್ದಾರೆ. ಆದರ, ಗೌರವಗಳಿಂದ ತಮ್ಮ ಪ್ರೀತಿಯ ವಿಜಯ ಮೇಡಮ್ ಅವರನ್ನು ನೆನೆಸುತ್ತಾರೆ.

ವಿಜಯಮ್ಮನವರದು  ಸದಾ  ಕ್ರಿಯಾಶೀಲ  ಮನಸ್ಸು, ಪರೋಪಕಾರ  ಪ್ರವೃತ್ತಿ. ಒಮ್ಮೊಮ್ಮೆ  ಒಳ್ಳೆಯ ಉದ್ದೇಶದಿಂದ ಸಹಾಯ ಮಾಡಲು ಹೋಗಿ ತಾವೇ  ಪೇಚಿಗೆ  ಸಿಕ್ಕಿರುವುದೂ ಉಂಟು. ಹಾಗಂತ  ತಾವು ಸರಿಯೆಂದು ನಂಬಿದ ಯಾವುದನ್ನೂ  ಬಿಡದ ದಿಟ್ಟತನ! ಸ್ವಲ್ಪ  ಭಂಡತನವೂ ಹೌದು!

ವಿಜಯಮ್ಮ  ಒಂಭತ್ತು ಮಕ್ಕಳಲ್ಲಿ  ಮಧ್ಯದವರಾಗಿ ಹುಟ್ಟಿದರು  ಮಲೆನಾಡಿನ ಚಿಕ್ಕಮಗಳೂರಿನಲ್ಲಿ. ಮನೆಯಲ್ಲಿ ಹೆಚ್ಚಿನ  ಸಿರಿವಂತಿಕೆ ಇಲ್ಲದೆ ಇದ್ದರೂ, ಸಂಸ್ಕೃತಿ, ಸಹಕಾರ, ನೆಮ್ಮದಿಗಳ ಸಮೃಧಿ  ಇತ್ತು. ತಮ್ಮ ಮಕ್ಕಳ  ಜೊತೆ ವಾರಾನ್ನದ  ಹುಡುಗರಿಗೂ  ಪ್ರೀತಿಯಿಂದ ಅಡಿಗೆ ಮಾಡಿ ಬಿಸಿ ಬಿಸಿಯಾಗಿ ಬಡಿಸುತ್ತಿದ್ದರು ಅವರ ತಾಯಿ ಜಾನಕಮ್ಮನವರು.  

ಬಾಲ್ಯದಿಂದಲೂ  ಒಡಹುಟ್ಟಿದವರಲ್ಲಿ  ಪರಸ್ಪರ ತುಂಬಾ  ಪ್ರೀತಿ ವಿಶ್ವಾಸ; ಹಿರಿಯರಲ್ಲಿ ಆದರ, ಕಿರಿಯವರಲ್ಲಿ ಅಕ್ಕರೆ. ಜೀವನವಿಡೀ  ಶಿಕ್ಷರಾಗಿದ್ದ ವಿಜಯಮ್ಮನವರಿಗೆ  ತಮ್ಮ ಇಬ್ಬರು ತಮ್ಮಂದಿರು ಹಾಗೂ ಪ್ರೀತಿಯ ತಂಗಿಯ ಬಗ್ಗೆ ವಿಶೇಷ ವಾತ್ಸಲ್ಯ ಹಾಗೂ        ಹಿರಿಯಕ್ಕನಾಗಿ  ಒಂದು ರೀತಿಯ ಜವಾಬ್ದಾರಿ.

ರಾಜು (ರಾಜಶೇಖರ), ಅವರ  ಬೆನ್ನಿಗೆ ಬಿದ್ದ ತಮ್ಮ, ಎರಡು ವರ್ಷ ಚಿಕ್ಕವನಷ್ಟೆ.ಬಾಲ್ಯದಿಂದಲೂ ಅವರಿಬ್ಬರ ಜೋಡಿ ಅಯ್ಯನ ಕೆರೆಯಲ್ಲಿ ಬಟ್ಟೆ  ಒಗೆಯುವ ನೆಪದಲ್ಲಿ ಗಂಟೆ ಗಟ್ಟಲೆ  ಈಜುವುದು, ಗೌಡರ ತೋಟದಿಂದ  ಸೀಬೆ ಹಣ್ಣು ಕದಿಯುವುದು,ಜೋಗದ ಜಲಪಾತದ ಬುಡಕ್ಕೆ ಇಳಿಯುವುದು, ಬಾಬಾಬುಡನ್ ಗಿರಿಯ ಶಿಖರ ಹತ್ತುವುದು, ಬೆಳೆದಿಂಗಳೂಟದ  ಕೈತುತ್ತಿಗೆ ಸರತಿ ಮರೆಸಿ ಕೈ ಒಡ್ಡುವುದು  ಇತ್ಯಾದಿ ತರಲೆ ಕೆಲಸಗಳಿಗೆ  ಹೆಸರುವಾಸಿಯಾಗಿತ್ತು!

ಬೆಳೆದು ದೊಡ್ಡವರಾಗಿ ತಮ್ಮ,  ತಮ್ಮ  ಉದ್ಯೋಗ, ಸಂಸಾರಗಳ ಜವಾಬ್ದಾರಿ  ಹೊತ್ತಾಗಲೂ ಅಕ್ಕ–ತಮ್ಮರ  ಈ ಬಂಧನ ಬಿಗಿಯಾಗಿಯೇ ಬೆಸೆದಿತ್ತು. ತಮ್ಮನ ಮಗ ರಸ್ತೆ  ಅವಘಡದಲ್ಲಿ   ಅಕಾಲ  ಮರಣಕ್ಕೆ ತುತ್ತಾದಾಗ  ಮಮ್ಮಲ ಮರುಗಿತ್ತು              ವಿಜಯಮ್ಮನವರ  ಹೃದಯ. ಮಗನ  ಬದಲು  ಸೊಸೆ  ತಮ್ಮನ  ಕುಟುಂಬಕ್ಕೆ  ಆಸರೆಯಾಗಿ ನಿಂತು ಅತ್ತೆ, ಮಾವನ  ಆರೈಕೆ ಮಾಡಿದಾಗ ಅವರಿಗೆ  ಅಚ್ಚರಿ, ಸಂತಸ ಮತ್ತು ಅಪಾರ ನೆಮ್ಮದಿ! ಮಗನ  ಕೊರಗಿನಲ್ಲೇ  ಪತ್ನಿಯೂ ಕಾಲವಶವಾದಾಗ  ತಮ್ಮನಿಗೆ  ಸಾಂತ್ವನ ನೀಡಿ  ಅವನ ಒಂಟಿತನದ  ದುಖ ಹಂಚಿಕೊಂಡರು. 

ಕಾಲಚಕ್ರ ಉರುಳಿ ಅಕ್ಕ ತಮ್ಮ  ಇಬ್ಬರೂ ವಯೋವೃದ್ಧರಾದಂತೆ  ಓಡಾಟ ಕಡಿಮೆಯಾಯಿತು , ಪರಸ್ಪರ  ಭೇಟಿಯಾಗುವುದೂ ಕಷ್ಟವಾಗತೊಡಗಿತು.       ವಿಜಯಮ್ಮ  ತಮ್ಮನ್ನು  ಪ್ರಾಣಕ್ಕಿಂತ    ಹೆಚ್ಚಾಗಿ  ಪ್ರೀತಿಸುತ್ತಿದ್ದ  ಪತಿಯ  ವಿಯೋಗದಿಂದ  ಖಿನ್ನರಾದರು.

 ಅದೇ  ಸಮಯಕ್ಕೆ  ರಾಜುವಿನ ಕಾಲಿನ ಸ್ನಾಯುಗಳಲ್ಲಿ ಬಲ  ಕಡಿಮೆಯಾಗಿ, ನಿಲ್ಲುವುದು, ಮನೆಯಲ್ಲೇ ನಡೆದಾಡುವುದು  ಸಹ  ಕಷ್ಟವಾಗತೊಡಗಿತು. ಕೆಳಗೆ ಬಿದ್ದರೆ  ಅವರನ್ನು ಎಬ್ಬಿಸುವುದು ತುಂಬಾ  ಕಷ್ಟವಾಗುತಿತ್ತು.  ವಿಧಿ  ಇಲ್ಲದೆ ಸೊಸೆ  ಅವರನ್ನು  ವೃದ್ಧಾಶ್ರಮ ಸೇರಿಸುವ ನಿರ್ಧಾರ ಮಾಡಬೇಕಾಯಿತು. 

ತಾವೇ  ನಿಂತು ಹೆಮ್ಮೆಯಿಂದ  ಕಟ್ಟಿಸಿದ ದೊಡ್ಡ  ಮನೆ, ಪರಿಚಿತ ರಸ್ತೆ, ಜನರು, ಪ್ರೀತಿಯ ಸೊಸೆ, ಮುದ್ದಿನ  ಮೊಮ್ಮಗಳು ಎಲ್ಲರನ್ನೂ  ಬಿಟ್ಟು ಕಾಣದ ಹೊಸ ಪರಿಸರ, ಅಪರಿಚಿತ  ವೃದ್ಧಾಶ್ರಮಕ್ಕೆ ಹೋಗಬೇಕಾದ ಯೋಚನೆಯೇ  ರಾಜುವನ್ನು ಕಂಗೆಡಿಸಿತ್ತು. ಹಗಲೂ ಇರುಳೂ ಊಟ, ನಿದ್ದೆ   ಬಿಟ್ಟು  ಕೊರಗತೊಡಗಿದರು. ಮನೆಯಲ್ಲೇ ಆರೈಕೆ ಮಾಡುವ  ಹುಡುಗರನ್ನು ಇಟ್ಟುಕೊಂಡು ಹದಿ ಹರೆಯದ ಮೊಮ್ಮಗಳ್ಳಿದ್ದ ಮನೆಯಲ್ಲಿ  ಆಗಿದ್ದ  ಕಹಿ ಅನುಭವಗಳು ಅವರ  ನೆನಪಿನಲ್ಲಿ  ಇನ್ನೂ  ಹಸಿಯಾಗಿತ್ತು, ಹಾಗಾಗಿ ಮತ್ತಷ್ಟು ಅಧೀರರಾದರು.

ತಮ್ಮನ  ಸಂಕಟ, ಅವನ  ಹತಾಶೆ, ಅರ್ಥವಾಯ್ತು ವಿಜಯಮ್ಮನಿಗೆ.ತಮಗೆ ಪರಿಚಯವಿದ್ದ physiotherapist  ರಮ್ಯಾ ಅವರೊಡನೆ ಸಮಾಲೋಚಿಸಿದರು. ನಿಯಮಿತ ವ್ಯಾಯಾಮ ಹಾಗೂ ಅಭ್ಯಾಸದಿಂದ  ಕಾಲುಗಳಲ್ಲಿ ಬಲ ಬರುವ  ಸಾಧ್ಯತೆ ಇದೆ ಎಂದು ಆಕೆ ಆಶ್ವಾಸನೆ ಕೊಟ್ಟರು. ಯಾರ  ವಿರೋಧವನ್ನೂ  ಲೆಕ್ಕಿಸದೆ  ಧೈರ್ಯದಿಂದ  ತಮ್ಮ  ಮನೆಗೆ  ಕರೆದುಕೊಂಡು  ಬಂದರು! ಸಹಾಯಕ್ಕೆ ಒಬ್ಬ  ಹುಡುಗನನ್ನೂ ಗೊತ್ತುಮಾಡಿದರು. 

ಎಂಬತ್ತೇಳರ ತಮ್ಮನಿಗೆ  ಎಂಬತೊಂಬತ್ತು ವಯಸಿನ ಅಕ್ಕ ಒತ್ತಾಸೆಯಾದರು. ತಮ್ಮನ ಊಟ, ಉಪಚಾರಗಳನ್ನು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಾ ಅವನ ಚಿಕಿತ್ಸೆಯಲ್ಲಿ , ವ್ಯಾಯಾಮದಲ್ಲಿ ಸಂಪೂರ್ಣವಾಗಿ ಜೊತೆಗೆ ನಿಂತರು              ವಿಜಯಮ್ಮನವರು. 

ಸಂಪೂರ್ಣ  ಕುಗ್ಗಿ ಹೋಗಿದ್ದ  ತಮ್ಮನ ಜೊತೆ ಕುಳಿತು ಗೀತೆ, ಉಪನಿಷತ್ಗಳ ಸಾರವನ್ನು ಚರ್ಚಿಸುತ್ತಾ , ಹೇಳುತ್ತಿದ್ದರು , ’ಧೈರ್ಯವಾಗಿ  ಇರಬೇಕು  ಕಣೋ. ದಾಸರು ಹೇಳಿದಂತೆ ಈಸಬೇಕು ಇದ್ದು ಜಯಿಸಬೇಕು,ಕೊನೆ ಉಸಿರು ಇರುವವರೆಗೂ ಸ್ವತಂತ್ರರಾಗಿ, ಸಂತೋಷದಿಂದ ಬಾಳುವ  ಯತ್ನ ಮಾಡಬೇಕು. ಮಾನವ ಜನ್ಮ  ದೊಡ್ಡದು, ಅದನ್ನು  ಹಾಳು ಮಾಡಬಾರದು. ಮನಸಿದ್ದಲ್ಲಿ ಮಾರ್ಗವಿದ್ದೇ  ಇದೆ.” ಎಂತವರನ್ನೂ ಹುರಿದುಂಬಿಸುವ ಮಾತುಗಳನ್ನು  ಆಡುತ್ತಾ   ತಮ್ಮನ  ದುಃಖವನ್ನು ಮರೆಸಿದ್ದರು ಆಕೆ  ತಮ್ಮ ಅಪಾರ ದುಃಖವನ್ನು ಬದಿಗೊತ್ತಿ. 

ದೇವರ ದಯೆಯೋ, ಸತತ  ಯತ್ನದ ಫಲವೋ , ಚಿಕಿತ್ಸಕರ ಕೈಗುಣವೋ, ಸ್ವತಂತ್ರರಾಗಿ ನಡೆಯಬೇಕೆಂಬ ಹಂಬಲವೋ,  ಅಕ್ಕನ ಅಕ್ಕರೆಯ ಹಾರೈಕೆಯೋ ಅಂತೂ ನಾಲ್ಕು  ವಾರಗಳ ನಿರಂತರ ಪ್ರಯತ್ನದ ನಂತರ ರಾಜು  ನಡೆದಾಡುವಂತಾಯಿತು. ತಮ್ಮ ದೈನಂದಿನ ಚಟುವಟಿಕೆಗಳನ್ನು ತಕ್ಕ ಮಟ್ಟಿಗೆ ಮಾಡುವಂತಾದರು. 

ತಮ್ಮನಿಗೆ ಔತಣದೂಟ ಮಾಡಿಸಿ ಸoಭ್ರಮದಿಂದ ಅವನ ಮನೆಗೆ ಕಳಿಸಿಕೊಟ್ಟರು            ವಿಜಯಮ್ಮ, ಅವನಿಗೆ ಜಯದ ಹಾದಿಯ ತೋರಿಸುತ್ತಾ...... 


Comments

  1. ಬಹಳ ಮನಸ್ಪರ್ಶಿಯಾದ ನಿರೂಪಣೆ. ನಿಮ್ಮ ಮಾತೃಶ್ರೀಯವರು ತಮ್ಮ ಒಲವು ಮತ್ತು ಸ್ಥೈರ್ಯದಿಂದ ಅವರ ತಮ್ಮನ ಸ್ವಾಸ್ಥ್ಯವನ್ನು ಸುಧಾರಿಸಿದ್ಧು ಮಿಕ್ಕೆಲ್ಲರಿಗೂ ಮಾದರಿಯಾಗಿದೆ.

    ReplyDelete
  2. ಧನ್ಯವಾದಗಳು ಮಧುಜೀ. ನಮ್ಮ ದೇಶದಲ್ಲಿ ಇಂತಹ ತಾಯಂದಿರು ಎಷ್ಟೋ ಮಂದಿ!

    ReplyDelete
  3. ಸೋದರಿಯರ ವಾತ್ಸಲ್ಯ ಕೆಲವೊಮ್ಮೆ ಮಾತೃ ಪ್ರೇಮಕ್ಕಿಂತಲೂ ಮಿಗಿಲು ಎನ್ನಬಹುದು. ಈ ವಾತ್ಸಲ್ಯದ ಹಿತವನ್ನು ಅನುಭವಿಸುವವರೇ ಧನ್ಯರು.

    ReplyDelete

Post a Comment