ಆಸ್ಟ್ರೇಲಿಯನ್ನರ ಸರಳತೆ

 ಆಸ್ಟ್ರೇಲಿಯನ್ನರ ಸರಳತೆ

 ಲೇಖನ - ಶ್ರೀಯುತ ಡಾ ಸಿ ವಿ ಮಧುಸೂದನ, ಸಿಡ್ನಿ  

( ಎರಡು ಬುಕ್ ರೂಂ ಅನುಭವಗಳು)



ನ್ಯೂ ಸೌಥ್ ವೇಲ್ಸ್ ವಿಶ್ವವಿದ್ಯಾಲಯದ ವಾರ್ಷಿಕ ಪುಸ್ತಕ ಪರಿಶೆ (ಬುಕ್ ಫೇರ್) ಬಹಳ ಪ್ರಖ್ಯಾತವಾದದ್ದು. ಇದು ಸುಮಾರು ೧೯೭೪ರಿಂದ (ಪ್ರಾಯಶಃ ಅದಕ್ಕೂ ಹಿಂದಿನಿಂದ) ೨೦೧೧ರ ವರೆಗೆ ನಡೆಯಿತು ಎಂದು ನನ್ನ ನೆನಪು. ವರ್ಷಕ್ಕೊಮ್ಮೆ, ಮೂರುದಿನಗಳು ಮಾತ್ರ ನಡೆಯುತ್ತಿದ್ದ ಈ ಜಾತ್ರೆಯಲ್ಲಿ ನಾನಾ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳೂ, ನಿಯತಕಾಲಿಕಗಳೂ ಅಲ್ಲದೆ ಸಂಗೀತದ ರೆಕಾರ್ಡುಗಳೂ, ವಿಡಿಯೋಗಳೂ, ವರ್ಣ ಚಿತ್ರಗಳೂ, ಅತ್ಯಂತ ಕಡಿಮೆ ಬೆಲೆಗೆ ಕೊಳ್ಳಲು ಸಿಗುತ್ತಿದ್ದುವು. ಇಲ್ಲಿ ಮಾರಾಟಕ್ಕಿದ್ದ ವಸ್ತುಗಳೆಲ್ಲವೂ ಲೈಬ್ರರಿ ಗಳಿಂದ, ಸ್ಕೂಲ್-ಕಾಲೇಜುಗಳಿಂದ, ಸಾರ್ವಜನಿಕರಿಂದ ದಾನವಾಗಿ ಕೊಡಲ್ಪಟ್ಟವು. ಪ್ರತಿವರ್ಷ ಸಹಸ್ರಾರು ವಸ್ತುಗಳ ಮಾರಾಟದಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡಾಲರ್ ಗಳ ಸಂಪಾದನೆಯಾಗುತ್ತಿತ್ತು. ಈ ಮೊತ್ತವನ್ನು ಯೂನಿವರ್ಸಿಟಿಯ ಫೌಂಡೇಶನ್ ಗೆ ಸಂಶೋಧನೆ ಮತ್ತು ವಿದ್ಯಾರ್ಥಿವೇತನಗಳ ಸಲುವಾಗಿ ಕೊಡಲಾಗುತ್ತಿತ್ತು.



ಮೇಲೆ ಹೇಳಿದ ವಸ್ತುಗಳೆಲ್ಲವನ್ನೂ Randwick TAFE ಬಳಿ ಇದ್ದ  Old Tram Shed ನಲ್ಲಿ ವರ್ಷದಲ್ಲಿ ಒಂಬತ್ತು ತಿಂಗಳು ಸ್ವೀಕರಿಸಿ ಸಂಗ್ರಹಿಸಲಾಗುತ್ತಿತ್ತು. ಇವುಗಳ ಸಂಖ್ಯೆ ಲಕ್ಷಾಂತರ ಎಂದು ನನ್ನ ಅಂದಾಜು. ಇವುಗಳೆಲ್ಲವನ್ನೂ ವಿಷಯಾನುಸಾರ ವಿಂಗಡಿಸಿದ ಮೇಲೆ ಪ್ರತಿಯೊಂದು ಪುಸ್ತಕ (ಅಥವಾ ಇತರ ವಸ್ತು) ವನ್ನು ಪರಿಶೀಲಿಸಿ, ಅದಾ ಸೂಕ್ತ ಬೆಲೆ ಎಷ್ಟಿರಬೇಕು ಎಂದು ನಿರ್ಧರಿಸಿ ಅದನ್ನು ಪುಸ್ತಕದ ಮೊದಲ ಹಾಳೆಯಲ್ಲಿ ಬರೆಯಬೇಕು. ಹೀಗೆ 20-30 ಪುಸ್ತಕಗಳಾದ ಮೇಲೆ ಅವುಗಳನ್ನು ರಟ್ಟಿನ ಡಬ್ಬದಲ್ಲಿ ಅಡಕವಾಗಿಟ್ಟು ಡಬ್ಬವನ್ನು ಟೇಪಿನಿಂದ ಸೀಲ್ ಮಾಡಬೇಕು, ಅನಂತರ, ಡಬ್ಬದ ಮೇಲೂ, ಪಕ್ಕಗಳ ಮೇಲೂ ಯಾವ ವಿಷಯದ ಪುಸ್ತಕಗಳು ಇದರಲ್ಲಿವೆ ಎಂದು ದೊಡ್ಡ ಅಕ್ಷರಗಳಲ್ಲಿಬರೆದು ಒಂದು ಕಡೆ ಪೇರಿಸಬೇಕು. ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದವರು ವಾರಕ್ಕೊಮ್ಮೆ ಸೇರುತ್ತಿದ್ದ  ಒಂದು ಸ್ವಯಂ ಸೇವಕ/ಸೇವಕಿಯರ ತಂಡ.

ನಾನು ಮತ್ತು ಫ್ರೆಡ್ ಎನ್ನುವರೊಬ್ಬರು ಹೀಗೆ ಇಂಜಿನಿಯರಿಂಗ್ ಪುಸ್ತಕಗಳನ್ನು ವಿಂಗಡಿಸಿ ಅವುಗಳ ಬೆಲೆಯನ್ನು ನಿರ್ಧರಿಸುತ್ತಿದ್ದೆವು. ನಮಗೆ ಅನುಕೂಲವಾಗುವಂತೆ ಸಾಧಾರಣವಾಗಿ ಒಂದು ಮೇಜು, ಎರಡು ಕುರ್ಚಿ ಅಥವಾ ಸ್ಟೂಲ್ ಇರುತ್ತಿದ್ದವು. ಕಾರಣಾಂತರದಿಂದ ಇಬ್ಬರಲ್ಲಿ ಒಬ್ಬರು ಬರೆದಿದ್ದರೆ, ಒಬ್ಬರೇ ನಿಭಾಯಿಸುವುದು ಕಷ್ಟವಲ್ಲ, ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತಿತ್ತು ಅಷ್ಟೇ.

ಅಷ್ಟೇನೂ ಸೋಜಿಗವಲ್ಲದ ಒಂದು ಸಂಗತಿ ಎಂದರೆ, ನಾನು ಒಮ್ಮೆ ಅಕಾಸ್ಮಾತ್ತಾಗಿ ತಡವಾಗಿ ಹೋದರೆ, ಅಲ್ಲಿನ ಸ್ಟೂಲ್ ಅಥವಾ ಕುರ್ಚಿ ಮಾಯವಾಗಿ, ನಿಂತು ಕೊಂಡೇ ಕೆಲಸ ಮಾಡುವ ಪ್ರಮೇಯ ಬರುತ್ತಿತ್ತು. ಹಾಗೆ ಆದಾಗಲೆಲ್ಲ ನನಗಿಂತ ಹೆಚ್ಚು ವಯಸ್ಸಿನ ಒಬ್ಬವೃದ್ಧೆಯು ಎಲ್ಲಿಂದಲೋ ಒಂದು ಸ್ಟೂಲನ್ನು ತಂದು ಕೊಟ್ಟು “ನೀವು ಕುಳಿತುಕೊಂಡು ಕೆಲಸ ಮಾಡಿ” ಎಂದು ಹೇಳಿಬಿಟ್ಟು ಹೋಗುವರು. ಹೆಚ್ಚೇನೂ ಮಾತನಾಡುತ್ತಿರಲಿಲ್ಲ. ಒಮ್ಮೆ ಇದನ್ನು ನೋಡಿದ ನಮ್ಮೆಲ್ಲರ ಮೇಲ್ವಿಚಾರಿಣಿಯು “ಚಿಂತೆಯಿಲ್ಲ, ಜೇನ್ ನಿಮ್ಮ ಯೋಗಕ್ಷೇಮ ವಹಿಸಿದ್ದಾರೆ” ಎಂದರು. ಈ ಜೇನ್ ಬಹಳದಿನಗಳಿಂದ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಕಾಣುತ್ತದೆ. ತೀರ ಸಾಮಾನ್ಯವಾದ ಉಡುಪು. ಅವರ ಕಾರೂ ಹಳೆಯದು. ಅದಕ್ಕೆ ಬೇಕಾದಷ್ಟು ನುಗ್ಗು ತಗ್ಗುಗಳಾಗಿವೆ, ಗೀರುಗಳಾಗಿವೆ. ಯಾವುದನ್ನೂ ರಿಪೇರಿ ಮಾಡಿಸುವ ಗೋಜಿಗೆ ಅವರು ಹೋಗಿಲ್ಲ.

ಅವರು ಮುಂದಿನ ಸಲ ಹೀಗೆಯೇ ಒಂದು ಸ್ಟೂಲ್ ಅನ್ನು ತೆಗೆದುಕೊಂಡು ಬಂದಾಗ, ನಾನು ಔಪಚಾರಿಕವಾಗಿ “ನೀವು ಯಾವ ವಿಷಯದ ಪುಸ್ತಕಗಳನ್ನು ವಿಂಗಡಿಸುತ್ತಿದ್ದೀರಿ?” ಎಂದು ಕೇಳಿದೆ. “ಅರ್ಥಶಾಸ್ತ್ರ ಮತ್ತು ರಾಜಕೀಯ (economics and politics)” ಎಂದು ಉತ್ತರಿಸಿದರು. ಅನಂತರ ಅವರೇ “ನೀವು ಇಂಡಿಯಾದವರಲ್ಲವೇ? ನಾನೂ ಚಿಕ್ಕವಳಿದ್ದಾಗ ಇಂಡಿಯಾದಲ್ಲೇ ಕೆಲವು ವರ್ಷಗಳಿದ್ದೆ” ಎಂದು ಹೇಳಲು, ನಾನು   “ಇಂಡಿಯಾದ ಯಾವ ಭಾಗ?” ಎಂದು ಕೇಳಿದೆ.

“ಕಲ್ಕತ್ತದಲ್ಲಿ, ಆದರೆ ನಾನು ಸ್ಕೂಲಿಗೆ ಹೋದದ್ದು ಡಾರ್ಜೀಲಿಂಗ್ ಎಂಬ ಊರಿನಲ್ಲಿ” ಎಂದರು.

“ಹಾಗಾದರೆ ನಿಮ್ಮ ತಂದೆ ವ್ಯಾಪಾರಸ್ಥರಿರಬಹುದು”

“ಇಲ್ಲ, ಅವರದು ಗವರ್ನಮೆಂಟ್ ಕೆಲಸ” ಎಂದು ಉತ್ತರ ಬಂದಿತು. ಹಾಗೆ ಮಾತನಾಡುತ್ತಿರುವಾಗ ಅವರ ಮುಖವನ್ನು ನೋಡಿದೆ, ಯಾರೋ ಗಣ್ಯರ ಮುಖ ನೆನಪಿಗೆ ಬಂತು. “ನಿಮ್ಮ ಪೂರ್ತಿ ಹೆಸರೇನು?” ಎಂದು ನಾನು ಕೇಳಲು. “ಜೇನ್ ಕೇಸಿ”  ಎಂದು ಉತ್ತರ ಬಂದಿತು. ತಕ್ಷಣವೇ ನಾನು “ನೀವು ಲಾರ್ಡ್ ಕೇಸಿ ಅವರ ಮಗಳಾ?” ಎಂದು ಕೇಳಿಯೇ ಬಿಟ್ಟೆ. “ಹೌದು” ಎಂದವರು ಒಂದೆರಡು ಕ್ಷಣಗಳ ನಂತರ “ಆದರೆ ನಾನು ನಾನೇ, ಅವರು ಅವರೇ” ಎಂದರು.

ಈ ಲಾರ್ಡ್ ಕೇಸಿ ಎಂಬುವರು ಆಗರ್ಭ ಶ್ರೀಮಂತರು. ಕ್ವೀನ್ಸ್ ಲ್ಯಾಂಡ್ ನಲ್ಲಿ ದೊಡ್ಡ ಅಸ್ತಿಯಿತ್ತು ಇವರಿಗೆ. ಮೆಲ್ಬೋರ್ನ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಲ್ಲಿ ಇಂಜಿನಿಯರಿಂಗ್ ಡಿಗ್ರಿಗಳನ್ನೂ ಪಡೆದಿದ್ದವರು. ಮುಂದೆ ರಾಜಕೀಯ ರಂಗವನ್ನು ಪ್ರವೇಶಿಸಿದ ನಂತರ ಅವರನ್ನು ಚರ್ಚಿಲರ ಎರಡನೆಯ ಮಹಾಯುದ್ಧದ ಕಾಲದ ಮಂತ್ರಿ ಮಂಡಲದಲ್ಲಿ ಮಧ್ಯ ಪ್ರಾಚ್ಯದ ಉಪಮಂತ್ರಿಗಳನ್ನಾಗಿ ನೇಮಿಸಲಾಗಿತ್ತು. ಅನಂತರ ಅವರು ಇಡೀ ಬಂಗಾಳದ (ಸ್ವಾತಂತ್ರ್ಯಕ್ಕೆ ಪೂರ್ವದ) ಗವರ್ನರ್ ಆಗಿದ್ದವರು. ಭಾರತಕ್ಕೆ ಸ್ವತಂತ್ರ ಬಂದ ಬಳಿಕ ಆಸ್ಟ್ರೇಲಿಯಾಗೆ ಹಿಂದಿರುಗಿದರು. ಅನಂತರ ಇಡೀ ಆಸ್ಟ್ರೇಲಿಯಾ ದೇಶಕ್ಕೆ ಗವರ್ನರ್ ಜನರಲ್ ಆದರು. ಇಂಥವರ ಮನೆಯಲ್ಲಿ ಯಾವ ಕೊರತೆಗಳೂ ಇಲ್ಲದೆ, ಅನೇಕ ಆಳು ಕಾಳುಗಳು ಇದ್ದಿರಬೇಕು. ಆದರೆ ಜೇನ್ ಅವರನ್ನು ನೋಡಿದರೆ ಯಾವ ಆಡಂಬರವೂ ಇಲ್ಲ. ಈ ಬಗೆಯ ಸರಳತೆ ಅಪರೂಪ.

ಬುಕ್ ರೂಂ ಗೆ ಸಂಬಂಧ ಪಟ್ಟ ಇನ್ನೊಂದು ಸಂದರ್ಭವನ್ನು ಇಲ್ಲಿ ಹೇಳಬಯಸುತ್ತೇನೆ. ಪುಸ್ತಕಗಳ ಮಾರಾಟವೆಲ್ಲವೂ ಮುಗಿದ ಮೇಲೆ ಒಂದು ಅನುಕೂಲವಾದ ವಾರಾಂತ್ಯದಲ್ಲಿ ಸ್ವಯಂ ಸೇವಕರೆಲ್ಲರಿಗೂ ಕೃತಜ್ಞತೆ ತಿಳಿಸುವ ಭೋಜನ ಕೂಟವನ್ನು ಏರ್ಪಡಿಸುತ್ತಿದ್ದರು. ಒಮ್ಮೆ ಈ ಕೂಟವನ್ನು  host ಮಾಡಿದವರು ಜಾಕೀ ಸ್ಯಾಮುಯೆಲ್ಸ್ ಎಂಬುವರು. ಇವರ ಪತಿ ಗೋರ್ಡನ್ ಸ್ಯಾಮುಯೆಲ್ಸ್. ಪಾರ್ಟಿ ನಡೆದದ್ದು ಮನೆಯ ಹಿಂಭಾಗದಲ್ಲಿ. ನನಗೆ ಇಂಥ ಪಾರ್ಟಿಗಳಿಗೆ ಹೋದಾಗ ಹೆಚ್ಚು ಹೊತ್ತು ನಿಲ್ಲಲು ಇಷ್ಟವಿಲ್ಲ. ಅಂತೆಯೇ ಭೋಜನ ಮುಗಿದ ಸ್ವಲ್ಪ ಹೊತ್ತಿನಲ್ಲೇ ಮನೆಗೆ ಹೊರಡಲನುವಾದೆ. ಮನೆಯ ಹೊರ ಬಾಗಿಲಿಗೆ ಬರುವಾಗ ದಾರಿಯಲ್ಲಿ ಅವರ ಮನೆಯ ದಿವಾನಖಾನೆಯಿತ್ತು. ಅಲ್ಲಿ ಕುಳಿತು ಗೋರ್ಡನ್ ಅವರು ಏನನ್ನೋ ಓದುತ್ತಿದ್ದ್ದರು. “ನಾನು ಹೋಗಿ ಬರುತ್ತೇನೆ” ಎಂದು ಹೇಳಿದೆ. ‘ಆಗಲೇ ಹೊರಟು ಬಿಟ್ಟಿರಾ? ಆದರೆ ನಿಮ್ಮನ್ನು ಹಿಂದೆ ನೋಡಿದ್ದೇನೆ, ಬ್ರೋಕನ್ ಹಿಲ್ ನಲ್ಲಿ ಇರಬೇಕು” ಎಂದರು, ಅದು ನಿಜ ಬ್ರೋಕನ್ ಹಿಲ್ ವಿಭಾಗದಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ಗ್ರಾಜುಯೇಷನ್ ಸಮಾರಂಭಕ್ಕೆ ಸಿಡ್ನಿಯಿಂದ ಚಾನ್ಸಲರ್ ಮತ್ತು ಇತರ ಉನ್ನತ ಅಧಿಕಾರಿಗಳು ಬರುತ್ತಿದ್ದುದು ವಾಡಿಕೆ. ಆದರೆ ನಾನು ಸಿಡ್ನಿಗೆ ಬಂದೇ ಇಪ್ಪತ್ತು ವರ್ಷಗಳ ಮೇಲಾಗಿತ್ತು. “ನಿಮಗೆ ಇನ್ನೂ ಜ್ಞಾಪಕವಿದೆಯೆಲ್ಲ?” ಎಂದು ಆಶ್ಚರ್ಯದಿಂದ ಕೇಳಿದೆ. “ನಿಮ್ಮೆಲ್ಲರನ್ನೂ ಮರೆಯುವಂತಿಲ್ಲ. ಬನ್ನಿ ನಿಮ್ಮನ್ನು ಬಾಗಿಲವರೆಗೂ ಬಿಟ್ಟು ಬರುತ್ತೇನೆ” ಎಂದು ಹೇಳಿದವರು ಬಾಗಿಲವರೆಗೂ ಮಾತ್ರವಲ್ಲ, ಮನೆಯ ಹೊರಗಿನ ಗೇಟಿನವರೆಗೂ ಬಂದು “ನೀವು ಬಂದದ್ದು ಸಂತೋಷ.” ಎಂದು ಹೇಳಿ ಒಳಕ್ಕೆ ಹೋದರು.



ಗೋರ್ಡನ್ ಸ್ಯಾಮುಯೆಲ್ಸ್ ಬ್ರಿಟಿಷ್ ಮೂಲದವರು. ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದ ಪದವೀಧರರು. ಎರಡನೆಯ ಮಹಾಯುದ್ಧದಲ್ಲಿ ಕ್ಯಾಪ್ಟನ್ ಆಗಿದ್ದರು. ಅನಂತರ ಬ್ಯಾರಿಸ್ಟರ್ ಆದರು. ಆಸ್ಟ್ರೇಲಿಯಾಗೆ ೧೯೪೯ರಲ್ಲಿ ವಲಸೆಗೆ ಬಂದರು. ಇದಾದ ಕೆಲವು ವರ್ಷಗಳಲ್ಲೇ ಕ್ವೀನ್ಸ್ ಕೌನ್ಸೆಲ್ (QC) ಆದರು. ನಿಮ್ಮಲ್ಲಿ ಕೆಲವರಿಗಾದರೂ ತಿಳಿದಿರುವಂತೆ ಅವರು ನ್ಯೂ ಸೌಥ್ ವೇಲ್ಸ್ ವಿಶ್ವವಿದ್ಯಾಲಯದ ಸುದೀರ್ಘ ಕಾಲದ (18 ವರ್ಷ) ಚಾನ್ಸಲರ್ ಮಾತ್ರವಲ್ಲ, ಇದೇ ಪ್ರಾಂತ್ಯದ ಸುಪ್ರೀಂ ಕೋರ್ಟಿನ ಜಡ್ಜ್ (20 ವರ್ಷ) ಮತ್ತು ಗವರ್ನರ್ (5 ವರ್ಷ) ಕೂಡ ಆಗಿ ಸೇವೆ ಸಲ್ಲಿಸಿದ್ದವರು. ಗವರ್ನರ್ ಆಗಿದ್ದಾಗ ಅವರು ಅರಮನೆಯಂತೆ ಭವ್ಯವಾದ ಗವರ್ನಮೆಂಟ್ ಹೌಸ್ ನಲ್ಲಿ ರಾಜನಂತೆ ಇರಬಹುದಿತ್ತು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ, ತಮ್ಮ ಸ್ವಂತ ಮನೆಯಲ್ಲೇ ಇರಲು ನಿರ್ಧರಿಸಿದರು. ಇದರಿಂದ ಅನೇಕ ಗಣ್ಯರಿಗೆ ಅಸಮಾಧಾನವಾಯಿತು ಎಂದು ಕೇಳಿದ್ದೇನೆ.

ಮೇಲೆ ನಾನು ವಿವರಿಸಿದ ಘಟನೆಯಾದ ಹಲವು ತಿಂಗಳಲ್ಲೇ ಸ್ಯಾಮುಯೆಲ್ಸ್ ಅವರು ತೀರಿಹೋದರು ಎಂದು ತಿಳಿಯಿತು. ಅವರು ಗವರ್ನರ್ ಆಗಿದ್ದರಿಂದ “ಸ್ಟೇಟ್ ಫ್ಯೂನರಲ್” ಎಂಬ ವಿಶೇಷ ಮರ್ಯಾದೆಯ ಅಂತಿಮ ಯಾತ್ರೆಗೆ ಅರ್ಹರಾಗಿದ್ದರು. ಆದರೆ ಇದಾವುದೂ ಕೂಡದು ಎಂದು ಖಡಾಖಂಡಿತವಾಗಿ ನಿರ್ದೇಶಿಸಿ ಬಿಟ್ಟಿದ್ದರು. ಅವರ ಇಚ್ಛೆಯಂತೆಯೇ ನಡೆಯಿತು.

 ಸ್ಯಾಮುಯೆಲ್ಸ್ ಅವರ ಸೌಜನ್ಯಪೂರ್ಣ ನಡತೆಯನ್ನು ನೆನೆದಾಗ ಅದು ಅವರ  ಸಭ್ಯತೆಗೆ ಮಾದರಿಯೋ, ಸರಳತೆಗೆ ಮಾದರಿಯೋ ಅಥವಾ ಎರಡನ್ನೂ ಸೇರಿದ್ದೋ ಎಂಬ ಯೋಚನೆ ಬರುತ್ತದೆ..

Comments

  1. ಇಂತಾ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ಪರಿಚಯಿಸಿದ್ದಾಗಿ ನಿಮಗೆ ಅನಂತ ‌ಧನ್ಯವಾದಗಳು. 🙏 ಜೇನ್ ಕೇಸಿ ಅವರೊಂದಿಗೆ ಕೆಲಸ ‌ಮಾಡಿದ, ಗೋರ್ಡನ್ ಸ್ಯಾಮುಯೆಲ್ಸ ಅವರನ್ನು ‌ಭೇಟಿ ಮಾಡಿದ ‌ನೀವೇ ಧನ್ನರು. ಗೋರ್ಡನ್ ‌ಸ್ಯಾಮುಯೆಲ್ಸ ಅವರು ಅನೇಕ ‌ವರ್ಷಗಳು Governor General ಆಗಿದ್ದುದು ನೆನಪಿದೆ. ಅವರನ್ನು ‌ಒಂದು ಸಮಾರಂಭದಲ್ಲಿ ನೋಡಿದ್ದೇನೆ. ಜೇನ್‌ ಕೇಸಿಯವರಿಗೆ ಮತ್ತು ಗೋರ್ಡನ್ ‌ಸ್ಯಾಮುಯೆಲ್ಸ‌ ಅವರಿಗೆ‌ ನನ್ನ ಅನಂತ ನಮಸ್ಕಾರಗಳು🙏🙏
    comments by - Raji Jayadev, sydney

    ReplyDelete
  2. ಧನ್ಯವಾದಗಳು, ರಾಜೇಶ್ವರಿ ಅವರೇ!🙏

    ReplyDelete
  3. ಜೇನ್ ‌ಕೇಸಿ ಮತ್ತು ಗೋರ್ಡನ್ ಸ್ಯಾಮುಯೆಲ್ಸ ಇಬ್ಬರೂ ಸರಳತೆಗೆ ಮತ್ತು ಸಭ್ಯತೆಗೆ ಮಾದರಿಯಾಗಿದ್ದಾರೆ. ನನ್ನ ಅನಿಸಿಕೆ ಏನೆಂದರೆ - ಸಭ್ಯತೆಯನ್ನು ರೂಡಿಸಿಕೂಳ್ಳಬಹುದು. ಅದರೆ ಸರಳತೆಯನ್ನು ರೂಡಿಸಿಕೂಳ್ಳುವುದು ಸುಲಭವಲ್ಲ. ಬಹಳ will power ಬೇಕಾಗುತ್ತದೆ.

    ReplyDelete
  4. ಇವೆರಡರ ಜತೆಗೇ "ಸಂಸ್ಕಾರ" ಎಂಬುದೂ ಇದೆ. ಇದು ಮುಖ್ಯವಾಗಿ ಒಬ್ಬರು ಹುಟ್ಟಿಬೆಳೆದ ಪರಿಸರ, ಅದರಲ್ಲೂ ತಾಯಿತಂದೆಯರ ನಡತೆಯಿಂದ, ರೂಪುಗೊಳ್ಳುತ್ತದೆ. ಈ ಸಂಸ್ಕಾರವೂ ವ್ಯಕ್ತಿಯ ಸರಳತೆಗೆ ಭಾಗಶಃ ಕಾರಣವಾಗಿರಬಹುದು!

    ReplyDelete
  5. ಇಂತಹ ಸರಳ, ಸೌಜನ್ಯ ಪೂರಿತ, ಹಿರಿಯ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು. ಎಲ್ಲೆಡೆಯೂ ಇಂತಹವರು ಇರಬಹುದು, ಆದರೆ ತೋರಿಸಿಕೊಳ್ಳಲಾರರು. ಈ ರೀತಿಯ ಪರಿಚಯ ಲೇಖನಗಳಿಂದ ನಾವು ಸಾಕಷ್ಟು ಕಲಿಯಬಹುದು.

    ReplyDelete

Post a Comment