ದಿನಕರ ಮೀಮಾಂಸೆ

 ದಿನಕರ ಮೀಮಾಂಸೆ

ಹಾಸ್ಯ ಲೇಖನ - ಅಣಕು ರಾಮನಾಥ್  

ಗೆಳೆಯ ದಿನಕರರ ಹೆಸರನ್ನು ನೆನೆದಾಗಲೆಲ್ಲ ನನ್ನ ಮನವೆಂಬ ರೈಲ್ವೇ ನಿಲ್ದಾಣದಿಂದ ಆಲೋಚನೆಗಳೆಂಬ ವಿವಿಧ ರೈಲುಗಳು ಹೊರಡುತ್ತವೆ. ಇವರ ಹೆಸರಿನ ಅರ್ಥವಿಸ್ತಾರವು ಬೆರಗು ಮೂಡಿಸುತ್ತದೆ. 


ದಿನಕರ ಎಂಬ ಪದವೇ ನಿತ್ಯನೂತನ. ದಿನದ ಆರಂಭವಾಗುವುದೇ ಕರಾಗ್ರೇ ವಸತೇ ಲಕ್ಷ್ಮೀ ಶ್ಲೋಕದಿಂದ. ಹಿಂದೆಲ್ಲ ಕರಾಗ್ರೇ ಲಕ್ಷ್ಮೀ ಇರುತ್ತಿದ್ದಳೆ? ಕರ ಉರುಫ್‌ ಹಸ್ತದ ಅಗ್ರದಲ್ಲಿ ಸರಸರನೆ ನೋಟುಗಳನ್ನು ಎಣೆಸುವ ಕಾಲಕ್ಕಿಂತಲೂ ಮೊದಲಿನ, ಎಂದರೆ ನೋಟಿನ ಮೇಲೆ ನೋಟ ಬೀರದೆ ನಾಣ್ಯಗಳಷ್ಟೇ ಇದ್ದ ಕಾಲದಲ್ಲಿ ಲಕ್ಷ್ಮೀ ಇರುತ್ತಿದ್ದುದು ಕರಮಧ್ಯೇ ಅಲ್ಲವೆ? ಆದರೆ ಕರಮಧ್ಯೇ ಸರಸ್ವತೀ ಎಂದು ಹೇಳಿರುವುದರಿಂದ ಲಕ್ಷ್ಮಿಯ ಜಾಗದಲ್ಲಿ ಸರಸ್ವತಿ ಕುಳಿತುಕೊಳ್ಳುತ್ತಿದ್ದಳು ಎಂದಾಯಿತು. ಲಕ್ಷ್ಮೀ ಮತ್ತು ಸರಸ್ವತಿ ಒಂದೇ ಜಾಗದಲ್ಲಿ ಇರುವಂತಿಲ್ಲವೆಂಬುದು ಅಂದಿನ ಅಭಿಮತ. “ಕುಡಿದಾಗ ಮಾತುಗಳು ಪಟಪಟನೆ ಹೊರಬರುವುದು ಏಕೆ ಗೊತ್ತೇನು? ಮದ್ಯ ಲಕ್ಷ್ಮಿಯ ಸಂಕೇತ; ಮಾತುಗಳು ಸರಸ್ವತಿಯ ಸಂಕೇತ. ಲಕ್ಷ್ಮೀ ಸರಸ್ವತಿ ಒಟ್ಟಿಗೆ ಇರುವುದಿಲ್ಲವಾದ್ದರಿಂದ ಮದ್ಯವು ಒಳಹೋಗುತ್ತಿದ್ದಂತೆಯೇ ಮಾತುಗಳು ಹೊರಬರುತ್ತವೆ” ಎಂದಿದ್ದರು ಮಾಸ್ಟರ್‌ ಹಿರಣ್ಣಯ್ಯ. ನಾಣ್ಯವು ಮಧ್ಯದಲ್ಲಿರುತ್ತಿದ್ದ ಕಾರಣ ಲಕ್ಷ್ಮೀ ಅಲ್ಲಿರುತ್ತಿದ್ದುದು ಅಶಕ್ಯವಾದ ಕಾರಣವೇ ಅಂದು ಬಾರ್ಟರ್‌ ಸಿಸ್ಟಮ್‌ ಹೆಚ್ಚಾಗಿ ಜಾರಿಯಲ್ಲಿದ್ದಿತೋ ಏನೋ! 

ಅಸಲಿಗೆ ಕರ ಎನ್ನುವುದಕ್ಕೆ ಅನ್ವಯಿಸಬೇಕಾದ ಅರ್ಥವು ಹಸ್ತವೋ ಅಥವಾ ಅನ್ಯಾರ್ಥವೋ ಎಂದೂ ಆಲೋಚನೆಯ ದಿಕ್ಕು ತಿರುಗುತ್ತದೆ. ಕರ ಎಂದರೆ ಕೈ. ಕೈಯಿಂದರೆ ಕೆಯ್ಮೆ. ಕೆಯ್ಮೆ ಎಂದರೆ ಆರಂಬ. ಆರಂಬ ಎಂದರೆ ವ್ಯವಸಾಯ. ʼದಿನಕರʼ ಎಂದರೆ ನಿತ್ಯವೂ ವ್ಯವಸಾಯ. ಇದು ಅಂದಿನ ಭಾರತಕ್ಕೆ ಒಪ್ಪತಕ್ಕ ವಿಷಯ. ಕೃಷಿಯಿಂದಲೇ ಸಮೃದ್ಧಿಯನ್ನು ಪಡೆಯುವುದು ಸಾಧ್ಯವಿದ್ದುದರಿಂದ ಕರಾಗ್ರೇ ವಸತೇ ಲಕ್ಷ್ಮೀ ಇಲ್ಲಿಗೆ ಸಂಪೂರ್ಣವಾಗಿ ಅನ್ವಯವಾಗುತ್ತಿತ್ತು. “ಅಂದೇನು, ಇಂದಿಗೂ ಅದೇ ಅನ್ವಯವಾಗುತ್ತದೆ” ಎಂದ ಸೀನು. 

“ಹೇಗೆ?” ಎಂದೆ. 

“ಸಿಕ್ಕ ಸಿಕ್ಕ ಕಳ್ಳದಾರಿಗಳಲ್ಲಿ ಕಾಸು ಮಾಡಿಕೊಂಡವರೆಲ್ಲ ಒಂದಿಷ್ಟು ಎಕರೆ ಬರಡು ಭೂಮಿಯನ್ನು ಕೊಂಡಿರುತ್ತಾರೆ. ಬಂದ ಆದಾಯವೆಲ್ಲ ಕೃಷಿಯಿಂದಲೇ ಬಂದದ್ದು ಎಂದು ತೋರಿಸಿ ತೆರಿಗೆಯ ಗಾಳದಿಂದ ನುಸುಳಿ ಪಾರಾಗುತ್ತಾರೆ. ಇಲ್ಲದ ಕೃಷಿಯು ಇರುವ ಲಕ್ಷ್ಮಿಯು ರಾಜಾರೋಷವಾಗಿ ಮೆರೆಯಲು ದಾರಿ ಮಾಡಿಕೊಡುತ್ತದೆ” ಎಂದನವ. “ಕರಮಧ್ಯೇ ಸರಸ್ವತೀ” ಎನ್ನುವುದಕ್ಕೂ ಸೀನುವಿನ ಬಳಿ ವಿವರಣೆಯಿದೆ. ಹಣವು ಸೊಂಟ ಮುರಿದು ಬೀಳುವಂತೆ ಮಾಡುವುದೇ ಸರಸ್ವತಿ ಉರುಫ್‌ ಆಡಿಟರ್‌ಗಳಂತೆ! 

ಕರ ಎಂಬ ಪದದ ಕೈ ಎಂಬ ಅರ್ಥಕ್ಕೆ ಸಿಂಗರಿಸಿಕೊಳ್ಳುವುದು ಎಂಬ ಅರ್ಥವಿರುವುದು ಸಹ ಇಂದಿಗೆ ಬಹಳ ಸಮ್ಮತ. ಸಿಂಗಾರ ಇರುವುದೇ ಕರಾಗ್ರೇ ಎಂದು ಎಲ್ಲರೂ ಒಪ್ಪುತ್ತಾರೆ. ಹಿಮಾಲಯದ ಡಿಸೆಂಬರ್‌ ತಿಂಗಳ ಹಿಮದ ಬಣ್ಣವನ್ನು ಹೋಲುವ ಅಧರಗಳು ತಾವು ತೊಟ್ಟ ಓಲೆಗೋ, ಉಡುಪಿಗೋ ಮ್ಯಾಚಿಂಗ್‌ ಆಗುವ ರೀತಿಯಲ್ಲಿ ಹೊಳೆಯಲು ಅವಶ್ಯವಾದ ತುಟಿಗೋಂದನ್ನು (ಲಿಪ್‌ಸ್ಟಿಕ್)‌ ಬಳಿದುಕೊಳ್ಳಲು ಬೆರಳ ತುದಿಗಳೇ ನೆರವಾಗುವುದು. ಹಣೆಗೆ ಬೊಟ್ಟು, ಕಣ್ಣಿಗೆ ಮಸ್ಕರಾ ಮುಂತಾದವಕ್ಕೂ ಕರಾಗ್ರವೇ ಬೇಕು. ಕರದಿಂದ ಕೈಗೊಳ್ಳುವ ಶೃಂಗಾರವು ಎಂದೋ ಒಂದು ದಿನದಲ್ಲದೆ ದಿನವೂ ನಡೆಯುವ ಪ್ರಕ್ರಿಯೆಯಾದ್ದರಿಂದ ಅದು ದಿನಕರವೇ. 

ಕನ್ನಡದ ಚಿತ್ರಗೀತೆಯೊಂದರಲ್ಲಿ ದಿನಕರ ಶುಭಕರ ಎಂದಿದೆ. ಸರ್ಕಾರವು ಸಹ ಇದನ್ನೇ ನಂಬುತ್ತದೆ. ಆದ್ದರಿಂದಲೇ ನಾವು ಕೊಳ್ಳುವ ಪ್ರತಿ ಪದಾರ್ಥದ ಮೇಲೆಯೂ, ನಾವು ಪಡೆಯುವ ಪ್ರತಿ ಸೇವೆಯ ಮೇಲೆಯೂ ಜಿಎಸ್‌ಟಿಯನ್ನು ಹೇರಿರುವುದು. ದಿನಕರ ಎಂದರೆ ಡೈಲಿ ಟ್ಯಾಕ್ಸ್.‌ ಅಂದಿನ ಕಾಲದಲ್ಲಿ ಏಕಚಕ್ರ ನಗರಿಯಲ್ಲಿ ಬಕಾಸುರನೆಂಬ ಒಬ್ಬನಿದ್ದ. ಇಂದು ಎಲ್ಲ ನಗರಗಳೂ ಅನೇಕಚಕ್ರಗಳೇ. ಈ ಅನೇಕಚಕ್ರನಗರಿಗಳಲ್ಲಿನ ಬಕಾಸುರನೇ ಸರ್ಕಾರ. ಈ ಬಕಾಸುರನಿಗೆ ಆ ಬಕಾಸುರನಿಗಿದ್ದಂತೆಯೇ ನಿತ್ಯಹಸಿವು. ಆ ಹಸಿವನ್ನು ಇಂಗಿಸಲು ಪ್ರತಿದಿನವೂ ಪ್ರತಿ ತೆರಿಗೆಯನ್ನು ತೆರುತ್ತೇವೆ. ಹೀಗೆ ನಿತ್ಯ ನೀಡುವ ಕಂದಾಯ, ತೆರಿಗೆ, ಸೆಸ್‌ಗಳೇ ದಿನಕರ!

ಗೆಳೆಯ ಜರಗನಹಳ್ಳಿ ಶಿವಶಂಕರರು ಒಮ್ಮೆ ನನಗೆ ಫೋನಾಯಿಸಿ “ನನಗೆ ದಿನಕರ ದೇಸಾಯಿ ಪ್ರಶಸ್ತಿ ಸಿಕ್ಕಿದೆ” ಎಂದರು. ಜನರು ಮಾತನಾಡುವಾಗ ಪಾಸ್‌ಗಳು ಎಲ್ಲೆಲ್ಲಿಯೋ ಬರುತ್ತವೆ. ಅಂದು ಅವರು ನುಡಿದಾಗ ದಿನಕರದೇ ಸಾಯಿ ಎಂಬ ರೀತಿಯಲ್ಲಿ ಪಾಸ್‌ (ನುಡಿತಡೆ) ಮೂಡಿತ್ತು. ಆ ಎಳೆಯನ್ನೇ ಹಿಡಿದ ನಾನು “ಅದು ಎಲ್ಲರಿಗೂ ಎಲ್ಲ ದಿನವೂ ಸಿಗುವಂತಹದ್ದೇ” ಎಂದೆ. “ಬಿಡಿಸಿ ಹೇಳಿ” ಎಂದರವರು. “ದಿನ ಕರದೇ ಸಾಯಿ” ಎನ್ನುವುದು ಸರ್ಕಾರದ ಆಶಯ. ಪ್ರತಿ ವ್ಯಕ್ತಿಯೂ ನಿತ್ಯವೂ ಟ್ಯಾಕ್ಸ್‌ ಕಟ್ಟೀ ಕಟ್ಟೀ ಸಾಯೋದೇ ತಾನೇ!” ಎಂದೆ. ವಿನೋದಪ್ರಿಯರಾದ ಅವರು ಈ ಶ್ಲೇಷಾರ್ಥವನ್ನು ಮನದುಂಬಿ ಆಸ್ವಾದಿಸಿದ್ದರು. 

ಸಿಡ್ನಿಯ ಕನಕಾಪುರ ನಾರಾಯಣರು ತಮ್ಮ ಶಾಲೆಯಲ್ಲಿ ನಡೆದ ಪ್ರಸಂಗವೊಂದನ್ನು ಹೇಳುತ್ತಿದ್ದರು. ಪ್ರತಿ ವಾರಾಂತ್ಯದಲ್ಲಿ ಸಿಡ್ನಿಯಲ್ಲಿ ಅವರು ನಡೆಸುವ ಕನ್ನಡ ಶಾಲೆಗೆ ಸ್ವಯಿಚ್ಛೆಯಿಂದ ಬೋಧಕರಾಗಲು ಗ್ರಾಮೀಣ ಹಿನ್ನೆಲೆಯಿರುವ ವ್ಯಕ್ತಿಯೊಬ್ಬರು ಮುಂದೆ ಬಂದರು. ಅಂದು ಮಕ್ಕಳಿಗೆ ಕರ, ಸರ, ಮರ ಮುಂತಾದ ಅಕಾರದಿಂದ ಕೊನೆಗೊಳ್ಳುವ ಪದಗಳನ್ನು ಬಳಸುವುದನ್ನು ಹೇಳಿಕೊಡಬೇಕಾಗಿತ್ತು. ವಿದ್ಯಾರ್ಥಿಯೊಬ್ಬನು “ಕರ ಅಂದರೆ ಏನು ಸಾರ್?”‌ ಎಂದ. ನವಬೋಧಕರು “ಕರ ಗೊತ್ತಿಲ್ವೇನ್ಲಾ? ಕೊಟ್ಗೇನಾಗಿತ್ರದಲ್ಲ ಅಸ, ಅದರ ಮಗೀ ಕಣ್ಲಾ…” ಎಂದರು. ನಾರಾಯಣರು ಮನದಲ್ಲೇ “ಅಯ್ಯೋ ನಾರಾಯಣ!” ಎಂದುಕೊಳ್ಳುತ್ತಾ ಇತ್ತ ಧಾವಿಸಿ “ಸರ, ಮರ ಅನ್ನೋದರ ಜೊತೆಗೆ ಕರ ಅನ್ನೋದನ್ನ ಇಟ್ಟಿದ್ದು ನಮ್ಮದೇ ತಪ್ಪು ಸರ್.‌ ಕರ ಅನ್ನೋದು ಸಂಸ್ಕೃತ ಪದ. ಹೇಗೋ ಈ ಸಿಲಬಸ್ಸಲ್ಲಿ ತೂರಿಬಿಟ್ಟಿದೆ. ಮುಂದಿನ ಸರತಿ ಅದನ್ನ ತೆಗೀತೀವಿ. ಸದ್ಯಕ್ಕೆ ಕರ ಅಂದರೆ ಹಸ್ತ, ಕೈ ಅನ್ನೋ ಅರ್ಥವನ್ನ ಹೇಳಿಕೊಡಿ” ಎನ್ನುತ್ತಾ ಪರಿಸ್ಥಿತಿಯನ್ನು ನಿಭಾಯಿಸಿದರಂತೆ. 

ದಿನಕರರ ಹೆಸರೇನಾದರೂ ನಮ್ಮ ಸ್ಕ್ರಾಲ್‌ ಕನ್ನಡಿಗನ ಕೈಗೆ ಸಿಕ್ಕಿದರೆ ಏನಾದೀತೆಂದು ಆಲೋಚಿಸಿರುವಿರೆ? ಅಗ್ಗ ಎನ್ನುವುದನ್ನು ಹಗ್ಗ ಎಂದೂ ಹುಳಿ ಎನ್ನುವುದನ್ನು ಉಳಿ ಎಂದೂ ಬರೆಯುವ ಇವರು ದಿನಕರರನ್ನು ದಿನಾ ಖಾರ ಎಂದು ಬರೆದರೆ ಅಚ್ಚರಿಯೇನಿರದು. ಇದು ಸ್ವತಃ ದಿನಕರರಿಗೆ ಎಸಗಿದ ಅಪಚಾರವೆಂದು ಕಂಡರೂ ಇದನ್ನೂ ಸ್ವಾಗತಿಸಲು ಹಲವಾರು ಸಂಸ್ಥೆಗಳು ಮುಂದೆ ಬರುತ್ತವೆ. “ಆಚಾರ್‌ ಬಜ್ಜಿ ಸೆಂಟರ್”‌, “ಸಿರಂಚೀವಿ ಆಂಧ್ರ ಸ್ಟೈಲ್‌ ಹೊಟೇಲ್”‌ ಮುಂತಾದವು ದಿನಾ ಖಾರ ಎನ್ನುವುದನ್ನು ತಮ್ಮ ಸ್ಲೋಗನ್‌ ಆಗಿಯೋ, ಜಾಹೀರಾತಿಗೆ ಒದಗಬಹುದಾದ ಜಿಂಗಲ್‌ ಆಗಿಯೋ ಬಳಸಿಕೊಳ್ಳಲು ಕಾತುರರಾಗಿದ್ದರೆ ಅಚ್ಚರಿಯಿಲ್ಲ. 

ಅದೇ ಸ್ಕ್ರಾಲಿಗನು ದಿನಕರರ ಹೆಸರನ್ನು ದೀನಕರ ಎಂದಾಗಿಸಿಬಿಟ್ಟರೆ ದೀನರನ್ನು ಉದ್ಧರಿಸುವ ಕರವೆಂದೂ, ದೀನರ ಮೇಲೆ ವಿಧಿಸುವ ಟ್ಯಾಕ್ಸ್‌ ಎಂದೂ, ದೀನೋದ್ಧಾರಕ್ಕಾಗಿ ವಿಧಿಸಿದ ಟ್ಯಾಕ್ಸ್‌ ಎಂದೂ ಸಹ ಅರ್ಥಗಳು ಉದ್ಭವಿಸಿ ನಿಜಾರ್ಥದ ಮೇಲೆ ಬೆಳಕು ಚೆಲ್ಲಲು ಒರಿಜಿನಲ್‌ ದಿನಕರನೂ ಸೋಲೊಪ್ಪುವ ಪರಿಸ್ಥಿತಿ ಉದ್ಭವಿಸೀತು.

ಕರ ಎಂದರೆ ಬೆಳಗನ್ನು ಮಾಡುವವನು ಎಂದಿದೆ. ಗುಡ್‌ ಓಲ್ಡ್‌ ಕಾಲದಲ್ಲಿ ಮದುವೆಮನೆಗಳಲ್ಲಿ ಇಸ್ಪೀಟ್‌ ಆಡಲೆಂದೇ ಒಂದು ಕೊಠಡಿಯನ್ನು ನಿಗದಿಸುತ್ತಿದ್ದರು. ಹಸೆಮಣೆಯಿಲ್ಲದಿದ್ದರೂ ಮದುವೆ ನಡೆದೀತು, ಇಸ್ಟೀಟ್‌ ಕೊಠಡಿ ಇಲ್ಲದೆ ನಡೆಯಲಾರದು ಎಂಬಂತಹ ದಿನಗಳವು. ಅಲ್ಲಿ ಸೇರಿದ ಜನರು ಕುಳಿತಲ್ಲೇ ಧೂಮದ ಛಾವಣಿಯನ್ನು ನಿರ್ಮಿಸಿಕೊಂಡು, ರಾತ್ರಿಯೆಲ್ಲವೂ ಇಸ್ಪೀಟೆಲೆಗಳು ಸವೆಯುವ ಮಟ್ಟಕ್ಕೆ ಪರೇಲನ್ನೋ ಮೂರೆಲೆಯನ್ನೋ ಆಡುತ್ತಾ ಇರುಳನ್ನು ಬೆಳಗಾಗಿಸುತ್ತಿದ್ದರು. ರಾತ್ರಿಪಾಳಿಯ ಬೀಟ್‌ ಪೋಲೀಸರು, ಗಡಿರಕ್ಷಕ ಪಡೆಯವರು ಸಹ ತಮ್ಮದೇ ಆದ ರೀತಿಯಲ್ಲಿ ಇರುಳನ್ನು ಬೆಳಗಾಗಿಸುತ್ತಾರೆ. ಇವರೆಲ್ಲರನ್ನೂ ದಿನಕರರು ಎಂದು ಕರೆಯಬಹುದೆ? ಭಾಷಾಪಂಡಿತರೇ ಉತ್ತರಿಸಬೇಕು.

ದಿನ ಎಂದರೆ ಕತ್ತರಿಸಿದ, ವಿಭಜಿತ ಎಂದೂ ಸಂಸ್ಕೃತದಲ್ಲಿ ಅರ್ಥವಿದೆ. ದಿನಕರ ಎಂದರೆ ಜ್ಯಾಮೆಟ್ರಿ ಬಾಕ್ಸಿನಲ್ಲಿನ ಡಿವೈಡರ್‌ ಎಂದು ಅರ್ಥ ಹೊಮ್ಮುವುದಲ್ಲವೆ? ಇದೇ ಅರ್ಥವನ್ನು ವಿಸ್ತರಿಸುವುದಾದರೆ ಹಳ್ಳಿಗಳಲ್ಲಿನ ಜಮೀನನ್ನು ಪೋಡು ಆಗಿ ವಿಂಗಡಿಸುವುದಕ್ಕೆ ನೆರವಾಗುವ ಅಧಿಕಾರಿಯೂ ದಿನಕರನೇ. Partition deed ಮಾಡಿಕೊಡುವ ವಕೀಲನೂ ದಿನಕರನೇ. ಅಂತಹ partition deed ಅಥವಾ settlement deedಗಳನ್ನು ನೋಂದಾಯಿಸಲು ತೆರಬೇಕಾದ ತೆರಿಗೆಯೇ ದಿನ ಕರ! ಚಿನ್ನದ ಸರವನ್ನು ಕರಗಿಸಿ ಉಂಗುರವಾಗಿಸುವ ಚಿನಿವಾರನ ಹಸ್ತವೂ ದಿನ (ತುಂಡರಿಸು) ಕರ(ಕೈ)ವೇ!

ಗೆಳೆಯ ದಿನಕರರ ಹೆಸರಿನ ನಿಜಾರ್ಥವು ಇವುಗಳಲ್ಲಿ ಯಾವುದೆಂದು ನನಗಂತೂ ನಿರ್ಧರಿಸಲಾಗಿಲ್ಲ. ನಿಮಗೆ?


Comments