ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಲೇಖನ  - ಪಲ್ಲವಿ ಕಟ್ಟಿ, ಸಿಡ್ನಿ  

 ಬಹಳ ದಿನದಿಂದ ಏನಾದರೂ ಬರೆಯ ಬೇಕೆಂದು ಆಸೆಯಾದರೂ ಏನು ಬರೆಯ ಬೇಕು ಎಂದು ತೋಚದೇ ಖಾಲೀ ಕಾಗದದ ಮೇಲೆ ಒಂದೆರಡು ವಾಕ್ಯಗಳನ್ನು ಗೀಚಿ ಹೊಡೆದು ಹಾಕಿ ಬಿಡುತ್ತಿದ್ದೆ. ಏನೂ ತಲೆಗೆ ಹೊಳೆಯುತ್ತಿಲ್ಲ ಎಂದು ಬೇಸತ್ತು  ಸುಮ್ಮನಾಗುತ್ತಿದ್ದೆ.

ಈ 40 ವರ್ಷಗಳ ಜೀವನದಲ್ಲಿ ಎಲ್ಲರೊಟ್ಟಿಗೆ ಹಂಚಿಕೊಳ್ಳುವಂತಹ ಸುಂದರ ಕ್ಷಣಗಳು ಇಷ್ಟು ಸೀಮಿತವಾದದ್ದೇ!! ಎಂದು ಸ್ವಲ್ಪ ಬೇಸರವೂ ಆಯಿತು. ಎಂತಹ ನೀರಸವಾದ ಬದುಕು....

ನಂತರ ಅನಿಸಿತ್ತು ಪ್ರತೀ ಬಾರಿ ಸುಂದರವಾದ ಸಿಹಿ ನೆನಪುಗಳನ್ನೇ ಹಂಚಿಕೊoಡರೆ ಹೇಗೆ ? ಕೆಲವೊಮ್ಮೆ ಕೆಟ್ಟ ಘಟನೆಗಳನ್ನೂ ಹಂಚಿಕೊಳ್ಳಬಹುದಲ್ಲವೇ? ಹೀಗೆ ನನ್ನ ತಲೆಯಲ್ಲಿ ಹಲವಾರು ಯೋಚನೆಗಳ ಲಟಾಪಟಿ ನಡೆಯುತ್ತಿದ್ದಾಗ ನೆನಪಿಗೆ ಬಂದದ್ದು ಕೆಲವು ವರ್ಷ ಗಳ ಹಿಂದಿನ ಒಂದು ಘಟನೆ.

ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಸಿಡ್ನಿ ನಗರಕ್ಕೆ ವಲಸೆ ಬಂದು ಸುಮಾರು ಒಂದು ವರ್ಷ ಕಳೆದಿತ್ತು. ಇನ್ನೂ ಹೊಸ ದೇಶ, ಜನ, ಸಂಸ್ಕೃತಿಗೆ ಒಗ್ಗದ ಮನಸ್ಸು ಹಾಗು ದೇ ಹ. ಆಗ ತಾನೇ ಕೆಲಸ ಸಿಕ್ಕು ಒಂದೆರೆಡು ತಿಂಗಳಾಗಿದ್ದೀತು. ಅಪ್ಪಾ , ಅಮ್ಮಾ , ಅಕ್ಕನನ್ನು ಮತ್ತೆ ಎಂದು ನೋಡುತ್ತೇನೆ ಎಂದು ಹಾತೊರೆಯುತ್ತಿದ್ದ ಜೀವ.  ಹೀಗಿರುವಾಗ ಆಸ್ಟ್ರೇಲಿಯಾದ ಚಳಿಗಾಲ ತಡೆಯಲಾಗದೆ ಅತಿಯಾದ ಕೆಮ್ಮು ಜ್ವರ ಎಲ್ಲಾ ಬಂದಿತ್ತು. ಅಪ್ಪ ಕಳಿಸಿದ್ದ ಔಷಧಿಗಳಿಂದ ಜ್ವರ ಕಮ್ಮಿ ಯಾದರೂ ಕೆಮ್ಮು ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಯಾವ ಔಷಧಿಗೂ ಕಮ್ಮಿಯಾಗದ ಕೆಮ್ಮು ಮೂರು ತಿಂಗಳಿಂದ ಅನುಭವಿಸಿ ಸಾಕಾಗಿ ಹೋ ಗಿತ್ತು.

ಮುಂದೆ ಒಂದೆರಡು ದಿನಕ್ಕೆ ಗಂಟಲಿನ ಮಧ್ಯದಲ್ಲಿ ಒಂದು ಚಿಕ್ಕ ಗಂಟು ಕಂಡುಬಂತು. ಕೂಡಲೇ ನನ್ನ ತಲೆಯಲ್ಲಿ ಸಾವಿರಾರು ವಿಚಾರಗಳು ಮೂಡಿ ಬಂದು ಕೊನೆಗೂ ಖಂಡಿತವಾಗಿಯೂ ಮಾರಣಾಂತಿಕ ಕಾಯಿಲೆ ಇದೆ ಎಂದು ನಿರ್ಧರಿಸಿ ಆಗಿತ್ತು. ಅದಕ್ಕೆ ತಕ್ಕಂತೆ ಹೆಸರಾಂತ ಗೂಗಲ್ ವೈದ್ಯನೂ ಅದೇ ಸಲಹೆ ನೀಡಿದ್ದ. ಇನ್ನೇನು ನನ್ನ ಬಳಿ ಇನ್ನು ಎಷ್ಟು ಸಮಯ ಇದೆ ಎಂದು ತಿಳಿಕೊಳ್ಳುವುದು ಮಾತ್ರ ಬಾಕಿ ಇತ್ತು. ಅದಕ್ಕೆ ವೈದ್ಯರ ಬಳಿ ತಪಾಸಣೆಗೆ ಹೋಗುವುದು ಅನಿವಾರ್ಯ ವಾಗಿತ್ತು. ವೈದ್ಯರು ಎಲ್ಲಾ ಪರಶೀಲಿಸಿ ಕೆಲವೊಂದು ಟೆಸ್ಟ್ ಮಾಡಬೇಕು ಎಂದರು. ಬೆಂಗಳೂರಿನಲ್ಲಿ ತಕ್ಷಣಕ್ಕೆ ಸಿಗುವ ವೈದ್ಯಕೀಯ ಸೌಲಭ್ಯಗಳಿಗೆ ಒಗ್ಗಿ ಹೋಗಿರುವ ನನಗೆ ಈ ಹೊರದೇಶದಲ್ಲಿ ವೈದ್ಯರಿಗಾಗಿ ಕಾಯುವುದು, ಟೆಸ್ಟ್ಗಾಗಿ ಕಾಯುವುದು ನಂತರ ರಿಸಲ್ಟ್ಗಾಗಿ ಕಾಯುವುದು . ಇದೆಲ್ಲಾ ನನ್ನನ್ನು ಇನ್ನೂ ಖಿನ್ನತೆಗೆ ಒಳ ಮಾಡಿದ್ದವು.



ಹೀಗೆ ವೈದ್ಯರು ಹೇಳಿದ್ದ ಟೆಸ್ಟ್ ಮಾಡಿಸಿಕೊಂಡು  ಮನೆಗೆ ಬರುವಾಗ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಅಮ್ಮ ಕರೆ ಮಾಡಿ ಯಾಕೆ ಮೂರು ದಿನದಿಂದ ಕರೆ ಮಾಡಿಲ್ಲ ಎಂದು ಕೇಳಿದಳು. ಅಮ್ಮನ ಧ್ವನಿ ಕೇಳಿ ಬಸ್ಸಿನಲ್ಲೇ ಅಳಲು ಆರಂಭಿಸಿದ್ದೆ. ಅಮ್ಮ ಎಷ್ಟು ಸಮಾಧಾನ ಮಾಡಿದರೂ ಒಂದೇ ಸಮನೇ ಅಳುತ್ತಲೇ ಕೂತಿದ್ದೆ. ಆದೇ ಸಮಯಕ್ಕೆ ನಾನಿದ್ದ ಬಸ್ಸಿನಲ್ಲಿ ಒಂದು ಹುಡುಗರ ಗುಂಪು ಬಂದಿತ್ತು. ಆ ಹುಡುಗರ ಗುಂಪು ಬಹುಶಃ 15-16ರ ವಯಸ್ಸಿನದಾಗಿತ್ತು. ಅದು ಕ್ರಿಸ್ಮಸ್ ಸಮಯ. ಹೀಗಾಗಿ ಎಲ್ಲಾ ಶಾಲೆಗಳೂ ಮುಗಿದು ಬೇಸಿಗೆ ರಜೆ ಶುರುವಾಗಿದ್ದ ಸಮಯ. ಎಲ್ಲಾ ಹುಡುಗರು ಜೋರಾಗಿ ಹಾಡುವುದು, ನಗುವುದು ನಡೆಸಿದ್ದರು. ಹದಿಹರೆಯದ ಹುಡುಗರಿಗೆ ಭೂತ ಭವಿಷ್ಯದ ಬಗ್ಗೆ ಯೋಚನೆಯೇ ಇಲ್ಲದೆ ವರ್ತಮಾನದ ಸವಿ ಅನುಭವಿಸುತ್ತಿದ್ದ ಸಮಯ.

ಬೇಸರ ಮನಸ್ಸಿನಲ್ಲಿದ್ದ ನನಗೆ ಅವರ ವರ್ತನೆ ಸಿಟ್ಟು ತರಿಸಿತ್ತು. ಎಂತಹ ಮಕ್ಕಳಪ್ಪ ದು:ಖದಲ್ಲಿ ಸ್ವಲ್ಪ ಹೊತ್ತು ಮನಸ್ಸು ತುಂಬಿ ಅಳಲೂ ಬಿಡುತ್ತಿಲ್ಲಎಂದು ಸಿಡಿಮಿಡಿಗೊಂಡಿದ್ದೆ. ಅದರಲ್ಲಿ ಒಬ್ಬ ಹುಡುಗ ನಾನು ಅಳುವುದನ್ನು ನೋಡಿ ತನ್ನ ಗೆಳೆಯರಿಗೆ ಹೇಳಿದ. ತಕ್ಷಣ ಎಲ್ಲರೂ ಸೇರಿ ಜೋರಾಗಿ ಯಾವುದೋ ಒಂದು ಹಾಡು ಹಾಡಲು ಶುರುಮಾಡಿದ್ದರು. ಆ ಹಾಡು ಯಾವುದು ಎಂದು ನೆನಪಿಲ್ಲಆದರೆ ಆ ಹಾಡಿನ ಅರ್ಥ ನೆನಪಿದೆ. ಕಷ್ಟದ ದಿನಗಳು ಕಳೆದು ಒಳ್ಳೆಯ ಘಳಿಗೆ ಬಂದೇ ಬರುವುದು ಎಂದು ಆ ಹಾಡಿನ  ಅರ್ಥ ವಾಗಿತ್ತು. ಅದನ್ನು ಕೇಳಿ ಒಂದು ಘಳಿಗೆ ನನಗೆ ಆಶ್ಚರ್ಯ ವಾಯಿತು. ಬರೀ ಕಾಕತಾಳೀಯ  ಇರಬಹುದು ಎಂದು ಸುಮ್ಮನಾದೆ. ನಂತರ ಎಲ್ಲರೂ ಜೋ ರಾಗಿ "ಇದು ಕ್ರಿಸ್ ಮಸ್ ಸಮಯ ಯಾರೂ ಅಳಬಾರದು" ಎಂದು ಕೂಗಲು ಆರಂಭಿಸಿದರು. ಇವರು ನನ್ನ ಬಗ್ಗೆ ಮಾತನಾಡುತ್ತಿರಬಹುದೇ ಎಂದು ಸಂಶಯವೂ ಶುರುವಾಗಿತ್ತು. ಇಷ್ಟೆಲ್ಲಾ ನಡೆಯುವಾಗ ಕೆಲಕ್ಷಣ ನಾನು ನನ್ನ ನೋವನ್ನು ಮರೆತಿದ್ದೆ. 

ಅಷ್ಟರಲ್ಲಿ ಆ ಹುಡುಗರೆಲ್ಲಾ ಸೇ ರಿ ಅಳುವುದು ನಿಲ್ಲಿಸಿದರೆ ಸಾಕಾಗಲ್ಲ ನಗಲೂ ಬೇಕು ಎಂದು ಕೂಗಿದರು. ಅದನ್ನು ಕೇಳಿ ನನಗೆ ನಗು ಬಂದಿತ್ತು. ತಕ್ಷಣ ಎಲ್ಲರೂ ಚಪ್ಪಾ ಳೆ ತಟ್ಟಿದರು. ಇದೆಲ್ಲಾ ಏನು ನಡೆಯುತ್ತಿದೆ ಎಂದು ಅರ್ಥ ವಾಗುವ ಮುನ್ನವೇ ನನ್ನ ಸ್ಟಾಪ್ ಬಂದಿತ್ತು. ನಾನು ಬಸ್ಸಿನಿಂದ ಇಳಿಯುತ್ತಿರುವಂತೆಯೇ ಎಲ್ಲಾ ಹುಡುಗರೂ ಸೇರಿ " Stay strong, stay Happy. Everything will be alright" ಎ೦ದು ಅರಚಿದರು.

ನಾನು ಅವರ ಮುಖ ನೋಡಲಿಲ್ಲ. ಆದರೂ ಆ ಅಪರಿಚಿತ ಹುಡುಗರು ನನ್ನ ಮುಖದಲ್ಲಿ ನಗು ತಂದಿದ್ದರು. ಒಂದು ಗಂಟೆಯ ಆ ಬಸ್ ಪ್ರಯಾಣ ಎಂದಿಗೂ ಮರೆಯಲಾರದ ಅನುಭವ ನೀಡಿತ್ತು. ಮನಸ್ಸಿಗೆ ಎಲ್ಲಿಲ್ಲದ ಧೈ ರ್ಯ ಮೂಡಿತ್ತು. ಮುಂದೆ ಎರಡೇ ದಿನಕ್ಕೆ ಡಾಕ್ಟರ್ ಬಳಿ ಹೋ ಗಿ ನನ್ನ ಟೆಸ್ಟ್ ರಿಸಲ್ಟ್ ಬಗ್ಗೆ ವಿಚಾರಿಸಿದಾಗ ತಿಳಿದಿದ್ದು ಇಷ್ಟೇ . ನನಗೆ ಯಾವುದೋ ಇನ್ಫೆಕ್ಷನ್ ಇದೆ ಎರಡು ಮೂರು ತಿಂಗಳು ಔಷಧಿ ತೊಗೊಂಡರೆ ಕಡಿಮೆಯಾಗುವುದು ಎಂದು ಹೇಳಿದರು. ಯಾವುದೇ ರೀತಿಯ ಮಾರಣಾಂತಿಕ  ಕಾಯಿಲೆ ಇಲ್ಲ ನಿಮಗೆ ಎಂದು ಅವರು ಹೇಳಿದ ಕೂಡಲೇ ಎದೆಯ ಮೇಲಿಂದ ದೊಡ್ಡದೊಂದು  ಪರ್ವತವೇ ಇಳಿಸಿದಂತಾಗಿತ್ತು.

ಖುಷಿಯಿಂದ ಮನೆಕಡೆ ಹೆಜ್ಜೆ ಹಾಕುತ್ತಿರುವಾಗ ಬಸ್ಸಿನಲ್ಲಿ ಸಿಕ್ಕ ಆ ಹುಡುಗರು ಹೇಳಿದ್ದ ಮಾತು ನೆನಪಾಯಿತು. ಯಾರು ಎಷ್ಟೇ ಸಮಾಧಾನ ಹೇಳಿದರೂ ಕೇಳದೆ ಮನಸ್ಸು ಆ ಅಪರಿಚಿತ ಹುಡುಗರ ಮಾತಿಗೆ ಧ್ಯೆರ್ಯ ತಂದುಕೊಂಡಿತ್ತು. ಬಹುಷಃ ನನ್ನ ವ್ಯಥೆ ನೋಡಲಾಗದ ನನ್ನ ಮಹಾದೇವ ಆ ಹುಡುಗರ ರೂಪದಲ್ಲಿ ಬಂದು ನನಗೆ ಧೈರ್ಯ ತುಂಬಿದ್ದ.

ಆಮೇಲೆ ಎಷ್ಟೋ  ಬಾರಿ ಅದೇ ದಾರಿಯಲ್ಲಿ, ಅದೇ ಸಮಯಕ್ಕೆ, ಅದೇ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದುಂಟು. ಆದರೆ ಆ ಹುಡುಗರು ಮತ್ತೆ ಎಂದೂ ಸಿಗಲಿಲ್ಲ. ಸಂಕಷ್ಟದ ಸಮಯದಲ್ಲಿ ನನ್ನನ್ನು ಆ ಮಾನಸಿಕ ಒತ್ತಡದಿಂದ ಪಾರು ಮಾಡಿದ ಆ ಹುಡುಗರ ಗುಂಪಿಗೆ ನಾನು ಎಂದೂ ಚಿರ ಋಣಿ.

ಈ ಘಟನೆಯನ್ನು ಇಂದು ಮರುಕಳಿಸಿಕೊಳ್ಳುವಾಗ ನನಗೆ ನೆನಪಾಗಿದ್ದು ಎಚ್ಚೆಸ್ವಿ ಯವರ ಹಾಡು -

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ

Comments

  1. ನಿಜಕ್ಕೂ ಎಷ್ಟು ಒಳ್ಳೆಯ ಅನುಭವ. ಈ ರೀತಿಯ ಘಟನೆಗಳ ಬಗ್ಗೆ ಕೇಳಿದಾಗ ಮನಸ್ಸು ತುಂಬಿ ಬರುತ್ತದೆ. ಅದರಲ್ಲೂ ಈ ದೇಶದಲ್ಲಿ ನೀವು ತಿಳಿಸಿರುವ ವಯಸ್ಸಿನ ಮಕ್ಕಳಿಂದ ಆಗುವ ತೊಂದರೆಗಳ ಬಗ್ಗೆ ಕೇಳುವುದೇ ಹೆಚ್ಚು.
    ನಿಜಕ್ಕೂ ನಿಮ್ಮದು ಮಾನವತೆಯ ಬಗ್ಗೆ ಭರವಸೆ ಮೂಡಿಸಿದ ಅನುಭವ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete

Post a Comment