ಸುಂದರಕಾಂಡ ಪ್ರವಚನ

ಸುಂದರಕಾಂಡ ಪ್ರವಚನ

ವರದಿ - ಶ್ರೀ ಡಾ ಸಿ ವಿ ಮಧುಸೂದನ 



ಫೆಬ್ರುವರಿ 10ನೆಯ ದಿನಾಂಕ ಶನಿವಾರದಂದು ಸಿಡ್ನಿಯ ಗ್ಲೆನ್ ಫೀಲ್ಡ್ ಉಪನಗರದಲ್ಲಿರುವ ಶ್ರೀ ಕನಕಾಪುರ ನಾರಾಯಣ ಅವರ ಸ್ವಗೃಹದಲ್ಲಿ ಡಾ॥ ಅನಂತ ರಾವ್ ಅವರಿಂದ  ವಾಲ್ಮೀಕಿ ರಾಮಾಯಣದ ಸುಂದರಕಾಂಡದ ಪ್ರವಚನವನ್ನು ಏರ್ಪಡಿಸಲಾಗಿತ್ತು.

ಸಂಜೆ 5:45 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸುಮಾರು 40 ಮಂದಿ ಉಪಸ್ಥಿತರಿದ್ದರು.

ಮೊದಲಿಗೆ

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ॥ಪ॥ ತ್ರಿಜಗ ವಂದಿತನಾದ ದೇವ ದೇವನೆ ಶರಣು ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ॥ ಅ.ಪ॥ ಎಂಬ ಶ್ರೀ ವ್ಯಾಸ ರಾಯರ ಕೀರ್ತನೆಯನ್ನು ಚಿ॥ ಸಿಂಧು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವು ಸುಗಮವಾಗಿ ನೆರವೇರಲು ಶ್ರೀವಿನಾಯಕನಿಗೆ ಪ್ರಾರ್ಥನೆಯನ್ನು ಎಲ್ಲರ ಪರವಾಗಿ ಅರ್ಪಿಸಿದಳು.

ಅನಂತರ ಡಾ॥ ಅನಂತ ರಾವ್ ಅವರ ಪ್ರವಚನ ಆರಂಭವಾಯಿತು.  ಅವರ ಮಗಳು ಶ್ರೀಮತಿ ಅದಿತಿ ಹಿನ್ನೆಲೆ ವಾದ್ಯ ಸಂಗೀತವನ್ನು ಸಂಯೋಜಿಸಿದ್ದರು.

ಸುಂದರಕಾಂಡವು ಮುಖ್ಯವಾಗಿ ಹನುಮಂತನ ಸಾಹಸದ ಕಥಾನಕವಾದ್ದರಿಂದ, ವಾಲ್ಮೀಕಿ ರಾಮಾಯಣದ ಜತೆಗೇ ಕನ್ನಡದ ತಿಪ್ಪಣಾರ್ಯ ವಿರಚಿತ ಹನುಮದ್ವಿಲಾಸದ ಕೆಲವು ಭಾಗಗಳನ್ನೂ ಸಮಯೋಚಿತವಾಗಿ ಅಳವಡಿಸಿಕೊಂಡಿದ್ದರು.

ಮೊದಲಿಗೆ ರಾಮಾಯಣದ ಈ ಭಾಗಕ್ಕೆ ಸುಂದರಕಾಂಡ ಎಂಬ ಹೆಸರು ಬರಲು ಎರಡು ಮೂರು ಕಾರಣಗಳನ್ನು - ಸಾಹಿತ್ಯದ ದೃಷ್ಟಿಯಿಂದ ಸುಂದರವಾದುದು; ಕಪಿಗಳಿಗೆ ಸುಂದರ ಎಂಬ ಹೆಸರೂ ಇದೆ ಇತ್ಯಾದಿ - ವಿವರಿಸಿದರು. ಹೆಚ್ಚು ಸಮಯಾವಕಾಶ ಇಲ್ಲದಿದ್ದುದರಿಂದ ಹನುಮಂತನ ಸಮುದ್ರೋಲ್ಲೋಂಘನದಿಂದ ಆತನು ಸೀತೆಯನ್ನು ಕಂಡು ಶ್ರೀರಾಮನ ಮುದ್ರೆಯುಂಗುರವನ್ನು ಆಕೆಗಿತ್ತು, ಸೀತೆಯಿಂದ ಚೂಡಾಮಣಿಯನ್ನು ಪಡೆಯುವವರೆಗೆ ಪ್ರವಚನವನ್ನು ಸೀಮಿತಗೊಳಿಸಲಾಗಿತ್ತು.

ಡಾ॥ ಅನಂತ ರಾವ್ ಅವರ ಸಂಸ್ಕೃತ ಶ್ಲೋಕಗಳ ಸರಳವಾದ ವಿವರಣೆ, ಅವುಗಳ ಮತ್ತು ಹನುಮದ್ವಿಲಾಸದ ಹಾಡುಗಳ ಗಮಕ ಎಲ್ಲವೂ ನೆರೆದಿದ್ದವರಿಗೆ ತುಂಬಾ ಮೆಚ್ಚುಗೆಯಾಯಿತು. ಹನುಮಂತನು ಎಲ್ಲಿಯೂ ಸೀತೆಯನ್ನು ಕಾಣದೆ ನಿರಾಶಾಭರಿತನಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾಗ “ಜೀವನ್ ಭದ್ರಾಣಿ ಪಶ್ಯತಿ” ಜೀವಂತವಾಗಿದ್ದರೆ ಒಳ್ಳೆಯದನ್ನು ಕಾಣಬಹುದು ಎಂಬುದನ್ನೂ, ಸೀತೆಗೆ ರಾಮನ ಮುದ್ರೆಯುಂಗುರವನ್ನು ಕೊಟ್ಟದ್ದನ್ನು ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿ ದುಷ್ಯಂತನು ಶಕುಂತಲೆಗೆ ತನ್ನ ಜ್ಞಾಪಕವಾಗಿ ಉಂಗುರವನ್ನು ಕೊಟ್ಟಿದ್ದರ ಹೋಲಿಕೆಯನ್ನೂ ಮನೋಜ್ಞವಾಗಿ ವಿವರಿಸಿದರು.

ಪ್ರವಚನ ಸುಮಾರು 8:45 ಗಂಟೆಗೆ ಮುಕ್ತಾಯವಾಯಿತು.

ಡಾ॥ಅನಂತ ರಾವ್ ಅವರಿಗೆ ಶಾಲುವನ್ನು ಹೊದಿಸಿ ಅವರು ಮತ್ತು ಶ್ರೀಮತಿ ಅದಿತಿ ಇಬ್ಬರಿಗೂ ತಾಂಬೂಲವನ್ನಿತ್ತು ಗೌರವಿಸಲಾಯಿತು.

ಕಾರ್ಯಕ್ರಮದ ಇನ್ನೊಂದು ಗಮನೀಯ ಅಂಶ ಎಂದರೆ ಶ್ರೀ ಅಭಿಷೇಕ್ ಅವರಿಂದ ಸ್ವಾತಿ ತಿರುನಾಳ್ ಅವರಿಂದ ರಚಿತವಾದ “ಭಾವಯಾಮಿ ರಘುರಾಮಂ” ಎಂಬ ಕೀರ್ತನೆಯ ಭಾವಪೂರ್ಣವಾದ ಗಾಯನ.

ಕಾರ್ಯಕ್ರಮದ ಸಮಾಪ್ತಿಯಲ್ಲಿ ಮಂಗಳಾರತಿ ಮಾಡುವಾಗ ಅನೇಕರು “ಹನುಮಾನ್ ಚಾಲೀಸ” ಸಮೂಹ ಭಜನೆಯಲ್ಲಿ ಭಾಗವಹಿಸಿದುದು ಅಪ್ಯಾಯಮಾನವಾಗಿತ್ತು.

ಅನಂತರ ಎಲ್ಲರಿಗೂ ರುಚಿಕಟ್ಟಾದ ಭೋಜನವನ್ನು ಏರ್ಪಡಿಸಲಾಗಿತ್ತು.

ಈ ರಸಭರಿತ ಸಂಜೆಯನ್ನು ನಿರ್ವಹಿಸಿದ ಶ್ರೀ ನಾರಾಯಣ ಮತ್ತು ಅವರ ಕುಟುಂಬದವರಿಗೆ ಎಲ್ಲರ ಕೃತಜ್ಞತೆ ಸಲ್ಲುತ್ತದೆ.

Comments