ಬೆಳಕಿನ ಕಾಲಂದುಗೆ...

ಬೆಳಕಿನ ಕಾಲಂದುಗೆ...

ಲೇಖನ - ಶ್ರೀಮತಿ ಮಂಜುಳಾ ಡಿ



ತಾಬೀಜ್ ಬನಾ ಕೆ ಪೆಹನು ಉಸೆ

ಆಯಿಜ್ ಕಿ ತರಹ ಮಿಲ್ ಜಾಯೆ ಕಹೀ..


(ಆಶೀರ್ವಾದವಾಗಿ ನೀ ಒಮ್ಮೆ

ಸಿಕ್ಕುಬಿಡು ತಾಯಿತವಾಗಿ

ನಿನ್ನನ್ನು ಕಟ್ಟಿಕೊಂಡು ಬಿಡುತ್ತೇನೆ…)

      ಆಹ್! ಅನಿಸುವ ನಕ್ಷತ್ರದ ಬೆಳಕಿನಂತಹ ಈ ಸಾಲು ಓದಿದ ಕೂಡಲೇ ಇದರ ಹಿಂದಿರುವ ಮನಸ್ಸಿಗಾಗಿ ಅರಿವಿಲ್ಲದೇ ಹುಡುಕಾಡುವಂತಾಗುವ ಜಲಪಾತದಂಥ ಸಾಲುಗಳು. ಹೀಗೆ ಈ ಸಾಲುಗಳ ಹಿಂದಿರುವ ಮನಸ್ಸನ್ನು ಹುಡುಕಾಡಿದರೆ ಸಿಗುವ ಉತ್ತರ ಗುಲ್ಜಾರ್!!  ಈ ಹೆಸರಿನೊಂದಿಗೆ ಬಿಳಿ ಕುರ್ತಾ, ಕನ್ನಡಕದ ಫ್ರೇಮಿನ ಹಿಂದಿರುವ ಕರುಣಾಯುತ ಛಾಯೆಯ ಕಂಗಳು,  ಮಂದಸ್ಮಿತ ಚೆಹರೆಯ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ.  ಗುಲ್ಜಾರ್! ಇದೊಂದು ಪ್ರವಹಿಸುವ ನದಿ ಎಂದರೆ ಹೆಚ್ಚು ಸರಿಯಾದಿತೇನೋ. ಏಕೆಂದರೆ ನದಿಯ ನೀರನ್ನು ಪೂರ್ತಿ ಆಸ್ವಾದಿಸುತ್ತೇನೆ ಎನ್ನುವುದೆಂದಿಗೂ ಸಾಧ್ಯವಿಲ್ಲ. ಬೊಗಸೆಯಲ್ಲಿ ಎತ್ತಿ ತುಸು ಕುಡಿದು ತಲೆಯ ಮೇಲೆ ಪ್ರೋಕ್ಷಿಸಿಕೊಂಡು ಧನ್ಯರಾಗುವ ಭಾವ ತಂದುಕೊಳ್ಳಬಹುದು. ಅಥವಾ ಬಾಟಲಿಯಲ್ಲಿ ಹೊತ್ತು ತಂದು ದಿನವೂ ನಮ್ಮ ನೀರಿನೊಂದಿಗೆ ಬೆರೆಸಿ ಅದೇ ನದಿಯ ನೀರಿನೊಂದಿಗೆ ಇದ್ದೇವೆ ಎಂದು ತನ್ಮಯರಾಗಬಹುದು. ಗುಲ್ಜಾರ್ ಅವರನ್ನು ಚಿಕ್ಕ-ಪುಟ್ಟ ಲೇಖನಗಳಲ್ಲಿ ತೆರೆದಿಡುವುದು ಎಂದಿಗೂ ಸಾಧ್ಯವಾಗದ್ದು.

ನನ್ನೆಲ್ಲಾ  ನಡುರಾತ್ರಿ- ಸಂಪಿಗೆಮರ-ಚಹಾ- ಲತಾದೀದಿಯೊಂದಿಗೆ ಗುಲ್ಜಾರ್ ಸೇರಿದ್ದು

ಕಾಶ್ ಐಸಾಹೋ ತೇರೆ ಕದಮೋಂಸೆ

ಚುನ್ ಕೆ  ಮಂಜಿಲ್ ಚಲೇ…ಆರ್ ಕಹೀದೂರ್ ಕಹೀ


ತುಮ್ ಅಗರ್ ಸಾಥ್ ಹೋ ಮಂಜಿಲೋಕಿ

ಕಮೀ ತೋ ನಹೀ..


(ನಿನ್ನ ಹೆಜ್ಜೆಗಳನ್ನೇ ಆಯ್ದ ನನ್ನ

ಹಾದಿ ನನ್ನನ್ನೂ ನಿನ್ನೊಂದಿಗೆ

ಮತ್ತೆಲ್ಲೋ ದೂರದವರೆಗೂ

ಸಾಗುವಂತಾಗಿ ಬಿಡಬಾರದೇ...


ನೀ ನನ್ನೊಂದಿಗಿದ್ದರೆ

ಗಮ್ಯಗಳಿಗೆ ಕೊರತೆಯಾದರೂ ಎಲ್ಲಿ)

     ಈ ಸಾಲುಗಳಿಂದಾಗಿ. ಆಂಧಿ ಸಿನೆಮಾದ 'ತೆರೆ ಬಿನಾ ಜಿಂದಗೀ ಸೇ ಕೋಯಿ..' ಹಾಡಿನ ಈ ಸಾಲು ಕೆಲವು ದಶಕಗಳ ಹಿಂದೆ ನನ್ನನ್ನ್ಲು ಹಿಡಿದಿಟ್ಟ ರೀತಿ ಅದೆಷ್ಟು ಗಾಢವಾಗಿತ್ತೆಂದರೆ, ಇದರ ನಂತರ ಗುಲ್ಜಾರ್ ಅವರ ಸಾಹಿತ್ಯ ಹೆಚ್ಚು ಹೃದ್ಯವಾಗತೊಡಗಿತು.  ಅಕ್ಷರಗಳು ಗುಲ್ಜಾರ್ ಅವರ ಲೇಖನಿಯಲ್ಲಿ ಪಡೆಯುವ ಮಾಂತ್ರಿಕತೆ, ಅವರ ಸಾಲುಗಳನ್ನು ಓದಿ ಹೊರಬರುವ ಹೊತ್ತಿಗೆ ನಮ್ಮದೇ   ತುಮುಲಗಳನ್ನು ಹರವಿಟ್ಟಂತೆ ಭಾಸವಾಗಿ ಪಲ್ಲವಿಸುವ ಸಂತೈಕೆ.

       ಗುಲ್ಜಾರ್ ಬದುಕು ಮೊದಲೇ ಹೇಳಿದ ಹಾಗೆ ನದಿಯಂತೆ. ಆಗಾಗ ದೇಶದ ಎಲ್ಲಾ ಭಾಷೆಗಳಲ್ಲೂ ಲೇಖನಗಳು, ಪುಸ್ತಕಗಳಲ್ಲಿ ಪ್ರವಹಿಸುತ್ತಲೇ ಇರುತ್ತಾರೆ. ಇಷ್ಟೇಕೆ ಎನ್ನುವುದಕ್ಕೆ ಸರಳ ಉತ್ತರ! ಅವರ ಭಾವದ ಹರಿವು ತಾಕುವುದು ಒಂದು ಕಾಲವನ್ನಲ್ಲ. ಎಲ್ಲಾ ಕಾಲಕ್ಕೂ ಎಲ್ಲಾ ರೀತಿಯ ಜನಸಮೂಹದ ಭಾವ ತಂತಿಯನ್ನು ಮೀಟುವಂತ ಭಾವತೀವ್ರತೆ-ತದ್ಯಾತ್ಮತೆ ಅವರ ರಚನೆಗಳಿಗಿದೆ. ನನ್ನನ್ನು ತೀವ್ರವಾಗಿ ತಾಕಿದ ಅವರ ಬದುಕಿನ ಎರಡು ಮುಖ್ಯ ಘಟನೆಗಳ ಪ್ರಧಾನ ಎಳೆಗಳು ಅವರ ವ್ಯಕ್ತಿತ್ವದ ಘನತೆಯ ಸಾರವೆನಿಸುವುದು.

       ಗುಲ್ಜಾರ್ ಅವರ ಮೂಲ ಹೆಸರು ಸಂಪೂರ್ಣ ಸಿಂಗ್ ಕಾಲ್ರಾ. ಹುಟ್ಟಿದ್ದು ೧೮-೦೮-೧೯೩೪ ರಂದು ಸಿಖ್ ಕುಟುಂಬದಲ್ಲಿ. ತಂದೆ ಮಖನ್ ಸಿಂಗ್ ಕಾಲ್ರಾ-ತಾಯಿ ಸುಜನ್ ಕೌರ್. ಈಗಿನ ಪಾಕಿಸ್ಥಾನದ ಝೀಲಮ್ ಜಿಲ್ಲೆಯ ದಿನಾ ಎಂಬ ಸ್ಥಳದಲ್ಲಿ. ಶಾಲೆಯಲ್ಲಿರುವಾಗ ಟ್ಯಾಗೋರರ ಅನುವಾದಗಳನ್ನು ಓದಿದ್ದು ಮತ್ತು ಅದು ಬೀರಿದ ಪ್ರಭಾವ ತನ್ನ ಬದುಕಿನ ಮುಖ್ಯ ಸಂಗತಿ ಮತ್ತು ತಿರುವುಗಳಲ್ಲಿ ಒಂದು ಎಂದು ಗುಲ್ಜಾರ್ ಸದಾ  ನೆನೆಯುತ್ತಾರೆ. ದೇಶ ಇಬ್ಬಾಗವಾದ ವೇದನೆ ಇವರ ಬದುಕನ್ನು ಪಾಕಿಸ್ಥಾನದಿಂದ ಮುಂಬೈಗೆ ತಂದು ನಿಲ್ಲಿಸುತ್ತದೆ. ಮುಂಬೈನಲ್ಲಿ ಬದುಕು ತೂಗಿಸಲು ಮಾಡಿದ ಹಲವಾರು ಚಿಕ್ಕ-ಪುಟ್ಟ ಕೆಲಸಗಳಲ್ಲಿ 'ವಿಚಾರೆ ಮೋಟಾರ್ಸ'ನಲ್ಲಿ  ರಿಪೇರಿಯಾದ ಕಾರುಗಳಿಗೆ ಬಣ್ಣ ಬಳಿಯುವ ಕೆಲಸವೂ ಒಂದು. ಅವರ ತಂದೆಗೆ ಇವರು ಕವನ ಗೀಚುವುದು ಇಷ್ಟವಿಲ್ಲ. ಆದರೆ ದೇಹದ ಪ್ರತಿ ಕಣ ಮೀಟಿದಲೆಲ್ಲಾ ಸ್ವರಗಳಾಗಿ ಹೊಮ್ಮುವಾಗ ಬರೆಯದೇ ಇರುವ ಸಾಧ್ಯತೆಯಾದರೂ ಹೇಗೆ? ಮುಂಬೈನ ಪ್ರೋಗ್ರೆಸ್ಸೀವ್ ರೈಟರ್ಸ ಅಸೋಸಿಯೇಷನ್ ನಲ್ಲಿ ಪರಿಚಯವಾದ ಬಿಮಲ್ ರಾಯ್ ಅವರೇ ಇವರ ಬದುಕಿಗೆ  ಜೀವ ಸಂಚಾರ ತಂದರು. ೧೯೬೩ರಲ್ಲಿ ಬಿಮಲ್ ರಾಯ್ ನಿರ್ಮಿಸುತ್ತಿದ್ದ 'ಬಂದಿನಿ' ಸಿನೆಮಾದ 'ಮೊರೆ ಅಂಗ್ ಲಗಾಯೆ...' ಹಾಡು ಗುಲ್ಜಾರ್ ಅವರ ಮೊದಲ ಹಾಡು. ಈ ಹಾಡು ಅದರ ಸೊಗಸಿನಿಂದಾಗಿಯೇ ಪಸರಿಸಿತು. ಹೀಗೆ ಆರಂಭವಾದ ಗುಲ್ಜಾರ್ ಅವರ ಲೇಖನಿ ೯೦ ವರ್ಷಗಳಾದರೂ ಅದೇ ಕಂಪು-ಘನತೆಯಲ್ಲಿ ಸಾಗುತ್ತಿದೆ.

ಮೈನೆ ತೆರೆಲಿಯೇ ಹೀ

ಸಾಥ್ ರಂಗ್ ಕಿ ಸಪ್ನೆ ಚುನೆ...


(ನಾ ನಿನಗಾಗಿಯೇ

ಆಯ್ದ ಏಳು ಬಣ್ಣದ ಕನಸುಗಳು..)



      ಮುಖೇಶ್ ನ ಕಂಠದಲ್ಲಿ ಎಷ್ಟೊಂದು ಚಂದವಾದ ಕಂಪೆನಿಸುವ ಗುಲ್ಜಾರ್ ಅವರ ಸಾಲು ೧೯೭೧ರ  ಮೆರೆ ಅಪ್ನೆ ಸಿನೆಮಾದಿಂದ ನಟಿ ಮೀನಾಕುಮಾರಿಗಾಗಿಯೇ ಬರೆದದ್ದು ಇರಬಹುದು. ಈ ಸಿನೆಮಾದಲ್ಲಿ ಬಾಲಿವುಡ್ ಪ್ರಸಿದ್ದ ನಟಿ ಮೀನಾಕುಮಾರಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಗುಲ್ಜಾರ್ ಅವರಿಗಾಗಿ ನಟಿಸಿದಳು. ಅದಾಗಲೇ ಎರಡು ಮದುವೆಯಾಗಿ ಮೂರು ಮಕ್ಕಳಿದ್ದ ಆಕೆÀಗಿಂತ ೧೬ ವರ್ಷ ದೊಡ್ಡವನಾದ ಕಮಾಲ್ ಅಮ್ರೋಹಿಯನ್ನು ಮೋಹಿಸಿ ಮದುವೆಯಾದ ಮೀನಾಕುಮಾರಿಗೆ ಕಟ್ಟುಪಾಡು-ದಿಗ್ಬಂದನ  ಹೆಚ್ಚಾದಂತೆ ಮದುವೆಯೂ ಉಸಿರುಗಟ್ಟುತ್ತಿದ್ದ ದಿನಗಳವು.

      ಬಿಮಲ್ ರಾಯ್ ಅವರು ನಿರ್ಮಿಸುತ್ತಿದ್ದ 'ಬೆನಜೀರ್' ಸಿನೆಮಾದ ನಾಯಕಿ ಮೀನಾ ಕುಮಾರಿ. ಅದೇ ಸಿನೆಮಾ ಅಸಿಸ್ಟೆಂಟ್ ಡೈರೆಕ್ಟರ್ ಗುಲ್ಜಾರ್ ಅವರೊಂದಿಗೆ ಆದ ಪರಿಚಯ. ಇಬ್ಬರಲ್ಲೂ ಪ್ರವಹಿಸುತ್ತಿದ್ದ ಕಾವ್ಯಾಸಕ್ತಿಯ ಎಳೆ ಪರಸ್ಪರ ಬಂಧಿಸಿಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಷÄಬ್ರಗೊಂಡ ಆಕೆಯ ಬದುಕಿಗೆ ಗುಲ್ಜಾರ್ ಬೆಳಕಿನ ಕಾಲಂದುಗೆ ತೊಡಿಸಿದಂತೆ ಆಕೆಯ ಬದುಕಿಗೆ ಜೀವ ಸ್ಫರ್ಶವಾಗುತ್ತದೆ. ಮಹಜಬೀನ್ ಬಾನು ಆಗಿ ಹುಟ್ಟಿ ಬಾಲಿವುಡ್ ಪಾದಾರ್ಪಣೆಯೊಂದಿಗೆ ಮೀನಾಕುಮಾರಿ ಆದ ಈಕೆಗೆ  ವಿಪರೀತ ಕಾವ್ಯಾಸಕ್ತಿ. ಬಹಳಷ್ಟು ಕವಿತೆಗಳನ್ನು ಮಹಜಬೀನ್ ಹೆಸರಿನಲ್ಲಿ ರಚಿಸಿದ್ದಳು.  ಆದರೆ ಅವುಗಳೆಡೆಗೆ ಆಸಕ್ತಿ ತೋರುವುದಾಗಲಿ, ಪ್ರೋತ್ಸಾಹಿಸುವುದಿರಲಿ ಆಕೆ ಕವಿಯಿತ್ರಿ ಎಂಬುದನ್ನೇ ಕವiಲ್ ಆಮ್ರೋಹಿ ಗಮನಿಸುತ್ತಿರಲಿಲ್ಲ. ಮಾನಸಿಕ ತುಮುಲಗಳು, ಅದುಮಿಟ್ಟ  ಭಾವಗಳು ಆಕೆಯ ಕವನಗಳಲ್ಲಿ ಹೀಗೆ ಹೊಮ್ಮಿವೆ,


ಆಗಾಜ್ ತೋ ಹೋತಾ ಹೈ

ಅಂಜಾಮ್ ನಹೀ ಹೋತಾ

ಜಬ್ ಮೇರಿ ಕಹಾನಿ ಮೆ

ವೋ ನಾಮ್ ನಹೀ ವೋತಾ...


(ನನ್ನ ಬದುಕಿನಲ್ಲಿ

ಆ ಹೆಸರು ಇರದಿದ್ದರೆ

ಆರಂಭವೇನೋ ಆಗುತ್ತದೆ

ಅಂತ್ಯವಾಗುವುದಿಲ್ಲ)


       ೧೯೬೪ರಲ್ಲಿ ಕಮಲ್ ಆಮ್ರೋಹಿಯಿಂದ ಬೇರ್ಪಟ್ಟು ತಂಗಿ ಮಧು ಮನೆಯಲ್ಲಿ ನೆಲೆಸುತ್ತಾಳೆ. ಕಣಕಣದಿ ಕಾವ್ಯ ತುಂಬಿಕೊAಡಿದ್ದ ಗುಲ್ಜಾರ್ ಅವರೊಂದಿಗೆ  ಮೀನಾಕುಮಾರಿಯ ಬಹಳಷ್ಟು ಸಮಯ ಸಾಹಿತ್ಯ ಚರ್ಚೆಯಲ್ಲಿ ಕಳೆಯುತ್ತಿತ್ತು. ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದ ಮೀನಾಕುಮಾರಿಗೆ ರಂಜಾನ್ ಉಪವಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆಕೆಗೆ ಬದಲಾಗಿ ಗುಲ್ಜಾರ್ ರಂಜಾನ್ ಉಪವಾಸ ಮಾಡುತ್ತಿದ್ದರು ಮತ್ತು ಅದು ಈಗಲೂ ಆಚರಣೆಯಲ್ಲಿದೆ. ಜ್ವಾಜಲ್ಯಮಾನ್ಯವಾದ ಅಗ್ನಿಯಷ್ಟು ಶುಭ್ರವಾದ ಪ್ರೇಮ ಎಂದರೆ ಹೀಗಿರುತ್ತದೆಯೇ ಎಂಬ ಉದ್ಗಾರದೊಂದಿಗೆ ತಿಳಿ ನೀರು-ತಿಳಿ ಆಗಸದಷ್ಟು ಚಂದದ ಭಾವವವೊಂದು ತೇಲುತ್ತದೆ.


ಮುಸ್ಕುರಾಹಟ್ ಸಿ ಕಿಲಿ

ರಹೆತಿ ಹೈ ಆಂಖೋ ಮೆ ಕಹೀ

ನೂರ್ ಕೀ ಬೂಂದ್ ಹೈ

ಸದಿಯೋಂಸೆ ಬಹಾ ಕರತೀ ಹೈ...


(ಕಣ್ಣುಗಳಲ್ಲಿ ಕಿರುನಗೆಯೊಂದು

ಅರಳಿದಂತಿರುತ್ತದೆ

ಬೆಳಕಿನ ಹನಿಯೊಂದು

ಸಹಸ್ರಮಾನದೊಂದಿಗೆ ಸಾಗಿ ಬರುತ್ತಿದೆ)

      ಆಕೆಯ ಕೊನೆಯ ದಿನಗಳ ಬದುಕನ್ನು ಗುಲ್ಜಾರ್ ಸಂಪೂರ್ಣವಾಗಿ ಆವರಿಸಿದ್ದರು. ಮದ್ಯಾನ್ಹದ ಉರಿಬಿಸಿನಲ್ಲಿ ಕಾಮನಬಿಲ್ಲಿನಂತೆ ಆತ ಆಕೆಯ ಬದುಕಿನಲ್ಲಿ.  ಆಕೆಯ ಆಸ್ಪತ್ರೆಯ ಪ್ರತಿಯೊಂದನ್ನು ಜತನದಿಂದ ಕಾಯ್ದುಕೊಂಡರು. ತನ್ನೆಲ್ಲ ಡೈರಿಗಳನ್ನು ತನ್ನೆಲ್ಲ ಲಿಖಿತವನ್ನು ತನ್ನ ಬದುಕಿನ ಸಾರವೆಂಬAತೆ ಸಾಯುವ ಮುನ್ನ ಗುಲ್ಜಾರ್ ಕೈಗಿತ್ತಳು. ಗುಲ್ಜಾರ್ ಅತ್ಯಂತ ಪ್ರೇಮಪೂರ್ವಕವಾಗಿ ಆಕೆಯ ನಂತರ ೧೯೭೨ ರಲ್ಲಿ “ಮೀನಾ ಕುಮಾರಿ ಕೀ ಶಾಯರಿ” ಎಂಬ ಪುಸ್ತಕ ಸಂಪಾದಿಸಿ ಪ್ರಕಟಿಸಿದರು. ಕೇವಲ ೩೮ ರ ವಯಸ್ಸಿನಲ್ಲಿ ಕೊನೆಯಾದ ಆಕೆ ಬದುಕಿದ್ದರೆ ಬದುಕು ಹೇಗೆ ಬೆಸೆದಿರುತ್ತಿತ್ತೂ...

ತುಜ್ ಸೆ ನಾರಾಜ್ ನಹೀ

ಜಿಂದಗಿ ಹೈರಾನ್ ಹೂ ಮೈ...

(ಬದುಕೆ ನೀನೆಂದರೆ ಕೋಪವಿಲ್ಲ

ಆದರೆ ಚಕಿತಳಾಗಿದ್ದೇನೆ)

ಸಿನೆಮಾ ಲೋಕ ಅನಾವರಣಗೊಳ್ಳುವುದು ಪಾರ್ಟಿಗಳಲ್ಲೇ ಇರಬೇಕು. ಇಂಥದ್ದೇ ಒಂದು ಪಾರ್ಟಿಯಲ್ಲಿ ಬಂಗಾಲಿ ತಾರೆ ರಾಖಿ ಮತ್ತು ಗುಲ್ಜಾರ್ ಮೊದಲ ಭೇಟಿಯ ಸ್ಮೃತಿ ಎಷ್ಟೊಂದು ಉಜ್ವಲವಾಗಿತ್ತೆಂದರೆ, ಇಬ್ಬರಲ್ಲೂ ಆಕಾರಾಚೆಗಿನ ಧಾರಾಕಾರ ಭಾವಗಳ ಮಳೆ. ಅಸ್ಪಷ್ಟ ಕ್ಷಣದ ಮೃದು ಕಂಪಿನೊAದಿಗೆ ಸಾಗುವ ಕಾಂತತ್ವ. ೧೯೭೩ ರಲ್ಲಿ ಮದುವೆಯ ಬಂಧದಲ್ಲಿ ಕಲೆತಿತು. ಆದರೆ ಇದಕ್ಕೂ ಮುನ್ನ ಕಟ್ಟುಪಾಡುಗಳನ್ನು ಪಾಲಿಸುವ ಸಂಪ್ರದಾಯಬದ್ದ ಆಲೋಚನೆಯ ಗುಲ್ಜಾರ್ ರಾಖಿಯಿಂದ ಮದುವೆಯ ನಂತರ ಸಿನೆಮಾ ಮಾಡಬಾರದು ಎಂಬ ಮಾತು ಪಡೆದಿದ್ದರು.  ಆದರೆ ಆ ವೇಳೆ ರಾಖಿ ಸಿನೆಮಾ ಕ್ಷೇತ್ರದಲ್ಲಿ ಅತೀ ಬೇಡಿಕೆಯ ನಟಿ. ನಿರ್ಮಾಪಕರು ಪ್ರತಿನಿತ್ಯ ರಾಖೀಯ ಕಾಲ್ ಶೀಟ್ ಗಾಗಿ ಬರುತ್ತಲೇ ಇದ್ದರು. ಇದು ಇಬ್ಬರ ಮಧ್ಯೆ ಆಗಾಗ ಮನಸ್ತಾಪ ತರುತ್ತಲೇ ಇತ್ತು. ವರ್ಷದಲ್ಲೇ ಮೇಘನಾ ಜನಿಸಿದರೂ ಮನಸ್ತಾಪಗಳು ಹೆಚ್ಚಿದವು. ಮದುವೆಯ ಒಂದು ವರ್ಷಕ್ಕೇ ಇಬ್ಬರೂ ಬೇರ್ಪಟ್ಟರು!

ಆದರೆ ಇವರ ದಾಂಪತ್ಯ ಬೇರ್ಪಡಲಿಲ್ಲ!!!

ಆದರೆ ಗುಲ್ಜಾರ್-ರಾಖೀ ಇಬ್ಬರೂ ಬೇರೆ ಮದುವೆ ಆಗಲಿಲ್ಲ. ಅಷ್ಟೇ ಏಕೆ ಇಬ್ಬರ ಹೆಸರು ತುಸುವಾಗಿಯಾದರೂ ಇನ್ಯಾರ ಹೆಸರಿನೊಂದಿಗೂ ತಳುಕು ಕೂಡ ಹಾಕಿಕೊಳ್ಳಲಿಲ್ಲ. ವಿಚ್ಛೇದನ ಪಡೆದಿಲ್ಲ. ಬೇರೆ ಬೇರೆ ವಾಸಿಸುತ್ತಾರೆ. ಬದುಕು ಮಾತ್ರ ಒಟ್ಟಿಗೆ ಸಾಗುತ್ತಿದೆ. ಹೋದೆಡೆಯಿಂದೆಲ್ಲಾ ಆತ ಸೀರೆಯೊಂದನ್ನು ಆಕೆಗಾಗಿ ಹೆಕ್ಕಿ ತರುತ್ತಾರೆ. ಈಕೆ ಕೀರು ಮಾಡಿದಾಗಲೆಲ್ಲಾ ಡಬ್ಬ ತುಂಬಿ ಆತನಿಗಾಗಿ ಕಳುಹಿಸುತ್ತಾಳೆ. ನಡೆದದ್ದನ್ನೆಲ್ಲಾ ಪರಸ್ಪರ ಒಬ್ಬರಿಗೆ ಒಬ್ಬರು ಒಪ್ಪಿಸುತ್ತಾರೆ. ರಾಖಿ 'ನಾಬಿಬ್ಬರೂ ಬೆಸ್ಟ್ ಸೆಪರೇಟೆಡ್ ಕಪಲ್ಸ್' ಎಂಬುದಾಗಿ ತಮ್ಮ ಬಂಧಕ್ಕೆ ಶೀರ್ಷಿಕೆ ಕೊಟ್ಟರೆ, ಗುಲ್ಜಾರ್ 'ಆಕೆ ನನ್ನ ಬದುಕಿನ ಅತ್ಯಂತ ದೀರ್ಘವಾದ ಚಿಕ್ಕ ಕವಿತೆ' ಎಂಬುದಾಗಿ ರಾಖಿಯನ್ನು ವಿವರಿಸುತ್ತಾರೆ. ಇದಕ್ಕಿಂತ ದಾಂಪತ್ಯವಿದೆಯಾ!? ಎಂಬ ಉದ್ಗಾರ ಮುಗುಳ್ನಗೆಯೊಂದಿಗೆ ಮೂಡುತ್ತದೆ.

ಕಹಾ ಸೇ ಚಲೇ ಕಹಾ ಕೆ ಲಿಯೇ

ಯೇ ಕಬರ್ ನಹೀ ಥೀ ಮಗರ್

ಕೋಯೀ ಭೀ ಸಿರಾ ಜಹಾ ಜಾ ಮಿಲಾ

ವಹೀ ತುಮ್ ಮಿಲೋಗೆ

ಕೆ ಹಮ್ ತಕ್ ತುಮ್ಹಾರಿ ದುವಾ ಆ ರಹೀ ಥೀ...

(ಎಲ್ಲಿಂದ ಎಲ್ಲಿಗೆ ಪಯಣಿಸುತ್ತಿದ್ದೇನೆ

ಅರಿವಿಲ್ಲ

ಯಾವುದೇ ಕಿನಾರೆಗಳು ಸಿಕ್ಕಲ್ಲಿ

ಅಲ್ಲಿ ನೀ ಸಿಗುತ್ತೀಯಾ

ನನ್ನವರೆಗೂ ನಿನ್ನ ಪ್ರಾರ್ಥನೆಗಳು ಹೀಗೆ ತಲುಪುತ್ತಿವೆ..)

    ನನ್ನ ಅತ್ಯಂತ ಪ್ರೀತಿಯ ಕವಿಗೆ 'ಜ್ಙಾನಪೀಠ' ಸಮ್ಮಾನ ದೊರೆತಿದೆ. ಇದು ಸಹಜವಾಗಿ ಅವರಿಗೆ ದೊರೆಯಬೇಕಾದದ್ದು. ಈ ವೇಳೆ ಈ ಲೇಖನ ಪ್ರಸ್ತುತವೆನಿಸಿತು.


ಆನೆವಾಲಾ ಪಲ್ ಜಾನೆವಾಲಾ ಹೈ

ಹೋಸಕೆ ತೋ ಇಸ್ ಮೆ ಜಿಂದಗಿ

ಬಿತದೋ ಪಲ್ ಜೋ ಯೆ ಜಾನೆ

ಜಾನೆ ವಾಲಾ ಹೈ...


(ಸಾಗಿ ಬರುತ್ತಿರುವ ಕ್ಷಣಗಳೂ

ಹೀಗೆ ಕಳೆದು ಹೋಗುತ್ತವೆ

ಸಾಧ್ಯವಾದರೆ ಸಾಗಿ ಹೋಗುವ

ಈ ಕ್ಷಣಗಳಲ್ಲಿ ಬದುಕಿಬಿಡುವ..)


     ಗುಲ್ಜಾರ್ ಸಾಬ್ ಕೊಟ್ಯಾಂತರ ಮನಸ್ಸುಗಳ ಭಾವಗಳಿಗೆ ಭಾಷ್ಯವಾಗುವ ನಿಮಗೆ ನೀವೇ ಸಾಟಿ...








ಲೇಖನ - ಶ್ರೀಮತಿ ಮಂಜುಳಾ ಡಿ


Comments