ನನ್ನ ಕ್ಷೌರಾನುಭವಗಳು

ನನ್ನ ಕ್ಷೌರಾನುಭವಗಳು

ಹಾಸ್ಯ ಲೇಖನ ಅಣುಕು ರಾಮನಾಥ್ 


ಬಹಳ ನಿಧಾನಸ್ಥ ನಮ್ಮ ಕ್ಷೌರಿಕ. ಆದ್ದರಿಂದಲೇ ನನಗೆ ಬಹಳ ತೊಂದರೆ ಆಗಿದ್ದು.ಮೀಸೆಯನ್ನು ಟ್ರಿಮ್ ಮಾಡಲು ಹೇಳಿದ ಕೂಡಲೆ ಕತ್ತರಿಯನ್ನು ಹೊಳ್ಳೆಗಳ ಬಳಿ ಚಕಚಕನೆ ಆಡಿಸುತ್ತಾ ಹೊಳ್ಳೆಗಳ ಅತಿ ಸಮೀಪದ ಕೂದಲುಗಳನ್ನು ಕತ್ತರಿಸುವಾಗ ಮೂಗಿನ ಎರಡೂ ಹೊಳ್ಳೆಗಳನ್ನು ಅದುಮಿ ಹಿಡಿದುಬಿಟ್ಟ. ಬಾಯಿ ಬಿಟ್ಟು ಉಸಿರಾಡೋಣವೆಂದರೆ ಅವನ ಹಿಂಗೈ ನನ್ನ ಬಾಯನ್ನು ಅದುಮಿಕೊಂಡು ಕುಳಿತಿತ್ತು. ಮೊದಲೇ ಹೇಳಿದಂತೆ ಅವನು ನಿಧಾನಸ್ಥ. ನಾನೋ ಉಸಿರಾಟವನ್ನು ಹೆಚ್ಚು ಕಾಲ ತಡೆಹಿಡಿಯುವ ಶ್ವಾಸಸ್ಥಂಭನವಿದ್ಯೆಯನ್ನು ಅರಿಯದವನು. ಸಂಧ್ಯಾವಂದನೆ ಮಾಡುವಾಗಲೂ ಸರಿಯಾಗಿ ಮೂಗು ಹಿಡಿಯದ ನನಗೆ ಆ ಪೀಠಾರೂಢನಾಗಿದ್ದಾಗ ನನ್ನ ಒಳಗಣ್ಣಿನ ಮುಂದೆ ನನ್ನ ಅಂತಿಮಸವಾರಿ, ಪ್ರೀಮಿಯಂ ಬಾಕಿ ಇರುವ ಇಂಷೂರೆನ್ಸು ಮುಂತಾದ ಅನಿಷ್ಠಗಳ ಮೆರವಣಿಗೆಯೇ ಹೊರಟಿತು. ಮೂಗು ಬಿಡು ಅನ್ನತ್ತೆ; ಬಾಯಿ ತೆಗಿ ಅನ್ನತ್ತೆ; ಆದರೆ ಕ್ಷೌರಿಕನ ಕತ್ತರಿ ಇನ್ನೂ ಕತ್ತರಿಸು ಅನ್ನತ್ತೆ. ಶಿರೋಭಾಗದೊಳ್ ಫ್ಯಾನ್ ತಿರುಗುತಿರ್ದೊಡೆಂ ಬೆಮರ್ದನ್ ಕ್ಷೌರಾಸನಾರೂಢನ್!

ನನ್ನ ಬಾಲ್ಯಕಾಲದಲ್ಲಾಗಲಿ, ಯೌವನದಲ್ಲಾಗಲಿ ಕಟಿಂಗ್ ಮಾಡಿಸಿಕೊಳ್ಳುವುದು ಅಷ್ಟೇನೂ ವಿಶೇಷವಾದ ಅನುಭವವಾಗಿರಲಿಲ್ಲ – ಒಂದು ಬಾರಿಯ ಹೊರತಾಗಿ. ಟೀನೇಜರ್ ಆದ ನನಗೆ ಒಬ್ಬ ಆಪ್ತ ಸ್ನೇಹಿತನಿದ್ದ. ಅವನಿಗೆ ವಿವಿಧ ಕೇಶವಿನ್ಯಾಸಗಳಲ್ಲಿ ನೇರಕೂದಲಿನವರು ಹೇಗೆ ಕಾಣುವರೆಂದು ತಿಳಿಯುವ ಆಸೆ. ಈ ನಿಟ್ಟಿನಲ್ಲಿ ಅವನು ಪ್ರಯೋಗಕಾರ, ನಾನು ಗಿನ್ನೀಸ್ ಹಂದಿ. ‘ಸ್ಟೆಪ್ ಕಟ್ ಮಾಡಿಸ್ಕೊಳೋ ಹೈಕ್ಲಾಸಾಗಿರತ್ತೆ’ ಎಂದ ಕುರುಬ. ಕುರಿ ತಲೆಯಾಡಿಸಿತು. ನನ್ನ ತೀರ್ಥರೂಪರು ಫ್ಯಾಕ್ಟರಿಗೆ ಹೋಗಿ ತಡವಾಗಿ ಹಿಂತಿರುಗುವ ದಿನವನ್ನೇ ಆರಿಸಿಕೊಂಡು ಕ್ಷೌರದಂಗಡಿಯ ಸುಖಾಸನದಲ್ಲಿ ಹಿಂದಕ್ಕೊರಗಿ ‘ಯಾರಲ್ಲಿ! ಮಧುಪಾನವನ್ನು ಮಧುರಮಾನಿನಿಯರೊಡನೆ ಕಳುಹಿಸುವಂತಹವರಾಗಿ’ ಎಂದು ಅರಬ್ ಷೇಕ್‍ಗಳು ಅರ್ಡರಿಸುತ್ತಿದ್ದ ಗತ್ತಿನಲ್ಲಿಯೇ ಕ್ಷೌರಿಕನನ್ನು ಕಡೆಗಣ್ಣಿನಿಂದ ನೋಡುತ್ತಾ ‘ಸ್ಟೆಪ್ ಕಟ್’ ಎಂದೆ. ಸಿಸರ್ಸು ಸ್ನಿಪ್ಪಿಸಿತು; ಮೆಷಿನ್ನು ಝರಝರಿಸಿತು. ಬ್ಯೂಗಲ್ ರಾಕಿನ ಸಿಂಗಲ್ ಬಂಡೆಯಂತೆ ಒಂದೇ ಇಳಿಜಾರಿದ್ದ ತಲೆಯಲ್ಲಿ ಚಾಮುಂಡಿ ಬೆಟ್ಟದ ವಿವಿಧ ಮೆಟ್ಟಿಲುಗಳ ಹಂತಗಳು ಮೂಡತೊಡಗಿದವು. ಆ ಸಂಜೆ ಗಾಂಧಿಬಜಾರಿನ ಮುಖ್ಯರಸ್ತೆಯಲ್ಲಿ ದಿನವೂ ಕಂಡುಬರುತ್ತಿದ್ದ ಬಾಬ್‍ಕಟ್ಟುವೇಣಿಯರ್, ಚೂಡಿಧಾರವಸನೆಯರ್, ಕೂಲಿಂಗ್ ಗ್ಲಾಸ್ ನಯನೆಯರ್, ಹೈಹೀಲ್ಡು ಬಾಲೆಯರ್ ನನ್ನ ಸ್ಟೆಪ್ ಕಟಿಂಗನ್ನು ಮೆಚ್ಚಿನ, ನೆಚ್ಚಿನ, ಒಲವಿನ ನೋಟದಿಂದ ನೋಡುವುದನ್ನು ಕಲ್ಪಿಸಿಕೊಳ್ಳುತ್ತಾ ಮತ್ತಷ್ಟು ಹಿಂದಕ್ಕೊರಗಿದೆ. ಕಟಿಂಗ್ ಮುಗಿಸಿ ಬಾಟಲಿಯಿಂದ ಮುಖಕ್ಕೆ ನೀರನ್ನು ಚಿಮುಕಿಸಿದಾಗಲೇ ನನಗೆ ಈ ಜಗದ ಪರಿವೆಯುಂಟಾದುದು.

ಮನೆಗೆ ಬಂದು ಅಮ್ಮನ ಮುಂದೆ ತಲೆಬಾಗಿ ನಿಂತು ಪಾವಟಿಗೆಕೇಶದ ದರ್ಶನವನ್ನಿತ್ತೆ. ‘ಇಲಿ ಕಚ್ಚಿದಹಾಗೆ ಇದೆಯಲ್ಲೋ! ರೆಗ್ಯುಲರ್ ಕ್ಷೌರಿಕನ ಬಳಿ ಹೋಗಲಿಲ್ಲವೇನು?’ ಎಂದಳಾಕೆ. ‘ಇದು ಈಗಿನ ಸ್ಟೈಲ್ ಅಮ್ಮ’ ಎನ್ನುತ್ತಾ, ‘ಮಾವನೂ ಹೀಗೇ ಮಾಡಿಸಿಕೊಂಡಿದ್ದರಂತೆ’ ಎಂದೆ. ಅಮ್ಮನ ತಮ್ಮ ಮಾಡಿದ್ದೆಲ್ಲವೂ ಅಮ್ಮನಿಗೆ ಸಮ್ಮತವಾದ್ದರಿಂದ ಮೂಷಿಕದಂಷ್ಟ್ರಕ(ತ)ಲೆಯೂ ಮಾತೋಶ್ರೀಯ ಸಮ್ಮತಿಗೆ ಭಾಜನವಾಯಿತು.

ಸಂಜೆ ಗಾಂಧಿಬಜಾರಿನ ಲಲನೆಯರು ಎಂದಿನಂತೆ ಕಂಬಳಿಹುಳವನ್ನು ಕಾಣುವಷ್ಟೇ ಪ್ರೀತಿಯಿಂದ ನನ್ನನ್ನು ಕಂಡರಾದರೂ ಆಪ್ತಸ್ನೇಹಿತ ಮಾತ್ರ ‘ಈಗ ಇನ್ನೂ ಸೆಂಟ್ರಿಂಗ್ ಹಾಕಿದ ಸ್ಟೇರ್‍ಕೇಸ್‍ನಂತಿದೆ. ಒಂದು ವಾರ ಕಳೆದರೆ ಸುಂದರ ಮೆಟ್ಟಿಲುಗಳು ಕಾಣಬರುತ್ತವೆ. ಆಗ ಇದೇ ಲಲನೆಯರು ಕಂಬಳಿಹುಳವನ್ನು ನೋಡುವಂತಲ್ಲದೆ ಚಿಟ್ಟೆಯನ್ನು ನೋಡುವಂತೆ ನೋಡುತ್ತಾರೆ’ ಎಂದ. ವಾರದ ನಂತರ ವರಾಂಗನೆಯರ ವಾಕ್ಝರಿಯಿಂದ ಉದುರಬಹುದಾದ ಆಣಿಮುತ್ತುಗಳ ನಿರೀಕ್ಷೆಯಲ್ಲಿಯೇ ಗೃಹಾಭಿಮುಖನಾದೆ. ರಸ್ತೆಮೂಲೆಯನ್ನು ತಿರುಗಿದಾಗಲೇ ಕಿವಿಗೆ ಅಪ್ಪಳಿಸಿದ ತೀರ್ಥರೂಪುವಿನ ಧ್ವನಿಯನ್ನು ಕೇಳಿ ಮೂಕನಾದೆ.

ಬಿರುಗಾಳಿಯಲ್ಲಿ ವಿಂಡ್‍ಮಿಲ್ ಅಲುಗುವ ರೀತಿಯಲ್ಲಿ ಕಂಪಿಸುತ್ತಲೇ ಮನೆಯನ್ನು ಪ್ರವೇಶಿಸಿದೆ. ನನ್ನತ್ತ ನೋಡಿದ ಅಪ್ಪನ ದೃಷ್ಟಿ, ಧ್ವನಿಗಳಲ್ಲೇನೂ ಬದಲಾವಣೆ ಕಾಣದೆ ಅಚ್ಚರಿಯಾದರೂ ‘ಅಮ್ಮಸಂಧಾನ’ ನಡೆದು ಕದನವಿರಾಮ ಘೋಷಣೆ ಆಗಿರಬಹುದೆಂದು ಬಗೆದೆ.

‘ಲೈಟ್ ಹಾಕೋ. ಇವತ್ಯಾಕೋ ಬೇಗ ಕತ್ತಲಾಗಿದೆ’ ಗುಡುಗಿತು ಧ್ವನಿ. ಸ್ವಿಚ್ ಒತ್ತಿದೆ. ಕೊಠಡಿಯ ಭರ್ತಿ ಬೆಳಕು ಚೆಲ್ಲಿತು. ನನ್ನ ಸ್ಟೆಪ್ ಕಟ್ ಮೇಲೆ ಕತ್ತಲಾವರಿಸಿತು.

ವಾಚಕ ಮಹಾಶಯ, ಆ ದೃಶ್ಯವನ್ನೆಂತು ವರ್ಣಿಸಲಿ! ಒಂದಾನೊಂದು ಕಾಲದಲ್ಲಿ ಕರ್ಣನ ತೊಡೆಯಿಂದ ನೆತ್ತರು ಹರಿದುದನ್ನು ಕಂಡು, ನೆತ್ತರಿಗಿಂತಲೂ ಕೆಂಪಾದ ಕಣ್ಣುಗಳನ್ನು ಅಗಲಿಸಿದ ಪರಶುರಾಮನ ತುಣುಕು ನನ್ನ ಮುಂದೆ ಇದ್ದಂತೆನಿಸಿತು. ವದನದಿಂದ ಇಡೀ ಪೊಲೀಸ್ ಇಲಾಖೆಯು ಕಲಿಯಬಹುದಾದಷ್ಟು ಪ್ರಮಾಣದ ಅಚ್ಚ ಸಂಸ್ಕೃತ ಪದಗಳು ಹೊರಡಲಾರಂಭಿಸಿದವು. (ಅಂತಹ ಭಾಷೆ ಅಂದಿನ ಕಾಲದ ಕೋಪಿಷ್ಟರ ಸ್ಟೇಟಸ್ ಸಿಂಬಲ್ ಆಗಿತ್ತು.) ಪ್ರತಿ ಕೂರಂಬುನುನುಡಿಯೂ ನನ್ನ ಸ್ಟೆಪ್ ಕಟ್‍ನ ನೆತ್ತಿಯೇರಿ ಮೆಟ್ಟಿಲುಮೆಟ್ಟಿಲಾಗಿ ಇಳಿದು ಕಿವಿಯ ತಮಟೆಯ ಮೇಲೆ ಮೆಟಲ್ ರಾಕ್ ತಂಡದವರು ಮತ್ತೇರಿದಾಗ ನರ್ತಿಸುವಂತೆ ನೃತ್ಯಗೈಯುತ್ತಿತ್ತು. ಆ ಸಂಸ್ಕೃತದ ಸುನಾಮಿಗೆ ಸಿಲುಕಿ ಗಾಂಧಿಬಜಾರಿನ ಪಲುಕುಗಳ ಕನಸು ಇಂಚಿಂಚಾಗಿ ಕರಗುತ್ತಾ ಸಾಗಿತು.

‘ಹಿಡಿ ದುಡ್ಡು; ನಾಳೇನೇ ಸ್ಟೆಪ್ ಕಟ್ ಕಟ್ ಆಗಬೇಕು’ ಸುಗ್ರೀವಾಜ್ಞೆ ಹೊರಟಿತು. ಮರುದಿನ ಸಂಜೆ ಅಪ್ಪನ ದೃಷ್ಟಿಯು ಮೈಸೂರಿನ ಷಾನವಾಬ್ ಟಾಂಗಾದ ಕಮಾನಿನಾಕಾರದ ನನ್ನ ಶಿರದ ಮೇಲೆ ಬಿದ್ದಾಗಲೇ ಶಾಂತಿಪರ್ವದ ಮೊದಮೊದಲ ಸೂಚನೆ ಕಂಡುಬಂದುದು.

ಅದೆಲ್ಲ ಗತಕಾಲ. ಅಪ್ಪನ ನೆರಳಿನಿಂದ ಹೊರಬಂದು ನನಗೆ ಇಷ್ಟ ಬಂದಹಾಗೆ ಕಟಿಂಗ್ ಮಾಡಿಸಿಕೊಳ್ಳುವ ಸ್ವಾತಂತ್ರ್ಯ ನನಗೆ ದೊರಕಿತು. ಆದರೆ ಒಂದೇ ತೊಂದರೆ – ಆ ಸ್ವಾತಂತ್ರ್ಯ ಸಿಗುವಷ್ಟರಲ್ಲಿ ನನ್ನ ಕೇಶರಾಶಿಯ ಬಹುಪಾಲು ನನ್ನ  ಬುರುಡೆಯೊಡನೆ ಮುನಿಸಿಕೊಂಡು ವಿಚ್ಛೇದನ ಪಡೆದಿತ್ತು. ಈಗ ಹಾದಿಬೀದಿಗಳಲ್ಲಿ ಕಾಣಬರುವ ಟೀನೇಜ್ ಶಿರಗಳನ್ನು ಕಂಡಾಗ ‘ಅವರಿಗಿರುವ ಸ್ವಾತಂತ್ರ್ಯ ನನಗಿರಲಿಲ್ಲವಲ್ಲಾ...’ ಎಂದೆನಿಸುವುದುಂಟು. ನನ್ನ ಕಾಲದಲ್ಲಿ ಕೇವಲ ಸ್ಟೆಪ್ ಕಟ್, ಸಾದಾ ಕಟ್, ಸಮ್ಮರ್ ಕಟ್‍ಗಳಷ್ಟೇ ಹೆಚ್ಚು ಪ್ರಚಲಿತವಿದ್ದವು. ಈಗಲೋ ಸೀಯಾಳದ ತಿರುಳನ್ನು ತಿನ್ನಲೆಂದು ಎಳನೀರ ಬುರುಡೆಯಿಂದಲೇ ಒಂದು ಚೂರನ್ನು ಕಿತ್ತಾಗ ಎಳನೀರ ಬುರುಡೆಯು ಕಾಣುವ ಪರಿಯನ್ನು ಹೋಲುವ ‘ಟಿಸಿಎಸ್’ ಕಟ್ (ಟೆಂಡರ್ ಕೋಕೋನಟ್ ಸೈಡ್ ಕಟ್), ಮಧ್ಯದಲ್ಲಷ್ಟೇ ಕೇಶವನ್ನಿರಿಸಿ ಸುತ್ತಲೂ ಬಟಾಬಯಲಾಗಿಸುವ ‘ರೋಡ್ ಡಿವೈಡರ್ ಕಟ್’, ಮಧ್ಯದಲ್ಲೊಂದು ಐಲ್ಯಾಂಡನ್ನು ನಿರ್ಮಿಸಿ ಅಕ್ಕಪಕ್ಕದಲ್ಲಿ ಕೇಶಸಮೃದ್ಧಿಯನ್ನಿರಿಸುವ ‘ಬೌಲ್‍ವಾರ್ಡ್ ಕಟ್’, ಸುತ್ತಲೂ ಏನೇನನ್ನೂ ಉಳಿಸದೆ ಮಧ್ಯೆ ಬಂಡೆಯಂತೊಂದಷ್ಟು ಕೇಶಗುಚ್ಛವನ್ನುಳಿಸುವ ‘ಪಾರ್ಕಿಂಗ್ ಲಾಟ್ ಕಟ್’ ಮೊದಲಾದವನ್ನು ಕಂಡಾಗ ‘ಅಂದಿನ ಗಾಂಧಿಬಜಾರ್ ರಮಣಿಯರು ಇವನ್ನೆಲ್ಲ ಕಂಡಿದ್ದರೆ ಎನಿತು ಮೆಚ್ಚುಗೆಯ ಪರಿಗಳನ್ನು ವ್ಯಕ್ತಪಡಿಸುತ್ತಿದ್ದರೋ’ ಎನಿಸುತ್ತದೆ. ನನಗಿದ್ದ ಆ ‘ಇನ್‍ಸ್ಟೆಂಟ್ ರೆಕಗ್ನಿಷನ್’ ಅವಕಾಶ ಈಗಿನವರಿಗಿಲ್ಲ. ಇಂದಿನ ಪಡ್ಡೆಗಳು ತಮ್ಮ ‘ಹೇರ್ ಸ್ಟೈಲಿಸಿದ’ ತಲೆಯ ವಿವಿಧ ಕೋನಗಳ ಫೋಟೋವನ್ನು ತೆಗೆದು, ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ, ಇವರು ಯಾರಿಂದ ಮೆಚ್ಚುಗೆ ಇಚ್ಛಿಸುವರೋ ಆ ಜನರಿಗೆ ಟ್ಯಾಗ್ ಮಾಡಿದರೆ ಒಂದು ಥಮ್ಸಪ್ಪೋ, ಸ್ಮೈಲಿಯೋ ಮೂಡುವವರೆಗೆ ಕಾಯಬೇಕಾದ ನತದೃಷ್ಟರು.

ನನ್ನ ಕ್ಷೌರಿಕನ ವಿಷಯಕ್ಕೆ ಬರೋಣ. ಮಧ್ಯವಯಸ್ಕನಾದಾಗ ನನಗೆ ಇವನ ಪರಿಚಯವಾದದ್ದು. ಆ ಹೊತ್ತಿಗೆ ಮೂಗು, ಕಿವಿಗಳಲ್ಲಿ ಬೆಳೆಯುತ್ತಿದ್ದ ಕೇಶಫಸಲಿನಷ್ಟು ತಲೆಯಲ್ಲಿ ದೊರೆಯುತ್ತಿರಲಿಲ್ಲ. ಹೀಗಾಗಿ ಈ ಕ್ಷೌರಿಕನಿಗೆ ‘spot the strand’ ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವವಾಗುತ್ತಿತ್ತು. ಕತ್ತರಿಯನ್ನು ಕೈಯಲ್ಲಿ ಹಿಡಿದು, ಖಗೋಳಜ್ಞನು ಆಕಾಶದಲ್ಲಿ ನವಕಾಯವನ್ನು ಹುಡುಕುವ ರೀತಿಯಲ್ಲಿ ನನ್ನ ಗ್ಲೋಬ್ ಮಾದರಿಯ ತಲೆಯಲ್ಲಿ ಅರಸುತ್ತಾ ಸಾಗಿ, ಸಿಕ್ಕಾಕ್ಷಣ ಕಚಕ್ಕಿಸಿ, ‘ಒಂದು. ಎರಡು...’ ಎನ್ನುತ್ತಾ ಸ್ಕೋರ್ ದಾಖಲಿಸಿಕೊಂಡು ಕೇಶಕ್ಕಿಷ್ಟೆಂಬ ದರದಲ್ಲಿ ಬೋಳುಶುಲ್ಕ ವಸೂಲಿ ಮಾಡುವುದರಲ್ಲಿ ನಿಷ್ಣಾತನಿವನು. ಮೂಗಿನ ಹೊಳ್ಳೆಗಳ ಕೂದಲುಗಳೋ ಕೆಲವೊಮ್ಮೆ ಮೀಸೆಯ ಮೇಲೆ ಜಡೆ ಹಾಕುವ ಮಟ್ಟಕ್ಕೆ ಇಣುಕುತ್ತಿರುತ್ತವೆ. ಅಂತಹ ‘ಮುಖಪಾರ್ಥೇನಿಯಂ’ಗಳ ಬೆಳೆಯನ್ನು ಹದಕ್ಕೆ ತರುವಾಗಲೇ ನನಗೆ ದೊಡ್ಡ ದೊಡ್ಡ ಸೀನುಗಳು ವಕ್ಕರಿಸಿಕೊಳ್ಳುತ್ತಿದ್ದವು. ಮೂಗಿನ ತುದಿಯಲ್ಲಿ ಮೊನಚಾದ ಕತ್ತರಿಯ ಡಬಲ್ ಎಡ್ಜ್, ಮೂಗಿನೊಳಗೆ ಹೇಗಾದರೂ ಮಾಡಿ ಜನರಲ್ ಕೆಟಗರಿಯಿಂದ ಮೀಸಲಾತಿಯ ಕೆಟಗರಿಗೆ ಸೇರಿಬಿಡಬೇಕೆಂದು ತರಾತುರಿಯಿಂದ ನುಗ್ಗುವ ‘ಸವಲತ್ತಾಕಾಂಕ್ಷಿ’ಯ ವೇಗದಿಂದ ಮುನ್ನುಗ್ಗುವ ಸೀನು!

ಸೀನೆನೋ ಹರಿ ತಾಳೆನೋ

ಚೂಪು ಕತ್ತರಿ ಮೊನೆ ಮೂಗಿನೊಳಿರುವಾಗ

ಸೀನೆನೋ ಹರಿ ತಾಳೆನೋ

ಎಂದು ಮನದಲ್ಲೇ ಗುನುಗುತ್ತಾ ಮೂಗಿನ ತುದಿಯಿಂದ ಕತ್ತರಿಯು ಇಂಚಿನಷ್ಟೇ ದೂರವಾಗುವುದನ್ನು ಕಾಯ್ದು, ಕತ್ತನ್ನು ಪಕ್ಕಕ್ಕೆ ಹೊರಳಿಸಿ ಎದುರಿನ ಕನ್ನಡಿಗೆ ನಲವತ್ತೈದು ಡಿಗ್ರಿ ಕೋನದಿಂದ ಸೀನುಸಿಂಚನಗೈದುಬಿಟ್ಟರೆ ಮನಸ್ಸಿಗೊಂದು ವಿಧವಾದ ಸ್ಮಶಾನಶಾಂತಿ! ಆದರೆ, ಮೊದಲೇ ಹೇಳಿದಂತೆ, ನನ್ನ ಕ್ಷೌರಿಕ ನಿಧಾನಸ್ಥ!



ಕರ್ಣಕೇಶದ್ದು ಮತ್ತೊಂದು ಬಗೆ. ವಯಸ್ಸಾದ ವ್ಯಕ್ತಿಗಳ ಕಿವಿಯಿಂದ ಹೊರಕ್ಕೆ ಕಟ್ಟಡದಿಂದ ಹೊರಚಾಚಿದ ಛಜ್ಜದಂತೆ ಹೊರಚಾಚಿರುವ ಕೇಶಪುಂಜಗಳು ನನಗೆ ಕುಕ್ಕರಿನ ಹಿಡಿಗಳನ್ನು ನೆನಪಿಸುತ್ತವೆ. ಕ್ಷೌರಿಕನಿಗೆ ಅವನ್ನು ಇಲ್ಲವಾಗಿಸುವ ವಾಂಛೆ. ಮೊದಲಿಗೆ ಝೊಂಪೆಯನ್ನು ಕತ್ತರಿಯಿಂದ ಇಲ್ಲವಾಗಿಸಿ ನಂತರ ಕಿವಿಯ ಬಳಿ ಮೆಷೀನನ್ನು ಓಡಿಸುವನು. ಆಗಂತೂ ಕಟ್ಟಡ ಡಿಮಾಲಿಷನ್ ಕಾಲದಲ್ಲಿ ಯಂತ್ರಗಳು ಹೊರಡಿಸುವ ಭೀಕರ ಘಢರ್‍ರ್‍ ಸದ್ದು ಕಿವಿಯ ತಮಟೆಯ ಪಕ್ಕದಲ್ಲೇ ಮೊಳಗಿತಂತೆನಿಸುತ್ತದೆ. ತಪ್ಪಿಸಿಕೊಳ್ಳಲು ಶಿರಪಲ್ಲಟಗೊಳಿಸಿದರೆ ಕಿವಿಯ ಹಾಲೆ ಹಾಳೇ ಆಗುವ ಭಯ. ಅಂತೂ ಪ್ರತಿ ತಿಂಗಳಿನ ಕ್ಷೌರಿಕಭೇಟಿಯೂ ಒಂದೊಂದು ಅನುಭವಕ್ಕೆ ನಾಂದಿ.

ಓಹ್! ಕಟಿಂಗಿಂದ ಈಗಷ್ಟೇ ಬಂದೆ; ನೀರು ಕಾದಿದೆ; ಮಡದಿ ಕಾದು ಕೆಂಡವಾಗಿದ್ದಾಳೆ. ಬೇಗ ಹೊರಡಬೇಕು. ಬೈ...!


Comments