ಆವಿಷ್ಕೃತ ಸ್ವರಾ...

ಆವಿಷ್ಕೃತ ಸ್ವರಾ...

ಲೇಖನ - ಶ್ರೀಮತಿ ಮಂಜುಳಾ ಡಿ 




ಜ಼ಾರಾಳ ಕಾಡಿಗೆ ತುಂಬಿದ ಕಣ್ಣನ್ನೇ ನೋಡುತ್ತಿದ್ದೆ. ತಡೆಯಿಲ್ಲದ ಮಾತುಗಳ ಝರಿ ಸರಾಗ ಹರಿದಿತ್ತು.  ಜ಼ಾರಾ ಮಾತಾಡುತ್ತಾ ಆ ಡ್ರಾಮಾದಲ್ಲಿ ತೋರಿಸಿದ "ಸ್ವರಾ" ಎನ್ನುವ ಪದ್ದತಿ ಬಗ್ಗೆ ಹೇಳಿದಳು‌. ಇದರ ಬಗ್ಗೆ ಕೇಳಿದ ಕೂಡಲೇ ಸುತ್ತಲಿದ್ದ  ನಮ್ಮ ಸ್ವರಗಳು ಇಂಗಿಹೋದವು..... ಈ ಕಾಲದಲ್ಲೂ ಹೀಗಾ! ಮುಂತಾದ ಉದ್ಗಾರಗಳೊಂದಿಗೆ ಚರ್ಚೆಗಳು ಕಂಟಿನ್ಯೂ ಆದರೂ ನನಗೆ ಮಾತು ಸಾಧ್ಯವಾಗಲಿಲ್ಲ.  "ಸ್ವರಾ"ದ ಉಗ್ರನಾದ ನನ್ನ ತಲೆ ತುಂಬಿ ಹೋಗಿತ್ತು.

ನಮ್ಮಲ್ಲೂ ಇಂದು ನೆನೆದರೆ ಛೇ!! ಎಂಬ ಉದ್ಗಾರ ಹೊರಡಿಸುವಂಥ  ಬಹಳಷ್ಟು ಪದ್ದತಿಗಳಿದ್ದವು. ಕಾಲ-ಕಾಲಕ್ಕೆ ಧರ್ಮದ ಹೆಸರಿ‌ನಲ್ಲಿ ಜಡ್ಡುಗಟ್ಟಿದ್ದ  ಪದ್ದತಿಗಳನ್ನು ಗುರುಸ್ವರೂಪಿ ಮಾನವರು-ಘನ ವ್ಯಕ್ತಿತ್ವದ ಸಮಾಜ ಸುಧಾರಕರು  ಅವತರಿಸಿ ಶಿಕ್ಷಣವೆಂಬ ಜ್ಯೋತಿಯಿಂದ  'ಅರಿವು' ಮೂಡಿಸಿ ಸಮಾಜವನ್ನು ತಿದ್ದಿ ನಡೆಸಿದರು.    ಕಳೆದ 20 ವರ್ಷದ ಭಾರತಕ್ಕೂ ಇಂದಿನ ಭಾರತಕ್ಕೂ  ಆಲೋಚಿಸಿದರೆ ಒಮ್ಮೆ ಬೆಚ್ಚುವಷ್ಟು  ಬದಲಾವಣೆ ಆಗಿದೆ.

"ಸ್ವರಾ" ಎಂಥ ಚಂದದ ಶಬ್ದ. ಆದರೆ ಈ ಆಚರಣೆಯ ವಿವರಣೆ ಅರಿತರೆ ಮನಸ್ಸಿನ ಲಯ ಅಲ್ಲೋಲ-ಕಲ್ಲೋಲವಾಗುತ್ತದೆ. ಛೇ! ಎಂತಹ ಕ್ರೂರ ಮನಸ್ಸುಗಳು ಎಂಬ ಉದ್ಗಾರ ಅರಿವಿಲ್ಲದೇ ಹೊಮ್ಮುತ್ತದೆ. ಸ್ವರಾ ಪದ್ದತಿಯಲ್ಲಿ,  ಕುಟುಂಬದ ಪುರುಷರು  ಮಾಡುವ ಹೊಡೆದಾಟ-ಜಗಳಗಳಲ್ಲಿ ಹಾನಿಯಾದ ಕುಟುಂಬಕ್ಕೆ ಹಾನಿಮಾಡಿದ ಕುಟುಂಬದ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಮದುವೆ ಅಥವಾ ಆಳುಗಳನ್ನಾಗಿ ಪರಿಹಾರದ ರೂಪದಲ್ಲಿ ಕೊಡುವುದು!!!
ಈ ಪದ್ದತಿಯ ರೀತಿಗೆ ದಿಗಿಲು ಎನಿಸಿದರೆ ಪಾಕಿಸ್ತಾನದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ ಎನ್ನುವುದು ಇನ್ನೂ ಭೀತಿ ಮೂಡಿಸುತ್ತದೆ. 2005 ಮತ್ತು 2011 ರಲ್ಲಿ  ಈ ಪದ್ದತಿಯನ್ನು ತೊಡೆದು ಹಾಕುವ ಪಾಕಿಸ್ತಾನದ ಕಾನೂನುಗಳು ಈ ಪದ್ದತಿಯನ್ನು ಕಿಂಚಿತ್ತೂ ತಡೆಯಲಾಗಿಲ್ಲ.

ಇಂದಿನ‌ ಪಾಕಿಸ್ತಾನದಲ್ಲಿ ಈ ದಿನಕ್ಕೂ "ಸ್ವರಾ" ದಂತಹ ಪದ್ದತಿಗಳು ಆಚರಣೆಯಲ್ಲಿದೆ ಎಂದರೆ ಕಂಪಿಸುವಂತಾಗುತ್ತದೆ.    "ಸ್ವರಾ" ದಂತಹ ಪದ್ದತಿಗಳನ್ನು ತೊಡೆದು ಹಾಕಿ  ಹೊಸ ಬುನಾದಿ ಹಾಕುವ ರಾಗತಾಳಗಳೆಂದರೆ ಶಿಕ್ಷಣ! ಆದರೆ ಪಾಕಿಸ್ಥಾನದ ಶೈಕ್ಷಣಿಕ ಸ್ಥಿತಿ ಅದರಲ್ಲೂ ಹೆಣ್ಣಕ್ಕಳ ಸ್ಥಿತಿ ಗಂಭೀರವಾಗಿದೆ. ಹ್ಯೂಮನ್  ಡವಲಪ್ ಮೆಂಟ್ ರಿಪೋರ್ಟ್ (HDR) ಪ್ರಕಾರ ಜಗತ್ತಿನಲ್ಲಿ ಮಹಿಳಾ ಸಾಕ್ಷರತೆಯಲ್ಲಿ  ಪಾಕಿಸ್ತಾನ 145 ನೇ ಸ್ಥಾನದಲ್ಲಿದೆ. ಒಂಭತ್ತನೇ ತರಗತಿಗೆ ಬರುವ ಹೊತ್ತಿಗೆ ಕೇವಲ13% ರಷ್ಟು ಹೆಣ್ಣುಮಕ್ಕಳು ಮಾತ್ರ ಶಾಲೆಯಲ್ಲಿ ಉಳಿಯುತ್ತಾರೆ. ಪ್ರಸ್ತುತ 12 ಮಿಲಿಯನ್ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಮತದಾನದ ಹಕ್ಕು ಹೆಣ್ಣುಮಕ್ಕಳಿಗೆ ಇದ್ದರೂ ಬಹಳಷ್ಟು ಚುನಾವಣಾ ಕ್ಷೇತ್ರಗಳಲ್ಲಿ ಮಹಿಳೆಯರು ಚುನಾವಣೆಗಳಲ್ಲಿ ಮತಹಾಕುವುದನ್ನು ತಡೆಯಲಾಗುತ್ತದೆ.

ಮಲಾಲಾ ಯುಸೂಫ್ ಜಾಯ್ ಮತ್ತು ಕೈಲಾಸ್ ಸತ್ಯಾರ್ಥಿಗೆ ಸೇರಿ ನೋಬೆಲ್ ಘೋಷಣೆಯಾದಾಗ ನನ್ನಲ್ಲಿ ಉಳಿದ ಪ್ರಶ್ನೆ ಗುಂಡೇಟು ತಿಂದ ಮಾತ್ರಕ್ಕೆ ನೊಬೆಲ್ ಸಿಗುತ್ತದಾ!? ಈ ಪ್ರಶ್ನೆಗೆ ಉತ್ತರ ಇಂದು ದೊರಕಿತ್ತು.

ಪಾಕಿಸ್ತಾನದಲ್ಲಿ ಮಹಿಳೆಯರ ಸ್ಥಿತಿಗತಿ ಆರಿಯುತ್ತಾ ಹೋದಂತೆ ಕಳವಳಕಾರಿ ಅಂಶಗಳು ತಲ್ಲಣಗೊಳಿಸುತ್ತವೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 21.14 ಕೋಟಿಯಲ್ಲಿ ಕೇವಕ 44 ಲಕ್ಷ ಹಿಂದೂಗಳೊರುವ ದೇಶದಲ್ಲಿ ಹಿಂದೂಗಳ ಅದರಲ್ಲೂ ಹಿಂದೂ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಗಿರಬೇಡ...! ಅಪಹರಣ, ಚಿಕ್ಕ ವಯಸ್ಸಿನ ಹಿಂದೂ ಹೆಣ್ಣುಮಕ್ಕಳನ್ನು  ಬಲವಂತವಾಗಿ ಮುಸ್ಲಿಂ ಪುರುಷರೊಂದಿಗೆ ಮದುವೆ ಮಾಡಿಸುವ ಪ್ರಕರಣಗಳು ದಿನನಿತ್ಯದ ಘಟನೆಗಳಾಗಿವೆ. ಇಂತಹ ಸ್ಥಿತಿಯಲ್ಲಿ ಹಿಂದೂ ಯುವತಿಯೊಬ್ಬಳು ಸಾಫ್ಟ್ ಬಾಲ್ ಮತ್ತು ಬೇಸ್ ಬಾಲ್ ನಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವುದು ರಣಮರುಭೂಮಿಯಲ್ಲಿ ಅರಳಿದ ಹೂವಿನಂತೆ ಅನ್ನಿಸಿಬಿಡುತ್ತದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ  ಸಣ್ಣ ಪಟ್ಟಣ ಜಮ್ಯೋರೋ ನಗರದ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲದ ಕುಟುಂಬದಲ್ಲಿ ಜನಿಸಿದ್ದು ತುಳಸಿ ಮೇಘಾವರ್. ತಾಯಿ ಯಮುನಾ ಮನೆಯಲ್ಲಿ ಬಟ್ಟೆ ಹೊಲಿಯುವ ಕೆಲಸ, ತಂದೆ ಹರ್ಜಿಲಾಲ್ ಓದೊರುವುದು ಹತ್ತನೇ ತರಗತಿ,  'ಸಿಂಧು ಲೋಕಲ್' ಪತ್ರಿಕೆಯಲ್ಲಿ ಪತ್ರಕರ್ತ. ಹಿಂದೂ ಹೆಣ್ಣುಮಕ್ಕಳ ಘೋರ ಪರಿಸ್ಥಿತಿಯ ಅರಿವಿದ್ದರೂ, ತುಳಸಿ 04 ವರ್ಷದವಳಿದ್ದಾಗ ಶಾಲೆಗೆ ಸೇರಿದಳು. 07 ನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿನ ಸ್ಪೋರ್ಟ್ಸ್ ಕ್ಯಾಂಪ್ ನಲ್ಲಿ ಭಾಗವಹಿಸಿದಾಗ ಸಿಂಧು ಸಾಫ್ಟ್ ಬಾಲ್ ಟೀಂ ಗೆ ಸೆಲೆಕ್ಟ್ ಆದಳು.  ಅದುವರೆಗೂ ತುಳಸಿಗೆ ಸಾಫ್ಟ್ ಬಾಲ್ ಮತ್ತು ಬೇಸ್ ಬಾಲ್ ಆಟಗಳೆಂದೂ ಸಹ ತಿಳಿದಿರಲಿಲ್ಲ. ನಂತರ 2019-ಡಿಸೆಂಬರ್ ನಲ್ಲಿ ಚೀನಾದಲ್ಲಿ ಆಡಲು ರಾಷ್ಟ್ರ ತಂಡದಲ್ಲಿ ಆಯ್ಕೆಯಾದಳು. ಈಗಾಗಲೇ 06 ನ್ಯಾಷನಲ್ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿರುವ ತುಳಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಬಯಕೆ ಹೊಂದಿದ್ದಾಳೆ. 

ಜಡ್ಡುಗಟ್ಟಿದ ಹುಸಿ ವಿನ್ಯಾಸವನ್ನು ಮೀರುವುದು ಸಾಮಾನ್ಯದ ಹಾದಿಯಾಗಿರಲಿಲ್ಲ. ಪಾಕಿಸ್ತಾನದಲ್ಲಿ 09 ನೇ ತರಗತಿಗಿಂತ ಹೆಚ್ಚು ಓದುವ ಹೆಣ್ಣುಮಕ್ಕಳ ಸಂಖ್ಯೆ ಅತ್ಯಂತ ಕಡಿಮೆ. ತುಳಸಿ ಮತ್ತು ಕುಟುಂಬಕ್ಕೆ ಸಮಾಜದಿಂದ ಎದುರಾದ  ತೀವ್ರ ಪ್ರತಿರೋಧ, ಇಂತಹ ಹೋರಾಟಗಳಿಂದ ಮೂಡಿದ ನೋವಿ‌ನ‌ ಸಲಿಕೆಗಳು.. ಎಲ್ಲವನ್ನೂ ದಾಟಿ  ತುಳಸಿಯ ಆಟವನ್ನು ಪ್ರೋತ್ಸಾಹಿಸಿ ಬೆಂಬಲಕ್ಕೆ ನಿಂತ ಕುಟುಂಬದ ನಡೆ ಆವಿಷ್ಕರಿಸಿದ ಸ್ವರವಾಗಿ ಕಾಣುತ್ತದೆ.  ಈ ಕುಟುಂಬ ಪ್ರಸ್ತುತ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಸ್ಥಿತಿ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸುತ್ತದೆ.

ಹೆಣ್ಣುಮಕ್ಕಳು ಸದಾ ಭಯಭೀತರಾಗಿ ಬದುಕುವ ವಾತಾವರಣವಿರುವಲ್ಲಿ,   ತುಳಸಿ ಮತ್ತು ಕುಟುಂಬದ ಈ ನಡೆ  ಹಿಂದೂ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಪಾಕಿಸ್ತಾನದ ಎಲ್ಲಾ ಪ್ರಾಂತ್ಯಗಳ ಹೆಣ್ಣುಮಕ್ಕಳಿಗೆ ಹೊಸ ರಾಗದ "ಸ್ವರ" ವನ್ನು ಹುಟ್ಟುಹಾಕಿದ್ದಾರೆ. 

ಇದಿಷ್ಟನ್ನೂ ಹಾಯ್ದು ಬರುವ ಹೊತ್ತಿಗೆ ಮನದಲ್ಲಿ ಉಳಿದ ಪ್ರಶ್ನೆ ಒಂದೆ...ಭಾರತದಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲೂ ಭಾಗವಹಿಸುತ್ತಾಳೆ ಅದೂ ಸಮನಾಗಿ. ಹಾಗಿದ್ದರೂ ಅಸಹಿಷ್ಣುತೆ-ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಬೊಬ್ಬೆಯಿಡುವ ಮಂದಿಯನ್ನು ಇಂತಹ ವಾತಾವರಣದಲ್ಲಿ ಒಮ್ಮೆ ಉಸಿರಾಡಿ ಬನ್ನಿ ಎಂದು ಕಳುಹಿಸಬೇಕು ಎನಿಸಿದ್ದು ಸುಳ್ಳಲ್ಲ..

ಲೇಖನ - ಶ್ರೀಮತಿ ಮಂಜುಳಾ ಡಿ 





Comments