ವಾಸವಾಂಬ (ಕನ್ಯಕಾ ಪರಮೇಶ್ವರಿ)

ವಾಸವಾಂಬ (ಕನ್ಯಕಾ ಪರಮೇಶ್ವರಿ)

ಲೇಖನ -  ಶ್ರೀ ಡಾ ಸಿ ವಿ ಮಧುಸೂದನ

ಸುಮಾರು ಒಂದು ಸಾವಿರ ವರ್ಷಗಳ ಹಿಂದಿನ ಮಾತು. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ಪೆನುಗೊಂಡೆಯಲ್ಲಿ ಆಗ ಕುಸುಮ ಸೆಟ್ಟಿ ಎಂಬ ವೈಶ್ಯರ ದೊರೆ ಇದ್ದನು. ಇವನು ಆಗ ವೆಂಗಿ ನಾಡನ್ನು ಆಳುತ್ತಿದ್ದ ವಿಷ್ಣುವರ್ಧನ (ಅಥವಾ ವಿಮಲಾದಿತ್ಯ) ಮಹಾರಾಜನಿಗೆ ಸಾಮಂತ. (ಈ ವಿಷ್ಣುವರ್ಧನನು ಮುಂದೆ ಬಂದ ಹೊಯ್ಸಳರ ವಿಷ್ಣುವರ್ಧನನಿಗಿಂತ ಬೇರೆಯಾದವನು) ಕುಸುಮ ಸೆಟ್ಟಿಯ ಪತ್ನಿಯ ಹೆಸರು ಕುಸುಮಾಂಬ. ಪತಿ ಪತ್ನಿಯರು ಸಾತ್ವಿಕರು, ಧರ್ಮಿಷ್ಟರು, ಎಲ್ಲರ ಮನ್ನಣೆಗೂ ಪಾತ್ರರಾಗಿದ್ದವರು. ಅವರ ಮನೆ ದೇವರು ನಾಗೇಶ್ವರ ರೂಪದ ಮಹೇಶನು.



ಈ ದಂಪತಿಗಳಿಗೆ ಬಹುಕಾಲವಾದರೂ ಮಕ್ಕಳಾಗಿರಲಿಲ್ಲ. ಈ ನಿಟ್ಟಿನಲ್ಲಿ ಅವರ ಪೂಜೆ ಪ್ರಾರ್ಥನೆಗಳೂ, ವ್ರತಗಳೂ ಯಾವ ಫಲವನ್ನೂ ಕೊಡದೆ ಹೋದುವು. ಕೊನೆಗೆ ಅವರು ತಮ್ಮ ಕುಲ ಗುರು ಆದ ಭಾಸ್ಕರಾಚಾರ್ಯರ ಬಳಿ ತಮ್ಮ ದುಃಖವನ್ನು ತೋಡಿಕೊಂಡರು. ಭಾಸ್ಕರಚಾರ್ಯರು ಜಾತಿಯಿಂದ ಕೋಮಟಿ (ವೈಶ್ಯ)ರಾಗಿದ್ದರೂ, ಅವರ ವೃತ್ತಿ ಮತ್ತು ಶಾಸ್ತ್ರಗಳಲ್ಲಿ ಅವರಿಗಿದ್ದ ಪರಿಣತೆ ಮುಂತಾದ ಕಾರಣಗಳಿಂದ ಅವರನ್ನು “ಕೋಮಟಿ ಬ್ರಾಹ್ಮಣ” ರೆಂದು ಪರಿಗಣಿಸುತಿದ್ದರು. ಭಾಸ್ಕರಚಾರ್ಯರು ಆ ದಂಪತಿಗಳಿಗೆ ಪುತ್ರ ಕಾಮೇಷ್ಟಿ ಯಾಗವನ್ನು ಆಚರಿಸಬೇಕೆಂದು ಸಲಹೆ ಮಾಡಿದರು.

ನಿರ್ದೆಶಿಸಿದಂತೆಯೇ, ಯಾಗವನ್ನು ಶುಭ ಮುಹೂರ್ತದಲ್ಲಿ ಪ್ರಾರಂಭಿಸಿ, ಸಾಂಗವಾಗಿ ಆಚರಿಸಲಾಯಿತು. ಯಾಗದಿಂದ ಸಂಪ್ರೀತರಾದ ದೇವತೆಗಳು ಅಗ್ನಿ ದೇವರ ಮೂಲಕ ಪ್ರಸಾದವನ್ನು ಕಳುಹಿಸಿದರು. ಪ್ರಸಾದವನ್ನು ದಂಪತಿಗಳಿಬ್ಬರೂ ಸಂತೋಷದಿಂದ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕುಸುಮಾಂಬೆಯು ಗರ್ಭಿಣಿಯಾಗಿದ್ದ ಚಿಹ್ನೆಗಳು ಕಂಡು ಬಂದವು. ಆಕೆಯು ಆಗ ವ್ಯಕ್ತಪಡಿಸಿದ ಅಪರೂಪದ ಬಯಕೆಗಳು ಅವಳಿಗೆ ಹುಟ್ಟುವ ಮಕ್ಕಳು ಲೋಕ ಕಲ್ಯಾಣಕ್ಕಾಗಿ ಶ್ರಮಿಸುವರೆಂಬುದಕ್ಕೆ ಮುನ್ಸೂಚನೆ ಎಂದು ಹಿರಿಯರು ಹೇಳಿದರು.

ವಸಂತ ಋತುವು ಬಂದಿತು. ವೈಶಾಖ ಮಾಸದ ಶುಕ್ಲಪಕ್ಷದ ದಶಮಿ, ಉತ್ತರಾ ನಕ್ಷತ್ರದ ದಿನ ಕುಸುಮಾಂಬೆ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಗಂಡು ಮಗುವಿಗೆ ವಿರೂಪಾಕ್ಷನೆಂದೂ, ಹೆಣ್ಣು ಮಗುವಿಗೆ ವಾಸವಾಂಬ ಎಂದೂ ನಾಮಕರಣ ಮಾಡಲಾಯಿತು. ಚಿಕ್ಕವನಿರುವಾಗಲೇ ವಿರೂಪಾಕ್ಷನಲ್ಲಿ ಪ್ರಬಲಶಾಲಿ ರಾಜನಾಗುವ ಚಿಹ್ನೆಗಳು ಕಂಡು ಬಂದುವು. ವಾಸವಾಂಬೆಯಾದರೋ ಚಿತ್ರಕಲೆ, ಸಂಗೀತ, ಸಾಹಿತ್ಯ, ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವಳಾಗಿದ್ದಳು. ಇವರಿಬ್ಬರೂ ಭಾಸ್ಕರಾಚಾರ್ಯರ ಶಿಕ್ಷಣ ಮತ್ತು ಮಾರ್ಗದರ್ಶನದ ಸೌಭಾಗ್ಯವನ್ನು ಪಡೆದು, ವಿರೂಪಾಕ್ಷನು ಕತ್ತಿ ವರಸೆ, ಧನುರ್ವಿದ್ಯೆ, ಕುದುರೆ ಸವಾರಿ, ಪುರಾಣ ಇತಿಹಾಸಗಳ ಜ್ಞಾನ ಮುಂತಾದ ರಾಜ್ಯಾಡಳಿತಕ್ಕೆ ಅವಶ್ಯಕವಾದ ವಿದ್ಯೆಗಳಲ್ಲಿ ನಿಷ್ಣಾತನಾದನು;  ವಾಸವಾಂಬೆಯು ಲಲಿತಕಲೆಗಳಲ್ಲೂ, ಅಧ್ಯಾತ್ಮಿಕ ವಿಷಯಗಳಲ್ಲ್ಲೂ ಪ್ರವೀಣತೆಯನ್ನು ಗಳಿಸಿದಳು.

ವಿರೂಪಾಕ್ಷನಿಗೆ ಪ್ರಾಪ್ತ ವಯಸ್ಸು ಬಂದಾಗ, ಅವನಿಗೆ ಏಲೂರು ನಗರದ ಅರಿಧಿ ಸೆಟ್ಟಿ ಎಂಬುವರ ಮಗಳಾದ ರತ್ನಾವತಿಯನ್ನು ಕೊಟ್ಟು ವಿಜೃಂಭಣೆಯಿಂದ ಮದುವೆ ಆಯಿತು. ವಾಸವಾಂಬೆಯ ಮದುವೆಯೂ ಇದೇ ರೀತಿ ಅದ್ಧೂರಿಯಿಂದ ಆಗಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು.

ಹೀಗಿರುವಾಗ ಮಹಾರಾಜ ವಿಷ್ಣುವರ್ಧನನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಸೈನ್ಯಸಮೇತ ಹೊರಟು ಮಾರ್ಗದಲ್ಲಿ ಪೆನುಗೊಂಡೆಗೆ ಬಂದು ಸೇರಿದನು. ರಾಜ ಕುಸುಮ ಸೆಟ್ಟಿ ಅವನನ್ನು ಆದರದಿಂದ ಬರಮಾಡಿಕೊಂಡು, ಮೆರೆವಣಿಗೆ ಮಾಡಿಸಿ ಸಭಾಂಗಣದಲ್ಲಿ ಒಂದು ಅದ್ಧೂರಿಯ ಸತ್ಕಾರ ಸಮಾರಂಭವನ್ನು ಏರ್ಪಡಿಸಿದನು. ಆಗ ವಿಮಲಾದಿತ್ಯನು ಅಲ್ಲಿ ಓಡಾಡುತ್ತಿದ್ದ ವಾಸವಿಯನ್ನು ಕಂಡು ಮೋಹಿತನಾದನು. ಹೇಗಾದರೂ ಅವಳನ್ನು ವಿವಾಹ ಮಾಡಿಕೊಳ್ಳಲೇ ಬೇಕೆಂದು ನಿರ್ಧರಿಸಿ, ಅವಳನ್ನು ಕುರಿತು ಹೆಚ್ಚು ವಿವರಗಳನ್ನು ಅರಿಯಲು ಒಬ್ಬ ಮಂತ್ರಿಯನ್ನು ಕಳುಹಿಸಿದನು. ವಿಷ್ಣುವರ್ಧನನ ಈ ಬಯಕೆ ಕುಸುಮ ಸೆಟ್ಟಿಗೆ ತೀರ ಕಳವಳನ್ನು ಉಂಟುಮಾಡಿತು. ಮಹಾರಾಜನಿಗೆ ಆಗಲೇ ಮದುವೆಯಾಗಿದೆ, ಅವನ ವಯಸ್ಸೂ ವಾಸವಿಗಿಂತ ತುಂಬಾ ಹೆಚ್ಚುದು, ಮೇಲಾಗಿ ತಮ್ಮ ಜಾತಿಯೇ ಬೇರೆ ಅರಸನ ಜಾತಿಯೇ ಬೇರೆ. ಅವನಿಗೆ ಏನು ಮಾಡುವುದೆಂದು ತೋಚದೆ, ತನ್ನ ಕುಟುಂಬದವರು ಮತ್ತು ಸಮೀಪ ಸ್ನೇಹಿತರೊಡನೆ ಚರ್ಚೆ ಮಾಡಿದನು. ಅವರೆಲ್ಲರೂ ಈ ನಿರ್ಧಾರ ವಾಸವಿಯೇ ಮಾಡಬೇಕೆಂದು ತೀರ್ಮಾನಿಸಿದರು. ವಾಸವಿ ತನಗೆ ಐಹಿಕ ಸುಖ ದುಃಖಗಳ ಮೇಲೆ ಸ್ವಲ್ಪವೂ ಮನಸ್ಸಿಲ್ಲವೆಂದೂ, ತಾನು ಜೀವನ ಪರ್ಯಂತ ಕನ್ಯೆಯಾಗಿಯೇ ಉಳಿಯುತ್ತೇನೆ ಎಂದೂ ಹೇಳಿಬಿಟ್ಟಳು. 


ಕುಸುಮ ಸೆಟ್ಟಿ ಈ ಮದುವೆ ಸಾಧ್ಯವಿಲ್ಲವೆಂದು ವಿಷ್ಣುವರ್ಧನನಿಗೆ ತಿಳಿಸಿದನು. ಮಹಾರಾಜನು ಕೃದ್ಧನಾಗಿ ಪೆನುಗೊಂಡೆಯನ್ನು ಆಕ್ರಮಿಸಿ ವಾಸವಿಯನ್ನು ಕರೆತರಲು ಒಂದು ಸೈನ್ಯವನ್ನೇ ಕಳುಹಿಸಿದನು. ಧೀರರಾದ ಪೆನುಗೊಂಡೆಯ ಕೋಮಟಿಗರು ವಿವಿಧ ಚಾತುರ್ಯಗಳಿಂದ ವಿಷ್ಣುವರ್ಧನನ ಸೇನೆಯನ್ನು ಸೋಲಿಸಿದರು. ಆದರೂ ವಿಷ್ಣುವರ್ಧನನು ಇನ್ನೂ ದೊಡ್ಡ ಸೇನೆಯಿಂದ ಮತ್ತೊಮ್ಮೆ ಯುದ್ಧಕ್ಕೆ ಬರುವನು ಎಂಬುದರಲ್ಲಿ ಸಂದೇಹವಿರಲಿಲ್ಲ.

ಮುಂದೇನು ಮಾಡಬೇಕು ಎಂದು ತೀರ್ಮಾನಿಸಲು ಪೆನುಗೊಂಡೆ ರಾಜ್ಯದ 12 ನಗರಗಳಲ್ಲಿ ವಾಸವಾಗಿದ್ದ 714 ಗೋತ್ರಗಳ ಕೋಮಟಿ ಮುಖ್ಯಸ್ತರನ್ನು ಕರೆದು ಕುಲಗುರು ಭಾಸ್ಕರಾಚಾರ್ಯರ ಸನ್ನಿಧಿಯಲ್ಲಿ ಒಂದು ಮಹಾಸಭೆಯನ್ನು ಏರ್ಪಡಿಸಿದನು.

ಚರ್ಚೆ ಬಹು ಕಾಲ ನಡೆದರೂ, ಒಮ್ಮತ ಬರಲಿಲ್ಲ. 102 ಗೋತ್ರಗಳ ಮುಖ್ಯಸ್ತರು “ಹುಟ್ಟಿದವನಿಗೆ ಸಾವು ನಿಶ್ಚಯ. ನಾವು ಸಾಯಬೇಕಾದರೆ ಧೀರರಂತೆ ಸಾಯೋಣ; ಹೇಡಿಗಳಂತೆ ಅಲ್ಲ. ಇಷ್ಟಕ್ಕೂ ಎದುರಾಳಿ ಬಲಶಾಲಿಯಾದರೆ ಏನಂತೆ? ಒಂದು ಬೆಂಕಿನ ಕಿಡಿ ದೊಡ್ಡ ಹುಲ್ಲು ಮೆದೆಯನ್ನೇ ನಾಶಮಾಡಬಲ್ಲದು ಅಲ್ಲವೇ?” ಎಂದು ತಮ್ಮ ನಿರ್ಧಾರವನ್ನು ಘೋಷಿಸಿದರು. ಆದರೆ ಉಳಿದ 612 ಗೋತ್ರಗಳ ಮುಖಂಡರು ವಾಸವಿಯು ಮಹಾರಾಜನನ್ನು ಮದುವೆಯಾಗುವುದೇ ಒಳಿತು ಮತ್ತು ಕ್ಷೇಮ ಎಂದು ತಮ್ಮ ನಿಲುವನ್ನು ಸೂಚಿಸಿದರು.

ಗುರುಗಳೂ ಪ್ರಾಣಕ್ಕಿಂತ ನಮ್ಮ ಮರ್ಯಾದೆಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು ಎಂದು ಹೇಳಲು ಕುಸುಮ ಸೆಟ್ಟಿಯ ನಿರ್ಧಾರ ಇನ್ನೂ ಬಲವಾಯಿತು. ಅವನೂ ಮತ್ತು 102 ಗೋತ್ರಗಳ ಮುಖ್ಯಸ್ತರೂ ವಾಸವಿಯನ್ನು ವಿಷ್ಣುವರ್ಧನನಿಗೆ ಕೊಟ್ಟು ವಿವಾಹ ಮಾಡುವ ಬದಲು ಅವನನ್ನು ಯುದ್ಧದಲ್ಲಿ ಎದುರಿಸ ಬೇಕು ಎಂದೇ ತೀರ್ಮಾನಿಸಿದರು. ಕೋಮಟಿಗರ ಈ ನಿರ್ಧಾರವನ್ನು ಕೇಳಿದಕೂಡಲೇ ವಿಷ್ಣುವರ್ಧನನು ತನ್ನ ಈ ಶತ್ರುಗಳನ್ನು ಸದೆಬಡಿಯಲು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಪೆನುಗೊಂಡೆಗೆ ಹೊರಟನು.

ಈ ಆಗುಹೋಗುಗಳೆಲ್ಲವನ್ನೂ ಗಮನಿಸುತ್ತಿದ್ದ ವಾಸವಿ ಈಗ ತನ್ನ  ಅಭಿಪ್ರಾಯವನ್ನು ವ್ಯಕ್ತ ಪಡಿಸಿದಳು: “ಒಬ್ಬ ಹುಡುಗಿಗೋಸ್ಕರ ದೊಡ್ಡ ಯುದ್ಧವೇಕೆ? ರಕ್ತಪಾತವೇಕೆ? ಯುದ್ಧ ಬೇಡ. ನಮ್ಮ ವಿರೋಧವನ್ನು ಅಹಿಂಸೆ ಮತ್ತು ತ್ಯಾಗದಿಂದ ತೋರಿಸೋಣ. ಅಸಾಧಾರಣ ನೈತಿಕ ಬಲ ಮತ್ತು ಮನೋನಿರ್ಧಾರ ಉಳ್ಳವರು ಮಾತ್ರ ಇಂಥ ತ್ಯಾಗವನ್ನು ಮಾಡಬಲ್ಲರು” ಆಕೆಯ ನಿಲುವು ತಂದೆತಾಯಿಗಳಿಗೆ ಮೆಚ್ಚಿಕೆಯಾಯಿತು. ಅವಳು ನಿರ್ದೇಶಿಸಿದಂತೆ ಮಾಡಲು ಹೃತ್ಪೂರ್ವಕವಾಗಿ ಒಪ್ಪಿಕೊಂಡರು. 

ಗೋದಾವರೀ ತೀರದಲ್ಲಿ ಬ್ರಹ್ಮಕುಂಡ ಎಂಬ ಪವಿತ್ರ ಕ್ಷೇತ್ರವಿದೆ. ವಾಸವಿಯ ಆದೇಶದಂತೆ ಅಲ್ಲಿ 103 ಅಗ್ನಿ ಕುಂಡಗಳನ್ನು ರಚಿಸಲಾಯಿತು. ವಾಸವಿಯು ಅಲ್ಲಿದ್ದ 102 ಗೋತ್ರಗಳ ದಂಪತಿಗಳನ್ನು “ನೀವು ನನ್ನೊಡನೆ ಈ ಕುಂಡಗಳಲ್ಲಿ ಅಗ್ನಿ ಪ್ರವೇಶ ಮಾಡಲು ಸಿದ್ಧರಿದ್ದೀರೋ?” ಎಂದು ಕೇಳಿದಳು. ಪ್ರತಿಯೊಬ್ಬ ದಂಪತಿಯೂ ತಾವು ಹಾಗೆ ಮಾಡಲು ಸಿದ್ಧವಾಗಿರುವೆವು ಎಂದು ಘೋಷಿಸಿದರು. ಇದು ಮಾತ್ರವಲ್ಲ, ಅವರೆಲ್ಲರೂ ವಾಸವಿಯು ದೇವರ ಅವತಾರವೆಂದೇ ತಿಳಿದು, ತನ್ನ ನಿಜಸ್ವರೂಪವನ್ನು ತೋರಿಸುವಂತೆ ಅವಳನ್ನು ಬೇಡಿಕೊಂಡರು.

ಆಗ ಮುಗುಳ್ನಗುತ್ತ ಆಕೆ ಸೂರ್ಯನಿಗಿಂತ ಪ್ರಕಾಶಮಾನವಾಗಿದ್ದ ತನ್ನ ಸ್ವರೂಪವನ್ನು ತೋರಿಸಿ ಹೀಗೆ ಹೇಳಿದಳು “ನಾನು ಆದಿ ಪರಾಶಕ್ತಿಯ ಅವತಾರ. ಹೆಂಗಸರ ಮಾನರಕ್ಷಣೆ, ಧರ್ಮರಕ್ಷಣೆ, ವಿಷ್ಣುವರ್ಧನನಂಥವರ ಸಂಹಾರ, ಕೋಮಟಿಗರ ಔದಾರ್ಯದ ಪ್ರಕಟಣೆ ಈ ಕಾರಣಗಳಿಂದ ಕಲಿಯುಗದಲ್ಲಿ ಅವತರಿಸಿರುವೆ. ಹಿಂದೆ ಅವಮಾನಿತಳಾದ ಸತೀ ದೇವಿಯು ಅಗ್ನಿಪ್ರವೇಶ ಮಾಡಿದಂತೆ, ನಾನೂ ಅಗ್ನಿಕುಂಡವನ್ನು ಪ್ರವೇಶಿಸಿ ಪರಲೋಕಕ್ಕೆ ನಿರ್ಗಮಿಸುವೆ. ಕುಸುಮ ಸೆಟ್ಟಿ ಹಿಂದಿನ ಜನ್ಮದಲ್ಲಿ ಸಮಾಧಿ ಎಂಬ ಮುನಿಯಾಗಿದ್ದರು. ಅವರೂ ಮತ್ತು 102 ಕೋಮಟಿ ಗೊತ್ರದವರೂ ಮೋಕ್ಷವನ್ನು ಹೊಂದಬೇಕೆಂದು ಅವರ ಇಚ್ಛೆ ಆಗಿತ್ತು. ಆದ್ದರಿಂದಲೇ ನಾನು ನಿಮ್ಮೆಲ್ಲರ ಆತ್ಮ ಬಲಿದಾನಕ್ಕೆ ಪ್ರೇರೇಪಿಸಿದ್ದೇನೆ” 

ತನ್ನ ಮಾತುಗಳು ಮುಗಿದ ಕೂಡಲೇ, ವಾಸವಿಯು ಅಂತರ್ಧಾನಳಾದಳು. 102 ಗೋತ್ರದ ದಂಪತಿಗಳೂ ಭಗವನ್ನಾಮ ಸ್ಮರಣೆ ಮಾಡುತ್ತಾ ಅಗ್ನಿಪ್ರವೇಶ ಮಾಡಿಬಿಟ್ಟರು.   

ಯುದ್ಧಕ್ಕೆ ಹೊರಟಿದ್ದ ವಿಷ್ಣುವರ್ಧನನಿಗೆ ದಾರಿಯುದ್ದಕ್ಕೂ ಅಪಶಕುನಗಳಾದುವು. ಆದರೂ ಧೃತಿಗೆಡದೆ ಅವನು ಪೆನುಗೊಂಡೆಯ ಮುಖ್ಯ ದ್ವಾರವನ್ನು ತಲುಪಿದನು. ಆಗ ಅವನಿಗೆ ಅಲ್ಲಿ ನಡೆದ ಸಂಗತಿಯೆಲ್ಲವೂ ಗೊತ್ತಾಯಿತು. ಈ ದುರ್ಭರ ವಾರ್ತೆಯಿಂದ ಅವನಿಗೆ ಹೃದಯಾಘಾತವಾಗಿ ಅಲ್ಲೇ ಮೃತನಾದನು.

ಈ ವಾರ್ತೆ ತಿಳಿದ ಕೂಡಲೇ ವಿಷ್ಣುವರ್ಧನನ ಮಗನಾದ ರಾಜಾ ನರೇಂದ್ರನು ಪೆನುಗೊಂಡೆಗೆ ಧಾವಿಸಿ ಬಂದು ಆಗಿ ಹೋದದ್ದಕ್ಕೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದನು. ವಾಸವಿಯ ಸೋದರನಾದ ವಿರೂಪಾಕ್ಷನು ಅವನಿಗೆ ಸಮಾಧಾನದ ಮಾತುಗಳನ್ನು ಹೇಳಿ “ಅಣ್ಣಾ, ಆದದ್ದಾಯಿತು. ಗತಿಸಿದ ಘಟನೆಗಳ ಬುನಾದಿಯಲ್ಲಿ ನಾವು ಭವಿಷ್ಯವನ್ನು ರೂಪಿಸೋಣ. ನನ್ನ ತಂಗಿ ವಾಸವಿ ಅಹಿಂಸಾ ಮಾರ್ಗವನ್ನು ಅನುಸರಿಸಿ, ತನ್ನ ತ್ಯಾಗದಿಂದ ನಮ್ಮೆಲ್ಲರನ್ನೂ ರಕ್ಷಿಸಿದಳು. ಇದು ಮೊದಲು, ನಾವು ಕೋಮಟಿಗರು ಯುದ್ಧ ಮಾಡುವುದಿಲ್ಲ, ರಾಜ್ಯಾಡಳಿತ ಮಾಡುವುದಿಲ್ಲ. ಬದಲಿಗೆ ವ್ಯಾಪಾರ, ಕೃಷಿ ಮುಂತಾದ ಉದ್ದಿಮೆಗಳ ಮೂಲಕ ಜನಸೇವೆ ಮಾಡುತ್ತೇವೆ” ಎಂದು ಆಶ್ವಾಸನವಿತ್ತನು.

ವಿರೂಪಾಕ್ಷನು ತನ್ನ ಕುಲಗುರು ಭಾಸ್ಕರಚಾರ್ಯರ ನಿರ್ದೇಶನದ ಪ್ರಕಾರ ಆತ್ಮ ಬಲಿದಾನ ಮಾಡಿದ ಎಲ್ಲ ಗೋತ್ರದವರ ಸ್ಮರಣಾರ್ಥಕವಾಗಿ ಪೆನುಗೊಂಡೆಯಲ್ಲಿ 101 ಶಿವಲಿಂಗಗಳನ್ನು ಸ್ಥಾಪಿಸಿದನು. ಅನಂತರ ವಾಸವಿಯ ವಿಗ್ರಹವನ್ನೂ ಒಂದು ದೇವಾಲಯದಲ್ಲಿ ಸ್ಥಾಪಿಸಲಾಯಿತು. ಅಲ್ಲಿಂದ ಮೊದಲುಗೊಂಡು, ಕೋಮಟಿಯರು ಆಕೆಯನ್ನು ಕನ್ಯಕಾ ಪರಮೇಶ್ವರಿ ಎಂದು ಕರೆದು ಪೂಜಿಸಲಾರಂಭಿಸಿದರು.

ತನ್ನ ಧಾರ್ಮಿಕ ಶ್ರದ್ಧೆ, ಅಹಿಂಸೆಯಲ್ಲಿ ಅಚಲ ನಂಬಿಕೆ ಮತ್ತು ಸ್ತ್ರೀಯರಿಗೆ ತಮ್ಮ ಭವಿಷ್ಯವನ್ನು ತಾವೇ ನಿರೂಪಿಸಿಕೊಳ್ಳುವ ಸ್ವಾತಂತ್ರ್ಯ ಮುಂತಾದ ನಿಲುವುಗಳಿಂದ ವಾಸವಿಯು ಚಿರಸ್ಮರಣೀಯಳಾಗಿದ್ದಾಳೆ. ಭಾರತರತ್ನ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ವಾಸವಿಯನ್ನು “ಅಹಿಂಸೆಯೇ ಮೂರ್ತಿವಂತರಾದ ಜನರಲ್ಲಿ ಈಕೆಯೇ ಮೊದಲಿಗಳು” ಎಂದು ಉದ್ಗರಿಸಿದ್ದಾರೆ. 

ವಾಸವಿಯ ಕಥೆಯನ್ನು ಕೇಳಿದಾಗ ನನಗೆ ಗೌತಮನ ಬುದ್ಧನ ಕಾಲದಲ್ಲಿದ್ದ ರಾಜನರ್ತಕಿ ಆಮ್ರಪಾಲಿಯ ವೃತ್ತಾಂತ ನೆನಪಿಗೆ ಬಂದಿತು. ವೈಶಾಲಿಯ ಅರಸನು ತನ್ನ ಪ್ರೇಯಸಿ ಆಮ್ರಪಾಲಿಯನ್ನು ಕಾರಾಗೃಹದಲ್ಲಿ ಇರಿಸಿ ಅವಳಿಗೆ ಮರಣದಂಡನೆಯನ್ನು ವಿಧಿಸಿರುವನು ಎಂದು ಕೇಳಿ ಕ್ರುದ್ಧನಾದ ಮಗಧ ದೇಶದ ರಾಜನಾದ ಅಜಾತಶತ್ರು ವೈಶಾಲಿಯ ಮೇಲೆ ಧಾಳಿ ಮಾಡಿದ್ದು ಮಾತ್ರವಲ್ಲ, ಆ ನಗರಕ್ಕೇ ಬೆಂಕಿ ಹಚ್ಚಿದನು. ನಗರದ ಬಹುಪಾಲು ಜನರೆಲ್ಲಾ ಅಗ್ನಿಗೆ ಆಹುತಿಯಾದರು. ಆಮ್ರಪಾಲಿ ಉಳಿದುಕೊಂಡಳು. ಅಜಾತಶತ್ರು ಅವಳನ್ನು ರಣಭೂಮಿಗೆ ಕರೆತಂದು ಅವಳಿಗೋಸ್ಕರ ಎಷ್ಟು ಜನರನ್ನು ವಧಿಸಿರುವೆನೆಂದು ಹೆಮ್ಮೆಯಿಂದ ತೋರಿಸಿದನು. ಇದನ್ನು ನೋಡಿದ ಆಮ್ರಪಾಲಿಗೆ ತಮ್ಮಿಬ್ಬರ ಮಿಲನದ ಸಲುವಾಗಿ  ಇಂತಹ ಘೋರ ಕಾರ್ಯ ನಡೆಯಿತಲ್ಲ ಎಂದು ಅಸಹ್ಯವಾದ ವೇದನೆಯುಂಟಾಯಿತು. ಈ ಬಗೆಯ ಬಾಳು ತಕ್ಕದಲ್ಲ ಎಂದು ತಿಳಿದು ಅವಳು ಅಜಾತಶತ್ರುವಿನ ಸಂಗವನ್ನು ತೊರೆದು ಗೌತಮ ಬುದ್ಧನ ಶರಣು ಹೋದಳು. ಅಜಾತಶತ್ರುವೂ ಕಾಲಕ್ರಮೇಣ ಸರ್ವಸ್ವವನ್ನೂ ತೊರೆದು ಬುದ್ಧನಿಗೆ ಶರಣಾಗತನಾದನು.

ಆಮ್ರಪಾಲಿಗೂ ವಾಸವಿಗೂ ಇರುವ ಹೋಲಿಕೆ ಎಂದರೆ ಇಬ್ಬರಿಗೂ ರಕ್ತಪಾತ, ಹಿಂಸಾ ಮಾರ್ಗಗಳು ಸಹಿಸಲಾಗುತ್ತಿರಲಿಲ್ಲ. ಕಥೆಗಳಲ್ಲಿನ ವ್ಯತ್ಯಾಸವೆಂದರೆ ಪ್ರಾಯಶಃ ಕಾರಾಗೃಹದಲ್ಲಿದ್ದ ಕಾರಣ ಆಮ್ರಪಾಲಿಗೆ ಭಯಂಕರ ಮಾರಣಹೋಮವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.


Comments

  1. ವೈಶ್ಯರ ಕುಲದ ಕಸುಮ ಸೆಟ್ಟಿ ದಂಪತಿಗಳ ಮಗಳಾದ ದೇವೀ ಸ್ವರೂಪಿ ವಾಸವಿಯ ಕಥೆ ಇಂದಿಗೂ ವಾಸವಿ ಜಯಂತಿ ಎಂಬ ಹೆಸರಿನಲ್ಲಿ ಪ್ರಚಲಿತವಾಗಿದೆ. ಈ ಲೇಖನದ ಕ್ಷತ್ರಿಯ ರಾಜ ವಿಷ್ಣುವರ್ದನ ನು ವಾಸವಿ ಯ ಅಂದಕ್ಕೆ ಮನಸೋತು ಮದುವೆಯಾಗಲು ಇಚ್ಛಿಸಿದ. ವಾಸವಿ ನಿರಾಕರಿಸಿದಕ್ಕೆ ಯುದ್ಧದಲ್ಲಿ ಗೆದ್ದು ಅವಳನ್ನು ಪಡೆದುಕೊಳ್ಳುವ ಆಯ್ಕೆ ಮಾಡಿಕೊಂಡ.
    ಕ್ಷತ್ರಿಯರು ಯುದ್ಧ ವೀರರು. ವೈಶ್ಯರು ತ್ಯಾಗ ವೀರರು. ಅದರಂತೆ ಆತ್ಮಾಭಿ ಮಾನಿಯೂ, ಅಹಿಂಸಾ ಪ್ರಿಯಳೂ ಆದ ವಾಸವಿಯು ರಕ್ತಪಾತವನ್ನು ತಪ್ಪಿಸಲು ತಾನೇ ಆತ್ಮಾಹುತಿ ಗೆ ಸಿದ್ಧಳಾಗಿ ಶಿವನಲ್ಲಿ ಸಮರ್ಪಿತಳಾದ ಕಥೆ ಕಣ್ಣಂಚಿನಲ್ಲಿ ನೀರು ತರಿಸಿತು. ಅವಳ ಜೊತೆ ಇನ್ನೂ 102 ಗೋತ್ರದವರು ಅಗ್ನಿ ಪ್ರವೇಶ ಮಾಡಿ ಆತ್ಮ ಬಲಿದಾನ ಹೊಂದಿದ್ದು ನಿಜಕ್ಕೂ ಶೋಕದಾಯಕ. ಭಗವತಿ ಸ್ವರೂಪಿ ವಾಸವಿ ಕನ್ನಿಕಾ ಪರಮೇಶ್ವರಿ ಯ ಕಥೆ ಮನಸ್ಸಿಗೆ ತಟ್ಟುವಂತಿತ್ತು. ಇಂದಿಗೂ ಅನೇಕ ಸ್ತ್ರೀಯರು ನಾನಾ ಕಾರಣಗಳಿಗಾಗಿ ಪ್ರಾಣ
    ಕಳೆದುಕೊಳ್ಳುತ್ತಿದ್ದಾರೆ. ( ಸ್ತ್ರೀ ಶೋಷಣೆ, ಮಾನಭಂಗ, ವರದಕ್ಷಿಣೆ). ಹೀಗೆ ಅನೇಕ ವಿಚಾರಗಳಿಗೆ ಮನಸ್ಸು ರೋಧಿಸುತ್ತದೆ. ಎಲ್ಲರಿಗೂ ಪರಮೇಶ್ವರಿ ಯು ಸದ್ಬುದ್ಧಿ ಯನ್ನು ಅನುಗ್ರಹಿಸಿ,
    ಸನ್ಮಂಗಳವನ್ನುಂಟು ಮಾಡಲಿ.
    Feed backs from - ಸುಮಾ ಅಶೋಕ್.

    ReplyDelete

Post a Comment