ಹಾ.ಪ.ವಾ.ಪ್ಯಾ.ಡಿ.ಯ ಕುಶನ್ ಡಿಸ್ಕಷನ್

ಹಾ.ಪ.ವಾ.ಪ್ಯಾ.ಡಿ.ಯ ಕುಶನ್ ಡಿಸ್ಕಷನ್

ಹಾಸ್ಯ ಲೇಖನ ಅಣುಕು ರಾಮನಾಥ್



ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಕುಶನ್ ಇಲ್ಲದ ಸೀಟನ್ನು ನೀಡಲಾಯಿತು ಎಂಬ ವಿಷಯದ ಬಗ್ಗೆ ಹಾರರ್ ಪಶುಪತಿ ವಾಹಿನಿಯಲ್ಲಿ ಪ್ಯಾನಲ್ ಡಿಸ್ಕಷನ್ (ಹಾ.ಪ.ವಾ.ಪ್ಯಾ.ಡಿ.) ಆರಂಭವಾಯಿತು.

‘ಹೇರ್ ಲೈನ್ಸ್‍ನ ನೇಮ್ ನೋಡಿರಿ...’ ಆರಂಭಿಸಿದಳು ಅನೌನ್ಸರ್ ಚಿಕ್ಕೇಗೌಡ್ತಿ.

‘ಹೇರ್ ಲೈನ್ಸ್ ಅಂದರೆ ಕೇಶವಿನ್ಯಾಸಾನಾ ಮೇಡಂ? ಹಾಗಾದರೆ ಹೇರ್‍ಲೈನ್ ಫ್ರ್ಯಾಕ್ಚರ್ ಅಂದರೆ ಅಲ್ಲಲ್ಲಿ ಕೂದಲು ಉದುರಿ ಒಂದು ವಿಧವಾದ ಜಲ್ಲಡಿಯಂತೆ ಕಾಣುವ ಬೋಡುತಲೆಯೇನು?’ ಮೂಗು ತೂರಿಸಿದರು ಬುದ್ಧಿಜೀವಿ ಬುಳ್ಳಣ್ಣ.

‘ಲೈಸೆನ್ಸ್... ಐ ಮೀನ್ ಸೈಲೆನ್ಸ್...’ ಅಬ್ಬರಿಸಿದ ಹಾರರ್ ಪಶುಪತಿ.

‘ಲೈ ಸೆನ್ಸ್ ಕೂಡ ಸರಿಯಾಗಿಯೇ ಇದೆ. ಲೈ ಅಂದರೆ ಮಲಗು ಎಂದರ್ಥ. ಸೆಷನ್ ನಡೆಯುವಾಗ ಮಲಗುವವರು ಲೈ ಸೆನ್ಸ್ ಇಲ್ಲದವರು; ಮನೆಯಲ್ಲಿ ಗಡದ್ದಾಗಿ ಗೊರಕೆ ಹೊಡೆಯುವವರು Lie sense  ಇರುವವರು’ ಬಾಯಿ ಹಾಕಿದರು ಪ್ರೊಫೆಸರ್ ಗ್ರ್ಯಾಮರ್ ಕಿಲ್ಲರ್.

‘ಐ ವಿಷ್ ಟು ಸಬ್ಮಿಟ್ ಮೈ ಪಾಯಿಂಟ್ ಮಿಸ್ಟರ್ ಹಾರರ್ ಪಶುಪತಿ. ಲೈ ಅಂದ್ರೆ ಸುಳ್ಹೇಳೋದು. ಯಾವ ಕೇಸಿನಲ್ಲಿ, ಯಾವ ಸಂದರ್ಭದಲ್ಲಿ, ಎಷ್ಟು ಪ್ರಮಾಣದ ಸುಳ್ಳನ್ನ ಹೇಳಿದರೆ ಕೇಸ್ ಗೆಲ್ಬೋದು ಅಂತ ತಿಳ್ಕೊಂಡಿರೋ ವಕೀಲನಿಗಿರೋ ಸೆನ್ಸೇ ಲೈ ಸೆನ್ಸು’ ಕೂಗು ಹಾಕಿದರು ಬಹುವ್ಯಾಜ್ಯ ವಿಶಾರದ, ಕೋರ್ಟುಗಿಡುಗ, ಬಹುವಕೀಲಕಕ್ಷಿ ತರ್ಲೆಕುಂಟೆ ತಮ್ಮಯ್ಯನವರು.

‘ಪಾಯಿಂಟ್... ಕಮ್ ಟು ದ ಪಾಯಿಂಟ್...’ ಪಶುಪತಿ ಟೇಬಲ್ ಕುಟ್ಟಿದರು, ‘ನಮ್ಮ ಅನೌನ್ಸರ್ ಏರ್‍ಲೈನ್‍ನ ನೇಮ್ ನೋಡಿ ಅಂದರು. ಅವರೇನೋ ಮುಖ್ಯವಾದದ್ದನ್ನು ಹೇಳುವವರಿದ್ದಾರೆ. ಅವರಿಗೆ ಮುಂದುವರಿಸಲು ಅವಕಾಶ ಕೊಡಬೇಕು.’ 



ಮುಂದಿನ ಕೆಲವು ನಿಮಿಷಗಳು ವಿಧಾನಸೌಧದ ಸೆಷನ್ನಿನ ಸಮಯದಲ್ಲಿ ಎಲ್ಲ ಪಕ್ಷಗಳವರೂ ಒಟ್ಟಾರೆ ಮಾತನಾಡುವುದನ್ನು ಅನುಕರಿಸಲೋ ಎಂಬಂತೆ ಸಕಲಪ್ಯಾನಲಿಗಳೂ ಕಂಠಾಸ್ತ್ರವನ್ನು ತೀವ್ರತರದಲ್ಲಿ ಬಳಸಿದುದರ ಪರಿಣಾಮವಾಗಿ ವಾಹಿನಿಯಲ್ಲಿ ಮಧ್ಯರಾತ್ರಿ ಶ್ವಾನಗಳ ಗುಂಪೊಂದು ಶೋಕಸಭೆ ನಡೆಸುವಾಗ ಕೇಳಿಬರುವಷ್ಟು ಆಕ್ರಂದನ, ಬೊಗಳುವಿಕೆ, ಚೀರಾಟ, ಕುಂಯ್‍ಗುಡುವಿಕೆಗಳ ಸಮ್ಮಿಶ್ರ ಸದ್ದು ಸಾಂಗವಾಗಿ ಮೊಳಗಿತು. ಈ ಶಬ್ದಸಂಕರಘೋರವನ್ನೂ ಮೀರಿಸುತ್ತಾ ಚಿಕ್ಕಿ ‘ಹೇರ್‍ಲೈನ್ ಎಸರು ಹಿಂಡಿಗೋ. ಓಗ್ತಾ ಓಗ್ತಾ ನಾವು ನಿಮ್ಮನ್ನ ಹಿಂಡ್ತೀವಿ is what they are saying’ ಎಂದಳು. ಈ ಅಮೋಘ ನಾಮವ್ಯಾಖ್ಯಾನದ ಸುನಾಮಿಗೆ ಸಿಲುಕಿದ ಶ್ವಾನಘೋಷಸದೃಶ ಸಭೆ ಅರೆಕ್ಷಣ ಬೆರಗಾಗಿ ನಿಶ್ಶಬ್ದವಾಯಿತು. ಆದೊಡೇಂ! ಅದು ಕೇವಲ ಅರೆಕ್ಷಣವಷ್ಟೆ. Idiocy abhors silence ಅಲ್ಲವೇ!

‘ಇಂಡಿಗೋ ಅನ್ನುವುದು ತೆಲುಗಿನ ಇಂಟಿಕಿ ಪೋ ಎನ್ನುವುದಕ್ಕೆ ಹತ್ತಿರವಿರುವುದಾದರೂ ಅದು ಅದಲ್ಲ. ಸದ್ಯಕ್ಕೆ ನಮಗೆ ನಿರೂಪಕಿಯ ಅಗತ್ಯವಿಲ್ಲ. ಹಾದಿಬೀದಿಗಳಲ್ಲಿ ಜಗಳ ಕಾಯುವಾಗ ನಿರೂಪಕಿಯರು ಇರುತ್ತಾರೇನು? ಅಲ್ಲಿಲ್ಲದ ಸವಲತ್ತು ಇಲ್ಲೇಕೆ? ನಮ್ನಮ್ ಪಾಡಿಗೆ ನಾವು ವಾಗ್ಯುದ್ಧವಾಡೋಣ ಬನ್ನಿ’ ಮಾತಿನಲ್ಲೇ ತೊಡೆ ತಟ್ಟಿದರು ಗಾಡೂರು ಪುಟ್ಮಾತಯ್ಯ.

‘ವಿಷಯಕ್ಕೆ ಬನ್ನಿ... ಪ್ರಯಾಣಿಕರಿಗೆ ಕೊಟ್ಟ ಸೀಟಿಗೆ ಕುಶನ್ ಇರಲಿಲ್ಲ...’ ಪಶುಪತಿ ತಮ್ಮ ಆರ್ಭಟದ ಡೆಸಿಬಲ್ಲನ್ನು ಏರಿಸಿದರು. ಕತ್ತೆಗಳು ಕಿರುಚುವಾಗ ಕುನ್ನೈಕುಡಿ ಸಂಗೀತ ಕೇಳಿಸೀತೇ? ಪ್ಯಾನಲ್ಲಿನ ವಾಯ್ಸು ತಾತ್ಕಾಲಿಕವಾಗಿ ನಿಲ್ ಆಯಿತು.

‘ಕುಶನ್ ಇಲ್ಲದ ಸೀಟ್ ನೀಡಿದ್ದು ಏಕೆ?’ ಪ್ರಶ್ನೆಯನ್ನು ಅಖಾಡಾಕ್ಕೆ ಎಸೆದರು ಹಾರರ್ ಪಶುಪತಿ.

‘ಪ್ರಯಾಣಿಕರು ಒಂದು ಕಂಪನಿಯ ಮುಖ್ಯ ಹುದ್ದೆಯಲ್ಲಿದ್ದಾರೆಂದು ನಮಗೆ ವರದಿ ಬಂದಿದೆ. The high seat is never a bed of roses ಎಂಬ ಮಾತಿದೆ. ಮುಳ್ಳಿನ ಕುರ್ಚಿಯಲ್ಲೇ ಕುಳಿತು ಅಭ್ಯಾಸವಾದ ಅವರಿಗೆ ಸಾಫ್ಟ್ ಕುಶನ್ ಅಲರ್ಜಿ ಇರಬಹುದೆಂಬ ಊಹೆಯ ಮೇರೆಗೆ ಸೀಟನ್ನು ಬೇ-ಕುಶನ್ ಮಾಡಿದ್ದರೆಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ’ ನುಡಿದರು ಆಫೀಸರ್ ಅಡನಾಡಿಯವರು.

‘ಐ ಆಬ್ಜೆಕ್ಟ್...’

‘ಐ ಅನ್ನೋದು ಸಬ್ಜೆಕ್ಟ್ ಕಣ್ರೀ... ಸಬ್ಜೆಕ್ಟ್, ಪ್ರೆಡಿಕೇಟ್, ಆಬ್ಜೆಕ್ಟ್‍ಗಳ ವ್ಯತ್ಯಾಸ ತಿಳಿಯದವರನ್ನ ಯಾಕ್ರೀ ಪ್ಯಾನಲ್ ಡಿಸ್ಕಷನ್‍ಗೆ ಕರಿಸ್ತೀರ ಮಿಸ್ಟರ್ ಹಾರರ್? ಜಸ್ಟ್ ಎ ವೇಸ್ಟ್ ಆಫ್ ಟೈಮ್’ ಕಿಡಿ ಕಾರಿದರು ವ್ಯಾಕರಣಂ ವೇದಯ್ಯಂಗಾರ್.

‘ಪಾಯಿಂಟ್... ಕಮ್ ಟು ದ ಪಾಯಿಂಟ್...’ ಪಶುಪತಿ ಹೈ ಆಕ್ಟೇವಲ್ಲೇ ಅರಚಿದರು.

‘ಇದು ಪಾರದರ್ಶಕತೆಯ ಯುಗ. ಇಂಡಿಗೋ ಕಂಪನಿಯವರು ಇತ್ತೀಚೆಗೆ ಚಿಪ್ಸ್ ಅಂಗಡಿಯೊಂದಕ್ಕೆ ಹೋಗಿದ್ದರಂತೆ. ಅಂಗಡಿಯವರು ಇಂಡಿಗೋದವರ ಎದುರೇ ಆಲೂಗಡ್ಡೆಯ ಸಿಪ್ಪೆ ಬಿಡಿಸಿ, ಅವರೆದುರೇ ಕ್ವಾಲಿಟಿ ಕಡಲೆಕಾಯಿ ಎಣ್ಣೆಯ ಪ್ಯಾಕೆಟ್ ಹರಿದು ಬಾಂಡಲೆಗೆ ಹಾಕಿ, ಅವರೆದುರೇ ಒಲೆ ಹಚ್ಚಿ, ಅವರೆದುರೇ ಆಲೂಗಡ್ಡೆಯನ್ನು ಬೆರಳುಗಳಂತೆ ಹಚ್ಚಿ, ಫಿಂಗರ್ ಚಿಪ್ಸ್ ಮಾಡಿಕೊಟ್ಟದ್ದನ್ನು ಕಂಡು ಪ್ರಭಾವಿತರಾದ ಅವರು ಇಂಡಿಗೋದಲ್ಲೂ ಅಷ್ಟೇ ಪಾರದರ್ಶಕತೆ ಇದ್ದರೆ ಚೆನ್ನವೆಂದು ಆಲೋಚಿಸಿ,  ಪ್ರಯಾಣಿಕರಿಗೆ ಕುಶನ್ ಹಾಕುವುದಕ್ಕೂ ಮುಂಚೆ ತಮ್ಮ ವಿಮಾನದ ಸೀಟು ಎಷ್ಟು ಸದೃಢವಾಗಿರುತ್ತದೆಂದು ತೋರಿಸಲು ಹಾಗೆ ಡಿ-ಕುಶನ್ ಮಾಡಿದ್ದರು ಎಂದು ವರಿಶ್ಚಂದ್ರ ನಾಯ್ಸ್ ವೇದಿಕೆ ಹರಿಯುವ ನೀರಿನ ಮೇಲೆ ಪ್ರಮಾಣ ಮಾಡಿ ತಿಳಿಸಿದೆ. ಈ ವರದಿಯು ನಿಜವಾಗಿದ್ದಲ್ಲಿ, ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಲು ಯತ್ನಿಸಿದ ಇಂಡಿಗೋದವರನ್ನು ಶ್ಲಾಫಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾ ಚಪ್ಪಾಳೆ ತಟ್ಟಿ ಕುಳಿತರು ವಿವರಣಾ ವಿಖ್ಯಾತ ವಿಶ್ವರೂಪಯ್ಯನವರ್.

‘ವಿಶ್ವರೂಪಯ್ಯನವರು ತಮ್ಮ ರುಜುವನ್ನು ವಿ.ರೂಪಯ್ಯ ಎಂದೇ ಮಾಡುವುದು. ಅವರ ವಾದವನ್ನು ಕೇಳಿದಮೇಲೆ ಮಧ್ಯದ ಚುಕ್ಕೆಯನ್ನು ತೆಗೆದುಬಿಡುವುದು ಸೂಕ್ತ ಎನಿಸುತ್ತದೆ’ ಗಹಗಹಿಸಿದರು ಬು.ಬು.

ಮುಂದಿನ ಕೆಲವು ನಿಮಿಷಗಳು ಟ್ರಾಫಿಕ್ ಜ್ಯಾಮಿನ ಸಮಯದಲ್ಲಿ ಜ್ಯಾಮ್ ಉಂಟುಮಾಡಿದ ಎಮ್ಮೆಯ ಎದುರು ಎಲ್ಲ ವಾಹನಗಳೂ ತಮ್ಮ ಹಾರ್ನ್ ಸಂಗೀತವನ್ನು ಅರ್ಪಿಸಿದಾಗ ಸಂಭವಿಸುವಷ್ಟು ಶಬ್ದಮಾಲಿನ್ಯವನ್ನು ಆ ಪ್ಯಾನಲ್ ಹುಟ್ಟುಹಾಕಿತು. ಅವೆಲ್ಲ ಸದ್ದುಗದ್ದಲಗಳನ್ನು ಮೀರಿ ‘ಪಾಯಿಂಟ್... ಕಮ್ ಟು ದ  ಪಾಯಿಂಟ್...’ ಎಂಬ ನಗಾರಿಸಪ್ಪಳವು ಸರ್ವಪ್ಯಾನಲ್ ಅವಕೃಪೆಗೆ ಒಳಗಾಗುತ್ತಲೇ ಇತ್ತು.

ಕೊರಳೆತ್ತಿ ಕೂಗುವೆನು ಇಂದು ನಾನು

ಕಿವಿಮುಚ್ಚಿ ಕೂರುವಿರಿ ಇಂದು ನೀವು...

ಅಂದು ನಾ ಕೂಗಿದರು ಇಂದಿನಂತೆಯೆ ಕುಳಿತು

ಮುಚ್ಚಿದಿರಿ ಕಿವಿಗಳನು ಇಲ್ಲವೆನಗವಮಾನ

ಕೂಗಮಾರಿಗೆ ಬೇಕೆ  ಬಿರುದು ಸಮ್ಮಾನ !

ಎಲ್ಲ ಅರಚಲಿ ಎಂದು ನಾನು ಅರಚುವುದಿಲ್ಲ

ಕೂಗುವುದು ಅನಿವಾರ್ಯ ಕರ್ಮವೆನಗೆ

ಕೇಳದಿರಲೆನ್ನ ನುಡಿ ಒಬ್ಬರೂ ಮನೆಯೊಳಗೆ

ಕೂಗುವೆನು ಹೊರಬಂದು ಇಂದಿನಂತೆ

ಯಾರೆ ಕಿವಿ ಮುಚ್ಚಿದರು ನನಗಿಲ್ಲ ಚಿಂತೆ

ಕೊರಳೆತ್ತಿ ಕೂಗುವೆನು ಇಂದು ನಾನು...

ಎಂದು ಈ ಗದ್ದಲದ ನಡುವೆಯೂ ಒಬ್ಬ ಕುಕವಿಯು ಸ್ಟೀಲ್ ತಟ್ಟೆಯ ಮೇಲೆ ಚಾಕುವಿನಿಂದ ಗೀರಿದಾಗ ಉಂಟಾಗುವ ಸದ್ದನ್ನು ಹೋಲುವ ಕಂಠದಲ್ಲಿ ಹಾಡಲಾರಂಭಿಸಿದನು. ಇದನ್ನಾಲಿಸಿದ ಶಿವರುದ್ರಪ್ಪನವರ ಆತ್ಮ ಅದೆಷ್ಟು ಒದ್ದಾಡಿತೋ ಏನೋ. ಕಡೆಯಲ್ಲಿ ಅವರ ಕ್ಷಮೆಯನ್ನು ಕೇಳಿದುದರಿಂದ ಆತ್ಮಕ್ಕೆ ಒಂದಿಷ್ಟು ಸಮಾಧಾನವಾಗಿದ್ದೀತು.

ಹಾರರ್ ಪಶುಪತಿಯ ‘ಪಾಯಿಂಟ್... ಕಮ್ ಟು ದ ಪಾಯಿಂಟ್...’ ಪಲ್ಲವಿಯು ಈ ಕೂಗುಗೂಡಿನಲ್ಲಿ ಮುಂದುವರಿದಿತ್ತು.

‘ಕುಶನ್ ಮೇಲೆ ಜ್ಯೂಸ್ ಬಿದ್ದಿತ್ತಂತೆ...’ ಎಂದು ವಿವರಿಸಲು ಯತ್ನಿಸಿದರು ಸಮಾಧಾನಿ ಶಾಂತಪ್ಪಯ್ಯನವರು. ಮೊದಲಿಗೆ ಅವರ ಹೆಸರು ಬೇರೇನೋ ಇದ್ದಿತಂತೆ. ‘ನಿನ್ನದೇ ತಪ್ಪಯ್ಯ’ ಎಂದು ಮನೆ, ಕಚೇರಿ, ಬೀದಿಗಳಲ್ಲಿ ಸಿಕ್ಕಸಿಕ್ಕವರು ಸಿಕ್ಕಸಿಕ್ಕದ್ದಕ್ಕೆಲ್ಲಾ ಅವರ ಮೇಲೆಯೇ ತಪ್ಪು ಹೊರಿಸಿದರೂ ಶಾಂತವಾಗೇ ಇದ್ದುದರಿಂದ ಅವರಿಗೆ ‘ಶಾಂತಪ್ಪಯ್ಯ’ ಎಂಬ ಬಿರುದು ಸಂದಾಯವಾಯಿತಂತೆ.

‘ಜ್ಯೂಸ್ ಬಿದ್ದಿದ್ದರೇನು? ಡಯಾಬಿಟಿಸ್ ಸಿಹಿಯನ್ನು ಗಂಟಲಿನಿಂದ ಸುರಿದುಕೊಂಡರೆ ಮಾತ್ರ ಏರುಪೇರಾಗುವುದು; ಪ್ಯಾಂಟಿಗೆ ಜ್ಯೂಸ್ ಅಂಟಿದರೆ ತೊಂದರೆಯೇನಿಲ್ಲ’ ಗುಡುಗಿದರು ಗಾಡೂರು ಪುಟ್ಮಾತಯ್ಯ.

‘ಮಹಾಭಾರತವನ್ನು ನೆನೆ ಮನವೆ. ಭೀಷ್ಮನು ಮೇಲಕ್ಕೆ ಹೋಗಬೇಕೆಂದು ನಿರ್ಧರಿಸಿದಾಗ ಅವನು ಆರಿಸಿಕೊಂಡದ್ದು ಡನ್‍ಲಪ್‍ ಹಾಸಿಗೆಯನ್ನೋ, ಹಂಸತೂಲಿಕಾ ತಲ್ಪವನ್ನೋ ಅಲ್ಲ; ಚೂಪುಬಾಣಗಳಿಂದ ಕೂಡಿದ ಹಿಂಸಶೂಲಿಕಾ ತಲ್ಪವನ್ನು. ಅದೇ ಪರಂಪರೆಯನ್ನು ಮುಂದುವರಿಸುವ ಉದ್ದೇಶ ವಿಮಾನ ಕಂಪನಿಗೂ ಇತ್ತೆಂದು ನನಗೆ ನೆನ್ನೆ ಬಿದ್ದ ಕನಸಿನಲ್ಲಿ ಸ್ಪಷ್ಟವಾಯಿತು. ಹೋಲಿಕೆಗಳನ್ನು ಗಮನಿಸಿ – ಭೀಷ್ಮನಾಗಲಿ, ಈ ಪಯಣಿಗನಾಲಿ ಹೊರಟಿದ್ದು ಮೇಲಕ್ಕೇ! ಅವನದು ಕಬ್ಬಿಣದ ಬಾಣಗಳ ಶಯ್ಯೆ; ಇವನದು ಕಬ್ಬಿಣದ ಹಾಳೆಯಿರುವ ಕುರ್ಚಿ. ಪರಂಪರೆ ಬಹು ಮುಖ್ಯ ಸಾರ್... ಪರಂಪರೆಯನ್ನು ಮುಂದುವರಿಸುವವರು ನಮಗೆ ಪೂಜ್ಯರಾಗಬೇಕು’ ವಿಶ್ವರೂಪಯ್ಯ ನುಡಿದರು.

‘ಸನಾತನಕ್ಕೆ ಧಿಕ್ಕಾರ; ಪರಂಪರೆಗೆ ಧಿಕ್ಕಾರ; ವಿಮಾನಕ್ಕೆ ಧಿಕ್ಕಾರ; ಕಬ್ಬಿಣಕ್ಕೆ ಧಿಕ್ಕಾರ... ಸೀಟಿಗೆ ಧಿಕ್ಕಾರ...’ ಗಾರ್ದಭದ ಕೂಗಿಗೆ ಕುದುರೆಯ ಹೇಷಾರವವನ್ನು ಕಲಸಿ, ಹಸ್ತಿಯ ಘೀಂಕೃತವನ್ನು ಮೇಳೈಸಿದ ಧ್ವನಿಯಲ್ಲಿ ಪಿಸುಗುಟ್ಟಿದರು ಗಾಡೂರು ಪುಟ್ಮಾತಯ್ಯ.

‘ಪಾಯಿಂಟ್... ಕಮ್ ಟು ದ ಪಾಯಿಂಟ್...’ ಕೂಗು ಇವೆಲ್ಲದರ ಮೇಲೆಯೂ ವಿಜೃಂಭಿಸುತ್ತಿದ್ದಂತೆಯೇ ಜಾಹೀರಾತಿನ ತುಣುಕೊಂದು ತನ್ನ ಮೂಗನ್ನು ತೂರಿಸಿತು.

ಪ್ಯಾನಲ್ ಡಿಸ್ಕಷನ್ ಬ್ರೇಕ್‍ನ ನಂತರ ಮುಂದುವರಿಯುತ್ತದೆ.

Comments