ಇನ್ನೆಷ್ಟು ಪ್ರೀತಿಸಲಿ ನಿನ್ನ..ಭಾಗ-2

 ಇನ್ನೆಷ್ಟು ಪ್ರೀತಿಸಲಿ ನಿನ್ನ...(ಮುಂದುವರೆದ ಭಾಗ)

ಲೇಖನ - ಶ್ರೀಮತಿ ಮಂಜುಳಾ ಡಿ 



ರತನ್ ಸಿಂಗ್ ಚೂಡಾವತ್ ಗೆ ಔರಂಗಜೇಬನ ಸೇನೆ ಎದುರಿಸಲು ಸೇನೆಯನ್ನು ಮುನ್ನೆಡೆಸುವಂತೆ ಕರೆ ಬಂದಾಗ ಆತನ ವಿವಾಹವಾಗಿ ಕೇವಲ 7 ದಿ‌ನ.  ಬುಂದಿಯ ರಾಜ ಹಾದ ಚೌಹಾನ್  ರಜಪೂತ್ ನ‌ ಮಗಳಾದ ರಾಜಕುಮಾರಿ ಸಾಹೆಲ್ ಕನ್ವರ್(ಹಾದಿ ರಾಣಿ) ಳೊಂದಿಗೆ  ವಿವಾಹವಾಗಿರುತ್ತದೆ. ಈ ವಿವಾಹವಾದಾಗ ಆಕೆಗೆ ಇನ್ನೂ ಹದಿ ವಯಸ್ಸು. ವಿವಾಹವಾದ 7ನೇ ದಿನಕ್ಕೇ ಬರುವ ಯುದ್ದದ ಕರೆ. ರತನ್ ಸಿಂಗ್ ಗೆ ರುದ್ರ ಮೌನ ಆವರಿಸಿ ಹೆಪ್ಪುಗಟ್ಟಿದಂತಾಗುತ್ತಾನೆ. ಈ ಸಂಧರ್ಭದಲ್ಲಿ ಕೊಟ್ಟ ಭಾಷೆ-ಮಾತೃಭೂಮಿಗಾಗಿ ಪ್ರಾಣವನ್ನೂ ಲೆಕ್ಕಿಸದ ಹಾದಿ ರಾಣಿಯ ರಜಪೂತ ರಕ್ತ ಶೌರ್ಯ ಮೆರೆಯುವ ರೀತಿಗೆ ಕಂಪಿಸುವಂತಾಗುತ್ತದೆ. ರತನ್ ಸಿಂಗ್ ಚೂಡಾವತ್ ಗೆ ಆತನ  ಕರ್ತವ್ಯ ನೆನಪಿಸಿ ಯುದ್ದಕ್ಕೆ ಹೊರಡುವಂತೆ ಪ್ರೇರೇಪಿಸುತ್ತಾಳೆ. ಮಹಾರಾಣಾ ಸಂಕಷ್ಟದಲ್ಲಿರುವಾಗ, ಮಾತೃಭೂಮಿಯ ರಕ್ಷಣೆಯ ಹೊಣೆಗಾರಿಕೆ ನೆನಪಿಸಿ ಹಣೆಗೆ ತಿಲಕವಿಟ್ಟು, ಖಡ್ಗವನ್ನಿತ್ತು ಬೀಳ್ಕೊಡುತ್ತಾಳೆ.

ರತನ್ ಸಿಂಗ್ ಯುದ್ಧ ಕ್ಕೆ ಹೊರಟರೂ, ಆತನಿಗೆ ಆಘಾತ ಮತ್ತು ಅರೆ ಎಚ್ಚರದ ನಡುವಿನ ತಳಮಳ. ಆತನ ಸಂಪೂರ್ಣ ಮನಸ್ಸು ಅವಳಲ್ಲಿಯೇ ಉಳಿದು ಹೋಗುತ್ತದೆ. ಆಕೆ ಕಣ್ಣ ಮುಂದೆ ಅಕ್ಷರಶಃ ನಿಂತಂತೆ. ತನ್ನ ಮನಸ್ಸು ಸ್ಪಂದನೆ ಸ್ಪರ್ಶ ಎಲ್ಲವನ್ನೂ ಪದಗಳನ್ನಾಗಿಸಿ  "ಯುದ್ದದಲ್ಲಿ ತನಗೇನಾದರೂ ಆದರೆ ತನ್ನನ್ನು ಮರೆಯುವುದಿಲ್ಲವಲ್ಲವೇ..." ಎಂಬ ಖೇದ ಭಾವದಿಂದ ಆಕೆಗೆ  ಪತ್ರ ಕಳುಹಿಸುತ್ತಾನೆ.

ರತನ್ ಸಿಂಗ್ ನ ಪತ್ರ ಕಂಡೊಡನೆ, ಅರಳಬೇಕಾದ ಅವಳ‌ ಮನಸ್ಸು ಕ್ಲುಪ್ತವಾಗುತ್ತದೆ.  ಉತ್ತರವಾಗಿ ಅದೇ ಸೈನಿಕನೊಂದಿಗೆ, " ತಮ್ಮ ಬರುವಿಕೆಗಾಗಿ ಕಣ್ಣ ಹಾಸಿ ಕಾಯುತ್ತೇನೆ; ನಿಮ್ಮ ಸಾಂಗತ್ಯಕ್ಕಾಗಿ ಪ್ರತಿಕ್ಷಣ ಹಂಬಲಿಸುತ್ತಿರುತ್ತೇನೆ; ದೇಹ-ಆತ್ಮದ ಪ್ರತಿಕಣ ನಿಮಗೆ ಸಮರ್ಪಣೆ. ನೀವು ನಿಮ್ಮ ಗಹನ‌ ಕಾರ್ಯದ ಮೇಲೆ ಗಮನಹರಿಸಿ" ಎಂದು ಬರೆದು ಕಳುಹಿಸುತ್ತಾಳೆ. 

ರತನ್ ಸಿಂಗ್ ನಿಂದ ಮತ್ತದೇ ರೀತಿಯ ಪತ್ರಗಳು. "ನಾನು ಯುದ್ಧದಲ್ಲಿ ಗತಿಸಿದರೆ ನೀನು ಬೇರೆಯವರನ್ನು ವಿವಾಹವಾಗುತ್ತೀಯಾ; ನನ್ನ ಮನಸ್ಸಿಗೆ ಇದು ಸಹಿಕೆಯಾಗುತ್ತಿಲ್ಲ. ನಾನು ಯುದ್ಧ ತೊರೆದು ಬಂದುಬಿಡುತ್ತೇನೆ" ಎಂಬುದಾಗಿ ಮತ್ತೆ ಮತ್ತೆ ಇದೇ ಒಕ್ಕಣೆಯ ಪತ್ರ ಕಳುಹಿಸತೊಡಗುತ್ತಾನೆ.

ಪತಿಯ ಇಂತಹ ಪತ್ರಗಳು,   ಆಕೆಯನ್ನು ವ್ಯಾಪಕ ಯಾತನೆಯ ಅರಿವಿನಲ್ಲೇ  ನಿರ್ವಾತ ಕ್ಷಣಗಳಿಗೆ ದೂಡಿದಂತಾಗುತ್ತದೆ. ಮನಸ್ಸಿ‌ನೊಳಗೆ ಎದ್ದ ಧಾರಾಕಾರ ಪ್ರಶ್ನೆಗಳ ಸುರಿಮಳೆ-ಪ್ರವಾಹದ ಆರ್ಭಟ.  ಪತಿಯಡೆಗಿನ ಮನಸ್ಸಿನ-ಶ್ರದ್ಧೆ ಭಕ್ತಿಪೂರ್ವಕ ಸಮರ್ಪಣೆ ರತನ್ ಸಿಂಗ್ ಗೆ ತಲುಪಲಿಲ್ಲವೇನೊ. ಮುಂದಿರುವ ಮಹತ್ತರ ಜವಾಬ್ದಾರಿಯ, ಮಾತೃಭೂಮಿ ರಕ್ಷಣೆ ಮರೆತ ಪತಿಗೆ ಯಾವ ರೀತಿ ತಿಳಿಸಿ ಹೇಳುವದೋ ಅರ್ಥವಾಗಲಿಲ್ಲ. 

ಸಮರ್ಪಣೆ, ಕರುಣೆ,ದೈನ್ಯ, ಪ್ರೀತಿ, ಅಧಿಕಾರ ಪ್ರಸಾದ ಮೊದಲಾದ ಮಂದ್ರತಾರಾಸ್ವರಗಳೆಲ್ಲಾ ಹದವರಿತು ಮಿಳಿತಗೊಂಡು, ಉತ್ತರವೊಂದು ಸ್ಪಷ್ಟವಾಗಿ ಮನ ಸಮ್ಮತಿಯ ಎರಕಹೊಯ್ದಿತು. 

ಸೈನಿಕ ಹಿಡಿದು ತಂದ ಪತ್ರ ಓದಿದ ಆಕೆ "ನೀನಿಲ್ಲದ ಜಗದಲ್ಲಿ ನನ್ನ ಇರುವಿಕೆಗೆ ಅರ್ಥವಿಲ್ಲ. ನಿನ್ನನ್ನು ಮರೆತು ಇನ್ನೊಬ್ಬರೊಂದಿಗೆ ಬದುಕಲು ನಾನು ನಿಮ್ಮ ಪತ್ನಿ ನಿಮ್ಮ ಗೆಳತಿ ಅಥವಾ ಪ್ರಿಯತಮೆ ಅಲ್ಲ. ಈ ಜೀವ ಎಂದೆಂದಿಗೂ ನಿಮಗೇ ಮುಡಿಪಾಗಿದೆ, ಈ ಪತ್ರದೊಂದಿಗೆ ಕಳುಹಿಸಿರುವ ಉಡುಗೊರೆ ಸ್ವೀಕರಿಸಿ".

ಎಂದು ಬರೆದ ಪತ್ರ ತನ್ಮ ಸೇವಕಿಯ ಕೈಗೆ ಕೊಟ್ಟವಳೇ, ಕೋವಿಯಿಂದ ಕತ್ತಿ ಇರಿದು ತನ್ನ ಶಿರಚ್ಛೇದಿಸಿಕೊಂಡು ಶಿರವನ್ನು ಪತ್ರದೊಂದಿಗೆ ನೀಡು ಎಂದು ಕಳುಹಿಸುತ್ತಾಳೆ.

ಯುದ್ಧಭೂಮಿಯಿಂದ ಓಡಿ ಹೋಗುವ ಮನಸ್ಥಿತಿಯಲ್ಲಿದ್ದ ರತನ್ ಸಿಂಗ್ ಗೆ ಸೈನಿಕ ತಂದ ಪತ್ರ  ನೋಡಿ ಬಿರುಬಿಸಲ ಸೋನೆ ಕಂಡತಾಯ್ತು. ಓದಿ ಕಣ್ತುಂಬಿಕೊಂಡ ರತನ್ ಸಿಂಗ್ ಅತ್ಯುತ್ಸಾಹದಿಂದ ಉಡುಗೊರೆಯ ಬಟ್ಟೆ ಸರಿಸಿದವನೇ, ಛಿದ್ರಗೊಂಡು, ಚೀರಿಟ್ಟು ಕುಸಿಯುತ್ತಾನೆ.  ಆಕಾಶವೇ ಸ್ಥಂಭೀಭೂತವಾಗುವ ರೋದನ. ಅಸ್ಯಿತ್ವವೇ ಕದಲಿ ಹೋಗಿ ಎದ್ದು ನಿಲ್ಲಲಾರದ ಕಲ್ಲಾಗಿ ಹೋದ ಸ್ಥಿತಿ.

   ಅದೇ ಸಮಯ ಆರಂಭವಾಗುವ ಯುದ್ಧ. ಕಣ್ಮುಂದೆ ಚಾಚಿರುವ ತಾನು ಮುನ್ನೆಡೆಸಬೇಕಾದ ಸೇನೆ. ತಾನು ಜೀವಂತ ಶವವಾಗಿರುವುದು ಮಾತ್ರ ಆತನಿಗೆ ಅರಿವಾಗುತ್ತಿತ್ತು. ತನ್ನ ಮರೆತ ಕರ್ತವ್ಯಕ್ಕಾಗಿ ಉಕ್ಕಿ ಹರಿದ ವೀರಾವೇಶದಿಂದ ಹೋರಾಡುತ್ತಾನೆ. ಸತತ ಹತ್ತು ದಿನ ತನ್ನ ಚಿಕ್ಕ ಸೇನೆಯೊಂದಿಗೆ ಔರಂಗಜೇಬನ ಬಲಿಷ್ಠ ಸೇನೆಯನ್ನು ತಡೆದು ನಿಲ್ಲಿಸುತ್ತಾನೆ. ಯುದ್ಧದಲ್ಲಿ ತೀವ್ರವಾಗಿ ಗಾಯಗೊಳ್ಳುವ  ರತನ್ ಸಿಂಗ್ ಗೆ ವೀರಗತಿ ಪ್ರಾಪ್ತಿಯಾಗುತ್ತದೆ. 

ಇಷ್ಟಕ್ಕೂ ಈ  ಯುದ್ಧದಲ್ಲಿ‌ ಕಾದಾಡಿದ್ದೂ ರತನ್ ಸಿಂಗ್  ಮಾತ್ರವೇನಾ! ಮೊದಲ ವೀರಗತಿ ಹಾದಿರಾಣಿಯದ್ದು.  

ಹದಿ ವಯಸ್ಸಿಗೆ ಪತ್ಮಿಯಾದ ಆಕೆ  ಜವಾಬ್ದಾರಿ ನಿಭಾಯಿಸಿದ ರೀತಿ ಚಕಿತಗೊಳಿಸುತ್ತದೆ. 

ಒಲ್ಲದ ಮನಸ್ಸಿನಿಂದ ಹೊರಡುವ ರತನ್ ಸಿಂಗ್ ಗೆ  ಮಾತೃಭೂಮಿ ರಕ್ಷಣೆಯ ಹೊಣೆಗಾರಿಕೆ ತಿಳಿಸಿ ಅಮರಳಾದ ಆಕೆಯ ಗಾಥೆ ಇಂದಿಗೂ ರಾಜಸ್ಥಾನದ ಜನಪದ ಹಾಡುಗಳಾಗಿ ಕಾರ್ಯಕ್ರಮಗಳಲ್ಲಿ ಚಿರಸ್ಥಾಯಿಯಾಗಿದ್ದಾಳೆ.

ಹಾದಿರಾಣಿ ಕುಂಡ ಎಂಬ ಅದ್ಬುತ ವಾಸ್ತುಶಿಲ್ಪ ವಿನ್ಯಾಸದ ಮೆಟ್ಟಿಲುಬಾವಿ ಹಾದಿರಾಣಿಯ ಹೆಸರಿನಲ್ಲಿ ನಿರ್ಮಿತವಾಗಿದೆ. ರಾಜಸ್ಥಾನ ಪೋಲೀಸ್ ಇಲಾಖೆಯ ಒಂದು ವಿಂಗ್, ಹಾದಿರಾಣಿ ಮಹಿಳಾ ಬೆಟಾಲಿಯನ್ ಎಂಬ ಹೆಸರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದೆ.

ಜಗತ್ತು ಕಂಡ ಪ್ರೇಮ ದ್ಯೋತಕಗಳ ಪಟ್ಟಿಗೇನು ಕೊರತೆಯಿಲ್ಲ. ತಾಜ್ ಮಹಲ್,  ಮಸ್ತಾನಿ ಮಹಲ್, ರಾನಿ ಕಿ ವಾವ್, ರೂಪ್ ಮತಿ ಪೆವಿಲಿಯನ್ , ಟಾಟಾ ಮಮೋರಿಯಲ್ ಹಾಸ್ಪಿಟಲ್ ಇವು ಭಾರತದ ಸ್ಮಾರಕಗಳಾದರೆ ಜಗತ್ತಿನಾದ್ಯಂತ ಪ್ರವಾಸಿತಾಣಗಳಾಗಿ ಮಾರ್ಪಟ್ಟ ಹಲವಾರು ಇಂತಹ ಪ್ರೇಮ ದ್ಯೋತಕಗಳಿವೆ. 

ನಮಗೆ ಬದಕಾಗಿದ್ದ ಬಂಧಗಳನ್ನು ಸದ ಕಾಲಕ್ಕೂ ಬದುಕುಳಿಸಬೇಕೆಂಬ ಹಂಬಲವೇ ಇಂತಹ ದ್ಯೊತಕಗಳಾಗಿ ನಿಂತಿವೆಯೇ? ಇಂತಹ ಕಟ್ಟಡಗಳು ದ್ಯೋತಕಗಳಾಚೆ ಪತಿಯ ಮೇಲಿದ್ದ ತನ್ನ ಅಚಲ‌ ನಿಷ್ಠೆ  ಶ್ರದ್ಧೆ ಸಾಬೀತುಪಡಿಸಲು ಮತ್ತು ಮಾತೃಭೂಮಿ ರಕ್ಷಣೆಯ ಹೊಣೆಗಾರಿಕೆ ನಿಭಾಯಿಸಲು  ತನ್ನ ಶಿರವನ್ನೇ ಛ್ಚೇದಿಸಿ  ಕಳುಹಿಸಿಕೊಟ್ಟ  ಹಾಡಿ ರಾಣಿಯ ಕಥೆ ಇತಿಹಾಸದ ಮುನ್ನೆಲೆಗೆ ಬರದೇ ಇರುವುದು ಈ ಘಟನೆಯಷ್ಟೇ ಅಚ್ಚರಿ ಮೂಡಿಸುತ್ತದೆ.



Comments