ಕಸ್ತೂರಿ ಕನ್ನಡ

ಕಸ್ತೂರಿ ಕನ್ನಡ 

ಲೇಖನ - ಶ್ರೀಮತಿ ಪಲ್ಲವಿ ಕಟ್ಟಿ  



ಇಂದು ಕನ್ನಡ ರಾಜ್ಯೋತ್ಸವ .ಕನ್ನಡಿಗರಿಗೆ ಸುಗ್ಗಿಯದಿನ. ಏನೋ ಒಂದು ತರಹದ ಸಡಗರ, ಸಂಭ್ರಮ. ಕರ್ನಾಟಕದಲ್ಲಿ ಎಲ್ಲೆಡೆ ಕೆಂಪು ಹಳದಿ ಬಣ್ಣದ ಬಾವುಟ ಹಾರಾಡುವುದು, ಕನ್ನಡ ಭಾವಗೀತೆಗಳು, ದೇಶಭಕ್ತಿ ಗೀತೆಗಳು, ಚಲನಚಿತ್ರ ಗೀತೆಗಳು ಕೇಳಸಿಗುತ್ತವೆ. ಧ್ವಜಾರೋಹಣ, ಹಾಡು, ಸಂಗೀತ, ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು ಎಲ್ಲಾ ಆಯೋಜಿಸಿರುತ್ತಾರೆ. ಹೀಗೆಲ್ಲಾ ಇರುವಾಗ ನಾನೂ ಸಹ ಬೆಂಗಳೂರಿನಲ್ಲಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಬೆಳಿಗ್ಗೆ ಇಂದಲೇ ಅನಿಸುತ್ತಿತ್ತು. 

ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ ಬೆಳಿಗ್ಗೆಯಿಂದ ಹಲವಾರು ಸಂದೇಶಗಳು ಬರುತ್ತಲೇ ಇವೆ. ನಾನೇನು ಕಮ್ಮಿ ಎಂದು ಒಂದು ಚಿತ್ರವನ್ನು ಅಂತರ್ಜಾಲದಲ್ಲಿ ಹುಡುಕಿ ಎಲ್ಲರಿಗೂ ಕಳುಹಿಸಿಯೇ ಬಿಟ್ಟೆ. ಮುಂದೆ ಸ್ವಲ್ಪೇ ಹೊತ್ತಿಗೆ ಎಲ್ಲೆಡೆ ಹರಿದಾಡಿ ಮತ್ತೇ ನನನೇ ತಿರುಗಿ ಬಂತು. 

ನಾನು ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದೆನಿಸುತ್ತದೆ. ಈ ಲೇಖನ ಬರೆಯುವುದಕ್ಕಿಂತ ಸೂಕ್ತವಾದ ಮಾರ್ಗ ಬೇರೊಂದಿಲ್ಲ ಎಂದೆನಿಸಿತು. ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ನನಗೆ ಇಂದಿಗೂ ಸಹ ಕನ್ನಡದಲ್ಲಿ ಎಷ್ಟು ಸಹಜವಾಗಿ ನನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತೇನೋ ಅದು ಬೇರೆಯಾವ ಭಾಷೆಯಲ್ಲೂ ಬರುವುದಿಲ್ಲ. 

ನನ್ನ ಎಷ್ಟೋ ಚಿಕ್ಕಂದಿನ ನೆನಪುಗಳು ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟಿದ್ದಾಗಿದೆ. ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವದ ಸಮಯದಲ್ಲಿ ನಡೆಯುತ್ತಿದ್ದ ನೃತ್ಯ ಹಾಗು ಸಂಗೀತ ಸ್ಪರ್ಧೆಯಲ್ಲಿ ಪ್ರತಿ ವರ್ಷವೂ ನನಗೇ ಪ್ರಥಮ ಬಹುಮಾನ. ಬೇಂದ್ರೆ ಅವರ ಭೃಂಗದ ಬೆನ್ನೇರಿ ಬಂತು, ಡಿ.ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ ಇವೆಲ್ಲಾ ನನ್ನ  ಹೃದಯಕ್ಕೆ ಹತ್ತಿರವಾದ ಹಾಡುಗಳು.

ಬೇಂದ್ರೆಯವರ ಹಾಡಿನ ಬಗ್ಗೆ ಯೋಚಿಸಿದಾಕ್ಷಣ ನನಗೆ ನೆನಪಿಗೆ ಬರುವುದು ಧಾರವಾಡ. ಧಾರವಾಡದಲ್ಲಿ ನಮ್ಮ ಅಜ್ಜ ಅಜ್ಜಿಯ ಮನೆಯ ಒಂದು ರಸ್ತೆಯಿಂದಾಚೆ ಬೇಂದ್ರೆಯವರ ಮನೆ. ಹೊರಗಿನಿಂದ ಅವರ ಮನೆ ನೋಡಿದಾಗಲೆಲ್ಲಾ ಏನೋ ಒಂದು ತರಹದ ಕುತೂಹಲ ಕಾಡುತ್ತಿತ್ತು. ಒಮ್ಮೆಯಾದರೂ ಅವರ ಮನೆಗೆ ಹೋಗಬೇಕು ಎಂದನಿಸುತ್ತಿತ್ತು. ಅದಕ್ಕೆ ಸರಿಯಾಗಿ ಬೇಂದ್ರೆಯವರ ಮೊಮ್ಮಗಳು ಶಾಲೆಯಲ್ಲಿ ನನ್ನ ಅಕ್ಕನ ಗೆಳತಿ. ಹೀಗಾಗಿ ನನ್ನ ಅಕ್ಕ ಎಷ್ಟೋ ಬಾರಿ ಅವರ ಮನೆಗೆ ಹೋಗಿ ಬಂದಿದ್ದಳು. ನನ್ನೂ ಕರೆದುಕೊಂಡು ಹೋಗು ಎಂದು ಎಷ್ಟೋ ಬಾರಿ ಕೇಳಿದ್ದುಂಟು ಅದಕ್ಕೆ ತಕ್ಕಂತೆ ಮುಂದೆ ಒಂದೆರಡು ದಿನಕ್ಕೆ ನನ್ನ ಕರೆದುಕೊಂಡು ಹೊರಟಳು.  ಅವರ ಮನೆಗೆ ಹೋದಾಕ್ಷಣ ನನ್ನಕ್ಕನ ಗೆಳತಿ ನಮ್ಮನ್ನ ಬೇಂದ್ರೆಯವರು ಇರುತ್ತಿದ್ದ ಕೋಣೆ, ಅವರ ಪುಸ್ತಕಗಳ ಸಂಗ್ರಹ ಎಲ್ಲವನ್ನೂ ತೋರಿಸಿದಳು. 

ನಾನು ನನ್ನಕ್ಕನ ಕಿವಿಯಲ್ಲಿ ಕೇಳೆ ಕೇಳೆ ಎಂದು ಒಂದೇ ಸಮನೇ ಹೇಳುತ್ತಿದ್ದೆ. ಗೆಳತಿಗೆ ಅರ್ಥವಾದಂತೆ ಆಕೆ ತಕ್ಷಣ ನಮ್ಮನ್ನು ಜ್ಞಾನಪೀಠ ಪ್ರಶಸ್ತಿ ಇಟ್ಟಿದ್ದ ಕೋಣಿಗೆ ಕರೆದುಕೊಂಡು ಹೋಗಿ ತೋರಿಸಿದಳು. ಅದನ್ನು ನೋಡಿದಾಕ್ಷಣ ನನ್ನ ಮೈ ಬಿಸಿಯಾಗಿ ಜುಂ ಅಂದಿತು. ದೂರದಿಂದಲೇ ನೋಡಿದೆ. ಅದನ್ನು ಮುಟ್ಟಲೂ ನನಗೆ ಅರ್ಹತೆ ಇಲ್ಲ ಎಂದನಿಸಿತ್ತು. 

ಇಂದು ನಾವು ಆಚರಿಸುತ್ತಿರುವುದು 67ನೇ ರಾಜ್ಯೋತ್ಸವ . ಈ ಸಂಭ್ರಮ ಸಡಗರ ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗದೇ ಇಡೀ ವರ್ಷ ಎಲ್ಲೆಡೆ ಕನ್ನಡ ಡಿಂಡಿಮ ಮೊಳಗಲಿ. ಕನ್ನಡಿಗರ ಮೇಲೆಯೇ ಕನ್ನಡವನ್ನು ಒತ್ತಾಯಿಸುವ ಪರಿಸ್ಥಿತಿ ಬರದೇ ಇರಲಿ ಎಂದು ಆಶಿಸುತ್ತೇನೆ. ಹೊರದೇಶದಲ್ಲಿದ್ದರೂ ನಮ್ಮ ಮಾತೃ ಭಾಷೆಯನ್ನು ಮರೆಯದಿರೋಣ ಹಾಗೂ ನಮ್ಮ ಮಕ್ಕಳಿಗೆ ನಮ್ಮ ಮಾತೃ ಭಾಷೆಯನ್ನು ಹೇಳಿಕೊಡೋಣ. 

ಎಲ್ಲಾದರೂ ಇರು ಎಂತಾದರು ಇರು 

ಎಂದೆಂದಿಗೂ ನೀ ಕನ್ನಡವಾಗಿರು.

Comments

  1. ಪ್ರಶಸ್ತವಾದ ನೆನಪುಗಳು. ಇವನ್ನು ಹೊರನಾಡು ಚಿಲುಮೆಯ ಓದುಗರಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ReplyDelete
  2. short & sweet article madam. ತಾವು ಕಡೆಯಲ್ಲಿ ಹೇಳಿದ ಮಾತು ಬಹಳ ಸೂಕ್ತ ಬರಿಯ ನವೆಂಬರ್ ಕನ್ನಡಿಗರಾಗಿರದೆ ಪ್ರತಿದಿನ ಪ್ರತಿಕ್ಷಣ ಕನ್ನಡದ ಬಗೆಗೆ ಚಿಂತನೆ ದುಡಿಮೆ ಅಗತ್ಯ.

    ReplyDelete

Post a Comment