‘ದಲ್ಲಿ’ ‘ಯಲ್ಲಿ’ಗಳ ಚಕ್ಕರ್‍‘ನಲ್ಲಿ’

 

‘ದಲ್ಲಿ’ ‘ಯಲ್ಲಿ’ಗಳ ಚಕ್ಕರ್‍‘ನಲ್ಲಿ’

‘ಎಲ್ಲಿದ್ದೀರಿ ರವಿ?’

‘ಉಡುಪಿನಲ್ಲಿ ಸಾರ್.’

‘ಉಡುಪಿನಲ್ಲಿ ಇರಲೇಬೇಕಲ್ಲ, ಇರದಿದ್ದರೆ ಮರ್ಯಾದೆಗೇಡು’ ಎಂದೆ. 


ರವಿಗೆ ಆಗ ಜ್ಞಾನೋದಯವಾಯಿತು. ‘ಉಡುಪಿಯಲ್ಲಿ’ ಎಂದು ತಿದ್ದಿಕೊಂಡರು. ವಾಸ್ತವವಾಗಿ ‘ಉಡುಪಿನಲ್ಲಿ’ ಎಂದು ಹೇಳಿಯೂ ಸರಿಯೆನಿಸಿಕೊಳ್ಳುವವರು ಸೈನಿಕರು, ಪೊಲೀಸರು, ಸ್ಕೌಟುಗಳು, ಮುಂತಾದವರು. ಈ ಸಂದರ್ಭಗಳಲ್ಲಿ ‘ಉಡುಪು’ ಎನ್ನುವುದನ್ನು ಸಮವಸ್ತ್ರದ ಪರ್ಯಾಯವೆಂದು ಪರಿಗಣಿಸುತ್ತೇವೆ. ವಸ್ತ್ರದ ವಿಷಯವೆಂತೇ ಇರಲಿ, ಕನ್ನಡದಲ್ಲಿ ‘ಯಲ್ಲಿ’, ‘ದಲ್ಲಿ’, ‘ನಲ್ಲಿ’ ‘ರಲ್ಲಿ’ಗಳ ಬಳಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಬಲ್ಲದು.

ಮೊದಲಿಗೆ ನಮ್ಮ ಜೀವನದಿಯನ್ನೇ ಪರಿಗಣಿಸೋಣ. ‘ಕಾವೇರಿ’ ಎಂಬ ಪದಕ್ಕೆ ವಿವಿಧ ‘ಬಾಲ’ಗಳನ್ನು ಸೇರಿಸಿದರೆ ವಿವಿಧ ಅರ್ಥಗಳು ಮೂಡುತ್ತವೆ.  ‘ಕಾವೇರಿದಲ್ಲಿ’ ಎನ್ನುವುದು ಕರ್ನಾಟಕವು ಜಲಕ್ಷಾಮವನ್ನೆದುರಿಸುತ್ತಿರುವಾಗ ತಮಿಳುನಾಡಿಗೆ ನೀರನ್ನು ಬಿಟ್ಟ ಪ್ರಸಂಗವನ್ನು ನೆನಪಿಸುತ್ತದೆ. ಆಗ ಮಂಡ್ಯದಿಂದ ಆರಂಭವಾಗಿ ಎಲ್ಲೆಲ್ಲಿಯೂ ಕಾವೇರಿರುತ್ತದೆ. ‘ಕಾವೇರಿದಲ್ಲಿ’ ಎಂದರೆ ಕಾವೇರಿದ ಜಾಗದಲ್ಲಿ; ಅಲ್ಲೆಲ್ಲವೂ ಕಟ್ಟೆಚ್ಚರ ಅತ್ಯಗತ್ಯ. ಕಾವೇರಿಯು ಶೇಖರವಾಗುವ ಸ್ಥಳಗಳಲ್ಲಿ ‘ದಲ್ಲಿ’ಯ ಪ್ರಯೋಗ ಸೂಕ್ತ – ಜಲಾಶಯ‘ದಲ್ಲಿ’ ಮತ್ತು ಜಲಾನಯನ ಪ್ರದೇಶ‘ದಲ್ಲಿ’.

‘ಕಾವೇರಿನಲ್ಲಿ’ ಎಂಬುದು ಅರ್ಥಹೀನವೆಂದುಕೊಂಡಿರೆ? ಊಹೂಂ. ಪ್ರತಿ ಅಪರ್ಟ್‍ಮೆಂಟಿನಲ್ಲಿಯೂ ಅಡುಗೆಕಟ್ಟೆಯ ಮೇಲೆ ಎರಡು ನಲ್ಲಿಗಳು ಇರುತ್ತವೆ. ಒಂದು ಬೋರ್‍ವೆಲ್‍ನದು; ಇನ್ನೊಂದು ಕಾರ್ಪೊರೇಷನ್ನಿನದು; ಕಾರ್ಪೊರೇಷನ್ನಿನ ನಲ್ಲಿಯಲ್ಲಿ ಬರುವ ನೀರು ಕಾವೇರಿ ನದಿಯದೇ ಆದ್ದರಿಂದ ಆ ನಲ್ಲಿಯೇ ‘ಕಾವೇರಿನಲ್ಲಿ!’ ಕಾವೇರಿಯು ಕನ್ನಡನಾಡಿನಲ್ಲಿ (ಗಮನಿಸಿರಿ – ಇಲ್ಲಿ ನಲ್ಲಿ ಇದೆ; ಆದರೆ ತಮಿಳುನಾಡಿಗೆ ಬಿಟ್ಟರೆ ನಲ್ಲಿಯಲ್ಲಿ ನೀರು ಇರುವುದಿಲ್ಲ!)  ಹರಿದು ತಮಿಳುನಾಡಿನಲ್ಲಿ ಸೇರಿದಾಗ ಅಲ್ಲಿನ ನಲ್ಲಿಗಳಿಗೆ ಸುಗ್ಗಿಯೋ ಸುಗ್ಗಿ. ಆದ್ದರಿಂದ ಕಾವೇರಿಯ ಬಗ್ಗೆ ‘ನಲ್ಲಿ’ಯ ವಿಷಯದಲ್ಲಿ ತಮಿಳುನಾಡಿನ ನಲ್ಲಿಯೇ ಕರ್ನಾಟಕದ ನಲ್ಲಿಗಿಂತ ಶ್ರೀಮಂತ.

ಕಾವೇರಿಗೇನೋ ನಲ್ಲಿಯನ್ನು ಎರಡೂ ರಾಜ್ಯಗಳವರು ತೊಡಿಸುತ್ತಾರೆ. ಆದರೆ ಕೃಷ್ಣಾ ನದಿಗೆ? ‘ಕೃಷ್ಣನಲ್ಲಿ ಮುಳುಗಿದೆ’ ಎನ್ನುವುದು ಗೋಪಿಕೆಯರಿಗೋ, ರಾಧೆಗೋ. ‘ಗೋಕುಲ ನಿರ್ಗಮನ’ವನ್ನು ರಚಿಸಿದ ಪು.ತಿ.ನ.ರಿಗೋ ಸಮಂಜಸವೆನಿಸಿದರೂ, ಕೃಷ್ಣಾ ನದಿಯ ವಿಷಯಕ್ಕೆ ಸಂಬಂಧಿಸಿದಾಗ ಕೃಷ್ಣಾ‘ದಲ್ಲಿ’ ಎಂದೇ ಹೇಳಬೇಕಾಗುತ್ತದೆ. ಕೃಷ್ಣಾ, ಕೃಷ್ಣಗಳ ಪ್ರಸ್ತಾಪವಾದಾಗಲೆಲ್ಲ ನನಗೆ ಯೇಸುದಾಸರು ನೆನಪಾಗುತ್ತಾರೆ. ‘ಕೃಷ್ಣಾ ನೀ ಬೇಗನೆ ಬಾರೋ’ ಹಾಡಿನ ಬಗ್ಗೆ ಒಮ್ಮೆ ಮಾತನಾಡುತ್ತಾ ಅವರು ‘ಕೃಷ್ಣಾ ಎಂದರೆ ದ್ರೌಪದಿ; ದ್ರೌಪದಿಯನ್ನು ಬಾರೋ ಎನ್ನುವುದು ಸರಿಯಲ್ಲ; ಕೃಷ್ಣ ನೀ ಬೇಗನೆ ಬಾರೋ ಎನ್ನುವುದೇ ಸೂಕ್ತ’ ಎಂದಿದ್ದರು. ಈ ವಾದವನ್ನು ಕೆಲವು ಪ್ರೀತಿಸಮುದ್ರಮತ್ಸ್ಯಗಳು ಒಪ್ಪಲಿಲ್ಲವಂತೆ; ‘ನನ್ನ ನಲ್ಲೆಯನ್ನು ‘ಬಾರೋ’ ಎನ್ನುವುದು ನನ್ನಿಷ್ಟ’ ಎಂದವಂತೆ ಕೆಲವು ಉದ್ಯಾನವನಪಕ್ಷಿಗಳು. ಅಂತೆಯೇ ‘ದುರ್ಯೋಧನನು ದ್ರೌಪದಿಯನ್ನು borrow ಮಾಡಿಕೊಳ್ಳಲು ಯತ್ನಿಸಿದ್ದರಿಂದಲೇ ಅವರ ವಂಶ ನಿರ್ವಂಶವಾದದ್ದು. ಆದ್ದರಿಂದ ಕೃಷ್ಣಾಳನ್ನು ಬಾರೋ ಮಾಡಿಕೊಳ್ಳುವುದು ಅಪಾಯಕರ’ ಎಂದು ಕೆಲವು ಮಾಡ್ರನ್ ವಿಮರ್ಶಕರು ನುಡಿದರಂತೆ. ಆಂತೂ ಆಕಾರಾಂತ ಬಂದಾಗ ‘ದಲ್ಲಿ’ಯೇ ಗಟ್ಟಿ ಎನ್ನಲು ಕಪಿಲಾ ನದಿಯೂ ಸಾಕ್ಷಿಯೇ. ಇವುಗಳಿಗೆ ‘ಯಲ್ಲಿ’ಯನ್ನು ತಗುಲುಹಾಕಬೇಕಾದರೆ ಕಮಲಳನ್ನು ಕಮಲೆ ಎಂದೂ, ವಿಮಲಳನ್ನು ವಿಮಲೆ ಎಂದೂ ಕೂಗುವಂತೆ ಕೃಷ್ಣೆ, ಕಪಿಲೆ ಎಂದು ಕರೆದಾಗ ಮಾತ್ರ ಸಾಧ್ಯ.

ನಮ್ಮ ದೇಶದ ಹೆಸರಿನ ವಿಷಯದಲ್ಲಿ ವಿವಿಧ ಪಕ್ಷಗಳು ವಿವಿಧ ಧೋರಣೆಯನ್ನು ತಳೆದಿದ್ದರೂ ‘a rose by any other name smells as sweet’ ನಂತೆಯೇ ‘ಭಾರತ’, ‘ಇಂಡಿಯಾ’, ‘ಹಿಂದೂಸ್ತಾನ’ ‘ಜಂಬೂದ್ವೀಪ’ ಹೆಸರುಗಳಿಂದ ಕರೆದರೂ ಕಡೆಯಲ್ಲಿ ‘ದಲ್ಲಿ’ಯೇ ಸೇರುವ ಮೂಲಕ ‘country by any name does not change its trait’ ಎನ್ನುವುದು ಸಾಬೀತಾಗುತ್ತದೆ. ಆದರೆ ಇತರ ದೇಶಗಳ ಹೆಸರಿಗೆ ಈ ಏಕಾನ್ವಯತೆ ಕಂಡುಬರುವುದಿಲ್ಲ. ಸಹರಾ, ಅಟಕಾಮ ಮುಂತಾದವು ನೀರಿಲ್ಲದ ಕಾರಣ ನಲ್ಲಿಗಳನ್ನು ಹೊಂದಲು ಸಾಧ್ಯವಿಲ್ಲವೇನೋ. ಆದರೆ ಇಂಗ್ಲೆಂಡ್‍ ‘ನಲ್ಲಿ’ಯನ್ನು ಆಹ್ವಾನಿಸುತ್ತದೆ ಎಂದು ವಾದಿಸಿದಾಗ ‘ಅಮೆರಿಕದಲ್ಲಿ ನೀರಿದೆಯಲ್ಲ; ಇಲ್ಲೇಕೆ ಅಮೆರಿಕನಲ್ಲಿ ಎಂದು ಬಳಸುವುದಿಲ್ಲ?’ ಎಂಬ ಪಾಟೀ ಸವಾಲು ಎದುರಾಯಿತು. ‘ಅಲ್ಲಿ ನೀರಿಗಿಂತ ಬೀರಬಲ್ಲವರೇ ಹೆಚ್ಚು. ಇಡಿಯಾಗಿ ನಲ್ಲಿಯಿಲ್ಲದಿದ್ದರೂ ಬಿಡಿಯಾಗಿ ಉಂಟು; ವಾಷಿಂಗ್‍ಟನ್‍ನಲ್ಲಿ, ಲಾಸ್ ವೇಗಸ್‍ನಲ್ಲಿ ಇತ್ಯಾದಿ ಪದಗಳಲ್ಲಿ ನಲ್ಲಿ ಕಂಡುಬರುತ್ತದೆ’ ಎಂದು ಹೇಳಿ ಸದ್ಯಕ್ಕೆ ಬಚಾವ್ ಆದೆ. ಜರ್ಮನಿಯಂತೂ ಇಂಗ್ಲೆಂಡ್, ಇಂಡಿಯಾಗಳಿಗಿಂತ ಹೊರತು. ಅಲ್ಲಿ ‘ದಲ್ಲಿ’ಯೂ ಇಲ್ಲ, ‘ನಲ್ಲಿ’ಯೂ ಇಲ್ಲ.  ‘ಬೆಂಗಳೂರ್‍ನಲ್ಲಿ’, ‘ಮಂಗಳೂರ್‍ನಲ್ಲಿ’, ‘ಬೀದರ್‍ನಲ್ಲಿ’ಗಳು ಅಲ್ಲಲ್ಲಿ ಕಂಡುಬರುತ್ತವೆ. ಪದಗಳು ಅರ್ಧಾಕ್ಷರದಲ್ಲಿ ಅಥವಾ ಉಕಾರದಲ್ಲಿ ಅಂತ್ಯವಾದಾಗ ನಲ್ಲಿಗಳು ಪ್ರತ್ಯಕ್ಷವಾಗುತ್ತವೆ ಎನ್ನುವುದಕ್ಕೆ ‘ಕೊಡಗಿನಲ್ಲಿ’, ‘ನಂಜನಗೂಡಿನಲ್ಲಿ’, ‘ಮುಳುಬಾಗಿಲಿನಲ್ಲಿ’ಗಳು ಸಾಕ್ಷಿಯಾಗಿವೆ.

ಕರ್ನಾಟಕವನ್ನು ಈವರೆಗೆ ಆಳಿರುವ ಪಕ್ಷಗಳು ಮೂರು. (ಜನತಾಪಕ್ಷವನ್ನು ಪರಿಗಣಿಸಿಲ್ಲ.) ಅವುಗಳ ಪೈಕಿ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾ ದಳಗಳು ‘ದಲ್ಲಿ’ಯನ್ನೇ ಕಡೆಯಲ್ಲಿ ಇರಿಸಿಕೊಂಡಿರುವುದರಿಂದ ಆ ಪಕ್ಷಗಳು ಹೆಚ್ಚಿನ ‘ಭಾಗ್ಯ’ಗಳನ್ನು ಕೊಡಲಿಲ್ಲ. ಆದರೆ ಕಾಂಗ್ರೆಸ್ ಹಣವನ್ನು ನೀರಿನಂತೆ ಖರ್ಚು ಮಾಡಿ ಭಾಗ್ಯಗಳನ್ನು ನೀಡುತ್ತಿದೆ. ಅದು ಹಣವನ್ನು ನೀರಿನಂತೆ ಖರ್ಚು ಮಾಡಲು ಸಾಧ್ಯವಾದುದೇ ಕಾಂಗ್ರೆಸ್‍ ‘ನಲ್ಲಿ’ ಎನ್ನುವುದರಲ್ಲಿರುವ ನಲ್ಲಿಯಿಂದ ಎಂದು ವ್ಯಾಕರಣ ಕುಚೇಷ್ಟಿಗರು ನುಡಿದಿದ್ದಾರೆ. ದೆಹಲಿಯ ಎಎಪಿ ಕೂಡ ಆಪ್‍ ಎಂದೇ ಕರೆದುಕೊಂಡು ಆಪ್‍ ‘ನಲ್ಲಿ’ಯನ್ನು ‘ಆನ್’ ಮಾಡಿದುದರ ಕಾರಣವೇ ಬಿಟ್ಟಿ ವಿದ್ಯುತ್ ಇತ್ಯಾದಿಗಳ ಸೌಲಭ್ಯ ನೀಡಲು ಸಾಧ್ಯವಾಯಿತಂತೆ.



ನಮ್ಮ ಜಲಮಂಡಳಿಯವರು ನೀರು ಬಿಡುವುದಕ್ಕೂ ಕನ್ನಡ ವ್ಯಾಕರಣಕ್ಕೂ ಸಂಬಂಧವಿದೆಯೆನಿಸುತ್ತದೆ. ನೀರು ಬರುವ ಸಮಯವನ್ನು ‘ಬೆಳಗಿನಲ್ಲಿ’ ಎನ್ನುತ್ತಾ, ಬರುಬರುತ್ತಾ ಸಣ್ಣಗಾಗುವುದನ್ನು ‘ಮಧ್ಯಾಹ್ನದಲ್ಲಿ’ ಎಂದು ಸೂಚಿಸಿ (ದಲ್ಲಿ=dullಇ ಎನ್ನುವುದು ತತ್ಸಮವಂತೆ) ಸಂಜೆಗೆ ನೀರು ನಿಂತಿರುವುದನ್ನು ‘ಸಂಜೆಯಲ್ಲಿ’ (ಯಲ್ಲಿ=ಎಲ್ಲಿ; ಇದಕ್ಕೆ ಆಧಾರ ಮಾಸ್ಟರ್ ಹಿರಣ್ಣಯ್ಯನವರ ನಾಟಕ. ಅದರಲ್ಲಿ ಬರುವ ವೆಂಕಟಪ್ಪರು ಮೂರು; ಅಆಇಈಉಊಎ ಎಂಕಟಪ್ಪ; ಯಕೇತ್ವ ಯೆ ಯೆಂಕಟಪ್ಪ; ವಕೇತ್ವ ವೆ ವೆಂಕಟಪ್ಪ; ಯಂಕಟಪ್ಪ=ಎಂಕಟಪ್ಪ; since ಕಟಪ್ಪ=ಕಟಪ್ಪ, ಯಂ=ಎಂ; therefore ಯ=ಎ!) ಎನ್ನುತ್ತಾ ಜಲಧಾರೆಯನ್ನು ಹುಡುಕುವ ಪ್ರಕ್ರಿಯೆಯನ್ನು ಸೂಚಿಸುತ್ತಾರೆ.

ಯಲ್ಲಿ ರಲ್ಲಿಗಳ ಗೊಂದಲ ಶುರುವಾಗುವುದು ಇತರ ಭಾಷೆಗಳ ಸಂಕರವಾದಾಗ. 2020ಯಲ್ಲಿ ಎಂದು ಬರೆಯುವುದು ಸಾಮಾನ್ಯ; ಟ್ವೆಂಟಿಟ್ವೆಂಟಿಯಲ್ಲಿ ಎಂದು ಮನಸ್ಸಿನಲ್ಲಿ ಓದಿಕೊಳ್ಳುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಕನ್ನಡಿಗರು ಅದನ್ನು ಎರಡುಸಾವಿರದ ಇಪ್ಪತ್ತರಲ್ಲಿ ಅಥವಾ 2020ರಲ್ಲಿ ಎಂದು ಓದಬೇಕು. ಅಸಲಿಗೆ ‘ಯಲ್ಲಿ, ‘ದಲ್ಲಿ’, ‘ನಲ್ಲಿ’ಗಳೆಲ್ಲ very poor cousinಉ of ರಲ್ಲಿ! ಒಂದರಿಂದ ಆರಂಭಿಸಿ ಒಂಬೈನೂರ ತೊಂಬತ್ತೊಂಬತ್ತರವರೆಗೆ ಪ್ರತಿ ಸಂಖ್ಯೆಗೂ ‘ರಲ್ಲಿ’ಯೇ ಜೊತೆಗಾರ. ‘ಸಾವಿರ’ಕ್ಕೆ ‘ದಲ್ಲಿ’ ಸೇರಿದರೂ ಸಾವಿರದೊಂದರಿಂದ ಮತ್ತೆ ‘ರಲ್ಲಿ’ಯದೇ ಸಾಮ್ರಾಜ್ಯ. ಲಕ್ಷ, ಕೋಟಿಗಳಿಗೂ ಇದೇ ಗತಿ. ಲಕ್ಷ‘ದಲ್ಲಿ’ ಆದರೂ ಲಕ್ಷದೊಂದ‘ರಲ್ಲಿ’; ಕೋಟಿ‘ಯಲ್ಲಿ’ ಕೋಟಿಯೊಂದ‘ರಲ್ಲಿ’. ಲೆಕ್ಕಾಚಾರಕ್ಕೂ ‘ರಲ್ಲಿ’ಗೂ ಅತ್ಯಂತ ನಿಕಟ ಸ್ನೇಹವಿರುವುದು ವೇದ್ಯವೇ. ಲೆಕ್ಕಕ್ಕೂ ‘ನಲ್ಲಿ’ಗೂ ಸಂಬಂಧವೇರ್ಪಡಬೇಕಾದರೆ ವಿದೇಶದ ಲೆಕ್ಕಕ್ಕೇ ಮೊರೆಹೋಗಬೇಕು. ಅಲ್ಲಿನ ಎಲ್ಲಾ ಮೊತ್ತಗಳೂ ‘ನಲ್ಲಿ’ಯಲ್ಲಿ ಬರುತ್ತವೆ – ಒನ್‍ನಲ್ಲಿ, ಟೂನಲ್ಲಿ, ನೈನ್‍ನಲ್ಲಿ, ಹಂಡ್ರೆಡ್‍ನಲ್ಲಿ, ಥೌಸೆಂಡ್‍ನಲ್ಲಿ, ಬಿಲಿಯನ್‍ನಲ್ಲಿ, ಟ್ರಿಲಿಯನ್‍ನಲ್ಲಿ... ಅಂತೂ ‘ಲೆಕ್ಕಾಚಾರದ ಪ್ರಕಾರ’ ವಿದೇಶಗಳಲ್ಲಿರುವಷ್ಟು ‘ನಲ್ಲಿ’ಗಳು ನಮ್ಮಲ್ಲಿರಲು ಸಾಧ್ಯವೇ ಇಲ್ಲ!

ನನಗೆ ಕನ್ನಡದ ಈ ನಿಯಮಗಳು ಆಂಗ್ಲದ ಸಂಗೀತ ಕ್ರಮಗಳಿಗಂತೂ ಒಗ್ಗುವುದಿಲ್ಲವೆನಿಸುತ್ತದೆ. Rap, pop, metal, beat boxing ಮುಂತಾದ ಪ್ರಕಾರಗಳಿಗೆ ‘ನಲ್ಲಿ’ಯನ್ನು ಸೇರಿಸುವುದು ಅಷ್ಟೇನೂ ಸಮಂಜಸವಲ್ಲವೆನಿಸುತ್ತದೆ. ಕರ್ನಾಟಕ ಸಂಗೀತಕ್ಕೆ ಒಗ್ಗಿರುವ ನನ್ನ ಕಿವಿಗೆ ಇವೆಲ್ಲವೂ yellಗಳಂತೆ ಕೇಳಿಸುವುದರಿಂದ ಪಾಪ್‍ಯಲ್ಲಿ, ಬಾಕ್ಸಿಂಗ್‍ಯಲ್ಲಿ ಎಂದೇ ಹೇಳಬೇಕೆನಿಸುತ್ತದೆ. ಪಾಪ್ ಸಂಗೀತವನ್ನಂತೂ ‘ಪಾಪದಲ್ಲಿ’ ಎಂದು ಹೇಳಿದರೂ ಪಾಪ ಬರುವುದಿಲ್ಲವೆನ್ನುವವರೂ ಇದ್ದಾರು. ವಿಪರ್ಯಾಸವೆಂದರೆ ಕರ್ನಾಟಕದ ರಾಗಗಳಾದ ಶಂಕರಾಭರಣ, ಹಂಸಧ್ವನಿ ಮೊದಲಾದವುಗಳು ‘ಯಲ್ಲಿ’ಯನ್ನೋ, ‘ದಲ್ಲಿ’ಯನ್ನೋ ಆಕರ್ಷಿಸುವುವೇ ವಿನಹ ‘ನಲ್ಲಿ’ಯನ್ನಲ್ಲ. ಆದರೆ ಹಿಂದೂಸ್ತಾನಿ ರಾಗಗಳಾದ ‘ಬೇಹಾಗ್’, ‘ಯಮನ್’ ಮೊದಲಾದವು ‘ನಲ್ಲಿ’ಯನ್ನು ಜೋಡಿಸಿಕೊಂಡುಬಿಡುತ್ತವೆ. ವಾಹ್! ಆ ಆಲಾಪಗಳಂತೂ ವಾಷರ್ ಕಿತ್ತುಹೋಗಿರುವ ನಲ್ಲಿಯಂತೆ ನಿರಂತರವಾಗಿ ರಾಗವಾರಿಯನ್ನು ಸುರಿಸುರಿಸಿ ಕರ್ಣಗಳನ್ನು ತಂಪಾಗಿಸುತ್ತವೆ.

ಹಿಂದಿನ ಕಾಲದಲ್ಲಿ ಸಾರ್ವಜನಿಕ ನಲ್ಲಿಗಳಿರುತ್ತಿದ್ದವು. ಈಗೆಲ್ಲವೂ ಪ್ರೈವೇಟೇ. ಪ್ರತಿಯೊಬ್ಬನಿಗೂ ಒಂದೊಂದು ಅಟ್ಯಾಚ್ಡ್ ಬಾತ್; ಒಂದೊಂದು ನಲ್ಲಿ ಎನ್ನುವ ಕಾಲವಿದು. ಆದ್ದರಿಂದಲೇ ಹೆಣ್ಣಿ‘ನಲ್ಲಿ’, ಗಂಡಿ‘ನಲ್ಲಿ’, ಕನ್ನಡಿಗ‘ನಲ್ಲಿ’, ತಮಿಳ‘ನಲ್ಲಿ’, ತೆಲುಗ‘ನಲ್ಲಿ’ ಎಂದೆಲ್ಲ ಕಂಡುಬರುತ್ತದೆ. ಒಬ್ಬರಿಗಿಂತ ಹೆಚ್ಚಾಗಿಬಿಟ್ಟರೆ ‘ನಲ್ಲಿ’ ಬಂದ್ ಆಗಿ ‘ರಲ್ಲಿ’ ಶುರುವಾಗಿಬಿಡುತ್ತವೆ – ಹೆಂಗಸ‘ರಲ್ಲಿ’, ಕನ್ನಡಿಗ‘ರಲ್ಲಿ’, ಇತ್ಯಾದಿಯಂತೆ.

‘ಸ್ವಚ್ಛ್ ಭಾರತ್ ಅಭಿಯಾನ್‍’ಗೂ, ಜಾತ್ಯತೀತತೆಗೂ ಸಂಬಂಧವನ್ನು ಕಾಣಬೇಕೆ? ‘ನಲ್ಲಿ’ಗಳನ್ನು ಗಮನಿಸಿ. ಗುಂಪಿನಲ್ಲಿರುವಾಗ ನದೀಸ್ನಾನದ ಹೊರತಾಗಿ ಎಲ್ಲೆಡೆಯೂ ಸ್ವಚ್ಛತಾಕಾರ್ಯವು ವೈಯಕ್ತಿಕವೇ. ಇದು ಎಲ್ಲ ಧರ್ಮೀಯರಿಗೂ ಅನ್ವಯವೇ. ಆದ್ದರಿಂದಲೇ ಹಿಂದೂವಿ‘ನಲ್ಲಿ’, ಮುಸಲ್ಮಾನ‘ನಲ್ಲಿ’, ಕ್ರಿಶ್ಚಿಯನ್‍‘ನಲ್ಲಿ’, ಸಿಖ್‍‘ನಲ್ಲಿ’ ಎಂದು ನುಡಿಯುವುದು. 

ಒಂದೇ ಗೊಂದಲ! ಹೀಗೆಯೇ ‘ದಲ್ಲಿ’, ‘ರಲ್ಲಿ’ ಇತ್ಯಾದಿಗಳ ಚಕ್ಕರ್‍ನಲ್ಲಿ ಮುಂದುವರಿಯುತ್ತಲೇ ಇದ್ದರೆ ಲೇಖನವನ್ನು ಮುಗಿಸುವ ಪರಿ ಎಲ್ಲಿ?

Comments

  1. ನನ್ನನ್ನು ನಗಿಸುವ ಪ್ರತಿಯೊಂದು ಲೇಖನವನ್ನು ಆನಂದಿಸುತ್ತಿದ್ದೇನೆ, ಧನ್ಯವಾದಗಳು :)

    ReplyDelete
  2. This comment has been removed by the author.

    ReplyDelete
  3. ಕಾಂಗ್ರೆಸ್ ನಲ್ಲಿ, ಕಾವೇರಿದಲ್ಲಿ ,ಒಳ್ಳೆಯ ಗಮನಾರ್ಹ ಪದಗಳ ಆಯ್ಕೆ, ಬರೆ ಹಾಸ್ಯವಲ್ಲದೆ ಅಪಾರ್ಥಗಳಾಗುವ ಸಪ್ತಮಿ ವಿಭಕ್ತಿಯನ್ನು ಇಷ್ಟು ವಿವರವಾಗಿ ಮತ್ಯಾರು ಬಣ್ಣಿಸಬಲ್ಲರು? ಅರ್ಥಪೂರ್ಣವಾಗಿದೆ

    ReplyDelete

Post a Comment