ನಿಘಂಟೆಂಬ ನಿಕ್ಷೇಪ

 ನಿಘಂಟೆಂಬ ನಿಕ್ಷೇಪ

ಲೇಖನ - ಶ್ರೀಮತಿ ಮಂಜುಳಾ ಡಿ 

ನನಗೆ ಆಪ್ತವಾದ  “ಪ್ಯಾಷನ್” ಎನ್ನುವ ಇಂಗ್ಲೀಷ್ ಶಬ್ದದ ಕನ್ನಡ ಪದಕ್ಕಾಗಿ ಹುಡುಕುತ್ತಿದ್ದೆ. ಇದಕ್ಕೆ ಸಮಾನಾರ್ಥಕವಾಗಿ ಕನ್ನಡದಲ್ಲಿ ‘ತೀವ್ರಾಸಕ್ತಿ’, ‘ಅನುರಾಗ’, ‘ಭಾವೋದ್ರೇಕ’, ‘ಮೋಹ’, ‘ವ್ಯಾಮೋಹ’, ‘ಹುಚ್ಚು’ ಇತ್ಯಾದಿ ಶಬ್ದಗಳು ಬರುತ್ತವೆ. ಸಮಾಧಾನವೆನಿಸಲಿಲ್ಲ. ಏಕೆಂದರೆ ಪ್ಯಾಷನ್ ಶಬ್ದದ ಅರ್ಥ “ಎ ಫೀಲಿಂಗ್ ವಿಚ್ ನೆವರ್ ಎಂಡ್ಸ್’; ‘ಎಂದಿಗೂ ತಣಿಯಲಾರದ ಭಾವ’ ಎಂಬ ಅರ್ಥ ಬರುತ್ತದೆ. ಈ ಪದಕ್ಕೆ ಸೊಗಸಾದ ಕನ್ನಡ ಪದದ ಹುಡುಕಾಟದಲ್ಲಿ ಹಲವು ಹಳೇ ನಿಘಂಟುಗಳನ್ನು, ಅಂದರೆ ಕನ್ನಡ ಶಬ್ದಕೋಶಗಳನ್ನು, ಅರಸುತ್ತಾ ಹೋದೆ. ‘ಭಾವಾವೇಶ,  ‘ಹುಚ್ಚು ವ್ಯಾಮೋಹ’ ಇವೆರಡೂ ಪದಗಳು ಹಲವು ನಿಘಂಟುಗಳಿಂದ ಕಂಡ ಸ್ವಲ್ಪ ಹೊಂದುವ ಪದಗಳು ಎನಿಸಿದವು.



ಈ ಒಂದು ಪದದ ಸಮಾನಾರ್ಥಕ ಪದಗಳ ಹುಡುಕಾಟದಲ್ಲಿ  ಕನ್ನಡ ನಿಘಂಟುಗಳ ಅಚ್ಚರಿಗೊಳಿಸುವ ಇತಿಹಾಸದ ಒಂದು ಗಟ್ಟಿ ತಳಹದಿ ಕಣ್ಮುಂದೆ ಹರವಿತ್ತು. ಭಾಷೆ ಪಾದರಸವಿದ್ದಂತೆ. ಸದಾ ಹೊಸತನದ ಹರಿವಿನಿಂದಲೇ ಅದರ ವಿಸ್ತೃತಿ ಸಾಧ್ಯ. ಒಂದೇ ಪದವನ್ನು ಒಂದೇ ಲೇಖನದಲ್ಲಿ ವಿವಿಧ ಅರ್ಥಗಳಲ್ಲಿ ಉಪಯೋಗಿಸಿದಾಗ ಅಭಿಪ್ರಾಯ ಸಂದಿಗ್ಧವಾಗುತ್ತದೆ. ಹೀಗೆ ಶಬ್ದದ ವಿವರಣೆಯನ್ನು ಕುರಿತು ಯಾವ ಖಚಿತ ಆಧಾರಗಳೂ ಇಲ್ಲದಾಗ ವ್ಯಕ್ತಿ, ಸ್ಥಳ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಪ್ರತಿ ಭಾಷೆಗೂ ಸರಿಯಾದ ಒಂದು ವ್ಯಾಕರಣ ಮತ್ತು ಶಬ್ದಕೋಶ ಅಗತ್ಯವೆನಿಸುತ್ತದೆ.    ಕನ್ನಡ ಭಾಷೆಯ ಭಾಷಾ ಸಂಬಂಧಗಳು ವ್ಯಾಪಕವಾಗುತ್ತಿರುವ ಈ ವಾತಾವರಣದಲ್ಲಿ, ಕನ್ನಡ ಭಾಷಾಭಿವೃದ್ಧಿಯ ದೃಷ್ಟಿಯಿಂದಾಗಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಧರ್ಮ ಮುಂತಾದ ಬೇರೆ ಬೇರೆ ಕ್ಷೇತ್ರದ ಪದಗಳನ್ನು ಕನ್ನಡ ಮಾದ್ಯಮದಲ್ಲಿ ತರಲು ಅನೇಕ ಪಾರಿಭಾಷಿಕ ಪದಗಳ ರಚನೆಯಾಗಿದೆ. ಇದರಿಂದಾಗಿ ವಿವಿಧ ಮಾದರಿಯ ನಿಘಂಟುಗಳು ರಚಿತವಾಗಿವೆ, ಆಗುತ್ತಿವೆ.

  ಕನ್ನಡದ ಮೊದಲುಗಳನ್ನು ಓದುವಾಗಲೆಲ್ಲಾ ಕನ್ನಡದ ಮೊದಲ ನಿಘಂಟು ವಿದೇಶಿಯರಿಂದ ರಚಿತವಾಯಿತು ಎಂದು ಸ್ಮರಿಸುತ್ತಾ ಕಿಟಲ್ ರವರನ್ನು ನೆನೆಯುತ್ತೇವೆ. ಕಿಟಲ್ರ ಕಾರ್ಯ ವಿಶಿಷ್ಟ ಮತ್ತು ಶ್ಲಾಘನೀಯವಾದದ್ದು. 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ನಿಘಂಟುಗಳ ರಚನೆಯೂ ಭಾಷೆಯಷ್ಟೇ ಗಟ್ಟಿ ತಳಹದಿಯ ಇತಿಹಾಸ ಹೊಂದಿದೆ.

ಕನ್ನಡದ ಮೊದಲ ಸಾಹಿತ್ಯಿಕ ನಿಘಂಟು  ಕ್ರಿಸ್ತಶಕ 990ರಲ್ಲಿ ರನ್ನನಿಂದ ವಿರಚಿತವಾದ ರನ್ನಕಂದ. ಇದು ಕಂದ ಪದ್ಯಗಳ ರೂಪದಲ್ಲಿದ್ದು, ಇದರಲ್ಲಿ 123 ಕಠಿಣ ಪದಗಳ ವರ್ಣನೆಯಿದೆ.  1042  ರಲ್ಲಿ ಎರಡನೆಯ ನಾಗರ್ಮನಿಂದ ರಚಿತವಾದ ಅಭಿದಾನಕೋಶ ಪದಕೋಶವು ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ. ಸಂಸ್ಕೃತ ನಿಘಂಟುಗಳು ಇದರ ರಚನೆಯ ಹಿಂದಿರುವ ಪ್ರೇರಣೆ ಎಂದು ಗ್ರಂಥಕರ್ತ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾನೆ.  1260 ರಲ್ಲಿ ಕೇಶಿರಾಜನಿಂದ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಕೇಶೀರಾಜನ ಶಬ್ದಮಣಿ ದರ್ಪಣವು ಮೊದಲನೆಯದು. ಎಂಟು ಅಧ್ಯಾಯ ಒಳಗೊಂಡಿರುವ ಈ ಗ್ರಂಥವು 13ನೇ ಶತಮಾನಕ್ಕೆ ಮೊದಲ ಹಳಗನ್ನಡ ಭಾಷಾಸ್ಥಿತಿಗಳು ಹೇಗಿದ್ದವು ಎಂಬುದನ್ನು ಸವಿಸ್ತಾರವಾಗಿ ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ.

1530ರಲ್ಲಿ ವಾರ್ಧಕ ಷಟ್ಪದಿಯಲ್ಲಿ ಲಿಂಗಣ್ಣರವರು ಕಬ್ಬಿಗರ ಕೈಪಿಡಿ ಎಂಬ ಕೃತಿ  ರಚಿಸಿದರು.  ಈ ಕೋಶ 100 ಪದ್ಯಗಳನ್ನೊಳಗೊಂಡಿದೆ.  ಇದರಲ್ಲಿ ಹಳೆಗನ್ನಡ ಶಬ್ದಗಳ ಅರ್ಥಗಳನ್ನು ಹೇಳಲಾಗಿದೆ.

ವಿರಕ್ತ   ತೋಂಟದಾರ್ಯ 1500ರಲ್ಲಿ ಕರ್ನಾಟಕ ಶಬ್ದ ಮಂಜರಿ ಗ್ರಂಥವನ್ನು   ರಚಿಸಿದ್ದು, ಈ ಕೃತಿ 120 ವಾರ್ಧಕ ಷಟ್ಪದಿ ಪದ್ಯಗಳನ್ನು ಒಳಗೊಂಡಿದೆ. ಶಬ್ದಾರ್ಥ ಜೋಡಣೆಯಲ್ಲಿ ಒಂದು ವ್ಯವಸ್ಥೆಯೂ, ಸ್ಪಷ್ಟತೆಯೂ ಇದ್ದು, ನಿಘಂಟುವಿನ ಉಪಯುಕ್ತತೆ ಈ ಕೋಶದಿಂದಾಗಿ ಹೆಚ್ಚಿದೆ. ಶೃಂಗಾರ ಕವಿಯ ಈ ನಿಘಂಟು 1600 ರಲ್ಲಿ ರಚನೆಯಾಗಿದ್ದು, ಈ ಕೋಶದಲ್ಲಿ 35 ವಾರ್ಧಕ ಷಟ್ಪದಿಗಳಿವೆ.

ಕರ್ನಾಟಕ ಭಾರತ ನಿಘಂಟು   ಕೋಶದ ಕರ್ತೃವಿನ ಕಾಲ ತಿಳಿದುಬಂದಿಲ್ಲ. ಸುಮಾರು 1600 ರಲ್ಲಿ ಇದರ ರಚನೆಯಾಗಿದ್ದು ಕುಮಾರವ್ಯಾಸ ಭಾರತದಲ್ಲಿನ ಪದ್ಯಗಳಿಗೆ ಅರ್ಥವನ್ನು ನಿರೂಪಿಸಿರುವುದಾಗಿ ಕರ್ತೃ ತನ್ನ ಕೃತಿಯಲ್ಲಿ ತಿಳಿಸಿದ್ದಾರೆ. ಕವಿ ಸೂರ್ಯರು ಕವಿಕಂಠಹಾರ ಎಂಬ ಕೃತಿಯನ್ನು  ಸುಮಾರು 1640ರಲ್ಲಿ ರಚಿಸಿದ್ದು ಇದರಲ್ಲಿ, ಸುಮಾರು 271 ಕಂದಪದ್ಯಗಳಿವೆ.

 ಹೀಗೆ ಕನ್ನಡ ನಿಘಂಟುಗಳ ಇತಿಹಾಸ ಅನೂಚಾನವಾಗಿ ಸಾಗಿ ಬಂದಿದೆ. ಹಳೆಯ ಮತ್ತು ಮಧ್ಯಕಾಲೀನ ಕನ್ನಡ ನಿಘಂಟುಕಾರರು ಶಬ್ದಕೋಶಗಳನ್ನು ರಚಿಸಿ ತಮ್ಮ ಕಾಲದ ಸಾಹಿತ್ಯದ ಪ್ರಗತಿಗೆ ಕಾರಣೀಭೂತರಾಗಿದ್ದಾರೆ. ಕಾವ್ಯಾಧ್ಯಯನಕ್ಕೆ ಪ್ರಾಮುಖ್ಯತೆ ಇದ್ದ ಕಾರಣ ನಾನಾರ್ಥವುಳ್ಳ ಒಂದು ಶಬ್ದ ಇಲ್ಲವೇ ಶಬ್ದ ಸಮುಚ್ಛಯವನ್ನು ಒಂದೇ ಕಡೆಯಲ್ಲಿ ಹೇಳುವ ಕ್ರಮ ಮುಖ್ಯವಾಗಿ ತೋರಿತ್ತು ಅವರಿಗೆ. ಪ್ರಾಚೀನ ನಿಘಂಟುಗಳು ಸಮ್ಮಿಶ್ರ ರೂಪವಾಗಿವೆ. ಒಂದು ಕಾಲಘಟ್ಟದ ಸಾಮಾಜಿಕ ಸಾಂಸ್ಕೃತಿಕ ಮಹತ್ವದ ಶಬ್ದಗಳ ಒಂದು ನಿಧಿಯಾಗಿಯೂ ಅವು ಸಹಾಯಕ್ಕೆ ಬರುತ್ತವೆ.

ರೆ.ಎಫ್. ಕಿಟಲ್


ಕನ್ನಡ ಇಂಗ್ಲೀಷ್-ಕನ್ನಡ  ನಿಘಂಟುಗಳನ್ನು ಮುನ್ನಡೆಸಿದ ಶ್ರೇಯಸ್ಸು ಮಿಶನರಿಗಳಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ರೆ.ಎಫ್. ಕಿಟಲ್ ಸಿದ್ಧಪಡಿಸಿದ ಕನ್ನಡ-ಇಂಗ್ಲೀಷ್ ಡಿಕ್ಷ್ನರಿ ಎಂಬ ಕೃತಿ ಕನ್ನಡದ ಶ್ರೇಷ್ಠ ನಿಘಂಟುಗಳಲ್ಲಿ ಒಂದಾಗಿದೆ. ಹತ್ತಾರು ವರ್ಷಗಳ ಅಲೆದಾಟ-ಪರಿಶ್ರಮದಿಂದ ಪ್ರಾಚೀನ, ಕಾವ್ಯ, ಶಾಸನ ಹಾಗೂ ಆಡುನುಡಿಗಳಿಂದ ಶಬ್ದಗಳನ್ನು ಸಂಗ್ರಹಿಸಿ ಅವುಗಳಿಗೆ ಇಂಗ್ಲೀಷ್ ಅರ್ಥಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಕನ್ನಡ ನಿಘಂಟುಗಳ ಚರಿತೆಯಲ್ಲಿ ಇದು ಒಂದು ಮೈಲಿಗಲ್ಲಿನಂತಿದೆ.  1893ರಲ್ಲಿ ಪ್ರಕಟಗೊಂಡಿರುವ ಈ ನಿಘಂಟು ಆರು ಮುದ್ರಣಗಳನ್ನು ಕಂಡಿದೆ. ಇದರ ನಂತರ ಬ್ಯುಚರ್ ನ ಕನ್ನಡ-ಇಂಗ್ಲೀಷ್ ಡಿಕ್ಷನರಿ 1944ರಲ್ಲಿ ಪ್ರಕಟಗೊಂಡು ಹಲವಾರು ಬಾರಿ ಮುದ್ರಣ ಕಂಡಿದೆ. ಪ್ರತಿ ಬಾರಿ ಪರಿಷ್ಕರಣೆಗೊಂಡು ಹೊಸಪದಗಳ ಸೇರ್ಪಡೆಯೊಂದಿಗೆ ಮುದ್ರಣ ಕಾಣುತ್ತಿದೆ. ಫ್ರೋ.ಎಲ್.ಎಸ್. ಶೇಷಗಿರಿ ರಾವ್, ಫ್ರೋ. ರಾಮಚಂದ್ರಮೂರ್ತಿ, ಫ್ರೋ.ವಿ.ನಾಗರಾಜ ರಾವ್ರವರು ಜೊತೆಗೂಡಿ ಸಂಪಾದಿಸಿದ ಇಂಗ್ಲೀಷ್-ಇಂಗ್ಲೀಷ್-ಕನ್ನಡ ಡಿಕ್ಷನರಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಯಲು ತುಂಬಾ ಸಹಾಯಕಾರಿಯಾಗಿದೆ. ಎಲ್ಲಾ ಕೋನಗಳಲ್ಲಿ ಇಂಗ್ಲೀಷ್ ಶಬ್ದಗಳಿಗೆ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಅರ್ಥಗಳನ್ನು ಕೊಡಲಾಗಿದೆ.

ನಿಘಂಟುಗಳ ಹಾದಿಯಲ್ಲಿ ಹೊಸ ಅಲೆ ಎಬ್ಬಿಸಿ ಕನ್ನಡಕ್ಕೆ ವಿಶಿಷ್ಟ  ಕೊಡುಗೆ ನೀಡಿದ ಜಿ ವೆಂಕಟಸುಬ್ಬಯ್ಯ ಅವರ "ಇಗೋ ಕನ್ನಡ"ಕ್ಕೆ ಸದಾ ಹೊಳೆಯುವ ಛಾಪು. ಹೊಸ ಪದಗಳು ಸೇರುತ್ತಲೇ ಹೋಗುತ್ತವೆ ಮತ್ತು ಇದರಿಂದಾಗಿಯೇ ಭಾಷೆಯ ಬೆಳವಣಿಗೆ ಸಾಧ್ಯವಾಗುವುದು. ಹೀಗೆ ಸೇರುವ ಹೊಸ ಪದಗಳಿಂದಾಗಿ ವಾಕ್ಯ ರಚನೆಯಲ್ಲಿಯೂ ವ್ಯತ್ಯಾಸವಾಗುತ್ತದೆ. ಶಬ್ದಗಳು, ಅವುಗಳ ವ್ಯುತ್ಪತ್ತಿ, ಅರ್ಥವಿಸ್ತಾರ, ಶಬ್ದ ಸ್ವರೂಪ, ರೂಢಿಪ್ರಯೋಗ ಇವು ಸಾಮಾನ್ಯ ಜೀವನಕ್ಕೆ ಸಂಬಂಧಪಟ್ಟವು. ಇದರಿಂದಾಗಿ  ಪ್ರಚಲಿತ ಕನ್ನಡ ಪದಗಳಿಗೆ ವಿವರಣೆ ಅತ್ಯಗತ್ಯವಿತ್ತು. ಇಂತಹ ಸಮರ್ಥ ಕಾರ್ಯವು ಜಿವಿ ಅಂದರೆ ಜಿ.ವೆಂಕಟಸುಬ್ಬಯ್ಯ ರವರಿಂದ ಕಾರ್ಯರೂಪಕ್ಕೆ ಬಂದಿತು. ಅನೇಕ ವರ್ಷ ಜಿವಿಯವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ “ಇಗೋ ಕನ್ನಡ” ಅಂಕಣ ಬರಹಗಳನ್ನು ಸಂಗ್ರಹಿಸಿ ತಂದ ಗ್ರಂಥ ‘ಇಗೋ ಕನ್ನಡ. ಇದರಲ್ಲಿ ‘ನಡೆದಾಟುವ ನಿಘಂಟು’ ಎಂದೇ ಖ್ಯಾತರಾದ ಅವರು ಪ್ರತಿನಿತ್ಯ ಉಪಯೋಗಿಸುವ ಅನೇಕ ಶಬ್ದಗಳ ಹುಟ್ಟು ಹೇಗೆ ಎಂದು ವಿವರಿಸಿ ಮನದಟ್ಟು ಮಾಡಿಕೊಡುತ್ತಾರೆ. ಕುತೂಹಲ ಹೆಚ್ಚಿಸುವ ಮತ್ತು ಅರಿವನ್ನು ವಿಸ್ತರಿಸುವ ಶೈಲಿಯಲ್ಲಿ ಬರಹ ಇರುವುದರಿಂದ ಓದುಗರನ್ನು ಆಕರ್ಷಿಸುತ್ತದೆ. ಈ ಕೃತಿಯು ಕನ್ನಡದ ನಿಘಂಟುಗಳ ಪ್ರಕಾರದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವಿದೆ.

ಪ್ರತಿಯೊಂದಕ್ಕೂ ತಂತ್ರಜ್ಙಾನವನ್ನೇ ಆಧರಿಸಿರುವ ಈ ಯುಗದಲ್ಲಿ ಸಹಜವಾಗಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಇತರೆ ಶಿಕ್ಷಣಗಳಿಗೆ ಸಂಬಂಧಿಸಿದ  ಅನೇಕ ಪದಗಳನ್ನು ಕನ್ನಡಕ್ಕೆ ತರಲು ಪಾರಿಭಾಷಿಕ ಪದಕೋಶಗಳ ನಿರ್ಮಾಣವಾಗಿವೆ. ಕನ್ನಡ ನಿರ್ದೇಶನಾಲಯವು ೩೪ ಇಲಾಖೆಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳನ್ನು ಪ್ರಕಟಿಸಿದ್ದು, ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ  ಅನುಷ್ಠಾನಗೊಳ್ಳಬೇಕು ಎಂಬುದು ಇವುಗಳ ರಚನೆಯ ಹಿಂದಿನ ಧ್ಯೇಯೋದ್ದೇಶವಾಗಿದೆ.

     ಜಾಲತಾಣಗಳ ಯುಗದಲ್ಲಿ, ಕೈಲಿರುವ ಮೊಬೈಲಿನಲ್ಲಿ ವಿಶಿಷ್ಟ ಮತ್ತು ಹಲವು ಬಗೆಯ ನಿಘಂಟುಗಳು ಲಭ್ಯವಿವೆ. ಇಷ್ಟೇ ಏಕೆ, ಟ್ರಾನ್ಸಲೇಟರ್ ಆಪ್ ಗಳು(ಅನುವಾದಿಸುವ ಆಪ್) ಇಡೀ ಪುಟವನ್ನೇ ಅನುವಾದಿಸಿ ಇಡಬಲ್ಲವು. ಆದರೆ ಆದ ಅನುವಾದ ಮತ್ತು ದೊರೆತ ಶಬ್ದಗಳ ವಿವರಣೆ  ಎಷ್ಟರಮಟ್ಟಿಗೆ ಸಮರ್ಪಕವಾಗಿದೆ ಎಂಬುದನ್ನು ಅರಿಯಲು ಮತ್ತೆ ಲಿಖಿತ ನಿಘಂಟುವನ್ನು ಆಧರಿಸುವುದು ಎಂದಿಗೂ ತಪ್ಪದು. ಇದರಿಂದಾಗಿಯೇ ಸದಾ ಕಾಲಕ್ಕೂ ನಿಘಂಟುಗಳ ಮಹತ್ವ ಹೆಚ್ಚಾಗುತ್ತಲೇ ಇರುತ್ತದೆ.


ಶ್ರೀಮತಿ ಮಂಜುಳಾ ಡಿ
ಶ್ರೀಮತಿ ಮಂಜುಳಾ ಡಿ

Comments

  1. ಉತ್ತಮ, ಮಾಹಿತಿ ಪೂರ್ಣ ಲೇಖನ. ಮಂಜುಳಾ ಅವರಿಗೆ ಅಭಿನಂದನೆಗಳು. "ಒಂದು ಕಡೆ ಶೃಂಗಾರ ಕವಿಯ ಈ ನಿಫಂಟು" ಎಂದು ಬರೆದಿದೆ, ಆದರೆ ನಿಘಂಟದ ಹೆಸರಿಲ್ಲ. ಕಿಟೆಲ್ ಅವರ ಬಗ್ಗೆ ಕೆಲವು ಅಂಶಗಳು ಪುನರಾವೃತ್ತಿಯಾಗಿವೆ. ಲೇಖಕಿಯರಿಂದ ಇದೇ ರೀತಿಯ ಇನ್ನೂ ಕೆಲವು ಬರಹಗಳನ್ನು ಎದುರು ನೋಡುತ್ತೇನೆ.

    ReplyDelete
  2. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿನ ದೊಡ್ಡ ಮರದ ಪೆಟ್ಟಿಗೆಯಲ್ಲಿದ್ದ ಇಂಗ್ಲಿಷ್ - ಕನ್ನಡ ಶಬ್ದಕೋಶ ಆಕರ್ಷಣೀಯ ವಸ್ತುವಾಗಿತ್ತು, ಇಂಗ್ಲಿಷ್ ಪಠ್ಯದ ತರಗತಿಯಲ್ಲಿ ಯಾವುದೋ ಕಠಿಣ ಶಬ್ದದ ಅರ್ಥ ತಿಳಿಯದಿದ್ದಾಗ ಆ ಶಬ್ದಕೋಶ ಹೊರಗಡೆ ಬರುತ್ತಿತ್ತು, ಶಬ್ದಕೋಶವನ್ನು ಯಾವ ರೀತಿ ಬಳಸಬೇಕು, ಅಕ್ಷರಗಳ ಅಕಾರಾದಿಯಲ್ಲಿ ಮೊದಲ ಅಕ್ಷರ, ಎರಡನೇ ಅಕ್ಷರ, ಮೂರನೆಯ ಅಕ್ಷರಗಳ‌ ಹೀಗೆ ಆ ಪದದ ಜೋಡನೆಯ ಕ್ರಮಬದ್ಧತೆಯನ್ನು ನೋಡಿಕೊಂಡು ತುಂಬಾ ಸಲೀಸಾಗಿ ಸರಿಯಾದ ಪುಟಕ್ಕೆ ಹೋಗುವ ರೀತಿಯನ್ನು, ಶಬ್ದಕೋಶವನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಹೇಳಿ ಕೊಡಲಾಗುತ್ತಿತ್ತು, ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳಾದ ನಮಗೆ ಇಂಗ್ಲಿಷ್ - ಕನ್ನಡ ಶಬ್ದಕೋಶ ಅತ್ಯಮೂಲ್ಯ ವಸ್ತುವಾಗಿತ್ತು, ಪಿ.ಯು.ಸಿ ಓದುವಾಗ ಡಿ. ಕೆ. ಭಾರದ್ವಾಜರ ಇಂಗ್ಲಿಷ್- ಇಂಗ್ಲಿಷ್- ಕನ್ನಡ ಶಬ್ದಕೋಶ ನನ್ನ ಕೈಸೇರಿತ್ತು, ಆರು ನೂರು ಮುಖ ಬೆಲೆಯಿದ್ದು ದುಬಾರಿ ಎನಿಸಿ ಕೊಂಡುಕೊಳ್ಳಲು ಬಹಳ ಯೋಚಿಸ ಬೇಕಿದ್ದ ಸಂಧರ್ಭದಲ್ಲಿ ತುಂಬಾ ಅಪರೂಪದ ಕಿಟ್ಟೆಲ್ ಶಬ್ದಕೋಶದ ಹೊಸ ಮುದ್ರಣದ ಕೃತಿ ಎರಡು ನೂರು ರೂಗಳಿಗೆ ಸಿಕ್ಕಿದ್ದು ನನ್ನ ಅದೃಷ್ಟ, ಇನ್ನೂ ಕಿಟ್ಟೆಲ್ ಶಬ್ದಕೋಶದ ಬಗ್ಗೆ ಹತ್ತು ಹಲವು ವಿಷಯಗಳಿದ್ದು ಅದರ ಬಗ್ಗೆ ಪ್ರತ್ಯೇಕ ಬರಹವನ್ನೇ ಬರೆಯ ಬೇಕಾಗುತ್ತದೆ, ಶಬ್ದಕೋಶಗಳ ಇತಿಹಾಸದ ಬಗ್ಗೆ ತುಂಬಾ ವಿವರವಾಗಿ ಅಷ್ಟೇ ಪ್ರಬುದ್ಧವಾಗಿ ಬರೆದಿದ್ದೀರಾ, ಧನ್ಯವಾದಗಳು ಮೇಡಂ....

    ReplyDelete
  3. ನಿಘಂಟುಗಳು ಹುಟ್ಟಿ ಬೆಳೆದ ವಿವರಗಳ ಲೇಖನ ಚೆನ್ನಾಗಿ ಮೂಡಿ ಬಂದಿದೆ ರನ್ನ ಕಂದನಿಂದ ಕವಿಕಂಠಹಾರದವರೆಗೂ ಎಲ್ಲರನ್ನು ಗುರುತಿಸಿ ತಿಳಿಸಿಕೊಟ್ಟದ್ದು ಖುಷಿಯ ವಿಷಯ. English ಸಮಾನಾರ್ಥ ಪದ ಹುಡುಕುವಾಗ ಗೊಂದಲ ಸಹಜ.

    ReplyDelete

Post a Comment