ಹೀಗೊಂದು ಕಾನೂನು ಹುದ್ದೆಯ ಸಂದರ್ಶನ

ಹೀಗೊಂದು ಕಾನೂನು ಹುದ್ದೆಯ ಸಂದರ್ಶನ

 ಹಾಸ್ಯ ಲೇಖನ ಅಣುಕು ರಾಮನಾಥ್



ಕಂಪನಿಯೊಂದರ ಲೀಗಲ್ ಅಡ್ವೈಸರ್ ಕೆಲಸಕ್ಕೆಂದು ಅರ್ಜಿ ಗುಜರಾಯಿಸಿದ್ದ ಸೀನು ಅಂದು ಸಂದರ್ಶಕರ ಮುಂದೆ ಕುಳಿತಿದ್ದ.

‘ಕಾನೂನು ಎಂದರೇನು?’ ಕೇಳಿದರು ಸಂದರ್ಶಕರು. 


‘ಅದೊಂದು ಅವಸ್ಥೆ. ಅದನ್ನು ವ್ಯವಸ್ಥೆ ಎನ್ನುವವರೂ ಇದ್ದಾರೆ. ಕಕ್ಷಿಗಳಿಗೆ ಕಬ್ಬಿಣದಂತೆಯೂ, ವಕೀಲರಿಗೆ ರಬ್ಬರಿನಂತೆಯೂ ಕಾಣುವ ಒಂದು ಷರತ್ತುಗಳ ಮೆರವಣಿಗೆ.’

‘ಗುಡ್. ಕಕ್ಷಿ ಎಂದರೇನು?’

‘ಎದುರು ಪಾರ್ಟಿಯಿಂದ ಎಷ್ಟಾಗತ್ತೋ ಅಷ್ಟನ್ನು ಕಕ್ಕಿಸಿ ಎಂದು ವಕೀಲರನ್ನು ಕೇಳಿಕೊಳ್ಳುವವನೇ ಕಕ್ಷಿ.’

‘ಪ್ರತಿಕಕ್ಷಿ?’

‘ಇಂತಿಂತಹ ಪ್ರತಿಗಳನ್ನು ಕೋರ್ಟಿಗೆ ಪ್ರೊಡ್ಯೂಸ್ ಮಾಡಕ್ಕೆ ಇಷ್ಟಿಷ್ಟನ್ನು ಕಕ್ಕುವವನೇ ಪ್ರತಿಕಕ್ಷಿ.’

ಸಂದರ್ಶಕರು ಮುಖಮುಖ ನೋಡಿಕೊಂಡರು. ಅಲ್ಲಿದ್ದ ಐವರಿಗೂ ಸೀನುವಿನ ಉತ್ತರಗಳು ಸರಿಯೆನ್ನಿಸಲಿಲ್ಲ. ಆದರೆ ತಪ್ಪು ಎಂದೂ ಅನ್ನಿಸಲಿಲ್ಲ.

‘ಕೇಸ್ ಎಂದರೇನು?’

‘ಹಲವಾರು ಬಾಟಲುಗಳುಳ್ಳ ಒಂದು ಪಾರ್ಸಲ್.’

‘ನಾವು ಅಬ್ಕಾರಿ ವಿಷಯದ ಬಗ್ಗೆ ಕೇಳಲಿಲ್ಲ.’

‘ಆಸ್ಪತ್ರೆಯಲ್ಲಿರುವ ರೋಗಿ. ವೈದ್ಯರು ಅವನಿಗೆ ಸಂಬಂಧಿಸಿದ ಹಾಳೆಯಲ್ಲಿ ‘ಕೇಸ್ ಹಿಸ್ಟರಿ’ ಎಂದು ಬರೆಯುತ್ತಾರೆ.’

‘ನಾವು ಮೆಡಿಕಲ್ಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಲ್ಲ.’

‘ಕೇಸುಗಳಲ್ಲಿ ಹಲವು ವಿಧ. ಮನೆಯಲ್ಲಿ ಅಂದವಾಗಿರುವ ವಸ್ತುಗಳನ್ನಿಡುವುದಕ್ಕಿರುವುದು ಷೋಕೇಸ್. ರಾಜಕಾರಣಿಗಳನ್ನು ಹರಾಜಿನಲ್ಲಿ ಕೊಳ್ಳಲು ಅನುಕೂಲಕರವಾಗುವುದ ಬ್ರೀಫ್‍ಕೇಸ್. ಕೋರ್ಟಿನಲ್ಲಿ ಇಬ್ಬರ ನಡುವೆ ನಡೆದ ಜಗಳವನ್ನು ಇತ್ಯರ್ಥ ಮಾಡಲು ನಡೆಸುವುದು ಕೋರ್ಟ್ ಕೇಸ್’ ತನಗೆ ತಿಳಿದಷ್ಟನ್ನೂ ಒದರಿಬಿಟ್ಟ ಸೀನು.

‘ಫಸ್ಟ್ ಇನ್ಫರ್ಮೇಷನ್ ರಿಪೋರ್ಟ್ ಎಂದರೇನು?’

‘ಯಾವುದೇ ಕ್ಲೈಂಟ್ ನಮ್ಹತ್ರ ಬಂದಕೂಡಲೆ ಅವರಿಗೆ ಗೊತ್ತಾಗದ ಹಾಗೆ ಟಿವಿಯವರಿಗೆ ಹೇಳ್ಬಿಡೋದನ್ನೇ ಫಸ್ಟ್ ಇಂಫರ್ಮೇಷನ್ ರಿಪೋರ್ಟ್ ಅನ್ನೋದು. ಎಲ್ಲರಿಗೂ ಮೊದಲು ರಿಪೋರ್ಟರ್‍ಗೆ ಇಂಫರ್ಮೇಷನ್ ತಲುಪಿಸುವ ಕ್ರಿಯೆ.’

‘ಷೋ ಕಾಸ್ ನೋಟೀಸ್ ಎಂದರೇನು?’

‘ಕಾಸು ತೋರಿಸಿ ಎಂದು ಕಳುಹಿಸುವ ಪತ್ರ. ಕಾಸಿದ್ದರೆ ವಕೀಲರನ್ನು ಹಿಡಿದು ಕೇಸ್ ನಡೆಸುತ್ತಾರೆ. ಕಾಸಿಲ್ಲದಿದ್ದರೆ ಅವರವರೇ ಹೊಂದಾಣಿಕೆ ಮಾಡಿಕೊಂಡು ಸುಮ್ಮನಾಗುತ್ತಾರೆ. ವ್ಯಕ್ತಿಯ ಬಳಿ ಕಾಸಿದೆಯೋ ಇಲ್ಲವೋ ಎಂದು ಅರಿಯಲು ಕಳುಹಿಸುವ ಪತ್ರವೇ ಷೋ ಕಾಸ್ ನೋಟೀಸ್.’

‘ಗುಡ್. ಕಾಂಪೌಂಡೆಬಲ್ ಅಫೆನ್ಸ್ ಎಂದರೇನು?’ 

‘ಯಾವ ಅಪರಾಧದ ಸುತ್ತಲೂ ಗೋಡೆ ಕಟ್ಟಿ ಅದನ್ನು ಸಾರ್ವಜನಿಕರಿಂದ ದೂರವಿರಿಸಲು ಸಾಧ್ಯವಾಗುತ್ತದೋ ಆ ಅಪರಾಧವೇ ಕಾಂಪೌಂಡೆಬಲ್ ಅಫೆನ್ಸ್. ಯಾರಿಗೂ ಕಾಣದಂತೆ ಎತ್ತರದ ಗೋಡೆ ಕಟ್ಟಿ ಅಡಗಿಸಲು ಸಾಧ್ಯವಾದರೆ ಅದು ವಾಲೆಬಲ್ ಅಫೆನ್ಸ್ ಆಗುತ್ತದೆ. ಎಂದಿಗೂ ಕಾಣದಂತೆ ಗೋಪ್ಯವಾಗಿರಿಸಿದರೆ ಇದೇ ಬರಿಯೆಬಲ್ ಅಫೆನ್ಸ್ ಆಗುತ್ತದೆ.’

‘ಜನರಲ್ ಬಾಡಿ ಮೀಟಿಂಗ್ ಎಂದರೇನು?’

‘ವರ್ಷಕ್ಕೊಮ್ಮೆ ಸದಸ್ಯರೆಲ್ಲರೂ ಕೂಡಿ, ನಿಶ್ಶಕ್ತಿಯಿಂದ ಬಾಡುವವರೆಗೆ ಕೂಗಾಡುವ ಸಭೆಯೇ ಜನರೆಲ್ಲ ಬಾಡುವ ಮೀಟಿಂಗ್ ಉರುಫ್ ಜನರಲ್ ಬಾಡಿ ಮೀಟಿಂಗ್. ಆದರೆ ಹಾಗೆ ಬಾಡಿದವರನ್ನು ಬಾಡಿದಂತೆಯೇ ಮನೆಗೆ ಕಳುಹಿಸದೆ ಊಟ ಹಾಕುವ ವ್ಯವಸ್ಥೆ ಇರುತ್ತದೆ.’

‘ಸ್ವತಂತ್ರ ನಿರ್ದೇಶಕ (ಇಂಡಿಪೆಂಡೆಂಟ್ ಡೈರೆಕ್ಟರ್)  ಎಂದರೆ ಯಾರು?’

‘ನಿರ್ಮಾಪಕನದು ಕೇವಲ ಹಣ ಕೊಡುವುದಷ್ಟೇ ಜವಾಬ್ದಾರಿ. ಸಿನೆಮಾ ತನ್ನ ಮೂಗಿನ ನೇರಕ್ಕೇ ಶೂಟ್ ಆಗಬೇಕೆಂದು ತಾಕೀತು ಮಾಡುವವನೇ ಇಂಡಿಪೆಂಡೆಂಟ್ ಡೈರೆಕ್ಟರ್.’

ಸಂದರ್ಶಕರು ಹೌಹಾರಿದರು. ‘ನಾವು ಫಿಲ್ಮ್ ಡಿವಿಷನ್ ಬಗ್ಗೆ ಕೇಳಿದ್ದಲ್ಲ’ ಎಂದರೊಬ್ಬ ಸಂದರ್ಶಕರು.

‘ಮಿಕ್ಕವರೆಲ್ಲ ಜನರಿಗೆ ಸಾಲ ಸ್ಯಾಂಕ್ಷನ್ ಮಾಡುತ್ತಿದ್ದರೆ ತನಗೇ ಸಾಲವನ್ನು ಸ್ಯಾಂಕ್ಷನ್ ಮಾಡಿಕೊಂಡು ಬೇಕಾದಂತೆ ಬ್ಯಾಂಕ್ ನಡೆಸುವ ಡೈರೆಕ್ಟರ್ರೇ ಇಂಡಿಪೆಂಡೆಂಟ್ ಡೈರೆಕ್ಟರ್.’

‘ನಾವು ಬ್ಯಾಂಕಿನ ಬಗ್ಗೆಯೂ ಕೇಳಲಿಲ್ಲ. ಈ ಪ್ರಶ್ನೆ ಟ್ರಸ್ಟಿಗೆ ಸೇರಿದ್ದಾಗಿತ್ತು.’

‘ಟ್ರಸ್ಟಿನದಾ? ಟ್ರಸ್ಟ್ ಎಂದರೆ ನನಗೆ ಗೊತ್ತು.’

‘ಗುಡ್. ಅದರ ಬಗ್ಗೆ ಕೊಂಚ ಹೇಳಿ.’

‘ಟ್ರಸ್ಟ್ ಎನ್ನುವುದು ಟ್ರಸ್ಟ್‍ವರ್ತಿ ಜನಗಳು ಸೇರಿ ನಡೆಸುವ ಒಂದು ಸಂಸ್ಥೆ. ಇದಕ್ಕೆ ಎರಡು ಮಕ್ಕಳಿರುತ್ತವೆ – ಒಂದು ಹೆಣ್ಣು, ಒಂದು ಗಂಡು. ಹೆಣ್ಣಿನ ಹೆಸರು ಮಿಸ್ ಟ್ರಸ್ಟ್; ಗಂಡಿನ ಹೆಸರು ಡಿಸ್ ಟ್ರಸ್ಟ್.’

‘ರಾಜಕೀಯದ ಬಗ್ಗೆ ಕೆಲವು ಪ್ರಶ್ನೆಗಳು. ನಾಮಿನೇಷನ್ ಪೇಪರ್ಸ್ ಎಂದರೇನು?’

‘ಇಡೀ ನೇಷನ್ನಿಗೇ ನಾಮ ಹಾಕಲೆಂದೇ ಸಿದ್ಧರಾದ ವ್ಯಕ್ತಿಗಳು ತುಂಬಬೇಕಾದ ಫಾರಮ್ಮುಗಳು.’

‘ಎಲೆಕ್ಷನ್ ಎಂದರೇನು?’

‘ಕೋಟ್ಯಂತರ ಸಾಮಾನ್ಯರು ಸೇರಿ ನೂರಾರು ಅಯೋಗ್ಯರ ಕೈಗೆ ಆಡಳಿತವನ್ನು ಹಸ್ತಾಂತರಿಸಿ ಮುಂದಿನ ಚುನಾವಣೆಯ ವರೆಗೆ ಪೇಚಾಡುವಂತಹ ಪ್ರಕ್ರಿಯೆಯೇ ಎಲೆಕ್ಷನ್.’

‘ಪಕ್ಷ ಎಂದರೇನು?’

‘ಪಕ್ಷ ಎಂದರೆ ರೆಕ್ಕೆ. ರೆಕ್ಕೆಯಿರುವ ಜೀವಿಯೇ ಪಕ್ಷಿ. ರೆಕ್ಕೆಯಿರುವ ಮಂದಿಯೆಲ್ಲ ಪಕ್ಷದ ಸದಸ್ಯರು. ಸದಸ್ಯರು ಒಂದೆಡೆಯಿಂದ ಇನ್ನೊಂದೆಡೆಗೆ ಹಾರಲು ರೆಕ್ಕೆಗಳಿರುವುದೇ ಕಾರಣ.’

‘ಎಲೆಕ್ಷನ್ ಕಮಿಷನ್ ಎಂದರೇನು?’

‘ಪಕ್ಷದಿಂದ ಉಮೇದುವಾರನೊಬ್ಬನು ನಿಲ್ಲಬೇಕಾದರೆ ಪಕ್ಷಕ್ಕೆ ಇಂತಿಷ್ಟು ಕಮಿಷನ್ ಅಥವಾ ಪಾರ್ಟಿ ಫಂಡ್ ನೀಡಬೇಕಾಗುತ್ತದೆ. ಇದೇ ಎಲೆಕ್ಷನ್ ಕಮಿಷನ್.’

‘ನಾವು ಕೇಳಿದ್ದು ಅದಲ್ಲ. ಚುನಾವಣಾ ಆಯೋಗ ಎಂದರೇನು?’

‘ಚುನಾವಣೆಯನ್ನು ಸರಿಯಾಗಿ ನಡೆಸುತ್ತೇವೆ ಎನ್ನುತ್ತಾ ಗಾಂಧೀಜಿಯ ಮೂರು ಕೋತಿಗಳಂತೆ ಕೆಟ್ಟದ್ದನ್ನು ನೋಡದೆ, ಕೆಟ್ಟದ್ದನ್ನು ಕೇಳದೆ, ಕೆಟ್ಟದ್ದನ್ನು ಆಡದೆ ಇರುವ ಒಂದು ಪ್ರಮುಖ ಇಲಾಖೆ.’

‘ಸರಹದ್ದು ಎಂದರೇನು?’

‘ಚೈನ್ ಸ್ನ್ಯಾಚರ್. ಆಭರಣ ಧರಿಸಿದ ಪ್ರಾಣಿಗಳ ಮೇಲೆ ದಿಢೀರನೆ ಎರಗುವ ಮೊಬೈಕ್ ಪಕ್ಷಿ.’

‘ಪಾಪರ್ ಚೀಟಿ ಎಂದರೇನು?’

‘ನೂರಾರು ಜನರ ಹಣವನ್ನು ‘ಮೀದೀ’ಮಾದೇ; ಮಾದೀ ಮಾದೇ’ ಎಂಬ ಧೋರಣೆಯಿಂದ ತನ್ನ ಹತ್ತಿರದವರ ಹೆಸರಿನಲ್ಲಿರಿಸಿ, ಅಲೆಕ್ಸಾಂಡರನ ಕಡೆಯ ಯಾತ್ರೆಯಲ್ಲಿ ಕಂಡುಬಂದಂತೆಯೇ ಬರಿಗೈ ತೋರುತ್ತಾ ತಾರಮ್ಮಯ್ಯ ಆಡಿಸಲು ಅವಕಾಶ ಒದಗಿಸುವ ಪರವಾನಗಿ ಪತ್ರ.’

‘ಕೆರೆಯ ಸುತ್ತಲಿನ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿರುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು?’

‘ಅವರನ್ನು ಮೇಲಕ್ಕೆ ಕಳುಹಿಸಬೇಕು’ ಎನ್ನುತ್ತಾ ಆಕಾಶದತ್ತ ಕೈತೋರಿದ ಸೀನು.

‘ಅಂದರೆ.... ಪ್ರಾಣ ತೆಗೆಯುವುದೆ?’

‘ಕಾನೂನಿನ ಪರಿಧಿಯಲ್ಲಿ ಕೆಲವು ವಿಷಯಗಳನ್ನು ಮಾತನಾಡುವಂತಿಲ್ಲ. Deeds shall speak louder than words!’

‘ಡೀಡ್ ಎಂದಾಗ ಗಾದೆಮಾತೊಂದು ನೆನಪಾಯಿತು. ಎ ಪ್ರೆಂಡ್ ಇನ್ ನೀಡ್ ಈಸ್ ಎ ಫ್ರೆಂಡ್ ಇನ್ ಡೀಡ್ ಎನ್ನುವುದರ ಅರ್ಥವೇನು?’

‘ನೀಡ್‍ನಲ್ಲಿರುವವನೆಂದರೆ ಸಾಲ ಬೇಕಾಗಿರುವವನು. ಅವನಿಗೆ ಷೂರಿಟಿ ನಿಂತು ಲೋನ್ ಡೀಡ್‍ಗೆ ಸೈನ್ ಮಾಡುವವನೇ ಫ್ರೆಂಡ್ ಇನ್ ಡೀಡ್.’

‘ಹಿಂದಿನ ಕಾಲದಲ್ಲಿ ಮಾಮಲೇದಾರರು ಇರುತ್ತಿದ್ದರು. ಅವರ ಕಾರ್ಯವ್ಯಾಪ್ತಿ ಏನಿತ್ತು?’

‘ಈಗಲೂ ಮಾಮಲೇದಾರರಿದ್ದಾರೆ. ಅವರನ್ನು ಮಾಮೂಲಿದಾರರು ಎಂದು ಕರೆಯುತ್ತಾರೆ. ಕೇಸನ್ನು ಅಡ್ಜರ್ನ್ ಮಾಡಿರೆಂದು ಬಲವಂತ ಮಾಡುವ ಕ್ಲೈಂಟ್‍ಗಳಿಂದ ಪ್ರತಿ ಅಡ್ಜರ್ನ್‍ಮೆಂಟಿಗಿಷ್ಟೆಂದು ಪೀಕುವವರು ಮಾಮೂಲಿದಾರರು. ಇವರಲ್ಲದೆ ‘ನಿತ್ಯಸಾಕ್ಷಿ’ಗಳು ಇರುತ್ತಾರೆ. ಯಾವುದೇ ಕೇಸಿಗೂ ಒದಗಿಬರುವ ಇವರದು ಒಂದು ಹೇಳಿಕೆಗೆ ಇಷ್ಟು ‘ಮಾಮೂಲು’ ಎಂದಿರುತ್ತದೆ. ಇವರೂ ಮಾಮೂಲಿದಾರರೇ. ಇವರಲ್ಲದೆ ಹಫ್ತಾರೌಡಿಗಳು, ಹಾಕರ್ಸ್ ಜೇಬಿಗೆ ಕತ್ತರಿ ಹಾಕುವ ಪೇದೆಗಳು ಸಹ ಮಾಮೂಲಿದಾರರ ಪಟ್ಟಿಗೆ ಸೇರುತ್ತಾರೆ.’

‘ಶಿರಸ್ತೆದಾರರು?’

‘ಅಂದಿನವರ ಬಗ್ಗೆ ತಿಳಿದಿಲ್ಲ. ಈಗ ಹಳ್ಳದಿಬ್ಬಗಳಿದ್ದು ರಸ್ತೆಯೇ ಗೋಚರಿಸದ ಮಾರ್ಗವನ್ನು ಕಾಣುತ್ತಾ, ‘ಶ‍್ಶೀ... ರಸ್ತೆ!'’ಎನ್ನುವವರೇ ಶಿರಸ್ತೆದಾರರು.’

‘ಅಮಲ್ದಾರರು?’

‘ಆಗಿನವರ ಬಗ್ಗೆ ಗೊತ್ತಿಲ್ಲ. ಈಗ ನಡುರಾತ್ರಿಯಲ್ಲಿ ತಪ್ಪುಹೆಜ್ಜೆ, ತೊದಲುನುಡಿಗಳೊಡನೆ ಪೆಂಡುಲಂನಂತೆ ರಸ್ತೆಯ ಎರಡೂ ಬದಿಗಳನ್ನು ಮುಟ್ಟುತ್ತಾ ಸಾಗುವವರೇ ಅಮಲ್ದಾರರು.’

‘ಆಂಗ್ಲದಲ್ಲಿ ಕೆಲವರನ್ನು ‘He is a man of words’ ಎನ್ನುತ್ತಾರೆ. ಹಾಗೆಂದರೇನು?’

‘ಅವನಲ್ಲಿ ಕೇವಲ ಪದಗಳಷ್ಟೇ ಇವೆ. ವಾಕ್ಯರಚನೆ ಮಾಡಲು ಬರುವುದಿಲ್ಲ ಎಂದು!’

‘ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ಒಂದು ಅಥವಾ ಎರಡು ಪದದಲ್ಲಿ ಉತ್ತರಿಸಿ. ಯಾವುದೇ ತಯಾರಿ ಇಲ್ಲದೆ ನೀಡಿದ ಹೇಳಿಕೆಗೆ ಏನೆಂದು ಕರೆಯುತ್ತಾರೆ?’

‘ಭಾಷಣ.’

‘ಪ್ರಶ್ನಿಸುವ ಕ್ರಿಯೆಗೆ ಒಂದು ಪದವೇನು?’

‘ಆರ್ನಬ್ ಗೋಸ್ವಾಮಿ.’

‘ಸಾರ್ವಜನಿಕ ಹಣದ ದುರ್ಬಳಕೆ.’

‘ಬಿಟ್ಟಿಭಾಗ್ಯ.’

‘ಭೌತಿಕವಾಗಿ ಮುಟ್ಟಲು ಸಾಧ್ಯವಾಗದಂತಹ ಆಸ್ತಿಯನ್ನು ಏನೆಂದು ಕರೆಯುತ್ತಾರೆ?’

‘ಮಂತ್ರಿಯ ಆಸ್ತಿ.’

‘ವಿವಾದದ ಸಂದರ್ಭದಲ್ಲಿ ಎರಡೂ ಪಕ್ಷಗಳಿಗೆ ಬೆಂಬಲ ನೀಡದಿರುವುದು.’

‘ಕೇಂದ್ರ ಸರ್ಕಾರ.’

‘ಕಾನೂನು ಮತ್ತು ಸುರಕ್ಷತೆ ಇಲ್ಲದಿರುವಿಕೆ.’

‘ಚುನಾವಣಾ ಸಮಯ.’

‘ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಬೇಕಾದ ಕೌಶಲ ಇಲ್ಲದಿರುವವನು.’

‘ಕನ್ಸಲ್ಟೆಂಟ್.’

ಸಂದರ್ಶಕರು ಸಂಪ್ರೀತರಾದರು. ಸೀನುವಿಗೆ ‘ಹುಟ್ಟಾತರಳೆಗಳ ನಿಯಂತ್ರಣ ಮಹಾನಿರ್ದೇಶಕ’ ಎಂಬ ಹುದ್ದೆಯೊಂದನ್ನು ಕಲ್ಪಿಸಿ ನೇಮಕ ಮಾಡಿಕೊಳ್ಳಲಾಯಿತು.

Comments

  1. ಅತ್ಯಂತ ಸಮರ್ಪಕ ಉತ್ತರಗಳನ್ನು ನೀಡಿದ ಸೀನುವಿಗೆ chief Justice ಹುದ್ದೆಯೇ ಸಿಗಬೇಕಿತ್ತು!!

    ReplyDelete
  2. ‘ಮೀದೀ’ಮಾದೇ; ಮಾದೀ ಮಾದೇ’ best line of the article. ಬರಹದಲ್ಲಿ ಹಾಸ್ಯಕ್ಕೂ, ವಿಚಾರಕ್ಕೂ ಕೊರತೆಯೆ ಇಲ್ಲ

    ReplyDelete

Post a Comment