ಜೀಸಸ್ ಕ್ರೈಸ್ಟ್ ! ಮುದುಕಿಯ ಪ್ರಾಣ ಪಕ್ಷಿ !!

ಜೀಸಸ್ ಕ್ರೈಸ್ಟ್ ! ಮುದುಕಿ ಪ್ರಾಣ ಪಕ್ಷಿ !!

ಲೇಖನ - ಶ್ರೀ ಕನಕಾಪುರ ನಾರಾಯಣ  



2009 August ಆಗ ಸಿಡ್ನಿ ಸಿಟಿಯಲ್ಲಿ ಕೆಲಸ, ಬೆಳಿಗ್ಗೆ ಸಿಟಿರೈಲ್ ಹಿಡಿದು ಹೊರಟೆ. ಅದರ ಅನುಭವ ಬಲ್ಲವರೇ ಬಲ್ಲರು ಬಿಡಿ,  ಏಳರಿಂದ ಎಂಟರ ಒಳಗೆ ರೈಲು ಹತ್ತಿದರೆ ಆಫೀಸಿಗೆ ಹೋಗುವವರೇ ಹೆಚ್ಚಾಗಿ ತುಂಬಿರುವ ಸಮಯ, ಅಲ್ಲಲ್ಲಿ ಶಾಲಾ ಮಕ್ಕಳ ಗುಂಪು, ಕಿವಿಗೆ ಮ್ಯೂಸಿಕ್ ಚುಚ್ಚಿಕೊಂಡು ತಲೆಯಾಡಿಸುವವರು ಕೆಲವರಾದರೆ, ಫೋನಿನಲ್ಲಿ ಅರಿಯದ ಭಾಷೆಯಲ್ಲಿ ಅರಚಿಕೊಳ್ಳುವವರು ಕೆಲವರು.ಬೆರಳುಗಳಿಗೆ ಬಿಡುವಿಲ್ಲದೆ ಟೆಕ್ಟ್ ಮಾಡುವವರೇ ಹೆಚ್ಚು ಅನ್ನಿ. ರೈಲಿನಲ್ಲೇ ತಿಂದು ಕುಡಿದೂ ತೂಕಡಿಸುವವರೂ ಸಾಮಾನ್ಯ. ಪೇಪರ್, ಪುಸ್ತಕ ಓದುವುದು ಒಂದು ಒಳ್ಳೆಯ ಹವ್ಯಾಸವೇ ಸರಿ, ಓದುತ್ತಾ ಪೇಪರ್ ಛತ್ರಿ ಪುಸ್ತಕ ಮರೆತು ಇಳಿದು ಹೋಗುವವರೂ  ಅದೆಷ್ಟೋ ಮಂದಿ.




ದಿನ ನನಗೆ ಒಬ್ಬ ಇಳಿವಯಸ್ಸಿನ ಮುದುಕಿಯ ಮುಂದಿನ ಸೀಟಿನಲ್ಲಿ ಜಾಗ ಸಿಕ್ಕಿತು. ಎದಿರು ಬದಿರು ಸೀಟು. ನನಗೇನು ನಾರ್ತ್ ಸಿಡ್ನಿ ತಲುಪಿದರೆ ಸಾಕು ಬೇರೆಲ್ಲೂ ಜಾಗ ಇಲ್ಲದ ಕಾರಣ ಆಕೆಯ ಎದುರೇ ಕುಳಿತೆ.ಮುಖಾಮುಖಿ ಅರೆ ನಾನ್ಯಾಕೆ ಆಕೆಯ ಕಡೆ ನೋಡಲಿ ಅಂತ ಬೀಚಿಯವರ ಪುಸ್ತಕ ಹಿಡಿದು ಓದಲಾರಂಭಿಸಿದೆ. ಹಳೆಯದು ಅನ್ನುವ ಹಾಗಿಲ್ಲಬಿಡಿ ಈಗಲೂ ಅವರ ಜೋಕು ಅದೆಷ್ಟು ಅನ್ವಯ ನಮ್ಮ ದೇಶದ ಜೀವನ ಶೈಲಿ ಗೊತ್ತಿರಬೇಕು ನಿಜವಾಗಲೂ ನಗಬೇಕು ಅಂದರೆ. ಬೀಚಿ ಪದ ಪದ ಗಳಲ್ಲಿ ನಗಿಸಿದರೆ ಹೀರಣ್ಣಯ್ಯನವರು ಮಾತು ಮಾತಿಗೂ ನಗಿಸುತ್ತಾರೆ.ಅವರಿಬ್ಬರೂ ಸ್ನೇಹಿತರು ಎನ್ನುವುದು ಇತ್ತೀಚಿಗೆ ಮಾ| ಹಿರಣ್ಣಯ್ಯನವರ ಜೊತೆ ಈಮೈಲ್ ಸಂದೇಶಗಳಿಂದ ತಿಳಿದಿತ್ತು.ಎಲ್ಲಾ ನೆನೆಯುತ್ತಾ ಆಗಿಂದಾಗ್ಗೆ ಯಾವ ನಿಲ್ದಾಣಕ್ಕೆ ತಲುಪಿದ್ದೇವೆ ಅಂತ ಹೊರಗೊಮ್ಮೆ ಕಣ್ ಹಾಯಿಸುತ್ತಿದ್ದೆ



ಅಲ್ಲಿ ಮತ್ತೊಂದು ದೃಷ್ಯ ನನ್ನನ್ನು ಸೆಳೆಯಿತು. ಮತ್ತೊಂದು ಮುಖ್ಯ ವಿಷಯ ಮರೆತಿದ್ದೆ. ಏನಪ್ಪಾ ಅಂದ್ರೆ ಮೇಕಪ್ಪು ಹೂ ಹೌದು ಕಣ್ರೀ ಅದೇನ್ ಮಾಡ್ಕೋತಾರೆ ಅಂತೀನಿ ಜನ ಬೆಳಿಗ್ಗೆ ಎದ್ದು ಸ್ನಾನಮಾಡಿ ತಲೆ ಒಣಗಿಸಿಕೊಂಡು ಸದ್ಯ ಬಟ್ಟೆ ಏರಿಸಿಕೊಂಡು ಮಿಕ್ಕ ಎಲ್ಲಾ ಮುಖದ ಸೌದರ್ಯ ಅಲಂಕಾರವನ್ನ ರೈಲಿನಲ್ಲೇ ಮಾಡ್ಕೋತಾರೆ.ಅಬ್ಬ! ಒಂದೊಂದೇ ಸಲಕರಣೆ ಕೈಚೀಲದಿಂದ ಹೊರಗೆ ಬರತ್ತೆ. ಬಳಸಿದ ಮೇಲೆ ಎಲ್ಲಾ ಭದ್ರವಾಗಿ ಅಚುಕಟ್ಟಾಗಿ ಮುಚ್ಚಳ ಮುಚ್ಚಿಡೋದು ಬೇರೆ ನೋಡೋಕ್ಕೇ ಚೆನ್ನ ಬಿಡಿ, ಮುಖಕ್ಕೆ ,ಹಣೆಗೆ, ತುಟಿಗೆ ಕಣ್ಣಿಗೆ ಏನೇನೋ ಮೆತ್ಕೊಂಡು,  ಕೈಗನ್ನಡಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತಾ ಆಚೆ ಈಚೆ ಬಂದವರನ್ನು ನೋಡುವ ಪರಿಯೇ ಚೆನ್ನ



ಅಜ್ಜಿ ಕೂಡಾ ಮೇಕಪ್ ಮಾಡಕ್ಕೆ ಶುರು ಮಾಡಿತು.ಸುಮಾರು ಹತ್ತದಿನೈದು ನಿಮಿಷ. ಎಲ್ಲಾ ಮುಗಿಸಿ ಕನ್ನಡಕವನ್ನೂ ಏರಿಸಿ, ಮೂಗಿನ ತುದಿಗೆ ಸರಿಸಿ ಕೈಯಲ್ಲಿ ಪುಸ್ತಕ ಇರಿಸಿ, ಅದೇನ್ ಆಸಕ್ತಿ ಅಂತೀರಾ ಎಷ್ಟೊತ್ತಾದರೂ ಒಂದೇ ಪುಟ, ಮುಂದೆ ತಿರುವು ಹಾಕಲೇ ಇಲ್ಲ. ಪುಸ್ತಕವೇನೂ ದೊಡ್ಡ ಗಾತ್ರದ್ದಲ್ಲ.ನನಗೆ ಒಂದ್ಕಡೆ ಭಯ ಮತ್ತೊಂದ್ ಕಡೆ ಕುತೂಹಲ, ಅಜ್ಜಿ ಅಲ್ಲಾಡ್ತಾ ಇಲ್ಲ ಅಯ್ಯೋ ಕೂತ್ಕಡೇನೇ ಏನಾದ್ರೂ ಗೊಟಕ್? ಯಪ್ಪಾ ಸಿವ ಸಿವ ಬೇಡಪ್ಪಾ ನನ್ನ ಕಣ್ಮುಂದೆ ಹಾಗಾಗೋದು ಅಂದ್ಕೊಂಡೆ ಹಾಗೇ ನನ್ನ ಕಾಲ್ಚೀಲ ಸರಿಮಾಡಿಕೊಳ್ಳುವ ನೆಪದಲ್ಲಿ ಆಕೆ ಹಿಡಿದ ಬುಕ್ ನೋಡಿದೆ ಬೈಬಲ್ಲು ! ಜೀಸಸ್ ಕ್ರೈಸ್ಟ್




ಅಷ್ಟರಲ್ಲಿ ಒಂದು ನಿಲ್ದಾಣ ಬಂತು, ರೈಲಿನ ಬ್ರೇಕ್ ಹಾಕಿದರೂ ಅಜ್ಜಿ ಅಲ್ಲಾಡ್ಲಿಲ್ಲ, ಅಯ್ಯೋ ಸ್ಟೇಷನಲ್ಲೇ ಇಳೀಬೇಕಿತ್ತೇನೋ ಮುದುಕಿ ಅಂತ ಕೇಳೋಣ ಅನ್ನಿಸಿತು, ಅಲ್ಲ ನಮಗ್ಯಾಗೆ ಇದ್ದೀತು ಅಂತ ಸುಮ್ಮನಿರೋ ಮನುಷ್ಯ ನಾನಲ್ಲ, ಏನೋ ಸಹಾಯ ಆಗ್ಬೋದು……..ಹೀಗೇ ಯೋಚಿಸುತ್ತಿದ್ದೆ ಟ್ರೈನ್ ಎರಡೂ ಮೂರು ಸ್ಟೇಷನ್ ದಾಟಿತು, ಅಜ್ಜಿ ಮಾತ್ರ ಅದೇ ಪುಟ ಸುಮಾರು ಹೊತ್ತು ಕಳೆದರೂ ತುಟಿಕ್ ಪಿಟಿಕ್ ಇಲ್ಲ.ಯಾವ ಸ್ಟೇಶನ್ ಅಂತ ಅನೌನ್ಸೇನೋ ಮಾಡ್ತಿದ್ರೂ ಅನ್ನಿ, ಅಲ್ಲ ಎಲ್ಲಿಗೆ ಬಂದಿದ್ದೀವಿ ಅಂತಾನಾದ್ರೂ ಒಂದೊಂದು ಸಾರಿ ತಲೆ ಎತ್ತಿ ನೋಡ್ಬಾರದೇ? ಎರಡು ದಿನದ ಕೆಳಗೆ ತಾನೇ ಓದಿದ್ದೆ ಯಾರೋಕೂತಕಡೇನೇ ಪ್ರಾಣ ಬಿಟ್ಟರುಅಂತ, ಹಿಂದೊಮ್ಮೆಅಂದು ರಾತ್ರಿ ಮಲಗಿದವರು ಮೇಲೆ ಏಳಲೇ ಇಲ್ಲಅನ್ನೋದೆಲ್ಲಾ ಜ್ಞಾಪಕ ಬಂತು ಅಷ್ಟರಲಿ ನಾನಿಳಿಯುವ ನಿಲ್ದಾಣ ಬಂದೇ ಬಿಟ್ಟಿತು, ಇಳಿಯೋಕ್ಕೆ ಮೊದಲು ಪಾಪ ಅಜ್ಜೀನ ಒಮ್ಮೆ ಬದುಕಿದೆಯೋ ಇಲ್ವೋ ಅಂತ ಖಾತರಿ ಮಾಡ್ಕೊಳ್ಳೋಣ, ಅಂತ ಧೈರ್ಯ ಮಾಡಿದೆ,excuse me ಎಂದೆ….. ಕೇಳಿಸಲಿಲ್ಲ ಮತ್ತೆ ಸ್ವಲ್ಪ ಗಟ್ಟಿಯಾಗಿ ಕೂಗಿದೆ ಊಹೂ ಇಲ್ಲ! ಪುಸ್ತಕ ಗಟ್ಟಿಯಾಗಿ ಹಿಡಿದಿದೆ ಅಜ್ಜಿ. ಬಾಗಿದ ತಲೆ, ಭಾಗಶಃ ಮುಚ್ಚಿದ ಕಣ್ಣು, ಸ್ವಲ್ಪವೇ ತೆರೆದ ಬಾಯಿ! ಭಯವಾಯ್ತು  ಮತ್ತಷ್ಟು ಧೈರ್ಯ ತುಂಬಿಕೊಂಡು ಆಕೆಯ ಕೈ ಅಲ್ಲಾಡಿಸೋಣ ಅಂತ ನನ್ನ ಕೈ ಹತ್ತಿರಕ್ಕೆ ತೆಗೆದುಕೊಂಡು….. ಅವಳ ಮುಖ ನೋಡಿದೆ, ಏನಾಯ್ತು ಗೊತ್ತಾ? ಅಜ್ಜಿ ಬಾಯಿಂದ ನಿಧಾನ ಜೊಲ್ಲು !  ಓಹೋ ಅಜ್ಜಿ ಸತ್ತಿಲ್ಲಾ ಸಧ್ಯ ಪ್ರಾಣ ಪಕ್ಷಿ ಗೂಡಲ್ಲೇ ಇದೆ! ಇನ್ನೊಂದು ಸುತ್ತು ಸುಖವಾಗಿ ಮಲಗಿರಲಿ ಅಂತ ಜಾಗ ಖಾಲಿ ಮಾಡಿದೆ

Comments

  1. 'ಮೌತ್ ಆಗಿದೆಯೋ ಇಲ್ವೋ ಅಂತ ಹೆದರಿದ್ದ ನಿಮಗೆ ಅವಳ mouth ಉತ್ತರ ಕೊಟ್ಟಿದ್ದು ಚೆನ್ನಾಯಿತು. With life I shall gel ಅನ್ನಕ್ಕೆ ಜೊಲ್ಲೇ ಸಾಕ್ಷಿಯಾಯ್ತೂನ್ನಿ!

    ReplyDelete
  2. ತಾವು ಓದಿ ಅಭಿಪ್ರಾಯ ತಿಳಿಸಿದ್ದೇ ನಮಗೆ ಪ್ರೋತ್ಸಾಹ, ಥಾಂಕ್ ಯು ರಾಮನಾಥ್ ಸರ್ .
    ಮನೆಯಿಂದ ಕೆಲಸ ಮಾಡಲು ಶುರು ಮಾಡಿದ ಮೇಲೆ ಈ ಥರದ ದೃಶ್ಯಗಳು ಸಿಗುತ್ತಿಲ್ಲ ಬಿಡಿ

    ReplyDelete

Post a Comment