ಶತಪಥದ ಶಕುನಜ್ಞ

ಶತಪಥದ ಶಕುನಜ್ಞ

ಹಾಸ್ಯ ಲೇಖನ ಅಣುಕು ರಾಮನಾಥ್



ಸ್ಲಿಪ್ಪಲಿ ನಿಂತಿಹ ಫೀಲ್ಡರಿನಂತೆ

ತೆಪ್ಪನೆ ಒಂದೆಡೆ ನಿಂತಿರುವೆ

ಗಪ್ಪನೆ ಕ್ಯಾಚನು ಅವ ಹಿಡಿವಂತೆಯೆ

ಹುಪ್ಪಟೆ ಹುಳಗಳ ಹಿಡಿಯುವೆನು


ಸ್ಪೈಡರ್ಮ್ಯಾನಿನ ಹಾಗೆಯೆ ಗೋಡೆಯ

ಸ್ಪೀಡಾಗೇರುವೆ ಜಾರದೆಯೆ

ಮೈಕ್ ಜಾಕ್ಸನ್ನಿನ ಮೂನ್‌ವಾಕ್‌ನಂತೆಯೆ

ಹೈಕ್ ಮಾಡುವೆ ಸ್ಟೆಪ್ ಎತ್ತದೆಯೆ


ಗೋಂದಿನ ಅಂಟಿನ ನಾಲಿಗೆ ಚಾಚುತ

ಸಂದಿಯಲೂ ಕ್ರಿಮಿಗಳ ಹಿಡಿವೆ

ಹೊಡೆಯಲು ಬಂದರೆ ಬಾಲವ ಬೀಳಿಸಿ

ಓಡಿ ಸುರಕ್ಷಿತ ಎಡೆ ಹಿಡಿವೆ


ವಿಷಯವ ತಿಳಿಯದ ಜನರೆಂಬುದು ಸಟೆ

ವಿಷವಿಲ್ಲವು ಈ ದೇಹದಲಿ

ಡೈನೋಸಾರ್‌ಗಳ ಜಾತಿಯು ನನ್ನದು

ಗೌರವವಿರಲಿ ನನ್ನಲ್ಲಿ


ಗೋಡೆಯ ಮೇಲಿನ ಹಲ್ಲಿಗೆ ‘ಹೂ ಆರ್ ಯೂ?’ ಎಂದು ಕೇಳಿದರೆ ಈ ವಿಧದ ವಿಸಿಟಿಂಗ್ ಕರ‍್ಡನ್ನು ಕೊಟ್ಟೀತು. ನನಗೆ ಅಸೂಯೆ ಹುಟ್ಟಿಸುವ ಅಗ್ರಪಂಕ್ತಿಯಲ್ಲಿರುವ ಜೀವಿಗಳ ಪೈಕಿ ಶಕುನವನ್ನು ಬಲ್ಲ, ತತ್ಕಾರಣ ಶಕುನಜ್ಞ ಎಂಬ ಬಿರುದನ್ನು ಪಡೆದಿರುವ ಹಲ್ಲಿಯೂ ಒಂದು.

ಹಲ್ಲಿಯನ್ನು ಕಂಡರೆ ಅಸೂಯೆ ಪಡುವುದು ನಾನೊಬ್ಬನೇ ಅಲ್ಲ. ವಿಮೆನ್ಸ್ ಹಾಸ್ಟೆಲಿನ ಹಿತ್ತಿಲಿನ ಎತ್ತರದ ಕಾಂಪೌಂಡಿನ ಬಳಿ ನಿಂತ ಹುಡುಗ, ಜೈಲಿನಿಂದ ಹೇಗಾದರೂ ತಪ್ಪಿಸಿಕೊಳ್ಳಲೆಂದು ಗೋಡೆಗಳತ್ತ ಕಣ್ಣುಹಾಯಿಸಿದ ಖೈದಿ, ತೊನೆದಾಡುತ್ತಿರುವ ಮಾವಿನಹಣ್ಣುಗಳಿಂದ ಆವೃತವಾದ ಮರವನ್ನು ಕಂಡ ಫಲಕಾಮಿ, ಮೊದಲಾದವರೆಲ್ಲರೂ ಹಲ್ಲಿಯ ಗೋಡೆಯೇರುವ ಚಟುಲತೆ, ಚಾಕಚಕ್ಯತೆಗಳು ತಮಗಿಲ್ಲವಲ್ಲ ಎಂದು ಕೊರಗುವವರೇ.

ನಾನು ನಮ್ಮ ಅಡುಗೆಮನೆಯ ಕುಕಿಂಗ್ ಪ್ಲಾಟ್‌ಫಾರ್ಮ್ಗಿಂತಲೂ ಕುಳ್ಳಗಿದ್ದ ದಿನಗಳು. ವಿಶ್ವವನ್ನು ವಿಸ್ಮಿತನಾಗಿ ಕಾಣುವುದೇ ಜೀವನವೆಂದು ನಂಬಿದ್ದ ಸಮಯ. ಅಡುಗೆಮನೆಯ ಕಟ್ಟೆಯ ಇತ್ತಲಿನ ಜಾಗದಲ್ಲೊಂದು ಬಚ್ಚಲು; ಅಲ್ಲೊಂದು ನಲ್ಲಿ; ನಲ್ಲಿಯ ಮೇಗಣ ಗೋಡೆಯ ಮೇಲೆ ಪೊಲೀಸ್ ಯೂನಿಫಾರ್ಮಿನ ತುಣುಕೊಂದಕ್ಕೆ ಕಂಗಳೆರಡನ್ನು ಜೋಡಿಸಿದಂತಹ ಆಕೃತಿಯು ಗೋಡೆಗೆ ಆತುಕೊಂಡೇ ನನ್ನತ್ತ ಇನ್ವಿಜಿಲೇಟರನು ಕಾಪಿ ಹೊಡೆಯುತ್ತಿರಬಹುದೆಂಬ ಗುಮಾನಿ ಹುಟ್ಟಿಸಿದ ವಿದ್ಯಾರ್ಥಿಯತ್ತ ನೋಡುವಂತೆ ನೋಡುತ್ತಿತ್ತು. ‘ಅಮ್ಮ, ಅದೇನು?’ ಅಂದೆ.

‘ಹಲ್ಲಿ’ ಎಂದಳು ಅಮ್ಮ.

‘ಅದು ಯಾಕೆ ನೋಡಕ್ಕೆ ಆ ತರಹ ಇದೆ?’

‘ಅದು ಹೋದ ಜನ್ಮದಲ್ಲಿ ಬಾಯಾರಿದವರಿಗೆ ನೀರು ಕೊಡಲಿಲ್ಲವಂತೆ. ಹಿಂದಿನ ಜನ್ಮದಲ್ಲಿ ನೀರು ಕೊಡದಿದ್ದವರು ಮುಂದಿನ ಜನ್ಮದಲ್ಲಿ ಹಲ್ಲಿ ಆಗಿ ಹುಟ್ತಾರೆ’ ಎಂದಳು. ಅಮ್ಮ ಆಕೆ ಏಕೆ ಹಾಗೆಂದಳೋ ಅರಿಯೆ. ಆದರೆ ಮುಂದಿನ ಸರತಿಯಿಂದ ಅದು ಸಿಕ್ಕಾಗಲೆಲ್ಲ ಅದರತ್ತ ನೀರೆರಚಲು ಆರಂಭಿಸಿದೆ.

‘ಅದಕ್ಯಾಕೋ ನೀರೆರಚ್ತೀಯಾ? ಅದೇನು ಸ್ನಾನ ಮಾಡಿ ಪೂಜೆ ಮಾಡಬೇಕಾ?’ ಅಮ್ಮ ಕೇಳಿದಳು.

‘ಅದಕ್ಕೆ ನೀರು ಎರಚಿದರೆ ಶಾಪ ಹೊರಟುಹೋಗಿ ಮತ್ತೆ ಮನುಷ್ಯ ಆಗತ್ತಲ್ವಾ?’

ನಿಜಕ್ಕೂ ಹಾಗೆಂದೇ ನಾನು ನಂಬಿದ್ದೆ. ‘ನೋಡ್ತಾ ಇರೋ. ಒಂದಲ್ಲ ಒಂದು ದಿವಸ ಹಲ್ಲಿ ಢಣ್ ಅಂತ ಮನುಷ್ಯ ಆಗಿ ಗೋಡೆಯಿಂದ ಕೆಳಕ್ಕೆ ಜಂಪ್ ಮಾಡತ್ತೆ’ ಎಂದು ತಮ್ಮನಿಗೂ ಹೇಳುತ್ತಿದ್ದೆ.

ಕಾಲ ಕಳೆಯಿತು. ಹಲ್ಲಿ ಹಲ್ಲಿಯೇ; ಹಲ್ಲಿ ಅಲ್ಲಿಯೇ ಎಂದು ತೀರ್ಮಾನವಾಗಿತ್ತು. ಅದರ ಬಗ್ಗೆ ಹೆಚ್ಚು ತಿಳಿದಷ್ಟೂ ಅಸೂಯೆ ಹೆಚ್ಚಾಗತೊಡಗಿತು.

ನೀವೇ ಹೇಳಿ ಸಾರ್, ನಿಮ್ಮ ಜೀವನದಲ್ಲಿ ಎಷ್ಟೆಷ್ಟೋ ಕಡೆ ಬಿದ್ದಿರುತ್ತೀರಿ. ಸಿನೆಮಾ ಥಿಯೇಟರುಗಳಲ್ಲಿ ಕತ್ತಲಲ್ಲಿ ಕುಳಿತವರ ವಿವಿಧ ಅಂಗಗಳ ಮೇಲೆ ಕುಕ್ಕರಿಸಿಯೋ, ಎಡವಿಯೋ ಬಿದ್ದಿರುತ್ತೀರಿ. ಎಂದಾದರೂ, ಎಲ್ಲಿಯಾದರೂ ಅಂತಹ ಬೀಳಿನ ಕುರಿತಾಗಿ ‘ಮಾನುಷಪತನ ಫಲ’ ಎಂದು ದಾಖಲಿಸಿರುವುದನ್ನು ಕಂಡಿರುವಿರಾ? ಹಲ್ಲಿಯು ಅಟ್ಟದಿಂದಲೋ, ಕಿಟಕಿಯ ಮೇಲ್ತುದಿಯಿಂದಲೋ ನಮ್ಮ ಮೇಲೆ ಜಂಪಿಸಿದರೆ, ತ್ವರಿತವಾಗಿ ಜ್ಯೋತಿಷಿಯನ್ನು ಕಂಡು, ಪಂಚಾಗಶ್ರವಣ ಮಾಡಿಸಿ, ‘ಗೌಳಿಪತನಫಲ’ವನ್ನು ಅರಿತೇ ಮುಂದುವರಿಯುತ್ತೇವೆ. ಒಂದು ಹುಲು ಜಂತುವಿಗೆ ಇರುವ ‘ಪಂಚಾಂಗಪ್ರಾಮುಖ್ಯ’ ಫುಲ್ ಮಾನವನಿಗೆ ಇಲ್ಲವಲ್ಲ, ಹೊಟ್ಟೆಯಲ್ಲಿ ಗುಂಟೂರ್ ಮೆಣಸಿನಕಾಯಿ ರುಬ್ಬಿದಂತಾಗುವುದಿಲ್ಲವೆ?

ಬಳ್ಳಾರಿ ಬೀಚಿಯವರ ‘ಗೌಳಿಪತನಫಲ’ ಲೇಖನವು ಇಲ್ಲಿ ಪ್ರಸ್ತುತ. ತಿಂಮ ಹಿತ್ತಿಲಲ್ಲಿ ಏನೋ ಕೆಲಸ ಮಾಡಲು ಹೋದ. ಮೇಲಿದ್ದ ಹಲ್ಲಿಗೆ ತಿಂಮನನ್ನು ಹಂಡ್ರೆಡ್ ಮೀಟರ್ ಹರ್ಡಲ್ ರೇಸಿನ ಒಂದು ಅಂಗವಾಗಿ ಪರಿಗಣಿಸಬೇಕೆನಿಸಿತೇನೋ, ತಾನಿದ್ದಲ್ಲಿಂದ ನೇರವಾಗಿ ತಿಂಮನತ್ತ ಜಿಗಿದು, ಹಣೆಯ ಬಳಿ ಸರ್ಕಲ್ಲನ್ನು ಸ್ಪರ್ಶಿಸಿ ಸಾಗುವ ಟ್ಯಾಂಜಂಟಿನಂತೆ ತಗುಲುತ್ತಾ, ತನ್ನ ಬೀಳುಯಾನವನ್ನು ಮುಂದುವರಿಸಿತು. ತಿಂಮ ಪಂಚಾಗ ತಿರುವಿದ. ‘ಕೇಶಾಂತೇ ಮೃತ್ಯುಭಯಂ’! ಅಂದೆಲ್ಲ ಹೊರಹೋಗದೆ, ಮನೆಯಲ್ಲಿಯೂ ತೊಲೆ ಮೈಮೇಲೆ ಬಿದ್ದೀತೆಂದು ಎರಡು ಜಂತಿಗಳ ನಡುವೆ ಮಲಗಿ, ದಿನಗಳೆದರೆ ಸಾಕೆಂದು ಪತರಗುಟ್ಟಿದ. ರಾತ್ರಿ ಮಲಗಲು ಸಿದ್ಧನಾಗುತ್ತಿದ್ದಾಗ ‘ಥೂ! ಬೆಳಗ್ಗಿನಿಂದ ಇಲ್ಲೇ ಸುತ್ತುತ್ತಿತ್ತು. ಬಾಗಿಲಿಗೆ ಸಿಕ್ಕಿ ಸಾಯಿತು’ ಎಂದು ಹಲ್ಲಿಯ ಬಗ್ಗೆ ಮಡದಿಯು ಬಿರುಕಂಠದಲ್ಲಿ ವಾರ್ತೆ ಬಿತ್ತರಿಸಿದಾಗಲೇ ‘ಮನುಷ್ಯನ ಕೇಶದ ತುದಿಯಲ್ಲಿ ಬಿದ್ದರೆ ಮೃತ್ಯುಭಯವು ಮನುಷ್ಯನಿಗಲ್ಲ, ಹಲ್ಲಿಗೆ’ ಎಂದು ತಿಳಿದುಬಂದದ್ದು! ಮಾನವರು ಬಳಸುವ ಪಂಚಾಂಗದಲ್ಲಿ ಅನಕ್ಷರಸ್ಥ ಹಲ್ಲಿಯ ಭವಿಷ್ಯ ಬರೆದಿರುವುದು ಜಗದ ಸೋಜಿಗಗಳಲ್ಲೊಂದೇ ಸೈ. 



ಹಲ್ಲಿಯ ಮತ್ತೆರಡು ಅಂಶಗಳೂ ನನ್ನ ಮತ್ಸರಕ್ಕೆ ಕಾರಣವಾಗಿವೆ. ಮೊದಲ ಕಾರಣ ಅದರ ಬಾಲ. ಅಂದೊಮ್ಮೆ ಬಡುವಿನಲ್ಲಿಟ್ಟ ಊಟದ ತಟ್ಟೆಯಮೇಲೆಲ್ಲ ಓಡಾಡುತ್ತದೆಂದು ಹಲ್ಲಿಯ ಕಿಚನೋಚ್ಚಾಟನೆ ಮಾಡುವ ಘನಕಾರ್ಯವನ್ನು ನನಗೆ ಒಪ್ಪಿಸಲಾಯಿತು. ನೆಲಕ್ಕೆ ನೋವಾಗದಂತೆ ನವಿರಾಗಿ ಗುಡಿಸಲು ಬಳಸುವ ಬಾಂಬೆ ಪೊರಕೆಯನ್ನು ಹಿಡಿದು, ಹಲ್ಲಿಯಮೇಲೆ ಜಪ್ಪನೆ ಮುಗಿಬಿದ್ದು, ಪೊರಕೆಯ ದಳಗಳ ಮಧ್ಯೆ ಹಲ್ಲಿಯನ್ನು ಮಲಗಿಸಿಕೊಂಡು ‘ಗೃಹಚಾಮರಶಯನೋತ್ಸವ’ದಲ್ಲಿ ಅದನ್ನು ಹೊರಗೊಯ್ಯುವ ಹುನ್ನಾರಕ್ಕೆ ಕೈಹಾಕಿದೆ. ಆ ದೃಶ್ಯವನ್ನು ಅದೆಂತು ಬಣ್ಣಿಪುದೋ!

ಸುಯ್ಯನೆ ಪೊರಕೆಯು ಹಾರಿದೊಡಂ ಪಲ್ಲಿಯ ದೇಹವನಾಂತು ಪಿಡಿದು ಹೊರ

ಗೊಯ್ಯಲು ಪೊರಮೊಡೆಂ ದಳದ ಸಂದುಗೊಂದಿನಿಂ ಜಿಗಿದಿರ್ದೊಡೆಂ |

ಟ್ರೊಯ್ಯನೆ ಪೃಚ್ಛವಂ ಕಾಣ್ಕೆಯಿತ್ತಡೋಡಿದೊಡೆಮೇನೆಂಬೆ ನಾ

ಬಯಸುವೆನಂಥವೇ ಎಮ್ಮಯ ದೇಹದೊಳ್ ಸ್ಪೇರ್ ಪಾರ್ಟುಗಳಂ ||

ಜಸ್ಟ್ ಥಿಂಕ್ ಆಫ್ ದೀಸ್ ಪಾಸಿಬಲಿಟೀಸ್... ಚಿನ್ನದ ಸರ ಧರಿಸಿ ಸಾಗುತ್ತಿರುತ್ತೀರಿ, ‘ಜರಾ ಪಾಸ್ ಆವೋ, ತೋ ಚೈನ್ ಆ ಜಾಯೇ’ ಎನ್ನುತ್ತಾ ಚೈನ್ ಸ್ನಾಚಾರ್  ಬರುತ್ತಾನೆ. ಕತ್ತು ಹೋದರೂ ಸರಿ, ಸರ ಬಿಡುವುದಿಲ್ಲವೆಂದು ಉಡದ ಪಟ್ಟು ಹಿಡಿಯುತ್ತೀರಿ; ಕಳ್ಳ ಕತ್ತು ಕತ್ತರಿಸುತ್ತಾನೆ. ‘ಹೋದರೊಂದು ಕತ್ತಷ್ಟೇ’ ಎನ್ನುತ್ತಾ ನೀವು ಸಾಗುತ್ತೀರಿ. ಬೀದಿಮೂಲೆಗೆ ತಲುಪುವ ಹೊತ್ತಿಗೆ ಹೊಸ ಕತ್ತು ಬಂದಿರುತ್ತದೆ! ಅದಲ್ಲವೇ ನಿಜವಾಗಲೂ ಅಚ್ಛೇ ದಿನ್! ಹಲ್ಲಿಯ ಬಾಲಕ್ಕಿರುವ ‘ಡೆವಲಪಿಂಗ್ ಎಬಿಲಿಟಿ’ ಮನುಷ್ಯನ ಕತ್ತಿಗೂ ಇರಬೇಕಾಗಿತ್ತಲ್ಲವೆ? ಅಂತೆಯೇ ಸಿಕ್ಕಸಿಕ್ಕವರೊಡನೆ ಫೈಟ್ ಮಾಡಿ ಕೈ, ಕಾಲು, ಬೆರಳು ಮುಂತಾದವನ್ನು ಆಟೋಮ್ಯಾಟಕಲಿ ರೀಪ್ಲೇಸ್ ಮಾಡಿಕೊಳ್ಳುವ ತಾಕತ್ತು ಮನುಷ್ಯನಿಗೆ ಇರಬೇಕಿತ್ತು. ದೇವ ಪಕ್ಷಪಾತಿ. ಹಲ್ಲಿಗೆ ಬಂದದ್ದು ಬಾಯ್ (boಥಿ) ಗೆ ಬರಲಿಲ್ಲ!

ಹಲ್ಲಿಯ ಮತ್ತೊಂದು ಮತ್ಸರಜನಕ ಅಂಶವೆಂದರೆ ಅದರ ನಾಲಿಗೆ. ಅರ್ತ್ ಮೂವಿಂಗ್ ಎಕ್ವಿಪ್‌ಮೆಂಟ್‌ಗಳು ನಿಂತಲ್ಲಿಂದಲೇ ದೂರದ ಬಂಡೆಗಳನ್ನು ಬಳಿಗೆ ಸೆಳೆದುಕೊಳ್ಳುವಂತೆಯೇ ಹಲ್ಲಿಯೂ ತಾನಿರುವಲ್ಲಿಂದಲೇ  ನಾಲಿಗೆಯನ್ನು ಅಷ್ಟೊಂದು ದೂರಕ್ಕೆ ಚಾಚಿ ಹುಳುಹುಪ್ಪಟೆಗಳನ್ನು ಹಿಡಿಯುವುದನ್ನು ಕಂಡಾಗಲೆಲ್ಲ ದೇವನ ಅನ್ಯಾಯದ ಬಗ್ಗೆ ಸಂಪು, ಧರಣಿ, ಮುಷ್ಕರ, ಸತ್ಯಾಗ್ರಹ, ಒಂದು ದಿನದ ಮಟ್ಟಿಗಾದರೂ ಆಮರಣಾಂತ ಉಪವಾಸಗಳನ್ನು ಕೈಗೊಳ್ಳಬೇಕೆನಿಸುತ್ತದೆ. ನಮಗೂ ಅಂತಹದ್ದೊಂದು ನಾಲಿಗೆಯನ್ನು ಕರುಣಿಸಿದ್ದರೆ ಆ ಬ್ರಹ್ಮನ ಗೋಡೌನು ಬಡವಾಗುತ್ತಿತ್ತೇನು? ಕುಳಿತಲ್ಲಿಂದಲೇ ಚಿಪ್ಸ್, ಚೀಸ್, ಚಿಕ್ಲೆಟ್ಸ್, ಚಾಕೋಸ್‌ಗಳನ್ನು ಜಿಹ್ವಾಕರ್ಷದಿಂದಲೇ ಸೆಳೆದು ತಿನ್ನಬಹುದಿತ್ತಲ್ಲ! ೨೪/೭ ಕೆಲಸ ಮಾಡುವವರು ತಮ್ಮ ಹತ್ತೂ ಬೆರಳುಗಳಿಗೆ ಕೆಲಸ ಕೊಡುತ್ತಲೇ ಈಟ್ ಫ್ರಂ ಚೇರ್ ಸೌಲಭ್ಯವನ್ನು ಪಡೆಯಬಹುದಿತ್ತಲ್ಲಾ!

ನೀವೇನೋ ನುಡಿಯುತ್ತೀರಿ; ಹಲ್ಲಿ ಲೊಚಗುಡುತ್ತದೆ. ‘ಓ! ಅದು ನಿಜ ಅಂತೆ!’ ಎನ್ನುತ್ತಾನೆ ನಿಮ್ಮ ಸಹವಾದಿ. ಕೋರ್ಟಿನಲ್ಲಿ ಭಗವದ್ಗೀತೆಯನ್ನು ಮುಟ್ಟಿಸಿದರೂ ನಿಜ ಹೊರಬೀಳದ ಪ್ರಸಂಗಗಳು ಅನೇಕವಿರುವಾಗ ಎಲ್ಲೋ ಕುಳಿತು ಮಾತುಗಳನ್ನು ಕದ್ದು ಕೇಳಿಸಿಕೊಳ್ಳುವ ಹಲ್ಲಿಯು ಯಾವುದು ನಿಜವೆಂದು ನಿರ್ಧರಿಸುವ ಪರಿ ಪ್ರಪಂಚದ ಅದ್ಭುತಗಳಲ್ಲಿ ಒಂದು ಅಲ್ಲವೇ? ಕೋರ್ಟಿನಲ್ಲಿಯೂ ಹಲ್ಲಿಗಳನ್ನು ಸಾಕಿ, ವಾದಿ-ಪ್ರತಿವಾದಿಗಳಿಗೆ ಮಾತನಾಡಲು ಆದೇಶಿಸಿ, ಹಲ್ಲಿ ಲೊಚಗುಟ್ಟಿದಾಗಿನ ವಿಷಯವನ್ನೆಲ್ಲ ನಿಜವೆಂದು ದಾಖಲಿಸಿಕೊಂಡರೆ ನ್ಯಾಯದ ಹಾದಿಯೂ ಸುಗಮವಾದೀತು. ಹಲ್ಲಿ ಪ್ರಪಂಚದ ಮೊಟ್ಟಮೊದಲ ಟ್ರೂತ್ ಡಿಟೆಕ್ಟರ್!

ಹಲ್ಲಿಯ ಕಸಿನ್‌ಗಳಾದ ಉಡ, ಊಸರವಳ್ಳಿ, ಮೊಸಳೆ ಮುಂತಾದವುಗಳ ಬಗ್ಗೆ ಬಹಳ ಹೇಳುವುದಿದೆ. ಭುವಿಗೇ ನರ‍್ಗಿಂತ ಮೊದಲು ಪ್ರವೇಶಿಸಿದ ಪಲ್ಲಿಯು ನಾವು ಗೃಹಪ್ರವೇಶವನ್ನು ಮಾಡುವುದಕ್ಕೆ ಮುಂಚೆಯೇ ಒಳಸೇರುವುದು ಅದರ ಆ ಜನ್ಮ ಹಕ್ಕು! ನಮ್ಮ ಮನೆಗೇ ನಮ್ಮನ್ನು ‘ಪ್ಲೀಸ್ ಕಮಿನ್; ಟ್ರೀಟ್ ದಿಸ್ ಆಸ್ ಯುವರ್ ಓನ್ ಹೌಸ್’ ಎಂದು ಲೊಚಸ್ವಾಗತ ಕೋರುವ ಹಲ್ಲಿಗೆ ಒಂದು ಮೆಚ್ಚುಗೆಯ ಲೊಚ್ ಲೊಚ್ ಎನ್ನೋಣವೇ?  


 

Comments

  1. ಎಂದಿನಂತೆ ಗದ್ಯದಲ್ಲೂ ಪದ್ಯದಲ್ಲೂ ನಿಮ್ಮ ಕಲ್ಪನಾ ಶಕ್ತಿ ಬೆರಗು ಮಾಡುತ್ತದೆ
    ಹಲ್ಲಿಯು ನವಗ್ರಹಗಳಲ್ಲಿ ಒಂದಾದ ಕೇತುವಿನ ಪ್ರತೀಕವಂತೆ. ಅಂದಮೇಲೆ ಅದನ್ನು ಎದುರು ಹಾಕಿಕೊಳ್ಳಲಾಗದು. ಅದೂ ಅಲ್ಲದೆ ದೀಪಾವಳಿಯ ದಿನ ಗೋಡೆಯ ಮೇಲಿನ ಹಲ್ಲಿಯನ್ನು ನೋಡಿದರೆ ಧನಲಾಭವಾಗುವ ಸಂಭವವಿದೆ! ನೆನಪಿನಲ್ಲಿಡ ಬೇಕಾದ ವಿಷಯ!

    ReplyDelete
  2. ಹಲ್ಲಿಗಳು ಜನುಮೇಪಿ ನೀರು ಕುಡಿಯಲ್ಲ ಎನ್ನುವ ಮಾತು ಇದೆ. ಒಟ್ಟಿನಲ್ಲಿ ಶಕುನ ನುಡಿಯುವ ಗವಳಿಯನ್ನು ಬಾಲ ಮುರಿದು ಬಿದ್ದರೂ ಹಿಂಬಾಲಿಸಿ ಹಾಸ್ಯ ಹೆಣೆದಿದ್ದೀರಿ. ಅತ್ಯದ್ಭುತ ಲೇಖನ ಇದು.

    ReplyDelete

Post a Comment