ಕೈಲಾಸಂ ಕಂಡುಬಂದಾಗ

ಕೈಲಾಸಂ ಕಂಡುಬಂದಾಗ

 ಹಾಸ್ಯ ಲೇಖನ - ಅಣುಕು ರಾಮನಾಥ್


ಸಂಜೆ. ಕೆಂಪಾಂಬುದಿ ಕೆರೆಯ ಅಂಗಳದಲ್ಲಿ ಕುಳಿತಿದ್ದೆ. ಇದ್ದಕ್ಕಿದ್ದಂತೆ ಪರಿಚಿತ ಆಕೃತಿಯೊಂದು ನನ್ನೆದುರು ಪ್ರತ್ಯಕ್ಷವಾಯಿತು.


‘ಹಾಯ್ ಕೈ’ ಎಂದೆ.

‘ಹಾಯ್ ಬಾಯ್’ ಎಂದರು ಕೈಲಾಸಂ.

‘ಎರಡೇ ಪದಗಳಲ್ಲಿ ಇಂದಿನ ಕಲ್ಚರ್ರನ್ನೇ ಸೂಚಿಸಿಬಿಟ್ಟಿರಲ್ಲ ಸಾರ್!’

‘ಸಿರಿ culture ಮುಂದೂಸ್ಥಾನಕ್ ಬಂದ್ರೆ heart ಕಲ್ಚರ್‍ಗೆ ಹಿಂದು ಸ್ಥಾನವೇ ಕಪ್ಪೂ.’

‘ಕಪ್ಪೂ?’

‘ಕಪ್ಪೂ ನನ್ನ ನಾಟಕಗಳ ಪ್ರಿನ್ಸಿಪಲ್ ಕ್ಯಾರೆಕ್ಟರ್ though devoid of principlesಉ at timesಉ. ಯೂ ರಿಮೈಂಡ್ ಮಿ ಆಫ್ ಹಿಮ್. ಪ್ರತಿ ವ್ಯಕ್ತಿಯೂ ಕಪ್ಪೇ ಮೈ ಬಾಯ್. ಕೆಲವರಿಗೆ cup of joy; ಕೆಲವರಿಗೆ cup of sorrow.’

‘ಈ ದಿನ ನಿಮ್ಮ ಜನ್ಮದಿನ.’

‘Birth is an accident. ಬರ್ತ್ ಆದ್ಮೇಲೆ ಬರ್ತಾ ಬರ್ತಾ ನಿನ್ನ ಜೀವನದ berthನಲ್ಲಿ ಹೇಗೆ ಪ್ರಯಾಣ ಮಾಡ್ತೀಯಾ ಅನ್ನೋದೇ ಮೋಸ್ಟ್ ಇಂಪಾರ್ಟೆಂಟು.’

‘ಹೇಗಿರ್ಬೇಕು ಸರ್?’

‘ಸಮಾಜದ ಸಾಮರಸ್ಯ dent ಆಗದೆ verdant ಆಗೋಹಾಗೆ ಜೀವಿಸೋದೇ ಬದುಕಿನ ಸೆನ್ಸು, ಎಸೆನ್ಸು.’

‘ಈಗಿನ ರಾಜಕೀಯದ ಬಗ್ಗೆ ಏನ್ಹೇಳ್ತೀರಿ?’

‘ಈಗಿನ ಲೀಡರ್ಸ್‍ಗೆ ಕಂಪೇರ್ ಮಾಡಿದರೆ ‘ಅಮ್ಮಾವ್ರ ಗಂಡ’ ನಾಟಕದ ಸುಬ್ಬೂ ಮನೆಯ ಟೈಗರ್ರೇ ವಾಸಿ.’

‘ಹೇಗೆ?’

‘ಆ ಡಾಗ್ ಆದ್ರೂ ‘ಟು ಕಿತ್ಕೊಳ್ಳೂ or ನಾಟ್ ಟು ಕಿತ್ಕೊಳ್ಳೂ’ ಅಂತ ಕಾಂಟೆಂಪ್ಲೇಟ್ ಮಾಡ್ತಿತ್ತು. ಇವರದು ‘ಟು ಕಿತ್ಕೊಳ್ಳೂ’ ಒಂದೇ ಗುರಿ. ಆ ಡಾಗ್‍ದೋ ನೇರವಾದ ಅಪ್ರೋಚು; ಈ ಲೀಡರ್‍ಗಳದು dogged ಅಪ್ರೋಚು!’

‘ಗಾಂಧೀಜಿಯವರನ್ನ ಕ್ಲೋಸ್ ಕ್ವಾರ್ಟರ್ಸ್ ಇಂದ ನೋಡಿದ ನಿಮಗೆ ಇವರೆಲ್ಲ ಇಷ್ಟವಾಗದಿರೋದು ಸಹಜವೇ.’

‘ನಿಜ ನನ್ರಾಜಾ... Goat’s milk ಕುಡ್ಕೊಂಡಿದ್ದೂ ಇಡೀ ದೇಶದವರಿಗೆ Go To ವ್ಯಕ್ತಿ ಆಗಿದ್ದೇನು ಸಾಮಾನ್ಯ ಸಾಧನೆ ಅಲ್ಲ.’

‘ನಮ್ಜನ ಅವರ ತತ್ವಗಳ ಅನುಸರಣೆಯನ್ನೇ ನಿಲ್ಲಿಸಿಬಿಟ್ರಲ್ಲಾ ಸಾರ್!’

‘ಆದರೆ ಅವರ ಎರಡು ಚಳುವಳಿಗಳನ್ನ ಇಂದಿಗೂ ಜೀವಂತವಾಗಿ ಇಟ್ಕೊಂಡಿದ್ದಾರೆ.’

‘ಹೌದಾ? ಯಾವುವು?’

‘ಸಿವಿಲ್ ಡಿಸೊಬೀಡಿಯೆನ್ಸ್ ಮೂಮೆಂಟ್, ನಾನ್ ಕೋಆಪರೇಷನ್ ಮೂಮೆಂಟ್.’

‘ಅವು ಈಗೆಲ್ಲಿ ಚಾಲ್ತೀಲಿವೆ ಮಿಸ್ಟರ್ ಕೈಲಾಸಂ?’

‘ಎಲ್ಲೆಲ್ಲೂ ಮೈ ಬಾಯ್. ಕ್ರಿಮಿನಲ್‍ನ obey ಮಾಡುವಷ್ಟು ಸಲೀಸಾಗಿ ಸಿವಿಲ್‍ ಸರ್ವೀಸವರನ್ನ ಒಬೇ ಮಾಡಲ್ಲ ನಮ್ಜನ.  ಎಬೌಟ್ ಅಸಹಕಾರ, ರೈಟ್ ಫ್ರಂ ದ ಡೈನಿಂಗ್ ಹಾಲೂ ಟು ದ ಅಸೆಂಬ್ಲಿ ಹಾಲೂ ಎಲ್ಲ ಕಡೆಯೂ ಡೆವೆಲಪ್ಮೆಂಟಲ್ ಪಾಲಿಸೀನ್ನೋ ಹಾಲಿಗೆ ಅಸಹಕಾರ ಎಂಬೋ ಹುಳಿ ಹಿಂಡಿ ತಲೆಯನ್ನ ಮೊಸರಿನ ಗಡಿಗೆ ಮಾಡೋ ಜನಗಳು ಪ್ಲೆಂಟಿಫುಲ್ಲೂ!’

‘ನೀವು ಕೋಲಾರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟಿದ್ದು ಯಾಕೆ?’

‘ಒಗ್ಲಿಲ್ಲ ರಾಜಾ. ಪೆಲಿಕಾನ್ ಪಕ್ಷಿಗೆ ಪಂಜರದಲ್ಲಿ ಪ್ರಿಸನರ್ ಆಗಿರೋದು ಒಗ್ಗಲ್ಲ. ಆ ಗೋಲ್ಡ್ ಮೈನ್ ನೆವೆರ್ ಫೆಲ್ಟ್ ಲೈಕ್ ಇಟ್ ವಾಸ್ ಮೈನ್.’

‘ನಿಮ್ಮ ತಂದೆ ನಿಮ್ಮನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಿದರು...’

‘ವೇಸ್ಟ್ ಏನಾಗಲಿಲ್ಲ. ಒಂದೇ ಬೆಂಕಿಕಡ್ಡಿಯಲ್ಲಿ ಎಷ್ಟೇ ಜೋರು ಗಾಳಿಯಲ್ಲೂ ಸಿಗರೇಟ್ ಸೇದೋದನ್ನ ನಾನು ಅಲ್ಲೇ ಕಲಿತದ್ದು.’

‘ನಿಮ್ಮ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸಗಳಾಗಿವೆ...’

‘ಮನುಷ್ಯನ ಸ್ವಭಾವದಲ್ಲೇನೂ ವ್ಯತ್ಯಾಸ ಆಗಿಲ್ಲ. ದುರ್ಯೋಧನನ ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯ ಇತ್ತು. ಯುಧಿಷ್ಠಿರನ ಕಡೆ ಆರು ಮತ್ತೊಂದು.’

‘ಏಳು ಅಂತಾನೇ ಹೇಳಬಹುದಲ್ಲ?’

‘ನಮ್ಕಾಲ್ದಲ್ಲಿ ವ್ಯಾಪಾರಸ್ಥ ಶೆಟ್ಟರು ಕನ್ನಡದಲ್ಲಾಗ್ಲಿ, ತೆಲುಗಿನಲ್ಲಾಗ್ಲಿ ಏಳು/ಏಡು ಅಂತಿರ್ಲಿಲ್ಲ. ಏಳು ಅನ್ನಕ್ಕೆ ಬೀಳು ಅನ್ನೋದೇ ಪ್ರಾಸ; ವ್ಯಾಪಾರದಲ್ಲಿ ಬೀಳು ಉಂಟಾಗತ್ತೇಂತ್ಲೂ, ಏಡು ಅಂಟೆ ಏಡ್ಚೇದಿ, ಮೇಮೂ ನವ್ವೂಲ್ನೇಗಾನಿ ಏಡ್ಚೇದಿ ಅನಿ ಅರ್ಥಮುಂದೇ, ಮೇಮಿ ಏಡ್ಚೇದ್ದೂಂತ್ಲೂ ಆರರ್ಮೇಲೊಂದೂಂತೇನೇ ಹೇಳ್ತಿದ್ರು. ಕಮಿಂಗ್ ಬ್ಯಾಕ್ ಟು ಧರ್ಮಜನ ಕುರುಕ್ಷೇತ್ರ, ಸಿನ್ನರ್ಗಿರೋ ಪುಲ್ಲಿಂಗ್ ಪವರ್ರು ಪುಣ್ಯಾತ್ಮನ್ಗಿಲ್ಲಾನ್ನೋದು ಕೃಷ್ಣನ್ಕಾಲ್ದಲ್ಲೇ ಸಾಬೀತಾಗಿತ್ತು ಕಪ್ಪೂ.’

‘ಜ್ಞಾನದ ಬಾಬ್ತಲ್ಲಿ ಹಾಗೇ ಇದ್ರೂ ವಿಜ್ಞಾನದ ಬಾಬ್ತಲ್ಲಿ...’

‘ಅಜ್ಞಾನದ ಬಾಬ್ತಲ್ಲೀಂತ್ಲೂ ಸೇರ್ಸೂ ಕಪ್ಪೂ. ಮನುಷ್ಯ ಒಂದ್ವಿಧದಲ್ಲಿ ರಿವರ್ಸ್ ಟಗರು.’

‘ರಿವರ್ಸ್ ಟಗರೂ?’

‘ಟಗರೂ ಮೂವ್ಸ್ ಬ್ಯಾಕು ಬಿಫೋರ್ ಅಟ್ಯಾಕು. ಮ್ಯಾನ್‍ಕೈಂಡೋ... ಕೈಂಡ್ ಎಲ್ಬಂತೂ... ಅನ್‍ಕೈಂಡೇ ಸರಿ... ಬಟ್ ಪ್ರಾಣಿ ಆಫ್ ಎ ಕ್ರೂಯಲ್ ಕೈಂಡು..’

‘ಕ್ರೂಯಲ್ ಕೈಂಡೇ? ವಾಟ್ ಎನ್ ಆಕ್ಸಿಮೊರೋನ್ ಸಾರ್!’

‘ಈ ಮೊರೋನ್‍ಗಳಿಗೆ ಅದೇ ಸರಿಯಾದ ಕೈಂಡೂ. ಕಮಿಂಗ್ ಬ್ಯಾಕ್ ಟು ರಿವರ್ಸ್ ಟಗ್ರೂ, ಮ್ಯಾನ್‍ಕೈಂಡೂ ಆಕ್ರಮಣ ಮಾಡಿ ಆಮೇಲೆ ಹಿಂದಕ್ಹೆಜ್ಜೆ ಇರ್ಸೋ ಬಾಬ್ತಿನವು. ಇಂಡಸ್ಟ್ರಿಯಲೈಸೇಷನ್ ಅಂತಾರೆ. ಅದು ರಿಯಲೈಸ್ ಆಗೋಹೊತ್ಗೆ ಬಿಟ್ಟಿಬಾಬ್ತುಗಳನ್ನ ಹಂಚ್ತಾರೆ. ಬಡವರ್ಗೇಂತ ಹಂಚೋ ಬಾಬ್ತುಗಳನ್ನ ಪೀಪಲ್ ಪೂರ್ ಬೈ ಪರ್ಸ್ ಪಡೆಯೋಕ್ಕಿಂತ ಪೂರ್ ಬೈ ಹಾರ್ಟ್ ಅಂಡ್ ಪೂರ್ ಇನ್ ಮ್ಯಾಗ್ನಾನಿಮಿಟೀಗ್ಳೇ ಪಡ್ಕೊಳೋದು ಪದ್ಧತಿ ಆಗ್ಬಿಟ್ಟಿದೆ. ಇವರೆಲ್ಲಾ ರುಗಟಗಳೇ ಅಲ್ವೇ ಮೈ ಬಾಯ್? ರಿವರ್ಸ್ ಟಗರೂಸ್!’

‘ನಿಜವೇ ಸರ್. ನಾನು ಹೇಳ್ತಿದ್ದದ್ದೂ ಈ ಸೈಂಟಿಫಿಕ್ ಇನ್ವೆಂಷನ್ಸ್ ಬಗ್ಗೆ..’

‘ಗುಡ್ ವರ್ಡ್ ನನ್ರಾಜಾ... ಇನ್ವೆಂಟ್ ಮಾಡೋ ಎಷ್ಟೋ ಬಾಬ್ತುಗಳು shun ಮಾಡಕ್ಕೇ ಯೋಗ್ಯವಾಗಿರೋದ್ರಿಂದ್ಲೇ ಅವನ್ನ ಇನ್ವೆಂಷನ್ಸ್ ಅನ್ನೋದು. ಫಾರ್ ಇನ್‍ಸ್ಟೆನ್ಸ್ ನಿಮ್ಮ ಇಂಟರ್ನೆಟ್ಟೂ.’

‘ವಾಟ್? ನೀವು ತೀರ್ಕೊಂಡಿದ್ದು...’

‘ನಾನೆಲ್ತೀರ್ಕೊಂಡೆ ಕಪ್ಪೂ? ಯಾವ ಜನಗಳು ಸುಡುಗಾಡಿಗ್ಸೇರ್ತಾನೇ ಮನುಷ್ಯರ ಮನಸ್ನಿಂದ್ಲೂ ಎಕ್ಸಿಟ್ಟಾಗ್ತಾರೋ ಅವ್ರು ತೀರ್ಕೊಳ್ಳೋದು. ಪೊಯೆಟ್ಸೂ, ಪಬ್ಲಿಕ್ ಫಿಗರ್ಸೂ ತೀರ್ಕೊಳಲ್ಲ. ಎ ಪರ್ಸನ್ಸ್ ಸಾಧನೇಸ್‍ನ ಯಾವತ್ತಿನವರ್ಗೂ ಜನ ನೆನೆಸ್ಕೊಳ್ತಾರೋ ಅವತ್ವರ್ಗೂ ಅವನನ್ನ dead ಅನ್ನೋಹಾಗಿಲ್ಲ. Though dead by body, his spirit lives on ರಾಜಾ.’

‘ಸರಿ ಸಾರ್. ನೀವು 1946ರಲ್ಲೇ ಪಾಸ್ಡ್ ಎವೇ ಆದ್ರೂ, ಇವತ್ತಿನ ಬಾಬ್ತು ನಿಮಗೆ ಹೇಗೆ ಗೊತ್ತೂಂತೀನಿ?’

‘ನಾನು ದೇಹದಲ್ಲಿದ್ದಾಗಿನ್ಬಾಬ್ತಿಗೂ, ಇಲ್ವಾಗಿರೋ ಬಾಬ್ತಿಗೂ ದೇರ್ ಈಸ್ ಬಟ್ ಎ ಸ್ಮಾಲ್ ಡಿಫರೆನ್ಸ್ ಆಫ್ ಬಾಡಿ. ಬಾಡ್ಹೋಗೋ ಬಾಬ್ತಾದ್ರಿಂದ್ಲೇ ನಮ್ದೇಹಾನ ಆ ಬ್ರಿಟಿಷ್ಬಾಬೂಗ್ಳು ಬಾಡಿ ಅಂದ್ರೂನ್ಸತ್ತೆ. ನಾನು ಜೀವಿಸಿದ್ದಾಗ ಸ್ಪಿರಿಟ್ಸ್ ತೊಗೊಂಡು ಫುಲ್ ಆಗಿರ್ತಿದ್ದೆ ಅಥವಾ ಫುಲ್ ಆಫ್ ಸ್ಪಿರಿಟ್ಸ್ ಇರ್ತಿದ್ದೆ. ಬಾಡಿದ ಬಾಡಿಯಿಂದ ಹೊರಹೋದ್ಮೇಲೂ ಮೈ ಸ್ಪಿರಿಟ್ಟು ಈಸ್ ಫುಲ್ ಆಫ್ ಸ್ಪಿರಿಟ್ಟು. ಮೇಲ್ನಿಂತೇ ಪಕ್ಷಿನೋಟ... ಮೋರ್ ಪ್ರಿಸೈಸ್ಲೀ ಗೃಧ್ರನೋಟ ಬೀರಿ, ವಿಷಯವನ್ನೂ, ವಿಷಯದಲ್ಲಿನ ವಿಷಯವನ್ನೂ ಕಲೆಟ್ಮಾಡೋದಲ್ದೆ ನನ್ಗಾದ್ರೂ ಇನ್ನೇನ್ಕೆಲ್ಸ್ ಬೈ ಬಾಯ್! ಆದ್ದರಿಂದ ಈ ಇಂಟರ್ನೆಟ್ಟು, ಫೇಸ್ಬುಕ್ಕು, ಸೆಲ್ಫಿ, ಎಲ್ಲ ಬಾಬ್ತೂ ತಿಳ್ದಿದೇ ರಾಜಾ... ತಿಳ್ದಿದೆ.’

‘ಇಂಟರ್ನೆಟ್ ಬಗ್ಗೆ ಏನೋ ಹೇಳ್ತಿದ್ದಿ...?’

‘ವಾಂಛೇನ್ನೋ ನಮ್ಮ ಇನ್ನರ್ ನೆಟ್ ನೆಟ್ಗಿದ್ರೆ ಅದಕ್ಸೇರೋ ವಿಷಯಗಳ ನೆಟ್‍ವರ್ತೂ ಚೆನ್ನಾಗಿರತ್ತೆ. ಅರಿಯೋವ್ರಿಗೆ ಇಂಟರ್ನೆಟ್ಟೂಂದ್ರೆ ಭಲೆ! ಅರಿತೂ ನಾಶದ್ಕಡೆ ವಾಲೋವ್ನಿಗೆ ಬಲೆ. ಸ್ಮಾಲ್ ಫಿಶ್ ತರಹ ಸಿಕ್ಹಾಕ್ಕೊಂಡು ವಿಲ್ವಿಲೀ ಅನ್ನೋದೋ, ಬಲೆಯನ್ನೂ ಮೀರಿ ಭಲೆ ಅನ್ನಿಸ್ಕೊಳೋ ಬಾಬ್ತನ್ನ ಹೆಕ್ಕೋದೋ ನಮ್ನಮ್ಗ್ ಬಿಟ್ವಿಷ್ಯ.’

‘ಫೇಸ್ಬುಕ್ಕು?’

‘ಅದೊಂದು divide and drool ಬಾಬ್ತು. ತಮ್ತಂತಂಡಾನ್ಕಟ್ಕೊಂಡು ತಮ್ತಮ್ಬೆನ್ಗಳ ನವೇನ್ತಿರಿಸ್ಕೊಳ್ಳೋಕ್ಕಿರೋ ಬಾಬ್ತೇ ಫೇಸ್ಬುಕ್ಕು. ಪೋಸ್ಟಿಸಿದವನ ನಿಲುವಿಗೆ ಜೈಯಂದ್ರೆ ಲೈಕು, ವೈ ಅಂದ್ರೆ ಡಿಸ್‍ಲೈಕು. ಅದೊಂದು ವೈಯಕ್ತಿಕ ಬಾಬ್ತನ್ನ ಪ್ರಪಂಚಕ್ಕೂದ್ಹೇಳೋ ವಿಷುಯಲ್ ಶಂಖ.’

‘ಸೆಲ್ಫೀ?’

‘ಫೋಟೋ ತೆಗೆಯಕ್ಕೂ ಫ್ರೆಂಡ್ಸ್ ಇಲ್ವಾಗಿರೋ ಪ್ರಾಣಿಯ ಲಾಸ್ಟ್ ರೆಸಾರ್ಟು. ತನ್ಕೈಯಾರೆ ತನ್ಸ್ವರೂಪಾನ ಹಾಳ್ಮಾಡ್ಕೊಳೋಕ್ಕಿರೋ ಟೂಲು!’

‘ನೀವು ಸಿಕ್ಕಾಪಟ್ಟೆ ಸಿಗರೇಟ್ ಸೇದ್ತಿದ್ರಂತಲ್ಲ ಸಾರ್?’



‘ಟು ರಿಮೈಂಡ್ ಮೈಸೆಲ್ಫ್ ದಟ್ ಐ ಟೂ ವಿಲ್ ಎಂಡ್ ಅಪ್ ಇನ್ ಸ್ಮೋಕ್ ಒನ್ ಡೇ ನನ್ರಾಜಾ... ನೀನೇ ಹೇಳಿದ್ಹಾಗೆ ಟುಡೇ ಈಸ್ ಮೈ ಬರ್ತ್‍ಡೇ. ಕೇಕೆ ಕಟ್ಮಾಡೋಕೇಂತ ಅಂಕಲ್ ಶ್ಯಾಂ ತಂಡದವ್ರು ಕಾಯ್ತಿರ್ತಾರೆ. ಗುಡ್‍ಬೈ ಕಪ್ಪೂ...’ ಎನ್ನುತ್ತಾ ಕೈಲಾಸಂ ಮರೆಯಾದರು.


Comments

  1. ಕೈಲಾಸಂ ಅವರು ಕಣ್ಮರೆಯಾಗಿ ಸುಮಾರು ಎಪ್ಪತ್ತೇಳು ವರ್ಷಗಳಾಗಿದ್ದರೂ ಅವರ ಶೈಲಿ, ವಾಕ್ಚಾತುರ್ಯ ನಿಮ್ಮ ಬರಹದಲ್ಲಿ ಇನ್ನೂ ಜೀವಂತವಾಗಿವೆ!

    ReplyDelete
    Replies
    1. ಧನ್ಯವಾದಗಳು ಸರ್. ಹೊರನಾಡ ಚಿಲುಮೆಯಲ್ಲಿ ಪ್ರತಿಕ್ರಿಯೆಯ ಚಿಲುಮೆಗೇ ಬರ. ಇಂತಿರುವಾಗ ನಿಮ್ಮ ಸುಸ್ಪಷ್ಟ ನಿಲುವಿನ ಪ್ರತಿಕ್ರಿಯೆ ನನಗೆ ಮರಳುಗಾಡಿನ ಓಯಸಿಸ್

      Delete
  2. ಛೇ ! ಮಾತುಗಳು ಬಿರುಸಾಗಿರುವಾಗಲೇ ಕೈಲಾಸಂ ಮರೆಯಾದರೆ, ಅವರ ಧಾಟಿಯಲ್ಲೇ ತಾವು ಬರೆದದ್ದು ಭಾಸವಾಯ್ತು ಸೂಪರ್ ಫನ್ನು, ಪಂಚು 👌👌👌ಅಂತೂ ಕೈಲಾಸಂಮ್ನೂ ಬಿಡಲಿಲ್ಲ ನೀವು

    ReplyDelete

Post a Comment