ಕಲಿಕೆಗೆ ಕೊನೆಯಿಲ್ಲ...

ಕಲಿಕೆಗೆ ಕೊನೆಯಿಲ್ಲ...

ಪುಸ್ತಕ ಪರಿಚಯ - ಶ್ರೀಮತಿ ಮಂಜುಳಾ ಡಿ 


“ಶಾಲೆಯಲ್ಲಿ ಕಲಿತರೆ ಬದುಕಬಹುದು

ಬದುಕೇ ಕಲಿಸಿದರೆ ಜೀವಿಸಬಹುದು..”

(ಆಸೆಯ ಕಂದೀಲು ಕವನ ಸಂಕಲನದಿಂದ..)

  ಬದುಕು ಒಂದು ಸೈಕಲ್ ಸವಾರಿಯಿದ್ದಂತೆ, ಸಮತೋಲನ ಉಳಿಸಿಕೊಳ್ಳಬೇಕೆಂದರೆ ಚಲಿಸುತ್ತಲೇ ಇರಬೇಕಾಗುತ್ತದೆ. ತಂತ್ರಜ್ಞಾನ ನಾಗಾಲೋಟದಲ್ಲಿರುವ ಈ ಯುಗದಲ್ಲಿ ಕುಳಿತಲ್ಲೇ ಎಲ್ಲವನ್ನೂ ಪಡೆಯಬಹುದಾಗಿದೆ. ಭಾವನೆ-ಸಂವೇದನೆಗಳನ್ನು ಹೊರತುಪಡಿಸಿ. ಎಷ್ಟೊಂದು ಆವಿಷ್ಕಾರಗಳು, ಪ್ರತಿಗಂಟೆಗೂ ಒಂದೊಂದು ಹೊಸ ಸ್ಟಾರ್ಟ ಅಪ್ ನಿಂದ ಹೊಸ ವಿನ್ಯಾಸಗಳು! ಹೀಗೆ ಹೊಮ್ಮಿದ ಪ್ರತೀ ಹೊಸತರ ಹಿಂದೆ ಬೆಟ್ಟದಷ್ಟು ಸಂಯಮ-ತಪಸ್ಸು-ಹಠ ಮೇಳೈಸಿದ ಛಲವೊಂದು ಕೆಲಸ ಮಾಡಿರುತ್ತದೆ. ಇಂತಹವುಗಳನ್ನು ನೋಡಿಯೂ ಕುತೂಹಲ ಮೂಡದೇ ಹೋದರೆ ಜಡತ್ವ-ನಿರುತ್ಸಾಹ ಆವರಿಸಿದೆ ಎಂದೇ ಅರ್ಥ. ಯಾವುದೇ ರಂಗವಾಗಿರಲಿ ಹಿಂದಿನದನ್ನು ಆಧರಿಸಿ ಹೊಸ ಛಾಪು ಮೂಡಿಸುವ ಪ್ರಯತ್ನಗಳೇ ಜೀವಂತವಾಗಿರಿಸುತ್ತವೆ.

ನಿಜಕ್ಕೂ  ಕಲಿಕೆಗೆ ಕೊನೆಯಿಲ್ಲ ಎಂಬುದು ಎಷ್ಟು ಸತ್ಯವೋ ಕಲಿಕೆಯೇ ಜೀವಂತಿಕೆ ಎಂಬುದೂ  ಅಷ್ಟೇ ಅರ್ಥಪೂರ್ಣ. 




  ಇದೇ ವಿಷಯವಾಗಿ ಪ್ರಸ್ತುತ ಆಸ್ತ್ರೇಲಿಯಾದ ನಿವಾಸಿಯಾದ ಪ್ರೋಫೇಸರ್ ಮಧುಸೂಧನ್ ಚಕ್ರವರ್ತಿ ರವರಿಂದ ವಿರಚಿತ “ಕಲಿಕೆಗೆ ಕೊನೆಯಿಲ್ಲ” ಎಂಬ ಪುಸ್ತಕ ಜೂನ್-೨೦೨೩ ರಲ್ಲಿ ಲೋಕಾರ್ಪಣೆಗೊಂಡಿರುತ್ತದೆ. ಎಷ್ಟಾದರೂ ವೃತ್ತಿಯಿಂದ ಪ್ರೋಫೇಸರ್ ಕಲಿಕೆಯ ಬಗ್ಗೆಯೇ ಬರೆದಿರುತ್ತಾರೆ ಎಂಬ ಆಲೋಚನೆಯಿಂದ ಪುಸ್ತಕ ತೆರೆದರೆ, ಅಲ್ಲಿ ತಿಳಿಯದ ಮತ್ತು ಈಗಾಗಲೇ ತಿಳಿದಿರುವ ವಿಷಯಗಳ ಬೇರೆಯದೇ ಮಗ್ಗುಲುಗಳ ಅನಾವರಣವಿದೆ. ಪ್ರತೀ ಲೇಖನದಲ್ಲೂ ಹೊಂದುವಂತೆ ಉಲ್ಲೇಖಿಸಲಾದ ಸಂಸ್ಕೃತ ಶ್ಲೋಕಗಳು ಲೇಖನಕ್ಕೆ ಮೆರಗು ನೀಡಿರುವುದಲ್ಲದೇ, ಲೇಖಕರ ಸಂಸ್ಕೃತ ಭಾಷಾ ಪಾಂಡಿತ್ಯಕ್ಕೆ ಅರಿವಿನ ಆಳಕ್ಕೆ ಕನ್ನಡಿಯಂತಿವೆ.

 ಪುಸ್ತಕದಲ್ಲಿ ಎರಡು ಭಾಗಳಿದ್ದು  ಮೊದಲ ಭಾಗ “ಅನರ್ಥಸಾಧನ ಮತ್ತು ಇತರ ಪ್ರಬಂಧಗಳು” ಇದರಲ್ಲಿ ಒಟ್ಟು ೨೭ ಲೇಖನಗಳಿವೆ. ಎರಡನೆಯ ಭಾಗ “ಪರದೈವವೇ ಪತಿ” ಪರಮಾತ್ಮನೇ ಪತಿ ಎಂದು ನಂಬಿದ ಆರು ಸಾಧ್ವಿಯರ ಜೀವನರೀತಿಯ ಕುರಿತಾದ ಲೇಖನಗಳಿವೆ. ಮೊದಲ ಭಾಗದ ಒಂದೊಂದು ಲೇಖನವೂ ಭಿನ್ನವಾಗಿವೆ. 

  ಕೋಪವೆಂಬ ಅನರ್ಥ ಸಾಧನವನ್ನು ನಿಯಂತ್ರಿಸುವ ಕುರಿತು ಪುಸ್ತಕ ಆರಂಭವಾಗುತ್ತದೆ. ೨೦೦೨ ರಲ್ಲಿ ನ್ಯೂ ಸೌಥ್ ವೇಲ್ಸ್ ನ ರೋನ್ ಫಿಚ್  ಎಂಬುವವರಿಗೆ ಪಿಎಚ್ ಡಿ ದೊರೆಯಿತು, ಇದರಲ್ಲೇನು ಅಚ್ಚರಿ, ಇದು ಸಾಮಾನ್ಯ ಸಂಗತಿ ಎಂದುಕೊಂಡರೆ, ಹಾಗಲ್ಲ, ಆತ ಪಿ ಎಹ್ ಡಿ ಪಡೆದಾಗ ಆತನ ವಯಸ್ಸು ೯೨ ವರ್ಷ. ಇದೇ ಲೇಖನದಲ್ಲಿ  “ಒಳ್ಳೆಯ ಕೆಲಸ ಮಾಡುವುದರಲ್ಲಿ ವಿಳಂಬವಿರಕೂಡದು”  ಎಂಬ ಶ್ಲೋಕದೊಂದಿಗೆ ಇಟಲಿಯ ಅಪ್ರತಿಮ ಶಿಲ್ಪಿ ಕಲಾವಿದ ಮಿಖಾಲಾಂಜಲೋ ಮತ್ತು ಜರ್ಮನಿಯ ವಿಜ್ಞಾನಿ ಸಾಹಿತಿ ಗಯಠೆಯ ಜೀವನ ರೀತಿಗಳನ್ನು ಸೊಗಸಾಗಿ ಉದಾಹರಣೆಗಳನ್ನಾಗಿ ಉಲ್ಲೇಖಿಸಲಾಗಿದೆ. ಏಕೆಂದರೆ ಮಿಖಾಲಾಂಜಲೋ ತನ್ನ ಚಿತ್ರದ ಮೂಲೆಯೊಂದರಲ್ಲಿ Ancaro Imparo” ಎಂದು ಬರೆದಾಗ ಆತನಿಗೆ ೮೭ ವರ್ಷ ಮತ್ತು ಗಯಠೆ ಕಾಳಿದಾಸನ ಶಾಕುಂತಲ ಪಾತ್ರದಿಂದ ಪ್ರಭಾವಿತನಾಗಿ ಬರೆದ ಕೃತಿ ಫಾಸ್ಟ್ ಬರೆದು ಮುಗಿಸಿದಾಗ ಆತನಿಗೆ ೮೦ ವರ್ಷ!

ಅಂದ ಹಾಗೆ Ancaro Imparo ಅಂದರೆ “ನಾನು ಇನ್ನೂ ಕಲಿಯುತ್ತಿದ್ದೇನೆ”!!!



ಬೆಳಕಿನ ಅರಿವಾಗಬೇಕೆಂದರೆ ಮೊದಲು ಕತ್ತಲೆಯ ಕುರಿತು ಅರಿವಿರಲೇಬೇಕು. ದುಃಖದ ಅರಿವಿಲ್ಲದೇ ಸಮಾಧಾನದ ಕಲ್ಪನೆಯಾದರೂ ಹೇಗೆ ಎಂಬುದಾಗಿ ಬೇಳಕಿನ ಮಹತ್ವವನ್ನು ವಿವರಿಸುತ್ತಾ ನಮ್ಮೊಳಗಿನ ಅಂದರೆ ಪ್ರತಿ ಮನುಷ್ಯನೊಳಗಿನ ದಿವ್ಯ ಜ್ಯೋತಿಯ ಬಗ್ಗೆ ಹೇಳುತ್ತಾ  ಆಧ್ಯಾತ್ಮದೆಡೆಗೆ ಲೇಖನ ಸಾಗುತ್ತದೆ. ಸರಳ ಬದುಕುಗೆ ಅನ್ವರ್ಥ ಎನಿಸುವುದು ಡಿವಿಜಿ, ಸದಾಶಿವರಾಯರು ಮತ್ತು ಲಾಲ್ ಬಹದ್ದೂರ್ ಶಾಸ್ತಿç ಮತ್ತು ಇಂತಹ ಇನ್ನೂ ಕೆಲವು ಚೇತನಗಳು. ಆದರೆ ಲೇಖಕರು ಜಮುನಾಲಾಲ್ ಬಜಾಜ್ ರವರ ಬಗ್ಗೆ ಉಲ್ಲೇಖಿಸಿರುವ ರೀತಿ ಅವರ ಜೀವನದ ಬಗ್ಗೆ ಇನ್ನೂ ಆಳವಾಗಿ ಅರಿಯುವ ಕುತೂಹಲ ಮೂಡಿಸುತ್ತದೆ.  ಸಂಗೀತ ಲೋಕದಲ್ಲಿ ಇಂದು  ವಿಶಿಷ್ಟ ಪ್ರಕಾರವಾದ ಘಜûಲ್ ಗಳ ಇತಿಹಾಸ ಮತ್ತು ಪ್ರಖ್ಯಾತ ಘಜಲ್ ರಚನಾಕಾರರ ವಿವರಗಳನ್ನು ತೆರೆದಿಡುತ್ತಾರೆ.

 ಅರಿಸ್ಟಾಟಲ್ ಮತ್ತೊಬ್ಬ ಸಮಕಾಲೀನನಾಗಿದ್ದ ದಾರ್ಶನೀಕ ಡಯೋಜನೀಸ್ ಬಗ್ಗೆ ತಿಳಿಸಿಕೊಡುತ್ತಾ ಅಲೆಕ್ಸಾಂಡರ್ ಮತ್ತು ಡಯೋಜನೀಸ್ ನ ಮಧ್ಯದ ಸ್ವಾರಾಸ್ಯಕರ ಸಂಭಾಷಣೆ ಉಲ್ಲೇಖಿಸುತ್ತಾರೆ. ಅದರಲ್ಲಿ ಚಂದದೊAದು ಡಯೋಜನೀಸ್ ನ ಮಾತಿದೆ. ಅಲೆಕ್ಸಾಂಡರ್ ಗೆ ಡಯೋಜನೀಸ್ ಹೇಳುತ್ತಾನೆ, “ಸ್ವಾಮಿ ನೀವು ಸೂರ್ಯನಿಗೂ ನನಗೂ ಮಧ್ಯೆ ನಿಂತಿದ್ದೀರಿ”!  ಝಾನ್ಸಿ ರಾಣಿ  ಲಕ್ಷ್ಮೀ ಬಾಯಿಯ ಸಂಪೂರ್ಣ ಆಸ್ತಿ ಮತ್ತು ಹಕ್ಕುಗಳನ್ನು ಹಿಂದಿರುಗಿಸಿಕೊಡುವಂತೆ ಡಾಲ್‌ಹೌಸಿ ಗೆ ಮನವಿ ಕಳುಹಿಸಿದ ಜಾನ್‌ಲ್ಯಾಂಗ್ ಬ್ಯಾರಿಸ್ಟರ್ ಕುರಿತು ಓದಿದಾಗ ಆತನ ಕುರಿತು ಇನ್ನೂ ಅರಿಯುವ ಕುತೂಹಲ ಮೂಡುತ್ತದೆ. 



ಪುಸ್ತಕದ ಹರಿವು ರಾಮಾಯಣ ಮಹಾಭಾರತದ ಹಲವಾರು ಕಥೆಗಳ ಉಲ್ಲೇಖಗಳೊಂದಿಗೆ ಸಾಗುವುದರಿಂದ ಓದುಗರಿಗೆ ಕಥೆ ಮತು ಅರಿವು ಮಿಳಿತಗೊಂಡ ಹಿತ ಅನುಭವವಾಗುತ್ತದೆ. ಇದಲ್ಲದೇ ಲೇಖಕರಿಗೆ ಮಹಾನ್ ಗ್ರಂಥಗಳ ಕುರಿತು ಆಳವಾದ ಅಧ್ಯಯನದಿಂದ ಗಹನ ಮಾಹಿತಿ ಇರುವುದು ವೇದ್ಯವಾಗುತ್ತದೆ. ದೈವವನ್ನೇ ಪತಿಯೆಂದು ಬದುಕಿದ ಸಾಧ್ವಿಯರ ಪರಿಚಯ ಲೇಖನಗಳು ಪ್ರೇಮದ ನೈಜ ಸ್ವರೂಪ ಸಾಕ್ಷಾತ್ಕಾರವೇ ಎಂಬುದನ್ನು ತಿಳಸಿಕೊಡುತ್ತವೆ.

ಅನ್ಯ ದೇಶದಲ್ಲಿದ್ದರೂ ಲೇಖಕರಿಗಿರುವ ಮಾತೃಭಾಷಾ ಪ್ರೇಮ-ಅಧ್ಯಯನ ಪ್ರತೀ ಲೇಖನದಲ್ಲೂ ವ್ಯಕ್ತವಾಗುತ್ತದೆ. ಓದಿದ ನಂತರ ಲೇಖಕರು ಮುನ್ನುಡಿಯಲ್ಲೇ ತಿಳಿಸಿರುವಂತೆ ಹಲವು ವಿಷಯ-ವ್ಯಕ್ತಿ ಪರಿಚಯ ಲೇಖನಗಳು ಕುತೂಹಲ ಉಳಿಸಿ ಇನ್ನೂ ಹೆಚ್ಚು ಅರಿಯಲು ತವಕಿಸುವ ಆಸಕ್ತಿ ಉಳಿಸುತ್ತವೆ. ಪ್ರಸಿದ್ದ ಹಾಸ್ಯ ಲೇಖಕರಾದ ರಾಮನಾಥ್ ಅವರ ಮುನ್ನುಡಿ ಪುಸ್ತಕದ ಸಾರವನ್ನು ಚಿಕ್ಕದಾಗಿ ಚೊಕ್ಕವಾಗಿ ಬಿಂಬಿಸಿದೆ.

ಒಟ್ಟಾರೆ ಉತ್ತಮ ಮಾಹಿತಿ ನೀಡುವ ಪುಸ್ತಕವಾಗಿದ್ದು, ಇಂತಹ ಇನ್ನೂ ಹಲವು ಪುಸ್ತಕಗಳು ಲೇಖಕರಿಂದ ಹೊಮ್ಮಲಿ ಎಂಬ ಆಶಯದಿಂದ ಈ ಲೇಖನ...

Comments

  1. "ಕಲಿಕೆಗೆ ಕೊನೆ ಇಲ್ಲ," ಮಧುಸೂದನ ಅವರ ಪುಸ್ತಕದ ಪರಿಚಯ ಮಾಡಿರುವ ಈ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕದ ಪರಿಚಯ ಮಾಡಿರುವ ಮಂಜುಳಾ ಅವರು ಅತ್ಯಂತ ಚೇತುಹಾರಿಯಾಗಿ, ಕುತೂಹಲಕಾರಿಯಾಗಿ ಮುಖ್ಯಾಂಶಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ. ವಿಶಿಷ್ಟ ವಿಭಿನ್ನ. ಹಾಗೂ ಸುಂದರ ವಿವರಣೆಯನ್ನು ಕೊಟ್ಟಿದ್ದಾರೆ.
    ಈ ಲೇಖನವನ್ನು ಓದಿದ ತಕ್ಷಣ ಪುಸ್ತಕವನ್ನು ಖರೀದಿಸುವಂತೆ ಪ್ರೇರೇಪಿಸುತ್ತದೆ. ಪುಸ್ತಕದಲ್ಲಿರುವ ಎಲ್ಲಾ ಅಂಶಗಳನ್ನು ಸ್ವಲ್ಪ ಸ್ವಲ್ಪವೇ ತಿಳಿಸಿ ಓದುಗರ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಸ್ತಕ ಎಲ್ಲಾ ಓದುಗರ ಮನೆಯನ್ನು ತಲುಪಲಿ ಹಾಗೂ ಲೇಖಕರಿಗೆ ಇನ್ನೂ ಹೆಚ್ಚಿನ ಬರವಣಿಗೆಯಲ್ಲಿ ಇನ್ನೂ ಅನೇಕ ಇಂತಹ ಪುಸ್ತಕವನ್ನು ಬರಯಲಿ ಎಂದು ಆಶಿಸುವೆ

    ReplyDelete

Post a Comment