ಟೊಮಾಟೊ ಮುಗಿಯದ ಸ್ಟೋರಿ

 ಟೊಮಾಟೊ ಮುಗಿಯದ ಸ್ಟೋರಿ 

ಲೇಖನ - ಶ್ರೀ ಕನಕಾಪುರ ನಾರಾಯಣ



“ರೀ ಅಂಗಡೀಗೆ ಹೋದಾಗ ಎರಡು ಕೇಜಿ ಟಮಾಟೋ ತನ್ನಿ ಅಂದ್ರೆ ನಾಲ್ಕೇ ನಾಲ್ಕು ತಂದಿದ್ದೀರಲ್ರಿ? ” ಅಂತ ನನ್ನಾಕೆ ಹೇಳಿದ್ರೆ ನನ್ನ ಉತ್ತರ” ಅರೆ ಯಾವಾಗ್ಲೂ ಒಂದೇ ಬೆಲೆ ಇರೋ ಪೀಲ್ಡ್ ಟೊಮಾಟೊ (ಟಿನ್) ತಂದಿದ್ದೀನಿ ನೋಡು, ಸಾರಿಗೆ ಅದನ್ನೇ ಬಳಸು “ಅಂತಂದೆ. ನಮ್ಮನೆ ಕಥೆ ಅಲ್ಲ ಇದು ಇತ್ತೀಚಿಗೆ ಟೊಮಾಟೋ  ದುಬಾರಿ ಸಿಜನ್ ಅಗ್ಬಿಟ್ಟಿದೆ ಅನ್ನಿ, ಬಜೆಟ್ ನೋಡ್ಬೇಕಾದ್ ಎಲ್ರೂ ಬೇರೆ ಬೇರೆ ಉಪಾಯ ಮಾಡ್ಕೋತಾರೆ. whatsappನಲ್ಲೂ  someದೇಶಗಳು, ನಿಂಬೆ ಅಥವಾ ಹುಣಸೆ ಬಳಸಿ ಎಂದು.   ಅದೇನ್ ಬರಗಾಲ ಬಂತೋ ಗೊತ್ತಿಲ್ಲ ಟಮಾಟೋ ಬೆಲೆ ಆಕಾಶಕ್ಕೇರಿಬಿಟ್ಟಿತ್ತು ಆಸ್ಟ್ರೇಲಿಯಾದಲ್ಲಿ,



ಇದೇ ಮೂರು ತಿಂಗಳ ಹಿಂದೆ ತಗೋಳೋರಿರ್ಲಿಲ್ಲ ಅಷ್ಟೊಂದ್ ಅಗ್ಗ, ರಾಶಿ ರಾಶಿ ಬಿದ್ದಿತ್ತು.ಆದರೆ ಮತ್ತೊಮ್ಮೆ ಬೆಲೆ ಗಗನಕ್ಕೆ. ಆದರೆ ಜನವರಿಯಲ್ಲಿ ಕರ್ನಾಟಕದಲ್ಲಿ ಟೊಮಾಟೋ ಬೆಲೆ ಪಾತಾಳಕ್ಕಿಳಿದಿತ್ತು, ರೈತರಿಗೆ ಕಿಲೋಗೆ ಒಂದು ರೂಪಾಯಿ ಎರಡುರೂಪಾಯಿಗೆ ಇಳಿದು ಮಣ್ಣಿನ ಮಕ್ಕಳ ಶ್ರಮ ಮಣ್ಣಿಗೇ ಹೋಯಿತು. ರೊಚ್ಚಿಗೆದ್ದ ರೈತರು ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ರಸ್ತೆಗೆ ಎಸೆದರು, ಡೆಪ್ಯೂಟಿ ಕಮಿಶನರ್ ಕಚೇರಿ ಮುಂದೆ ಲಾರಿಯಲ್ಲಿ ತಂದು ಸುರಿದು ಪ್ರತಿಭಟನೆ ಮಾಡಿದರು. ಮತ್ತೊಂದು ಕಡೆ ನದಿಯಲ್ಲಿ ಸುರಿದ ಸುದ್ದೀನೂ ಇದೆ.  



HOPCOM ರೈತರ ಸಂಘ 12ರೂ ಕೊಟ್ಟು ಕೊಂಡರೂ ರೈತರಿಗೆ ಅದು ಗಿಟ್ಟದು, ಕಡಿಮೆ ಅಂದರೂ ಕಿಲೋಗೆ 20-30 ರೂ ಸಿಕ್ಕರೆ ಲಾಭವೂ ಇಲ್ಲ ನಷ್ಟಾನೂ ಇಲ್ಲ ಅಂತ ನನ್ನ ಸಂಬಂಧಿ ರೈತನ ಹೇಳಿಕೆ.ಇತರೆ ತರಕಾರಿಗಳಂತೆ ಇದನ್ನು ಹೆಚ್ಚುದಿನ ಇಟ್ಟು ಒಳ್ಳೆ ಬೆಲೆ ಬಂದಾಗ ಮಾರುವಹಾಗಿಲ್ಲ, ಕೊಳೆಯುವ ಸಂಭವ ಹೆಚ್ಚು. ಟಮೋಟೋ ಬೆಲೆ ಮೇ ತಿಂಗಳಲ್ಲಿ ಗಮನಿಸಿದರೆ ಕರ್ನಾಟಕ, ತಮಿಳುನಾಡು,ಆಂಧ್ರಗಳಲ್ಲಿ ವಿಪರೀತ ದುಬಾರಿ, 2012 ಮೇ – ಕಿಲೋ ಗೆ 22ರೂ ಇದ್ದರೆ ಮುಂದೆ 2013 ರಲ್ಲಿ – 52 ರೂ ! ಇಲ್ಲೂ ಹಾಗೇ ಜನವರಿಯಲ್ಲಿ ಕಿಲೋಗೆ $5 ರಿಂದ $12 ವರೆಗೂ ಏರಿದೆ. ಅದೇ ಬೆಲೆಗೆ ಹತ್ತು ಅಥವಾ ಇಪ್ಪತ್ತು ಕಿಲೋ ಈರೂಳ್ಳಿ ಕೊಳ್ಳಬಹುದು. ಇದಕ್ಕೆ ಪರಿಹಾರ ಉಂಟೇ ?ಇದೆ ಅನ್ನಿಸುತ್ತೆ.



ಅದಿರಲಿ ಮರೆತಿದ್ದೆ ಈ ಟೊಮಾಟೋ ಹಣ್ಣೋ ತರಕಾರೀನೋ ಅನ್ನೋ ಅನುಮಾನ ಎಷ್ಟೋ ಜನರಿಗಿದೆ, ಟಮೋಟೋ ಕೂಡಾ ಒಂದು ಜಾತಿಯ ಹಣ್ಣು. ದ.ಅಮೇರಿಕಾ ದಿಂದ ಸ್ಪೈನ್ ಮೂಲಕ ಎಲ್ಲ ಕಡೆ ಹಬ್ಬಿದೆ ಅನ್ನೋ ಇತಿಹಾಸ ಇದೆ. ಪ್ರಪಂಚದಲ್ಲಿ ಚೈನಾ ಬಿಟ್ಟರೆ ಭಾರತವೇ ಹೆಚ್ಚು ಬೆಳೆಯುವ ದೇಶ. ಕರ್ನಾಟಕದಲ್ಲಿ ಕೋಲಾರ ಮತ್ತು ರಾಯಚೂರು ಹೆಚ್ಚು ಟೊಮಾಟೊ ಬೆಳೆಯುವ ಜಿಲ್ಲೆಗಳು. ಕನ್ನಡದಲ್ಲಿ ಇದಕ್ಕೆ “ಚಪ್ಪರ ಬದನೆ”,  "ಗೂದೆ ಹಣ್ಣು"  “ತಿಪ್ಪೆ ಹಣ್ಣು” ಎನ್ನುವ ಹೆಸರಿದ್ದರೂ ಬಸ್ಸು, ಕಾರು, ಬಕೆಟ್,ಟಿಕೆಟ್ ಎನ್ನುವ ಹಾಗೆ ಟೊಮಾಟೋ ಪದ ಕೂಡಾ ಬಳಕೆಯಲ್ಲಿದೆ.

ಸಾಮಾನ್ಯ ಭಾರತೀಯರ ಮನೆಯಲ್ಲಿ ಈರೂಳ್ಳಿ ಟೊಮಾಟೋ ಸಾಧಾರಣ ಸ್ಟಾಕ್ ಇದ್ದೇ ಇರುತ್ತದೆ. ಅವಲಕ್ಕಿ/ಮಂಡಕ್ಕಿ ಮತ್ತಿವೆರಡೂ ಇದ್ದರೆ ಸುಮಾರು ಹತ್ತು-ಹದಿನೈದು ತಿನಿಸು ಮಾಡಬಹುದು. 

ಚೆರ್ರಿ,ರೊಮ,ಇಂಡಿಗೋ,ಇಟಾಲಿಯನ್ ರೋಸ್,ಈಸಿಸ್ ಕ್ಯಾಂಡಿ ಇನ್ನೂ ತರಾವರಿ ಟೊಮಾಟೋ ಐನೂರಕ್ಕೂ ಮೀರಿ ತಳಿಗಳಿವೆ ಪ್ರಪಂಚದೆಲ್ಲೆಡೆ. ಪೈನಾಪಲ್ ಜಾತಿಯ ಒಂದು ಟೊಮಾಟೋ ಆರು ಅಡಿ ಎತ್ತರ ಬೆಳೆಯುತ್ತದಂತೆ. ಯೂರೋಪ್ ಖಂಡಕ್ಕೆ ಇದನ್ನು ಪರಿಚಯಿಸಿದಾಗ ಇದನ್ನು ಇಂದು ಜಾತಿಯ ವಿಷದ ಚೆರ್ರಿ ಎಂದು ನಂಬಿಕೆ ಕೂಡಾ ಇತ್ತು. ಟಮೋಟೊ ಹಣ್ಣಿನಲ್ಲಿ henbane, mandrake and deadly nightshade ತಳಿಗಳಲ್ಲಿ ತುಂಬಾ ಕಡಿಮೆ ಪ್ರಮಾಣದ ವಿಷವಿದ್ದರೂ ಅಪಾಯವಿಲ್ಲ, ಹಸಿರಾದ ಟೊಮಾಟೊ ಕಾಯಿಯಲ್ಲಿ ಕೊಂಚ ಪ್ರಮಾಣ ಇರುತ್ತದೆ.  ಇದು ೨೦೨೨ರಲ್ಲಿ  Del ಮತ್ತು Julie Faust (ಇಬ್ಬರೂ USA ನಿವಾಸಿಗಳು ) ಬೆಳೆದ ಅತಿ ದೊಡ್ಡ ಹಾಗು ತೂಕದ ಟೊಮಾಟೊ 5.284ಕಿಲೋ, 82.55 ಸೆಂ ಮೀ ಸುತ್ತಳತೆ  ಇದ್ದ ಬಹುಮಾನಿತ ಟೊಮಾಟೊ. 



ಸಾರು,ಸಾಂಬಾರಿನಿಂದ ಹಿಡಿದು ಚಟ್ನಿ, ರಾಯತ, ಗೊಜ್ಜು, ಸಾಲಡ್,ಪಾನಿಪೂರಿ ವರೆಗೂ ನೂರಾರು ತಿನಿಸುಗಳಲ್ಲಿ ಟೊಮಾಟೋ ಬಳಸಿದರೆ ಹಸಿವಾದಾಗ ಕತ್ತರಿಸಿ ಸಕ್ಕರೆ ಸಿಂಪಡಿಸಿ ತಿನ್ನುವವರಿದ್ದಾರೆ. ಇಡೀ ಟೊಮಾಟೊ ಹಾಗೇ ಜಗಿದು ತಿನ್ನುವ ಜನರೂ ಇದ್ದಾರೆ,ಈ ಸನ್ನಿವೇಶ ನಟ ಅನಂತನಾಗ್ “ಬರ” ಚಿತ್ರದಲ್ಲಿ ಸೊಗಸಾಗಿ ಅಭಿನಯಿಸಿ ತೋರಿಸಿದ್ದಾರೆ.

ಪರಿಹಾರ ಮರೆತಿದ್ದೆ ನೋಡಿ….ಒಂದೆಡೆ ಬೆಲೇನೇ ಇಲ್ಲದ ಸಂಗತಿ ಮತ್ತೊಂದು ಕಡೆ ಟೊಮಾಟೋ ಬೆಲೆ ನೋಡಿ ತೊಗೋಬೇಕಾ ಅನ್ನೋಷ್ಟು ದುಬಾರಿ, ಒಂದು ಕಡೆ ಕೂಳಿಲ್ಲದ ಜನ ಮತ್ತೊಂದು ಕಡೆ ಧವಸ ಧಾನ್ಯ ಗಂಗೆಯಪಾಲು, ಇನ್ನೋಂದು ಕಡೆ ರಸ್ತೆಯಲ್ಲಿ ಎರಚಾಡುವ ಸಂಪ್ರದಾಯ ಹಬ್ಬ (Spanish festival) ಇದೆಲ್ಲಾ ಗಮನಿಸಿದರೆ ಅ ಆ ಇ ಈ ಹಾಡು ಜ್ಞಾಪಕ ಬರಲ್ವಾ? ಏನ್ ಹೇಳಿ ” ಇದ್ದವರೆಲ್ಲಾ ಇಲ್ಲದವರಿಗೆ ನೀಡಲೆ ಬೇಕು”. ಅಲ್ಲದಿದ್ದರೂ ವ್ಯಾಪಾರ ವಹಿವಾಟು ಮಾಡ್ಕೋಬಹುದು.ಅಷ್ಟೇನಾ? ಇಷ್ಟು ಸರಳ ಪರಿಹಾರಾನಾ ಅಂದ್ಕೋಬೇಡಿ.ಅಮೇರಿಕನ್ನರು ತೆಗೆದ ವಿಟ್ಲಾಚಾರಿ ಸಿನಿಮಾಗಳು ಇತ್ತೀಚಿಗೆ ನಿಜವಾಗ್ತೀರೋದ್ ನೋಡಿದ್ರೆ ಇಂಗ್ಲೀಶಿನಲ್ಲಿ “ಟೊಮಾಟೋ ಬಗ್ಗೆ ಒಂದು 3D ಡಾಕ್ಯಮೆಂಟ್ರಿ/ಸಿನಿಮಾ ಬಂದ್ರೆ ಹೇಗೆ ? 


Comments