ಸಿಡ್ನಿಯಲ್ಲಿ ಸಂಗೀತ ಕಾರ್ಯಕ್ರಮ

 ಸಿಡ್ನಿಯಲ್ಲಿ ಕನ್ನಡ ಭಕ್ತಿಗೀತೆಗಳ ಕರ್ನಾಟಕ ಸಂಗೀತ ಕಾರ್ಯಕ್ರಮ

ವರದಿ - ಶ್ರೀ ದತ್ತಾತ್ರೆಯ ಕುಲಕರ್ಣಿ 

ಜುಲೈ ೨೩ ರವಿವಾರ ಸಿಡ್ನಿಯ ರಾಗ ಲಯ ಸಂಸ್ಥೆ ಮತ್ತು ಸಿಡ್ನಿ ಕನ್ನಡ ಶಾಲೆಯ ವತಿಯಿಂದ ಕರ್ನಾಟಕ ಸಂಗೀತದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿಯ ತುಂಗಾಬಿ ಶಾಲೆಯ ಭವನದಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಹಲವಾರು ಕನ್ನಡಿಗರು ಕನ್ನಡದ ಭಕ್ತಿ ಗೀತೆಗಳನ್ನು ಕರ್ನಾಟಕ  ಸಂಗೀತ ಶೈಲಿಯಲ್ಲಿ ಆಸ್ವಾದಿಸಿ ಪುಳಕಿತರಾದರು.

ಸಿಡ್ನಿಯ ಸುಪರಿಚಿತ  ಕರ್ನಾಟಕ ಸಂಗೀತ ಗಾಯಕ ವಿದ್ವಾನ್ ಕೃಷ್ಣ ರಾಮರತಿನಂ  ಅವರಿಂದ ಪ್ರಸ್ತುತ ಪಡಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಹರಿಕೇಸಿನಲ್ಲೂರು ಮುತ್ತಯ್ಯ ಭಾಗವತರು, ಪುರಂದರದಾಸರು, ಕನಕದಾಸರು, ವಿಜಯ ವಿಠಲ ದಾಸರು ಶ್ರೀಪಾದರಾಜರು ರಚಿಸಿದ ಕೃತಿಗಳನ್ನು ವಿವಿಧ ರಾಗಗಳಲ್ಲಿ ಹಾಡಲಾಯಿತು. ಇವರ ಜೊತೆ  ಶ್ರೀಮತಿ ಮಹತಿ ಬಾಲಾಜಿ ಅವರು ವಾಯಲಿನ್ದಲ್ಲಿಯೂ ಮತ್ತು ವಿದ್ವಾನ್ ಸುಮುಖ ಅವರು ಮೃದಂಗದಲ್ಲಿಯೂ ಜೊತೆ ಕೊಟ್ಟು ಕಾರ್ಯಕ್ರಮಕ್ಕೆ ಕಳೆ ತಂದು ಕೊಟ್ಟರು. 



ಪುರಂದರದಾಸರ ವಂದಿಸುವದಾದಿಯಲಿ ಗಣನಾಥನ ಎಂಬ ಕೃತಿಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಂದೆ ಹಿರೇಕೇಸನಲ್ಲೂರು ಮುತ್ತಯ್ಯ ಭಾಗವತರ ಸುಪ್ರಸಿದ್ದ ಕೃತಿ ಭುವನೇಶ್ವರಿಯ ನೆನೆ ಮಾನಸವೆ ಮೋಹನ ಕಲ್ಯಾಣಿ ರಾಗದಲ್ಲಿ ಮೂಡಿಬಂದಿತು. ನಂತರ ವಿಜಯ ವಿಠಲ ದಾಸರ ಪರಮಮಂಗಲ ಮೂರುತಿಯನ್ನು ಪಂತುವರಳಿ ರಾಗದಲ್ಲಿ ಹಾಡಲಾಯಿತು. 

ಆನಂತರ ರಾಘವೇಂದ್ರ ಗುರುರಾಯರ ಬಗೆಗೇನ ಕೃತಿಗಳನ್ನು ಹಾಡಲಾಯಿತು. ಆಮೇಲೆ ಸುಪ್ರಸಿದ್ಧ ದಾಸರ ಪದಗಳಾದ ಕಂಗಳಿದ್ಯಾತಕೋ ವನ್ನು ತೋಡಿ ರಾಗದಲ್ಲಿಯೂ ನಂಬಿ ಕೆಟ್ಟವರಿಲ್ಲವೋ ಇದನ್ನು ಕಲ್ಯಾಣಿ ರಾಗದಲ್ಲಿಯೂ ಪ್ರಸ್ತುತ ಪಡಿಸಲಾಯಿತು. ನಂತರ ಮೂಡಿಬಂದ ಕನಕದಾಸರ ಬಾರೋ ಕೃಷ್ಣಯ್ಯ ರಾಗಮಾಲಿಕೆ ರಾಗಕ್ಕೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. 

ಆ ನಂತರ ಪ್ರೇಕ್ಷಕರ ವಿನಂತಿಯ ಮೇರೆಗೆ ಶ್ರೀ ಕೃಷ್ಣ ಅವರು ಕಾಯೋ ಶ್ರೀ ಗೌರಿ ಹಾಡನ್ನು  ಹಾಡಿದ್ದು ಅತ್ಯಂತ ವಿಶೇಷವಾಗಿತ್ತು. ಅಂದ ಹಾಗೆ ಕಾಯೋ ಶ್ರೀ ಗೌರಿ ಈ ಹಾಡು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಮೈಸೂರು ರಾಜ್ಯದ ರಾಜ್ಯ ಗೀತೆಯಾಗಿತ್ತು.

ಆಮೇಲೆ ಕಾರ್ಯಕ್ರಮವನ್ನು ಪುರಂದರದಾಸರ ಇಂದಿನ ದಿನವೇ ಶುಭದಿನವು ಹಾಡಿನ ಮೂಲಕ ಮುಕ್ತಾಯಗೊಳಿಸಲಾಯಿತು.

ಒಟ್ಟಿನಲ್ಲಿ ಕಲಾವಿದರಾದ ಶ್ರೀ ಕೃಷ್ಣ ಮತ್ತು ತಂಡ ತಮಗೆ ಕನ್ನಡ ಬಾರದಿದ್ದರೂ ಸಹಿತ ಈ ಒಂದು  ಪೂರ್ಣ ಪ್ರಮಾಣದ ಕನ್ನಡ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಕಾರ್ಯಕ್ರಮದ ಕೊನೆಗೆ ಲಘು ಊಟದ ವ್ಯವಸ್ಥೆಯನ್ನು ಮಾಡಿದ್ದು ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ ಸಿಡ್ನಿ  ಕನ್ನಡ ಶಾಲೆಯ ಶ್ರೀ ನಾರಾಯಣ  ಕನಕಪುರ ಮತ್ತು ಸಂಗಡಿಗರಿಗೆ ಎಲ್ಲರೂ ಧನ್ಯವಾದ ಹೇಳಿದರು.





ಕಾಯೋ ಶ್ರೀ ಗೌರಿ ಹಾಡಿನ ಬಗ್ಗೆ

ಕಾಯೋ ಶ್ರೀ ಗೌರಿ ಈ ಹಾಡು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಮೈಸೂರು ರಾಜ್ಯದ ರಾಜ್ಯ ಗೀತೆಯಾಗಿತ್ತು. 1831 ರಲ್ಲಿ ಅವಾಗಿನ ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಅಪ್ಪಣೆ ಮೇರೆಗೆ ಆಸ್ಥಾನ ಕವಿ ಬಸವಪ್ಪ ಶಾಸ್ತ್ರಿಗಳು ಈ ಹಾಡನ್ನು ರಚಿಸಿ ಸಂಗೀತ ಸಂಯೋಜಿಸಿದರು. ಕಲ್ಯಾಣಿ ರಾಗದಲ್ಲಿ ಸಂಯೋಜಿಸಿದ ಈ ಹಾಡು ಅವಾಗಿನಿಂದ ತನ್ನ ಮಾಧುರ್ಯದಿಂದಾಗಿ ಜನಮಾನಸದಲ್ಲಿ ಸ್ಥಿರವಾಗಿ ಉಳಿದಿದೆ

ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕೆಲವೇ ಕೆಲವು ಸ್ವತಂತ್ರ ರಾಜ್ಯಗಳು ತಮ್ಮ ತಮ್ಮ ರಾಜ್ಯ ಗೀತೆಯನ್ನು ಹೊಂದಿದ್ದವು ಆದರೆ ಸ್ವಾತಂತ್ರ್ಯ ನಂತರ ಈ ಗೀತೆಗಳು ಮರೆತು ಹೋದವು ಆದರೆ ನಮ್ಮ ಕಾಯೋಶ್ರೀ ಗೌರಿ ಹಾಡು ಮಾತ್ರ ತನ್ನ ಭಕ್ತಿ ಮತ್ತು  ರಾಗದ ಬದ್ದತೆಯಿಂದಾಗಿಯಿಂದಾಗಿ ಜನಮಾನಸದಲ್ಲಿ ಇನ್ನೂ ಉಳಿದುಕೊಂಡು  ಹೆಗ್ಗಳಿಕೆಯನ್ನು ಹೊಂದಿದೆ. 

ಹಾಗೆಯೇ ಎಲ್ಲ ಕನ್ನಡಿಗರು  ಹೆಮ್ಮಪಡುವ ಇನ್ನೊಂದು ವಿಚಾರವೆಂದರೆ ಈ ಹಾಡಿನಿಂದ ಸ್ಪೂರ್ತಿಗೊಂಡು ಗುರುದೇವ  ರವೀಂದ್ರನಾಥ್ ಟ್ಯಾಗೋರರು ಬಂಗಾಳಿಯಲ್ಲಿ ‘ಆನಂದೋ ಲೋಕೆ’ ಎನ್ನುವ ಗೀತೆಯನ್ನು ಬರೆದರು, ಅವರೇ ಹೇಳಿಕೊಂಡಂತೆ 1919 ರಲ್ಲಿ ಅವರು ಬೆಂಗಳೂರಿಗೆ ಭೆಟ್ಟಿ  ಕೊಟ್ಟಾಗ ಚಾಮರಾಜೇಂದ್ರ ಒಡೆಯರ ಸಮ್ಮುಖದಲ್ಲಿ ಈ ಹಾಡನ್ನು ಹಾಡಲಾಗಿತ್ತು ಆ ಹಾಡಿನ ಸಾಹಿತ್ಯ ಮತ್ತು ರಾಗದಿಂದ ಸ್ಪೂರ್ತಿಗೊಂಡು ಅವರು ತಮ್ಮ ಹಾಡನ್ನು ಬರೆದರು.




Comments