ಪಕ್ಷಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತವಾ!?

 ಪಕ್ಷಿಗಳೂ ಆತ್ಮಹತ್ಯೆ  ಮಾಡಿಕೊಳ್ಳುತ್ತವಾ!?

ಲೇಖಕರು - ಮಂಜುಳಾ ಡಿ 

         ಮನುಷ್ಯ ಭಾವನಾಜೀವಿ. ಭಾವತೀವ್ರತೆ ಹೆಚ್ಚಾಗಿ, ನಿರಾಸೆ-ಜಿಗುಪ್ಸೆ-ಹತಾಶೆ ಇಂತಹ ಮಾನಸಿಕ ಸ್ಥಿತಿಗಳಲ್ಲಿ ಮುಂದೆ ದಾರಿ ಇಲ್ಲ, ಸಾವೊಂದೇ ಮಾರ್ಗ  ಎನಿಸುವುದು ಪ್ರತಿ ಮನುಷ್ಯ ಜೀವನದಲ್ಲಿ ಎದುರಿಸುವ ಸ್ಥಿತಿಯಾದರೂ ಆಳವಾದ ಬಾಂದವ್ಯ-ಪ್ರೀತಿ-ಅಕ್ಕರೆ ಇಂತಹ ಸಂಬಂಧ-ಭಾವನೆಗಳಿಂದಲೇ ತತ್ ಕ್ಷಣ ಚೇತರಿಕೆ ಸಾಧ್ಯವಾಗುವುದು, ಬದುಕು ಮುನ್ನೆಡೆಯುವುದು.



ಇದರಲ್ಲೇನೂ ವಿಶೇಷವಿಲ್ಲ!!! ಇದು ಸಹಜ. 

ಆದರೆ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವಾ!? ಅದೂ ಗುಂಪು ಗುಂಪಾಗಿ!

ಅತೀವವಾಗಿ ನೋವಾಗಿದ್ದಾಗ, ಸಮುದ್ರ ತಟದಲ್ಲಿ ಮರಳ ದಂಡೆಯ ಮೇಲೆ ಕುಳಿತು, ಇಡೀ ಸಮುದ್ರ ಮತ್ತು ಮತ್ತು ಅದರ ಮೇಲಾಗಸ ತನ್ನದೇ ಎನ್ನುವಂತೆ ಸ್ವಚ್ಛಂದವಾಗಿ ಹಾರುವ ಹಕ್ಕಿಗಳ ಗುಂಪನ್ನು ನೋಡಿದಾಗಲೆಲ್ಲಾ ಎಲ್ಲಾ ಬಿಟ್ಟು ಹಕ್ಕಿಯಾಗಿ ಹಾರಿಬಿಡಬಾರದೇ ಎನ್ನಿಸದೇ ಇರಲಾರದು. ಇಂತಹ ಚೇತನ ತುಂಬುವ ಹಕ್ಕಿಗಳೂ  ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದರೆ ನಂಬಬಹುದಾ!

ಹಾದು! ನಂಬಲೇಬೇಕು!! ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ, ಅದೂ ಗುಂಪು ಗುಂಪಾಗಿ!

ಇರಬಹುದು! ಇದರಲ್ಲೇನು ವಿಶೇಷ, ಯಾವುದೋ ಚಂಡಮಾರುತ, ಬರ್ಡ್ ವೈರಸ್, ಅಥವಾ ಸೈಕ್ಲೋನ್ ಅಥವಾ ಹವಾಮಾನ ವೈಪರೀತ್ಯದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಪಕ್ಷಿಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಉದಾಹರಣೆಗೆ 2019 ರಲ್ಲಿ ರಾಜಸ್ಥಾನದ ಸಾಂಬಾರ್ ಲೇಖ್ ನಲ್ಲಿ ಸಾವಿರಾರು ಪಕ್ಷಿಗಳು ಒಟ್ಟಿಗೆ ಸಾವನ್ನಪ್ಪಿದ್ದು ಇನ್ನೂವರೆಗೆ ನಿಗೂಢವಾಗಿಯೇ ಉಳಿದಿದೆ. ಇದು ಕೂಡ ಅಂತದ್ದೇ ಒಂದು ವರದಿಯಾಗಿರಬಹುದು ಎಂದು ಅಂದಾಜಿಸಿದರೆ ತಪ್ಪು ಅದು ತಪ್ಪು!

ಏಕೆಂದರೆ ಪ್ರತೀವರ್ಷ ನೂರಾರು-ಸಾವಿರಾರು ಕಿ.ಮೀ ದೂರದಿಂದ ಸೆಪ್ಟಂಬರ್ ನಿಂದ ನವೆಂಬರ್ ವರೆಗಿನ ಸಮಯದಲ್ಲಿ  ಸಂಜೆ 7  ರಿಂದ ರಾತ್ರಿ 10 ರ ವರೆಗಿನ ವೇಳೆಯಲ್ಲಿ ಪಕ್ಷಿಗಳು ಸತ್ತು ನೆಲಕ್ಕೆ ಬೀಳುತ್ತವೆ, ಈ ರೀತಿ  ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲುಗಳಂತೆ  ಸತ್ತು ಬಿದ್ದಿರುವ ಪಕ್ಷಿಗಳ ಚಿತ್ರಗಳನ್ನು ನೋಡಿದರೆ  ದಿಗ್ಭ್ರಮೆ ಸಹಜಾಗಿ ಮೂಡುತ್ತದೆ.

ಇಷ್ಟಕ್ಕೂ ಆ ಸ್ಥಳ ಯಾವುದು? ಯಾಕೆ ಪಕ್ಷಿಗಳು ಅಷ್ಟು ದೂರದಿಂದ ವಲಸೆ ಬಂದು ಈ ಸ್ಥಳದಲ್ಲೇ ಸಾಯುತ್ತವೇ? ಇಂತಹ ಪ್ರಶ್ನೆಗಳು ಏಕಕಾಲಕ್ಕೆ ದಾಳಿಯಿಡದೇ ಇರಲಾರದು. ಹೀಗೆ ಸತ್ತು ಬೀಳುವ ಪಕ್ಷಿಗಳು ಆತ್ಯಹತ್ಯೆ ಮಾಡಿಕೊಳ್ಳುತ್ತಿವೆ ಎಂದು ಏಕೆ ಹೇಳಲಾಗುತ್ತಿದೆ?



ಅಸ್ಸಾಂ! ಅಂದೊಡನೆ ನಮ್ಮ ಮೆದುಳಿಗೆ ಅಚ್ಚ ಹಸಿರಿನ ಚಹಾ ತೋಟಗಳು ಕಣ್ಮುಂದೆ ತೇಲುತ್ತವೆ. ಅಸ್ಸಾಂನ ರಾಜಧಾನಿ ಗೌಹಾಟಿಯಿಂದ 330ಕಿ.ಮೀ ದೂರದ ದಿಮ್ಸ ಹಸಾಓ ಜಿಲ್ಲೆಯ ಚಿಕ್ಕದೊಂದು ಹಳ್ಳಿ “ಜತಿಂಗ” ಎಂಬುದೇ ಈ ಪಕ್ಷಿಗಳ “ಡೆತ್ ವ್ಯಾಲಿ”!. ಪ್ರತೀ ವರ್ಷ ಸೆಪ್ಟಂಬರ್ ನಿಂದ ನವೆಂಬರ್ ವರೆಗೆ ವಿವಿಧ ಸ್ಥಳಗಳಿಂದ ಸುಮಾರು 44 ವಿವಿಧ ಜಾತಿಯ ಪಕ್ಷಿಗಳು ವಿವಿಧ ಸ್ಥಳಗಳಿಂದ ಇಲ್ಲಿಗೆ ವಲಸೆ ಬರುತ್ತವೆ. ವಾತಾವರಣ ಬದಲಾವಣೆಗಾಗಿ ಅಥವಾ  ಮರಿ ಹಾಕುವ ಸಮಯಕ್ಕಾಗಿ ಪಕ್ಷಿಗಳು ಇಲ್ಲಿ ಗೆ ವಲಸೆ ಬರುವುದಿಲ್ಲ, ಬದಲಾಗಿ ಖುದ್ದು ಸತ್ತು ಬೀಳಲು ಬರುತ್ತವೆ ಎಂಬುದೇ ಅಚ್ಚರಿ ಮೂಡಿಸುವುದು. ಹೀಗೆ ಸಾಯುತ್ತಿರುವುದು ವಲಸೆ ಬಂದ ಪಕ್ಷಿಗಳು ಮಾತ್ರವಲ್ಲ ಲೋಕಲ್ ಬ್ರೀಡ್ ಗಳೂ ಕೂಡ ಸಾವನ್ನಪ್ಪುತ್ತಿವೆ.

ಜತಿಂಗ ಕೇವಲ 2500 ಜನವಸತಿಯಿರುವ ಅತೀ ಸಣ್ಣಹಳ್ಳಿ. 1890  ರಲ್ಲಿ  ನಾಗಾ ಎಂಬ ಗುಂಪಿನ ಜನ ಮೊದಲಿಗೆ ಇಲ್ಲಿ ವಾಸಿಸುತ್ತಿದ್ದರು. ಚಂದ್ರನ ಬೆಳಕು ಇಲ್ಲದ ರಾತ್ರಿಯಲ್ಲಿ ಹಕ್ಕಿಗಳು ಸತ್ತು ಬೀಳುವುದನ್ನು ಕಂಡ ಇವರು ದುಷ್ಟಶಕ್ತಿಯ ಪರಿಣಾಮ ಎಂದು ಈ ಸ್ಥಳ ಬಿಟ್ಟರು. ನಂತರ ಕೆಲವು ಬುಡಕಟ್ಟು ಜನ ಇಲ್ಲಿ ವಾಸಕ್ಕಾಗಿ ನೆಲೆಸಿದ್ದು, 1905 ರಲ್ಲಿ ರಾತ್ರಿ ಎಮ್ಮೆಯೊಂದು ತಪ್ಪಿಸಿಕೊಂಡಿರುವುದನ್ನು ಹುಡುಕುವ ಸಲುವಾಗಿ ಪಂಜುಗಳನ್ನು ಹಿಡಿದು ರಾತ್ರಿ ವೇಳೆ ಹುಡುಕಾಟಕ್ಕಾಗಿ ಜನರು ಹೋದಾಗ ವಿಚಿತ್ರವಾಗಿ ವರ್ತಿಸುತ್ತಿದ್ದ ಪಕ್ಷಿಗಳು ಪಂಜಿನ ಬೆಳಕಿಗೆನೆಡೆಗೆ ಹಾರಿಬಂದು ತಾಕಿ  ಸತ್ತು ಬೀಳುವುದನ್ನು ಕಂಡು ದೇವರು ತಮಗಾಗಿ ಕಳುಹಿಸಿದ ಉಡುಗೊರೆ ಎಂದು ಭಾವಿಸಿದರು.

ಪಕ್ಷಿಗಳು ಯಾಕೆ ಹೀಗೆ ವಿಚಿತ್ರವಾಗಿ ವರ್ತಿಸಿ ಸತ್ತು ಬೀಳುತ್ತವೆ. ಒಂದಷ್ಟು ಅಧ್ಯಯನಗಳ ಪ್ರಕಾರ 1683 ಅಡಿ ಸಮುದ್ರ ಮಟ್ಟದಿಂದ ಎತ್ತರವಿರುವ, ಬೆಟ್ಟಗಳ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ ಸೆಪ್ಟಂಬರ್ ನಿಂದ ನವೆಂಬರ್ ವರೆಗಿನ ಶೀಥಲಗಾಳಿ ಮತ್ತು ಮಂಜು ಕವಿದ ಸಮಯದಲ್ಲಿ ದಿಕ್ಕು ತಿಳಿಯದೇ ಪಕ್ಷಿಗಳೂ ಬೆಳಕಿನಡೆಗೆ ಆಕರ್ಷಿತವಾಗಿ ಹಾರುತ್ತವೆ. ಅದು ಬೆಳಕಿನೆಡೆಗೆ ಹಾರಿ ಲೈಟಿಗೆ  ಚಚ್ಚಿಕೊಳ್ಳುವಂತೆ ಮತ್ತು ಗಾಯಗೊಂಡು ನೆಲಕ್ಕೆ ಬೀಳುವಂತೆ ಮಾಡುತ್ತಿದ್ದು, ಇಂತಹ ಪಕ್ಷಿಗಳನ್ನು ಜನರು ಹಕ್ಕಿಗಳ ಮಾಂಸಕ್ಕಾಗಿ ಉಪಯೋಗಿಸುತ್ತಿದ್ದಾರೆ ಎಂದು ತಿಳಿಸುತ್ತದೆ. ಆದರೆ!  ಜತಿಂಗದ 1.5 ಕಿ.ಮೀ ಪ್ರದೇಶದಲ್ಲಿ ಮಾತ್ರ ಹೀಗೆ ಹೆಚ್ಚು ಪಕ್ಷಿಗಳು ಇಂತಹ ವರ್ತನೆ ತೋರುತ್ತಿದ್ದು, ಈ ಪ್ರದೇಶದ ಎಲೆಕ್ಟ್ರೋಮ್ಯಾಗ್ನೆಟಿಕ್ ರಿಂಗ್ ನ ತೀವ್ರತೆಯ ಪರಿಣಾಮದಿಂದಾಗಿ ಹಕ್ಕಿಗಳ ನರಕೋಶದ ಕಾರ್ಯವಿಧಾನ ವ್ಯತಿರಿಕ್ತಗೊಂಡು ದಾರಿಗಾಗಿ ಅರಸುತ್ತಾ ಬೆಳಕಿನೆಡೆಗೆ ಹಾರುವಾಗ ಬೆಂಕಿಗೆ ತಾಗಿ ಅಸುನೀಗುತ್ತಿವೆ ಎಂದು ವಿಶ್ಲೇಷಣೆ ನೀಡುತ್ತದೆ.

ಸಂಜೆಯಾಗುತ್ತಲೇ ಗೂಡಿಗೆ ತೂರಿಕೊಳ್ಳುವ ಹಕ್ಕಿಗಳು ರಾತ್ರಿ ಏಕೆ ಹಾರುತ್ತವೆ ಎಂಬುದು ದೊಡ್ಡ ಪ್ರಶ್ನೆಯಾಗುತ್ತದೆ.

ನೂರಾರು ವರ್ಷಗಳಿಂದಲೂ ಹೀಗೆ ಪಕ್ಷಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದರ ಹಿಂದಿರುವ ರಹಸ್ಯ ಬೇಧಿಸಲು ಹಲವಾರು ಪಕ್ಷಿವಿಜ್ಙಾನಿಗಳು ಜತಿಂಗಾಗೆ ತೆರಳಿ ಅಧ್ಯಯನ ಮಾಡಿದ್ದಾರೆ. 1957 ರಲ್ಲಿ ಬ್ರಿಟೀಷ್ ಪಕ್ಷಿವಿಜ್ಙಾನಿ ಇ.ಪಿ.ಗೀ ಅವರ ಪುಸ್ತಕ “ವೈಲ್ಡ್ ಲೈಫ್ ಇನ್ ಇಂಡಿಯಾ” ದಲ್ಲಿ ‘ಇದೊಂದು ವಿಸ್ಮಯಕಾರಿ ವಿಷಯ’ ಎಂದು ಉಲ್ಲೇಖಿಸಿದ್ದಾರೆ. 1977 ರಲ್ಲಿ ಜೂ಼ವಾಲಜಿಕಲ್ ಸರ್ವೆ ಆಫ್ ಇಂಡಿಯಾದ ತಂಡ ಭೇಟಿ ನೀಡಿ ಪರಿಶೀಲಿಸಿತು. ತದನಂತರ ಅಮೇರಿಕಾ, ಯುರೋಪ್, ಜಪಾನ್ ನಿಂದ ನಿಪುಣರ ತಂಡಗಳು ಭೇಟಿನೀಡಿದವು.

ಭಾರತದ ಪ್ರಸಿದ್ಧ ಪಕ್ಷಿವಿಜ್ಙಾನಿ ಸಲೀಂ ಅಲಿ ಮತ್ತು ಸುಧೀರ್ ಸೇನ್ ಗುಪ್ತಾ “ಈ ಇಡೀ ವಿದ್ಯಾಮಾನ ವಿಚಲಿತಗೊಳಿಸುವಂತಿದೆ. ವಲಸೆ ಬಂದ ಪಕ್ಷಿಗಳಲ್ಲದೇ ಅದೇ ಸ್ಥಳದ ಪಕ್ಷಿಗಳ ವರ್ತನೆಯ ಕುರಿತು ಎಲ್ಲಾ ಕೋನಗಳಿಂದ ಆಳವಾದ ಅಧ್ಯಯನದ ಅತ್ಯಂತ ಅಗತ್ಯವಿದೆ” ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜತಿಂಗಾದ ಜನರು ಮಳೆಬಂದಾಗ ಪಕ್ಷಿಗಳು ಇನ್ನೂ ಹೆಚ್ಚಾಗಿ ವಿಚಿತ್ರ ವರ್ತನೆ ತೋರುತ್ತವೆ ಎಂಬುದನ್ನು ವಿವರಿಸುತ್ತಾರೆ. ಪ್ರಸ್ತುತ ಜತಿಂಗಾದಲ್ಲಿ ಹೆಚ್ಚು ಅಕ್ಷರಸ್ಥರಿದ್ದಾರೆ. ವೈಲ್ಡ್ ಲೈಫ್ ಮತ್ತು ಪಕ್ಷಿ ಸಂರಕ್ಷಣೆಯ ಮಹತ್ವದ ಕುರಿತು ಜನರಿಗೆ ಅರಿವು ಮೂಡಿಸುವ ಕ್ರಮಗಳಿಂದ ಪ್ರಸ್ತುತ ಪಕ್ಷಿಗಳ ಸಾವಿನ ಪ್ರಮಾಣ ತುಸು ಕಡಿಮೆಯಾಗಿರಬಹುದಾದರೂ ಈ ನಿಗೂಢತೆ ಹಾಗೆಯೇ ಮುಂದುವರೆದಿದೆ.

ಸೂರ್ಯಾಸ್ತವಾಗುತ್ತಿದ್ದಂತೆ ಗೂಡಿಗೆ ತೆರಳುವ ಪಕ್ಷಿಗಳು ರಾತ್ರಿ ಸಮಯದಲ್ಲಿ ಹಾರುವುದೇಕೇ? ಈ ಪಕ್ಷಿಗಳ ಸಾವು ಜತಿಂಗದ ನಿಗದಿತ ಭಾಗದಲ್ಲಿ ಮಾತ್ರ ಏಕೆ ಜರುಗುತ್ತಿದೆ? ಪಕ್ಷಿಗಳು ತಮಗೆ ಅತ್ಯಂತ ದುರ್ಬರವಾಗಿರುವ ಪ್ರತಿಕೂಲವಾಗಿರುವ ಈ ಸ್ಥಳವನ್ನೇ ಅರಸಿ ಏಕೆ ದೂರದಿಂದ ಬರುತ್ತವೆ? ಬೆಂಕಿಯ ಹತ್ತಿರ ಹಾರುತ್ತಿದ್ದಂತೆ ಸುರಕ್ಷಿತವಾಗಿಲ್ಲ ಎಂದು ತಿಳಿದೂ ಪಕ್ಷಿಗಳು ದಿಕ್ಕು ಬದಲಿಸಿ ಹಾರದೇ ಇರುವದೇಕೆ?

ಇತ್ಯಾದಿ ಪ್ರಶ್ನೆಗಳು ಇಂದಿಗೂ ಜಗತ್ಯಿನಾದ್ಯಂತ ಅನೇಕ ಪಕ್ಷಿವಿಜ್ಙಾನಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ತಜ್ಙರಿಗೂ ಬಿಡಿಸದ ಒಗಟುಗಳಾಗಿಯೇ ಉಳಿದಿವೆ. ಶತಮಾನಗಳಿಂದ ಹೀಗೆ ಗುಂಪಾಗಿ ಸಾವಿಗೀಡಾಗುತ್ತಿರುವ ಪಕ್ಷಿಗಳ ರಕ್ಷಣೆಗೆ ಮಾರ್ಗಸಿಗಲಿ ಎಂಬ ಆಶಯದಿಂದ ಈ ಲೇಖನ...

ಗುಂಪು ಗುಂಪಾಗಿ ಹೀಗೆ ಪಕ್ಷಿಗಳು  ಬೆಂಕಿ-ಬೆಳಕಿನೆಡೆಗೆ ಸಾಗಿ ಸಾಯುತ್ತಿರುವುದು ತಿಳಿದಾಗ ಅರಿವಿಲ್ಲದೇ ಈ ಸಾಲು ಮನದಲ್ಲಿ ತೇಲಿತು...

ಶಮಾ ಕಹೇ ಪರವಾನೇ ಸೇ, ಪರೇ ಚಲಾ ಜಾ,

ಮೇರಿ ತರಾ ಜಲ್ ಜಾಯೇಗಾ ಯಹಾ ನಹೀ ಆ

ವೋ ನಹೀ ಸುನ್ ತಾ ಉಸಕೋ ಜಲ್ ಜಾನಾ ಹೋತಾ ಹೈ...

Comments

  1. surprised to know about this mass suicide attempts by birds. Nice info collected & written in Kannada. Nice article madam

    ReplyDelete

Post a Comment