ವಿಳಂಬಮೇ ಪ್ರಧಾನಮು

 ವಿಳಂಬಮೇ ಪ್ರಧಾನಮು 

ಹಾಸ್ಯ ಲೇಖನ - ಅಣುಕು ರಾಮನಾಥ್ 


‘ಮಾನವ... ಆಗುವ ಸಮಯದ ಗೊಂಬೆ’ ಎಂದು ರಾಜ್‌ಕುಮಾರ್ ಅದಾವುದೋ ಚಿತ್ರದಲ್ಲಿ ಹಾಡಿರಬಹುದು. ನನ್ನನ್ನು ನೋಡಿದರೆ ಅವರು ಆ ಹಾಡನ್ನು ಹಾಡುವುದರಿಲಿ, ಓದುತ್ತಲೂ ಇರಲಿಲ್ಲ.

ಜಗತ್ತಿನಲ್ಲಿ ಯಾರಾದರೂ ಗಡಿಯಾರದ್ವೇಷಿ ಸಂಘವನ್ನು ಸ್ಥಾಪಿಸಿದರೆ ಅದರ ಅಧ್ಯಕ್ಷ ಪದವಿಗೆ ಲಾಯಕ್ಕಾದ ವ್ಯಕ್ತಿ ನಾನು. ‘ಗಂಟೆಗಳ ದನಿಯಿಲ್ಲ; ಜಾಗಟೆಗಳಿಲ್ಲಿಲ್ಲ; ಕರ್ಪೂರದಾರತಿಯ ಜ್ಯೋತಿಯಿಲ್ಲ’ ಎಂದು ರಸಋಷಿಯೋ, ಸಾಂಬಾರ್‌ಋಷಿಯೋ ಬರೆದಂತೆಯೇ ‘ಎಬ್ಬಿಸುವ ಧಣಿಯಿಲ್ಲ; ಅಲಾರ್ಮ್ ಕ್ಲಾಕು ಇಲ್ಲಿಲ್ಲ; ಮಸೀದಿ ದೇಗುಲದ ಘೋಷವಿಲ್ಲ; ಸುಖನಿದ್ರೆಯಾನಂದ ಕೂಪುಗೊಂಡಿಹುದಿಲ್ಲಿ; ಗೊರಕೆಯಲೆ ಮುಂಜಾವು ಕಳೆವುದಿಲ್ಲಿ’ ಎಂದು ಬರೆದರೆ ನನ್ನ ನಿಜರೂಪವನ್ನು ಬಣ್ಣಿಸಿದಂತಾದೀತು. 


ಆದೊಡೇಂ! ನನ್ನೆಲ್ಲ ತಲ್ಪಾಲಿಂಗನಸುಖಕ್ಕೆ ಭಂಗ ತಂದೇ ತರುವೆನೆಂದು ಅಂದೊಮ್ಮೆ ನನ್ನಾಕೆ ಪಣ ತೊಟ್ಟಳು. ನಿಶೆ ಇನ್ನೂ ಹೋಗಲೋ ಬೇಡವೋ ಎಂದು ಆಲೋಚಿಸುತ್ತಾ ಆಕಳಿಸುತ್ತಿರುವಾಗ ‘ದಾರಿಬಿಡಿ ದಾರಿಬಿಡಿ ಸೂರ್ಯ ಬಂದ’ ಎಂದು ಘೋಷಿಸುತ್ತಾ ಅರುಣ ತನ್ನ ರೆಡ್ ಕಾರ್ಪೆಟ್ಟನ್ನು ಹಾಸುವ ಸಮಯದಲ್ಲಿ ಸೂರ್ಯನಿಗೆ ಗುಡ್ ಮಾರ್ನಿಂಗ್ ಹೇಳಲೆಂದು ಆ ಹೊತ್ತಿಗೇ ಏಳುವುದು ನನ್ನವಳ ಪದ್ಧತಿ, ನಿಯಮ, ಕಾನೂನು. ‘ಜೋಡಿವಾಲಗದಂತೆ ಜೋಡಿಗುಡ್‌ಮಾರ್ನಿಂಗ್ ಹೇಳೋಣ. ನೀವೂ ಏಳಿ’ ಎಂದು ವಿವಾಹದ ಹೊಸತರಲ್ಲಿ ಹೇಳಿದಳವಳು.

ಹೊಸ ಹೆಂಡತಿ; ಪ್ರೀತಿಯ ಮೂಟೆ ಆಗಷ್ಟೇ ತೆರೆದುಕೊಂಡ ಸಂದರ್ಭ. ‘ಊಹೂಂ. ಏಳಲ್ಲ ಹೋಗು’ ಎನ್ನಲು ನಾಲಗೆಯೇ ಏಳಲಿಲ್ಲ. ಮರುದಿನ ಕಣ್ಣಿಗೆ ಮೂರು ಚೊಂಬು ನೀರು ಸುರಿದುಕೊಂಡರೂ ಸುಪ್ತಾವಸ್ಥೆ ಸರಿಯುವುದೇ ಇಲ್ಲ ಎಂದು ಹಠದಲ್ಲಿ ಕುಳಿತಿತ್ತು. ಆ ಸರಿರಾತ್ರಿಯಲ್ಲಿ (ಅದನ್ನು ಅವಳು ಬ್ರಾಹ್ಮಿಮುಹೂರ್ತ ಎನ್ನುತ್ತಾಳೆ. ಆ ಹೊತ್ತಿನಲ್ಲಿ ಯಾವುದಾದರೂ ಮುಹೂರ್ತ ಇರುತ್ತದೆಂಬುದೇ ಒಂದು ಭ್ರಾಂತಿ ಎಂಬುದು ನನ್ನ ಅನಿಸಿಕೆ) ‘ನಿನಗಾಗಿ ಒಂದ್ಲೋಟ ತಂದೆ; ನಾನು; ರಗ್ಗೊಳು ಹೀಗೇಕೆ ಮರೆಯಾಗಿಹೋದೆ; ನೀನು’ ಎನ್ನುತ್ತಾ ಕಾಫಿಯ ಲೋಟವನ್ನು ಮೂಗಿಗೆ ಹಿಡಿದಳು. ಮೂಗಿಗಡರಿದ ಘಮಕ್ಕೆ ಕಣ್ಣಿಗಡರಿದ ನಿದ್ರಾರೋಲಿಂಗ್ ಷಟರ್ strike, rally, ಸಂಪು, lockdownಗಳ ಸಮಯದಲ್ಲಿ ಪೊಲೀಸರ ಸದ್ದು ಕೇಳಿದಾಕ್ಷಣ ಎಳೆಯಲು ಅನುಕೂಲವಾಗುವಂತೆ ಅಂಗಡಿಯವರು ಅರೆದಾರಿ ಏರಿಸಿದ ರೋಲಿಂಗ್ ಷಟರ್‌ನ ಮಟ್ಟಕ್ಕೆ ಮೇಲೇರಿತು.

ಈ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಅತ್ತ ಸೂರ್ಯನ ಬರುವಿಕೆಯನ್ನೇ ಕಾದು ಕುಳಿತ ಅಗಲಕಂಗಳ ಚೆಲುವೆ. ಇತ್ತ ಪಿಳುಚುಕಣ್ಣಿನ, ಗೊರಕೆಯನ್ನು ಮ್ಯೂಟ್ ಮಾಡಿಕೊಂಡಿರುವ, ಆಂಗ್ಲದಲ್ಲಿ ಸ್ಲೌಚ್ ಎಂದು ಕರೆಯಲು ಯೋಗ್ಯವಾದ ಭಂಗಿಯಲ್ಲಿರುವ ನಿದ್ರಾಮ. ನಿಶಾದೇವಿ ‘ಬಾ ಎನ್ನ ತೆಕ್ಕೆಗೆ’ ಎಂದು ತನ್ನ ತೋಳುಗಳನ್ನು ವಿಸ್ತಾರವಾಗಿ ಚಾಚುತ್ತಿದ್ದರೂ ಕಾಫಿಯೆಂಬ ಸೈಕಲಾಜಿಕಲ್ ಪಿಲ್ಲರನ್ನು ಆಧರಿಸಿ ಉಷೆಯ ಕರೆಗೆ ಕಾಯುವ ವಿಷಮ ಪರಿಸ್ಥಿತಿಯನ್ನು ತಲುಪಿದ್ದ ನಾನು ನಿಶಾದೇವಿಗೆ ಟಿಯರ್‌ಫುಲ್ ಗುಡ್‌ಬೈ ಹೇಳಿದೆ.

ಅರುಣ ಬಂದ. ಇವನ ಮೇಲೆಯೂ ನನಗೆ ಬಹಳ ಸಿಟ್ಟಿದೆ. ಮಾರ್ಕೆಟ್ಟಿನಲ್ಲಿ ಸಕಲ ಅಂಗಗಳೂ ಸರಿಯಿರುವವರು ಸುಮ್ಮನೆ ಕುಳಿತು ಭಿಕ್ಷೆ ಬೇಡುತ್ತಿರುತ್ತಾರೆ. ಸಿಗ್ನಲ್ ಲೈಟುಗಳ ಬಳಿ ಸಿನಿಮಾ ತಾರೆಯರನ್ನೂ ಮೀರಿಸುವಂತೆ ಡ್ರೆಸ್ ಮಾಡಿಕೊಂಡು ಚಪ್ಪಾಳೆ ತಟ್ಟಿ ಹಣ ಪಡೆಯುವ ಸುಂದರಾಂಗದ ಸುಂದರಿಯರು (ಅಲ್ಲ; ಅವರದೇ ಬೇರೆ ಪಂಗಡ ಎನ್ನುವವರಿದ್ದರೂ ಅವರ ಹಾವಿನ ಅಕ್ಕನ ಗಂಡನನ್ನು (ಹಾವಭಾವ) ನೋಡಿದರೆ ಹಾಗನ್ನಿಸುವುದಿಲ್ಲ) ಇರುತ್ತಾರೆ. ಸಕಲಾಂಗಗಳು ಸರಿಯಿರುವವರೇ ಹೀಗೆ ಸುಲಭದ ಜೀವನಮಾರ್ಗ ಅನುಸರಿಸುತ್ತಿರುವಾಗ ಈ ಕುಂಟ (ಅರುಣ ಕುಂಟನೆಂದು ಆರ್ಥೋಪೆಡಿಕ್ ಪುರಾಣದಲ್ಲಿ ಬರೆದಿದ್ದಾರಂತೆ) ಬೆಳಗಾಗೆದ್ದು ಸೂರ್ಯನಿಗೆ ರೆಡ್ ಕಾರ್ಪೆಟ್ ಹಾಸುವ ಹುಚ್ಚೇಕೆ? ನನ್ನಂತೆ ತೆಪ್ಪನೆ ಮಲಗಲೇನು ದಾಡಿ ಅವನಿಗೆ? ಅಂತೂ ಅಂದೂ ಅರುಣ ರೆಡ್ ಕಾರ್ಪೆಟ್ ಹಾಸಿ ಹೋದ. ಅಂದು ಸೂರ್ಯ ಸಚಿನ್ ತೆಂಡುಲ್ಕರ್‌ನ ಮನೆಯ ಕಡೆಯಿಂದ ನಮ್ಮ ಮನೆಗೆ ಬಂದಿದ್ದ ಎನಿಸುತ್ತದೆ. ಅವನಿಗಾಗಿ ಇಟ್ಟಿದ್ದ ಬೂಸ್ಟನ್ನು ತನ್ನ ಕಿರಣಗಳಿಂದ ಹೀರಿದ್ದನೆನಿಸುತ್ತದೆ. ಎಂದಿಗಿಂತ ಪ್ರಖರವಾಗಿದ್ದ. ಕೇಳಿದ್ದರೆ ‘ಬೂಸ್ಟ್ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ’ ಎನ್ನುತ್ತಿದ್ದನೇನೋ. ಅಂತೂ ಸೂರ್ಯನಿಗೆ ಜೋಡಿಗುಡ್‌ಮಾರ್ನಿಂಗ್ ಹೇಳಿದ್ದಾಯಿತು.

ಸ್ವಲ್ಪ ಹೊತ್ತಿಗೆ ತಿಂಡಿ ಬಂದಿತು. ಹೊಟ್ಟೆ ಭಾರವಾಯಿತು. ರೆಪ್ಪೆಗಳು ರೋಲಿಂಗ್ ಷಟರ್‌ಗಳಂತೆ ಕೆಲಸ ಆರಂಭಿಸಿದವು. ಮೂಗಿನ ಹೊಳ್ಳೆಗಳು ಮಂದಗತಿಯ ಉಸಿರಾಟಕ್ಕೆ ಅನುವಾದವು. ಬಾಯಿ ಅಷ್ಟೇ ಅಷ್ಟು ತೆರೆದುಕೊಂಡಿತು. ತಲೆ ಸೋಫಾದ ಮೆತ್ತೆಗೆ ಒರಗಿತು. ಸೂಪರ್ ಗವರ್ನ್ಮೆಂಟ್ ಆಫೀಸರ್‌ಗಳ ಸೂಪರ್ ಸಿಯೆಸ್ಟಾದ ತುಣುಕೊಂದು ಬೆಳ್ಬೆಳಗ್ಗೆಯೇ ನನ್ನಲ್ಲಿ ಪ್ರತಿಷ್ಠಾಪನೆಗೊಂಡಿತು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ಫಲವಾಗಿ ನಿದ್ರೆಯ ಸೆಕೆಂಡ್ ಇನಿಂಗ್ಸ್ ಆರಂಭವಾಯಿತು. ಅಂದಿನ ಎಲ್ಲ ಕೆಲಸಗಳು ಎರಡು ಗಂಟೆಗಳಷ್ಟು ಕಾಲ ಅಡ್ಜರ್ನ್ ಆದವು.

ಇಂತಿಪ್ಪ ಶುದ್ಧ ಸೋಮಾರಿ, ನಿದ್ರಾದೇವಿಯ ಪರ್ಮನೆಂಟ್ ಪ್ರಿಯಕರನಾದ ನನಗೆ ಮೂರನೆಯ ಕಾಲ, ನಾಲ್ಕನೆಯ ಕಾಲದ ಸಂಗೀತಕ್ಕಿಂತ ವಿಳಂಬಕಾಲದ ಸಂಗೀತವೇ ಇಷ್ಟ. ಯಾವುದೇ ಸಭೆ, ಸಮಾರಂಭಗಳಿಗೆ ಹೋಗಬೇಕಾದರೂ ಮಡದಿಯ ಪ್ರಾಂಪ್ಟಿಂಗ್, ಪ್ರಾಡಿಂಗ್ ಇಲ್ಲದೆ ಸಾಧ್ಯವೇ ಇಲ್ಲ. ಸರ್ವಾಲಂಕಾರಭೂಷಿತೆಯಾಗಿ, ಮೆಟ್ಟನ್ನು ಮೆಟ್ಟಿನಿಂತು ‘ಇನ್ನಾ ರೆಡಿ ಆಗ್ಲಿಲ್ವೇನ್ರೀ...’ ಎಂಬ ರಾಗ ಅವಳಿಂದ ಹೊಮ್ಮಿದಾಗಲೇ ನನ್ನ ಜಡತ್ವ ಕೊಂಚ ಹಿಮ್ಮೆಟ್ಟಿ  ಚಾಲನಶಕ್ತಿ ಜಾಗೃತವಾಗುವುದು. ಇಂತಹ ನಾನು ಅಂದೊಂದು ದಿನ ಟಿಪ್‌ಟಾಪಾಗಿ ಡ್ರೆಸ್ ಮಾಡಿಕೊಂಡು, ಷೂ ಏರಿಸಿ, ನೃಸಿಂಹನು ನಿಂತಂತೆ ಹೊಸ್ತಿಲಮೇಲೆ ನಿಂತು ‘ಇನ್ನೂ ರೆಡಿ ಆಗಿಲ್ವೇನೂ...?’ ಎಂದು ಉಚ್ಛಕಂಠನಾದೆ.

‘ಒಂದೇ ನಿಮಿಷ ಒಳಗೆ ಬನ್ನಿ’ ಎಂದಳವಳು. ಎರಡು ಅಡಿ ಮುಂದಿಟ್ಟೆ. ‘ಹಿತ್ತಿಲಲ್ಲಿ ಒಂದು ಡಬ್ಬಿಯಿದೆ. ಅದರ ಮುಚ್ಚಳ ತೆಗೆದುಕೊಡಿ. ಇಲ್ಲವಾದರೆ ಮುಸುರೆಯವಳಿಗೆ ಕಷ್ಟವಾಗುತ್ತೆ’ ಎಂದಳು. ಹಿತ್ತಿಲಿಗೆ ಹೋಗಲು ಪೂಜಾಗೃಹವನ್ನು ದಾಟಿ ಹೋಗಬೇಕು. ಷೂ ತೆಗೆದೆ. ಹಿತ್ತಿಲಿನಲ್ಲಿ ತೇವವಿರುವುದು ಸುನಿಶ್ಚಿತ. ಸಾಕ್ಸ್ ತೆಗೆದೆ. ಹಿತ್ತಿಲಿಗೆ ಹೋದೆ. ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿ ಫುಲ್‌ಸ್ಟೀಡಲ್ಲಿ ಗರ್ಭಗುಡಿಯನ್ನು ಹೊಕ್ಕು, ‘ಪತಿಯ ಪ್ರಾಣವನು ಉಳಿಸುವ ತನಕ ಬಿಡೆನು ನಿನ್ನ ಪಾದ’ ಎನ್ನುವಾಗ ರಾಘವೇಂದ್ರಸ್ವಾಮಿಗಳ ಪಾದವನ್ನು ಹೀರೋಯಿನ್ ಹಿಡಿದಿದ್ದ ಉಡದ ಹಿಡಿತವನ್ನು ಹೋಲುತ್ತಿತ್ತು ಆ ಡಬ್ಬಿಯನ್ನು ಆವರಿಸಿದ ಮುಚ್ಚಳದ ಹಿಡಿತ. ಡಬ್ಬಿಯೋ ಹರಳೆಣ್ಣೆಯದು. ಎಣ್ಣೆ ಹೊರಹರಿದು, ಸುತ್ತಲಿನ ಧೂಳನ್ನು ಸೆಳೆದುದರ ಕಾರಣ ಡಬ್ಬಿಯ ಸುತ್ತಳತೆ ಮೂರು ಎಂಎಂ ಹೆಚ್ಚಾಗಿತ್ತು. ಬಟ್ಟೆಗೆ ತಗುಲಿದರೆ ಡ್ರೈಕ್ಲೀನ್ ಅಂಗಡಿಯತ್ತ ಪ್ರಯಾಣ ಖಚಿತವೆನ್ನುವಷ್ಟು ಕೊಳಕಾದ ಡಬ್ಬಿ. ‘ಸ್ವಚ್ಛ್ ಡಬ್ಬಿ ಅಭಿಯಾನ್’ ಕೈಗೊಳ್ಳಲು ಸಮಯಾಭಾವ. ಡಬ್ಬಿಯು ಬಟ್ಟೆಗೆ ತಾಕದಂತೆ ಕೈಗಳನ್ನು ದೂರವೇ ಇರಿಸಿಕೊಂಡು, ಎಡಗೈಯಲ್ಲಿ ತಳ ಹಿಡಿದು ಬಲಗೈಯಲ್ಲಿ ಬಲವನ್ನೆಲ್ಲಾ ಬಿಟ್ಟು ಮುಚ್ಚಳವನ್ನು ತಿರುಗಿಸಿದೆ.

ಊಹೂಂ! ಯಮನ ಪಾಶವೂ ಸೆಳೆಯಲಾಗದಂತೆ ಶಿವಲಿಂಗವನ್ನು ಹಿಡಿದ ಮಾರ್ಕಾಂಡೇಯನಿಂದ ಆ ಡಬ್ಬಿಯ ಮುಚ್ಚಳ ಸ್ಫೂರ್ತಿ ಪಡೆದಂತಿತ್ತು. ದೇಹಭಾಗಕ್ಕೆ ಹತ್ತಿರವಾಗಿಸಿಕೊಳ್ಳದೆ ಅದನ್ನು ತೆರೆಯಲು ಸಾಧ್ಯವೇ ಇಲ್ಲವೆಂದು ತಿಳಿಯಿತು. ಒಳಬಂದು, ಸೂಪರ್ ರಿನ್ ಬಿಳುಪಿನ ಶರ್ಟನ್ನು ಕಳಚಿ, ಬನಿಯನ್‌ವಾಲಾ ಆಗಿ ಮತ್ತೆ ಹಿತ್ತಲಿಗೆ ಲಗ್ಗೆಯಿಟ್ಟೆ. ಶುರುವಾಯಿತು ನನ್ನ-ಮುಚ್ಚಳದ ಡಬ್ಬಜಗ್ಗಾಟ. ಮೊದಮೊದಲಿಗೆ ಕೈಗಳ ನರಗಳು ಉಬ್ಬಿನಿಂತವು. ಮುಚ್ಚಳ ತಟಸ್ಥವಾಗಿತ್ತು. ದಮ್ಮು ಕಟ್ಟಿ ಕೊರಳಿನ ನರಗಳನ್ನು ವೀಣೆಯ ತಂತಿಯಂತೆ ಸೆಟೆಸಿಕೊಂಡೆ. ಮುಚ್ಚಳ ಸ್ಥಾಯಿಸಮಿತಿಯ ಅಧ್ಯಕ್ಷತೆಯನ್ನು ಬಿಟ್ಟುಕೊಡಲಿಲ್ಲ. ಮುಖವನ್ನು ರಾಮನ ಸೇನೆಯ ಮುಖ್ಯಸ್ಥರ ಮಟ್ಟಕ್ಕೆ ತಿರುಚಿಕೊಂಡೆ. ಊಹೂಂ. ‘ಐದು ಗ್ರಾಮಗಳನ್ನು ಕೊಡು’ ಎಂದಾಗ ಕೊಡುವುದಿಲ್ಲವೆಂದು ಹಠ ಹಿಡಿದಿದ್ದ ದುರ್ಯೋಧನನ ಪಟ್ಟನ್ನೇ ಮುಚ್ಚಳ ತೋರುತ್ತಿತ್ತು. ಕಡೆಗೊಮ್ಮೆ ಹೆರಿಗೆಯ ಸಮಯದಲ್ಲಿ ಹೆಣ್ಣು ಮುಕ್ಕುವಂತೆ ಮುಕ್ಕುತ್ತಾ, ಮುಂದಕ್ಕೆ ಬಾಗಿ, ಬಲವನ್ನೆಲ್ಲ ಕ್ರೋಢೀಕರಿಸಿ ಮುಚ್ಚಳವನ್ನು ತಿರುಗಿಸಿದೆ.

ವಿಶ್ವಾಮಿತ್ರನ ಮುಂದಿನ ಮೇನಕೆಯ ನರ್ತನದ ಕೊನೆಯ ಪೋಸ್‌ನಂತೆ ಸರಸರಸರರ‍್ರನೆ ತಿರುಗಿತು ಮುಚ್ಚಳ. ಒಳಗಿದ್ದ ಉಳಿಕೆ ಹರಳೆಣ್ಣೆ ಮುಚ್ಚಳದ ನರ್ತನಕ್ಕೆ ಸ್ಟಾö್ಯಂಡಿಂಗ್ ಒವೇಷನ್ ಕೊಡಲೆಂದೋ ಏನೋ, ಡಬ್ಬಿಯಿಂದ ಛಂಗನೆ ಚಿಮ್ಮಿತು. ನಾನು ತೊಟ್ಟಿದ್ದ ಬನಿಯನ್ನು, ಪ್ಯಾಂಟುಗಳು ಹರಳೆಣ್ಣೆಯ ಸಂಗವನ್ನು ಹೀರಿಹೀರಿ ಸವಿದವು. ನನ್ನ ಮುಖ ಹರಳೆಣ್ಣೆ ಕುಡಿದವನಂತಾಯಿತು. 


ಒಳಹೋಗಿ ಡ್ರೆಸ್ ಬದಲಿಸತೊಡಗಿದೆ. ಮಡದಿ ನೃಸಿಂಹನ ಪೋಸ್‌ನಲ್ಲಿ ಹೊಸ್ತಿಲೇರಿ ‘ಇನ್ನಾ ರೆಡಿ ಆಗ್ಲಿಲ್ವೇನ್ರೀ...’ ಎನ್ನುತ್ತಿದ್ದಾಳೆ.

ಮೊದಲೇ ಹೇಳಿದಂತೆ, ನನಗೆ ವಿಳಂಬಕಾಲವೇ ಒಗ್ಗುವುದು ಸ್ವಾಮಿ!

Comments