ಸೋಕಿದಾಕ್ಷಣ ಶಿಲೆಯಾದರೆ...

ಸೋಕಿದಾಕ್ಷಣ ಶಿಲೆಯಾದರೆ...

ಲೇಖಕರು - ಮಂಜುಳಾ ಡಿ 

ನಂಬಿಕೆ- ವಿಶ್ವಾಸ-ಆರಾಧನೆ-ಸಪ್ರೇಮ-ಅನುರಾಗ ಇವು ಎಂತಹ ನವಿರಾದ ಮನ ಅರಳಿಸುವ ಶಬ್ದಗಳಿವು! ಇಂತಹ ಶಬ್ದಗಳು ಒಬ್ಬರಿಂದ ಹೊಮ್ಮಬೇಕಾದರೆ, ಭಾವನೆಗಳ ಪರಿಶುದ್ದತೆ ಪವಿತ್ರತೆ ಇದ್ದರಷ್ಟೇ ಸಾಧ್ಯ. ಇಂತಹ ಶುದ್ದ ಗಹನ ನಂಬಿಕೆಗೆ ಪೆಟ್ಟು ಬಿದ್ದಾಗ  ಮೂಡುವ ಅಪರಿಮಿತ  ಆಕ್ರೋಶ ಅಗಾಧ ಪರಿಣಾಮ ಬೀರಬಲ್ಲದು. ಎಷ್ಟೆಂದರೆ, ಎದುರಿಗಿರುವವರನ್ನು ಶಿಲೆಯಾಗಿಸುವಷ್ಟು!!!

ಗೌತಮ ಮಹರ್ಷಿಯ ಆಕ್ರೋಶದ ಸಿಡಿಲು ಸಿಡಿದ ಪರಿಗೆ  ಅಹಲ್ಯೆ ಶಿಲೆಯಾದ ಕಥೆ ಎಲ್ಲರೂ ಕೇಳಿಯೇ ಬೆಳೆದಿರುತ್ತೇವೆ.

  ಜಲಂಧರ ರಾಕ್ಷಸನ ಪತ್ನಿ ಬೃಂದಾ ವಿಷ್ಣುವಿನ ಅಸಮಾನ ಭಕ್ತೆ. ಬಲಾಢ್ಯನಾದ ಜಲಂಧರ ರಾಕ್ಷಸನನ್ನು ಮಣಿಸಲು, ಪರಮ ವಿಷ್ಣು ಭಕ್ತೆಳಾದ ಬೃಂದಾಳನ್ನು ವಿಷ್ಣುವೇ ಕಪಟದಿಂದ ಅವಳ ತಪಃ ಶಕ್ತಿ ನಿಸ್ತೇಜಗೊಳಿಸುತ್ತಾನೆ. ನಂಬಿದ ಸ್ವಾಮಿ ಕೈಬಿಟ್ಟ ಗಳಿಗೆ ನಂಬಿಕೆ ದ್ರೋಹ ದಿಂದ ದಿಕ್ಜೆಟ್ಟ ಬೃಂದಾ,  ವಿಷ್ಣುವನ್ನು ಶಿಲೆಯಾಗುವಂತೆ ಶಪಿಸುತ್ತಾಳೆ. ವಿಷ್ಣು ಸಾಲಿಗ್ರಾಮವಾಗಿ ಅವತರಿಸುತ್ತಾನೆ. ಇದೇ ವಿಷ್ಣು ತುಳಸಿ ವಿವಾಹದ ಮೂಲ ಚಂದದ ಕಥೆ. ವಿಷ್ಣು ಇಂದಿಗೂ ಸಾಲಿಗ್ರಾಮ ರೂಪದಲ್ಲಿ ಪೂಜಿಸಲ್ಪಡುವುದರ ಹಿಂದಿರುವ ಸ್ವಾರಸ್ಯಕರ ಕಥೆಯೂ ಇದೆ.

ತ್ರಿಪುರಾದ ಉನ್ ಕೋಟಿ( ಅಗರ್ ತಲಾ) ಸ್ಥಳದಲ್ಲಿ   99 ಲಕ್ಷ ದೇವತೆಗಳ ಶಿಲಾ ರಚನೆಗಳಿವೆ. ಈ ಶಿಲಾ ರಚನೆಗಳ ಹಿಂದಿರುವ ಕಥೆಯೂ ಅಷ್ಟೇ ಸ್ವಾರಸ್ಯಕರವಾಗಿದೆ. ಶಿವ ದೇವಾನುದೇವತೆಗಳೊಂದಿಗೆ ಕಾಶಿಗೆ ಹೋಗುವಾಗ ಈ ಸ್ಥಳದಲ್ಲಿ ರಾತ್ರಿ ತಂಗಿ, ಬೆಳಿಗ್ಗೆ ಪ್ರಯಾಣ ಮುಂದುವರೆಸಲು ಎಲ್ಲಾ ದೇವತೆಗಳು ಬೇಗ ಏಳದೇ ನಿದ್ರಿಸಿದಾಗ ಉಗ್ರನಾದ ಶಿವ ಆ ಎಲ್ಲಾ ದೇವತೆಗಳನ್ನು ಶಿಲೆಯಾಗಿಸಿದ ಎಂಬುದ ಸ್ಥಳದ ಹಿಂದಿನ ಕಥೆ. ಉನ್ ಕೋಟಿ ಅಂದರೆ ಕೋಟಿಗೆ ಒಂದು ಕಡಿಮೆ.



ಗ್ರೀಕ್ ನ ಪೌರಾಣಿಕ ಪ್ರಸಿದ್ಧ ಕಥೆ, "ಮೇಡುಸಾ", ವಿಷಪೂರಿತ ಹಾವುಗಳು ತಲೆಯಲ್ಲಿದ್ದ ಭಯಂಕರ ರಾಕ್ಷಸಿ. ಆಕೆ ಕಣ್ಬಿಟ್ಟರೆ ಎದುರಿಗಿರುವವರು ಕಲ್ಲಾಗಿ ಹೋಗುತ್ತಿದ್ದ ಭೀಕರತೆ ಆಕೆಗಿತ್ತು. ಪರ್ಸ್ಯೂಯಸ್ ಆಕೆಯನ್ನು ಕೊಂದು ಅವಳ ತಲೆಯನ್ನು ತನ್ನ ದಂಡವಾಗಿಸಿಕೊಂಡು, ಎದುರಾಳಿಗಳನ್ನು ಕಲ್ಲಾಗಿಸಿ ಮಣಿಸುತ್ತಿದ್ದ.

ಇಂತಹ ಕಥೆಗಳು ಬಹಳಷ್ಟು ಇವೆ. ಆದೆ ನಿಜವಾಗಿಯೂ  ಮುಟ್ಟಿದಾಕ್ಷಣ ಕಲ್ಲಾಗುವುದು ಸಾಧ್ಯವೇ!?

ಛೇ! ಅದು ಹೇಗೆ ತಾನೆ  ಸಾಧ್ಯ! ಇದು ಇನ್ನೊಂದು ಕಥೆಯಿರಬಹುದು ಎನ್ನಿಸದೇ ಇರದು. ಆದರೆ ವಾಸ್ತವದಲ್ಲಿ ಸೋಕಿದಾಕ್ಷಣ ಶಿಲೆಯಾಗುವ ಒಂದು ಕೌತುಕವಿದೆ!! ಇದೇನೂ ಕಥೆಯಲ್ಲ, ಯಾವುದೋ ರೌದ್ರದ ಪರಿಣಾಮವೂ ಅಲ್ಲ, ಜಾದೂ ಅಲ್ಲವೇ ಅಲ್ಲ,  ಯಾವುದೋ ಶಕ್ತಿಯುತ ದೇವಸ್ಥಾನ ಅಂದುಕೊಂಡರೆ ಅದೂ ಅಲ್ಲ! ಕಣ್ಣಿಗೆ ತಾಕುವ ಕಟು ವಾಸ್ತವ. ಸೋಕಿದಾಕ್ಷಣ ಪ್ರಾಣಿಗಳು ಶಿಲೆಯಾಗಿ ನಿಲ್ಲುವ ಪರಮಾಶ್ಚರ್ಯ!!!

  ಹೀಗೆ ಸೋಕಿದಾಕ್ಷಣ ಶಿಲೆಯಾಗಿಸುವ ಸರೋವರವೇ, "ಲೇಕ್ ನ್ಯಾಟ್ರಾನ್ " !!! ಈ ಸರೋವರ ಟಾಂಜೇನಿಯಾ ಉತ್ತರ ಗಡಿಯಲ್ಲಿದೆ. ಒಟ್ಟು 56 ಕಿ.ಮೀವರೆಗೂ ವ್ಯಾಪಿಸಿದ್ದು, 22 ಕಿ.ಮೀ ಅಗಲವಾಗಿದೆ. ಈ ಸರೋವರದ ಆಳ ಕೇವಲ  10 ಅಡಿಗಳಿಗಿಂತ ಕಡಿಮೆಯೇ  ಆಗಿದೆ. 2011  ರಲ್ಲಿ    ಛಾಯಾಗ್ರಾಹಕ   ನಿಕ್ ಬ್ರಾಂಡ್ಟ್ ತಮ್ಮ ಪುಸ್ತಕ   "ಅಕ್ರಾಸ್ ದಿ ರಾವೇಜ್ಡ್ ಲ್ಯಾಂಡ್"  ಗಾಗಿ ಉತ್ತರ ಟಾಂಜಾನಿಯಾ ಹತ್ತಿರ  ಫೋಟೋ ಸಂಗ್ರಹದಲ್ಲಿದ್ದಾಗ, ಮೊದಲ ಬಾರಿಗೆ ನ್ಯಾಟ್ರಾನ್ ಲೇಕ್ ಬಳಿ ಹೀಗೆ ಪ್ರಾಣಿಗಳು ನಿಂತಲ್ಲೇ ಶಿಲೆಯಾಗಿರುವ ನಿಗೂಢತೆ ಕಂಡು ತೆಗೆದ ಫೋಟೋಗಳು ಪ್ರಚಲಿತವಾಗುತ್ತವೆ. ಈ ನಂತರವೇ ಕಾಲಿಟ್ಟರೆ ಜೀವಜಲ ಹೀರಿ, ಜೀವಿಗಳನ್ನು ಕ್ಯಾಲ್ಸಿಫಿಕೇಷನ್ ಗೆ ಒಳಗಾಗಿಸಿ ಮಮ್ಮಿಗಳನ್ನಾಗಿಸುವ ಡೆಡ್ಲಿ ಲೇಕ್ ನ ಅಗೋಚರ ಶಕ್ತಿಯ ಹಿಂದಿರುವ ರಹಸ್ಯದ ತಡಕಾಟ ಆರಂಭವಾದದ್ದು.

ಈ ಡೆಡ್ಲಿ ಲೇಕ್ ನ ಹೆಸರು "ನ್ಯಾಟ್ರಾನ್" ಎಂದು ಆಗಿರುವುದರ ಹಿಂದೆಯೂ ಸ್ವಾರಸ್ಯಕರ ಮಾಹಿತಿ ಇದೆ. ಈ ಸರೋವರ ಅತ್ಯಂತ ಶುಷ್ಕ ಪ್ರದೇಶದಲ್ಲಿರುವುದರಿಂದ ಅತೀ ಕಡಿಮೆ ಮಳೆಯಾಗುತ್ತದೆ. ಇದಲ್ಲದೇ ಈ ಸರೋವರದ ನೀರು ಯಾವುದೇ ಸಮುದ್ರ ಅಥವಾ ದೊಡ್ಡ ನದಿ ‌ಸೇರುವ ಮಾರ್ಗಗಳಿಲ್ಲ. ಈ ಸರೋವರದ ಹತ್ತಿರ ಇರುವ ಓಲ್ ಡೇನಿಯೋ ಲೇಂಗೈ ಎಂಬ ಸಕ್ರಿಯ ಜ್ವಾಲಾಮುಖಿಯಿಂದ ಹೊರಹೊಮ್ಮುವ ಲಾವಾರಸ ಹರಿದು ಈ ಸರೋವರ ಸೇರುತ್ತದೆ. ಈ ಲಾವಾರಸದಲ್ಲಿ ಮುಖ್ಯ ಖನಿಜ ನ್ಯಾಟ್ರಾನ್ ಆಗಿರುವುದರಿಂದ, ಇದೇ ನ್ಯಾಟ್ರಾನ್ ಅಂಶ ಸರೋವರದಲ್ಲಿ ಹೆಚ್ಚನ ಪ್ರಮಾಣದಲ್ಲಿರುವುದರಿಂದ ಇದಕ್ಕೆ ನ್ಯಾಟ್ರಾನ್ ಸರೋವರ ಎಂಬ ಹೆಸರು ಬಂದಿದೆ.

ಇಷ್ಟಕ್ಕೂ ನ್ಯಾಟ್ರಾನ್ ಎಂದರೇನು. ಇದು ಸೋಡಿಮ್ ನ ಸಂಯುಕ್ತ (ಕಾಂಪೌಂಡ್). ನ್ಯಾಟ್ರಾನ್, ಸೋಡಿಯಂ ಕಾರ್ಬೋನೇಟ್ ಡೆಕಾ‌ಹೈಡ್ರೇಟ್ ಮತ್ತು ಸೋಡಿಯಂ ಬೈಕಾರ್ಬೋನೇಟ್ ಹಾಗೂ ಸೋಡಿಯಂ ಕ್ಲೋರೈಡ್ ನ ಮಿಶ್ರಣವಾಗಿದೆ. ಲವಣಗಳ ಹೆಚ್ಚಿನ ಸಾಂದ್ರತೆಯಿಂದಾಗಿ ಸರೋವರದ ಅಲ್ಕೈಲೈನಿಟಿ(ಕ್ಷಾರೀಯತೆ) ಹೆಚ್ಚಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಹೆಚ್ಚು ಎಂದರೆ, ಸಾಧಾರಣ ನೀರಿನ PH 6-8 ಆದರೆ,  ಈ ಸರೋವರದ PH 10.2 ರಿಂದ 12 ರ ವರೆಗೂ ಇರುತ್ತದೆ. ಇಂತಹ ನೀರು ಜೀವಿಗಳಿಗೆ ವಿಷಕಾರಿಯಾಗಿದೆ. ಸರೋವರದ ರಾಸಾಯನಿಕ ಸಂಯೋಜನೆಯಿಂದಾಗಿ ಈ‌ ನೀರಿನಲ್ಲಿ ಹೆಜ್ಜೆ ಇಡುವ ಪ್ರಾಣಿಗಳು ತಕ್ಷಣ ಸಾಯದಿದಿದ್ದರೂ, ಸ್ವಲ್ಪ ಹೊತ್ತು ಇದ್ದರೂ ದೇಹದ ತೇವಾಂಶ ಇಂಗಿಹೋಗಿ ಕ್ಯಾಲ್ಸಿಫಿಕೇಷನ್ ಗೆ ಒಳಗಾಗಿ ಕಲ್ಲಿನಂತಾಗಿ ಬಿಡುತ್ತವೆ.

ಈ ಡೆಡ್ಲಿ ಸರೋವರವನ್ನು ಎದುರಿಸಿವ ಜೀವಗಳಿವೆಯೇ ಎಂದರೆ, ಇದೇ ಸರೋವರದ ಮತ್ತೊಂದು ವಿಸ್ಮಯ ಎಂವಂತೆ ಉತ್ತರ ಹೌದು! ಎಂದೇ ದೊರಕುತ್ತದೆ. ನ್ಯಾಟ್ರಾನ್ ನ ಅಂಶ ಇಷ್ಟು ಪ್ರಮಾಣದಲ್ಲಿದ್ದರೂ ಫ್ಲೆಮಿಂಗ್ ಗೋಗಳಿಗೆ ಇದು ಬ್ರೀಡಿಂಗ್ ಸ್ಥಳ. ಈ ಸರೋವರಕ್ಕೆ ಅದರದ್ದೇ ಆದ ಪರಿಸರ ವ್ಯವಸ್ಥೆ ಇದೆ. ಈ ಸರೋವರದಲ್ಲಿ ಹೋಲೋಫಿಲಿಕ್ ಆರ್ಕಿಯೇ ಎಂಬ ಸೂಕ್ಷಜೀವಿಗಳು ಅತ್ಯಂತ ಹೆಚ್ಚನ‌ ಪ್ರಮಾಣದಲ್ಲಿವೆ. ಇದಲ್ಲದೇ ಟಿಪಿಲಾ ಮತ್ತು ಅಲ್ ಆರ್ಕಿಯಾ ಮೀನುಗಳು ಹಾಗೂ ಕೆಲವು ಪಕ್ಷಿಗಳನ್ನು ಕಾಣಬಹುದು. ಈ ಜೀವಿಗಳ ದೇಹ ಹೆಚ್ಚಿನ‌ ಲವಣಾಂಶ ಸಾಂದ್ರತೆಗೆ ಹೊಂದುವಂತಿವೆ.

ನಿಕ್ ಬ್ರಾಡಿಕ್ಟ್ ನ ಈ ಲೇಕೆ ಗೆ ಸಂಬಂಧಿಸಿದ ಫೋಟೋಗಳನ್ನು ನೋಡುತ್ತಿದ್ದರೆ, ನಿಜಕ್ಕೂ ಈ ಲೇಕ್ ಗೆ ಯಾವುದೋ ಮಾಂತ್ರಿಕ ಶಕ್ತಿ ಇದೆ ಎನ್ನಿಸದೇ ಇರದು. ನಿಂತಲ್ಲೇ ಶಿಲೆಯಾದ ಪ್ರಾಣಿ ಪಕ್ಷಿಗಳು ದಿಗಿಲು ಹುಟ್ಟಿಸುತ್ತವೆ. ಆದರೆ ಇನ್ನೊಂದು ಮಗ್ಗುಲಿಗೆ ಈ ಡೆಡ್ಲಿ ಲೇಕ್ ಕಲಿಸುವ ಪಾಠವೂ ದೊಡ್ಡದೇ ಇದೆ. ಎಂತಹ ಪ್ರತಿಕೂಲ ವಾತಾವರಣವಿದ್ದರೂ ಸಹ ಇನ್ನೊಂದು ಕೋನದಲ್ಲಿ ವಿಶಿಷ್ಟತೆ ಇದ್ದೇ ಇರುತ್ತದೆ. ಅದನ್ನು ನೋಡುವ ಮನಸ್ಥಿತಿ ನಮ್ಮದಾಗಬೇಕಷ್ಟೇ ಎನ್ನುವುದು ಕಲಿಸುತ್ತದಲ್ಲವೇ.


Comments

  1. ಸೋಕಿದ ಕ್ಷಣ ಶಿಲೆಯಾದರೆ...... ಎಂಬ ಲೇಖನವು ಮಂಜುಳಾ ಡಿ ಅವರು ಕುತೂಹಲಕಾರಿಯಾಗಿ ಚೇತುಹಾರಿಯಾಗಿ ಹಾಗೂ ವಿಶಿಷ್ಟ ಮಾಹಿತಿ ಪೂರ್ಣ ಲೇಖನವಾಗಿದೆ. ಪ್ರಾರಂಭದಲ್ಲಿ ಯಾವುದೋ ಒಂದು ಪೌರಾಣಿಕ ಕಥೆ ಎಂದು ಎನಿಸಿದರೆ ಆಶ್ಚರ್ಯವಿಲ್ಲ. ಮುಂದೆ ಅದು ಒಂದು ಪ್ರಕೃತಿಯ ಅದ್ಭುತ ವಿಸ್ಮಯಕಾರಿ ಕುತೂಹಲ ಹಾಗೂ ವಿಶಿಷ್ಟವಾದ ಒಂದು ಸರೋವರದ ಕಥೆಯಾಗಿ ಪರಿವರ್ತನೆ ಗೊಳ್ಳುತ್ತದೆ. ನಿರೂಪಣಾ ಶೈಲಿಯು ಅತ್ಯಂತ ಭಿನ್ನ ರೀತಿಯಲ್ಲಿ ಓದುಗನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಲೇಖನ ಈ ಲೇಖನಕ್ಕೆ ಇದೆ. ಪ್ರಕೃತಿಯ ಇನ್ನಷ್ಟು ಆಶ್ಚರ್ಯಕರವಾದ ಮಾಹಿತಿಯನ್ನು ಲೇಖಕಿಯು ನಮ್ಮೆಲ್ಲರಿಗೂ ಪರಿಚಯಿಸಲಿ ಎಂದು ಆಶಿಸುವೆ. ಇನ್ನು ಮುಂದೆಯೂ ಸಾಕಷ್ಟು ಲೇಖನಗಳನ್ನು ಬರೆಯಲು ಶುಭ ಹಾರೈಸುವೆ. ಹೊರನಾಡ ಚಿಲುಮೆ ಲೇಖಕರಿಗೆ ಇನ್ನಷ್ಟು ಪ್ರೋತ್ಸಾಹವನ್ನು ಕೊಡುತ್ತದೆ ಎಂದು ಭಾವಿಸುತ್ತೇನೆ

    ReplyDelete

Post a Comment