ಸಂಥಿಂಗ್ ರಾಂಗ್ ಸಮ್‍ವೇರ್

ಸಂಥಿಂಗ್ ರಾಂಗ್ ಸಮ್‍ವೇರ್

ಹಾಸ್ಯ ಲೇಖನ - ಅಣಕು ರಾಮನಾಥ್


 “ಕಾಫಿ ತುಂಬಾ ಚೆನ್ನಾಗಿದೇ ರೀ” ಎಂದಳು ಮಡದಿ. Something wrong somewhere ಎನಿಸಿತು.

“ಹುಷಾರಾಗಿದ್ದೀಯಾ?” ಎಂದೆ.

“ಯೂ ಆರ್ ಸೋ ಕೇರಿಂಗ್” ಎಂದಳಾಕೆ. ದಟ್ ವಾಸ್ ರಿಯಲಿ ಸ್ಕೇರಿಂಗ್!

ನನ್ನ ಮಡದಿ ಪರ್ಫೆಕ್ಷನಿಸ್ಟ್. ಅವಳು ತಯಾರಿಸಿದ ಚಪಾತಿಗಳು ಆಸ್ಟ್ರೇಲಿಯಾ, ಕ್ಯೂಬಾ, ಮೆಸಪೊಟೋಮಿಯಾ, ವಿಯಟ್ನಾಂ ಮುಂತಾದ ದೇಶಗಳ ಆಕಾರಗಳಲ್ಲಿರದೆ ಪ್ಯೂರ್ ಡಲ್ ರೊಟೀನ್ ರೌಂಡ್ ಶೇಪನ್ನೇ ಹೊಂದಿರುತ್ತವೆ. ನಾನು ಮಾಡಿದ ಚಪಾತಿಗಳಿಂದ ವಿಶ್ವದ ಭೂಗೋಳವನ್ನು ಕಲಿಯಬಹುದು. ಒಂದುವೇಳೆ ನನಗೆ 196 ಚಪಾತಿಗಳನ್ನು ಮಾಡಲು ಸಾಧ್ಯವಾದರೆ, ವಿಶ‍್ವದ ಎಲ್ಲ ದೇಶಗಳ ಆಕಾರಗಳೂ ಮೂಡಿ, ಎಲ್ಲವನ್ನೂ ಸರಿಯಾಗಿ ಜೋಡಿಸಿದರೆ “ಚಪಾತಿ ಗ್ಲೋಬ್” ತಯಾರಿ ಆಗುತ್ತದೆ. ನಾನು ಇಡ್ಲಿ ಮಾಡಿದರೆ ಅದಕ್ಕೆ ತುದಿ ಇರುತ್ತದೆ; ನನ್ನಿಂದ ತಯಾರದ ಜಾಮೂನುಗಳನ್ನು ಕತ್ತಲಲ್ಲಿ ಕರಡಿಯೂ ತಿನ್ನುವುದಿಲ್ಲ. ಒಟ್ಟಿನಲ್ಲಿ ನನ್ನ ಮಡದಿ ಥೀಸೀಸ್; ನಾನು Anti-ಥೀಸೀಸ್. 

ಇವಳೇಕೆ ನನ್ನನ್ನು ಹೊಗಳಿದಳೆಂಬ ಗಾಢಾಲೋಚನೆಯಲ್ಲಿಯೇ ಸೋಫಾದ ಮೇಲೆ ಒರಗಿದೆ. ಕಣ್ಣೆಳೆದು, ಮಂಪರಿನ ಸೆಳೆತಕ್ಕೆ ಸಿಲುಕಿ, ಕೊಂಚ ಕಾಲ ನಿದ್ರಾವಶನಾದೆ. ಥಟ್ಟನೆ ಎಚ್ಚರವಾಯಿತು.

“ಗೊರಕೆ ಹೊಡೆದೆನೆ? ನಿನಗೆ ಭಂಗವಾಯಿತೆ?” ಎಂದು ಕೇಳಿದೆ. 


“ಇಲ್ಲಪ್ಪ! ನಾಳೆ ವಿಶ್ವ ಧ್ವನಿ ದಿನ. ಮಾತು ಬೆಳ್ಳಿ, ಮೌನ ಬಂಗಾರ ಅಂತ ಹೇಳ್ತಾರಲ್ಲ, ಬೆಳ್ಳಿಯಲ್ಲೇ ಚೊಂಬು, ತಟ್ಟೆ, ಲೋಟಗಳನ್ನೆಲ್ಲ ಮಾಡೋದು. ಆಭರಣಕ್ಕೆ ಚಿನ್ನ, ಉದರಂಭರಣಕ್ಕೆ ಬೆಳ್ಳಿ ಸೂಕ್ತ; In other words,  ಬೆಳ್ಳಿಗಿರುವ ಉಪಯುಕ್ತತೆ ಚಿನ್ನಕ್ಕಿಲ್ಲ. Similarly ಮಾತಿನಿಂದಾದಷ್ಟು ಪ್ರಯೋಜನ ಮೌನದಿಂದಿಲ್ಲ; ಸದ್ದಿನ ಕೊರತೆಯೇ ಚಿನ್ನ. ಸದ್ದಿನ ಒರತೆಯೇ ಬೆಳ್ಳಿ. ದೇರ್‍ಫೋರ್ ಗೊರಕೆ ಸಹ ಒಂದು ವಿಧದ ಬೆಳ್ಳಿ. ಅದರಿಂದ ಪ್ರಯೋಜನಗಳಿವೆ ಅಂತ ಭಾಷಣ ಮಾಡಕ್ಕೆ ನಿಮ್ಮ sonorous somnolent soundನ ರೆಕಾರ್ಡ್ ಮಾಡ್ಕೊಂಡಿದೀನಿ” ಎಂದಳು ಸತಿ.

ಹೀಗೂ ಉಂಟೆ? ಮೊನ್ನೆಯಷ್ಟೇ “ರೀ, ಡಿವಿಜಿಯವರ ಮನೆಯಲ್ಲಿ ಒಬ್ಬ ಅಡುಗೆಯವನಿದ್ದನಂತೆ. ಅವನು ಗೊರಕೆ ಹೊಡೆದಾಂತ ಮೆಲ್ಲಗೆ ಚಾಪೆಸಮೇತ ಅವನನ್ನ ಮನೆಯ ಹೊರಗೆ ಸಾಗಿಸಿಬಿಟ್ಟಿದ್ದರಂತೆ. ಬೆಳಗ್ಗೆ ಎದ್ದುನೋಡಿದರೆ ಕಿರಣದರ್ಶನಕಿಂತ ತರಣಿದರ್ಶನ ಕಷ್ಟ ಅಂತ ಗೊತ್ತಾಯ್ತಂತೆ. ನಿಮಗೂ ಒಂದಲ್ಲ ಒಂದು ದಿವಸ ಸೂರ್ಯದರ್ಶನದ ಮೂಲಕವೇ ಬೆಳಗಾಗುವ ದಿನಗಳು ದೂರವಿಲ್ಲ” ಎಂದಿದ್ದಳು. ಹಾಳು ಗೊರಕೆಯನ್ನು ಆಗಾಗ್ಗೆ ಖಂಡಿಸುತ್ತಿದ್ದವಳು ಈಗ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆಂದರೆ...!

ಒಮ್ಮೆ ಮೈ ಅದುರಿತು. “ದಿಸ್ ಈಸ್ ದ ಸೌಂಡ್ ಆಫ್ ಮೈ ಹಬ್ಬೀ’ಸ್ ಗೊರಕೆ. ಇದರ ಆಧಾರದ ಮೇರೆಗೆ ನನಗೆ ವಿಚ್ಛೇದನ ಕೊಡಿ” ಎಂದು ಅಮೆರಿಕನ್ನಳೊಬ್ಬಳು ಅಹವಾಲು ಸಲ್ಲಿಸಿದ್ದುದು ನೆನಪಾಗಿ ಸಣ್ಣಗೆ ಬೆವರಿದೆ. ಮಡದಿಯ ಸಿಕ್ಸ್ತ್ ಸೆನ್ಸ್‍ಗೆ ಇದು ಗೋಚರಿಸಿತು. “ಅಷ್ಟು ಅದೃಷ್ಟ ಮಾಡಿಲ್ಲ ನೀವು. ಏಳೇಳು ಜನ್ಮಕ್ಕೂ ನೀವೇ ನನ್ನ ಪತಿ” ಎಂದಳು. ಬೀಸೋ ದೊಣ್ಣೆ ಸದ್ಯಕ್ಕಂತೂ ದೂರವಿದೆಯೆಂದಾಯ್ತು.

ಸೋಫಾದಿಂದ ಏಳುತ್ತಿದ್ದಂತೆಯೆ, “ಗ್ರೀನ್ ಮಾಲ್‍ಗೆ ಹೋಗಿ ಆಲೂಗೆಡ್ಡೆ, ಮೆಣಸಿನಕಾಯಿ, ಶುಂಠಿ ತನ್ನಿ” ಎಂದಳು. ಶಿರಸಾವಹಿಸಿದೆ. ತಂದ ಆರು ಆಲೂಗೆಡ್ಡೆಗಳನ್ನು ವಿಜ್ಞಾನಿಯು ಹೊಸ ವಸ್ತುವೊಂದನ್ನು ಮೈಕ್ರಾಸ್ಕೋಪಿನಲ್ಲಿ ನೋಡುವಂತೆ ನೋಡುತ್ತಾ “ಒಂದನ್ನು ನೋಡಿದರೆ ಸೂರ್ಯನನ್ನು ಕಂಡಂತಾಗುತ್ತದೆ. ಅಷ್ಟಿಷ್ಟು ಬ್ಲ್ಯಾಕ್ ಹೋಲ್‍ಗಳಿವೆ. ಇದು ಪಿಂಗ್ ಪಾಂಗ್ ಬಾಲ್ನಷ್ಟು ಚಿಕ್ಕದು. ಓಹೋ! ಮೂರನೆಯದನ್ನು ಕಂಡರೆ ಮಕ್ಕಳ ನೆನಪೇ ಆಗುತ್ತದೆ. ಹಸುಳೆಗಳ ಚರ್ಮದಲ್ಲಿ ಸ್ಪಷ್ಟವಾಗಿ ಕೊರೆದ ನೀಲಿ ರಕ್ತನಾಳಗಳಂತೆಯೇ ಈ ಆಲೂಗೆಡ್ಡೆಯಲ್ಲಿಯೂ ಅಲ್ಲಲ್ಲಿ ನೀಲಿ ಕಾಣಿಸುತ್ತಿದೆ” ಎಂದಳು.

“ಓಹ್! ಕೆಟ್ಟುಹೋಗಿದೆಯೇನು? ಐ ಆಮ್ ಸಾರಿ” ಎಂದೆ.

“ಪರವಾಯಿಲ್ಲ ಬಿಡಿ. ವಾಟ್ಸಾಪ್‍ ಮಾಡಿ ರಿಪ್ಲೇಸ್ ಮಾಡಕ್ಕೆ ಹೇಳ್ತೀನಿ” ಎಂದಳು. ಇದೇ ಕಾರಣಕ್ಕೆ ಘನಘೋರ ಕಾಳಗಗಳಾದ ದಿನಗಳಿದ್ದವು.

“ಮೆಣಸಿನಕಾಯಿ?”

“ಉಪ್ಪಿಟ್ಟಿಗೆ ಬೇಕಾಗಿತ್ತು. ನೀವು ತಂದಿದ್ದು ಬಜ್ಜಿಗೆ ಆಗುವ ಸಪ್ಪೆ ಮೆಣಸಿನಕಾಯಿ. ಇರಲಿ. ಅದನ್ನೇ ಮಾಡಿಸಿದರಾಯ್ತು. ನೀವು ಹೇಗಿದ್ದರೂ  ಬಜ್ಜಿಯ ಎಕ್ಸ್‍ಪರ್ಟ್” ಎಂದಳು.

ನನ್ನ ಮನವು ತಂನಂ ತಂನಂ ಎಂದು ಮಿಡಿಯಿತು. ಸೋತಿತು. ಕಾಲುಗಳು ತಾನಾಗಿಯೇ ಅಡುಗೆಮನೆಯತ್ತ ಸಾಗಿದವು. “ಚಿಲ್ಲೀಸೇ ಕಡಲೆ ಸೇರುವಿರಾ: ರುಚಿಯ ಬಜ್ಜಿಯಾಗುವಿರಾ...” ಎಂದು ಗುನುಗುನಿಸುತ್ತಾ ಬಜ್ಜಿ ಮಾಡಿದೆ. ಜೊತೆಗಿಷ್ಟು ಸಾಸ್ ಸೇರಿಸಿ ಅವಳ ಮುಂದಿಟ್ಟೆ.

ಕಿಟಕಿಯ ಬಳಿ ನೆರಳಾಡಿತು. ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದ ಗೃಹಿಣಿಯು ಪೆಂಡುಲಮ್ ವಾಕ್ ಮಾಡುತ್ತಾ ಗೇಟಿನತ್ತ ಸಾಗಿದಳು. ನನ್ನ ಕಣ್ಣುಗಳು ಆ ಚಲನೆಯನ್ನೇ ಅನುಸರಿಸಿದವು. ನನ್ನವಳ ಕಣ್ಣುಗಳು ನನ್ನ ದೃಷ್ಟಿಯನ್ನೇ ಅನುಸರಿಸಿದವು. ಮಹಾಸ್ಫೋಟದ ನಿರೀಕ್ಷೆಯಲ್ಲಿ ಮೈಯ ನರನಾಡಿಗಳೆಲ್ಲ ಸೆಟೆದವು.

“ಚೆನ್ನಾಗಿದ್ದಾಳೆ ಅಲ್ಲವೇನ್ರೀ?” ಎಂದಳು. ಅಹುದೆಂದರೆ ಕುರುಕ್ಷೇತ್ರ; ಇಲ್ಲವೆಂದು ಸುಳ್ಳಾಡಲು ನಾಲಿಗೆ ಏಳದು!

“ನೀವು ಗಂಡಸರೇ ಹಾಗೆ. ರಂಭೆಯ ಗಂಡನೂ ಪರಸತಿ ಗೂಬೆಯಂತಿದ್ದರೂ ನೋಡೋದೇ” ಎಂದಳು. “ಗುಡ್ ಜೋಕ್” ಎನ್ನುತ್ತಾ ನಕ್ಕೆ. ಮಡದಿಯೂ ನಕ್ಕಳು. ಮತ್ತೆ ಮನದಲ್ಲಿ “something wrong somewhere”  ಎಂಬ ಗಂಟೆ ಮೊಳಗಿತು.

ಸಂಜೆ ಕಳೆದು ರಾತ್ರಿಯಾಯಿತು. “ಹೊರಗೆ ಹೋಗೋಣವೆ? ನಿಮ್ಮ ಫೇವರಿಟ್ ರೆಸ್ಟೋರೆಂಟಿಗೆ?” ಎಂದಳು. ಅಸ್ತು ಎಂದೆ. “ನಿಮಗೆ ಇಷ್ಟವಾದ ಚಂಪಾಕಲಿ, ಬಿಸಿಬೇಳೆಭಾತ್, ಫ್ರೂಟ್ ಸಲಾಡ್, ಡ್ರೈಫ್ರೂಟ್ಸ್ ಐಸ್‍ಕ್ರೀಮ್ ತೊಗೊಳ್ಳೋಣವಾ?” ಎಂದು ಕೇಳಿದಳು. ನನಗೆ ನನ್ನ ಮದುವೆಯಾದ ಹೊಸತರದೇ ಗುಂಗು ಆವರಿಸಿಕೊಂಡುಬಿಟ್ಟಿತು. ನನಗೆ ಇಷ್ಟವಾದುದನ್ನೇ ಆರ್ಡರ್ ಮಾಡುತ್ತಿದ್ದಾಳೆ, ನನ್ನಿಚ್ಛೆಯಂತೆಯೇ ನಡೆಯುತ್ತಿದ್ದಾಳೆ. ವೆಚ್ಚಕ್ಕೆ ಹೊನ್ನಿದೆ. ಜೇಬಿನಲ್ಲಿ ಲೈಟರ್‍ಗಾಗಿ ತಡಕಾಡಿದೆ. “ಏಕೆ?” ಎಂದಳು. “ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕಾಗಿದೆ” ಎಂದೆ. “ಅದಕ್ಕಿನ್ನೂ ಸಮಯವಿದೆ” ಎಂದು ನಸುನಕ್ಕಳು. ಅವಳ ತುಟಿಯನ್ನೇ ನೋಡುತ್ತಾ ಪ್ರಪಂಚವನ್ನು ಮರೆತೆ.

ಮನೆ ತಲುಪಿದೆವು. “ಗುಡ್ ನೈಟ್ ಡಿಯರೆಸ್ಟ್” ಎಂದಳು. ಆಹಾ! ಇದಕ್ಕಿಂತಲೂ ಸುಂದರವಾದ ದಿನವಿದ್ದೀತೇನು ಜೀವನದಲ್ಲಿ ಎಂದುಕೊಳ್ಳುತ್ತಲೇ ತೃಪ್ತನಿದ್ರೆಗೆ ಜಾರಿದೆ.

ಮರುದಿನ ಅರೆಯೆಚ್ಚರದಲ್ಲಿ ನಿನ್ನೆಯದೇ ಗುಂಗು. “ಯೂ ತೋ ಹಮನೇ ಲಾಖ್ ಹಸೀ ದೇಖೇ ಹೈ; ತುಮಸಾ ನಹಿ ದೇಖಾ” ಎಂದು ಗುನುಗುತ್ತಲೇ ಎದ್ದೆ. “ಬೆಳ್ಬೆಳಗ್ಗೇ ಮೇಲ್ಮನೆಯವಳ ಗೀಳಾ?” ಎಂದಳು. ಹಿಂದಿನ ದಿನದ ಮಾರ್ದವತೆ ಮಾಯವಾಗಿತ್ತು. “ಸಾರಿ ಡಿಯರ್. ಕೊಂಚ ಲೇಟಾಗ್ಹೋಯ್ತು ಏಳೋದು. ಬಂದೆ... ಕಾಫಿ ಮಾಡ್ತೀನಿ” ಎಂದೆ.

“ಕಲಗಚ್ಚಿನ ತರಹ ಮಾಡಬೇಡಿ. ರೆಸಿಪಿ ಬರೆದಿಟ್ಟಿದ್ದೀನಿ, ನೋಡ್ಕೊಂಡು ಮಾಡಿ” ಎಂದಳು. ಗೋಣಾಡಿಸಿದೆ.

“ತಿಂಡಿಗೆ ಪೂರಿ ಮಾಡಲೆ?” ಎಂದೆ.

“ರೊಟ್ಟೀನೇ ಮಾಡಿ. ನಿಮ್ಮ ಅಮೀಬಾ ಪೂರಿಗಳನ್ನ ನಿಮ್ಮಮ್ಮ ಬಂದ ದಿವಸ ಮಾಡಿ. “ಬಾರೋ ಈಕಡೆ. ನಾನೇ ಮಾಡ್ತೀನಿ” ಅಂತ ಅವರೇ ಮಾಡಿದಾಗ ತಿನ್ನೋಣವಂತೆ. ಸದ್ಯಕ್ಕೆ ನಿಮ್ಮ ಫ್ರಸ್ಟ್ರೇಷನ್‍ಗೊಂದು ಔಟ್‍ಲೆಟ್ ಬೇಕಲ್ಲ, ಅದಕ್ಕೆ ರೊಟ್ಟಿ ತಟ್ಟೋದೇ ಪ್ರಾಪರ್ರು” ಎಂದಳು.

ಇಂದಿನ ದಿನ ಎಂದಿನಂತಿದೆ. ನೆನ್ನೆಯದೇ ಏನೋ ಐಬು! ಕಳೆದ ಸಮಯವನ್ನು ರಿವ್ಯೂ ಮಾಡಿದೆ. ವಾಸ್ತವವಾಗಿ ನಾವು ಹೋದದ್ದು ನನ್ನ ಫೇವರಿಟ್ ಹೊಟೇಲಿಗಲ್ಲ. ಅವಳ ಪ್ರಿಯವಾದುದಕ್ಕೆ. ನಾವು ಸೇವಿಸಿದ್ದೆಲ್ಲವೂ ಅವಳಿಗೆ ಪ್ರಿಯವಾದುವೇ. ಅವಳು ನನಗೆ ಪ್ರಿಯಳಾದ್ದರಿಂದ ಎಲ್ಲವೂ ಸರಿಯೆನಿಸಿತ್ತು.

“ಇವತ್ತು ಭಾನುವಾರ. ಏನಾದರೂ ಸ್ಪೆಷಲ್ ಮಾಡೋಣವೇನು?” ಎಂದೆ.

“ನಿಮಗೆ ಅದೊಂದ್ಬೇರೆ ಕೇಡು. ಕುಕ್ಕರಲ್ಲಿ ತರಕಾರಿ ಬಡಿದು ಸಲಾಡ್ ಮಾಡ್ಕೊಂಡು ತಿನ್ನಿ. ನನಗೆ ಐದಾರು ಮೀಟಿಂಗುಗಳಿವೆ” ಎಂದವಳ ಧ್ವನಿಯಲ್ಲಿ ಎಂದಿನ ಗುಂಟೂರ್ ಖಾರ.

ನೆನ್ನೆಯೆಲ್ಲ ಹಾಗಿದ್ದಳು, ಈಗ ನೋಡಿದರೆ ಹೀಗೆ! ಧೈರ್ಯಮಾಡಿ ಏಕೆಂದು ಕೇಳಿಯೇಬಿಟ್ಟೆ.

“ನೆನ್ನೆ ನಮ್ಮ ಲೇಡೀಸ್ ವಿಂಗ್‍ನಲ್ಲಿ “ಹೂ ಟ್ರೀಟ್ಸ್ ಹರ್ ಹಸ್ಬೆಂಡ್ ದ ಬೆಸ್ಟ್” ಅಂತ ಕಾಂಪಿಟೆಷನ್ ಇತ್ತು. ನೆನ್ನೆ ನಿಮ್ಮ ಜೊತೆ ಆಡಿದ ನನ್ನ ಮಾತುಗಳನ್ನೆಲ್ಲ ರೆಕಾರ್ಡ್ ಮಾಡ್ಕೊಂಡಿದ್ದೀನಿ. ರೆಸ್ಟೋರೆಂಟ್‍ನಲ್ಲಿ ತೊಗೊಂಡ ಸೆಲ್ಫೀಗಳು ಅಪ್‍ಲೋಡ್ ಆಗಿವೆ. ಬಂದ ಪ್ರೈಸಲ್ಲಿ ಶಾಪಿಂಗ್ ಮುಗಿಸಿ ಬರ್ತೀನಿ. ಮನೆಕಡೆ ಜೋಪಾನ” ಎನ್ನುತ್ತಾ ಎತ್ತರಧಿಮ್ಮಡಿ ಮೆಟ್ಟಿಕೊಂಡಳು.



“ಅದೇಕೆ ನೆನ್ನೆ ಆ ಕಾಂಪಿಟೆಷನ್ನು?” ಎಂದೆ.

“ನೆನ್ನೆ ವಿಶ್ವ ಪತಿಮೆಚ್ಚುಗೆಯ ದಿನ – ವರ್ಲ್ಡ್ ಹಸ್ಪೆಂಡ್ ಅಪ್ರಿಸಿಯೇಷನ್ ಡೇ” ಎನ್ನುತ್ತಾ ಹೊರನಡೆದಳು ಮಡದಿ.

Comments

  1. ನಿಮಗೆ ಈಗ ಒಂದು ಛಾಲೆಂಜ್ ಆಗಿದೆ. ಮುಂಬರುವ "ಪತ್ನಿ ಪ್ರಶಂಸಾ ದಿನ"ದಂದು (wife appreciation day) ನೀವು ಹೇಗೆ ಮರುತ್ತರ ಕೊಡುವಿರೆಂದು ಕುತೂಹಲದಿಂದ ಎದುರು ನೋಡುತ್ತೇವೆ.

    ReplyDelete
  2. ಮೆಲ್ಬೋರ್ನ ಹವಾಮಾನ ಥರ ಬದಲಾಗಿ ಹೋದಳು ಒಂದೇ ದಿನಕ್ಕೆ ಆಕೆ, ಪಾಪ ಪತಿರಾಯರಿಗೆ ಕಡೆಗಾದ್ರು ಗೊತ್ತಾಯ್ತಲ್ಲ something wrong somewhere ಯಾಕೆ ಅಂತ. ಗೊರಕೆ & ಆಲೂಗಡ್ಡೆ ಚೆನ್ನಾಗಿ ಅಳವಡಿಸಿದ್ದೀರಿ

    ReplyDelete

Post a Comment