“ತಣ್ಣೀರ್ ತಣ್ಣೀರ್”

 “ತಣ್ಣೀರ್ ತಣ್ಣೀರ್” 

ಲೇಖನ - ಕನಕಾಪುರ ನಾರಾಯಣ

“ತಣ್ಣೀರ್ ತಣ್ಣೀರ್” ಹೀಗಂತ ಮನಮುಟ್ಟುವ ತಮಿಳು ಸಿನಿಮಾ ಒಂದನ್ನ ಬೆಂಗಳೂರಿನಲ್ಲಿದ್ದಾಗ ನೋಡಿದ್ದು ಜ್ಞಾಪಕ.ನೀರಿಗಾಗಿ ಜನರ ಜಂಜಾಟ ಜೀವನವಿಡೀ ತಪ್ಪಿದ್ದಲ್ಲ ಬಿಡಿ. ಅರೆ,, ಬಿಡಿ! ಅಂದ್ರೆ ಬಿಟ್ಬಿಡೋ ವಿಚಾರಾನಾ ಅದೂ?  



ಮೊನ್ನೆ ಒಬ್ಬ್ರ ಮನೆಗೆ ಡಿನ್ನರ್ ಗೆ ಹೋಗಿದ್ದಾಗ ಊಟ ಮುಗಿಸಿ ಕೈತೊಳೆಯಲು ನನ್ನ ಮುಂದೆ ಒಬ್ಬಾಕೆ ನಿಂತಿದ್ದರು, ನಲ್ಲಿಯಲ್ಲಿ ಬಿಸಿನೀರು – ಥಣ್ಣೀರು ಎರಡೂ ಒಂದರಲ್ಲೇ ನಮಗೆ ಬೇಕಾಗುವ ಹದಕ್ಕೆ ಬೆರೆಯುವಂತೆ ಸರಿಯಾಗಿ ತಿರುಗಿಸಿಕೊಂಡು ಕೈ ತೊಳೆಯುವಂತಿತ್ತು. ಏನೋ ನಲ್ಲಿ ಸ್ವಲ್ಪ ಹಳೆಯದಿತ್ತು ಸ್ವಲ್ಪ ಗಟ್ಟಿಯಾಗಿತ್ತು ರಬ್ಬರ್ ವಾಶರ್ ಸವೆದುಹೋಗಿರಬಹುದೇನೋ ಗೊತ್ತಿಲ್ಲ ಅಷ್ಟಕ್ಕೇ ಆಕೆ “ಶಿಟ್” ಇದೇನ್ ನಲ್ಲೀಪ್ಪ ಸರಿಯಾಗೇ ಇಲ್ಲ.ಅಂತ ಬಿಟ್ಟ ನೀರು ಹರಿಯುತ್ತಲೇ ಇದೆ,,,,,, ನಲ್ಲಿ ಅಡ್ಜಸ್ಟ್ ಮಾಡ್ತಾನೇ ಇದ್ದಾರೆ. “ಮೌ ನೀರ್ ನಿಲ್ಸಮ್ಮೌ ” ಅಂತ ಹೇಳೋದ್ರೊಳಗೆ ಒಂದು ಪುಟ್ಟ ಮಗು “ಆಂಟಿ ನೀರ್ ಸ್ಟಾಪ್ ಮಾಡಿ ಅಂತು”. ಸಧ್ಯ ಗಂಗವ್ವ ನಿಂತ್ಲು, ಅಲ್ಲಾ ಆ ಮಗೂಗಿರೋ………..ನೀವೇ ಊಹಿಸಿಕೊಳ್ಳಿ.

ಈ ಮನುಷ್ಯನ ದೇಹ ಹೇಗೆ 2/3 ರಷ್ಟು ಜಲದಿಂದ ಆವರಿಸಿದೆಯೋ ಹಾಗೇ ಈ ಬ್ರಹ್ಮಾಂಡವೂ ನಿಜ. ಆದರೆ ನೀರು ಕೂಡಾ ಹಳ್ಳವಿದ್ದಕಡೇನೇ ಹರಿಯೋದು ಅನ್ನೋದು ಗೊತ್ತಿರೋ ವಿಷಯ ಅಂತಿಟ್ಕೊಳ್ಳಿ. ಕುಡಿಯುವ ನೀರಿಗಾಗಿ ಆಫ್ರಿಕಾ, ಪಾಕಿಸ್ತಾನ, ಭಾರತ ಇನ್ನೂ ಅನೇಕ ದೇಶಗಳಲ್ಲಿ ಇಡೀ ಜೀವಮಾನದಲ್ಲಿ ಮೂರನೇ ಒಂದು ಭಾಗ ಅದನ್ನು ಹೊತ್ತುತರಲೆಂದೇ ಕಳೆದುಹೋಗುತ್ತದೆ. ಆಫ್ರಿಕಾದಲ್ಲಿ ಹತ್ತಾರು ಮೈಲಿ ಹಾದು ಕಾಡುಪ್ರಾಣಿಗಳನ್ನು ಎದುರಿಸಿ ಕ್ಷೇಮವಾಗಿ ಮನೆತಲುಪುವುದೇ ಒಂದು ಸಾಹಸ, ಆದರೂ ಮತ್ತೆ ನಾಳೆ ಅದೇ ಕಾಯಕ.

ಬೆಳೆಯುತ್ತಲಿರುವ ಬೆಂಗಳೂರನ್ನು  ಒಮ್ಮೆ ಮೆಟ್ರೋ ರೈಲಿನ ಕಿಟಕಿಯಿಂದ ಇಣುಕಿ ನೋಡಿದರೆ ದೇವಾ ಅದೆಲ್ಲಿಂದ ಇವರಿಗೆಲ್ಲ ಪ್ರತಿನಿತ್ಯ ನೀರು ಬರುತ್ತಿದೆಯೋ ಎನಿಸುತ್ತದೆ. ಆದರೂ ಜನ ದಿನಾಲೂ ಮನೆ ಮುಂದೆ ಬಕೆಟ್ ಗಟ್ಟಲೆ ನೀರು ಸುರಿದು ರಂಗೋಲಿ ಇಡುವುದು ನಿಂತಿಲ್ಲ. 

ಉತ್ತರ ಕರ್ನಾಟಕ,ಆಂಧ್ರಪ್ರದೇಶ,ತಮಿಳುನಾಡು,ರಾಜಸ್ಥಾನದ ಕೆಲವು ಹಳ್ಳಿಗಳಲ್ಲಿ ನೀರು ಹೆಗಲೇರಿಸಿ ತರುವುದು ಗರತಿಯರ, ಗಂಡಸರ ಮಕ್ಕಳ ಪ್ರತಿದಿನದ ಪಾಡು. ಬಿಸಿಲು – ಮಳೆ ಲೆಕ್ಕಿಸದೆ ಚಳಿ – ಗಾಳಿ ಎನ್ನದೆ ಎಡಬಿಡದೆ ನಡೆದಿರುವ ನರಕ. ತೀವ್ರ ಅಭಾವದ ಕಾಲದಲ್ಲಿ ಸ್ನಾನಕ್ಕೂ ಗತಿ ಇಲ್ಲದಂತಾಗುವುದು ಕಣ್ಣಾರೆ ಕಂಡ ಚಿತ್ರ ಇನ್ನೂ ಅಚ್ಚಳಿಯದೇ ಉಳಿದಿದೆ.ಆಂಧ್ರಪ್ರದೇಶದಲ್ಲಿ ನನ್ನ ತಾಯಿಯ ಸಂಬಂಧಿಗಳ ಮನೆಗೆ ಒಮ್ಮೆ ಹೋಗಿದ್ದಾಗ ಕಂಡದ್ದು ಇದು – ಕೆಲವು ಬಾವಿಗಳಲ್ಲಿ ಸ್ವಛ್ಚತೆಗೆಂದು ಆಮೆ ಬಿಟ್ಟಿರುತ್ತಾರೆ, ಬೇಸಿಗೆಯಲ್ಲಿ ಖಾಲಿಯಾದ ಅಂಥಾ ಬಾವಿಗಳಲ್ಲಿ ನೀರು ಸೇದಲು ಕೊಡ ಬಿಟ್ಟಾಗ ಟಣ್ ಎಂಬ ಶಬ್ಧ ಕೇಳಿಬರುತ್ತದೆ,ಪಾಪ ಆಮೆ ನೀರೂ ಇಲ್ಲದೆ ಕೊಡದ ಏಟೂ ತಿನ್ನಬೇಕು. ನಾಲ್ಕಾರು ಕೊಡ ಸೇದಿದರೆ ಆ ಬಾವಿಯಲ್ಲಿ ನೀರು ಖಾಲಿ ಮತ್ತೆ ಎರಡು ಘಂಟೆ ಬಿಟ್ಟು ಬಂದು ಇಣುಕಿ ನೋಡಿ ನೀರು ಕಂಡರೆ ಮತ್ತೆ ಹಗ್ಗ ಜಗ್ಗುವುದು. ಇನ್ನು ಸಾರ್ವಜನಿಕರಿಗೆ ಸಪ್ಲೈ ಆಗುವ ನೀರು ನೆಲದಿಂದ ಅರ್ಧ ಅಡಿ ಮೇಲಿದ್ದರೆ ನೀರೇ ಹತ್ತುವುದಿಲ್ಲ,ಭಾಗಶಃ ಮನೆಗಳಲ್ಲಿ ನೆಲದಿಂದ ನಾಲ್ಕು ಅಡಿ ಆಳದ ತೊಟ್ಟಿ,ಅಲ್ಲೊಂದು ಕೊಳಾಯಿಯೇ ಇಲ್ಲದ ಕೊಳವೆ.ನೀರು ಬಂದಾಗ ಮಲಗಿದ್ದವರೆಲ್ಲಾ ಎದ್ದು ಚುರುಕಾಗಿ ನೀರು ತುಂಬುವ ಕೆಲಸ.ಅದನ್ನು ಸಮಯಕ್ಕೆ ಸರಿಯಾಗಿ ಮನೆಯಲ್ಲಿದ್ದು ಹಿಡಿದಿಡದಿದ್ದರೆ ಮರುದಿನ ನೀರಿಲ್ಲ. ಇಷ್ಟೆಲ್ಲಾ ಕಷ್ಟ ಪಟ್ಟು ಹಿಡಿದಿಟ್ಟ ನೀರು ಶೋಧಿಸದೇ ಕುಡಿಯುವ ಹಾಗಿಲ್ಲ. ಒಂದು ದಿನ ಬಿಟ್ಟರೆ ಅದರಲ್ಲಿ ಬರೀ ಹುಳುಗಳು.

ಇಲ್ಲಿ ನೋಡಿ ರಾಜಾಸ್ಥಾನದ ಈ ಊರಿನಲ್ಲಿ ಈ ಸತಿಯರ ಸಾಹಸ ಹದಿನೈದು ಇಪ್ಪತ್ತು ಅಡಿ ಸರಿಯಾದ ಮೆಟ್ಟಿಲೂ ಸಹ ಇಲ್ಲದ, ಜಾರಿದರೆ ಮುಖ ಮೂತಿ ಇರಲಿ ಮೂಳೆಗಳೇ ಮುರಿದುಹೋಗುತ್ತದೆ ಅಂಥಾ ಜಾಗದಿಂದ ದಿನಾ ನೀರು ಹೊತ್ತು ತರ್ತಾರಂತೆ.ಅಬ್ಬ ಎಷ್ಟೊಂದು ಬೇಧ ಭಾವ ಆಗಿದೆ ಎಲ್ರೂ ಭಗವಂತನ ಮಕ್ಳೇ ಆದರೆ ಕೆಲವರ ಕರ್ಮ ಕಣ್ ತೇವ ಮಾಡಿಬಿಡುತ್ತದೆ.


ಪ್ರಪಂಚದ ಶೇ 17 ರಷ್ಟು ಜನ ಸಂಖ್ಯೆ ಇರುವ ಭಾರತದಲ್ಲಿ ಇಡೀ ಭೂಮಿಯ ಶೇ 4 ರಷ್ಟು ಮಾತ್ರ ನೀರಿನ ಪ್ರಮಾಣ ಇದೆ. ಅಂಕಿ ಅಂಶದ ಪ್ರಕಾರ ಇನ್ನು ಹದಿಮಾರು ವರ್ಷಗಳಲ್ಲಿ ಭಾರತ ಚೀನಾ ತೀವ್ರ ನೀರಿನ ಅಭಾವ ಅನುಭವಿಸಲಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತೂ ಕೆಲವು ದೇಶಗಳು ಕೆಳಗಿನ ನಕ್ಷೆಯಲ್ಲಿ ನೀಲಿಯಾಗಿ ಕಂಡರೂ ಜನಸಂಖ್ಯೆ ಕಡಿಮೆ ಇರುವುದರಿಂದ ತೊಂದರೆ ಕಡಿಮೆ ಎನ್ನುವುದು ತಜ್ಞರ ಹೇಳಿಕೆ.ಯಾರೇನೇ ಹೇಳಲಿ ಪ್ರಕೃತಿಯ ನಿಯಮ ತಪ್ಪಿಸಲಸಾಭ್ಯವಾದರೂ ನಮ್ಮ ಕಣ್ಮುಂದೆ ಸೋರುತ್ತಿರುವ ಸುರಿಯುತ್ತಿರುವ ನಲ್ಲಿ ನಿಲ್ಲಿಸಲು ಅಡ್ಡಿಇಲ್ಲವಲ್ಲಾ! 





Comments

  1. ತುಂಬಾ ವಿಚಾರಪೂರ್ಣ ಹಾಗೂ ಸಮಯೋಚಿತ ಲೇಖನ. ಭಾರತದಲ್ಲಿ ಅಪಾರವಾದ ನೀರಿನ ಕೊರತೆ ಇದ್ದರೂ ದೊಡ್ಡ ದೊಡ್ಡ sump ಗಳನ್ನು ಕಟ್ಟಿಸಿಕೊಂಡು ಅನವಶ್ಯಕವಾಗಿ ನೀರನ್ನು ಬಳಸಿ ಪೋಲು ಮಾಡುವವರು ಎಷ್ಟೋ! ಇವರಿಗೆ ಹೇಳುವವರು ಯಾರು?

    ReplyDelete
    Replies
    1. ನಿಜ. ನೆಲದಿಂದ ಕೆಳಗೆ ಕಟ್ಟಿರುವ ಸಂಪ್ ಗಳಿಗೆ ಮಿತಿಯೇ ಇಲ್ಲ. ಮನಬಂದಂತೆ ಯಥಾಶಕ್ತಿ ದೊಡ್ಡದೊಡ್ಡ ಸಂಪ್ ಗಾತ್ರ ನೋಡಿದರೆ ಇಡೀ ರಸ್ತೆಗಾಗುವಷ್ಟು ನೀರು ಒಂದೇ ಮನೆಯಲ್ಲಿ ಶೇಖರಿಸಿರುತ್ತಾರೆ. ಇನ್ನು ಮನೆ ಮೇಲಿನ tank ಒಂದೇ ಕಟ್ಟಡಕ್ಕೆ ೨-೩ ಇವೆ. ಇದರ ಬಗ್ಗೆ ನೀರು ಸರಬರಾಜು ಮಾಡುವವರ ಅಧಿಕಾರ ಏನು ಇಲ್ಲ.

      Delete
  2. ಪೈಪ್ ಬಿಟ್ಕೊಂಡು ಕಾರ್ ತೊಳೆಯೋ ಜನ ಎಷ್ಟು , ನೋಡಿದರೆ ಮೈ ಉರಿಯುತ್ತೆ - ಇವರಿಗೆ ತಾವು ಎಲ್ಲಿದ್ದೀವಿ , ನೀರಿಗೆ ಎಷ್ಟು ಕಷ್ಟ ಇದೆ ಅಂತ ಅರಿವೇ ಇಲ್ಲ

    ReplyDelete
  3. ನಿಜವಾದ ಮಾತು, ನನಗೂ ಹಾಗೆ ಅನಿಸುತ್ತದೆ.ನಮ್ಮ ಚಿಕ್ಕಮ್ಮ ಒಬ್ಬರು ದಿನಕ್ಕೆ ಇಪ್ಪತ್ತಕ್ಕೂ ಹೆಚ್ಚುಸಲ ಕಾಲ್ ತೊಳೆದು ತೊಳೆದು ಕಾಲ್ ಸೇತು ಹೋಗಿತ್ತು. ಡಾಕ್ಟರ್ ಸಲಹೆಯ ಮೇರೆಗೆ ಇನ್ಮುಂದೆ ಕಾಲೇ ತೊಳೆಯುವ ಹಾಗಿಲ್ಲ ಎಂದರು. ಆಗ ನಾವೆಲ್ಲಾ ಸದ್ಯ Tank ಬೇಗ ಖಾಲಿ ಆಗಲ್ಲ ಎಂದು ತಮಾಷೆ ಮಾಡುತ್ತಿದ್ದೆವು. ಇನ್ನು ಆಗಾಗ್ಗೆ ಪ್ರೆಶರ್ ಕ್ಲಿನರ್ ಗಳಲ್ಲಿ ಡ್ರೈವೇ ತೊಳೆಯುವವರನ್ನು ಕಂಡಾಗ ಛೇ ! ಅನ್ನಿಸುತ್ತದೆ.

    ReplyDelete

Post a Comment