ಸಿಂಗಣ್ಣನವರ ಈಟ್-ಔಟ್ ಪ್ರಾಬ್ಲಮ್ಮುಗಳು

 ಸಿಂಗಣ್ಣನವರ ಈಟ್-ಔಟ್ ಪ್ರಾಬ್ಲಮ್ಮುಗಳು

ಹಾಸ್ಯ ಲೇಖನ - ಅಣಕು ರಾಮನಾಥ್



“ನಮ್ಮ ಕಾಲದ ಸುಲಭತೆ ಇಂದಿಗೆ ಇಲ್ಲ ಕಣಯ್ಯ” ಜೋಲುಮೋರೆ ಹಾಕಿಕೊಂಡು ನುಡಿದರು ಸಿಂಗಣ್ಣನವರ್.

‘ಏನಾಯಿತು?’

‘ತಿಂಡಿಗಳಿಗೆಲ್ಲ ಇಂಥದ್ದೇ ಶೇಪ್ ಇರುತ್ತಿತ್ತು. ಇಂತಲ್ಲೇ ಕಟ್ ಮಾಡುವುದು ತಿಳಿಯುತ್ತಿತ್ತು. ಈಗಿನವರೊಡನೆ ಸೇರಿ ಬಹಳ ಅವಸ್ಥೆಯಾಗಿದೆ. ಹೋದ ವಾರ ‘ಸಿಟಿ ಚಾಟ್ಸ್’ ಹೆಸರಿನ ಗಾಡಿಯವನು ಸಮೋಸ ಕೊಟ್ಟ. ಎಷ್ಟು ಕಷ್ಟವಾಯಿತೂಂತೀನಿ” ಜೋಲುಮುಖಕ್ಕೆ ಮತ್ತಷ್ಟು ನೆರಿಗೆಗಳು ಮೂಡಿದವು.

“ಖಾರ ಇತ್ತೇನೋ?” ಆಂಧ್ರಜಿಹ್ವಿಯಾದ ನಾನು ಪ್ರಶ್ನಿಸಿದೆ.

“ರುಚಿಯ ವಿಷಯ ಹಾಗಿರಲಿ. ಅದನ್ನು ಕಟ್ ಮಾಡುವುದೇ ತಿಳಿಯಲಿಲ್ಲ. ಹಳೆಯ ಕಾಲದಲ್ಲಿ ಶೆಟ್ಟರ ಅಂಗಡಿಯಲ್ಲಿ ಕಟ್ಟಿಕೊಡುತ್ತಿದ್ದ ಬೆಲ್ಲದ ಪೊಟ್ಟಣದಂತೆ ಕಾಣುತ್ತಿದ್ದ ಅದರ ಮೇಲ್ತುದಿಗೆ ಚಮಚೆಯ ತುದಿಯನ್ನಿಟ್ಟು ಅದುಮಿದೆ. ಇಡೀ ಸಮೋಸ ಠಣ್ಣನೆ ತಟ್ಟೆಯ ಪಕ್ಕಕ್ಕೆ ಸರಿಯಿತು. ಚಮಚೆಯಿಂದ ಸಮೋಸವನ್ನು ಮತ್ತೆ ಮಧ್ಯಕ್ಕೆ ತಂದು. ತಳವನ್ನು ಶಿಖರವಾಗಿಸಿ, ಹೊಸಶಿಖರಕ್ಕೆ ಚಮಚವನ್ನು ತರುಬಿದೆ. ಸಮೋಸ ತಟ್ಟೆಯಿಂದ ಚಿಮ್ಮುವ ಆತುರ ತೋರಿತು. ಮುಟ್ಟಿದ್ದಕ್ಕೆ ಮೂರು ಸಲ ಎಂದು ಮತ್ತೊಮ್ಮೆ ಮಧ್ಯಸ್ಥವಾಗಿಸಿ ಶಿಖರದ ಬದಲಿಗೆ ಹೊಟ್ಟೆಯ ಭಾಗಕ್ಕೆ ಚಮಚದಿಂದ ತಿವಿದೆ. ರಬ್ಬರ್ ಚೆಂಡಿನಂತೆ ಕೊಂಚ ಒಳಕ್ಕಿಳಿದು ಮತ್ತೆ ಯಥಾಕಾರವನ್ನು ಕಾಪಾಡಿಕೊಂಡಿತು. ತಲೆಯೆತ್ತಿ ನೋಡಿದರೆ ಆರು ಜೋಡಿ ಕಣ್ಣುಗಳು ನನ್ನ ತಟ್ಟೆಯತ್ತಲೇ ನೆಟ್ಟಿದ್ದವು. ಅವರೆಲ್ಲರ ದೃಷ್ಟಿ ತಾಗಿ ಹೊಟ್ಟೆನೋವಾದರೇನು ಗತಿ! ಕಡೆಯ ಬಾರಿ ಪ್ರಯತ್ನಿಸೋಣವೆಂದು ಚಮಚೆಯ ಹಿಂದಿನಿಂದ ಹಿರಣ್ಯಕಶಿಪುವಿನ ಹೊಟ್ಟೆಯನ್ನು ನರಸಿಂಹನು ಬಗೆದಂತೆ ಬಗೆದೆ. ‘ಹೌ ಅನ್‍ಕೌತ್’ ಎಂದು ಅಳಿಯ ಗೊಣಗಿದ. ‘ಲೀವ್ ಇಟ್ ಅಪ್ಪಾ’ ಎನ್ನುತ್ತಾ ಮಗನು ತಟ್ಟೆಯನ್ನು ಕಿತ್ತುಕೊಂಡ. ಸಮೋಸದ ಆಕಾರವೇ ಬರೀ ಮೋಸ” ಅಲವತ್ತಿಕೊಂಡರು ಸಿಂಗಣ್ಣ.

ನನ್ನ ಸ್ಥಿತಿಯೂ ಇವರಿಗಿಂತ ಕೊಂಚ ಭಿನ್ನವಾಗಿತ್ತಷ್ಟೆ. ಸಮೋಸದ ಶಿಖರವನ್ನೇ ಬಲವಂತವಾಗಿ ಆಪರೇಟ್ ಮಾಡಲು ಯತ್ನಿಸಿದಾಗ ಪ್ರತಿಭಟನಾತ್ಮಕವಾಗಿ ಸಿಡಿದು ಬಿಳಿಯ ಶರ್ಟಿನ ಮೇಲೆ ನವ್ಯಕಲೆಯ ವಿನ್ಯಾಸಗಳನ್ನು ಮೂಡಿಸಿತ್ತು.

“ಸಮೋಸ ಪ್ರಕರಣ ಎಷ್ಟೋ ವಾಸಿ” ಸಿಂಗಣ್ಣನ ಮಗ ಶೇಕ್ರೂ ಆರಂಭಿಸಿದ, “ಸಿಟಿ ಚಾಟ್ಸ್ ಕಥೆ ನಡೆದ ಮರುದಿನ ಅಪ್ಪನನ್ನು ಪೀಟ್ಝಾ ಪಾರ್ಲರ್‍ಗೆ ಕರೆದುಕೊಂಡುಹೋದೆವು. ಅವರಿಗೆ ಫಿಂಗರ್ ಚಿಪ್ಸ್ ಕೊಡಿಸಿ ನಾವು ಪೀಟ್ಝಾ ಆರ್ಡರ್ ಮಾಡೋಣವೆಂದುಕೊಂಡರೆ ‘ಬಿ ಎ ರೋಮನ್ ವೈಲ್ ಇನ್ ರೋಮ್ ಕಣೋ’ ಅಂತ ಜಬರ್ದಸ್ತಿಯಿಂದ ಆರ್ಡರ್ ಮಾಡಿದರು.’ ತ್ರೀ ಲೇಯರ್ಸ್ ಪೀಟ್ಝಾದ ಅಗಲಕ್ಕೆ ಬಾಯಿ ತೆಗೆಯಕ್ಕೆ ನಿನಗೆ ಆಗಲ್ಲಪ್ಪ’ ಅಂದರೂ ಕೇಳದೆ ಅಷ್ಟಗಲ ಬಾಯಿ ತೆಗೆದರು. ಮೂರಿಂಚಿನ ಪೀಟ್ಝಾ ಎರಡಿಂಚಿನ ಬಾಯಿಗೆ ಹೋಗದೆ ಮೂಗಿಗೆಲ್ಲ ಚೀಸ್ ಮೆತ್ತಿಕೊಂಡು ಉಸಿರಾಡಕ್ಕೇ ಅವಸ್ಥೆ ಮಾಡಿಕೊಂಡರು. ಅಷ್ಟಕ್ಕಾದರೂ ಬಿಟ್ಟರೇನು? ‘ಮುರ್ಕೊಂಡೇ ತಿಂತೀನಿ’ ಅಂತ ಪೀಟ್ಝಾದ ಮೇಲ್ಪದರಕ್ಕೆ ಕೆಳಪದರದಿಂದ ಡೈವೋರ್ಸ್ ಕೊಡಿಸಲು ಪ್ರಯತ್ನಿಸಿದರು. ಮಧ್ಯದಲ್ಲಿದ್ದ ಚೀಸ್ ಕಟ್ ಆದರಲ್ಲವೇ! ಎಳೆದಷ್ಟೂ ಬರುತ್ತಿದ್ದ ದ್ರೌಪದಿಯ ಸೀರೆಯಂತೆ ಚೀಸ್ ಬರುತ್ತಿದ್ದರೆ ಇವರು ಎದ್ದುನಿಂತು ಒಂದು ಪೀಸನ್ನು ತಟ್ಟೆಯಲ್ಲಿಟ್ಟು ಇನ್ನೊಂದು ಪೀಸನ್ನು ಹೊಟೇಲಿನ ಬಾಗಿಲಿನವರೆಗೆ ತೆಗೆದುಕೊಂಡುಹೋದರು. ಅಷ್ಟು ಉದ್ದಕ್ಕೂ ಚೀಸಿನ ಎಳೆ! ಈ ಅಪ್ಪನನ್ನು ಹೊಟೇಲಿಗೆ ಕರೆದುಕೊಂಡುಹೋದರೆ ನಮಗೆ ಮರ್ಯಾದೆ ಬರಲ್ಲ ಸಾರ್” ದೂರಿನ ಮೊದಲ ಪುಟವನ್ನು ಸಂಪೂರ್ಣಗೊಳಿಸಿದ ಸಿಂಗತನಯ.



“ಫೋರ್ಕು, ಚಾಕು ಬಳಸಿ ಕಟ್ ಮಾಡಬಹುದಿತ್ತಲ್ಲ ಸಿಂಗಣ್ಣ” ಎಂದೆ.

“ಟ್ರೈ ಮಾಡಿದೆ. ಲಕ್ಷ್ಮಣನೇನಾದರೂ ಅಂತಹ ಚಾಕುವನ್ನು ಇಟ್ಟುಕೊಂಡಿದ್ದಿದ್ದರೆ ಶೂರ್ಪನಖಿಯು ಲಕ್ಷ್ಮಣನು ತನ್ನ ಮೂಗು, ಕಿವಿಗಳಿಗೆ ಕಚಗುಳಿ ಇಡುತ್ತಿದ್ದಾನೆಂದು ಭಾವಿಸಿ ‘ಯೂ ನಾಟಿ’ ಅನ್ನುತ್ತಿದ್ದುದು ಗ್ಯಾರಂಟಿ. ನನ್ನ ಬುದ್ಧಿಗಿಂತ ಮೊಂಡಾದ ಚಾಕು ಕಣೋ. ಹಾಗೂ ಶಕ್ತಿಮೀರಿ ಒತ್ತಿದರೆ ಒಳಗಿನ ಕುಕುಂಬರ್, ಟೊಮೆಟೊಗಳು ಸಭಾತ್ಯಾಗ ಮಾಡುತ್ತಿದ್ದವೇ ವಿನಹ ಟಾಪ್ ಲೇಯರ್ ಕಟ್ ಆಗಲೇ ಇಲ್ಲ” ತನ್ನ ಗೋಳನ್ನು ತೋಡಿಕೊಂಡರು ಸಿಂಗಣ್ಣ.

“ಅದೆಷ್ಟೋ ವಾಸಿ. ಹೋದ ತಿಂಗಳ ಕಥೆಯನ್ನು ಮರೆತೆಯಾ?” ಸಿಂಗಣ್ಣನ ಮಗಳು ಹೊಸ ವರಸೆ ತೆಗೆದಳು. “ಲಿಟಲ್ ಇಟಲಿಯಲ್ಲಿ ಪಾಸ್ಟಾ ಆರ್ಡರ್ ಮಾಡಿದೆವು. ಬಂದ ತಿಂಡಿಯನ್ನ ಬಾಯಿಯ ಹತ್ತಿರ ತೊಗೊಂಡ್ಹೋಗೊದರ ಬದಲು ಮೂಗಿನ ಹತ್ತಿರಕ್ಕೆ ತೊಗೊಂಡ್ಹೋಗಿ, ಪೊಲೀಸ್ ನಾಯಿಯ ತರಹ ಮೂಸಿನೋಡಿ, ‘ಇದು ಪಾಸ್ಟಾ, ಪ್ರೆಸೆಂಟಾ?” ಅಂತ ಕೇಳಿದರು. ಅಲ್ಲಿನ ವೇಯ್ಟರ್ ಇಟಾಲಿಯನ್ ಆದ್ದರಿಂದ ಅವನಿಗೇನೂ ಅರ್ಥವಾಗಲಿಲ್ಲ, ನಮ್ಮ ಮರ್ಯಾದೆ ಉಳಿಯಿತು.”

“ಹೇಳೋವಾಗ ಪೂರ್ತೀನೇ ಹೇಳಿಬಿಡು. ಅದರಲ್ಲಿದ್ದ ಐಟಂಗಳಿಗೆಲ್ಲ ‘ಪ್ಲಾಸ್ಟಿಕ್ ಪೈಪ್’, ‘ಆಂಗಲ್ ಹೋಲ್ಡರ್’, ‘ಟಿ ಜಂಕ್ಷನ್’, ‘ಯೂನಿಯನ್’ ಅಂತೆಲ್ಲ ಹೇಳಿದ್ದಲ್ಲದೆ ಬ್ರೊಕೋಲಿ, ಹ್ಯಾಲೆಪಿನೋಗಳನ್ನೆಲ್ಲ ವಾಷರ್ ಅಂತ ಕರೆದರು. ಸುತ್ತಮುತ್ತ ಇದ್ದವರು ತಾವು ತಿನ್ನೋದನ್ನೂ ನಿಲ್ಲಿಸಿ ಇವರ ಕಡೆ ನೋಡಿದ್ದೂ ನೋಡಿದ್ದೇ, ನಕ್ಕಿದ್ದೂ ನಕ್ಕಿದ್ದೇ. ನಾವು ಹೊರಟಾಗ ಹೊಟೇಲಿನವನು ಇವರನ್ನು ಕರೆದು ‘ಪ್ಲೀಸ್ ವಿಸಿಟ್ ಅಸ್ ಆಫನ್. ವಿ ಹ್ಯಾಡ್ ನಾಟ್ ಸೀನ್ ಅವರ್ ಕಸ್ಟಮರ್ಸ್ ಸೋ ಹ್ಯಾಪಿಲಿ ಸ್ಮೈಲಿಂಗ್ ಎನಿ ಡೇ’ ಅಂದ...” ಶೇಕ್ರೂ ಕಥಾನಕ ಮುಂದುವರಿಸಿದ.

“ಇದ್ದಿದ್ದನ್ನ ಇದ್ಹಾಗೆ ಹೇಳಿದರೆ ಕಸ್ಟಮರ್ಸ್ ಹ್ಯಾಪಿ ಅಂತೆ ಅಂತ ಗಾದೇನೇ ಇದೆಯಲ್ಲ. ಅವು ನೋಡಕ್ಕಷ್ಟೇ ಅಲ್ಲ, ಮುಟ್ಟಕ್ಕೂ, ಜಗಿಯಕ್ಕೂ ಪ್ಲಾಸ್ಟಿಕ್ ತರಹವೇ ಇದ್ವು. ಅವಕ್ಕೆ ನಾಗರಪಂಚಮಿಯ ದಿವಸ ತಟ್ಟೆಯಲ್ಲಿ ಹಾಲಿಟ್ಟು ಅಭಿಷೇಕ ಮಾಡೋ ತರಹ ಅದೇನೋ ಕ್ಷೀರದ್ರವದ ಸೇವೆ ಬೇರೆ!” ಸಮರ್ಥಿಸಿಕೊಂಡರು ಸಿಂಗಣ್ಣ.

“ಇವೆಲ್ಲ ಮಾಡ್ರನ್ ತಿಂಡಿಗಳು. ನಮ್ಮಂತಹ ಓಲ್ಡೀಸ್‍ಗೆ ಸರಿಬರಲ್ಲ” ಎಂದೆ.

“ಬಿ ಎ ರೋಮನ್ ಅನ್ನೋ ಸ್ಟೈಲ್ ಯಾಕ್ಬೇಕಿತ್ತು? ನಿಮ್ಮ ವಾದವನ್ನೇ ಒಪ್ಪೋಣ. ಮಸಾಲೆಪುರಿಯನ್ನು ದ್ವಾಪರದಲ್ಲೇ ಮಾಡಿದ್ದರೂಂತ ಜನಮೇಜಯ ಯಾರಿಗೋ ಹೇಳಿದ್ದನಂತೆ. ಅಂತಹ ಮಸಾಲೆಪುರಿಯನ್ನ ಹೇಗೆ ತಿಂದರು ನೀವೇ ಕೇಳಿ” ಎಂದಳು ಸಿಂಗಪುತ್ರಿ.



“ಮಸಾಲೆಪುರಿಗೆ ಬಳಸಿದ ಅಗಲವಾದ ಪುರಿಯನ್ನು ತಿನ್ನಬೇಕಾದರೆ ಮೊಸಳೆಗಳಿಂದ ಬಾಯನ್ನು ಬಾಡಿಗೆಗೆ ಪಡೆಯಬೇಕಾಗಿತ್ತು. ಹತ್ತಿರದಲ್ಲಿ ಮೊಸಳೆಗಳಿಲ್ಲದ ಕಾರಣ ಪುರಿಯನ್ನು ಎರಡು ಭಾಗ ಮಾಡಿಕೊಳ್ಳೋಣಾಂತ ಸ್ಪೂನ್ ಹಾಕಿದೆ. ಪುರಿ ಪ್ರೈವೇಟ್ ಕಂಪನಿಯ ಬಾಸ್‍ನಂತೆ ಬಹಳ ಖಡಕ್ಕಾಗಿತ್ತು. ಇನ್ನು ಸ್ವಲ್ಪ ಪಾನಿಯನ್ನು ಸುರಿಸಿಕೊಂಡು ಮೆತ್ತಗಾಗಿಸಿಕೊಳ್ಳೋಣ ಎಂದರೆ ‘ಈಟ್ ಫಾಸ್ಟ್ ಅಪ್ಪ, ಇಟ್ಸ್ ಗೆಟಿಂಗ್ ಲೇಟ್’ ಎನ್ನುವ ವಾರ್ನಿಂಗ್ ಬೇರೆ. ಆದದ್ದಾಗಲಿ ಅಂತ ಬಟಾಣಿ, ಚೌಚೌ, ಕೊತ್ತಂಬರಿ, ಈರುಳ್ಳಿಗಳಿಗೆ ಹಾಸಿಗೆಯಂತೆ ಮಲಗಿದ್ದ ಪುರಿಯ ಮೇಲೆ ಒತ್ತಡ ಹೇರಿದೆ. ಪುರಿಯು ಮಾಡ್ರನ್ ಡೇಸ್‍ನ ಜಾಯಿಂಟ್ ಫ್ಯಾಮಿಲಿಯಂತೆ ಥಟ್ಟನೆ ಮೂರು ಹೋಳಾಗಿ ಮೂರು ದಿಕ್ಕಿಗೆ ಹಾರಿತು. ಮೊದಲೇ ಒಂದಿಷ್ಟು ನೀರುಳ್ಳಿಮಿಶ್ರಿತ ಚೌಚೌ ಅನ್ನು ಬಾಯಿಗೇರಿಸಿದ್ದರಿಂದ ಆ ಪ್ಲೇಟ್ ‘ಎಂಜಲು’ ಪಟ್ಟಿಗೆ ಸೇರಿತ್ತು. ಹಾರಿದ ಪುರಿಯ ಪೀಸು ನನ್ನಿಂದ ಆರು ಅಡಿ ದೂರದಲ್ಲಿ ಕುಳ್ಳುಪೀಠದಲ್ಲಿ ಕುಳಿತಿದ್ದ ಅಯ್ಯಂಗಾರರ ತಟ್ಟೆಯಲ್ಲಿ ಲ್ಯಾಂಡ್ ಆಯಿತು. ತಮಿಳುಮಿಶ್ರಿತ ಪೊಲೀಸ್ ಸಂಸ್ಕೃತದಲ್ಲಿ ನನಗೆ ಕಾಲುಗಂಟೆಯಷ್ಟು ಆಶೀರ್ವಚನ ಸಿಕ್ಕಿತು. ನೀನೇ ಹೇಳು, ಪುರಿ ಗಟ್ಟಿಯಿದ್ದದ್ದು ನನ್ನ ತಪ್ಪೇ?” ಜೋಲುಮೋರೆಯನ್ನು ಡಬಲ್ ಜೋಲಾಗಿಸಿಕೊಂಡು ಕೇಳಿದರು ಸಿಂಗಣ್ಣ.

“ಕೈಯಲ್ಲೇ ಕಟ್ ಮಾಡಬಹುದಿತ್ತಲ್ಲ?”

“ಪ್ರೆಸ್ಟೀಜ್ ಪ್ರಶ್ನೆ. ಸುತ್ತಮುತ್ತಲಿನವರು ತೊಳೆಯದ ಚಮಚದಲ್ಲಿ ತಿನ್ನುತ್ತಿರುವಾಗ ನಾನು ತೊಳೆದುಕೊಂಡ ಕೈಯಲ್ಲಿ ತಿಂದರೆ ಅಸಮಾನತೆ, ಗುಂಪಿಗೆ ಸೇರದಿರುವಿಕೆ, ಪ್ರತ್ಯೇಕತಾವಾದ ಮುಂತಾದ ಅಪರಾಧಗಳಾಗುತ್ತವಂತೆ. ನೀನೇನೇ ಹೇಳು, ಕೈಯಲ್ಲಿ ಮುರಿದುಕೊಂಡು ತಿನ್ನುವ ಚಕ್ಕುಲಿ, ನಿಪ್ಪಟ್ಟು, ಇಡ್ಲಿ, ದೋಸೆ, ಪೂರಿಗಳ ಮುಂದೆ ಇಂದಿನ ಶಸ್ತ್ರಚಿಕಿತ್ಸೆಯ ಮಟ್ಟಕ್ಕೆ ಶಸ್ತ್ರಾಸ್ತ್ರಗಳನ್ನು ಬಳಸಿ ತಿಂಡಿಗಳನ್ನು ತಿನ್ನುವ ಕ್ರಮವನ್ನು ನೀವಾಳಿಸಿ ಎಸೆಯಬೇಕು” ಎಂದರು ಸಿಂಗಣ್ಣ.

ನೀವೇನಂತೀರಿ?

Comments

  1. ಹೌದು, ನಾನೂ ಅದೇ ಅಂತೀನಿ. ಈಗಿನ ತಿಂಡಿಗಳೋ, ಅದರ ಹೆಸರುಗಳೋ, ಅಬ್ಬಬ್ಬಾ!!! ಉಪ್ಪಿರಲ್ಲ, ಖಾರ ಇರಲ್ಲ, ರುಚಿ ಅಂತೂ ಮೊದಲೇ ಇರಲ್ಲ. ಚಕ್ಕುಲಿ ಕೋಡುಬಳೆ, ಬಜ್ಜಿ ಬೋಂಡಾ ಮುಂದೆ ಇವೆಲ್ಲಾ ಲಾಯಕ್ಕ್ಇಲ್ಲ. ಚೆನ್ನಾಗಿ ಹೇಳಿದ್ದೀರಿ ರಾಮ್.

    ReplyDelete

Post a Comment