ಜೀವಸಂಚಾರ

ಜೀವಸಂಚಾರ

ಲೇಖನ  -  ಶ್ರೀಮತಿ ಮಂಜುಳಾ ಡಿ



ಕಾಗಾ ಕಾಗಾ ರೆ ಮೋರೆ

ಇತನಿ ಅರಜ್ ತೋ ಸೆ

ಚುನ್ ಚುನ್ ಕಾಯಿಯೋ ಮಾಸ್


ಆರೆಜಿಯಾ ರೆ ಕಾಯೋ ನ ತು

ನೈನಾ ಮೋರೆ ಕಾಯೋ ನ ತು

ನೈನಾ ಮೋರೆ ಪಿಯಾ ಕೆ ಮಿಲನ್ ಕೆ ಆಸ್...


“ ಪ್ರಿಯ ಕಾಗೆಗಳೇ,  ನನ್ನ ಕಣ್ಣುಗಳನ್ನು ಮಾತ್ರ ಬಿಟ್ಟು, ನನ್ನ ದೇಹದ ಮೂಳೆ ಮಾಂಸ ಎಲ್ಲವನ್ನೂ ಆರಿಸಿ ಆರಿಸಿ ತಿಂದುಬಿಡಿ, ಕಣ್ಣುಗಳು ನನ್ನ ಪ್ರಿಯತಮೆಯ ನೋಟವೊಂದಕ್ಕಾಗಿ ಅರಸುತ್ತಲೇ ಇರಲಿ...”

      ಚೆಲ್ಲಿದ ಕೂದಲು, ಕಲಾತ್ಮಕವಾಗಿ ಹಿಡಿದ ಗಿಟಾರ್  ಒಡಲಾಳದಿಂದ ಹೊಮ್ಮುವ ಹಾಡಿನ ಒಂದೊಂದು ಸ್ವರಕ್ಕೂ ಕಾತರಿಸಿದಂತೆ  ಹುಚ್ಚೆದ್ದು ಕುಣಿಯುವ ಅಗಾಧವೆನಿಸುವ ಜನಸ್ತೋಮ. ಜೀವ ಚೈತನ್ಯವಿಡೀ ಭಾವವೊಂದರ ದ್ಯೋತಕವಾಗಿ ಹಾಡುವ ಆತನ ನಟನೆ. ಒಡಲಾಳದಿಂದ ಹೊಮ್ಮುವ ಭಾವಸಾರದ ಗಾಯನವೋ,  ಭಾವನಾಪ್ರವಾಹವೋ ಎಂಬಂಥ ಹಾಡುಗಾರಿಕೆ. ಇದೆಲ್ಲವನ್ನೋ ಕಲಾತ್ಮಕವಾಗಿ ತೆರೆಯ ಮೇಲೆ ಅರಳಿಸಿದ  ನಿರ್ದೇಶಕ. ಇದು “ರಾಕ್ ಸ್ಟಾರ್” ಸಿನೆಮಾದ ಸುಪ್ರಸಿದ್ದ ಗೀತೆ “ನಾದನ್ ಪರಿಂದೆ”ಯ ಕೊನೆಯ ಪ್ಯಾರಾ.

     ಇಡೀ ಸಿನೆಮಾ ಹೊಸದೊಂದು ಲೋಕವನ್ನು ಪ್ರವೇಶಿದ ಧನ್ಯತೆ ಹಾಯಿಸಿಬಿಡುತ್ತದೆ. ಕಥಾನಾಯಕ ಜೋರ್ಡನ್, ಸ್ಟೇಜ್ ಸಿಂಗಿಂಗ್‍ನಲ್ಲಿ ಇಡೀ ವಿಶ್ವದಲ್ಲೇ  ಉತ್ತುಂಗ ತಲುಪಿರುತ್ತಾನೆ. ಆತನ ಒಂದು ಹಾಡಿನ ಸಾಲು ಕೇಳಲು ಮೈಯೆಲ್ಲಾ ಕಿವಿಯಾಗಿಸಿ, ಆ ಭಾವನಾಪ್ರವಾಹಕ್ಕೆ ಕಣ್ಣುತುಂಬಿಕೊಂಡು ನಿಲ್ಲುವ ಅಪಾರ ಜನಸ್ತೋಮ. ಆತನಿಗೋ ಆತನ ಹಾಡಿನ ಭಾವವೇ ಅವಳು. ಆತ ಕಾಯವಾದರೆ ಆತ್ಮ ಅವಳು ಅನ್ನುವ ಧ್ಯಾನಸ್ಥ ಸ್ಥಿತಿ. ತನ್ನ ಮುಂದೆ  ಇರುವುದೆಲ್ಲವೂ ಆಕೆಗೆ ಹೋಲಿಸಿದರೆ ಅರ್ಥವಿಲ್ಲದ್ದು ಅನಿಸುವ ಸ್ಥಿತಿ. ಹಾಡುಗಾರನಾಗಬೇಕೆಂಬ ತವಕವಿರುವ ಸಾಮಾನ್ಯ ಕಾಲೇಜು ಹುಡುಗನೊಬ್ಬನೊಳಗೆ ಅವಿತ ನೈಜ ಅದ್ಭುತ ಕಲಾವಿದನನ್ನು  ಭಾವನಾತ್ಮಕವಾಗಿ ಅರಳಿಸುವ ನಿರ್ದೇಶಕನ ಕಲಾನೈಪುಣ್ಯ ಚಿತ್ರದುದ್ದಕ್ಕೂ ನವಿರಾಗಿ ಹರಿದು ಸದಾ ಕಾಡುವ ಚಿತ್ರವಾಗಿ ಉಳಿಯುತ್ತದೆ "ರಾಕ್ ಸ್ಟಾರ್".

     ಶನಿವಾರ ಅಥವಾ ಶುಕ್ರವಾರ ರಾತ್ರಿ ಬಂತೆಂದರೆ, ಪೆಂಡಿಗ್ ಸಿನೆಮಾಗಳನ್ನ  ನೋಡುವುದು, ಹಾಡುಗಳನ್ನು ಗಂಟೆಟ್ಟಲೇ ಆಲಿಸುವುದು ಇತ್ಯಾದಿ  ಹೀಗೆ ಮನಅರಳಿಸುವ ಆಸಕ್ತಿಗಳಲ್ಲಿ ತೇವದ ಮುಂಜಾವಿನವರೆಗೂ  ನಿದ್ದೆ ಸುಳಿಯದಂತಹ ಎಚ್ಚರವಿರುವ  ಅಭ್ಯಾಸ ನನಗೆ. ಇಂತಹದೇ ರಾತ್ರಿಯೊಂದು ನೋಡಿದ ಸಿನೆಮಾ “ತಮಾಷಾ”. ಈ ಸಿನೆಮಾ ತಾಕಿದ ತೀವ್ರತೆ ಎಷ್ಟಿತ್ತೆಂದರೆ, ಸುಮಾರು ಹದಿನೈದು ದಿನ ಅದೇ ಸಿನೆಮಾ ಗುಂಗಿನಲ್ಲಿದ್ದೆ.


ಬನ್ ಲಿಯಾ ಅಪನಾ ಪೈಗಂಬರ್

ತರ್ ಲಿಯಾ ತು ಸಾಥ್ ಸಮುಂದರ್

ಫಿರ್ ಭೀ  ಸುಕಾ ಮನ್ ಕೆ ಅಂದರ್

ಕ್ಯೂ ರಹೇಗಾ...


ಕೆಲವೇ ದಿನಗಳ ಮೊದಲ ಭೇಟಿಯಲ್ಲಿ ಜನ್ಮವೊಂದನ್ನು ಬದುಕಿದಂತಹ ತೀವ್ರತೆ. ನಾಯಕನ ಚೈತನ್ಯ, ಜೀವನ ಪ್ರೀತಿ ಆಕೆಯ ಬದುಕಿನ ಕ್ಷಿತಿಜಕ್ಕೆ ಎಂದೂ ಮಾಸದ  ಬಣ್ಣದ ಮೆರಗು ಮೂಡಿಸಿದರೆ-ಆಕೆಯ ಭಾವಸ್ಪರ್ಶ ಆತನಲ್ಲಿನ ಕಲಾತ್ಮಕತೆಯನ್ನು ಅರಳಿಸಿ, ಅನುಭೂತಿಯ ಅವಿಭಾಜ್ಯ ಅಂಗವಾಗಿ,   ಪರಸ್ಪರ ಆತ್ಮಕ್ಕಿಳಿದ ಅರಿವು ಇಬ್ಬರಿಗೂ ಆಗಿರುವುದಿಲ್ಲ. ನಾಲ್ಕು ವರ್ಷಗಳ  ನಂತರದ ಅವರಿಬ್ಬರ ಮರು  ಭೇಟಿಯಲ್ಲಿ, ಜಡಿಮಳೆಯ ರಾತ್ರಿ ಫಳೀರನೆ ಮಿಂಚಿದ ಮಿಂಚಿಗೆ ಓಣಿಯೆಲ್ಲಾ  ಒಮ್ಮೆಲೇ ಬೆಳಗಿದಂತೆ ನೆನಪುಗಳ ಭಂಡಾರದ ಬೀಗಗಳು ಕಳಚಿ, ಆಕೆ ತಾನು ಹಿಂದೆ ಕಂಡ ಆತನಿಗಾಗಿಯೇ ಅರಸುತ್ತಾಳೆ. ಆದರೆ ಸಿಗುವುದು, ಈ ಯಾಂತ್ರಿಕ ಲೋಕದ ಜೀವಂತಿಕೆ ಕಳೆದುಕೊಂಡ ಒಬ್ಬ ಪ್ರೋಗ್ರಾಮಿಂಗ್ ಇಂಜಿನಿಯರ್‍ನನ್ನು. ಕಥಾನಾಯಕನ ಆಸಕ್ತಿ-ಬದುಕಿನ ಸಾರ ನಿಂತಲ್ಲೇ ಕಥೆ ಹೆಣೆಯುವ ಕಲಾತ್ಮಕತೆಯಲ್ಲಿರುತ್ತದೆ. ಆದರೆ ಕುಟುಂಬದ ವಾತಾವರಣದ ಒತ್ತಡ, ಅನಿವಾರ್ಯತೆಯಿಂದಾಗಿ  ಹೀಗೆ ಇಂಜಿನಿಯರ್ ಆಗಿ ವೀಕೆಂಡ್  ಪಾರ್ಟಿ- ಆರ್ಟಿಫೀಷಿಯಲ್ ವಿಶ್ ಗಳು ಹೀಗೆ ನಿರ್ಜಿವ ಬದುಕು ಬದುಕುತ್ತಿರುತ್ತಾನೆ. ಮತ್ತೆ ಆಕೆಯ ಬರುವಿಕೆಯೊಂದಿಗೆ ಹಠಾತ್ತಾನೆ ಸುರಕ್ಷಿತ ಕೋಟೆಯನ್ನು ಮುರಿದು ಹೊರಬಿದ್ದ ಸಮುದ್ರದಂತೆ ತಾನು ಬದುಕುತ್ತಿರುವುದರಲ್ಲಿ “ತಾನಿಲ್ಲ” ಎಂಬ ಸತ್ಯದ ಮನವರಿಕೆಯಾಗುತ್ತದೆ. ತನ್ನ ಇಡೀ ಕುಟುಂಬಕ್ಕೆ ಮತ್ತು ಮುಖ್ಯವಾಗಿ ತನ್ನ ತಂದೆಗೆ, ಆತನ ಜೀವನ ಪ್ರೀತಿ ಇರುವುದು ಇಂಜಿನಿಯರ್ ಆಗುವುದರಲ್ಲಿ ಅಲ್ಲ, ತನ್ನ  ಚೈತನ್ಯದ ಹರಿವು ಇರುವುದು ನಿಂತಲ್ಲೇ ಕಥೆ ಹೆಣೆಯುವ ಕಲೆಯಲ್ಲಿ ಅನ್ನುವುದು ಆತನಿಗೆ ಮನವರಿಕೆಯಾಗುವ  ರೀತಿ ಮತ್ತು ಅದನ್ನು ಜನರ ಮುಂದೆ ತೆರೆಯ ಮೇಲೆ ಇಟ್ಟಿರುವ ನಿರ್ದೇಶಕರ  ರೀತಿ ಎಷ್ಟು ಭಾವನಾತ್ಮಕವಾಗಿ ಹೊಮ್ಮಿದೆ ಅಂದರೆ,  ಇಡಿ ಸಿನೆಮಾ ನೋಡುಗರಿಗೆ, ಲೌಕಿಕತೆಯ ನೆರಳಿನಲ್ಲಿ ಕಳೆದು ಹೋದ ನಮ್ಮತನವನ್ನು  ಮತ್ತೆ ಆಯ್ದು ಕೂಡಿಸಿಕೊಳ್ಳಲು, ನಮ್ಮ ಆಸ್ಥೆ ಕಾಂಕ್ರೀಟ್ ಮರುಭೂಮಿಯೊಳಗೆ ಹೂತು ಹೋದದ್ದನ್ನು ಮತ್ತೆ ಹುಡುಕಾಡುವಂತೆ ಮಾಡುತ್ತದೆ.

ತಮಾಷಾ ಸಿನೆಮಾ ನೋಡಿದ ನಂತರ,  ಈ ಸಿನೆಮಾ ನಿರ್ದೇಶಿಸಿದವರ  ಬಗ್ಗೆ ಅರಿಯುವ ತವಕ ಹೆಚ್ಚಾಯಿತು. ಬದುಕಲು ಇರುವ ಸಾವಿರಾರು ಹಾದಿ ಹತ್ತದೇ ತನ್ನ ಹಾದಿ ಹತ್ತುವ ಬಗ್ಗೆ,  ಪ್ರಸ್ತುತ “ಪ್ರೀತಿ-ಪ್ರೇಮ” ಈ ಶಬ್ದಗಳು ಬೇರೆ ಬೇರೆಯದೇ ಅರ್ಥ ಪಡೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ, ಮನುಷ್ಯ ಸಂಬಂಧಗಳ ಪದರಗಳನ್ನು ತಾಕುವಂತೆ ಬಿಡಿಸಿಡುವ ಕಲಾತ್ಮಕತೆ ಸಿದ್ದಿಸಿರುವ ವ್ಯಕ್ತಿ. ಆತನ ಸಾಲು ಸಾಲು ಸಿನೆಮಾಗಳು ಇದೇ ರೀತಿ ಬಿಗಿದ ಹುಬ್ಬಿನಂತಿರುವ ನಮ್ಮ ಬದುಕನ್ನು ತುಸು ಸಡಿಲಗೊಳಿಸಿ, ವಿಕ್ಷಕರನ್ನು ಕಾಡಿ ಮತ್ತೆ ಮತ್ತೆ ಅವಲೋಕಿಸಿಕೊಳ್ಳುವಂತೆ ಮಾಡುತ್ತವೆ. ಆ ನಿರ್ದೇಶಕರೇ ಇಮ್ತಿಯಾಜ್ ಅಲಿ...!


 ಒಂದನ್ನೇ ಬದುಕಾಗಿಸಿಕೊಂಡು ಅದರ ಹಿಂದೆ ಮುಡಿಪಾಗುವುದು,  ನರನಾಡಿ ಹರಿದು ನಿಂತ  ಹುಚ್ಚು ಅಂದರೆ,  ಜನ್ಮವೊಂದಕ್ಕೆ ತಣಿಯದ ಪ್ಯಾಷನ್ ಇದ್ದರೆ ಮಾತ್ರ ಸಾಧ್ಯವಾಗುವಂತದ್ದು. ಇಮ್ತಿಯಾಜ್ ಅವರೊಳಗಿನ ಇಂತಹ ಥಿಯೇಟರ್ ಹುಚ್ಚು ಜಾಗೃತವಾಗಿದ್ದು  ಬಾಲ್ಯದಲ್ಲಿ. ಇಮ್ತಿಯಾಜ್ ಜೆಮ್‍ಷೆಡ್‍ಪುರದಲ್ಲಿ  ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಾಯಿಯ ಸಹೋದರ ಖಾಲಿದ್ ಅಹಮದ್ ಅವರೂ ಕೂಡ ಪಾಕಿಸ್ತಾನದ ಪ್ರಸಿದ್ದ ನಟ-ನಿರ್ದೇಶಕ. ಶಾಲೆಯಲ್ಲಿ ಅಷ್ಟೇನೂ ಚುರುಕಾಗಿಲ್ಲದ ಬಾಲಕ ಇಮ್ತಿಯಾಜ್ ಸದಾ ಓದಿನಲ್ಲಿ ಹಿಂದೆ ಉಳಿಯುತ್ತಿದ್ದ. ಹೈಸ್ಕೂಲ್ ವೇಳೆಗೆ ತಂದೆ ತಾಯಿ ಪಾಟ್ನಾದಲ್ಲಿದ್ದರೂ, ಇಮ್ತಿಯಾಜ್ ಮತ್ತು ಅಣ್ಣಾ ಆರಿಫ್ ಜೆಮ್‍ಷೆಡ್‍ಪುರದ ಅವರ ಚಿಕ್ಕಮ್ಮನ ಮನೆಗೆ ಓದಿಗಾಗಿ ಬಂದು ನೆಲೆಸುತ್ತಾರೆ. ಪಾಟ್ನಾದಲ್ಲಿ ಅವರ ಚಿಕ್ಕಮ್ಮನದ್ದು  ಮೂರು ದೊಡ್ಡ ಥೀಯೇಟರ್ ಗಳಿದ್ದು,  ಬಾಲಕ ಇಮ್ತಿಯಾಜ್ ನ  ಬಾಲ್ಯವನ್ನು ಪೂರ್ತಿ ಥೀಯೇಟರ್ ಆವರಿಸುತ್ತದೆ. ಇದು   ಅವನೊಳಗಿನ ಕಲಾವಿದನನ್ನು ಅರಳಿಸಿದ ಮೊದಲ ಘಟ್ಟ. ನಿದ್ರಿಸುವಾಗಲೂ ಥೀಯೇಟರ್‍ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸದಾ ಕಿವಿಗೆ ಮನಸ್ಸಿಗೆ ತಾಕುವಂಥಹ ಕಟ್ಟಡದ ವಾಸ ಆತನೊಳಗಿನ ಕಥೆಗಾರನನ್ನು ಜಾಗೃತವಾಗಿಸುತ್ತದೆ.



ಒಂಭತ್ತನೇ ತರಗತಿಯಲ್ಲಿ  ಡ್ರಾಮಾವೊಂದರಲ್ಲಿ ಅಭಿನಯಿಸಿದ ನಂತರ ಇಮ್ತಿಯಾಜ್ ಅವರ ತುಡಿತ ಕಥೆಗಾರಿಕೆಯಲ್ಲಿ ತೀವ್ರವಾಗುತ್ತದೆ. ದೆಹಲಿಯಲ್ಲಿ ಸಿನೆಮಾ ಸಂಬಂಧಿಸಿದ ಓದು ಪೂರೈಸಿ, ಮುಂಬೈಗೆ ಬಂದು ಕುನಾಲ್ ಕೊಹ್ಲಿಯವರೊಂದಿಗೆ ಜ಼ೀ ಟಿವಿಯಲ್ಲಿ ಲೇಬಲ್ ಬಾಯ್ ಆಗಿ     1500/- ರೂ ಗೆ ಕೆಲಸ ಮಾಡಿ, ನಂತರ ಕ್ರಿಸ್ಟ್ ಕಮುನಿಕೇಷನ್ಸ್‍ನಲ್ಲಿ ರೈಟರ್ ಆಗಿ ಸೇರಿ ದಿನಕ್ಕೆ 17 ತಾಸು ಸ್ಕ್ರಿಪ್ಟ್ ಬರೆಯುತ್ತಿದ್ದರು ಇಮ್ತಿಯಾಜ್. ‘ಇಮ್ತಿಹಾನ್, ನೈನಾ ಮತ್ತು ಕುರುಕ್ಷೇತ್ರದಂತಹ ಕೆಲವು ಟಿ ವಿ ಷೊಗಳಿಂದ ಆರಂಭವಾದ ನಿರ್ದೇಶನದ ಪಯಣ 2005 ರಲ್ಲಿ “ಸೋಚಾ ನ ಥಾ” ಸಿನೆಮಾದೊಂದಿಗೆ ಬಾಲಿವುಡ್ ನ ಅಂಗಳದಲ್ಲಿ ಇಮಿಯಾಜ್ ಪಾದಾರ್ಪಣೆಯಾಗುತ್ತದೆ. ಆದರೆ ಇದು ನೂರರಲ್ಲಿ ಒಂದು ಎನ್ನುವಂಥ ಬಾಲಿವುಡ್ ಸಿನೆಮಾ ಪಟ್ಟಿಗೆ ಸೇರುತ್ತದೆ. 2007 ರಲ್ಲಿ ತೆರೆಕಂಡ ಇವರ “ಜಬ್ ವಿ ಮೆಟ್” ಸರ್ವಕಾಲಿಕ ಬಾಲಿವುಡ್ ಡ್ರಾಮಾಗಳಲ್ಲಿ ಒಂದು ಎನಿಸಿಕೊಂಡು ಇಮ್ತಿಯಾಜ್ ಎಂದರೆ ಯಾರು ಎಂದು ಗುರುತಿಸುವಂತಾಯಿತು.

ಇಮ್ತಿಯಾಜ್


25 ಕ್ಕೂ ಹೆಚ್ಚು ವರ್ಷಗಳ ನಿರ್ದೇಶನದ ಹಾದಿಯಲ್ಲಿ ಇಮ್ತಿಯಾಜ್ ನಿರ್ದೇಶಿಸಿದ್ದು ಸೋಚಾ ನ ಥಾ, ಜಬ್ ವಿ ಮೆಟ್, ಲವ್ ಆಜ್ ಕಲ್ 1 ಮತ್ತು 2, ರಾಕ್‌ಸ್ಟಾರ್‌, ಕಾಕ್ ಟೈಲ್, ತಮಾಷಸ, ಹೈವೇ ಹೀಗೇ ಆರೇಳು ಚಿತ್ರಗಳು ಮಾತ್ರ. ಒಬ್ಬ ಚಿಂತಕ , ಸಾಹಿತಿ, ವಿಜ್ಞಾನಿ,  ಸೂಕ್ಷ್ಮಜ್ಞ, ಮಾನವೀಯ ತುಡಿತಗಳು ಏಕಮೇವವಾಗಿ ಮೇಳೈಸಿ ಮರಗಟ್ಟಿದ ಮನಗಳಿಗೆ ಜೀವಂತಿಕೆಯ ಸ್ಪರ್ಶ ನೀಡಲಾರದೇ  ಹೋದರೆ ಆತ ಜನಮಾನಸದಲ್ಲಿ ಉಳಿಯುವಂತ ನಿರ್ದೇಶಕನಾಗಲಾರ. ಆದರೆ ಇಮ್ತಿಯಾಜ್ ಸಿನೆಮಾಗಳು ಸಾಮಾಜಿಕ ಸ್ಥಿತ್ಯಂತರಗಳಿಂದ ಕುರುಹುಗಳೇ ಕಾಣದ ಹಾಗೇ ಮನದ ಒಳಪದರಗಳಲ್ಲಿ   ಹೂತ ನಮ್ಮ ಅಭಿರುಚಿಗಳನ್ನು ಅನಾವರಣಗೊಳಿಸಿ, ಬಿಗಿದ ಹುಬ್ಬಿನಂತಿರುವ ನಮ್ಮ ಬದುಕನ್ನು ತುಸು ಸಡಿಲಗೊಳಿಸಿ ಸಜೀವವಾಗಿಸುತ್ತದೆ. ನಿರ್ಭಾವ ಬೀಜಗಣೀತದಂತಿರುವ ಬದುಕಿಗೆ, ಬರೀ ಕೊಡು-ಕೊಳ್ಳುವಿಕೆಯ ಹಂಗಿನ ಬಂಧಗಳು, ಮುಂಜಾನೆಯ ಅಲಾರಾಂನಿಂದ ಆರಂಭವಾಗುವ ಓಟಗಳ ನಿರ್ವಿಕಾರತೆಯಲ್ಲಿ ಕಳೆದುಕೊಂಡ ನಮ್ಮೊಳಗಿನ ನಮ್ಮತನದ ಚಿಲುಮೆಗಳನ್ನು ಮೀಟುವ ಜೀವಸಂಚಾರ. ಇಮ್ತಿಯಾಜ್ ನಿಮ್ಮಿಂದ ಆಧುನಿಕತೆಯ ಶಿಷ್ಟತೆ  ಮುಖವಾಡ ಹೊತ್ತ ವಿಚಿತ್ರ ವ್ಯಾಕುಲತೆ ತುಂಬಿದ ವಾತಾರಣದಲ್ಲಿ ಮನದ ಕಾನನದಲ್ಲಿ ಶ್ರಾವಣದ ಗಾಳಿಯಂತ ಮರಗಟ್ಟಿದ ಮನಗಳಿಗೆ ಮಾನವೀಯ ಸ್ಪರ್ಶ ತುಂಬುವ ಇನ್ನೊಂದಷ್ಟು ಸಿನೆಮಾಗಳು ಹೊಮ್ಮಲಿ ಎಂಬ ಆಶಯದೊಂದಿಗೆ ಈ ಲೇಖನ...

Comments