ದೇವರ ಹುಡುಕಾಟ

ದೇವರ ಹುಡುಕಾಟ 

ಲೇಖನ - ಶ್ರೀಮತಿ ಪಲ್ಲವಿ ಕಟ್ಟಿ , ಸಿಡ್ನಿ 

ರಾತ್ರಿಯೆಲ್ಲಾ ಏನೇನೋ ಕನಸುಗಳು. ಕನಸಿನಲ್ಲಿ ಯಾವುದೋ ಸಂಗೀತ ಕಚೇರಿಯಲ್ಲಿ ಕೂತಿದ್ದೆ ಅಲ್ಲಿ ನಾನೇ ಗಾಯಕಿ  ಹಾಗೆ ನಾನೇ ಪ್ರೇಕ್ಷಕಿ . ನಿದ್ದೆಯಲ್ಲಿ ಕಣ್ಣು ಮುಚ್ಚಿದ್ದರೂ ಮುಖದ  ಮೇಲೆ ನನಗೆ ನಗು ಬಂದಿತ್ತು . ಆ ಕಚೇರಿಯಲ್ಲಿ ಶಿವರುದ್ರಪ್ಪನವರು  ಬರೆದ ಹಾಡು “ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ” ಹಾಡು ಹಾಡುತ್ತಿದ್ದೆ . ಬೆಳಿಗ್ಗೆ ಎಚ್ಚರ ವಾದಾಗ ಅಯ್ಯೋ ಮಂಕೆ ಬರಿ ಕನಸು ಎಂದು ಎದ್ದುಕೂತೆ . 



ಕನಸ್ಸಿನಲ್ಲಿ ಬಂದ ಹಾಡು ನನ್ನ ತಲೆಯಲ್ಲಿ ಹುಳ  ಬಿಟ್ಟ ಹಾಗೆ ಆಗಿತ್ತು . ಮುಂಜಾನೆ ಎದ್ದಾಗಲಿಂದ ಬರೀ ಅದೇ ಹಾಡನ್ನು ಕನವರಿಸುತ್ತಿದ್ದೆ. ಮುಂಜಾನೆ ಸ್ನಾನವಾದ ಮೇಲೆ ದೇವರಿಗೆ ದೀಪ ಹಚ್ಚಿ ಕೈ ಮುಗಿಯುವಾಗ ಶ್ಲೋಕದ ಬದಲು ಮತ್ತೆ ಎಲ್ಲೋ ಹುಡುಕಿದೆ ಇಲ್ಲದ ದೇವರ ಹಾಡು ಬಾಯಿಗೆ ಬಂತು. ತಕ್ಷಣ ಕಣ್ಣು ಬಿಟ್ಟು ತಪ್ಪಾಯಿತಪ್ಪ ದೇವರೇ. ನೀನು ಇದ್ದೀ ಎಂದು ನನಗು ಗೊತ್ತು . ನೀನು ಇರುವ ಬಗ್ಗೆ ನನಗೆ ಯಾವ ಸಂದೇಹವೂ  ಇಲ್ಲ. ಆದರೂ ಹಾಳು ನನ್ನ ಮನಸ್ಸು ಈ ಹಾಡನ್ನೇ ಮೆಲುಕು ಹಾಕುತ್ತಿದೆ ಎಂದು ನನ್ನ ಆರಾಧ್ಯನಲ್ಲಿ ಕ್ಷಮೆ ಕೇಳಿ ಆಫೀಸಿಗೆ ಹೊರಟೆ.

ಕಚೇರಿಯಲ್ಲೂ ಇಡೀ ದಿನ ಅದೇ ಹಾಡು ಹಾಡುತ್ತ ಕೂತಿದ್ದೆ. ಮರೆಯಲು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ . ಸಂಜೆ ಮನೆಗೆ ಬಂದ ಕೂಡಲೇ ಗಂಡನಲ್ಲಿ ನನ್ನ ವ್ಯಥೆ ಹೇಳಿಕೊಂಡೆ.  ಅದಕ್ಕೆ ಅವನು ಒಮ್ಮೆ ಪೂರ್ತಿ ಹಾಡು ಕೇಳಿ ಬಿಡು ಅಂದರೆ ಅದಕ್ಕೆ ಮುಕ್ತಾಯ ಸಿಗಬಹುದು ಎಂದು ಹೇಳಿದ . ಅದು ಒಳ್ಳೆ ಉಪಾಯ ಎಂದುಕೊಂಡು ಹಾಡು ಕೇಳುತ್ತ ಮನೆಯ ಪಡಸಾಲೆಯಲ್ಲಿ ಕೂತೆ.

ಎಂದೂ  ಆ ಹಾಡನ್ನು ಪೂರ್ತಿಯಾಗಿ ಕೇಳಿರಲೇ ಇಲ್ಲ . ಹಾಡು ಕೇಳುತ್ತ ಕೇಳುತ್ತ ಹಾಡಿನ ಅರ್ಥ ತಿಳಿಯಿತು . ಎಷ್ಟು ಸುಂದರವಾದ ಹಾಡು , ಎಂಥ ಒಳ್ಳೆಯ ಸಾಹಿತ್ಯ ಎಂದು ಅರ್ಥವಾಯಿತು. ಈ ಹಾಡಿನಲ್ಲಿ ಕವಿ ಹೇಳುವುದು ಇಷ್ಟೇ ಮನುಷ್ಯ ದೇವರನ್ನು ಹುಡುಕುವ ಭರದಲ್ಲಿ ತನ್ನೊಳಗೆ ಹಾಗು ತನ್ನ ಸುತ್ತಮುತ್ತಲು ಪ್ರೀತಿ, ಕರುಣೆ ಹಾಗು ಸ್ನೇಹದ ರೂಪದಲ್ಲಿಇರುವ ಭಗವಂತನನ್ನು ಗುರುತಿಸಲು ಅಸಫಲನಾಗಿದ್ದಾನೆ. ನಾಲ್ಕು ದಿನದ ಈ ಜೀವನದಲ್ಲಿ ಅಹಂಕಾರ, ಅಧಿಕಾರದ ಮತ್ತಿನಲ್ಲಿ ಮನುಷ್ಯತ್ವವನ್ನು ತ್ಯಜಿಸಿ ಆ ಪರಮೇಶ್ವರನಿಂದ ದೂರವಾಗಿದ್ದಾನೆ.

ಸ್ವರ್ಗ ಅಥವಾ ನರಕ ಬೇರೆಲ್ಲೂ ಇಲ್ಲ.  ನಮ್ಮೊಳಗೇ ಇವೆ. ನಮ್ಮೊಳಗಿರುವ  ಸ್ವಾರ್ಥ, ಅಹಂ ಎಂಬ ಕಹಿಯನ್ನು ಕಲಕದೆ ಇದ್ದಾಗ ಆ ಪರಮೇಶ್ವರನಿಗೆ ಇನ್ನು ಹತ್ತಿರವಾಗುವ ಅಮೃತ ಘಳಿಗೆ  ಬಂದೇ ಬರುವುದು. ಜಿ .ಎಸ್. ಶಿವರುದ್ರಪ್ಪನವರ ಈ ಹಾಡಿಗೆ ಇನ್ನೂ ಆಳವಾದ ಅರ್ಥ ಇರಬಹುದೇನೋ ಆದರೆ ನನ್ನ ಈ ಅಲ್ಪ ಬುದ್ಧಿಗೆ ತಿಳಿದಿದ್ದು ಇಷ್ಟೇ. ಬೆಳಿಗ್ಗೆಯಿಂದ ಅಸಮಾಧಾನದಿಂದ ಇದ್ದ  ಮನಸ್ಸಿಗೆ ಈಗ ನೆಮ್ಮದಿ ಸಿಕ್ಕಂತ್ತಾಗಿತ್ತು ಹಾಗೆ ಹಾಡು ಗುನುಗುವುದೂ ಸಹ ಸ್ವಲ್ಪ ಕಡಿಮೆಯಾಗಿತ್ತು. ಹಾಡಿನ ಅರ್ಥದ ಬಗ್ಗೆ ಯೋಚಿಸುತ್ತ ರಾತ್ರಿ ಮಲಗಿ ಎದ್ದಾಗ ಹಾಡನ್ನು ಮರೆತಿದ್ದೆ ಆದರೆ ಅದರ ಅರ್ಥ ಮಾತ್ರ ಮನಸ್ಸಿಗೆ ಆಳವಾಗಿ ನಾಟಿತ್ತು.

 

Comments