ಗ್ರೀಷ್ಮ ಋತುವಿನ ಮಳೆ

 ಗ್ರೀಷ್ಮ ಋತುವಿನ ಮಳೆ 

ಲೇಖನ - ಶ್ರೀಮತಿ ಪಲ್ಲವಿ ಕಟ್ಟಿ , ಸಿಡ್ನಿ 

ರಾತ್ರಿ ಹನ್ನೊಂದು ಹೊಡೆದಿತ್ತು. ಇನ್ನೂ ನಿದ್ರಾದೇವಿಯು ನನ್ನ ಕಣ್ಣುಗಳನ್ನು ಆವರಿಸಿರಲಿಲ್ಲ. ಮನಸ್ಸಿಗೆ ಏನೋ ಒಂದು ತರಹದ ಆತಂಕ, ತಳಮಳ. ಎಷ್ಟು ಯೋಚಿಸಿದರೂ ಅರ್ಥವಾಗದ ಗೊಂದಲ. ಮನಸ್ಸಿನ ಆಳದಲ್ಲಿ ಅವಿತು ಕುಳಿತ ಸಾವಿರಾರು ಯೋಚನೆಗಳು ಚಲನಚಿತ್ರದಹಾಗೆ ಕಣ್ಣು ಮುಂದೆ ಹಾದು ಹೋಗುತ್ತಿವೆ. ಇವೇ ಯೋಜನೆಗಳಿಂದ ತುಂಬಿದ ಮನಸ್ಸಿಗೆ ಹಾಗೂ ದೇಹಕ್ಕೆ ಸುಸ್ತಾಗಿದ್ದರೂ ಕಣ್ಣುಗಳಲ್ಲಿ ನಿದ್ರೆಯ ಸುಳಿವೇ ಇಲ್ಲ. 



ಪಕ್ಕದಲ್ಲಿ ಗೊರಕೆ ಹೊಡೆಯುತ್ತಾ ಮಲಿಗಿದ್ದ ಗಂಡನ ಮೇಲೆ ಸ್ವಲ್ಪ ಅಸೂಯೆ ಮೂಡಿತ್ತು. ಸುಖವಾದ ನಿದ್ದೆ ಮಾಡುವ ಭಾಗ್ಯ ಎಲ್ಲರ ಹಣೆಯಲ್ಲಿ ಇರುವುದಿಲ್ಲ. ನನ್ನ ಮೇಲೆ ನನಗೇ ಸಿಟ್ಟು ಬಂದು ಮಂಚದ ಮೇಲೆ ಹಾಗೇ ಎದ್ದು ಕುಳಿತೆ. ಆ ಕತ್ತಲಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಯದೇ ಕಿಟಕಿಯ ಪರದೆಯನ್ನು ಸರಿಸಿ ಹೊರಗೆ ನೋಡಿದೆ. ಹೊರಗೆ ಮಳೆ ಸುರಿಯುತ್ತಿತ್ತು. ಬೇರೆಯಾವ ಸದ್ದೂ ಇರಲಿಲ್ಲ.

ಬೇಸಿಗೆಕಾಲ ಶುರುವಾದಾಗಲಿಂದಿನ ಮೊದಲ ಮಳೆ. ಬೇಸಿಗೆಯ ಉರಿ ಬಿಸಿಲಿನ ತಾಪಕ್ಕೆ ಬಾಡಿ ಹೋಗಿದ್ದ ಗಿಡಮರಗಳ, ಪಶುಪಕ್ಷಿಗಳ ಬಾಯಾರಿಕೆಯನ್ನು ನೀಗಿಸಲು ಬೆಳಿಗ್ಗೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿತ್ತು. ಸಂಜೆ ಹೊತ್ತಿಗೆ ತಾಪ ಕಡಿಮೆಯಾಗಿ ಎಲ್ಲೆಡೆ ತಂಪು ಆವರಿಸಿತ್ತು. ಪ್ರಶಾಂತವಾದ ವಾತಾವರಣ ಸೃಷ್ಟಿಯಾಗಿತ್ತು. ಆಗೊಂದು ಈಗೊಂದು ಗುಡುಗಿನ ಸದ್ದು ಕೇಳಿಸುತ್ತಿತ್ತು.  ಮನೆಯ ಮಾಳಿಗೆಯ ಮೇಲಿಂದ ಸುರಿಯುವ ಮಳೆ ನೀರಿನ ಜುಳು ಜುಳು ಸುದ್ದು, ಹಾಗೆ ಮಳೆ ನೀರಿನಲ್ಲಿ ನೆಂದ ನೆಲದ ಘಮ ಇವೆಲ್ಲಾ ಸೇರಿ ನನ್ನ ಗೊಂದಲ ಭರಿತ ಮನಸ್ಸನ್ನು ಸ್ವಲ್ಪ ಮಟ್ಟಿಗೆ ಶಾಂತ ಮಾಡಿದ್ದವು.

ಕಿಟಕಿಯ ಈ ಕಡೆ ಕುಳಿತಿದ್ದ ನನಗೆ ಕಿಟಕಿಯ ಕಂಬಿಗಳಿಂದ ಹೊರಗೆ ನೋಡುತ್ತಿದ್ದಂತೆಯೇ ಮನಸ್ಸಿನ ತೊಳಲಾಟದ ಸೆರೆಮನೆಯಲ್ಲಿ ಸಿಕ್ಕಿಬಿದ್ದ ಭಾವನೆ ಮೂಡತೊಡಗಿತ್ತು. ಕಿಟಕಿಯ ಹೊರಗೆ ಒಂದು ಸುಂದರವಾದ, ಸ್ವತಂತ್ರವಾದ  ದುಃಖ ವಿಲ್ಲದ ಲೋಕವಿದ್ದಂತೆ ಭಾಸವಾಗಿತ್ತು. ಆದರೆ ಈ ಲೋಕದಿಂದ ಆಲೋಕಕ್ಕೆ ಹೋಗುವ ದಾರಿ ತಿಳಿಯದಾಗಿತ್ತು.

ಅನಾವಶ್ಯಕವಾದ ಯೋಚನೆಗಳಿಂದ ತೊಳಲುತ್ತಿದ್ದ ಮನಸ್ಸು ಶಾಂತವಾಗುತ್ತಿದ್ದಂತೆಯೇ ಬಾಲ್ಯದ ಕೆಲವು ಸುಂದರ ಘಟನೆಗಳು ಕಣ್ಣ ಮುಂದೆ ಬಂದವು.

ಸಣ್ಣವರಿದ್ದಾಗ ಬೇಸಿಗೆ ರಜೆಗೆ ಧಾರವಾಡಕ್ಕೆ ಹೋಗುವ ರೂಢಿ. ಆ ಬಾರಿಯೂ ಹೀಗೇ ಧಾರವಾಡಕ್ಕೆ ಹೋಗಿದ್ದ ನೆನಪು. ವಸಂತ ಋತುವನ್ನು ಬೀಳ್ಳೊಟ್ಟು ಗ್ರೀಷ್ಮ ತನ್ನ ಉತ್ತುಂಗದಲ್ಲಿತ್ತು.  ತಾಪಮಾನ ಹೆಚ್ಚಾಗಿದ್ದರೂ ಸಹ ಇನ್ನೂ ಎಲ್ಲೆಡೆ ಹಸಿರು ಮಾವು ಬೇವಿನ ಕಂಪು ಬೀರುತಿತ್ತು.  ಕೋಗಿಲೆಗಳು ತಮ್ಮ ಸುಮಧುರ ಕಂಠದಲ್ಲಿ ಜುಗಲ್ ಬಂದಿ ನಡೆಸಿದ್ದವು. ಬೆಳ್ಳಕ್ಕಿ, ಬಾತು ಕೋಳಿಗಳು ಕೆರೆಯಲ್ಲಿ ಜಲ ಕ್ರೀಡೆಯಲ್ಲಿ ತಲ್ಲೀನವಾಗಿದ್ದವು. ಎಲ್ಲಾ ಜೀವ ಜಂತುಗಳೂ ಗ್ರೀಷ್ಮ ಋತುವಿನ ಆಹ್ಲಾದ ಅನುಭವಿಸುತ್ತಿದ್ದರೆ ಮನುಷ್ಯ ಮಾತ್ರ ಶಿವ ಶಿವಾ ಎಂಥಾ ಕೆಟ್ಟ ಬಿಸಿಲಪ್ಪಾ ಎಂದು ಗೊಣಗುತ್ತಾ ಕೂತಿದ್ದ. ಒಂದು ಮಳೆ ಬಿದ್ದರೆ ಚೆನ್ನಾಗಿರುತ್ತೆ ಅಂತ ವರುಣನ ಧ್ಯಾನ ಮಾಡುತ್ತಾ ಕುಳಿತಿದ್ದ.

ಅಸ್ತು ದೇವತೆಗಳು ಹಾದು ಹೋಗಿರಬೇಕು. ಮುಂದೆ ಕೆಲವೇ ಕ್ಷಣಗಳಲ್ಲಿ ಕಪ್ಪು ಮೋಡ ಕವಿದು, ಮನೆಯ ಮಾಳಿಗೆ ಹಾರಿ ಹೋಗುವಷ್ಟು ಗಾಳಿ ಬೀಸ ತೊಡಗಿತು. ಸಣ್ಣವರಿದ್ದ ನಾನು, ನನ್ನ ಅಕ್ಕ ಹಾಗೂ ಚಿಕ್ಕಪ್ಪನ ಮಕ್ಕಳು ಕಿರಣ್ ಹಾಗೂ ಮೇಘಾ ಎಲ್ಲರೂ ಅಜ್ಜಿಯ ಮನೆಯ ಹೊರಗಿನ ಅಂಗಳದಲ್ಲಿ ಮಳೆಯ ಆಗಮದ ಸಂತೋಷಕ್ಕೆ ಗರಿಬಿಚ್ಚಿ ಕುಣಿಯುವ ನವಿಲುಗಳ ಹಾಗೆ ನಾವು ಕುಣಿಯಲು ಆರಂಭಿಸಿದ್ದೆವು.

 ಮುಂದೆ ಕೆಲವೇ ನಿಮಿಷದಲ್ಲಿ ಆಣಿಕಲ್ಲು ಬೀಳಲಾರಂಭಿಸಿತ್ತು. ಹಸಿರು ಹುಲ್ಲಿನ ಮೇಲೆ ಮಲ್ಲಿಗೆ ಹೂವು ಚಿಲ್ಲಿದಂತೆ ಎಲ್ಲೆಡೆ ಆಣಿಕಲ್ಲು ಬಿದ್ದಿದ್ದವು. ಮಕ್ಕಳಾದ ನಾವು ಅವನ್ನು ಆರಿಸಿ ಬಾಯಿಗೆ ಹಾಕಿಕೊಂಡು ಸಂತೋಷ ಪಟ್ಟೆವು.  ಅಜ್ಜ ಅಜ್ಜಿ ಇದ್ದ ಮನೆಯ ಹಿತ್ತಲಲ್ಲಿ ಮನೆಯ ಮಾಲೀಕರು ಹಾಕಿದ್ದ ಕೆಲವು ಮಾವಿನ ಮರಗಳು ಇದ್ದವು. ಅಮಾವಿನ ಮರಗಳಲ್ಲಿ ಗೊಂಚಲು ಗೊಂಚಲು ಮಾವಿನಕಾಯಿ ತೂಗುಬಿದ್ದಿದ್ದವು. 


ಗಾಳಿಗೆ , ಆಣೆಕಲ್ಲು ಮಳೆಗೆ ಹಲವಾರು ಮಾವಿನಕಾಯಿ ಕೆಳಗೆ ಬೀಳಹತ್ತಿದ್ದು ನಮಗೆಲ್ಲಾ ಅವುಗಳನ್ನು ಆರಿಸಿಕೊಳ್ಳುವ ಸಂಭ್ರಮ. ಮಾವಿನ ಕಾಯಿಗಳನ್ನು ನೋಡಿದ ಚಿಕ್ಕಪ್ಪನ ಮಗ ಕಿರಣ  ದೂರದಲ್ಲಿ ಬಿದ್ದಿದ್ದ ಕಾಯಿಯೊಂದನ್ನು ತರಲು ಓಡಿ ಹೋದ. ಎಷ್ಟೇ ಬೇಡ ಎಂದರೂ ಓಡಿ ಹೋದ. ಹೀಗೆ ಇನ್ನೊಂದು ಮತ್ತೊಂದು ಎಂದು ಆರಿಸಿ ಕೊಳ್ಳುವಾಗ ಗಾಳಿಯ ರಭಸಕ್ಕೆ ಒಂದು ದೊಡ್ಡ ಮಾವಿನ ಕಾಯಿ ಆತನ ತಲೆ ಮೇಲೆ ಬಿದ್ದಿತ್ತು.  ಅದು ಬಿದ್ದ ವೇಗಕ್ಕೆ ಕಿರಣನ ಹಣೆಯ ಮೇಲೆ ನಿಂಬೆ ಹಣ್ಣಿನ ಗಾತ್ರದಷ್ಟು ಬುಗುಟೆ ಬಂದಿತ್ತು. ನೋವಿಗೆ ಕಿರಣ ಅಳಲು ಆರಂಭಿಸಿದ್ದ ಮತ್ತೆ ನಾವೆಲ್ಲಾ ಗಾಬರಿಗೊಂಡಿದ್ದೆವು.

ಆರಿಸಿದ್ದ ಮಾವಿನಕಾಯಿಗಳಿಂದ ಅಂದು ರಾತ್ರಿ ಅಜ್ಜಿ ಎಲ್ಲರಿಗೂ ರುಚಿರುಚಿಯಾದ ಮಾವಿನಕಾಯಿ ಚಟ್ನಿ ತಯಾರಿಸಿದ್ದಳು.  ಬಿಸಿಬಿಸಿ ಅನ್ನದ ಜೊತೆ ತುಪ್ಪ ಮಾವಿನ ಕಾಯಿಚಟ್ನಿಯನ್ನು ತಿನ್ನವ ಭರದಲ್ಲಿ ಕಿರಣ ತನ್ನ ನೋವನ್ನು ಮರೆತಿದ್ದ. ನಾವೆಲ್ಲಾ ಆತನನ್ನು ನೋಡಿ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕಿದ್ದೆವು.

ಸಿಡ್ನಿ ನಗರದ ಮನೆಯಲ್ಲಿ ನಿದ್ರೆ ಬರದೆ  ಈ ಸುಂದವಾದ ನೆನಪುಗಳು ಮೆಲುಕು ಹಾಕುತ್ತಾ ಕುಳಿತಿದ್ದ ನನ್ನ ಮುಖದಲ್ಲಿ ಒಂದು ಮಂದಹಾಸ ಮೂಡಿತ್ತು. ಹಾಗೆಯೇ ನಿದ್ರಾದೇವಿಯ ಮಡಿಲಲ್ಲಿ ಸಣ್ಣ ಮಗು ಮಲಗಿದ ಹಾಗೆ ಮಲಗಿ ನಿದ್ದೆ ಹೋಗಿದ್ದೆ.

Comments