ಸಂಚಿತಾರ್ಥ; son ಚಿತ ಅರ್ಥ; sun ಚಿತಾರ್ಥವು

 ಸಂಚಿತಾರ್ಥ; son ಚಿತ ಅರ್ಥ; sun ಚಿತಾರ್ಥವು

ಹಾಸ್ಯ ಲೇಖನ - ಅಣಕು ರಾಮನಾಥ್

                                     ಗುಡ್ ಓಲ್ಡ್ ಡೇಸಲ್ಲಿ ಇಂದಿನ ಎಂಟು ಯುವತಿಯರು ತಮ್ಮ ಇಡೀ ದೇಹವನ್ನು ಆವರಿಸಲು ಬಳಸುವಷ್ಟು ವಸ್ತ್ರವನ್ನು ಒಬ್ಬಳೇ ತೊಡುತ್ತಿದ್ದಳು. ಅದನ್ನು ಒಂಬತ್ತು ಗಜದ ಸೀರೆ ಎಂದು ಕರೆಯುತ್ತಿದ್ದರು. ಸೀರೆಯಲ್ಲೊಂದು ಸೇಫ್ ಡಿಪಾಸಿಟ್ ಲಾಕರ್ ಇರುತ್ತಿತ್ತು. ಅದೇ ಬಲಸೊಂಟದ ಬಳಿ (ಎಡಸೊಂಟವೆಂದೊಂದಿದೆಯೆ? ಎನ್ನಬೇಡಿ. ಸೊಂಟದ ಬಲಬದಿ ಎಂದುಕೊಳ್ಳಿ. ಸೊಂಟದ weak ಬದಿಯೂ ಇದೆಯೆ? ಎಂದು ಕೇಳದಿರಿ ಪ್ಲೀಸ್) horizontal ಸಿಂಬೆಯಂತೆ ಸುತ್ತಿಕೊಂಡು, ಒಳಗೆ ಪುಡಿಕಾಸು, ನೋಟು, ಅಡಿಕೆಪುಡಿ, ತಂಬಾಕಿನ ಪುಡಿ ಮುಂತಾದವನ್ನು ಶೇಖರಿಸಲು ಅನುಕೂಲಕರವಾಗುತ್ತಿದ್ದ ‘ಬಾಳೆಕಾಯಿ’. ಮಕ್ಕಳ ಕಥೆಗಳ ಎನ್‍ಸೈಕ್ಲೋಪೀಡಿಯಾ ಆಗಿರುತ್ತಿದ್ದ ಅಂತಹ nine yards clad ಅಜ್ಜಿಯರ ಪೈಕಿ ಒಬ್ಬ ಅಜ್ಜಿಯು ತನ್ನ ಸೀರೆಯ ಬಾಳೆಕಾಯಿಯಿಂದ ಒಂದು ಚಿಕ್ಕ ಚೀಲವೊಂದನ್ನು ಹೊರತೆಗೆದಳು. ಅದೇ ಸಂಚಿ. ಅದರೊಳಗಿಂದ ಒಂದು ಕಾಸನ್ನು (ಅಂದಿನ ಆರು ಪೈಸೆ) ಹೊರತೆಗೆದು “ಕ್ವಾ. ಹೋಗಿ ಪೆಪ್ಪರ್‍ಮೆಂಟ್ ತೊಗೊ” ಎನ್ನುತ್ತಾ ಮೊಮ್ಮಕ್ಕಳತ್ತ ಚಾಚಿದಳು. ಸಂಚಿಯಲ್ಲಿ ಅಡಗಿಕುಳಿತಿದ್ದ ಹಣವೇ ಸಂಚಿತ ಅರ್ಥ ಉರುಫ್ ಸಂಚಿತಾರ್ಥ. 


ಸಂಚಿತ ಮತ್ತು ಅರ್ಥ ಎಂಬ ಪದಗಳಿಂದ ಕೂಡಿದ ಈ ಪದವನ್ನು son ಚಿತ ಅರ್ಥ ಎಂಬ ತ್ರಿವಳಿಪದಪುಂಜವಾಗಿಯೂ ಕಾಣಬಹುದು. ಇದರಲ್ಲಿಯೂ ಎರಡು ಅರ್ಥಗಳಿವೆ. ಮಾತಾಪಿತೃಗಳಿಗೂ ತಿಳಿಯದಂತೆ ತನ್ನ ಏಳ್ಗೆಗಾಗಿ ಮಗನು save ಮಾಡುವ ಹಣ ಸಂಚಿತಾರ್ಥ. son ಅನ್ನು kidnap ಮಾಡಿ(ಮುಚ್ಚಿಟ್ಟು; ಸಂಚಿತ ಎಂದರೆ ಮುಚ್ಚಿಡಲಾದ ಎಂದಿದೆ) ಅವನ್ನು ಬಿಡಿಸಲು ಪಡೆಯುವ ಹಣವನ್ನೂ ಸಂಚಿತಾರ್ಥ ಎನ್ನಬಹುದು.

ಅರ್ಥವೆಂದರೆ ತಡೆ, ಅಡ್ಡಿ ಎಂಬ ಅರ್ಥಕ್ಕೆ ಸಂಚಿತವನ್ನು ಸೇರಿಸಿದರೆ ನಮ್ಮ  ಬೆಂಗಳೂರು ರಸ್ತೆಗಳಲ್ಲಿ ಆಗಾಗ್ಗೆ ಕಂಡುಬರುವ ರೋಡ್ ಬ್ಲಾಕು! ಇದರಲ್ಲಿಯೂ ಎರಡು ವಿಧಗಳು – actual and virtual. Actual  ರೋಡ್ ಬ್ಲಾಕಿಗೆ ಮತ್ತೆ ಮೂರು ಕಾರಣಗಳು – ವ್ಯಕ್ತಿ, ವಸ್ತು ಮತ್ತು ಪ್ರಾಣಿಗಳು. 

ಮೊದಲಿಗೆ ವ್ಯಕ್ತಿಯಿಂದುಂಟಾಗುವ ರೋಡ್ ಬ್ಲಾಕುಗಳನ್ನೇ ಪರಾಂಬರಿಸೋಣ. ಬೆಂಗಳೂರಿನ ಮುಖ್ಯರಸ್ತೆಯೊಂದರಲ್ಲಿ ಪಕ್ಕದಲ್ಲಿದ್ದ ಬಹುಮಹಡಿ ಕಟ್ಟಡದ ತುತ್ತತುದಿಯನ್ನೇ ದೃಷ್ಟಿಸುತ್ತಾ ವ್ಯಕ್ತಿಯೊಬ್ಬ ನಿಂತಿದ್ದ. “ಏನು ನೋಡುತ್ತಿದ್ದೀರಿ?” ಎಂದು ಕೇಳಿದನೊಬ್ಬ ಕುತೂಹಲಿ. ವ್ಯಕ್ತಿ ಮೇಲಕ್ಕೆ ಬೊಟ್ಟುಮಾಡಿ ತೋರಿಸಿದ. ಕುತೂಹಲಿಯೂ ನೋಡುತ್ತಾ ನಿಂತ. ಕ್ರಮೇಣ ದೊಡ್ಡ ಗುಂಪೇ ಸೇರಿತು. ಕಟ್ಟಕಡೆಗೆ ಸಸ್ಪೆನ್ಸ್ ತಾಳಲಾರದೆ ಮತ್ತಷ್ಟು ಜನರು ಕೇಳಿದಾಗ ಮೊದಲಿನಿಂದ ನಿಂತಿದ್ದ ವ್ಯಕ್ತಿಯು “ನಾನು ಸುಮ್ಮನೆ ಆಕಾಶದತ್ತ ದೃಷ್ಟಿ ನೆಟ್ಟು ನಿಂತರೆ ಎಷ್ಟು ಮೂರ್ಖರು ಇಲ್ಲಿ ಸೇರಬಹುದೆಂದು ಆಲೋಚಿಸುತ್ತಿದ್ದ” ಎಂದು ನುಡಿದು ಪರಾರಿಯಾದ. ಕಾರಣವಲ್ಲದ ಕಾರಣಕ್ಕೆಲ್ಲ ಶೇಖರವಾಗುವ ಇಂತಹ ಅಡ್ಡಿಗಳ ವ್ಯಕ್ತಿನಿರ್ಮಿತ ಸಂಚಿತಾರ್ಥಗಳು.

ವ್ಯಕ್ತಿನಿರ್ಮಿತದಲ್ಲಿ ಮತ್ತೊಂದು ವಿಧವಿದೆ. ಇದು ಸಂಘ, ಸಂಸ್ಥೆ, ಪಕ್ಷ, ಕಿಡಿಗೇಡಿ ಪುಢಾರಿ ಮುಂತಾದ ಅಂಕಲ್ ಸೋಷಿಯಲ್ (ಆಂಟಿ ಸೋಷಿಯಲ್‍ನ ಮೇಲ್ ವರ್ಷನ್) ಎಲಿಮೆಂಟುಗಳು ಕಾಂಪೌಂಡಿಸುವ ರೋಡ್ ಬ್ಲಾಕು. 

ನಡೆ ಮುಂದೆ ನಡೆ ಮುಂದೆ ನಿಂತು ನಡೆ ಮುಂದೆ

ಜಗ್ಗದೆಯೆ ನುಗ್ಗದೆಯೆ ನಿಂತು ನಡೆ ಮುಂದೆ 

ಹಾರ್ನಿಸುವ ಕಾರುಗಳು ಕಾರಿದರು ಕೆಂಡ

ನುಗ್ಗಿಸುವ ಆಟೊಗಳು ಹಾರಿದರು ಹೊಂಡ

ಆಗು ನೀ ಇವುಗಳಿಗೆ ಶುದ್ಧ ಜಗಮೊಂಡ

ನಡೆಸುತಿರು rallyಯನು ಹಿಡಿದು ಈ ಝಂಡಾ ||

ಎಂದು ಸಿಕ್ಕ ಹರಕಲು ಬಟ್ಟೆಗೆ ಕೋಲೊಂದನ್ನು ಸಿಕ್ಕಿಸಿ ಲೀಡರ್ ಎನ್ನಿಸಿಕೊಳ್ಳುವವನ ಕೈಗೆ ತುರುಕಿ, ಷರ್ಟ್ ಜೇಬಿಗಿಷ್ಟು ಹಣ, ಪ್ಯಾಂಟ್ ಜೇಬಿಗೊಂದು ಕ್ವಾರ್ಟರ್ ತುರುಕಿಬಿಟ್ಟರೆ ಅಂದಿನ ತುರ್ತಾಗಿ ಕೆಲಸಕ್ಕೆ ಹೋಗಬೇಕಾದವರ ಶ್ರಾದ್ಧಕರ್ಮಗಳು ರಸ್ತೆಯಲ್ಲೇ ಸಾಂಗವಾಗಿ ನಡೆದುಬಿಡುತ್ತವೆ.  



ಪ್ರಾಣಿಗಳದು ನಮ್ಮ ಭಾರತಕ್ಕೇ ಸೀಮಿತವಾದ ವಿಶೇಷ ರೋಡ್ ಬ್ಲಾಕ್‍ಗಳು. “ಹಿಂದೆಲ್ಲ ನಾನು ಕುಳಿತಿರುವ ಪ್ರದೇಶ ಗೋಮಾಳವಾಗಿತ್ತೆಂದು ನನ್ನಜ್ಜಿಯ ಅಜ್ಜಿ ನನ್ನಜ್ಜಿಗೆ ಹೇಳಿದ್ದಳಂತೆ. ಅಂದಿನ ಗೋಮಾಳ ಇಂದಿನ ಮೈನ್ ರೋಡ್ ಆಗಿದೆಯಲ್ಲ! ವಾಸ್ತವವಾಗಿ ಇದು ಗೋವುಗಳಿಗೆ ಸೇರಿದ ಜಾಗ. How dare these people blow horns at me!” ಎಂದು ಬೆಳಗ್ಗೆ ತುಂಬಿಕೊಂಡ ಹುಲ್ಲನ್ನು ಮೆಲುಕು ಹಾಕುತ್ತಾ ಅರೆ ಉನ್ಮೀಲಿತ ನೇತ್ರದಿಂದ ಪ್ರಪಂಚವನ್ನು ದಿಟ್ಟಿಸುತ್ತಾ ಆರಾಮಾಸನದಲ್ಲಿ ಕುಳಿತ ಹಸು animal road blockಗೆ ಉತ್ತಮ ಉದಾಹರಣೆ. ಇದರ neglected cousin  ಆದ ಎಮ್ಮೆಯಂತೂ ಸಂಚಾರಪಥದ ‘ಸಂಚಿತಾರ್ಥ’ವನ್ನು ಇದಕ್ಕಿಂತಲೂ ಪರಿಣಾಮಕಾರಿಯಾಗಿ ಒದಗಿಸಬಲ್ಲದು. ಹೆಸರಿನಲ್ಲೇ ಮಾಸ್ಟರ್ ಡಿಗ್ರಿಯನ್ನು ಹೊಂದಿರುವ ಈ ಪ್ರಾಣಿ ಸುತ್ತಲಿನ ಗದ್ದಲಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ನಿಂತಿದ್ದು ‘ಸ್ಥಿತಪ್ರಜ್ಞಸ್ಯ ಕಾ ಭಾಷಾ’ ಎನ್ನುವುದರಲ್ಲಿ ‘ಸ್ಥಿತ’ ಎನ್ನುವುದಕ್ಕೆ ನಿಂತಿರುವ ಎಂಬ ಅರ್ಥವನ್ನು ಒದಗಿಸುವುದಕ್ಕೆ ಪೂರಕವಾಗಿದೆ. 

ವಸ್ತುಗಳಿಂದ ಸಂಚಿತ ಅರ್ಥ ಉರುಫ್ ಶೇಖರಿತವಾದ ತಡೆ ಅರ್ಥಾತ್ ರೋಡ್ ಬ್ಲಾಕಿಗೆ ಒಂದೊಂದ ಕಡೆ ಒಂದೊಂದು ಕಾರಣವುಂಟು. ಹಿಮಾಲಯದ ಮಡಿಲಿನಲ್ಲಿ ಇಂದಿನ ಗುಡ್ಡವೇ ನಾಳಿನ ಗುಡ್ಡೆ! ನಿಂತೂ ನಿಂತೂ ಬೇಸರವಾಗಿ ಅದ್ಯಾವ ಸಂದರ್ಭದಲ್ಲಿ ಕಾಲು ಚಾಚಿಕೊಂಡು ಕುಳಿತುಕೊಳ್ಳೋಣವೆನಿಸುವುದೋ! ಥಟ್ಟನೆ ಗುಡ್ಡ ಕಾಲು ಚಾಚಿದರೆ ಫಟ್ಟನೆ ಗ್ರಾಮಗಳು ಮಾಯವಾಗುತ್ತವೆ. ಇದು ಸಂಚಿತಾರ್ಥದ ಒರಿಜಿನಲ್ ಮೀನಿಂಗ್ ಆದ ಪೂರ್ವಜನ್ಮದ ಫಲವೇ; ಅಲ್ಲಿನವರ ಜನ್ಮಾಂತರ ಫಲದಿಂದಲೇ ಗುಡ್ಡ ಕುಸಿಯಿತೆಂದು ಭವ್ಯಬ್ರಹ್ಮಾಂಡಿಗಳು ಘೋಷಿಸಿಯಾರು. 

grave error ಆಗುವಂತಹ ಅಂತಹ ಸನ್ನಿವೇಶಗಳಿಗೆ ಹೋಲಿಸಿದರೆ ನಗರಗಳಲ್ಲಿ ಆಗುವ ಸಂಚಿತಾರ್ಥ ಉರುಫ್ ರೋಡ್ ಬ್ಲಾಕ್ ನಿರುಪದ್ರವಿ. ಇಲ್ಲಿನ ವಸ್ತುಗಳ ಪೈಕಿ ಪ್ರಮುಖವಾದುದು ನೀರು, ಒಳಚರಂಡಿ, ಕೇಬಲ್, ಫೋನ್‍ ಕಂಪನಿಗಳ ಕೃಪಾಪೋಷಿತ ಮಣ್ಣುಗುಡ್ಡೆಗಳು. ಅದೇನು ತಾಲ್‍ಮೇಲ್ ಈ ಕಂಪನಿಗಳ/ಇಲಾಖೆಗಳ ನಡುವೆ! ತಿಂಗಳ ಮೊದಲ ವಾರ ಕೇಬಲ್ನವನು ಅಗೆದುದಕ್ಕೆ ಎರಡನೆಯ ವಾರ ವೈಟ್ ಟಾಪಿಂಗ್; ಮೂರನೆಯ ವಾರ ಒಳಚರಂಡಿಯವನು ಕೊಡಲಿಯೊಡನೆ ಹಾಜರ್! ವರ್ಷದ ಎಲ್ಲ ತಿಂಗಳುಗಳಲ್ಲಿಯೂ ಇವರ ಈ cooperative movement  ನಡೆಯುವುದರ ಪರಿಣಾಮವಾಗಿ ಅಲ್ಲಿನ actual movement  ಸ್ಥಗಿತಗೊಳ್ಳುವುದು ವಿದಿತವೇ. 

ಇವೆಲ್ಲ Actual road block ಗಳಾದರೆ virtual ದೇ ಮತ್ತೊಂದು ವಿಧ. ಇದಕ್ಕೆ ಹೆಚ್ಚಾಗಿ ಮಂತ್ರಿಮಹೋದಯರೇ ಕಾರಣ. ಮಾಜಿ ಮಂತ್ರಿಗಳೊಬ್ಬರಿಗೆ ಮನೆಯಾಕೆಯ ಬಗ್ಗೆ ಅದೇನು ಆಕರ್ಷಣೆಯೋ! ಆಗಾಗ್ಗೆ ಮನೆಯತ್ತ ಪ್ರಯಾಣ ಬೆಳೆಸುತ್ತಿದ್ದರು. ಆತ ಮನೆಗೆ ಹೋಗಿಬರುವಾಗಲೆಲ್ಲ ಇಡೀ ಸ್ಟ್ರೆಚ್ಚಲ್ಲಿ ರೋಡ್ ಬ್ಲಾಕು. ಅದರಲ್ಲೂ ಒಂದು ಸಿಲ್ವರ್ ಲೈನಿಂಗು! ಸಾವಿರಾರು ಜನರು ಹಿಡಿಶಾಪ ಹಾಕಿದರೂ ಇಂದಿಗೂ ಆತ ಆರೋಗ್ಯದಿಂದಿರುವುದರಿಂದ ಇಂದಿನವರ ಶಾಪ ಪವರ್‍ಲೆಸ್ ಎಂದು ಸಾಬೀತಾಗಿದೆ!  

ಸಂಚಿತಾರ್ಥದ ಒರಿಜಿನಲ್ ಮೀನಿಂಗಾದ saved money ಗೆ ಹಿಂತಿರುಗೋಣ. ಇದರಲ್ಲಿಯೂ ಎರಡು ವಿಧ. 

ಮಳೆಗಾಲಕಿರಲೆಂದು ಕಣಕಣವ ಸೆಳೆತಂದು

ಒಳಗಿರಿಸಿ ಕಾಯುವುದು ಇರುವೆಗೆಲಸ

ಉಳಿತಾಯ ಯೋಜನೆಗೆ ಖಗ ಒರಲೆಗಳೆ ಮೊದಲು

ಕಲಿಯಲಿದ ಏಳ್ಗೆ ದಿಟವರಿಯೊ ಮನುಜ ||

ಎನ್ನುವುದಕ್ಕನುಗುಣವಾದ ಉಳಿತಾಯವು ಒಂದು ಅರ್ಥವಾದರೆ ಇತರರ ಒಳಿತಿಗೆ ಉಳಿಪೆಟ್ಟು ನೀಡಿ ತಮ್ಮ ಆರನೆಯದೋ ಏಳನೆಯದೋ ಪೀಳಿಗೆಗೆ ಆಗುವವರೆಗೆ ಸೇವ್ ಮಾಡುವುದೂ ಸಂಚಿತಾರ್ಥವೇ. ಅಂತಹ ಸಂಚಿತಾರ್ಥಧುರೀಣರು ಹೆಚ್ಚಾಗಿ

ಕಪ್ಪನೆ ಲಕ್ಷ್ಮೀ ಬಾರಮ್ಮ ಟ್ರೆಷರಿಗೆ ನೀ ಕಪ್ಪನೆ ಲಕ್ಷ್ಮೀ ಬಾರಮ್ಮ

ಅಂಕೆಯಿಲ್ಲದ ಚೀಲಗಳಲ್ಲಿ ಮಿರುಮಿರುಗುತಿಹ ಸೂಟ್ಕೇಸಲ್ಲಿ

ಹದ್ದಿನ ಕಣ್ಣಿನ ರೈಡಿಗೆ ಸಿಲುಕದೆ ಥಟ್ಟನೆ ಬರುತಲಿ ಠಕ್ಕೊಳು ಸೇರೇ

ಕಪ್ಪನೆ ಲಕ್ಷ್ಮೀ ಬಾರಮ್ಮ

ಎಂದು ಪ್ರಾರ್ಥಿಸಿ ಈ ಸಂಚಿತಾರ್ಥವನ್ನು ‘neither the Sun nor the moon espy’ ಎಂಬ ಭಾವ ಹೊಂದುವರು. 

Sun ವಿಷಯ ಬಂದಾಗ ಸಂಚಿತಾರ್ಥಕ್ಕೆ ಮತ್ತೊಂದು ಹೊಳಹೂ ಮೂಡಿತಲ್ಲ. sun ಚಿತ ಅರ್ಥದ ಸೊಬಗೇ ಸೊಬಗು. ಇದರಲ್ಲೂ ಎರಡು ವಿಧ; sun ಚಿತ, ಅರ್ಥಾತ್ ಸೂರ್ಯನಿಂದ ಮುಚ್ಚಲ್ಪಟ್ಟ ಅಥವಾ ಮರೆಮಾಡಲ್ಪಟ್ಟ ಅರ್ಥ ಉರುಫ್ ಅಮೂಲ್ಯ ವಸ್ತುವೆಂದರೆ ಕತ್ತಲೆ. ಇರುಳಲ್ತೆ ವಿರಹರಸಮಂ ಕವಿಗಳ್ ಸ್ಫುರಿಪ ರಸಸಮಯಂ! ನಿಶೆಯ ನಶೆಯೇ ಜಗದೈಕ ರಸಪೂರಿತ ನಶೆಯಲ್ತೇ! 

sun ಚಿತ ಉರುಫ್ ಸೂರ್ಯನಿಂದ ಸಂಪಾದಿಸಲ್ಪಟ್ಟಂತಹವು ಹಲವಾರು. ತನ್ನ incandescence ನಿಂದ ಜೀವಿಗಳೀಗೀವ ಶಾಖ. ಲವಲವಿಕೆಗಳು ಸಂಚಿತಾರ್ಥಗಳೇ; ಅಂತೆಯೇ ಸಸ್ಯಗಳಲ್ಲಿ ಶೇಖರವಾಗುವ ಕ್ಲೋರೋಫಿಲ್ ಮತ್ತು ತನ್ಮೂಲಕ ಫಲಗಳು ಸಹ ಸಂಚಿತಾರ್ಥಗಳೇ. 

ಹ್ಞಾಂ! ಮರೆಯುವುದಕ್ಕೆ ಮುನ್ನ - ಅಂದು ಪೂರ್ವಜನ್ಮಕೃತ ಫಲದಿಂದ ಲಭ್ಯವಾದಂತಹವು ಸಂಚಿತಾರ್ಥಗಳೆನಿಸಿಕೊಳ್ಳುತ್ತಿದ್ದವು.  ಇಂದು ಮಗನ ಪಶ್ಚಿಮಜನ್ಮಕೃತ ಫಲದಿಂದ (earnings out of the employment in the western countires) son ಚಿತ ಅರ್ಥವೆನಿಸಿಕೊಂಡಿವೆ. 

ಅವೆಲ್ಲ ಅಂತಿರಲಿ. ಸಿಡ್ನಿಯ ಚಕ್ರವರ್ತಿಗಳಾದ ಮಧುಸೂದನರು ನನಗೆ ಈ ಪದವನ್ನು ನೀಡಿ ಬರೆ-ಇರಿ ಎಂದದ್ದು ಅದಾವ ಸಂಚಿತಾರ್ಥವೋ ಏನೋ! 


Comments

  1. ನನಗೆ ಸಂಚಿತಾರ್ಥ ಎಂಬ ಪದವನ್ನು ಶ್ರೀ ರಾಮನಾಥರ ವಿಶಿಷ್ಟ ಕಲ್ಪನೆಯಲ್ಲಿ ವಿಶ್ಲೇಷಿಸಬೇಕೆಂದು ಹೊಳೆದಿದ್ದು ಮೈಸೂರು ವಾಸುದೇವಾಚಾರ್ಯರು ಹೇಳಿರುವ ಈ ಕಥೆಯಿಂದ. ಭೋಜರಾಜನು ಒಳ್ಳೆಯ ಕವಿಗಳಿಗೆ ಅಕ್ಷರಕ್ಕೆ ಲಕ್ಷ ವರಹ ಕೊಟ್ಟು ಪ್ರೋತ್ಸಾಹಿಸುತ್ತಿದ್ದನು. ಈತನು ಹೀಗೆಯೇ ಔದಾರ್ಯತೆಯಿಂದ ಮುಂದುವರಿದರೆ, ರಾಜ್ಯದ ಬೊಕ್ಕಸವೆಲ್ಲವೂ ಖಾಲಿಯಾಗುವುದು ಎಂದು ಅವನ ಮಂತ್ರಿಗೆ ದಿಗಿಲಾಯಿತು. ಅದಕ್ಕೆ ಒಂದು ಉಪಾಯ ಹುಡುಕಿದ. ರಾಜನು ದಿನವೂ ಸ್ನಾನಕ್ಕೆ ಹೋಗುವ ದಾರಿಯಲ್ಲಿದ್ದ ಗೋಡೆಯ ಮೇಲೆ ಹೀಗೆ ಬರೆಸಿದ: "ಆಪದರ್ಥಂ ಧನಂ ರಕ್ಷೇತ್". ರಾಜನಿಗೆ ಮಂತ್ರಿ ಏನು ಸೂಚಿಸುತ್ತಿದ್ದಾನೆ ಎಂದು ಅರ್ಥವಾಯಿತು. ಅದಕ್ಕೆ ಉತ್ತರವಾಗಿ "ಶ್ರೀಮತಾಂ ಅಪದಃ ಕುತಃ?" ಮಾರನೆಯ ದಿನ ಇದನ್ನು ನೋಡಿದ ಮಂತ್ರಿಯು ಆ ಸಾಲಿನ ಕೆಳಗೆ "ಸಾಚೇದಪಗತಾ ಲಕ್ಷ್ಮೀಃ" ಎಂದು ಬರೆಸಿದ. ಅದರ ಅರ್ಥವನ್ನು ಗ್ರಹಿಸಿದ ರಾಜನು ತಾನು ಸ್ನಾನದ ಮನೆಯಿಂದ ಹಿಂತಿರಿಗುವಾಗ "ಸಂಚಿತಾರ್ಥಂ ವಿನಶ್ಯತಿ" ಎಂದು ಬರೆಸಿದ. ಅಲ್ಲಿಗೆ ಸಂವಾದ ಪೂರ್ಣವಾಯಿತು.

    ReplyDelete

Post a Comment