ಅರ್ಥ ಪೂರ್ಣವಾಗಿರಲಿ ನಿಮ್ಮ ಜನುಮದಿನ.

 ಅರ್ಥ ಪೂರ್ಣವಾಗಿರಲಿ ನಿಮ್ಮ ಜನುಮದಿನ.

ಲೇಖನ - ಮಂಜುನಾಥ ಉಮೇಶ ನಾಯ್ಕ, ಮುರ್ಡೇಶ್ವರ

ಮಧ್ಯರಾತ್ರಿಯಲ್ಲಿ ನಿಮ್ಮ ವ್ಯಾಟ್ಸಪ್ ಶಬ್ಧಮಾಡಿತು ಎಂದರೆ ಯಾರೋ ಯಾರಿಗೋ ಜನುಮದಿನದ ಶುಭಾಶಯ ತಿಳಿಸಿದ್ದಾರೆ ಎಂದರ್ಥ. ಇಂದಿನ ಯುವಪೀಳಿಗೆ ವಿದ್ಯಾಭ್ಯಾಸಕ್ಕಾಗಿ ಎಚ್ಚರವಾಗಿರುತ್ತಾರೋ ಗೊತ್ತಿಲ್ಲ, ಆದರೆ ಜನುಮದಿನದ ಶುಭಾಶಯ ಹೇಳಲು ಖಂಡಿತ ಎಚ್ಚರವಾಗಿರುತ್ತಾರೆ!. ಕೊನೆ ಪಕ್ಷ ಮೊಬೈಲ್ ನಲ್ಲಿ ಆಲರಾಂ ಇಟ್ಟು ಆ ಸಮಯದಲ್ಲಿ ಎದ್ದು ಜನುಮದಿನದ ವಿಶ್ ಮಾಡುತ್ತಾರೆ. ಇನ್ನು ಕೆಲವರು ಆ ಮಧ್ಯರಾತ್ರಿಯೇ ಮನೆಗೆ ಬಂದು ಕೆಕ್ ತಂದು ಆಚರಿಸುತ್ತಾರೆ. ಕೆಲವು ಜನರಂತೂ ರಸ್ತೆಯ ಬದಿಯಲ್ಲಿ, ಬೈಕ್ ಗಳ ಮೇಲೆ, ಜನಜಂಗುಳಿ ಇರುವ ಪಾರ್ಕಗಳಲ್ಲಿ ಕೆಕ್ ತಂದು ಅಲ್ಲಿರುವ ಜನರಿಗೆಲ್ಲಾ ತೊಂದರೆ ಕೊಟ್ಟು ಆಚರಿಸುವರು. ಅಷ್ಟೇ ಅಲ್ಲ ಆಚರಣೆ ಆದ ಮೇಲೆ ಕಸವನ್ನು ಅಲ್ಲೇ ಬಿಸಾಡಿ ಹೋಗುತ್ತಾರೆ.   ಅಷ್ಟೋಂದು ವಿದೇಶಿ ಸಂಸ್ಕೃತಿಗೆ ನಾವು ಒಗ್ಗಿ ಹೋಗಿದ್ದೆವೆ. 



ಮೊದಲೆಲ್ಲಾ ಹುಟ್ಟು ಹಬ್ಬವೆಂದರೆ ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರಿಗೆ ದೀಪಹಚ್ಚಿ, ಹಿರಿಯರ ಕಾಲಿಗೆ ನಮಸ್ಕರಿಸಿ ದೇವಸ್ಥಾನಕ್ಕೆ ಹೋಗುವ ವಾಡಿಕೆ ಇತ್ತು. ಅಮ್ಮ ಮಾಡಿದ ಸಿಹಿ ಅಡಿಗೆ ಸವಿದರೆ ಆಹಾ ಅಧ್ಬುತ!. ಆಗ ಹೆಚ್ಚು ಅಂದರೆ ಸುಮಾರು ಐದು ವರ್ಷಗಳವರೆಗೆ ಮಾತ್ರ ಇದನ್ನು ಆಚರಿಸುತ್ತಿದ್ದರು. ಆದರೆ ಈಗ ವಯ್ಯಸ್ಸಿನ ಮಿತಿಯೇ ಇಲ್ಲ. ಇನ್ನೂ ಹಿರಿಯರ ಕಾಲಿಗೆ ನಮಸ್ಕರಿಸುವ ವಿಷಯ ಹಾಗಿರಲಿ,(ಅದನ್ನ ಮರೆತೇ ಬಿಟ್ಟಿದ್ದಾರೆ) ಹಿರಿಯರನ್ನು ಪರಿಗಣಿಸುವುದೇ ಇಲ್ಲ. ಇನ್ನು ಜನುಮದ ದಿನದಂದು ಯಾರ ಜನುಮದಿನ ಇರುತ್ತದೆಯೋ ಅವರ ಮುಖಕ್ಕೆ ಕೇಕ್ ನಲ್ಲಿರುವ ಕ್ರೀಮ್ ಗಳನ್ನು  ಬಳಿದೋ ಇಲ್ಲ ಪೂರ್ಣ ಕೇಕ್ ಅನ್ನು ಅವರ ಮುಖಕ್ಕೆ ಒತ್ತಿಬಿಡುತ್ತಾರೆ. ಅವರ ಮುಖ ಮತ್ತು ಕೇಕ್ ಎರಡನ್ನೂ ಅನಾವಶ್ಯಕ ಹಾಳುಮಾಡಿ, ಪಿಜ್ಜಾ ಬರ್ಗರ್ ತಂದು ತಿಂದು ತೇಗುತ್ತಾರೆ. (ನೆನಪಿಡಿ ಕೆಕ್ ನಲ್ಲಿ ಇರುವ ಕ್ರೀಮ್ ಅರೋಗ್ಯಕ್ಕೆ ಒಳ್ಳೆಯದಲ್ಲ. ಕೇಕನ್ನೂ ಸಹ ಮೈದಾಹಿಟ್ಟಿನಲ್ಲಿ ಮಾಡಿರುವುದರಿಂದ ಅದೂ ಕೂಡ ಆರೋಗ್ಯಕ್ಕೆ ಕೆಟ್ಟದ್ದೆ). ಇನ್ನು ಸ್ನೇಹಿತರು ಆ ಸಂದರ್ಭದಲ್ಲಿ ಹುಚ್ಚು ಹುಚ್ಚು ಕಪಿಛೇಷ್ಟೇ ಮಾಡುವಾಗ ಯಾರು ನಮ್ಮ ಸುತ್ತಾ ಮುತ್ತಾ ಇದ್ದಾರೆ, ಯಾರು ನಮ್ಮನ್ನು ನೋಡುತ್ತಾರೆ ಎಂದೂ ನೋಡುವದಿಲ್ಲ. ಇದು ಯುವ ಪೀಳಿಗೆಗೆ ಅಂಟಿರುವ ಒಂದು ದೊಡ್ಡ ರೋಗವೇ ಸರಿ!.



ಮೊದಲು ಜನುಮದಿನದ ಆಚರಣೆಯನ್ನು ಹಿರಿಯರು ತಮ್ಮ ಮಕ್ಕಳಿಗೆ ಕೆಂಪು ನೀರಿನ ಆರತಿಯ ಮಾಡಿ ಅದರಲ್ಲಿ ಮುಖದ ಪ್ರತಿಬಿಂಬ ನೋಡಲು ಹೇಳುತ್ತಿದ್ದರು. (ನೀರಿಗೆ ಸುಣ್ಣ ಮತ್ತು ಅರಿಶಿಣ ಸೇರಿಸಿದಾಗ ಅದರ ಬಣ್ಣ ಕೆಂಪಾಗುವದು. ಇದು ಮಕ್ಕಳಿಗೆ ದೃಷ್ಟಿ ಬೀಳದಿರಲಿ ಎಂದು ಹಿರಿಯರು ಮಾಡುವ ವಾಡಿಕೆ). ಮತ್ತು ದೀಪ ಬೇಳಗುವ ಮೂಲಕ "ನಿಮ್ಮ ಭವಿಷ್ಯ ಜ್ಯೋತಿಯಂತೆ ಸದಾ ಬೆಳಗಲಿ" ಎಂಬ ಆಶಯದೊಂದಿಗೆ ಆಚರಿಸುತ್ತಿದ್ದರು. ಆದರೆ ಈಗ "ಹಚ್ಚಿದ ದೀಪವನ್ನು ಆರಿಸಿ" ಆಚರಿಸುತ್ತಾರೆ. ನೋಡಿ ಎಂತಾ ವಿಚಿತ್ರ!. ಇನ್ನು ಕೆಲವರು ಪ್ರತಿಷ್ಟೇಗೋ ಇಲ್ಲ  ಅಭಿಮಾನಕ್ಕೋ ಹುಟ್ಟುಹಬ್ಬ ವಿರುವ ವ್ಯಕ್ತಿಯ ಪೋಟೋವನ್ನು ಕೆಕ್ ಮೇಲೆ ಹಾಕಿಸಿರುತ್ತಾರೆ. ಆಮೇಲೆ ಅವರೇ ಕೆಕ್ ಕತ್ತರಿಸುವಾಗ "ಕಣ್ಣಿನ ಭಾಗ ಕತ್ತರಿಸು, ಕುತ್ತಿಗೆ ಕತ್ತರಿಸು, ಮೂಗನ್ನೂ ಕತ್ತರಿಸು ಅಂತ" ಜನುಮದಿನದಂದೇ...... ಅವರ ಕೃತಕ ಸಾವನ್ನು ಬಯಸುತ್ತಾರೆ. ಎಂತಾ ಅವ್ಯವಸ್ಥೆ ಮಾರಾಯ್ರೇ!.

ಇನ್ನು ಉಡುಗೋರೆಯ ವಿಷಯ, ಮೊದಲು ಜನುಮದಿನದಂದು ಹಿರಿಯರ ಆಶೀರ್ವಾದವೇ ಉಡುಗೊರೆಯಾಗಿರುತ್ತಿತ್ತು!. ಆದರೆ ಈಗ ಉಡುಗೊರೆ ಕೊಡದೇ ಹೋದರೆ.... ಜನುಮದಿನವೇ ಆಗದು. ಈ ವಿಷಯದಲ್ಲಿ ನಾವು ನಮ್ಮ ಮೇಲೆ ಸದಾ ಕಾಲು ಕೆರೆದು ಜಗಳಕ್ಕೆ ಬರುವ ಚೀನಾ ದೇಶಕ್ಕೆ ಸಹಾಯ ಮಾಡಲೆಂದು ಅವರು ತಯಾರಿಸಿದ "ನಗುವ ಬುದ್ಧ" (Laughing budda) ಕೊಡುತ್ತೆವೆ. ಯಾಕೆಂದರೆ ಅದು ಉಡುಗೊರೆಯಾಗಿ ಬಂದರೆ ಶುಭ ಎಂದು‌ ಹಬ್ಬಿಸಿದ ಸುಳ್ಳು ಸುದ್ದಿಗೆ ನಾವು ಬದ್ದರಾಗಿದ್ದೆವೆ. ಇದಲ್ಲದೇ ಹೋದರೆ ನಾವು ಕೊಡುವ ಬಹುತೇಕ ಉಡುಗೋರೆ Made in  ಚೈನಾ!. ಹಾಗಾಗಿ ನಾವು ಹುಟ್ಟುಹಬ್ಬದಂದೇ ಚೀನಾವನ್ನು ಆರ್ಥಿಕವಾಗಿ ಸಭಲರಾಗಿಸುತ್ತಿದ್ದೆವೆ ಅಲ್ಲವೇ?. ಯಾಕೆ ನಾವುಗಳು ನಮ್ಮ ನಮ್ಮ ಧರ್ಮದ (ಯಾವುದೇ ಧರ್ಮ ಇರಲಿ) ಪುಸ್ತಕವನ್ನೋ, ದೇವರ ಮೂರ್ತಿಯನ್ನೋ, ಗಿಡವನ್ನೋ ಉಡುಗೊರೆಯಾಗಿ ಕೊಡಬಾರದು?. ಅಥವಾ ಒಳ್ಳೋಳ್ಳೆ ಉತ್ತಮ ಅಭಿರುಚಿ ಇರುವ ಪುಸ್ತಕವನ್ನು ಉಡುಗೊರೆಯಾಗಿ ಕೊಡಬಾರದು?. ಇದರತ್ತ ಗಮನಹರಿಸುವ ಅವಶ್ಯಕತೆ ಇದೆ ಅನಿಸುತ್ತದೆ ಅಲ್ಲವೇ?

ಕೇವಲ ಹತ್ತು ಹದಿನೈದು ನಿಮಿಷದಲ್ಲಿ ನಡೆಯುವ ಜನುಮದಿನದ ಈ ಸಂಭ್ರಮಕ್ಕೆ ಸಾವಿರಾರು ರೂಪಾಯಿಗಳನ್ನು ಅನಾವಶ್ಯಕವಾಗಿ ಹಾಳುಮಾಡುತ್ತೆವೆ. ಆದರೆ ಕೆಲವರು ತಮ್ಮ ಜನುಮದಿನದಂದು ಉತ್ತಮ ಕಾರ್ಯವನ್ನು ಮಾಡಿ ಸದುಪಯೋಗ ಪಡಿಸಿಕೊಳ್ಳುತ್ತಾರೆ. ಸ್ನೇಹಿತರಿಗೆ ಪಾರ್ಟಿಕೊಟ್ಟು ಹಣವನ್ನು ವ್ಯರ್ಥ ಮಾಡದೇ....ಬಡವರಿಗೆ ದಾನ ಧರ್ಮ ಮಾಡುತ್ತಾರೆ. ಕೆಲವರು ಅನಾಥಾಲಯಕ್ಕೆ ಸಹಾಯಮಾಡುವದು,  ಕೆಲವರು ರಕ್ತದಾನವನ್ನೂ ಮಾಡುತ್ತಾರೆ. ಹೀಗೆಯೇ ಮುಂದಿನ ದಿನಗಳಲ್ಲಿ ನಾವು ನಮ್ಮ ಜನ್ಮದಿನವನ್ನು ನಮ್ಮ ಸಂಪ್ರದಾಯದ ಪ್ರಕಾರವೇ ಮಾಡಿ ಒಳ್ಳೆಯ ಕಾರ್ಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸೋಣ.


ಮಂಜುನಾಥ ಉಮೇಶ ನಾಯ್ಕ, ಮುರ್ಡೇಶ್ವರ





Comments

  1. ಅರ್ಥಪೂರ್ಣವಾಗಿರಲಿ ನಿಮ್ಮ ಜನ್ಮದಿನ ತುಂಬಾ ಅರ್ಥ ಪೂರ್ಣವಾಗಿದೆ.
    ನಾನು ನೋಡಿದಂತೆ ಯೂರೋಪಿಯನ್ ಆಸ್ಟ್ರೇಲಿಯನ್ನರು ಹುಟ್ಟುಹಬ್ಬವನ್ನು ತುಂಬಾ ಸರಳವಾಗಿ ಆಚರಿಸುತ್ತಾರೆ. ಸ್ಕೂಲಿಗೆ ಹೋಗುವ ಮುನ್ನ family dinner ಮತ್ತು cake cutting ಅಷ್ಟೇ . ಸ್ಕೂಲಿಗೆ ಹೋಗಲು ಶುರುಮಾಡಿದ ಮೇಲೆ ಯಾವುದಾದರೂ park ನಲ್ಲಿ ಮಕ್ಕಳ ಸ್ನೇಹಿತರನ್ನು ಕರೆದು ಆಚರಿಸುತ್ತಾರೆ. ಆಹಾರ ಪಾನೀಯಗಳು ಬಹಳ simple . ಮಕ್ಕಳು ತಿನ್ನೋದೇ simple food ಅಲ್ವೇ. $೨೦೦-೪೦೦ ಗಳಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ೧೮ ವರ್ಷದ ಮತ್ತು ೨೧ ವರ್ಷದ ಹುಟ್ಟು ಹಬ್ಬವನ್ನು ಮಾತ್ರ ವಿಜೃಂಭಣೆಯಿಂದ ಆಚರಿಸುತ್ತಾರೆ. ಆ ನಂತರ ೬೦, ೭೦, ೮೦, ೯೦, ೧೦೦+ ವರ್ಷದ ಹುಟ್ಟು ಹಬ್ಬದ ಆಚರಣೆಗೆ ಕುಟುಂಬದವರನ್ನೂ, ಸ್ನೇಹಿತರನ್ನೂ ಕರೆಯುತ್ತಾರೆ.

    cake ಅನ್ನು birthday boy/girl ಗೆ ಆಹ್ವಾನಿತರೆಲ್ಲರೂ ತಿನ್ನಿಸುವುದು, ಅವನ/ಅವಳ ಮುಖಕ್ಕೆ cake ಬಳಿಯುವುದು, cake digging ಮುಂತಾದುವುಗಳಿಲ್ಲ.

    ReplyDelete

Post a Comment