ಹರ್ಮನ್ ಮೊಗ್ಲಿಂಗ್ ಮತ್ತು ಕನ್ನಡದ ಪ್ರಥಮ ಮುದ್ರಣ

 ಹರ್ಮನ್ ಮೊಗ್ಲಿಂಗ್ ಮತ್ತು ಕನ್ನಡದ ಪ್ರಥಮ ಮುದ್ರಣ

ಲೇಖನ - ಡಾ ಸಿ ವಿ ಮಧುಸೂದನ, Sydney 



ಭಾರತ ಮತ್ತು ಇತರ ಏಷ್ಯಾ ದೇಶಗಳ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು, ಸಾಹಿತ್ಯ ಇತ್ಯಾದಿಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ವಿದ್ವಾಂಸರನ್ನು orientalists ಅಥವಾ ಪೌರಸ್ತ್ಯ ಪಂಡಿತರು ಎಂದು ಕರೆಯುತ್ತಾರೆ. ಇವರೆಲ್ಲರೂ ಮುಖ್ಯವಾಗಿ ೧೮-೧೯ನೆಯ ಶತಮಾನದವರು.ಇವರಲ್ಲಿ ಎರಡು ವಿಧ:

1. ಕ್ರೈಸ್ತ ಮತ ಪ್ರಸಾರಕ್ಕಾಗಿಯೇ ಆಗಮಿಸಿದ ಮಿಶನರಿಗಳು. ಕರ್ನಾಟಕಕ್ಕೆ ಬಂದ Abbe DuBois, Hermann Mogling, Ferdinand Kittel ಮುಂತಾದವರು ಈ ಗುಂಪಿಗೆ ಸೇರಿದವರು.

2. Civil or military service ಗೆ ಸೇರಿದ ಇತರರು. ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲೀಷಿಗೆ ಭಾಷಾಂತರಿಸಿದ William Jones, ಬ್ರಹ್ಮಗುಪ್ತನ ಮತ್ತು ಭಾಸ್ಕರಾಚಾರ್ಯನ ಗಣಿತ ಗ್ರಂಥಗಳನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿದ H.T. Colebrooke, ಹಳೆಯ ಮೈಸೂರು ಮತ್ತು ಕೊಡಗು ಪ್ರಾಂತಗಳ ಶಾಸನಗಳನ್ನು ಕಂಡು ಹಿಡಿದು, ಓದಿ ಪ್ರಕಟಿಸಿದ B.L. Rice, ಉತರ ಕರ್ನಾಟಕದಲ್ಲಿ ಅದೇ ಕಾರ್ಯ ನಿರ್ವಹಿಸಿದ John Faithfull Fleet, ಅನೇಕ ಹಿಂದೂ ಮತ್ತು ಬೌದ್ಧ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ, ಅನುವಾದ ಮಾಡಿ ಅಥವಾ ಮಾಡಿಸಿ, Sacred Books of the East ಎಂಬ ಸರಣಿಯಲ್ಲಿ ಪ್ರಕಟಿಸಿದ Max Mueller ಎರಡನೆಯ ಗುಂಪಿಗೆ ಸೇರಿದವರು.

ಈ ಲೇಖನದಲ್ಲಿ ನಾನು Hermann Mogling ಅವರ ಬಗ್ಗೆ ಮಾತ್ರ ಎರಡು ಮಾತು ಹೇಳಬಯಸುತ್ತೇನೆ. Hermann Mogling (ಚಿತ್ರ 1) ಅವರು ಜರ್ಮನಿಯ Basel Mission ಎಂಬ ಕ್ರೈಸ್ತ ಧರ್ಮ ಸಂಸ್ಥೆಗೆ ಸೇರಿದವರು. ಇವರು ೧೮೩೬ರಲ್ಲಿ ಮಂಗಳೂರಿಗೆ ಬಂದರು. ಕನ್ನಡವನ್ನು ಚೆನ್ನಾಗಿ ಕಲಿತರು, ಬರೀ ಸ್ಥಳೀಯರೊಡನೆ ಮಾತನಾಡುವುದಕ್ಕಲ್ಲ, ಅವರ ಆಚಾರ ವ್ಯವಹಾರಗಳನ್ನು ತಿಳಿಯಲು ದೇಶೀಯ ಧರ್ಮಗ್ರಂಥಗಳು, ಸಾಹಿತ್ಯ ಇವನ್ನು ಕೂಲಂಕಷವಾಗಿ ಅಭ್ಯಾಸಮಾಡುವುದಕ್ಕೂ ಸಹ. ಆಗ ಕನ್ನಡದಲ್ಲಿ ಯಾವುದೇ ಬಗೆಯ ಮುದ್ರಣ ಸೌಕರ್ಯವಿರಲಿಲ್ಲ. ಆಗ ಮಂಗಳೂರಿನಲ್ಲಿ ಮೊದಲ ಛಾಪಖಾನೆಯನ್ನು ಸ್ಥಾಪಿಸಿದ್ದು ಇವರೇ. 

ಚಿತ್ರ 1
Hermann Mogling (ಚಿತ್ರ 1) 

ಅವರು ಮಾಡಿದ ಒಂದು ಮುಖ್ಯ ಕೆಲಸವೆಂದರೆ ‘ಮಂಗಳೂರು ಸಮಾಚಾರ” ಎಂಬ ವೃತ್ತ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದ್ದು. ಕನ್ನಡ ಭಾಷೆಯಲ್ಲಿ ಇದೇ ಮೊಟ್ಟ ಮೊದಲ ವರ್ತಮಾನ ಪತ್ರಿಕೆಯೆಂದು ಪರಿಗಣಿಸುತ್ತಾರೆ. ಇದಾದ ನಂತರ ೧೮೪೭-೧೮೫೧ ರಲ್ಲಿ ಅವರು Biblioteca Carnataka ಎಂಬ ಸರಣಿಯಲ್ಲಿ ಕನ್ನಡದ ಎಂಟು ಗ್ರಂಥಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದರು. ಅವು ಯಾವುವೆಂದರೆ:

1. ಕನ್ನಡ ಗಾದೆಗಳು ಇದರಲ್ಲಿ ೩೫೦೦ ಗಾದೆಗಳಿವೆ

2. ರಾವಣ ದಿಗ್ವಿಜಯ ಎಂಬ ಯಕ್ಷಗಾನ

3. ಬಸವ ಪುರಾಣ 

4. ಲಕ್ಷ್ಮೀಶನ ಜೈಮಿನಿ ಭಾರತ

5. ಕುಮಾರವ್ಯಾಸ ಭಾರತ

6. ಕನಕದಾಸರ ಹರಿಭಕ್ತಿ ಸಾರ

7. ದಾಸರ ಪದಗಳು (ಒಟ್ಟು 170)

ಆಗ ಕನ್ನಡದಲ್ಲಿ ಅಚ್ಚಿನ ಮೊಳೆಗಳ ಸೌಲಭ್ಯವಿರಲಿಲ್ಲ. ಒಂದು ಬಗೆಯ ವಿಶೇಷ ರೀತಿಯ ಕಲ್ಲಿನ ಹಲಗೆಯ ಮೇಲೆ ಅಕ್ಷರಗಳನ್ನು ಮೇಣವನ್ನು ಬಳಿಸಿ ಕೊರೆದು ಅದನ್ನು ಕಾಗದದ ಪ್ರತಿಗಳನ್ನು ತಯಾರಿಸಲು ಉಪಯೋಗಿಸ ಬೇಕಾಗಿತ್ತು. ಇದಕ್ಕೆ Lithography ಎಂದು ಕರೆಯುತ್ತಾರೆ. ಈ ರೀತಿ ಮುದ್ರಿಸಿದ ಪುಟಗಳನ್ನೂ ನೋಡಿದರೆ, ಅವು ಕೈಬರಹದಂತೆ ಕಾಣುತ್ತವೆ! ಚಿತ್ರಗಳು  2, 3 ಮತ್ತು 4 ಈ ರೀತಿ ಮುದ್ರಿತವಾದ ಮೂರು ಗ್ರಂಥಗಳ ಮೊದಲನೆಯ ಪುಟವನ್ನು ಮಾತ್ರ ತೋರಿಸುತ್ತವೆ.

ಚಿತ್ರ 2
ಚಿತ್ರ 2


ಚಿತ್ರ 3
ಚಿತ್ರ 3










ಚಿತ್ರ 4
ಚಿತ್ರ 4

ಬಸವಪುರಾಣದಲ್ಲಿ ೭೫೦ ಪುಟಗಳಿವೆ. ಜೈಮಿನಿ ಭಾರತದಲ್ಲೂ, ಕುಮಾರವ್ಯಾಸ ಭಾರತದಲ್ಲೂ ಸುಮಾರು ೩೬೦ ಪುಟಗಳಿವೆ. ಇದರಿಂದ ಈ ಗ್ರಂಥಗಳನ್ನು ಮುದ್ರಿಸಿ ಪ್ರಕಟಿಸಲು ಎಷ್ಟು ಸಮಯ,ಶ್ರಮ ಮತ್ತು ಹಣ ಬೇಕಾಗಿತ್ತೆಂದು ನೀವೇ ಊಹಿಸಬಹುದು. ಅದೃಷ್ಟವಶಾತ್, J. Casamajor ಎಂಬ ಒಬ್ಬ ನಿವೃತ್ತ ನ್ಯಾಯಾಧೀಶನು ಗ್ರಂಥ ಪ್ರಕಟಣೆಗೆ ಬೇಕಾದ ಖರ್ಚೆಲ್ಲವನ್ನೂ ತಾನೇ ವಹಿಸಿಕೊಂಡನು. ಒಟ್ಟಿನಲ್ಲಿ ಈ ಪುಸ್ತಕಗಳ ಪ್ರಕಟಣೆಯಿಂದ Hermann Mogling ಗಾಗಲಿ, J. Casamajor ಗಾಗಲಿ ಮತಪ್ರಸಾರ ದೃಷ್ಟಿಯಿಂದಾಗಲಿ, ಧನಲಾಭದ ದೃಷ್ಟಿಯಿಂದಾಗಲಿ ಏನೂ ಪ್ರತಿಫಲ ದೊರಕಿದಂತೆ ತೋರುವುದಿಲ್ಲ.

Mogling 1860ರಲ್ಲಿ ತನ್ನ ದೇಶಕ್ಕೆ ಹಿಂತಿರುಗಿದನು. ಇತರ ಮಿಶನರಿಗಳಂತೆ ಅವನಿಗೆ ಕನ್ನಡ ನಿಘಂಟನ್ನು ತಯಾರಿಸಲು ಸಾಧ್ಯವಾಗಲಿಲ್ಲ. ಬೇರೆ ಯಾರನ್ನಾದರೂ ಸೂಚಿಸಿ ಎಂದು ಕೇಳಿದಾಗ, ಅವನು ಆ ವೇಳೆಗಾಗಲೇ ಕರ್ನಾಟಕದಲ್ಲಿ ನೆಲಸಿದ್ದ Reverend Ferdinand Kittel ಅವರೇ ಈ ಕಾರ್ಯವನ್ನು ಮಾಡಲು ಅರ್ಹರು ಮತ್ತು ಸಮರ್ಥರು ಎಂದು ಸಲಹೆ ಮಾಡಿದನು. ಆ ಕಥೆಯೇ ಬೇರೆ.

(“ಸಿಡ್ನಿ ಕನ್ನಡ ವಾಣಿ” ರೇಡಿಯೋ ಕಾರ್ಯಕ್ರಮದಲ್ಲಿ 25-12-2022 ರಂದು ಪ್ರಸಾರಿತವಾದ ಇದೇ ಲೇಖಕರ ಕಿರು ಭಾಷಣದ ಮೇಲೆ ಆಧಾರಿತ ಲೇಖನವಿದು)

Comments

  1. ಹರ್ಮನ್ ಮೊಗ್ಲಿಂಗ್ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು.
    ಹೊರದೇಶಕ್ಕೆ ಬಂದು, ಅವರ ಸಂಸ್ಕೃತಿ ಅರಿತು, ಭಾಷೆ ಕಲಿತು, ಆ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿರುವುದು ಒಂದು ಅತ್ಯದ್ಭುತ ಸಾಧನೆ.

    ರೇಡಿಯೋದಲ್ಲಿ ಇವರ ಬಗ್ಗೆ ನೀವು ಮಾತನಾಡಿದ್ದು ಕೇಳಿದ್ದೆ. ಆದರೆ ಬರಹದಲ್ಲಿದ್ದರೆ ಒಂದೆರಡು ಬಾರಿ, ನಿಧಾನವಾಗಿ ಓದಬಹುದು. ಮೇಲಾಗಿ ಚಿತ್ರಗಳನ್ನು ಕೊಟ್ಟಿದ್ದೀರಿ. ಅವು ಬಹಳ interesting ಆಗಿವೆ.
    ಚಿತ್ರಗಳನ್ನು ಹಿಗ್ಗಿಸಿ ನೋಡಿದಾಗ ಒಂದು ಕುತೂಹಲಕಾರಿ ಅಂಶ ಕಂಡುಬಂದಿತು. ಅದೇನೆಂದರೆ, ಎರಡು ಪದಗಳ ನಡುವೆ space ಬಿಟ್ಟಿಲ್ಲ!! ಭಾಷೆ ಕೂಡಾ ಸ್ವಲ್ಪ ಬೇರೆಯಾಗಿದೆ.
    ಮುಂನ್ನಶತಕೋಟಿರಾಯರುವಾಳಿದನೆಲನ …
    ನಾನು ಓದಿದ್ದು - ಮುನ್ನ ಶತಕೋಟಿರಾಯರುಗಳಾಳಿದಾ ನೆಲವ .....
    ಏನೇ ಇರಲಿ, ಚಿತ್ರಗಳಲ್ಲಿರುವುದನ್ನು ಓದಿ ಆನಂದವಾಯಿತು.
    ನಮಸ್ಕಾರಗಳು.

    ReplyDelete
  2. ನಿಮ್ಮ ವಿಚಾರಪೂರ್ಣ ವಿವರಣೆ ನನಗೆ ಇಷ್ಟವಾಯಿತು. ರೇಡಿಯೋದಲ್ಲಿ ಒಮ್ಮೆ ಕೇಳಿದ ಮೇಲೆ ಮತ್ತೊಮ್ಮೆ ಕೇಳುವುದು ಒಂದು ಬರಹವನ್ನು ಮತ್ತೊಮ್ಮೆ ಓದುವಷ್ಟು ಸುಲಭವಲ್ಲ. ಮುಖ್ಯವಾಗಿ ಬರಹದ ಜೊತೆಗೆ ಇರುವ ಚಿತ್ರಗಳು ವಿಷಯಕ್ಕೆ ಪೂರಕವಾಗಿವೆ ಎಂಬ ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ. ಮೊದಲನೆಯ ಮುದ್ರಣ ಯಾವುದೋ ಹಸ್ತಪ್ರತಿಗಳನ್ನು ಓದಿ ಸಿದ್ಧಪಡಿಸಿದ್ದರು. ಅದರಲ್ಲಿ ಕೆಲವು ತಪ್ಪುಗಳಿರುವುದು ಸಹಜ. ಪರಿಷ್ಕರಿಸಿದ್ದ ಆವೃತ್ತಿಯಲ್ಲಿ ಅವನ್ನು ತಿದ್ದಿಕೊಂಡಿದ್ದಾರೆ ಎಂದು ಕಾಣುತ್ತದೆ. ಧನ್ಯವಾದಗಳು

    ReplyDelete

Post a Comment