ನೆನಪುಗಳಾ ಅಂಗಳದಿ

ನೆನಪುಗಳಾ ಅಂಗಳದಿ

ಲೇಖನ - ಶ್ರೀಮತಿ ಪಲ್ಲವಿ ಕಟ್ಟಿ , ಸಿಡ್ನಿ 


ಏನೇನೋ ಕನಸುಗಳು. ಯಾವ ಕನಸಿಗೂ ಅರ್ಥವೇ ಇಲ್ಲ. ಮನಸ್ಸಿನ ಆಳದಲ್ಲಿ ಅವಿತು ಕುಳಿತ ಯಾವುದೋ ಸಂಗತಿ ಇರಬಹುದು ಎಂದು ಮನಸ್ಸಿಗೆ ಸಮಾಧಾನ ಹೇಳಿ ಹಾಗೆ ಕಣ್ಣು ಬಿಡದೆ ಮಲಗಿದ್ದೆ. ಕಿಟಕಿಯಿಂದ ಹಕ್ಕಿಗಳ ಚಿಲಿಪಿಲಿ ಕೇಳಿತು. ಸಮಯ ಏನಿರಬಹುದು ಎಂದು ಅರ್ಧ ಕಣ್ಣು ಬಿಟ್ಟು ಗಡಿಯಾರ ನೋಡಿದೆ ಸಮಯ ಆಗಲೇ ಬೆಳಗಿನ ಜಾವ ಆರು ಗಂಟೆ.



ಮನಸ್ಸಿಲ್ಲದ ಮನಸ್ಸಿನಿಂದ ಎದ್ದುಬಂದು, ಮನೆಯ ಬಾಲ್ಕನಿ ಬಾಗಿಲು ತೆರೆದು ಹೊರಗೆ ಬಂದು ಕುಳಿತೆ. ಅದು ಬೇಸಿಗೆ ಕಾಲ ಆದರೂ ತಂಪಾದ ಗಾಳಿ ಬೀಸುತ್ತಿತ್ತು. ಮನಸ್ಸಿಗೆ ಹಾಗೂ ದೇಹಕ್ಕೆ ಹಿತವಾಗಿತ್ತು. ವಾಹನಗಳ ಗದ್ದಲ ಇನ್ನೂ ಶುರುವಾಗಿರಲ್ಲ. ಬಹಳ ಪ್ರಶಾಂತವಾದ ವಾತಾವರಣ. ಹಾಗೆಯೇ ಮನೆಯ ಮುಂದೆ ಇದ್ದ ಕೆಂಪು ಹೂವಿನ ಮರವನ್ನ ನೋಡುತ್ತಾ ಕೊಳಿತಿದ್ದೆ, ಅಷ್ಟರಲ್ಲಿ ಎಲ್ಲಿಂದಲೋ ಒಂದು ಬಿಳಿ ಪಾರಿವಾಳ ಹಾರಿ ಬಂದು ಮನೆಯ ಹೂವಿನ ಗಿಡದಲ್ಲಿ ಕುಳಿತುಕೊಂಡಿತು. ಆ ಬಿಳಿ ಪಾರಿವಾಳ ನೋಡುತ್ತಿದ್ದಂತೆಯೇ ನನ್ನ ಮನಸ್ಸು ನನ್ನ ಬಾಲ್ಯದ ದಿನಕ್ಕೆ ಜಾರಿತ್ತು.  ಚಿಕ್ಕಂದಿನಲ್ಲಿ ಬೇಸಿಗೆ ರಜ ಶುರುವಾದ ಒಂದೆರಡು ದಿನಕ್ಕೆ ನಮ್ಮ ಊರು ಧಾರವಾಡಕ್ಕೆ ಹೋಗುವ ಸಂಭ್ರಮ. ಧಾರವಾಡದಲ್ಲಿ ಸಾಧನ ಕೇರಿ ಬಡಾವಣಿಯಲ್ಲಿ ಅಜ್ಜ ಅಜ್ಜಿಯ ಮನೆ. ಮನೆಯ ಮುಂದೆ ಕೆರೆ, ಕರೆಯ ಒಂದು ದಡದ ಗುಂಟಾ ಮಾವಿನ ಮರಗಳ ಸಾಲು ಹಾಗೇ ಇನ್ನೊಂದು ದಡಕ್ಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇತ್ತು. ಎಲ್ಲಿ ನೋಡಿದರೂ ಮಾವು, ಬೇವು, ಹುಲಗಲಿ ಮರಗಳ ಸಾಲು. ಯಾವಾಗಲೂ ಜೀರುಂಡೆಯ ಸದ್ದು.

ಧಾರವಾಡವನ್ನ ಮಲೆನಾಡಿನ ಸೆರಗು ಎಂದು ಕರಿತಾರೆ ಅಂತ ಅಮ್ಮ ಹೇಳಿದ್ದ ನೆನಪು. ನಿಜವೇ ಇರಬೇಕು ಅಂತಹ ಸುಂದರವಾದ,  ಪ್ರಶಾಂತವಾದ ವಾತಾವರಣ.  ನಿದ್ದೆಯಿಂದ ಎದ್ದು ಬೆಳಗ್ಗಿನ ಜಾವ ಪಡಸಾಲೆಗೆ ಬಂದು ಕೂತರೆ ಸಾಕು ಎದುರಿಗಿದ್ದ ಕೆರೆಯ ತುಂಬಾ ಬೆಳ್ಳಕ್ಕಿಗಳ ಕಲರವ. ಹಸಿರು ಬಿಳಿ ಬಣ್ಣದ ಸಮಾಗಮ. ಆ ದೃಶ್ಯ ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದ ಹಾಗಿದೆ. ಹೀಗಿತ್ತು ನಮ್ಮ ಊರು ಧಾರವಾಡ.

 ಆ ದಿನಗಳನ್ನ ಮೆಲುಕು ಹಾಕುತ್ತಾ ಸಿಡ್ನಿ ನಗರದ ಸಣ್ಣ ಮನೆಯಲ್ಲಿ ಕೂತಿರುವಾಗ ಬೇಂದ್ರೆಯವರ ಹಾಡು " ಬಾರೋ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ " ನೆನಪಾಯಿತು. ಹಾಗೆಯೇ ಹೃದಯ ತುಂಬಿ ಬಂತು.

 


Comments

  1. ಸವಿ ನೆನಪುಗಳು ಸುಂದರ. ತಮ್ಮ ಬರಹ ಸೊಗಸಾಗಿದೆ. ಇನ್ನಷ್ಟು ವರ್ಣಿಸಿ ಬಣ್ಣಿಸಿ ಲೇಖನ ಮತ್ತೊಂದು ಪುಟ ಇರಬೇಕಿತ್ತು ಅನ್ನುವಷ್ಟರಲ್ಲೇ ಮುಗಿದಿದೆ.

    ReplyDelete

Post a Comment