ಕನಕ ನಮನ - ವರದಿ

 ಕನಕ ನಮನ - ವರದಿ 

- ಶ್ರೀಮತಿ ಶಿಲ್ಪಶ್ರೀ ನಾಗರಾಜ ರಾವ್ 

ಡಿಸೇಂಬರ್ ೪ರಂದು ಸಿಡ್ನಿಯಲ್ಲಿ"ಸುಗಮ ಕನ್ನಡ ಕೂಟ" ಮತ್ತು " ರಾಗ-ಲಯ, ಸಿಡ್ನಿ" ಇವರ ವತಿಯಿಂದ ೮ನೇ ವರ್ಷದ "ಕನಕ ನಮನ" ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಿಡ್ನಿಯ ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಗಾಯನವನ್ನು ಹಾಗು ದಾಸ ಪಂಕ್ತಿಯ ವಿವಿಧ ರಚನಕಾರರ ಭಕ್ತಿಪ್ರಧಾನ ರಚನೆಗಳನ್ನು ಜನತೆಗೆ ಪರಿಚಯಿಸಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವುದು ಇದರ ಉದ್ದೇಶ. ೧೫-೧೬ ಶತಮಾನದ ದಾಸ ಸಾಹಿತ್ಯ, ೧೩ನೇ ಶತಮಾನದ ವಚನಗಳನ್ನೂ ರಾಗ ಬದ್ಧವಾಗಿ ಸುಶ್ರಾವ್ಯವಾಗಿ ಮಕ್ಕಳು ಮತ್ತು ಹಿರಿಯ ಕಲಾವಿದರು ಪ್ರಸ್ತುತ ಪಡಿಸಿದರು. 



"ಯಾಕೆ ಬಂದೆ ಜೀವ" ಎಂಬ ವಿಜಯದಾಸರ ಕೃತಿ ಕುಮಾರಿ ಮಾನ್ವಿ ಮುದ್ಧಾಗಿ ಹಾಡಿದರೆ, ಕನಕದಾಸರು ಬರೆದಿರುವ "ತಲ್ಲಣಿಸದಿರು ಕಂಡ್ಯ ತಾಳು ಮನವೇ"  ಎಂಬ ಅರ್ಥಪೂರ್ಣ ಕೃತಿಯನ್ನು ಚಿ ವಿಭವ್ ಹಾಡಿದನು. ಪುಟ್ಟ ಬಾಲಕಿ ಕು ಈಶಾನಾ ಮುದ್ದಾದ ಕಂಠದಲ್ಲಿ ಕನಕದಾಸ ವಿರಚಿತ " ಇಷ್ಟು ದಿನ ಈ ವೈಕುಂಠ" ಎಂಬ ಬಲು ಜನಪ್ರಿಯ ಕೃತಿಯನ್ನು ಎಲ್ಲರು ಮೆಚ್ಚುವಂತೆ ಹಾಡಿದರೆ, ಕು ನಿತ್ಯ "ಗೋವಿಂದ ಗೋಪಾಲ ಗೋಪಿಕಾ ವಲ್ಲಭ " ಎಂಬ ವಾದಿರಾಜರ ರಚನೆ ಹಾಡಿದಳು.ಯುವ ಗಾಯಕ  ಚಿ ಪ್ರಣವ್ "ನಿಮಾಯ್ಯೊಳಗೋ ನಿನ್ನೊಳು ಮಾಯೆಯೋ" ಕನಕ ದಾಸರ ಕೃತಿ  ಸುಮಧುರ  ಸಂಗೀತಮಯವಾಗಿ ಹಾಡಿದರೆ, ಪುಟ್ಟ ಬಾಲಕ ಚಿ ಸಿಯಾನ್ ಅಕ್ಕಮಹಾದೇವಿಯ ವಚನ " ಅಕ್ಕ ಕೇಳವ್ವ " ಚೆನ್ನಾಗಿ ಹಾಡಿದನು. ಮುಂದೆ ನಾಲ್ಕು ಕನಕದಾಸರ ಕೃತಿಗಳೇ ಕೇಳಿಬಂದವು. ಕು ಸಮನ "ನನ್ನಿಂದ ನಾನೇ ಜನಿಸಿ ಬಂದೆನೆ ಕೃಷ್ಣಾ" ಎಂದು ಸುಶ್ರಾವ್ಯವಾಗಿ ಹಾಡಿದರೆ ಕು ಸಿಮ್ರನ್ " ನೆಚ್ಚದಿರು ಸಂಸಾರ ನೆಲೆಯಲ್ಲ"ಬಹಳ ಸೊಗಸಾಗಿ ಹಾಡಿದಳು. ಕು ಶ್ರೇಯಾ "ನಾನು ನೀನು ಎನ್ನದಿರು" ಕೃತಿ  ಹಾಡಿದರೆ ಕು ಶ್ರೇಯಾ ಜನಪ್ರಿಯ ದಾಸರ ಪದ  " ನಮ್ಮಮ್ಮ ಶಾರದೆ" ಹಾಡಿದಳು. ಹಿರಿಯರಾದ ವತ್ಸಲಾ ರಾವ್ "ಬಂಟನಾಗಿ ಕಾಯುವೆ ಹರಿಯೇ" ಮತ್ತು ಚಿ ಸ್ಕಂದ ಪ್ರಸ್ತುತಪಡಿಸಿದ  "ಸಾಗಿ ಬಾರಯ್ಯ ಭವರೋಗದ ವೈದ್ಯನೇ " ಅಂದಿನ ಎರಡು ಅರ್ಥಪೂರ್ಣ ಹಾಗೂ ಸುಶ್ರಾವ್ಯ ಗಾಯನಗಳಾಗಿದ್ದವು. ಶ್ರೀಮತಿ ಕೃತಿರವರು ಶ್ರೀಪಾದ ರಾಜ ವಿರಚಿತ  " ಇಕೋ ನೋಡೆ ರಂಗನಾಥನ " ಮತ್ತು ಕು ಸಿಂಧು ಹಾಡಿದ ಕನಕದಾಸವಿರಚಿತ  "ಮುತ್ತು ಬಂದಿದೆ ಕೇರಿಗೆ" ಇಂಪಾಗಿ ಮೂಡಿಬಂದಿತು. 



ಇಲ್ಲಿ ಸಂಗೀತಾಸಕ್ತರಿಗೆ ರಸದೌತಣವೇ ಉಣಬಡಿಸಲಾಗಿತ್ತು.  ಕೇವಲ ಗಾಯನ ಮಾತ್ರವಲ್ಲದೇ ಹಿರಿಯರಾದ ಡಾ ಮಧುಸೂದನರವರು ಆಯ್ದ ರಚೆನೆಗಳಲ್ಲಿ  ನವವಿಧ ಭಕ್ತಿ, ವಚನ , ದಾಸ ಸಾಹಿತ್ಯಗಳ ಐತಿಹಾಸಿಕ ವಿವರ, ಆಸಕ್ತ ಮಾಹಿತಿ ತಿಳಿಸಿಕೊಟ್ಟರೆ , ಸಿಡ್ನಿ ಶ್ರೀನಿವಾಸ್ ಅವರು ಸಂಗೀತ ಪರಂಪರೆ ಮತ್ತು ನಡೆದು ಬಂದು ಇಷ್ಟು ಶತಮಾನಗಳೇ ಆದರೂ ದೂರದ ದೇಶದಲ್ಲಿ ಕನಕ ದಾಸರನ್ನು ನೆನೆಯುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನಂತರ ಕನಕಾಪುರ ನಾರಾಯಣರವರು  ದಾಸ ಹಾಗು ಶರಣ ಸಾಹಿತ್ಯ ಕುರಿತು ಜನರಿಗೆ ಮನಮುಟ್ಟುವಂತೆ ಆಗಿಂದಾಗೆ ತಿಳಿಸಿಕೊಟ್ಟರು. ಈ  ಮೂವರು ವಿವರವಾದ ಮಾಹಿತಿ, ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡರು ಎನ್ನುವುದಕ್ಕಿಂತ  ವಿಚಾರ ಚಿಂತನ - ಮಂಥನ ನಡೆಸಿದರು. 



ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀಮತಿ ಅನುಶಾ ಹಾಡಿದ " ಆರ್ ಕೆ ಪದ್ಮನಾಭ ದಾಸರು ರಚಿಸಿ ರಾಗ ಸಂಯೋಜಿಸಿರುವ "ಹಾಡಿದರೇನು ಪಾಡಿದರೇನು" ಮೋಹನ ರಾಗದಲ್ಲಿ ಅತ್ಯಂತ ಸುಮಧುರವಾಗಿದ್ದರೆ ಶ್ರೀಯುತ ಶ್ರೀನಿವಾಸ್ ಅವರು ಪ್ರಸನ್ನ ವೆಂಕಟ ದಾಸರ ಕಿರು ಪರಿಚಯ, ಅವರಿಗೆ ಆ ಹೆಸರು ಸ್ವತಃ ವೆಂಕಟೇಶ್ವರನೇ ಕನಸಿನಲ್ಲಿ ಬಂದು ಇತ್ತರು ಎಂಬ  ವಿವರಣೆ  ಮತ್ತು ಕಂಚಿನ ಕಂಠದಲ್ಲಿ ಹಾಡಿದ "ಎಂಥಾ ಶ್ರೀಮಂತನೋ " ದಾಸರ ಪದ ಕಾರ್ಯಕ್ರಮ ಮುಗಿದಮೇಲೂ ಮನಗಳಲ್ಲಿ ಗುನುಗುವಂತೆ ಅದ್ಭುತವಾಗಿತ್ತು.  ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಸೌಮ್ಯ ರಾಜೀವ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಡೆಯಲ್ಲಿ ಆರತಿಗಾಗಿ ಕೇಶವ ನಾಮವನ್ನು  ಚಿ ಸ್ಕಂದನು ರಾಗ ಬದ್ಧವಾಗಿ ಹೇಳಿಕೊಟ್ಟರೆ ಎಲ್ಲರು ಕೂಡಿ ಹಾಡಿದರು. ರುಚಿಕರ ಅಡುಗೆ ಮಧ್ಯಾನ್ಹ ಒಂದರ ವೇಳೆಗೆ ಸಜ್ಜಾಗಿತ್ತು. ಶ್ರೀಮತಿ ಮತ್ತು ಶ್ರೀ ನಂದಿನಿ ರಾಮಕೃಷ್ಣ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮ ಬಹುಕಾಲ ಮನದಲ್ಲಿ ಉಳಿಯುವಷ್ಟು ಅಚ್ಚುಕಟ್ಟಾದ ಕಾರ್ಯಕ್ರಮವಾಗಿತ್ತು.   

ಕಾರ್ಯಕ್ರಮ ನಡೆಸಿಕೊಟ್ಟವರಿಗೂ ಭಾಗವಹಿಸಿದವರೆಲ್ಲರಿಗೂ ಹೃಪೂರ್ವಕ ಅಭಿನಂದನೆಗಳು.

 scroll down for more photos

















































































Comments

  1. ಸಂಪೂರ್ಣ ಮಾಹಿತಿ ವಿವರವಾಗಿ ಬರೆದಿದ್ದೀರಿ ನೋಡಿದಷ್ಟೇ ಅನುಭವ ಕೊಟ್ಟಿತು ಓದಿದಾಗ.

    ReplyDelete

Post a Comment