ಕನ್ನಡದ ಸಕ್ಕರೆ ಸವಿದರೆ ಅಕ್ಕರೆ

 ಕನ್ನಡದ ಸಕ್ಕರೆ ಸವಿದರೆ ಅಕ್ಕರೆ 

ಬದರಿ ತ್ಯಾಮಗೊಂಡ್ಲು

೧೯೮೦/೮೧ ನೇ ಇಸವಿ ಇರಬಹುದು. ತುಮಕೂರಿನ ಚಿಕ್ಕಪೇಟೆಯಲ್ಲಿನ ಶ್ರೀನಿವಾಸ ದೇವಸ್ಥಾನ. ಶ್ರೀರಾಮನವಮಿಯ ಪಾನಕ ಕೋಸಂಬರಿಯನ್ನು ಯಥೇಚ್ಚವಾಗಿ ಜನರು ಸ್ವೀಕರಿಸುತ್ತಿದ್ದಾರೆ. ಬೇಲದ ಹಣ್ಣಿನ ತಿರುಳನ್ನು ಚೆನ್ನಾಗಿ ನೆನಸಿ, ನಂತರ ಹುಣಿಸೇಹಣ್ಣು ಕಿವುಚುವಂತೆ ಅದರ ಸಾರವನ್ನೆಲ್ಲ ನೀರಿನಲ್ಲಿ ಬರುವಂತೆ ಮಾಡಿ ಸಾಕಷ್ಟು ಬೆಲ್ಲವನ್ನು ಸೇರಿಸಿ, ಆ ಪಾನಕವನ್ನು ಕೊಳದಪ್ಪಲೆಯಲ್ಲಿಟ್ಟ ಸಾಲು ಒಂದೆಡೆ. ಅದರ ಜೊತೆಗೆ ಪೈಪೋಟಿಯೇನೋ ಎನ್ನುವಂತೆ, ಮೊಸರನ್ನು ಚೆನ್ನಾಗಿ ಕಡೆದು, ಬೆಣ್ಣೆ ತೆಗೆದು ಮಿಕ್ಕಿದ್ದಕ್ಕೆ ಉಪ್ಪು ಕರಿಬೇವು, ಶುಂಠಿ ಹಾಕಿದ ಹಿತವಾದ ನೀರುಮಜ್ಜಿಗೆಯ ಮತ್ತೊಂದಿಷ್ಟು ಕೊಳದಪ್ಪಲೆಗಳ ಸಾಲುಗಳು ಇನ್ನೊಂದೆಡೆ. ಇನ್ನು ಕೋಸಂಬರಿ ಬಗ್ಗೆ ಹೇಳುವುದೇ ಬೇಡ. ಎಷ್ಟು ಸರಳ ಅದು. ನೆನೆಸಿದ ಹೆಸರುಬೇಳೆ, ಕಡಲೆಬೇಳೆಗೆ ಕಾಯಿತುರಿ, ಕೊತ್ತಂಬರಿ ಸೊಪ್ಪು, ಖಾರಕ್ಕಾಗಿ ಮೆಣಸಿನ ಕಾಯಿ, ಇಂಗಿನಿಂದೊಪ್ಪುವ ಒಗ್ಗರಣೆ. ಆದರೆ ಕೋಸಂಬರಿ ಇಲ್ಲ ಅಂದರೆ, ಆ ಕೊರತೆ ಎದ್ದು ಕಾಣುತ್ತೆ. ಹೀಗಾಗಿ ಅದು ಬೇಕೇ ಬೇಕು. ಅದರ ಜೊತೆಗೆ ದೊನ್ನೆಯಲ್ಲಿ ಹಂಚುತ್ತಿದ್ದ ಹುಳಿಯವಲಕ್ಕಿಯ ಸ್ವಾದ. ಇಷ್ಟೆಲ್ಲಾ ಇದ್ದ ಮೇಲೆ ಸಿಹಿ ಬೇಡವೇ? ಜೇನಿನ ಸವಿಯನ್ನೂ ಮೀರಿಸುವ ಕಳಿತ ಬಾಳೆಹಣ್ಣಿನ ರಸಾಯನ. ಆ ರಸಾಯನವೋ, ಯಾರ ಅದ್ಭುತ ಸಂಶೋಧನೆಯೋ ತಿಳಿಯದು. ಕಳಿತ ಬಾಳೆಹಣ್ಣೇ ಸೊಗಸು. ಅದಕ್ಕೆ ಕಾಯಿತುರಿ, ಆಲೆಮನೆಯ ಬೆಲ್ಲ, ಜೊತೆಗಿಷ್ಟು ಏಲಕ್ಕಿ ಉದುರಿಸಿ ಸ್ವರ್ಗಕ್ಕೆ ಕಿಚ್ಚು ಹಚ್ಚಿಸಿಬಿಡುತ್ತಾರೆ. ಆ ದೇವನಾದರೂ ಅದೇಕ ಕಲ್ಲಾಗಿ ಹಾಗೆ ನಿಂತಿರುತ್ತಾನೋ ಗೊತ್ತಿಲ್ಲ. ಬಂದು ನಮ್ಮ ಜೊತೆ ಭೋಜನದ ಸವಿ ಸವಿಯಬಾರದೇ ಎಂದು ಅನಿಸದೇ ಇರಲಾರದು. ಹೇಳುವುದಕ್ಕೆ ರಾಮನವಮಿಯ ಉಪವಾಸ, ಆದರೆ ಹೊಟ್ಟೆ ಬಿರಿಯುವಷ್ಟು ಉಪಾಹಾರಗಳು. 

ಹೀಗೆ ಹೊಟ್ಟೆಯಪ್ಪನು ಸಂತೃಪ್ತಿಗೊಳ್ಳುತ್ತಿದ್ದರೆ, ಕಿವಿಗೆ ಇಂಪು ಬೇಡವೇ. ಅಲ್ಲೇ ದೇವಸ್ಥಾನದ ಒಂದು ಕಡೆ ಹಾಡುಗಾರಿಕೆ. ಕೆಲವೊಮ್ಮೆ ಪಕ್ಕವಾದ್ಯವೂ ಇರುತ್ತಿತ್ತು. “ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕೆರೆ”, “ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ” ಮುಂತಾದ ಸಂದರ್ಭಕ್ಕೆ ತಕ್ಕ ದಾಸರ ಪದಗಳು. ಇನ್ನೊಂದಷ್ಟು ಹೊತ್ತು ಅಲ್ಲೇ ಇದ್ದರೆ, ಪ್ರವಚನ ಕೇಳುವ ಸೌಭಾಗ್ಯವೂ ಸಿಗುತ್ತಿತ್ತು. ಅದೂ ಎಂತಹ ಪ್ರವಚನ, ಸುಮ್ಮನೆ ನಾಲ್ಕಾರು ಮಾತು ಹೇಳಿ ಮುಗಿಸುವುದಲ್ಲ. ಸಂಸ್ಕೃತಿಯ ಹಿನ್ನಲೆಯ, ನೀತಿ, ನ್ಯಾಯ, ಧರ್ಮವು ಹೇಗೆ ಜಯಕ್ಕೆ ಕಾರಣವಾಗುತ್ತದೆ ಎನ್ನುವ ಮತ್ತು ಮತ್ತೊಬ್ಬರಿಗೆ ಸಹಾಯಮಾಡಿದರೆ ಹೇಗೆ ನಾವೂ ಜೀವನಸಾರ್ಥಕ್ಯವನ್ನು ಪಡೆಯಬಹುದು ಎನ್ನುವಂತಹ ಹಿತನುಡಿಗಳು. ಈ ಪ್ರವಚನೆವೆಲ್ಲವೂ ನಾವು ನೀವು ಮಾತಾಡುವ ಸುಲಭ ಕನ್ನಡದಲ್ಲಿ. ಅವರು ಉಪಯೋಗಿಸುತ್ತಿದ್ದದ್ದು ನಾವು ನೀವು ಬಳಸುವ ಸರಳ ನುಡಿಗಳು, ಸ್ಪಷ್ಟ ಉಚ್ಚಾರ, ಕೇವಲ ಶಾಸ್ತ್ರೀಯ ಮಾತುಗಾರಿಕೆಯಾಗಿರದೆ ದೇಶೀಯ ಗಾದೆಗಳು, ಉದಾಹರಣೆಗಳು ಇರುತ್ತಿದ್ದು ನೆರೆದಿದ್ದ ಕೇಳುಗರನ್ನು ಹಿಡಿದಿಡುತ್ತಿದ್ದವು. ಇಂತಹ ಕೇಳುವಿಕೆಯು ಇಷ್ಟ ಅಂತ ಬೆಳಿಗ್ಗಿನಿಂದ ಮದ್ಯಾಹ್ನದವರೆಗೆ ಅಲ್ಲೇ ಇದ್ದುಬಿಟ್ಟರೆ “ಬಿಟ್ರೆ ಈ ದಿನ ಪೂರ ಅಲ್ಲೇ ಇದ್ದು ಬಿಡ್ತಾರೆ, ಮನೆ ಮಕ್ಕಳು ಏನೂ ಬೇಡ ” ಎಂಬ ಆರೋಪವೂ ಬರುತ್ತಿದ್ದುದು ಸುಳ್ಳಲ್ಲ. ಹಿರಿಯರು ನಕ್ಕು ಸುಮ್ಮನಾಗುತ್ತಿದರು. ಊಟ ಮತ್ತು ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಚಿಕ್ಕಮಕ್ಕಳ ಕಿವಿಗೂ ಇಂತಹ ಮಾರ್ಗದರ್ಶಕ ನುಡಿಗಳು ಅಷ್ಟಷ್ಟು ಕೇಳುತ್ತಿದ್ದವು. ಜ್ಞಾನವು ಸಾಗರದಷ್ಟಿದ್ದರೂ ನಾವೆಷ್ಟು ಬೊಗಸೆಯಲ್ಲಿ ಹಿಡಿಯುವೆವೋ ನಮಗಷ್ಟೇ ಸಿಗುವುದು ಎನ್ನುವಂತೆ, ಇಂತಹ ಪರಿಸರದಲ್ಲಿ ನಮಗೆ ಅವಾಗವಾಗ ನಮ್ಮ ಭಾಷೆಯ ಪ್ರಯೋಗ ಕೇಳುತ್ತಿದ್ದರೆ ನಮ್ಮಲ್ಲಿಯೂ ಒಬ್ಬ ಕವಿಯೋ, ಸಾಹಿತಿಯೋ, ಪ್ರವಚನಕಾರನೋ ಅಥವಾ ಸಾಹಿತ್ಯಾಸಕ್ತಿಯುಳ್ಳ ಸಜ್ಜನನು ಹುಟ್ಟಿಕೊಳ್ಳುವುದರಲ್ಲಿ ಸಂಶಯವಿದೆಯೇ! 



ಇದಕ್ಕೆ ಇಂಬುಕೊಡುವಂತೆ ಇಂತಹ ಮೆಲುಕನ್ನು ಸ್ನೇಹಿತರೊಬ್ಬರ ಬಳಿ ಚರ್ಚಿಸುತ್ತಿದ್ದಾಗ ಅವರು ತಮ್ಮ ಹಿಂದಿನ ದಿನಗಳ ನೆನಪನ್ನು ಹೀಗೆ ಹೇಳಿಕೊಂಡರು. “ಚಿಕ್ಕದಾಗಿ ಹೇಳಬೇಕೆಂದರೆ, ಮಾಮಿ ಕೊಟ್ಟ ಕೃಷ್ಣಾಷ್ಟಮಿಯ, ಕುಮ್ಟಿಯಲ್ಲಿ (ಇದ್ದಿಲ ಒಲೆ) ಮಾಡಿದ, ಮೂವ್ವತ್ತೆರಡು ಬಗೆಯ ತಿಂಡಿಗಳನ್ನು ಮೆಲ್ಲನೆ ಮೆಲ್ಲುತ್ತಾ, ಅವರ ಮನೆಯಂಗಳದ ಚೇಪೇ ಮರದ ಮೇಲೆ ಕುಳಿತು, ಆಗ ತಾನೇ ಬಂದ ಸುಧಾ ಪತ್ರಿಕೆಯನೋದುತ್ತಾ ಕಳೆದ ಆ ದಿನಗಳಲ್ಲೇ ನನ್ನ ಸಾಹಿತ್ಯ ಪಯಣ ಆರಂಭವಾಗಿದ್ದು. ಅವರ ಮನೆಯಲ್ಲಿ ನಾವು ತಿನ್ನುತ್ತಿದ್ದ ಕೃಷ್ಣಾಷ್ಟಮಿಯ ತಿಂಡಿಗಳು ಇನ್ನೂ ಅರಗಿಲ್ಲ”. ಅವರ ಈ ಸೌಭಾಗ್ಯ ಎಲ್ಲರಿಗೂ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಜನ್ಮಾಷ್ಟಮಿಯ ಆಚರಣೆಯ ನೆಪದಲ್ಲಿ, ಆ ತಿಂಡಿಗಳ ಐಭೋಗದಿಂದ ಪ್ರೇರಣೆಗೊಂಡು ನಮ್ಮ ನಿಮ್ಮ ನಡುವೆ ಸಾಹಿತ್ಯಾಸಕ್ತರು ಹುಟ್ಟಿಕೊಳ್ಳುವುದು ವರವೇ ಸರಿ.

ಇನ್ನು ಮನೆಮನೆಗಳಲ್ಲಿ ಎಳೆಯ ಮಕ್ಕಳನ್ನು ಮಲಗಿಸಲು ಅಜ್ಜಿ/ಅಮ್ಮಂದಿರು ಹಾಡುತ್ತಿದ್ದ ಜೋಗುಳಗಳ ಸರಮಾಲೆಯಂತೂ ದೊಡ್ಡವರಿಗೂ ನಿದ್ದೆ ಹತ್ತಿಸುತ್ತಿದ್ದದ್ದು ಆಶ್ಚರ್ಯವೇನಲ್ಲ. ಎಲ್ಲವೂ ಶುದ್ಧ ದೇಸೀಯ ಪದಗಳು. “ಯಾಕಳುವೆ ಎಲೆ ರಂಗ ಬೇಕಾದ್ದು ನಿನಗುಂಟು” ಎಂಬ ಬಹು ಜನಪ್ರಿಯ ಹಾಡು, ಅಂತೆಯೇ ಅವರವರ ಮನೆಯಲ್ಲಿ ರೂಢಿಯಿಂದ ಬಂದಿರಬಹುದಾದ “ಜೋ ಜೋ ಜೋ ಗುಂಡ ಜೋ ಪರಮಾನಂದ, ಮಂಡೇಲಿ ಕಣಕಾವ ಮರ್ಧಿಸುವ ಗುಂಡ”, ನಾಲಗೆಯನ್ನು ವಿಚಿತ್ರವಾಗಿ ಅಲ್ಲಾಡಿಸಿ “ಳ್ಲು ಳ್ಲು ಳ್ಲು ಳ್ಲು ಳ್ಲ … ಹೂವಿ” ಎಂದು ಶುರು ಮಾಡಿ “ಹೂವಲ್ಲ ಹಸಿಮುದ್ದು ಹೊನ್ನ ತಾವರೆ ಮುದ್ದು, ಹಣ್ಣುಳ್ಳ ಗಿಡಕೆ ಗಿಣಿ ಮುದ್ದು, ಹಣ್ಣುಳ್ಳ ಗಿಡಕೆ ಗಿಣಿ ಮುದ್ದು ಕಂದಮ್ಮ, ನೀ ಮುದ್ದು ನಮ್ಮ ಮನೆಗೆಲ್ಲ” ಇತ್ಯಾದಿ ಹಾಡುಗಳು ಆ ಮಕ್ಕಳನ್ನು ಅದೆಷ್ಟು ಪರವಶ ಮಾಡುತ್ತಿದ್ದವು ಎಂದರೆ ಆ ಮಕ್ಕಳಿಗೆ ಮೂರ್ನಾಲ್ಕು ವರ್ಷ ಆಗೋ ಹೊತ್ತಿಗೆ ಅವುಗಳ ಬಾಯಿಗೂ ಈ ಪದಗಳು ಬಂದುಬಿಡುತ್ತಿದ್ದವು. ಪರಿಸರದಲ್ಲಿ ನಮ್ಮ ನುಡಿಯು ನಲಿದಾಡುತ್ತಿದ್ದರೆ ಆಗುವ ಪರಿಣಾಮವಿದು!

ಬರೀ ಮನೆಗಳಿಗಷ್ಟೇ ಸೀಮಿತವಾಗಿರದೆ, ಮನೆ ಮುಂದೆ ಮಾರಿಕೊಂಡು ಬರುವ ತರಕಾರಿಯವರು ಕೂಗುವ ರೀತಿ, ಬಳೆ ಇತ್ಯಾದಿ ತೊಡಿಸುವಾಗ ಹಾಡು ಹೇಳಿಕೊಂಡು ಆ ಕಾರ್ಯವನ್ನು ಇನ್ನುಷ್ಟು ಆನಂದಮಯವಾಗಿಸುವ ಪರಿ, ಕೋಲೆಬಸವನನ್ನು ನಂಬಿಕೊಂಡು ಬದುಕುವ ಜನರ ಮಾಟದ ಮಾತುಗಳು, ಕೋತಿಯಾಡಿಸಿ ಹೊಟ್ಟೆ ಹೊರೆದುಕೊಳ್ಳುವ ಅಲೆಮಾರಿಗಳು, ಇವರೆಲ್ಲರ ಮಾತುಗಳಲ್ಲಿನ ನಮ್ಮಕನ್ನಡ ನಮ್ಮ ಮೇಲೆ ಪ್ರಭಾವ ಬೀರಿಯೇ ಇರುತ್ತದೆ. ಹೀಗೆ ಭಾಷೆಯೊಂದಿಗೆ ಬೆಳೆದ ಜೀವಕ್ಕೆ ಇತ್ತೀಚಿಗೆ ಮನೆ ಮುಂದೆ ಬಂದ ತರಕಾರಿ ಗಾಡಿಯವನು “ಬೀನ್ಸ್ ಬೀನ್ಸ್” ಎಂದು ಕೂಗಿಕೊಂಡದ್ದು ಕರ್ಣ ಕಠೋರವೆನಿಸಿತು. ಬದಲಾದ ದೇಶ ಮತ್ತು ಕಾಲಕ್ಕೆ ಅವನ ಜೀವನಕ್ಕೆ ಬೇಕಾದ ಮಾರ್ಪಾಡು ಅವನು ಮಾಡಿಕೊಂಡಿದ್ದಾನೆ ನಿಜ. ಆದರೆ ಹುರಳಿಕಾಯಿಯನ್ನು ಕೊಂದು “ಬೀನ್ಸ್” ಗೆ ಜನುಮ ನೀಡಿದ್ದು ಎಷ್ಟು ಸರಿಯೋ ಗೊತ್ತಿಲ್ಲ.

ಇನ್ನೊಂದು ಅನುಭವ. ವಾಟ್ಸ್ಯಾಪ್ ಇತ್ಯಾದಿಗಳ ಮೂಲಕ ವಿಷಯ ವಿನಿಮಯ ಮಾಡಿಕೊಳ್ಳುವ ನಾವು ಬಹುತೇಕ ಬಾರಿ ಚೆನ್ನಾಗಿದೆ ಎಂದು ಹೇಳುವುದಕ್ಕೆ ಎಮೋಜಿಗಳ ಬಳಕೆ ಮಾಡುತ್ತೀವಿ. ಬಹಳ ಪರಿಣಾಮಕಾರಿಯಾಗಿಯೂ ಇರುತ್ತದೆ ಹೌದು. ಈ ಹಿನ್ನಲೆಯಲ್ಲಿ ಒಂದು ಪ್ರಸಂಗ ಹೇಳುವೆ. ಕನ್ನಡವನ್ನು ಪ್ರೀತಿಸುವ ಪರಿಚಯದ ಒಬ್ಬರಿಗೆ ರಾಜ್ಯೋತ್ಸವದ ಶುಭ ಹಾರೈಕೆಯನ್ನು ಹೀಗೆ ಕಳಿಸಿದ್ದೆ. “ಕನ್ನಡದ ಬಗ್ಗೆ ಹೆಮ್ಮೆ ಇಟ್ಟುಕೊಂಡು ಮಾತಿನಲ್ಲೂ ನಡೆಯಲ್ಲೂ ಕನ್ನಡ ನುಡಿಯನ್ನು ಅಳವಡಿಸಿಕೊಂಡಿರುವ ನಿಮಗೆ ಕನ್ನಡಹಬ್ಬದ ಶುಭ ಹಾರೈಕೆಗಳು. ಹೇಗಿದ್ದೀರಿ!. ತುಂಬಾ ದಿನ ಆಯ್ತು. ಎಲ್ಲರೂ ಅರೋಗ್ಯ ಎಂದು ತಿಳಿಯುವೆ. ಬಿಡುವು ಮಾಡಿಕೊಂಡು ಮನೆ ಕಡೆ ಬನ್ನಿ. ನವೆಂಬರ್ ೧ ಅಂದಾಗ ತಕ್ಷಣ ಜ್ಞಾಪಕ ಬಂದಿರಿ. ಅಷ್ಟರ ಮಟ್ಟಿಗೆ ಕನ್ನಡ ನಿಮ್ಮಲ್ಲಿ ನೆಲೆಯೂರಿದೆ ಅಂತಾಯ್ತು.” . ಅವರು ಅದೆಷ್ಟು ಸಂತಸ ಪಟ್ಟರು ಎಂದರೆ, ಅವರ ಬಿಡುವಿರದ ಸಮಯದಲ್ಲಿ ಫೋನ್ ಮಾಡಿ “ನಿಮ್ಮ ಸಂದೇಶ ಓದಿ ನನಗೆ ತುಂಬಾ ಸಂತೋಷ ಆಯಿತು, ಹೇಳಿಕೊಳ್ಳಬೇಕು ಎಂದೆನಿಸಿ ಈಗಲೇ ಕರೆ ಮಾಡಿದೆ” ಎಂದು ಪ್ರೀತಿಯಿಂದ ಮಾತನಾಡಿಸಿದರು. ಎಮೋಜಿ ಒಂದು ಮುಗುಳ್ನಗೆ ಮೂಡಿಸುವುದರಲ್ಲಿ ಸಹಾಯ ಮಾಡುತ್ತದೆ ನಿಜ. ಆದರೆ ನಮ್ಮ ಪ್ರೀತಿಯನ್ನು ನಮ್ಮ ತಾಯ್ನುಡಿಯ ಮೂಲಕ  ವ್ಯಕ್ತಪಡಿಸಿದಾಗ ಅದು ಹೃದಯಕ್ಕೆ ತಾಗುವುದರಲ್ಲಿ ಸಂಶಯವಿಲ್ಲ. 



ಇವಿಷ್ಟೂ ನೆನಪಿಗೆ ಬಂದದ್ದು, ನಮ್ಮ ಪರಿಸರದಲ್ಲಿ ಭಾಷೆಯ ಉತ್ಸವವು ನಡೆಯುತ್ತಿದ್ದರೆ, ನಮ್ಮ ಹೆಮ್ಮೆಯ ನುಡಿಯು ನಾಲಗೆಯ ತುದಿಯಲ್ಲಿ ಹೇಗೆ ನಲಿದಾಡುವುದು ಎಂದು ತಿಳಿಸುವುದಕ್ಕಷ್ಟೇ. ನಮ್ಮ ಕನ್ನಡದ ಮೇಲಿನ ಅಕ್ಕರೆಯನ್ನು ಸಕ್ಕರೆಯಾಗಿಸಿ ಹಂಚೋಣ. 

*****

Comments

  1. ಸತ್ಯ ನುಡಿ ,ತಾಯ್ನುಡಿಯ ಮೂಲಕ ವ್ಯಕ್ತಪಡಿಸಿದಾಗ ಅದು ನಮ್ಮ ಹೃದಯಕ್ಕೆ ತಾಗುವುದರಲ್ಲಿ ಸಂಶಯವಿಲ್ಲ. ಕಡೆಯಲ್ಲಿ ಎಂಥಾ ಮಾತು.

    ReplyDelete

Post a Comment