ಬಳಸು ನೋಟ
ಹಾಸ್ಯ ಲೇಖನ - ಅಣಕು ರಾಮನಾಥ್
ಪದಕ್ಕೊಂದು ಲೇಖನದ ಸರಣಿಯಲ್ಲಿ ಈ ಬಾರಿ ಕನಕಾಪುರ ನಾರಾಯಣರು ನೀಡಿದ ಬಳಸು ಪದವನ್ನು ಒಮ್ಮೆ ಸುತ್ತಿ ಬರೋಣ.
ಬಳಸು ಎಂದರೆ ಉಪಯೋಗಿಸು, ಸುತ್ತು, ತಬ್ಬು ಎಂಬ ಅರ್ಥಗಳಿವೆ. ಪ್ರಾರ್ಥಿಸು ಎಂದರೆ ಪ್ರಾರ್ಥನೆ ಮಾಡು ಎಂದರ್ಥ. ಯೋಗಿಸು ಎಂದರೆ ಯೋಗ ಮಾಡು ಎಂದ ಅರ್ಥವೇನು? ಉಪಯೋಗಿಸು ಎಂದರೆ ಯೋಗದಲ್ಲಿ ಒಂದು ಭಾಗವನ್ನು ಕೈಗೊಳ್ಳು ಎಂದು ಅರ್ಥವಿರಬಹುದೆ? ಅಸಲಿಗೆ ಯೋಗವೆಂದರೆ ಯಾವುದು? ಕೈಕಾಲುಗಳನ್ನು ರಬ್ಬರ್‍ನಂತೆ ತಿರುಗಿಸಲು ಯತ್ನಿಸುತ್ತಾ, ಮೊದಮೊದಲು ಐ ಆಕಾರದಲ್ಲೋ ಣ ಆಕಾರದಲ್ಲೋ ಕೈಕಾಲುಗಳನ್ನು ಸಿಕ್ಕಿಸಿಕೊಂಡು, ಅವರಿವರ ಸಹಾಯದಿಂದ ಬಿಡಿಸಿಕೊಳ್ಳುವಂತಹ ಕಸರತ್ತಿನ ರೀತಿಯ ಯೋಗ ಒಂದು ರೀತಿಯದು. ಬಿಲ್ಲುಬಾಣಗಳನ್ನು ಬಿಸುಟು ರಚ್ಚೆ ಹಿಡಿದ ಮಗುವಿನಂತೆ ಅರ್ಜುನ ಯುದ್ಧ ಮಾಡುವುದಿಲ್ಲವೆಂದಾಗ ಕೃಷ್ಣನು ಬೋಧಿಸಿದ ಅರ್ಜುನವಿಷಾದ ಯೋಗ, ಸಾಂಖ್ಯಯೋಗ ಮುಂತಾದ ಯೋಗಗಳು ಇನ್ನೊಂದು ಬಗೆಯವು. ಶ್ರಮ ಕಡಿಮೆ, ಫಲ ಜಾಸ್ತಿ ದೊರೆತವನನ್ನು ಕಂಡು ಕರುಬುತ್ತಾ ‘ಅವನದಯ್ಯ ಯೋಗ ಅಂದ್ರೆ’ ಎನ್ನುವಾಗಿನ ಅದೃಷ್ಟರೂಪಿ ಯೋಗವು ಮತ್ತೊಂದು.
ಆದರೆ ಉಪಯೋಗ? ವಿಷಾದಯೋಗ ಅಥವಾ ಹದಿನೆಂಟು ಅಧ್ಯಾಯಗಳಲ್ಲಿನ ಮತ್ತಾವುದೋ ಯೋಗದ ಒಂದು ಅಂಶವೇ ಉಪ-ಯೋಗ ಎಂದು ಕರೆಯಲಾಗುವುದೆ? ಅಥವಾ ಇಡೀ ಕಾದಂಬರಿಯಿಂದ ಓದುಗನ ಅಭಿರುಚಿಯನ್ನು ಸಂಹರಿಸಿ, ಕಡೆಯಲ್ಲಿ ಉಪಸಂಹಾರ ಎಂದು ಬರೆದಿರುವಂತೆ, ಯೋಗದ ಕೊನೆಯಲ್ಲಿ ಯಾವುದಾದರೂ ಉಪಭಾಗವಿದ್ದು, ಕೃಷ್ಣನು ಗೀತೆಯ ನಂತರ ಹೇಳಿದ ಯಾವುದಾದರೂ ಮಾತುಗಳಿದ್ದು, ಅವುಗಳನ್ನು ಉಪ-ವಿಷಾದಯೋಗ, ಉಪ-ಕರ್ಮಯೋಗ ಎಂದು ವಿಂಗಡಿಸಲಾಗಿವೆಯೆ? ಶ್ರೀಕೃಷ್ಣನನ್ನು ಯೋಗಿ ಎಂದು ಕರೆದವರುಂಟು. ಅವನಿಗಿದ್ದ ಯೋಗ ಇನ್ನಾರಿಗುಂಟು! ಯೋಗಿಯ ಟ್ರಸ್ಟೆಡ್ ಅಸಿಸ್ಟೆಂಟ್ ಆದ ಅರ್ಜುನನೇ ಉಪಯೋಗಿಯೇನು? ಅರ್ಜುನನನ್ನು ಯುದ್ಧಕ್ಕೆ ಆರಿಸಿಕೊಂಡಿದ್ದನ್ನೇ ಉಪಯೋಗಿಸು ಎಂಬುದರ ಅರ್ಥವೇನು?
ಯುದ್ಧವಿಷಯದ ಯೋಗದ ಉದ್ದ ಈ ರೀತಿಯಾದರೆ ಆಸನರೂಪಿ ಯೋಗದಲ್ಲಿ ಉಪಯೋಗ ಯಾವುದು? ಯೋಗ ಮಾಡಿದರೆ ಉಪಯೋಗ ಆಗುತ್ತದೆ ಎಂಬ ಮಾತಿದೆ. ನಾನು ಯೋಗ ಮಾಡಿದಾಗ ತೊಡೆಯಿಂದ ಕೊಂಚ ಮೇಲ್ಭಾಗದಲ್ಲಿ ಮೂಳೆಯಿದೆಯೆಂದೇ ತಿಳಿಯದಿದ್ದ ಸ್ಥಳದಲ್ಲಿ ಪುಟ್ಟ ಮೂಳೆಯೊಂದು ಕಳಕ್ ಎಂದಿತ್ತು. ಯೋಗದ ಅಂಗವಾಗಿ ಆದ ಆ ಕಷ್ಟವನ್ನು ಕಷ್ಟಾಂಗಾಸನ ಎಂದೂ, ಆ ಪ್ರಕ್ರಿಯೆಯನ್ನು ಉಪ-ಯೋಗ ಎಂದು ಕರೆಯಬಹುದೆ? ಹಾಗಾದರೆ ‘ಉಪಯೋಗಿಸು’ ಎಂದರೆ ‘ಉಳುಕಿಸಿಕೊಳ್ಳು’ ಎಂದು ಅರ್ಥವನ್ನು ಹೊಂದುವುದು ಸಮಂಜಸವೆ? ಯೋಗದಿಂದ ಮತ್ತೊಂದು ಉಪಯೋಗವೂ ಆದುದುಂಟು. ಬನಿಯನ್ ಧರಿಸಿ ಯೋಗ ಮಾಡಲಾರಂಭಿಸಿ, ಎಡಗಾಲಿನ ಹೆಬ್ಬೆಟ್ಟು ಬಲಭುಜದ ಬಳಿಯ ಬನೀನಿನ ತೋಳಿನಲ್ಲಿ ಸಿಕ್ಕಿಕೊಂಡು, ಬನಿಯನ್‍ಗೆ ಬೆರಳ್ ಆದ ಸಂದರ್ಭದಲ್ಲಿ ‘ಎಲೈ ಕಾಲ್ಬೆರಳೆ, ನಿನ್ನ ಕಸಿನ್ನಾದ ಕೈಬೆರಳು ನನ್ನನ್ನು ಈತನ ವಪುವನ್ನಾಲಿಂಗಿಸಲು ಅನುವು ಮಾಡಿಕೊಟ್ಟಿತು. ಮನುಜನ ಹೆಗಲೇರಲೆಂದೇ ಜನ್ಮ ತಾಳಿದ ನನ್ನ ಜನ್ಮವು ನಿನ್ನ ಕಸಿನ್ನಿನ ಸಹಾಯದಿಂದ ಸಾರ್ಥಕವಾಯಿತು. ಈಗ ನೀನು ನನ್ನಲ್ಲಿ ಸಿಲುಕಿ ಒದ್ದಾಡುತ್ತಿರುವೆ. ಕಸಿನ್ನಿನ ಸಹಾಯಕ್ಕೆ ಬದಲಾಗಿ ನಿನಗೆ ನೆರವಾಗಲು ಮನ ಹಾತೊರೆಯುತ್ತಿದೆ. ಇದೋ ನನ್ನ ಆತ್ಮಾರ್ಪಣೆಯ ಮೂಲಕ ನಿನಗೆ ಬಿಡುಗಡೆ ನೀಡುವೆ’ ಎಂದು ನುಡಿಯುತ್ತಾ ಬನಿಯನ್ನು ತನ್ನ ಕಾಟನ್ ವಪುವನ್ನು ಹರಿಹರಿದುಕೊಂಡು ಬೆರಳಿಗೆ ಬಿಡುಗಡೆ ನೀಡಿದ್ದಲ್ಲದೆ ಮುಂದಿನ ದಿನಗಳಲ್ಲಿ ವಾಹನವನ್ನೊರೆಸುವ, ನೆಲವನ್ನು ಸಾರಿಸುವ ಬಟ್ಟೆಯಾಗಿ ಉಪಯೋಗಿ ಆಯಿತು. ಇದನ್ನೇ ಯೋಗದ ಉಪ-ಯೋಗ ಎಂದು ಕರೆಯಬಹುದೆ? ಬನಿಯನ್ನು ಮೈಯನ್ನು ಬಳಸುವುದರಿಂದ ಬಳಸು=ಉಪಯೋಗಿಸು=ಉಪ-ಯೋಗಿ ಎಂದು ಈಗಷ್ಟೇ ಸಾಬೀತಾದ ಬನಿಯನ್ನನ್ನು ಧರಿಸು ಎಂದು ಅರ್ಥವನ್ನು ಹೊಂದಬಹುದೆ?
ಮಾಸ್ಟರ್ ಹಿರಣ್ಣಯ್ಯನವರ ನಾಕಟವೊಂದರಲ್ಲಿ ‘Main road under repair. Take permanent deviation’ ಎಂಬ ಡೈಲಾಗ್ ಇದೆ. ‘ಡೀವಿಯೇಷನ್ ಪರ್ಮನೆಂಟ್ ಯಾಕೆ?’ ಎಂದರೆ ‘ಮುಖ್ಯರಸ್ತೆಗೆಂದು ಸ್ಯಾಂಕ್ಷನ್ ಆಗಿರುವ ದುಡ್ಡನ್ನು ತಿಂದುಬಿಟ್ಟಿರುತ್ತಾರೆ. ಆದ್ದರಿಂದ ಡೀವಿಯೇಷನ್ ರಸ್ತೆಗೇ ಟಾರ್ ಹಾಕಿಬಿಟ್ಟಿರುತ್ತಾರೆ’ ಎಂದುತ್ತರಿಸಿದ್ದಾರೆ. ‘ಸುತ್ತು’ ಎಂಬ ಅರ್ಥದಲ್ಲಿ ಇಲ್ಲಿ ಬಳಸು ಪದವನ್ನು ಬಳಸಲಾಗಿದೆ. ಬಳಸುದಾರಿಯನ್ನು ಬಳಸುವುದಕ್ಕೆ ಕಾರಣಗಳು ಹಲವಾರು. ಮುಖ್ಯರಸ್ತೆಯಲ್ಲಿ ಘಟೊತ್ಕಜನು ಊಟದ ತಟ್ಟೆಯ ಮುಂದೆ ಕುಳಿತಾಗ ತೆರೆದ ಬಾಯಿಯಷ್ಟೇ ಅಗಲವಾದ ಪಾಟ್‍ಹೋಲುಗಳು ಮೂಡಿದ್ದರೆ ‘ವಾಹನಶ್ಚ ದೇಹಸೌಖ್ಯಾರ್ಥಂ ಪಥವಿಮುಖೀ ಭವ’ ಎಂಬುದನ್ನನುಸರಿಸಿ ಚಲಿಸಬೇಕಾಗುತ್ತದೆ. ಶುದ್ಧ ಅಯೋಗ್ಯನೊಬ್ಬನನ್ನು ಮಂತ್ರಿಯಾಗಿಸುತ್ತೇವೆ. ಅವನ ಮನೆ ನಮ್ಮ ಮನೆಯ ಬಳಿಯೇ ಇರುತ್ತದೆ. ವಿಧಾನಸೌಧವೆಂದರೆ ಶುದ್ಧ ಅಲರ್ಜಿ ಇರುವ ಅವನು ಆಗಾಗ್ಗೆ ಮನೆಗೆ ಬರುತ್ತಿರುತ್ತಾನೆ. ಅವನು ಬರುವನೆಂದರೆ ರೋಡ್ ಬಂದ್. ಅಂತಹ ಸಂದರ್ಭದಲ್ಲಿ ಬಳಸುದಾರಿಯೇ ನಮಗೆ ಜೀವಾಳ. ಇವೆಲ್ಲಕ್ಕಿಂತ ಬಳಸು ಬಳಕೆಯಾಗುವುದು ನಾವು ಸಾಲಗಾರರಾದಾಗ.
ವಿಶ್ವಾಮಿತ್ರನ ಅಣ್ಣನಿಂದಲೋ, ತಮ್ಮನಿಂದಲೋ, ಬಾದರಾಯಣಿಯಿಂದಲೋ ಸಾಲ ಪಡೆದುಬಿಟ್ಟಿರುತ್ತೇವೆ. ನಕ್ಷತ್ರಿಕನ ನೆಂಟನಾದ ಅವನ ಅಂಗಡಿ, ಮನೆಗಳನ್ನು ಹಾದು ನಮ್ಮ ಮನೆಗೆ ಬರಬೇಕು. ಸಾಲ ತೀರಿರುವುದಿಲ್ಲ. ವಾಯಿದೆ ಮುಗಿದಿರುತ್ತದೆ. ಆಗ ನಮ್ಮ ಆಪದ್ಬಾಂಧವನಾಗುವುದೇ ಬಳಸು ದಾರಿ. ಈ ‘ಬಳಸು’ ಕೇವಲ ಪಥಕ್ಕೆ ಸೀಮಿತವಲ್ಲ. ಭೀಮಾರ್ಜುನರನ್ನು ಸೋಲಿಸಿ ರಾಜ್ಯವನ್ನು ಪಡೆಯಲು ಸಾಧ್ಯವಿಲ್ಲವೆಂದು ಅರಿತಿದ್ದ ದುರ್ಯೋಧನ ಕಂಡುಕೊಂಡದ್ದು ದ್ಯೂತವೆಂಬ ಬಳಸು ದಾರಿಯನ್ನು. ಅಜ್ಞಾತಪರ್ವದಲ್ಲಿ ಪಾಂಡವರು ತಮ್ಮ ಚರ್ಯೆಗಳನ್ನು ಮರೆಮಾಚಲು ಬಳಸು ಮಾರ್ಗ (ನೇರವಲ್ಲದ ಮಾರ್ಗ) ಅನುಸರಿಸಬೇಕಾಯಿತು. ಆ ಸನ್ನಿವೇಶದಲ್ಲಿ ಅರ್ಜುನನು ‘thank you for your ಶಾಪ Urvashi, One woman’s curse is another man’s boon’ ಎಂದು ಮನದಲ್ಲೇ ವಂದಿಸಿರಬೇಕು. ಪದ್ಮವ್ಯೂಹವನ್ನು ರಚಿಸಿದಾಗ ಅರ್ಜುನನನ್ನು ತಟಾಯಿಸಲೆಂದು ‘ಸಂಶಪ್ತಕ ಡೀವಿಯೇಷನ್’ ಜಾರಿಗೆ ತಂದದ್ದೂ ಯುದ್ಧದ ಬಳಸು ತಂತ್ರವೇ. ಏಕಲವ್ಯನು ಗುರುವಿನ ಮುಂದಲ್ಲದೆ ಗುರುವಿನ ವಿಗ್ರಹದ ಮುಂದೆ ವಿದ್ಯೆ ಕಲಿತದ್ದು ಸಹ ಬಳಸು ಮಾರ್ಗ.
ಬಳಸು ಎನ್ನುವುದಕ್ಕೆ indirect ಎಂಬ ಅರ್ಥವನ್ನೂ ನೀಡಬಹುದು. ‘ನಿಮ್ಮನ್ನು ಕಂಡರೆ ರೆಡ್ ರೋಸ್ ಚಿತ್ರದ ಕಡೆಯ ದೃಶ್ಯದಲ್ಲಿನ ರಾಜೇಶ್ ಖನ್ನನನ್ನು ಕಂಡಂತಾಗುತ್ತದೆ’ ಎನ್ನುವುದು ‘you look like a moron’ ಎಂಬುದರ ಬಳಸುರೂಪ. 2000 insults for all occasions ಎಂಬ ಪುಸ್ತಕದಲ್ಲಿ ‘She has got a court figure – No appeal’ ಎಂಬ ಬಳಸು ನುಡಿಗಳನ್ನು ಹೇರಳವಾಗಿ ಕಾಣಬಹುದು. ದಾಸರ ‘ರಾಗಿ ತಂದೀರಾ..’ ಗೀತೆಯು ಯೋಗ್ಯರಾಗಿ, ಭಾಗ್ಯವಂತರಾಗಿ ಮುಂತಾದವನ್ನು ಬಳಸು ಮಾರ್ಗದಲ್ಲಿಯೇ ಬೋಧಿಸಿದೆ.
ಬಳಸು ಎಂದರೆ ತಬ್ಬು ಎನ್ನುವ ಅರ್ಥದತ್ತ ಸಾಗೋಣ. ಕನಕಾಪುರ ನಾರಾಯಣರು ಈ ಪದವನ್ನು ಕೊಡಲು ಆ ಸಮಯದಲ್ಲಿ ಅವರು ಇದ್ದ ಸ್ಥಳವೇ ಕಾರಣ. ಡಾರ್ಲಿಂಗ್ ಹಾರ್ಬರ್‍ನಲ್ಲಿ ಕುಳಿತವರಿಗೆ ಸುತ್ತಮುತ್ತಲೂ ಡಾರ್ಲಿಂಗಗಳೇ ಕಾಣಿಸಿರುತ್ತವೆ. (ಅವನು ಪುಲ್ಲಿಂಗ; ಇವಳು ಸ್ತ್ರೀಲಿಂಗ; ಪರಸ್ಪರರಿಗೆ ಇಬ್ಬರೂ ಡಾರ್ಲಿಂಗ ಎಂದಿದ್ದಾರೆ ಹನಿಗವಿ ಡುಂಡಿರಾಜ್). ಅಲ್ಲೆಲ್ಲ ತಬ್ಬದಿರುವುದೇ ತಪ್ಪು! ತಬ್ಬುವಿಕೆಯನ್ನು ಮೂರು ವಿಧಗಳಾಗಿ ವಿಂಗಡಿಸಬಹುದು – ಮೆಚ್ಚುಗೆಯ ತಬ್ಬು; ಅವಲಂಬನದ ತಬ್ಬು; ಪ್ರೀತಿಯ ತಬ್ಬು. ಶಿಷ್ಯನು ಅಪರೂಪದ್ದನ್ನು ಸಾಧಿಸಿದಾಗ, ಮಕ್ಕಳು ಊಹಾತೀತವಾದುದನ್ನು ಮಾಡಿದಾಗ, ಆತ್ಮೀಯರು ಕ್ಲಿಷ್ಟವಾದುದನ್ನು ತೆಕ್ಕೆಗೆ ಹಾಕಿಕೊಂಡಾಗ ಗುರು, ಮಾತಾಪಿತೃಗಳು, ಆತ್ಮೀಯರು ಆಲಿಂಗಿಸುವುದು ಮೆಚ್ಚುಗೆಯ ತಬ್ಬು. ಇದು ಹೆಚ್ಚೆಂದರೆ ಕೆಲವು ನಿಮಿಷಗಳಿ ಇರಬಹುದಷ್ಟೆ.
ಅವಲಂಬನದ ತಬ್ಬು ಕೊಂಚ ದೀರ್ಫವಾಗಿರುತ್ತದೆ. ಅಮ್ಮನನ್ನು ತಬ್ಬಿದ ಮಗು, ರಾಮನನ್ನು ತಬ್ಬಿದ ಭರತ, ಹನುಮನನ್ನು ತಬ್ಬಿದ ರಾಮ ಇವೆಲ್ಲ ಒಂದು ಮಟ್ಟದ್ದಾದರೆ ಮಾರ್ಕಾಂಡೇಯನು ಶಿವಲಿಂಗವನ್ನು ತಬ್ಬಿದ್ದು ಬೇರೆಯದೇ ಸ್ತರದ್ದು. ತನ್ನ ಜೀವ ಉಳಿಸಿಕೊಳ್ಳಲು ಮಾರ್ಕಾಂಡೇಯನಿಗೆ ಇದ್ದ ಏಕೈಕ ಮಾರ್ಗವೆಂದರೆ ಶಿವಲಿಂಗಾಲಿಂಗನ. ತನ್ಮೂಲಕ ಶಿವ-ಯಮರಲ್ಲಿ ಟಗ್ ಆಫ್ ವಾರ್ ಸೃಷ್ಟಿಸಿಬಿಟ್ಟಿದ್ದಲ್ಲದೆ ಹಲವಾರು ನಾಟಕಗಳ ಮಟ್ಟುಗಳು, ಸಿನೆಮಾದ ಗೀತೆಗಳ ಸೃಷ್ಟಿಗೂ ಕಾರಣನಾಗಿಬಿಟ್ಟ ಆ ಶಿವಭಕ್ತ.
ಪ್ರೀತಿಯ ತಬ್ಬಿನಲ್ಲಿಯೂ ಎರಡು ವಿಧ. ಸೋದರರು, ಅಪರೂಪಕ್ಕೆ ಭೇಟಿಯಾದ ಮಿತ್ರರು ಸುತ್ತಳತೆಯನ್ನು ಪರೀಕ್ಷಿಸುವ ಸಲುವಾಗಿಯೋ ಎಂಬಂತೆ, ಟೈಲರ್ ಸೊಂಟದಳತೆಯನ್ನು ತೆಗೆದುಕೊಳ್ಳುವಾಗ ಇರುವಷ್ಟು ಸನಿಹ ಮತ್ತು ಅಷ್ಟೇ ಸಮಯದಲ್ಲಿ ಮುಗಿಸಿಬಿಡುವ ತಬ್ಬುವಿಕೆ ಒಂದು ವಿಧವಾದರೆ ನಲ್ಲನಲ್ಲೆಯರದು ಸುದೀರ್ಘವಾದ ತಬ್ಬುವಿಕೆ. ಡಾರ್ಲಿಂಗ್ ಹಾರ್ಬರಲ್ಲಾಗಲಿ, ಗೋವಾದ ಬೀಚುಗಳಲ್ಲಾಗಲಿ ಈ ತಬ್ಬುವಿಕೆಯೇ ಹೆಚ್ಚು, ಈ ವಿಷಯ ಸೆನ್ಸಾರ್ ಮಂಡಳಿಗೆ ಹತ್ತಿರವಾದ್ದರಿಂದ ಇದನ್ನು ಇಲ್ಲಿಯೇ ಮೊಟಕುಗೊಳಿಸುತ್ತಿದ್ದೇನೆ.
ಬಳಸು ಎನ್ನುವುದು ಬಳಕೆ ಎಂಬುದರ ಕ್ರಿಯಾಪದ. ಬಳಕೆ ಎಂಬ ಪದಕ್ಕೂ ಕನ್ನಡಿಗರ ಕನ್ನಡಕ್ಕೂ ಬಹಳ ದೂರ.
ಕನ್ನಡಿಗರು ಬಳಸಲು ಕನ್ನಡವಂ ಬರಬೇಕು ನವೆಂಬರ್
ಎನ್ನಡ ಎಕ್ಕಡಗಳಿಗೊಗ್ಗಿದವರ್ ಮಿಕ್ಕೆಲ್ಲ ದಿನ ಕನ್ನಡವೆ ನೋವೆಂಬರ್
No ಎಂಬರ್
ಎಂಬ ಸಾಲುಗಳೊಂದಿಗೆ ಬಳಸು ಪದದ ಬಳಕೆಗೆ ಅಲ್ಪವಿರಾಮ ನೀಡುತ್ತೇನೆ. ಹೊರನಾಡ ಚಿಲುಮೆ ಪತ್ರಿಕೆಯಲ್ಲಿ ಕಾಣಬರುವ ‘ಪ್ರತಿಕ್ರಿಯೆ ನೀಡಿ’ ಬಟನ್ನನ್ನು ಬಳಸಿ (ಸುತ್ತುವರಿದು ಸಾಗಿ, ಉಪಯೋಗಿಸಿ ಎಂಬರ್ಥವಲ್ಲ) ಮುಂದೆ ಸಾಗುವ ಕನ್ನಡಕುಲಕೋಟಿಗೆ ಮತ್ತೊಂದು ಲೇಖನವನ್ನು ಅರ್ಪಿಸಿದ ಸಂತಸವೊಂದೇ ಎಂದಿನಂತೆ ನನಗಿರಲಿ.
ಎಂದಿನಂತೆ ಈ ಲೇಖನವೂ ಚೆನ್ನಾಗಿದೆ. ಪ್ರತಿ ಪದವನ್ನು ಸುತ್ತಿ (ಬಳಸಿ) ಅದರಲ್ಲಿನ ಹಾಸ್ಯವನ್ನು ಹೊರತೆಗೆಯುವ ನಿಮ್ಮ ಶೈಲಿಯೇ ಅನನ್ಯ.
ReplyDeleteಪದ ಕೊಟ್ಟ ಒಂದೇ ತಾಸಿಗೆ ಏನೆಲ್ಲಾ ಬಳಸಿ ಬೆರೆಸಿ ಕಲಿಸಿದ್ದೀರಿ ವಾಹ್, ಸುತ್ತಿ ಬಳಸದೆ ವಾರೆ ನೋಟದಲ್ಲೇ ನೇರವಾಗಿ ದಶದಿಕ್ಕುಗಳಲ್ಲೂ ರಾಮಬಾಣ ಬಿಟ್ಟಂತಿದೆ. ಹಿರಣ್ಣಯ್ಯ,ಖನ್ನಾ, ಮಹಾಭಾರತ, ಊರ್ವಶಿ, ಹನುಮ ಯಾರನ್ನ ಬಿಟ್ಟಿದ್ದೀರಿ ..... ಚಂದದ ಹಾಸ್ಯ
ReplyDeleteಈ ದಿನ ಮತ್ತೆ ಲೇಖನ ಓದಿದೆ.ವಿವಿಧ ತಬ್ಬುಗಳ ಬಗ್ಗೆ ಓದಿ ತಮ್ಮ ಕಲ್ಪನೆ ಮತ್ತು ಅದಕ್ಕೆ ತಕ್ಕ ಸಮಜಾಯಿಸಿ ಸೊಗಸೇ ಸೊಗಸು
ReplyDelete