ಸಿಡ್ನಿ ಕನ್ನಡ ಶಾಲೆಯಿಂದ ಮತ್ತೊಂದು ಯಶಸ್ವಿ ಕಾರ್ಯಕ್ರಮ

ಸಿಡ್ನಿ ಕನ್ನಡ ಶಾಲೆಯಿಂದ ಮತ್ತೊಂದು ಯಶಸ್ವಿ ಕಾರ್ಯಕ್ರಮ

ವರದಿ: ದತ್ತು ಕುಲಕರ್ಣಿ 

ಇದೆ ಕಳೆದ ಶನಿವಾರ ನವೆಂಬರ್ 12 ರಂದು ಸಿಡ್ನಿ ಕನ್ನಡ ಶಾಲೆಯ ವತಿಯಿಂದ ದಸರಾ ಮತ್ತು ರಾಜ್ಯೋತ್ಸವವನ್ನು ಅತಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೆಂಟ್ವರ್ತ ವಿಲ್ಲ್ ಬಡಾವಣೆಯ ರೆಡ್ ಗಮ್ ಸಭಾಂಗಣ ದಲ್ಲಿ ಸಂಜೆ 4.30 ಗಂಟೆಗೆ ಶುರುವಾದ ಕಾರ್ಯಕ್ರಮ ರಾತ್ರಿ ಹತ್ತು ಗಂಟೆಯ ವರೆಗೆ ಮನರಂಜನೆಯ ಮಹಾಪೂರವನ್ನೆ ಹರಿಸಿತು. ಇಡೀ ಕಾರ್ಯಕ್ರಮವನ್ನು ಜಾನಪದ ಜಾತ್ರೆಯ ವಿಷಯದ ಮೇಲೆ ಆಯೋಜಿಸಿಲಾಗಿತ್ತು. ಮಕ್ಕಳು ಜಾನಪದ ಹಾಡು ಕುಣಿತಗಳನ್ನು ಮಾಡಿ ಕರ್ನಾಟಕದ ಹಳ್ಳಿ ಸೊಗಡನ್ನು ತಮ್ಮ ಮುಗ್ಧ ಹಾವ ಭಾವದ ಮೂಲಕ ತೆರೆದಿಟ್ಟರು. ಇದರೊಂದಿಗೆ ಇನ್ನೂ ಹಲವಾರು ಹಾಡು ಮತ್ತು ಸಮೂಹ ನೃತ್ಯಗಳು ಹಾಗೂ ದಸರಾ ಬೊಂಬೆ ಗಳ ಪ್ರದರ್ಶನ ಈ ಕಾರ್ಯಕ್ರಮಕ್ಕೆ ಕಳೆ  ತಂದು ಕೊಟ್ಟೆವು.



ಈ ವಿಶೇಷ ಕಾರಕ್ರಮಕ್ಕಾಗಿಯೆ ಎತ್ತಿನ ಬಂಡಿ, ಹಳ್ಳಿಯ ಗುಡಿಸಲು, ಒಳ್ಳು, ಒನಕೆ, ನೇಗಿಲು ಮತ್ತು ನಮ್ಮ ಕುಂಬಾರಣ್ಣನ ಚಕ್ರವನ್ನು ತಯಾರಿಸಿ ವೇದಿಕೆಯ ಮೇಲೆ ಅವುಗಳನ್ನು ಹೊಂದಿಸಿ ಇಟ್ಟು ಇಡಿ ಒಂದು ಹಳ್ಳಿಯ ದೃಶ್ಯವನ್ನು ಸೃಷ್ಟಿಸಲಾಗಿತ್ತು. 

ಸಿಡ್ನಿಯಿಂದ ಬಂದ ಇಬ್ಬರು ಮಕ್ಕಳಿಗೆ ಕರ್ನಾಟಕ ಇಬ್ಬರು ಮಕ್ಕಳು ತಮ್ಮ ಹಳ್ಳಿಯನ್ನು ಪರಿಚರಿಸುವ ದಾಟಿಯಲ್ಲಿ ಈ ರೂಪಕವನ್ನು ಸಂಯೋಜಿಸಲಾಗಿತ್ತು.  ಜಾನಪದ ಹಾಡುಗಳ ಮೂಲಕ ಹಳ್ಳಿಗರ ದಿನಚರಿಯನ್ನು ಮಕ್ಕಳು ಸಮರ್ಥವಾಗಿ ಬಿಂಬಿಸಿದರು. ಮೊದಲು ನೆನೆದೆವು ಸ್ವಾಮಿ ಲಿಂಗನ,, ಕೋಳಿ ಕೂಗಿತಕ್ಕ ನಂದನ ವನಕ ,, ಚೆಲುವಯ್ಯ ಚೆಲುವೊ ತಾನೇ ತಂದನ.. ಮುಂಜನೆದ್ದು ಕುಂಬಾರಣ್ಣ ಮುಂತಾದ ಹಾಡುಗಳ ಹಿನ್ನೆಲೆಯಲ್ಲಿ ಮಕ್ಕಳು ರಾಗಿ ಬೀಸುತ್ತಾ ಭತ್ತ ಕುಟ್ಟುತ್ತಾ, ನೇಗಿಲು ಹಿಡಿದು ಹಳ್ಳಿಯ ಸೊಬಗನ್ನು ಅನಾವರಣ ಗೊಳಿಸಿದರು. ಸಣ್ಣ ಎತ್ತಿನ ಬಂಡಿಯ ನಿಜವಾದ ಮಾದರಿಯನ್ನು ಮಾಡಿ ಮಕ್ಕಳು ಅದನ್ನು ಎಳೆದದ್ದು, ಕುಂಬಾರಣ್ಣ ಚಕ್ರ ತಿರಿಗಿಸುತ್ತಾ ಮಡಿಕೆ ಮಾಡಿದ್ದು ಅದ್ಬುತವಾಗಿತ್ತು. ಕೊನೆಗಂತೂ ಕರಗದ ಮೆರವಣಿಗೆಯನ್ನು ಹೊರಡಿಸಿ ಪ್ರೇಕ್ಷಕರೆಲ್ಲ ಉಗೆ ಉಗೆ ಯನ್ನುವಂತಾಯಿತು. ತುಂಗಾಬಿ ಶಾಖೆಯ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು.



ಇದಲ್ಲದೆ ವ್ಯಾಟಲ್ ಗ್ರೂವ ಶಾಖೆಯ  ಮಕ್ಕಳ ಗುಂಪು ಸಿನಿಮಾ ಹಾಡುಗಳನ್ನೊಳಗೊಂಡ ನೃತ್ಯ ರೂಪಕವನ್ನು ಮಾಡಿ ಪುನೀತ ರಾಜಕುಮಾರ ಅವರಿಗೆ ಗೌರವವನ್ನು ಸಲ್ಲಿಸಿತು. ಇದರಲ್ಲಿ ಸುಮಾರು ಇಪ್ಪತ್ತು ಮಕ್ಕಳು ಭಾಗವಹಿಸಿ ಪುನೀತ ರಾಜಕುಮಾರ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. 

ಇದಲ್ಲದೆ ಮಕ್ಕಳು ಮತ್ತು ದೊಡ್ಡವರಿಂದ  ದೇಶ ಭಕ್ತಿ , ನಾಡಭಕ್ತಿ, ಜಾನಪದ ಗೀತೆ ಭಾರತ ನಾಟ್ಯ ಹಾಗೂ ಹಾಸ್ಯಪ್ರಸ್ತುತಿಯನ್ನು ಏರ್ಪಡಿಸಲಾಗಿತ್ತು.  ಕಾರ್ಯಕ್ರಮದಲ್ಲಿ ಒಟ್ಟಾರೆ 80 ಮಕ್ಕಳು ಭಾಗವಹಿಸಿದ್ದು ಸಭಾಂಗಣ ಪೂರ್ತಿ ತುಂಬಿ ತುಳುಕುತ್ತಿತ್ತು. 


ಅಲ್ಲದೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು 

ಹಾಗೆಯೆ ಸಭಾಂಗಣದ ಇನ್ನೊಂದು ಭಾಗದಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಕ್ಕಳೆಲ್ಲ ಕುತೂಹಲದಿಂದ ಗೊಂಬೆಗಳನ್ನು ನೋಡಿ ಪಾಲಕರಿಂದ ವಿಷಯ ತಿಳಿದುಕೊಂಡರು. ದೇವರು, ರಾಜ-ಸೈನಿಕ, ಪ್ರಾಣಿ ಪಕ್ಷಿಗಳು ಮತ್ತು  ವಿವಿಧ ವೇಷಭೂಷಣ ತೊಟ್ಟ ಜನರ ಹಲವಾರು ಗೊಂಬೆಗಳಿದ್ದವು. ಸಂಸ್ಕೃತಿಯನ್ನು ಪರಿಚಯಿಸಲು ಇಂಥ ಗೊಂಬೆ ಪ್ರದರ್ಶನ ನಿಜವಾಗಿಯೂ ಸಹಾಯಕಾರಿಯೆನಿಸಿತು. 



ಇದಲ್ಲದೆ ಪುಸ್ತಕ ಮಾರಾಟವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಲೇಖಕರ ಮತ್ತು ಮಕ್ಕಳ ಪುಸ್ತಕಗಳನ್ನು ಜನರು ಆಸಕ್ತಿಯಿಂದ ಕೊಂಡುಕೊಂಡರು. 

ಒಟ್ಟಿನಲ್ಲಿ ಸಿಡ್ನಿ ಕನ್ನಡಿಗರು ತಮ್ಮ ಮಕ್ಕಳೊಂದಿಗೆ ಮತ್ತೊಂದು ಉತ್ತಮ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ಜಾನಪದ ಜಾತ್ರೆ  Youtube link - https://www.youtube.com/watch?v=MzRZ2unbxrY



Comments

  1. ಚಿಕ್ಕ ಚೊಕ್ಕ ಲೇಖನ ಅಚ್ಚುಕಟ್ಟಾಗಿ ಏನನ್ನೂ ಬಿಡದೆ ಬರೆದಿದ್ದೀರಿ, ಧನ್ಯವಾದಗಳು

    ReplyDelete

Post a Comment